Tag: ನೀನಾಸಂ ಸತೀಶ್

  • ಅನ್ಯ ರಾಜ್ಯಗಳಲ್ಲಿಯೂ ಶುರುವಾಯ್ತು `ಗೋದ್ರಾ’ ಅಬ್ಬರ!

    ಅನ್ಯ ರಾಜ್ಯಗಳಲ್ಲಿಯೂ ಶುರುವಾಯ್ತು `ಗೋದ್ರಾ’ ಅಬ್ಬರ!

    ಬೆಂಗಳೂರು: ವರ್ಷಗಳ ಹಿಂದೆ ಗೋದ್ರಾ ಎಂಬ ಟೈಟಲ್ಲಿನ ಚಿತ್ರವೊಂದು ಘೋಷಣೆಯಾದಾಗ ಎಲ್ಲೆಡೆ ಅದರ ಬಗ್ಗೆ ಚರ್ಚೆಗಳಾಗಿದ್ದವು. ಗೋದ್ರಾ ಘಟನೆಯ ನೆನಪು ಜನಮಾನಸದಲ್ಲಿ ಮಾಸದಿರೋದರಿಂದ ಆ ಘಟನೆಗೂ ಈ ಚಿತ್ರಕ್ಕೂ ಸಂಬಂಧವಿದೆಯಾ ಎಂಬ ದಿಕ್ಕಿನಲ್ಲಿಯೂ ಜನರ ಆಲೋಚನೆ ಸುಳಿದಾಡಿತ್ತು. ಗೋದ್ರಾದ ಸುತ್ತಾ ಇಂಥಾ ವಾತಾವರಣ ಮಡುಗಟ್ಟುವುದಕ್ಕೆ ಈ ಸಿನಿಮಾ ಹಿಂದೆ ರಿಯಲಿಸ್ಟಿಕ್ ಕಥೆಗಳ ನಿರ್ದೇಶಕ ಜೇಕಬ್ ವರ್ಗಿಸ್ ಅವರ ನೆರಳಿದ್ದದ್ದೂ ಒಂದು ಕಾರಣವಾಗಿದ್ದದ್ದು ಸುಳ್ಳಲ್ಲ!

    ಗೋದ್ರಾ ಚಿತ್ರದ ನಿರ್ದೇಶಕ ನಂದೀಶ್ ಜೇಕಬ್ ವರ್ಗೀಸ್ ಅವರ ಬಳಿಗೆ ಹಲವಾರು ವರ್ಷಗಳಿಂದ ಪಳಗಿಕೊಂಡಿರುವವರು. ಈ ಚಿತ್ರವನ್ನು ಜೇಕಬ್ ವರ್ಗೀಸ್ ಅವರು ತಮ್ಮ ಬ್ಯಾನರಿನಡಿಯಲ್ಲಿಯೇ ನಿರ್ಮಾಣ ಮಾಡಿದ್ದಾರೆ. ನಂದೀಶ್ ವರ್ಷಗಳಿಂದ ತಯಾರಿ ನಡೆಸುತ್ತಾ ಅಪರೂಪದ ಕಥೆಯೊಂದನ್ನು ಸಿದ್ಧಪಡಿಸಿ ಅದಕ್ಕೆ ಗೋದ್ರಾದ ರೂಪ ನೀಡಿದ್ದಾರೆ.

    ಇದೀಗ ಈ ಚಿತ್ರ ಚಿತ್ರೀಕರಣವನ್ನೆಲ್ಲ ಮುಗಿಸಿಕೊಂಡು ಬಿಡುಗಡೆಗೆ ತಯಾರಾಗಿ ನಿಂತಿದೆ. ಈ ಹೊತ್ತಿನಲ್ಲಿಯೇ ಕನ್ನಡ ಮಾತ್ರವಲ್ಲದೇ ಅನ್ಯ ರಾಜ್ಯಗಳಲ್ಲಿಯೂ ಗೋದ್ರಾ ಭಾರೀ ಬೇಡಿಕೆಯನ್ನು ಸೃಷ್ಟಿಸಿಕೊಂಡಿದೆ. ತೆಲುಗಿನಲ್ಲಿಯೂ ರೂಪುಗೊಳ್ಳುತ್ತಿರುವ ಈ ಚಿತ್ರಕ್ಕೆ ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿಯೂ ಬೇಡಿಕೆ ಬರುತ್ತಿದೆ. ಇದಕ್ಕೆ ಕಾರಣವಾಗಿರೋದು ಗೋದ್ರಾ ರೂಪುಗೊಂಡಿರುವ ರೀತಿ. ಕನ್ನಡ ಚಿತ್ರಗಳು ಒಂದೆರಡು ಸೀನುಗಳೋ, ಹಾಡುಗಳಿಗಾಗಿಯೋ ಬೇರೆ ರಾಜ್ಯಗಳಲ್ಲಿ ಚಿತ್ರೀಕರಣಗೊಂಡರೆ ಹೆಚ್ಚು. ಆದರೆ ಈ ಚಿತ್ರದ ಬಹುಭಾಗಗಳ ಚಿತ್ರೀಕರಣ ಪರ ರಾಜ್ಯಗಳಲ್ಲಿಯೇ ನಡೆದಿದೆ. ಗೋದ್ರಾ ಚಿತ್ರೀಕರಣ ಮುಗಿಸಿಕೊಳ್ಳೋದಕ್ಕೆ ವರ್ಷಗಳ ಅವಧಿ ಹಿಡಿದದ್ದೂ ಕೂಡಾ ಈ ಕಾರಣದಿಂದಲೇ. ಆರಂಭದಿಂದ ಈ ಕ್ಷಣದ ವರೆಗೂ ಒಂದಲ್ಲ ಒಂದು ರೀತಿಯಲ್ಲಿ ಕುತೂಹಲ ಕಾಯ್ದಿಟ್ಟುಕೊಂಡಿರೋ ಗೋದ್ರಾ ಬಿಡುಗಡೆಯ ಹೊಸ್ತಿಲಲ್ಲಿಯಂತೂ ಭಾರೀ ಕ್ರೇಜ್‌ಗೆ  ಕಾರಣವಾಗಿದೆ.

    ನಿರ್ದೇಶಕ ನಂದೀಶ್ ಪಾಲಿಗೆ ಇದು ಮೊದಲ ಪ್ರಯತ್ನ. ಈ ಆರಂಭದ ಹೆಜ್ಜೆಯಲ್ಲಿಯೇ ಅವರು ಮಹಾ ಗೆಲುವೊಂದನ್ನು ದಕ್ಕಿಸಿಕೊಳ್ಳೋ ಸೂಚನೆಗಳನ್ನೇ ಗೋದ್ರಾ ಧ್ವನಿಸುತ್ತಿದೆ. ಸತ್ಯ ಕಥೆಗಳನ್ನು ಆಧರಿಸಿದ ಚಿತ್ರಗಳ ಮೂಲಕವೇ ಪ್ರಸಿದ್ಧಿ ಪಡೆದಿರುವ ಜೇಕಬ್ ವರ್ಗೀಸ್ ಅವರ ಗರಡಿಯ ಅನುಭವಗಳನ್ನೆಲ್ಲ ಬಸಿದುಕೊಂಡು ನಂದೀಶ್ ಈ ಚಿತ್ರವನ್ನ ರೂಪಿಸಿದ್ದಾರೆ. ಇದೆಲ್ಲದರಾಚೆಗೆ ಗೋದ್ರಾ ಸತ್ಯ ಘಟನೆ ಆಧರಿಸಿದ ಚಿತ್ರವಾ ಅನ್ನೋದರ ಬಗ್ಗೆ ಚಿತ್ರತಂಡದ ಕಡೆಯಿಂದ ಬೇರೆಯದ್ದೇ ಉತ್ತರ ರವಾನೆಯಾಗುತ್ತದೆ. ಗೋದ್ರಾ ಘಟನೆಗೂ ಈ ಕಥೆಗೂ ಸಂಬಂಧವಿಲ್ಲದಿದ್ದರೂ ಅಂಥಾದ್ದೇ ತೀವ್ರತೆ ಇಡೀ ಚಿತ್ರದಲ್ಲಿರಲಿದೆ ಎಂಬುದನ್ನೂ ನಿರ್ದೇಶಕರು ಸ್ಪಷ್ಟಪಡಿಸುತ್ತಾರೆ.

    ಈ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್ ನಾಯಕಿಯಾಗಿ ನಟಿಸಿದ್ದಾರೆ. ಅವರು ಈಗಾಗಲೇ ಕನ್ನಡದಲ್ಲಿ ವಿಶಿಷ್ಟ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಅದಕ್ಕೆ ಮತ್ತಷ್ಟು ಮೆರುಗು ನೀಡುವಂಥಾ ಪಾತ್ರವೇ ಗೋದ್ರಾದಲ್ಲಿ ಶ್ರದ್ಧಾಗೆ ಸಿಕ್ಕಿದೆ. ವಸಿಷ್ಠ ಸಿಂಹ ಕೂಡಾ ಗೋದ್ರಾದಲ್ಲಿ ಪ್ರಧಾನ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರವಂತೂ ಅಪರೂಪದ್ದಂತೆ. ವಸಿಷ್ಠರ ಪಾತ್ರಕ್ಕೆ ಯಾವ ಶೇಡುಗಳಿವೆ ಅನ್ನೋದನ್ನು ಚಿತ್ರತಂಡ ಸೀಕ್ರೆಟ್ ಆಗಿಟ್ಟಿದೆ.

    ನೀನಾಸಂ ಸತೀಶ್ ಪಾಲಿಗೂ ಇದು ಸ್ಪೆಷಲ್ ಮೂವಿ. ಈ ಹಿಂದೆ ಚಂಬಲ್ ಚಿತ್ರದ ಮೂಲಕ ಸತೀಶ್ ಬೇರೆಯದ್ದೇ ಇಮೇಜಿನಲ್ಲಿ ಅಬ್ಬರಿಸಿದ್ದರು. ಗೋದ್ರಾ ಮೂಲಕ ಅವರು ಮತ್ತೊಂದು ರೀತಿಯಲ್ಲಿ ಪ್ರೇಕ್ಷಕರನ್ನು ಬೆರಗಾಗಿಸಲು ರೆಡಿಯಾಗಿದ್ದಾರೆ. ಬಜೆಟ್ ವಿಚಾರದಲ್ಲಿಯೂ ಇದೊಂದು ಅದ್ದೂರಿ ಚಿತ್ರ. ಬಹುಶಃ ನೀನಾಸಂ ಸತೀಶ್ ಅವರ ವೃತ್ತಿ ಜೀವನದಲ್ಲಿಯೇ ಇದು ಬಿಗ್ ಬಜೆಟ್ ಚಿತ್ರ. ಇದೀಗ ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡಿರೋ ಗೋದ್ರಾ ಆಗಸ್ಟ್ ನಂತರದಲ್ಲಿ ತೆರೆ ಕಾಣುವ ಸನ್ನಾಹದಲ್ಲಿದೆ.

  • ಬ್ರಹ್ಮಚಾರಿಯ ಬರ್ತ್ ಡೇಗೆ ಫಸ್ಟ್ ನೈಟ್ ಟೀಸರ್ ಗಿಫ್ಟ್!

    ಬ್ರಹ್ಮಚಾರಿಯ ಬರ್ತ್ ಡೇಗೆ ಫಸ್ಟ್ ನೈಟ್ ಟೀಸರ್ ಗಿಫ್ಟ್!

    ದಯ್ ಕೆ ಮೆಹ್ತಾ ನಿರ್ಮಾಣದ ಬ್ರಹ್ಮಚಾರಿ ಚಿತ್ರದ ಟೀಸರ್ ಲಾಂಚ್ ಆಗಿದೆ. ಈ ಚಿತ್ರದಲ್ಲಿ ನಾಯಕನಾಗಿ ನಟಿಸಿರುವ ನೀನಾಸಂ ಸತೀಶ್ ಹುಟ್ಟುಹಬ್ಬದ ಕೊಡುಗೆಯಾಗಿ ಈ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಈ ಮೂಲಕ ಭರ್ಜರಿ ನಗುವಿಗೆ ಮೋಸವಿಲ್ಲದ, ಮನೋರಂಜನಾತ್ಮಕ ಚಿತ್ರವೊಂದರ ಮೂಲಕ ಸತೀಶ್ ಮತ್ತೆ ಪ್ರೇಕ್ಷಕರನ್ನು ಎದುರುಗೊಳ್ಳೋದು ಪಕ್ಕಾ ಆಗಿದೆ.

    ಈ ಟೀಸರ್ ಬಿಡುಗಡೆಯಾಗಿ ದಿನ ಕಳೆಯೋದರೊಳಗಾಗಿ ಜನಪ್ರಿಯತೆ ಪಡೆದುಕೊಂಡಿರೋ ರೀತಿಯೇ ಇಡೀ ಚಿತ್ರದ ಕಂಟೆಂಟ್ ಸ್ಪೆಷಲ್ ಆಗಿದೆ ಎಂಬುದರ ಸೂಚನೆ. ಯಾವುದೇ ವಲ್ಗಾರಿಟಿ ಇಲ್ಲದಂತೆ ಕಲಾತ್ಮಕವಾಗಿಯೇ ಬ್ರಹ್ಮಚಾರಿಯ ಫಸ್ಟ್ ನೈಟ್ ರಹಸ್ಯದ ಸೂಚನೆಯೊಂದಿಗೆ ಕಚಗುಳಿಯಿಟ್ಟಿರೋ ಈ ಟೀಸರ್ ದಿನದೊಪ್ಪತ್ತಿನಲ್ಲಿಯೇ ಯಶಸ್ವಿಯಾಗಿ ಬಿಟ್ಟಿದೆ. ಈ ಹಿಂದೆ ಚಂಬಲ್ ಮೂಲಕ ಮಾಸ್ ಲುಕ್ಕಿನಲ್ಲಿ ಮಿಂಚಿದ್ದ ಸತೀಶ್ ಈ ಬಾರಿ ಬೇರೊಂದು ಸಾದಾ ಸೀದಾ ಲುಕ್ಕಿನಲ್ಲಿ ಮೋಡಿ ಮಾಡಲು ಮುಂದಾಗಿದ್ದಾರೆ.

    ಈ ಚಿತ್ರವನ್ನು ನಿರ್ದೇಶನ ಮಾಡಿರುವವರು ಚಂದ್ರಮೋಹನ್. ಈ ಹಿಂದೆ ಬಾಂಬೆ ಮಿಠಾಯಿ, ಡಬ್ಬಲ್ ಇಂಜಿನ್‍ನಂಥಾ ಹಾಸ್ಯಪ್ರಧಾನ ಯಶಸ್ವಿ ಚಿತ್ರಗಳನ್ನು ನಿರ್ದೇಶನ ಮಾಡಿರುವ ಚಂದ್ರಮೋಹನ್ ಈ ಬಾರಿ ಅದೇ ಜಾಡಿನಲ್ಲಿ ವಿಶಿಷ್ಟವಾದೊಂದು ಕಥೆಯೊಂದಿಗೆ ಬಂದಿದ್ದಾರೆ. ಬ್ರಹ್ಮಚಾರಿಯನ್ನು ಉದಯ್ ಮೆಹ್ತಾ ಅವರು ಅದ್ಧೂರಿಯಾಗಿಯೇ ನಿರ್ಮಾಣ ಮಾಡಿದ್ದಾರೆ. ಧರ್ಮವಿಶ್ ಸಂಗೀತ ನಿರ್ದೇಶಶನ ಈ ಚಿತ್ರಕ್ಕಿದೆ.

    ಅಯೋಗ್ಯ ಚಿತ್ರದ ಅಗಾಧ ಪ್ರಮಾಣದ ಯಶಸ್ಸಿನಿಂದ ಈಗ ನೀನಾಸಂ ಸತೀಶ್ ಅವರ ವೃತ್ತಿ ಜೀವನಕ್ಕೊಂದು ಹೊಸ ಓಘ ಬಂದಂತಾಗಿದೆ. ಅದು ಚಂಬಲ್ ಮೂಲಕ ಮುಂದುವರೆದು ಇದೀಗ ಬ್ರಹ್ಮಚಾರಿಯ ರೂಪದಲ್ಲಿಯೂ ಮತ್ತಷ್ಟು ಲಕ ಲಕಿಸೋ ಸೂಚನೆಗಳೇ ದಟ್ಟವಾಗಿವೆ. ಈ ಚಿತ್ರದಲ್ಲಿ ಅದಿತಿ ಪ್ರಭುದೇವ ಸತೀಶ್ ಅವರಿಗೆ ಜೋಡಿಯಾಗಿ ನಟಿಸಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಪ್ರಸ್ಥಕ್ಕೆ ಕಾಯುತ್ತಿರೋ ಬ್ರಹ್ಮಚಾರಿಗೆ ಬರ್ತ್ ಡೇ ಗಿಫ್ಟ್!

    ಪ್ರಸ್ಥಕ್ಕೆ ಕಾಯುತ್ತಿರೋ ಬ್ರಹ್ಮಚಾರಿಗೆ ಬರ್ತ್ ಡೇ ಗಿಫ್ಟ್!

    ಬೆಂಗಳೂರು: ಅಯೋಗ್ಯ ಎಂಬ ಚಿತ್ರದ ಅದ್ಭುತ ಯಶಸ್ಸಿನ ನಂತರದಲ್ಲಿ ನಟ ನೀನಾಸಂ ಸತೀಶ್ ಅವರ ನಸೀಬು ಬದಲಾಗಿ ಬಿಟ್ಟಿದೆ. ಆ ನಂತರದಲ್ಲಿ ಒಂದರ ಹಿಂದೊಂದರಂತೆ ಚಿತ್ರಗಳು ಅವರನ್ನು ಅರಸಿ ಬರುತ್ತಿವೆ. ಸದ್ಯ ಅವರೊಪ್ಪಿಕೊಂಡಿರೋ ಚಿತ್ರಗಳೆಲ್ಲವೂ ಭಿನ್ನ ಬಗೆಯವುಗಳೇ ಎಂಬುದು ವಿಶೇಷ. ಇದೀಗ ಸತೀಶ್ ಬ್ರಹ್ಮಚಾರಿ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರತಂಡವೀಗ ಹೀರೋ ಬರ್ತ್ ಡೇಗೆ ಗಿಫ್ಟೊಂದನ್ನು ಕೊಡಲು ತಯಾರಾಗಿದೆ!

    ಬ್ರಹ್ಮಚಾರಿ ಚಿತ್ರಕ್ಕೆ ಹಂಡ್ರೆಡ್ ಪರ್ಸೆಂಟ್ ವರ್ಜಿನ್ ಎಂಬ ಟ್ಯಾಗ್ ಲೈನ್ ಇದೆ. ಆದರೆ ಇದೀಗ ಬಿಡುಗಡೆಗೊಂಡಿರೋ ಪೋಸ್ಟರಿನಲ್ಲಿ ನೀನಾಸಂ ಸತೀಶ್, ನಾಯಕಿ ಅದಿತಿ ಪ್ರಭುದೇವರೊಂದಿಗೆ ಪ್ರಸ್ಥದ ಮೂಡಿನಲ್ಲಿರೋ ಫೋಟೋ ಅನಾವರಣಗೊಂಡಿದೆ. ಪ್ಯೂರ್ ವರ್ಜಿನ್ ಬ್ರಹ್ಮಚಾರಿಯ ಪ್ರಸ್ಥದ ಮೂಡಿನ ಬಗ್ಗೆ ಪ್ರೇಕ್ಷಕರು ಚಕಿತಗೊಂಡಿದ್ದಾರೆ.

    ಹೀಗೆ ಭಾರೀ ಕುತೂಹಲಕ್ಕೆ ಕಾರಣವಾಗಿರುವ ಪೋಸ್ಟರ್ ಬಿಡುಗಡೆ ಮಾಡಿರೋ ಚಿತ್ರತಂಡ ನೀನಾಸಂ ಸತೀಶ್ ಅವರಿಗೆ ಬರ್ತ್ ಡೇ ಗಿಫ್ಟ್ ಒಂದನ್ನು ಕೊಡಲು ತಯಾರಾಗಿರೋ ಸೂಚನೆ ನೀಡಿದೆ. ಇದೇ ತಿಂಗಳ ಇಪ್ಪತ್ತರಂದು ಸತೀಶ್ ಅವರ ಹುಟ್ಟುಹಬ್ಬವಿದೆ. ಆ ದಿನವೇ ಬ್ರಹ್ಮಚಾರಿಯದ್ದೊಂದು ಟೀಸರ್ ಬಿಡುಗಡೆಗೊಳಿಸಲು ತೀರ್ಮಾನಿಸಲಾಗಿದೆ. ಈ ಟೀಸರ್ ಹೇಗಿರಬಹುದೆಂಬ ಅಂದಾಜು ನೀಡೋ ಮಿನಿ ಟೀಸರೊಂದು 10ನೇ ತಾರೀಕಿನಂದು ಹೊರ ಬರಲಿದೆಯಂತೆ.

    ಬ್ರಹ್ಮಚಾರಿ ಚಿತ್ರ ಈಗಾಗಲೇ ಪೋಸ್ಟರುಗಳ ಮೂಲಕವೇ ವ್ಯಾಪಕ ಕುತೂಹಲಕ್ಕೆ ಕಾರಣವಾಗಿದೆ. ಆದರೆ ಈ ಮೂಲಕವೇ ಪ್ರೇಕ್ಷಕರನ್ನು ಗೊಂದಲಕ್ಕೆ ತಳ್ಳುತ್ತಾ, ಅದನ್ನೇ ಕ್ಯೂರಿಯಾಸಿಟಿಯಾಗಿ ಮಾರ್ಪಾಟು ಮಾಡೋ ಕಲೆಗಾರಿಕೆಯನ್ನ ಚಿತ್ರತಂಡ ಪ್ರದರ್ಶಿಸುತ್ತಿದೆ. ಸತೀಶ್ ಅಭಿಮಾನಿಗಳಂತೂ ಈ ಸಿನಿಮಾ ಬಗ್ಗೆ ಕಾತರರಾಗಿದ್ದಾರೆ. ಸತೀಶ್ ಬರ್ತ್ ಡೇಯಂದೇ ಅಭಿಮಾನಿಗಳೆಲ್ಲರಿಗೂ ಟೀಸರ್ ಕೊಡುಗೆ ಸಿಗಲಿದೆ.

  • ಬ್ರಹ್ಮಚಾರಿಗೆ ಜೂನಿಯರ್ ರಾಕಿ ಭಾಯ್ ಸಾಥ್!

    ಬ್ರಹ್ಮಚಾರಿಗೆ ಜೂನಿಯರ್ ರಾಕಿ ಭಾಯ್ ಸಾಥ್!

    ಬೆಂಗಳೂರು: ಒಂದು ಕಾಲದಲ್ಲಿ ಕೆಜಿಎಫ್ ಅಂದರೆ ಬಹುತೇಕರ ಕಣ್ಣುಗಳಲ್ಲಿ ಚಿನ್ನವೇ ಫಳಫಳಿಸುತ್ತಿತ್ತು. ಆದರೀಗ ಈ ಹೆಸರು ಕೇಳಿದಾಕ್ಷಣ ಕನ್ನಡದ ಕೀರ್ತಿ ಪತಾಕೆಯನ್ನು ದೇಶಾದ್ಯಂತ ಎತ್ತಿ ಹಿಡಿದ ಯಶ್ ಅಭಿನಯದ ಚಿನ್ನದಂಥಾ ಚಿತ್ರ ನೆನಪಾಗುವಂತಾಗಿದೆ. ಅಷ್ಟರ ಮಟ್ಟಿಗೆ ಪುಷ್ಕಳ ಗೆಲುವು ತನ್ನದಾಗಿಸಿಕೊಂಡ ಈ ಸಿನಿಮಾದ ಭಾಗವಾಗಿದ್ದ ಪ್ರತಿಯೊಬ್ಬರೂ ಈಗ ಒಂದಿಲ್ಲೊಂದು ರೀತಿಯಲ್ಲಿ ಬ್ಯುಸಿಯಾಗಿದ್ದಾರೆ. ಭರಪೂರ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ.

    ಕೆಜಿಎಫ್ ಚಿತ್ರದಲ್ಲಿ ಜ್ಯೂನಿಯರ್ ರಾಕಿ ಭಾಯ್ ಆಗಿ ನಟಿಸಿದ್ದ ಅನ್ಮೋಲ್ ಎಂಬ ಹುಡುಗ ಪ್ರೇಕ್ಷಕರೆಲ್ಲರ ಮನ ಗೆದ್ದಿದ್ದ. ಪುಟ್ಟ ವಯಸ್ಸಿನಲ್ಲಿಯೇ ನಟನೆಯ ಎಲ್ಲ ಪಟ್ಟುಗಳನ್ನು ಅರಗಿಸಿಕೊಂಡವನಂತೆ ನಟಿಸಿದ್ದ ಈ ಹುಡುಗನ ಲಕ್ಕು ಸದರಿ ಪಾತ್ರದಿಂದಲೇ ಖುಲಾಯಿಸಿ ಬಿಟ್ಟಿದೆ. ಇದಾದ ನಂತರ ಬಹಳಷ್ಟು ಅವಕಾಶಗಳೂ ಕೂಡಾ ಅನ್ಮೋಲ್ ನನ್ನು ಅರಸಿ ಬಂದಿವೆ. ಸದ್ಯಕ್ಕೆ ಅನ್ಮೋಲ್ ಬ್ರಹ್ಮಚಾರಿಯ ಗೆಟಪ್ಪಿನಲ್ಲಿರೋ ನೀನಾಸಂ ಸತೀಶ್ ಅವರ ಜೊತೆ ನಟಿಸೋ ಮೂಲಕ ಸುದ್ದಿ ಕೇಂದ್ರದಲ್ಲಿದ್ದಾನೆ.

    ನೀನಾಸಂ ಸತೀಶ್ ನಾಯಕನಾಗಿರೋ ಬ್ರಹ್ಮಚಾರಿ ಚಿತ್ರದ ಚಿತ್ರೀಕರಣವೀಗ ಭರದಿಂದ ಸಾಗುತ್ತಿದೆ. ಈ ಸೆಟ್‍ನಲ್ಲಿ ಅನ್ಮೋಲ್ ಜೊತೆಗಿರೋ ಫೋಟೋವೊಂದನ್ನು ಸತೀಶ್ ಸಾಮಾಜಿಕ ಜಾಲತಾಣಗಳ ಮೂಲಕ ಜಾಹೀರು ಮಾಡಿದ್ದಾರೆ. ಆದರೆ ಈ ಸಿನಿಮಾದಲ್ಲಿ ಅನ್ಮೋಲ್ ಪಾತ್ರ ಹೇಗಿದೆ? ಇಲ್ಲಿಯೂ ಸತೀಶ್ ಅವರ ಜ್ಯೂನಿಯರ್ ಶೇಡಿನ ಪಾತ್ರವನ್ನೇನಾದರೂ ಆತ ಮಾಡಿದ್ದಾನಾ ಎಂಬುದೂ ಸೇರಿದಂತೆ ಯಾವ ವಿಚಾರವನ್ನೂ ಸತೀಶ್ ಅವರಾಗಲಿ, ಚಿತ್ರತಂಡವಾಗಲಿ ಬಿಟ್ಟು ಕೊಟ್ಟಿಲ್ಲ.

    ಬ್ರಹ್ಮಚಾರಿ ರೊಮ್ಯಾಂಟಿಕ್ ಕಾಮಿಡಿ ಜಾನರಿನ ಚಿತ್ರ. ಅಯೋಗ್ಯ ಚಿತ್ರದ ನಂತರ ಭರ್ಜರಿ ಯಶಸ್ಸಿನ ಅಲೆಯಲ್ಲಿರೋ ಸತೀಶ್ ಪಾಲಿಗೆ ಈ ಚಿತ್ರವೂ ಅಂಥಾದ್ದೇ ಗೆಲುವು ತಂದು ಕೊಡಲಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಈ ಚಿತ್ರದ ತಾರಾಗಣವೂ ಕೂಡಾ ಕುತೂಹಲಕ್ಕೆ ಕಾರಣವಾಗಿದೆ. ಸದ್ಯ ಕೆಜಿಎಫ್ ಖ್ಯಾತಿಯ ಅನ್ಮೋಲ್ ನಟಿಸುತ್ತಿರೋ ವಿಚಾರ ಮಾತ್ರವೇ ಬಯಲಾಗಿದೆ.

  • ‘ಅಯೋಗ್ಯ’ದ ಸತೀಶ್ ಈಗ ‘ಬ್ರಹ್ಮಚಾರಿ’

    ‘ಅಯೋಗ್ಯ’ದ ಸತೀಶ್ ಈಗ ‘ಬ್ರಹ್ಮಚಾರಿ’

    ಬೆಂಗಳೂರು: ಅಯೋಗ್ಯ ಚಿತ್ರದ ಸಕ್ಸಸ್ ನಂತರ ನೀನಾಸಂ ಸತೀಶ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಈ ನಡುವೆ ರಿಲೀಸ್ ಆಗಿದ್ದ ಚಂಬಲ್ ಸಹ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಹಾಗೆಯೇ ನಟನೆಯೊಂದಿಗೆ ತಾವೇ ನಿರ್ದೇಶನಕ್ಕೂ ಮುಂದಾಗಿದ್ದರು. ಈಗ ಅವರು ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಹೌದು. ಸತೀಶ್ ಈಗ ಬ್ರಹ್ಮಚಾರಿ ಹೆಸರಿನ ಚಿತ್ರವನ್ನು ಒಪ್ಪಿಕೊಂಡಿದ್ದು, ಅವರಿಲ್ಲಿ ಬ್ರಹ್ಮಚಾರಿಯಾಗಿ ನಟಿಸುತ್ತಿದ್ದಾರೆ. ಉದಯ್ ಮೆಹ್ತಾ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಇನ್ನು ಬ್ರಹ್ಮಚಾರಿ ಅಂತ ಟೈಟಲ್ ಇಟ್ಟಿರುವ ಚಿತ್ರತಂಡ 100 ಪರ್ಸೆಂಟ್ ವರ್ಜಿನ್ ಎನ್ನುವ ಸಬ್ ಟೈಟಲ್ ಇಟ್ಟಿದೆ. ಈಗಾಗಲೇ ಬಾಂಬೆ ಮಿಠಾಯಿ ಮತ್ತು ಡಬಲ್ ಇಂಜಿನ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಚಂದ್ರ ಮೋಹನ್ ‘ಬ್ರಹ್ಮಚಾರಿ’ ಹೆಸರಿನ ಮೂರನೇ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಅಂದ ಹಾಗೆ ಈ ಹಿಂದೆ ಕೇಳಿ ಬಂದಿರುವಂತೆ ಈ ಚಿತ್ರವು ಲವ್ ಇನ್ ಮಂಡ್ಯ ಚಿತ್ರದ ಮುಂದುವರಿದ ಭಾಗ ಎನ್ನಲಾಗುತ್ತಿದ್ದು, ಆದರೆ ಅದನ್ನು ಚಿತ್ರ ತಂಡ ಅಲ್ಲಗಳೆದಿದೆ. ಇದೊಂದು ಪಕ್ಕಾ ಕಾಮಿಡಿ ಎಂಟರ್‍ಟೇನ್ ಮೆಂಟ್ ಚಿತ್ರ ಎಂದಿದ್ದಾರೆ. ಯುಗಾದಿ ಹಬ್ಬಕ್ಕೆ ಬ್ರಹ್ಮಚಾರಿ ಸೆಟ್ಟೇರಲಿದೆ.

  • ಹೆಬ್ಬುಲಿಯನ್ನು ಕೊಂದ ಕಥೆ ಹೇಳುತ್ತಲೇ ಬೆವರಾಡಿಸುತ್ತೆ ಚಂಬಲ್!

    ಹೆಬ್ಬುಲಿಯನ್ನು ಕೊಂದ ಕಥೆ ಹೇಳುತ್ತಲೇ ಬೆವರಾಡಿಸುತ್ತೆ ಚಂಬಲ್!

    ಬೆಂಗಳೂರು: ಐಎಎಸ್ ಅಧಿಕಾರಿ ಡಿಕೆ ರವಿ ಸಾವು ಕೊಲೆಯಲ್ಲ ಆತ್ಮಹತ್ಯೆ ಅಂತ ಸರ್ಕಾರಿ ಫರ್ಮಾನು ಹೊರ ಬಿದ್ದು ವರ್ಷಗಳೇ ಕಳೆದಿವೆ. ಆದರೂ ಈ ನೆಲದ ಜನಸಾಮಾನ್ಯರು, ರವಿಯವರನ್ನು ಹತ್ತಿರದಿಂದ ಬಲ್ಲವರು ಮಾತ್ರ ಅದೊಂದು ಆತ್ಮಹತ್ಯೆ ಅನ್ನೋದನ್ನು ಈ ಕ್ಷಣಕ್ಕೂ ಒಪ್ಪಿಕೊಂಡಿಲ್ಲ. ಹೀಗೆ ಜನಸಾಮಾನ್ಯರ ಗುಮಾನಿಗಳಿಗೆ ತಕ್ಕುದಾಗಿಯೇ ಅದ್ಭುತವಾದೊಂದು ಕಥಾನಕ ಹೊಂದಿರೋ ಜೇಕಬ್ ವರ್ಗೀಸ್ ನಿರ್ದೇಶನದ ಚಂಬಲ್ ತೆರೆ ಕಂಡಿದೆ. ಈ ಮೂಲಕವೇ ಸಿನಿಮಾದಾಚೆಗಿನ ಸತ್ಯವೊಂದಕ್ಕೆ ಸೀಮಿತ ಚೌಕಟ್ಟಿನಲ್ಲಿಯೇ ಕನ್ನಡಿ ಹಿಡಿಯೋ ಪರಿಣಾಮಕಾರಿ ಪ್ರಯತ್ನಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

    ಆತ ಯಾವ ಊರಿಗೇ ಅಧಿಕಾರಿಯಾಗಿ ಹೋದರೂ ಜನರ ನಡುವೆಯೇ ಬೆರೆತು, ಜನರ ಒಳಿತನ್ನೇ ಉಸಿರಾಡೋ ಅಪರೂಪದ ಅಧಿಕಾರಿ. ಅವರ ಪ್ರಾಮಾಣಿಕತೆಗೆ ಆಯಾ ಭಾಗದ ಸಾಮಾನ್ಯ ಜನರೂ ಬೆರಗಾಗುತ್ತಾರೆ. ಭ್ರಷ್ಟಾಚಾರವನ್ನ ಬುಡ ಸಮೇತ ಕಿತ್ತು ಹಾಕಿ ಜನಸಾಮಾನ್ಯರ ಜೀವನವನ್ನ ಹಸನಾಗಬೇಕೆನ್ನೋದು ಆತನ ಗುರಿ. ಆದರೆ ಅಧಿಕಾರಸ್ಥರು, ಅವರ ಚೇಲಾಗಳು ಈ ಅಧಿಕಾರಿಯ ವಿರುದ್ಧವೇ ಗುರಾಣಿಯ ಗುರಿಯಿಡುತ್ತಾರೆ. ಅದರ ಫಲವಾಗಿ ಪದೇ ಪದೇ ವರ್ಗಾವಣೆಯ ಅಸ್ತ್ರವೂ ಈ ಅಧಿಕಾರಿಯ ಮೇಲೆ ಪ್ರಯೋಗವಾಗುತ್ತಿರುತ್ತೆ.

    ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಈ ಅಧಿಕಾರಿ ಎಲ್ಲಿಗೇ ಹೋದರೂ, ಯಾವ ಇಲಾಖೆಗೇ ವರ್ಗಾವಣೆ ಆದರೂ ಜನಪರತೆಯನ್ನೇ ಉಸಿರಾಡುತ್ತಾನೆ. ಕಡೆಗೂ ಒಂದಿನ ಈತ ರೇಡು ಮಾಡಿದ ದಾಖಲೆಗಳನ್ನು ಕದಿಯಲು ನಡೆಯೋ ಅಧಿಕಾರಸ್ಥರ ಸಾಹಸ, ಅದಕ್ಕೆ ಸಾಥ್ ನೀಡೋ ಕಿರಾತಕರು… ಅಲ್ಲೊಂದು ಭೀಕರ ಕೊಲೆ ಮತ್ತು ಅದನ್ನು ಆತ್ಮಹತ್ಯೆ ಅಂತ ನಿರೂಪಿಸೋ ಸರ್ಕಸ್ಸು…

    ಇದು ಡಿಕೆ ರವಿ ಸಾವಿನ ಸುತ್ತಲಿನ ಕಥೆ ಅನ್ನೋದಕ್ಕೆ ಇದಕ್ಕಿಂತಲೂ ಯಾವ ಪುರಾವೆಯೂ ಬೇಕಿಲ್ಲ. ಜೇಕಬ್ ವರ್ಗೀಸ್ ರವಿ ಸಾವಿನ ಸುತ್ತಲಿನ ಇಂಚಿಂಚು ಮಾಹಿತಿಯನ್ನು ಕಲೆ ಹಾಕಿ ಈ ಕಥೆ ಸಿದ್ಧಪಡಿಸಿದ್ದಾರೆ. ಯಾವ ಅಬ್ಬರವೂ ಇಲ್ಲದೆ ತಣ್ಣಗೆ ನಿರೂಪಿಸಿದ್ದಾರೆ. ನೀನಾಸಂ ಸತೀಶ್ ಅಂತೂ ಡಿ.ಕೆ.ರವಿಯವರನ್ನೇ ಆವಾಹಿಸಿಕೊಂಡು ನಟಿಸಿದ್ದಾರೆ. ಸೋನು ಗೌಡ ಸೇರಿದಂತೆ ಎಲ್ಲ ಪಾತ್ರಗಳೂ ಕಾಡುವಂತೆ ಮೂಡಿ ಬಂದಿವೆ. ಕಡೆಯ ಕೆಲ ಸೀನುಗಳಲ್ಲಂತೂ ಅವರು ನಟನಾಗಿ ವಿಜೃಂಭಿಸಿದ್ದಾರೆ.

    ಒಟ್ಟಾರೆಯಾಗಿ ಒಂದು ಕಹಿ ಸತ್ಯವನ್ನ ಜೇಕಬ್ ಈ ಸಿನಿಮಾ ಮೂಲಕ ಜಾಹೀರು ಮಾಡಿದ್ದಾರೆ. ಈ ಮೂಲಕ ಸಿನಿಮಾ ಮಾಧ್ಯಮದ ಶಕ್ತಿ ಏನೆಂಬುದನ್ನೂ ಜಾಹೀರು ಮಾಡಿದ್ದಾರೆ. ಈ ಕಾರಣದಿಂದಲೇ ಈ ಸಿನಿಮಾ ಜನರಿಗಿಷ್ಟವಾಗೋದರಲ್ಲಿ ಯಾವ ಅನುಮಾನವೂ ಇಲ್ಲ.

    ರೇಟಿಂಗ್: 4/5 

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಂಬಲ್: ಸೋನುಗೆ ಇದೆಂಥಾ ಅನ್ಯಾಯ?!

    ಚಂಬಲ್: ಸೋನುಗೆ ಇದೆಂಥಾ ಅನ್ಯಾಯ?!

    ಬೆಂಗಳೂರು: ಚಂಬಲ್ ಚಿತ್ರದಲ್ಲಿ ನೀನಾಸಂ ಸತೀಶ್ ಜೊತೆ ಸೋನು ಗೌಡ ನಾಯಕಿಯಾಗಿ ನಟಿಸಿರೋದು ಗೊತ್ತೇ ಇದೆ. ತನಗೆ ಸಿಗೋ ಪಾತ್ರಗಳೆಲ್ಲ ಸವಾಲಿನವುಗಳೇ ಆಗಿರಲಿ ಅನ್ನೋ ಮನಸ್ಥಿತಿ ಹೊಂದಿರುವ ಸೋನು ಚಂಬಲ್ ಬಗ್ಗೆ, ತಮ್ಮ ಪಾತ್ರದ ಬಗ್ಗೆ ಮತ್ತು ನಿರ್ದೇಶಕರ ಬಗ್ಗೆ ಒಂದಷ್ಟು ವಿಚಾರಗಳನ್ನ ಹಂಚಿಕೊಂಡಿದ್ದಾರೆ.

    ನಿರ್ದೇಶಕ ಜೇಕಬ್ ವರ್ಗೀಸ್ ಸಿನಿಮಾ ಅಂದ ಮೇಲೆ ವಿಶೇಷವಾಗಿಯೇ ಇರುತ್ತೆ. ಆ ನಂಬಿಕೆ ಹೊಂದಿರೋ ಸೋನುಗೆ ಅವರ ಕಡೆಯಿಂದಲೇ ನಟಿಸೋ ಆಫರ್ ಬಂದಾಗ ಥ್ರಿಲ್ ಆಗಿತ್ತಂತೆ. ಆದರೆ ಕಥೆ ಕೇಳಿದರೂ ಕೂಡಾ ಒಂದಷ್ಟು ವಿಚಾರಗಳ ಜೊತೆಗೆ ಇದು ಯಾವ ಬಗೆಯ ಸಿನಿಮಾ ಅನ್ನೋದೇ ಅರ್ಥ ಆಗಿರಲಿಲ್ಲವಂತೆ.

    ಸೋನು ಗೌಡಗೆ ಚಂಬಲ್ ಚಿತ್ರದ ಅಂತರಾಳ ಅರ್ಥವಾದದ್ದು ಚಿತ್ರೀಕರಣದ ಹಂತದಲ್ಲಿಯೇ. ಈ ಚಿತ್ರದಲ್ಲಿ ಅವರು ಸರಳ ಸಹಜ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕರು ಮೇಕಪ್ಪನ್ನು ಮುಖಕ್ಕೆ ಸೋಕಿಸಲೂ ಬಿಟ್ಟಿಲ್ಲವಂತೆ. ಹಾಗೆ ಮಾಡಿದರೆ ಈ ಪಾತ್ರದ ಸಹಜ ಗ್ಲಾಮರ್ ಗೆ ಘಾಸಿಯಾಗುತ್ತೆ ಅನ್ನೋದು ಜೇಕಬ್ ವರ್ಗೀಸ್ ಕಾಳಜಿಯಾಗಿತ್ತು.

    ಒಟ್ಟಾರೆಯಾಗಿ ಚಂಬಲ್ ಒಂದು ವಿಶೇಷವಾದ ಚಿತ್ರವಾಗಿ ದಾಖಲಾಗೋದರ ಜೊತೆಗೇ ಭಾರೀ ಗೆಲುವನ್ನೂ ತನ್ನದಾಗಿಸಿಕೊಳ್ಳುತ್ತೆ ಅನ್ನೋ ಭರವಸೆ ಸೋನು ಗೌಡ ಅವರಿಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಂಬಲ್ ನಲ್ಲಿ ಹಳ್ಳಿ ಹೈದ ಸತೀಶ ಸಿಗೋದಿಲ್ಲ!

    ಚಂಬಲ್ ನಲ್ಲಿ ಹಳ್ಳಿ ಹೈದ ಸತೀಶ ಸಿಗೋದಿಲ್ಲ!

    ನೀನಾಸಂ ಸತೀಶ್ ಪಾಲಿಗೆ ಅಯೋಗ್ಯ ಚಿತ್ರ ದೊಡ್ಡ ಮಟ್ಟದಲ್ಲಿ ಬ್ರೇಕ್ ನೀಡಿರೋದು ಗೊತ್ತೇ ಇದೆ. ಈ ದೆಸೆಯಿಂದಲೇ ಅವರೀಗ ಬೇರೆ ಭಾಷೆಗಳಲ್ಲಿಯೂ ಮಿಂಚುತ್ತಿದ್ದಾರೆ. ಇಂಥಾದ್ದೊಂದು ಗೆಲುವಿನ ಶಕೆಯನ್ನು ಮುಂದುವರೆಸೋ ಸ್ಪಷ್ಟ ಸೂಚನೆಯೊಂದಿಗೆ ಬಿಡುಗಡೆಯೇ ತಯಾರಾಗಿರೋ ಚಿತ್ರ ಚಂಬಲ್.

    ಈ ಸಿನಿಮಾವನ್ನು ನಿರ್ದೇಶಕ ಜೇಕಬ್ ವರ್ಗೀಸ್ ಎಂದಿನಂತೆಯೇ ವಿಶಿಷ್ಟವಾಗಿ ರೂಪಿಸಿದ್ದಾರೆ. ಇದು ಟ್ರೈಲರ್ ಮೂಲಕವೇ ಸ್ಪಷ್ಟವಾಗಿದೆ. ಈ ಕಾರಣದಿಂದಲೇ ಭಾರೀ ಕುತೂಹಲಕ್ಕೆ ಕಾರಣವಾಗಿರುವ ಚಂಬಲ್ ನೀನಾಸಂ ಸತೀಶ್ ಅವರ ಈವರೆಗಿನ ಚಿತ್ರಗಳಿಗಿಂತ ತುಂಬಾ ಭಿನ್ನವಾದದ್ದು. ಈ ಹಿನ್ನೆಲೆಯಲ್ಲಿ ಚಂಬಲ್ ನೀನಾಸಂ ಸತೀಶ್ ಪಾಲಿಗೆ ಬಹು ಮುಖ್ಯವಾದ ಚಿತ್ರ.

    ಇದುವರೆಗೂ ನೀನಾಸಂ ಸತೀಶ್ ಪ್ರಸಿದ್ಧಿ ಪಡೆದಿದ್ದೇ ಮಂಡ್ಯ ನೆಲದ ಮಣ್ಣಿನ ಘಮಲು ಹೊಂದಿರೋ ಭಾಷಾ ಸೊಗಡಿನಿಂದ. ಆದರೆ ಚಂಬಲ್ ಚಿತ್ರದಲ್ಲಿ ಅವರು ನಿಷ್ಠಾವಂತ ಅಧಿಕಾರಿ. ಅವರ ಭಾಷೆ, ಹಾವಭಾವಗಳೆಲ್ಲವೂ ಚಂಬಲ್ ನಲ್ಲಿ ಬದಲಾಗಿದೆ.

    ಈ ಸಿನಿಮಾ ತನ್ನ ವೃತ್ತಿ ಬದುಕಲ್ಲಿ ತುಂಬಾ ವಿಶಿಷ್ಟವಾಗಿದೆ ಅಂತ ಖುದ್ದು ಸತೀಶ್ ಅವರೇ ಹೇಳಿಕೊಂಡಿದ್ದಾರೆ. ಆರಂಭದಲ್ಲಿ ಚಂಬಲ್ ಆಫರ್ ಬಂದಾಗ ಸತೀಶ್ ಒಪ್ಪಿಕೊಂಡಿದ್ದೇ ಬೆರಗಾಗಿಸುವಂಥಾ ಚಿತ್ರಕಥೆ ನೋಡಿಯಂತೆ. ಚಂಬಲ್ ಚಿತ್ರದಲ್ಲಿ ತನಗೆ ತಾನೇ ಹೊಸಬ ಅನ್ನಿಸುವಂಥಾ ಪಾತ್ರಕ್ಕೆ ಸತೀಶ್ ಜೀವ ತುಂಬಿದ್ದಾರಂತೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಂಬಲ್ ಟ್ರೈಲರ್: ಇದು ಭ್ರಷ್ಟಾಚಾರ ಸಿಡಿದೇಳೋ ಸಿಡಿಗುಂಡಿನ ಕಥೆಯಾ?

    ಚಂಬಲ್ ಟ್ರೈಲರ್: ಇದು ಭ್ರಷ್ಟಾಚಾರ ಸಿಡಿದೇಳೋ ಸಿಡಿಗುಂಡಿನ ಕಥೆಯಾ?

    ಬೆಂಗಳೂರು: ಚಂಬಲ್ ಅನ್ನೋ ಹೆಸರಿನ ಸುತ್ತಾ ನಾನಾ ನಿಗೂಢಗಳು ಅಡಗಿಕೊಂಡಿವೆ. ಒಂದಷ್ಟು ಕ್ರೈಮುಗಳ ಸರಣಿಯೂ ಕಣ್ಮುಂದೆ ಸುಳಿದಾಡುತ್ತೆ. ಅದೇ ಹೆಸರನ್ನು ಶೀರ್ಷಿಕೆಯಾಗಿಸಿಕೊಂಡಿರೋ ಚಂಬಲ್ ಚಿತ್ರದ ಬಗ್ಗೆ ನಾನಾ ಕುತೂಹಲಗಳಿದ್ದವು. ಇದೀಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಿರೋ ಈ ಚಿತ್ರದ ಟೃಲರ್ ಒಂದು ಚಿತ್ರಣವನ್ನ ಕಟ್ಟಿ ಕೊಟ್ಟಿದೆ.

    ನೀನಾಸಂ ಸತೀಶ್ ಈ ಚಿತ್ರದಲ್ಲಿ ಭ್ರಷ್ಟಾಚಾರಿಗಳನ್ನ ಕಂಡ್ರೆ ಬೆಂಕಿಯುಂಡೆಯಂತಾಡೋ ಖಡಕ್ ಅಧಿಕಾರಿಯಾಗಿ ನಟಿಸಿರೋದರ ಸುಳಿವೂ ಕೂಡಾ ಸಿಕ್ಕಿದೆ. ಪ್ರತೀ ಹಂತದಲ್ಲಿಯೂ ಪ್ರೇಕ್ಷಕರನ್ನ ನಿಗಿ ನಿಗಿಸೋ ಕ್ಯೂರಿಯಾಸಿಟಿಯ ಕೆಂಡದ ಮೇಲೆ ತಂದು ಕೂರಿಸುವಂತೆ ಇಡೀ ಚಿತ್ರ ಮೂಡಿ ಬಂದಿದೆ ಎಂಬುದಕ್ಕೆ ಈ ಟ್ರೈಲರ್ ಸಾಕ್ಷಿಯೊದಗಿಸುತ್ತಿದೆ.

    ಅಂತೂ ಈವರೆಗೂ ಕಾಣಿಸಿಕೊಳ್ಳದಿದ್ದ ಗೆಟಪ್ಪಿನಲ್ಲಿ ನೀನಾಸಂ ಸತೀಶ್ ಇಲ್ಲಿ ಕಾಣಿಸಿಕೊಂಡಿದ್ದಾರೆ. ಬಿಡುಗಡೆಯಾಗಿ ಕ್ಷಣಗಳಲ್ಲಿಯೇ ಕೇಳಿ ಬರುತ್ತಿರೋ ಭರಪೂರ ಮೆಚ್ಚುಗೆಗಳೇ ಎಲ್ಲವನ್ನೂ ಹೇಳುತ್ತಿವೆ. ಥ್ರಿಲ್ಲರ್ ವಿಧಾನದಲ್ಲಿ ಸಾಮಾಜಿಕ ಕಥೆಯೊಂದನ್ನ ನಿರ್ದೇಶಕರು ಚಂಬಲ್ ಮೂಲಕ ಹೇಳ ಹೊರಟಿದ್ದಾರೆಂಬ ಸುಳಿವೂ ಸಿಕ್ಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಚಂಬಲ್ ಟ್ರೈಲರ್ ಲಾಂಚ್ ಮಾಡಲಿದ್ದಾರೆ ಪವರ್ ಸ್ಟಾರ್!

    ಚಂಬಲ್ ಟ್ರೈಲರ್ ಲಾಂಚ್ ಮಾಡಲಿದ್ದಾರೆ ಪವರ್ ಸ್ಟಾರ್!

    ಬೆಂಗಳೂರು: ನೀನಾಸಂ ಸತೀಶ್ ಖುಷಿಯ ಸುದ್ದಿಯೊಂದನ್ನು ಜಾಹೀರು ಮಾಡಿದ್ದಾರೆ. ಅವರು ನಟಿಸಿರುವ ಚಂಬಲ್ ಚಿತ್ರದ ಬಗ್ಗೆ ಪ್ರೇಕ್ಷಕರು ಕಾತರಗೊಂಡಿರುವಾಗಲೇ ಟ್ರೈಲರ್ ಹೊರಬರುವ ಸಂಗತಿಯನ್ನವರು ಹೇಳಿಕೊಂಡಿದ್ದಾರೆ. ಪ್ರತಿಭಾವಂತ ನಿರ್ದೇಶಕ ಜೇಕಬ್ ವರ್ಗೀಸ್ ನಿರ್ದೇಶನದ ಈ ಚಿತ್ರದ ಟ್ರೈಲರ್ ಇದೇ ತಿಂಗಳ 31ರಂದು ಬಿಡುಗಡೆಯಾಗಲಿದೆ.

    ಇದೇ ಗುರುವಾರ ಸಂಜೆ 6 ಗಂಟೆಗೆ ಚಂಬಲ್ ಟ್ರೈಲರ್ ಅನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಿಡುಗಡೆಗೊಳಿಸಲಿದ್ದಾರೆ. ಈ ಮೂಲಕ ಪುನೀತ್ ಚಂಬಲ್ ಚಿತ್ರ ತಂಡಕ್ಕೆ ಹೊಸಾ ಹುಮ್ಮಸ್ಸು ತುಂಬಲಿದ್ದಾರೆ.

    ಓರ್ವ ಭಿನ್ನವಾಗಿ ಆಲೋಚಿಸುವ ಪ್ರತಿಭಾವಂತ ನಿರ್ದೇಶಕನ ಚಿತ್ರಗಳ ಬಗ್ಗೆ ಪ್ರೇಕ್ಷಕರಲ್ಲೊಂದು ಕುತೂಹಲ ಇದ್ದೇ ಇರುತ್ತದೆ. ಜೇಕಬ್ ವರ್ಗೀಸ್ ಈ ಹಿಂದೆ ಸವಾರಿ ಚಿತ್ರದ ಮೂಲಕ ಚಿತ್ರರಂಗದಲ್ಲಿ ಟಾಕ್ ಕ್ರಿಯೇಟ್ ಮಾಡಿದ್ದವರು. ಆ ಬಳಿಕ ಪೃಥ್ವಿ ಎಂಬ ರಿಯಲಿಸ್ಟಿಕ್ ಚಿತ್ರದ ಮೂಲಕ ಯಶದ ಯಾನ ಮುಂದುವರೆಸಿದ್ದ ಜೇಕಬ್, ಸವಾರಿ-2 ಚಿತ್ರದಲ್ಲಿಯೂ ಪ್ರೇಕ್ಷಕರನ್ನು ಸಂತೃಪ್ತಗೊಳಿಸಿದ್ದರು. ಇಂಥಾ ಜೇಕಬ್ ವರ್ಗೀಸ್ ಅವರ 4ನೇ ಚಿತ್ರ ಚಂಬಲ್. ಈ ಹೆಸರು ಕೇಳಿದರೇನೇ ಚಂಬಲ್ ಕಣಿವೆ ನೆನಪಾಗುತ್ತೆ. ಅಲ್ಲಿನ ಮಾರಾಮಾರಿ ಮತ್ತು ಗ್ಯಾಂಗ್‍ಸ್ಟರ್‍ಗಳು ಕಣ್ಮುಂದೆ ಬರುತ್ತಾರೆ. ಈ ಕಥೆಯೂ ಅಂಥಾದ್ದೇ ಆಂತರ್ಯ ಹೊಂದಿದೆಯಾ ಅಥವಾ ಈ ಹೆಸರಿಗೆ ಹತ್ತಿರವಾದ ಬೇರೊಂದು ಕಥೆ ಹೇಳಿದ್ದಾರಾ ಎಂಬ ಪ್ರಶ್ನೆಯಂತೂ ಪ್ರೇಕ್ಷಕರಲ್ಲಿ ಇದ್ದೇ ಇದೆ.

    ಇನ್ನುಳಿದಂತೆ ಚಂಬಲ್ ಚಿತ್ರದ ಮೋಷನ್ ಪೋಸ್ಟರಿನಲ್ಲಿ ನೀನಾಸಂ ಸತೀಶ್ ಅವರ ಲುಕ್ ಗಮನ ಸೆಳೆದಿತ್ತು. ಈ ಹಿಂದಿನ ಯಾವ ಚಿತ್ರದಲ್ಲಿಯೂ ಕಾಣಿಸಿಕೊಳ್ಳದ ಗೆಟಪ್ಪಿನಲ್ಲಿ ಸತೀಶ್ ಮಿಂಚಿದ್ದಾರೆ. ಅದುವೇ ಈ ಚಿತ್ರದಲ್ಲಿ ನೀನಾಸಂ ಪಾತ್ರ ತೀರಾ ಭಿನ್ನವಾಗಿದೆ ಎಂಬ ಸುಳಿವನ್ನೂ ರವಾನಿಸಿತ್ತು. ಇದೀಗ ಟ್ರೈಲರ್ ಮೂಲಕ ಚಂಬಲ್ ಬಗ್ಗೆ ಮತ್ತೊಂದಷ್ಟು ವಿಚಾರಗಳೂ ಹೊರ ಬೀಳಲಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv