Tag: ನೀನಾಸಂ ಸತೀಶ್

  • ‘ಮ್ಯಾಟ್ನಿ’ ಫಸ್ಟ್ ಲುಕ್: ನೀನಾಸಂ ಸತೀಶ್ ಸಿನಿಮಾ ಸುಗ್ಗಿ ಶುರು!

    ‘ಮ್ಯಾಟ್ನಿ’ ಫಸ್ಟ್ ಲುಕ್: ನೀನಾಸಂ ಸತೀಶ್ ಸಿನಿಮಾ ಸುಗ್ಗಿ ಶುರು!

    ನೀನಾಸಂ ಸತೀಶ್ ಎಂಬ ಹೆಸರು ಕೇಳಿದಾಕ್ಷಣವೇ ಥರ ಥರದ ಪಾತ್ರಗಳು ಕಣ್ಣೆದುರು ಸರಿಯಲಾರಂಭಿಸುತ್ತವೆ. ಸಣ್ಣ ಪುಟ್ಟ ಪಾತ್ರಗಳನ್ನೂ ಕೂಡ ಅಚ್ಚುಕಟ್ಟಾಗಿ ನಿರ್ವಹಿಸುತ್ತಾ, ನಾಯಕ ನಟನಾಗಿ ಮಿಂಚುತ್ತಿರೋ ಸತೀಶ್ ಈಗ ಹೊಸ ಹುರುಪಿನೊಂದಿಗೆ ಮತ್ತೊಂದಷ್ಟು ಸಿನಿಮಾಗಳಿಗಾಗಿ ಕಸರತ್ತು ಆರಂಭಿಸಿದ್ದಾರೆ. ಅದರ ಭಾಗವಾಗಿ ಈಗ ಸತೀಶ್ ಅಭಿನಯಿಸಲಿರೋ ‘ಮ್ಯಾಟ್ನಿ’ ಚಿತ್ರದ ಫಸ್ಟ್ ಲುಕ್ ಲಾಂಚ್ ಆಗಿದೆ.

    ಇದು ಕೊರೊನಾ ಕಾಲದಲ್ಲಿ ನೀನಾಸಂ ಸತೀಶ್ ಅಭಿಮಾನಿ ಬಳಗಕ್ಕೆ ಸಿಕ್ಕ ಬಂಪರ್ ಗಿಫ್ಟ್‍ನಂಥಾ ಫಸ್ಟ್ ಲುಕ್. ಇದೀಗ ಬಿಡುಗಡೆಗೊಂಡಿರೋ ಫಸ್ಟ್ ಲುಕ್, ಈ ಸಿನಿಮಾವೊಂದು ಬೆಸ್ಟ್ ಕಥೆಯನ್ನೊಳಗೊಂಡಿದೆ ಅನ್ನೋದನ್ನ ಸಾರಿ ಹೇಳುವಂತಿದೆ. ಇತ್ತೀಚಿನ ದಿನಗಳಲ್ಲಿ ಸತೀಶ್ ಅವರು ಹೊಸ ಸಾಧ್ಯತೆಗಳತ್ತ ಕೈಚಾಚುತ್ತಿದ್ದಾರೆ. ಇದುವರೆಗೆ ಬಲಗೊಂಡಿರೋ ಇಮೇಜಿನಾಚೆಯ ಸವಾಲಿನ ಪಾತ್ರಗಳಿಗೆ ತಮ್ಮನ್ನು ತಾವು ಒಡ್ಡಿಕೊಳ್ಳುತ್ತಿದ್ದಾರೆ. ಮ್ಯಾಟ್ನಿ ಚಿತ್ರದ ಮೂಲಕ ಅವರು ಮತ್ತೊಂದು ಬಗೆಯಲ್ಲಿ, ವಿಶಿಷ್ಟವಾದ ಗೆಟಪ್ಪಿನಲ್ಲಿ ಚೆಂದದ ಕಥೆಯ ಚುಂಗು ಹಿಡಿದು ಪ್ರೇಕ್ಷಕರನ್ನು ಮುಖಾಮುಖಿಯಾಗೋ ತವಕದಲ್ಲಿದ್ದಾರೆ.

    ಮ್ಯಾಟ್ನಿ ಮನೋಹರ್ ನಿರ್ದೇಶನದಲ್ಲಿ ಮೂಡಿ ಬರಲಿರುವ ಚಿತ್ರ. ಮನೋಹರ್ ಈಗಾಗಲೇ ಸಾಕಷ್ಟು ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ಕಾರ್ಯ ನಿರ್ವಹಿಸಿರುವವರು. ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾರ ಬಳಿ ಕಸುಬು ಕಲಿತಿರೋ ಮನೋಹರ್ ಅದ್ಭುತವಾದ ಕಥೆಯೊಂದಿಗೆ ಮ್ಯಾಟ್ನಿಯನ್ನು ರೂಪಿಸಲು ಮುಂದಾಗಿದ್ದಾರಂತೆ. ಈ ಕಾರಣದಿಂದಲೇ ಮ್ಯಾಟ್ನಿ ಬಗ್ಗೆ ಸತೀಶ್ ಅವರಲ್ಲಿ ಗಾಢವಾದ ಭರವಸೆ ಇದೆ. ಅದಕ್ಕೆ ತಕ್ಕುದಾದಂಥ ನಿರೀಕ್ಷೆಗಳೂ ಇವೆ.

    ವಿಶೇಷ ಅಂದ್ರೆ, ಈ ಸಿನಿಮಾ ಮೂಲಕ ರಚಿತಾ ರಾಮ್ ಮತ್ತು ಸತೀಶ್ ಮತ್ತೊಮ್ಮೆ ಒಟ್ಟಾಗಿ ನಟಿಸುತ್ತಿದ್ದಾರೆ. ಈಗಾಗಲೇ ಒಟ್ಟಾಗಿ ನಟಿಸಿ ಒಂದು ಸುತ್ತು ಗೆದ್ದಿರುವ ರಚಿತಾ ಮತ್ತು ಸತೀಶ್ ಜೋಡಿ ಪ್ರೇಕ್ಷಕರ ಪಾಲಿನ ಹಾಟ್ ಫೇವರಿಟ್ ಅನ್ನಿಸಿಕೊಂಡಿತ್ತು. ಇದೀಗ ಆ ಜೋಡಿ ಮ್ಯಾಟ್ನಿ ಮೂಲಕ ಮತ್ತೆ ಒಂದಾಗಿದೆ. ಸತೀಶ್ ಅವರೇ ಪಬ್ಲಿಕ್ ಟಿವಿಯೊಂದಿಗೆ ಹಂಚಿಕೊಂಡಿರೋ ಅಂಶಗಳನ್ನು ಆಧರಿಸಿ ಹೇಳೋದಾದರೆ, ಮ್ಯಾಟ್ನಿಯಲ್ಲಿ ಇವರಿಬ್ಬರ ಪಾತ್ರವೂ ಭಿನ್ನವಾಗಿವೆಯಂತೆ. ಇಬ್ಬರೂ ಕೂಡ ಹೊಸ ಥರದ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರೋ ಭರವಸೆ ಸತೀಶ್ ಅವರಲ್ಲಿದೆ.

    ಇದೀಗ ಫಸ್ಟ್ ಲುಕ್ ಮೂಲಕ ಸುದ್ದಿ ಕೇಂದ್ರದಲ್ಲಿರೋ ಮ್ಯಾಟ್ನಿಗೆ ಈ ತಿಂಗಳ ಕೊನೆಯ ಹೊತ್ತಿಗೆಲ್ಲ ಚಿತ್ರೀಕರಣ ನಡೆಯಲಿದೆ. ಹಾಗಂತ ಸತೀಶ್ ಅವರ ಬಳಿಯಿರೋದು ಇದೊಂದು ಚಿತ್ರ ಮಾತ್ರ ಅಂದುಕೊಳ್ಳಬೇಕಿಲ್ಲ. ಚಿತ್ರೀಕರಣದ ಹಂತದಲ್ಲಿರೋ ದಸರಾ ಚಿತ್ರವೂ ಅವರ ಬತ್ತಳಿಕೆಯಲ್ಲಿದೆ. ಅದರ ಎರಡನೇ ಹಂತದ ಚಿತ್ರೀಕರಣ ಕೂಡಾ ಈ ತಿಂಗಳು ನಡೆಯಲಿದೆಯಂತೆ.

    ಇದು ಸತೀಶ್ ಅವರ ಮುಂಬರೋ ಪ್ರಾಜೆಕ್ಟುಗಳ ವಿವರ. ಇನ್ನುಳಿದಂತೆ ಅವರು ನಾಯಕನಾಗಿ ನಟಿಸಿರುವ ಗೋದ್ರಾ ಬಿಡುಗಡೆಗೆ ರೆಡಿಯಾಗಿದೆ. ಇನ್ನೇನು ಕೊರೊನಾ ಕಾಟ ಮುಕ್ತಾಯವಾಗುತ್ತಲೇ, ತಿಂಗಳೊಪ್ಪತ್ತಿನಲ್ಲಿಯೇ ಈ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆಯಾಗೋ ಸಾಧ್ಯತೆಗಳಿವೆ. ನೀನಾಸಂ ಸತೀಶ್ ಪಾಲಿಗೆ ಅದು ಮತ್ತೊಂದು ಟರ್ನಿಂಗ್ ಪಾಯಿಂಟ್ ಆಗೋ ಎಲ್ಲ ಲಕ್ಷಣಗಳೂ ಕಾಣಿಸುತ್ತಿದೆ.

    ಈ ಹಿಂದೆ ಜೇಕಬ್ ವರ್ಗೀಸ್ ನಿರ್ದೇಶನದ ಚಂಬಲ್ ಚಿತ್ರದಲ್ಲಿ ನೀನಾಸಂ ಸತೀಶ್ ನಟಿಸಿದ್ದರಲ್ಲಾ? ಅದರಲ್ಲಿ ಅವರ ಇಮೇಜ್ ಸಂಪೂರ್ಣವಾಗಿ ಬದಲಾಗಿತ್ತು. ಅದುವರೆಗೂ ಹೆಚ್ಚಾಗಿ ಹಳ್ಳಿ ಸೀಮೆಯ ಪಾತ್ರಗಳಲ್ಲಿ ಕಾಣಿಸುತ್ತಾ ಬಂದಿದ್ದ ಸತೀಶ್ ಚಂಬಲ್‍ನಲ್ಲಿ ಖಡಕ್ ಅಧಿಕಾರಿಯಾಗಿ ಮಿಂಚಿದ್ದರು. ಆ ಪಾತ್ರಕ್ಕೆ ಅವರು ಪರಕಾಯಪ್ರವೇಶ ಮಾಡಿದ್ದ ರೀತಿಯಿಂದಲೇ ತಾನೋರ್ವ ಪರಿಪೂರ್ಣ ನಟ ಅನ್ನೋದನ್ನು ಸಾಬೀತುಪಡಿಸಿದ್ದರು. ಗೋದ್ರಾ ಚಿತ್ರದಲ್ಲಿ ಮತ್ತೊಂದು ಬಗೆಯ ಪಾತ್ರದಲ್ಲಿ ಸತೀಶ್ ಮಿಂಚಿದ್ದಾರಂತೆ. ಅದು ಅಭಿಮಾನಿಗಳ ಪಾಲಿಗೆ ನಿಜವಾದ ಸರ್ಪ್ರೈಸ್.

    ಗೋದ್ರಾ ಬಿಡುಗಡೆಯ ಹಾದಿಯಲ್ಲಿರುವಾಗಲೇ ಸತೀಶ್ ಮ್ಯಾಟ್ನಿಗೆ ರೆಡಿಯಾಗುತ್ತಿದ್ದಾರೆ. ಅದರಲ್ಲಿ ಅವರದ್ದು ನಗರ ಪ್ರದೇಶದ ಪಾತ್ರವಂತೆ. ಈವರೆಗೆ ನಟಿಸಿರೋ ಅಷ್ಟೂ ಪಾತ್ರಗಳಲ್ಲಿಯೂ ಭಿನ್ನವಾದ ಆ ಪಾತ್ರಕ್ಕಾಗಿ ಅವರೀಗ ತಾಲೀಮು ನಡೆಸುತ್ತಿದ್ದಾರೆ. ಒಂದೇ ಥರದ ಪಾತ್ರಗಳಿಗೆ ಅಂಟಿಕೊಳ್ಳದೆ ಥರ ಥರದ ಪಾತ್ರಗಳನ್ನ ಮಾಡಬೇಕೆಂಬ ಹಂಬಲ ಸತೀಶ್ ಅವರದ್ದು. ಅದಕ್ಕೆ ತಕ್ಕುದಾದ ಪಾತ್ರವೇ ಮ್ಯಾಟ್ನಿಯಲ್ಲವರಿಗೆ ದಕ್ಕಿದೆಯಂತೆ. ಸದ್ಯ ಅವರ ಗಮನವೆಲ್ಲ ಅದರ ಸುತ್ತಲೇ ಗಿರಕಿ ಹೊಡೆಯುತ್ತಿದೆ.

    https://www.instagram.com/p/CF0wOffFXyC/?igshid=usr2vl2x68dc

  • ತರಕಾರಿ ಕೊಳ್ಳಲು ಸೈಕಲ್ ಮೇಲೆ ಬಂದ ನೀನಾಸಂ ಸತೀಶ್

    ತರಕಾರಿ ಕೊಳ್ಳಲು ಸೈಕಲ್ ಮೇಲೆ ಬಂದ ನೀನಾಸಂ ಸತೀಶ್

    ಬೆಂಗಳೂರು: ಕೊರೊನಾ ಭೀತಿಯಿಮದಾಗಿ ದೇಶಾದ್ಯಂತ 21ದಿನಗಳ ಕಾಲ ದೇಶದೆಲ್ಲೆಡೆ ಲಾಕ್‍ಡೌನ್ ಘೋಷಿಸಲಾಗಿದ್ದು, ನಟ, ನಟಿಯರು ಸಹ ಸ್ವಯಂ ದಿಗ್ಬಂಧನ ವಿಧಿಸಿಕೊಂಡಿದ್ದಾರೆ. ನಟ ನಿನಾಸಂ ಸತೀಶ್ ಸಹ ಸ್ವಯಂ ದಿಗ್ಬಂಧನ ವಿಧಿಸಿಕೊಂಡಿದ್ದಾರೆ. ಆದರೆ ತರಕಾರಿ ಖರೀದಿಸಲು ಸೈಕಲ್ ಮೇಲೆ ಬಂದಿದ್ದಾರೆ.

    ನೀನಾಸಂ ಸತೀಶ್ ಸದ್ಯ ರಾಜರಾಜೇಶ್ವರಿ ನಗರದಲ್ಲಿದ್ದು, ಅಲ್ಲಿಯೇ ಅಂಗಡಿಗಳಿಗೆ ಹೋಗಿ ಮನೆಗೆ ಬೇಕಾದ ತರಕಾರಿ ಖರೀದಿಸಿದ್ದಾರೆ. ಈ ವಿಡಿಯೋವನ್ನು ಅವರ ಇನ್‍ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ಆರ್‍ಆರ್ ನಗರ ತುಂಬಾ ಶಾಂತವಾಗಿದೆ. ಯಾರೂ ಅನಾವಶ್ಯಕವಾಗಿ ಹೊರಗಡೆ ಬರುತ್ತಿಲ್ಲ. ಇಲ್ಲಿನ ಜನ ತುಂಬಾ ಸೆನ್ಸಿಬಲ್ ಆಗಿದ್ದಾರೆ ಎಂದು ಹೇಳಿದ್ದಾರೆ.

    ದೇಶವೇ ಸ್ತಬ್ಧವಾಗಿರುವ ಸಂದರ್ಭದಲ್ಲಿ ಜನತೆ ಶಾಂತ ರೀತಿಯಿಂದ ವರ್ತಿಸಬೇಕು. ಒಮ್ಮೆಲೆ ಎಲ್ಲರೂ ಬಂದು ಅಂಗಡಿಗೆ ಮುತ್ತಿಕೊಳ್ಳಬಾರದು. ಒಬ್ಬೊಬ್ಬರೆ ಬಂದು ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಿ. ಹೆಚ್ಚು ಜನ ರೋಡಿಗೆ ಇಳಿದಿಲ್ಲ ಇದಕ್ಕಾಗಿ ಜನತೆಗೆ ಥ್ಯಾಂಕ್ಸ್ ಹೇಳಲೇಬೇಕು. ವಿವಿಧ ಭಾಗಗಳಲ್ಲಿ ತುಂಬಾ ಜನ ಪೊಲೀಸರೊಂದಿಗೆ ಗಲಾಟೆ ಮಾಡುತ್ತಿರುವುದನ್ನು ಕಂಡಿದ್ದೇವೆ. ಆದರೆ ಆರ್‍ಆರ್ ನಗರ ತುಂಬಾ ಶಾಂತವಾಗಿದೆ. ಹೀಗೆ ಒಬ್ಬರಾಗೇ ಬಂದು ಅಗತ್ಯ ವಸ್ತುಗಳನ್ನು ಖರೀದಿಸಿ ಇತರರಿಗೆ ಸಹಕರಿಸಿ. ಇಲ್ಲಿನ ಜನ ತುಂಬಾ ಸಹಕರಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ನಿಮ್ಮ ಏರಿಯಾಗಳಲ್ಲಿಯೂ ಸಹ ಇದೇ ರೀತಿ ವರ್ತಿಸಿ, ಆದಷ್ಟು ಪೊಲೀಸರಿಗೆ ಬೆಂಬಲ ನೀಡಿ, ಎಲ್ಲೆಲ್ಲಿ ಇದ್ದೀರೋ ಅಲ್ಲೇ ಇರಲು ಪ್ರಯತ್ನಿಸಿ, ನಾನು ಸಹ ಮನೆಯಲ್ಲೇ ಇದ್ದೇನೆ. ಎಲ್ಲಿಯವರೆಗೂ ಲಾಕ್‍ಡೌನ್ ಜಾರಿಯಲ್ಲಿರುತ್ತೋ ಅಲ್ಲಿಯವರೆಗೂ ಮನೆಯಲ್ಲೇ ಇರುತ್ತೇನೆ. ನೀವೂ ಎಲ್ಲರೂ ಮನೆಯಲ್ಲೇ ಇರಿ, ನೀವೆಲ್ಲ ಚೆನ್ನಾಗಿದ್ದರೆ, ಮುಂದೆ ಅದ್ಭುತವಾದ ಜೀವನ ನಡೆಸಬಹುದು. ತರಕಾರಿಯನ್ನು ಎಷ್ಟು ಬೇಕೋ ಅಷ್ಟೇ ತೆಗೆದುಕೊಳ್ಳಿ. ಅಷ್ಟೊಂದು ಜನರಿಲ್ಲ, ಎಲ್ಲ ಕಡೆಗಳಲ್ಲಿ ಅಗತ್ಯ ವಸ್ತುಗಳ ಅಂಗಡಿಗಳು ತೆರೆದಿವೆ. ಕೆಲವರು ಭಯಭೀತರಾಗಿ ಅಗತ್ಯಕ್ಕಿಂತ ಹೆಚ್ಚು ಕೊಳ್ಳುತ್ತಿದ್ದಾರೆ. ಆ ರೀತಿ ಮಾಡಬೇಡಿ. ಅಲ್ಲದೆ ದಯವಿಟ್ಟು ಗಲಾಟೆ ಮಾಡಬೇಡಿ ಎಂದು ಮನವಿ ಮಾಡಿದಾರೆ.

    ಯುಗಾದಿ ಹಬ್ಬದ ಶುಭಾಶಯಗಳು, ಈ ವರ್ಷ ಕೆಲವರು ಆಚರಣೆ ಮಾಡದೆ ಇರಬಹುದು. ಆದರೆ ಮುಂದಿನ ವರ್ಷ ಎಲ್ಲರೂ ಸೇರಿಕೊಂಡು ಅದ್ಭುತವಾಗಿ ಹಬ್ಬ ಆಚರಣೆ ಮಾಡೋಣ ಥ್ಯಾಂಕ್ಯೂ ಎಂದು ತಿಳಿಸಿದ್ದಾರೆ.

  • ಹೈಬಜೆಟ್ ಹಾಡಿನ ಚಿತ್ರೀಕರಣಕ್ಕೆ ಸಿದ್ಧವಾದ ‘ಗೋಧ್ರಾ’ ಚಿತ್ರತಂಡ

    ಹೈಬಜೆಟ್ ಹಾಡಿನ ಚಿತ್ರೀಕರಣಕ್ಕೆ ಸಿದ್ಧವಾದ ‘ಗೋಧ್ರಾ’ ಚಿತ್ರತಂಡ

    ಸಿನಿಮಾ ಆಯ್ಕೆ ಮಾಡಿಕೊಳ್ಳುವುದರಲ್ಲಿ ಚತುರನಾಗಿರೋ ನಟ ನೀನಾಸಂ ಸತೀಶ್ ಸದ್ಯದಲ್ಲೇ ‘ಗೋಧ್ರಾ’ ಚಿತ್ರದ ಮೂಲಕ ರಂಜಿಸಲು ಬರ್ತಿದ್ದಾರೆ. ಚಂಬಲ್ ಚಿತ್ರದಲ್ಲಿ ಪವರ್ ಫುಲ್ ಅಧಿಕಾರಿ ಪಾತ್ರ ನಿರ್ವಹಿಸಿದ್ದ ಸತೀಶ್ ‘ಗೋಧ್ರಾ’ ಚಿತ್ರದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ ಬಣ್ಣ ಹಚ್ಚಿ ಗಮನ ಸೆಳೆಯಲು ಸಿದ್ಧರಾಗಿದ್ದಾರೆ. ಚಿತ್ರೀಕರಣ ಮುಗಿಸಿ ಚಿತ್ರದ ಡಬ್ಬಿಂಗ್ ಕೂಡ ಕಂಪ್ಲೀಟ್ ಮಾಡಿರುವ ಚಿತ್ರತಂಡ ಚಿತ್ರದ ಹೈಬಜೆಟ್ ಹಾಡಿನ ಚಿತ್ರೀಕರಣಕ್ಕೆ ಸಿದ್ಧವಾಗಿದೆ.

    ನಾಯಕನ ಎಂಟ್ರಿ ಸಾಂಗ್ ಇದಾಗಿದ್ದು, ಒಂದು ಹಾಡಿಗಾಗಿ ನಲವತ್ತು ಲಕ್ಷ ರೂಪಾಯಿ ಖರ್ಚು ಮಾಡುತ್ತಿದೆ ಚಿತ್ರತಂಡ. ಸತೀಶ್ ನೀನಾಸಂ ಕೆರಿಯರ್ ನಲ್ಲೇ ಇದು ಬಿಗ್ ಬಜೆಟ್ ಪ್ರಾಜೆಕ್ಟ್ ಆಗಿರೋದ್ರ ಜೊತೆಗೆ ಹಾಡಿಗಾಗಿ ಇಷ್ಟು ವೆಚ್ಚ ಮಾಡುತ್ತಿರೋದು ಇದೇ ಮೊದಲ ಸಿನಿಮಾ ಅಂತಾರೆ ಅಭಿನಯ ಚತುರ ಸತೀಶ್. ಚೇತನ್ ಕುಮಾರ್ ಸಾಹಿತ್ಯದಲ್ಲಿ ಮೂಡಿ ಬರ್ತಿರೋ ಈ ಹಾಡಿನ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ಅದ್ಧೂರಿ ಸೆಟ್‍ನಲ್ಲಿ ಹಾಡನ್ನು ಸೆರೆಹಿಡಿಯಲು ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.

    ಇಲ್ಲಿಯವರೆಗೂ ಚಿತ್ರದ ಬಗ್ಗೆ ಕೊಂಚ ಸುಳಿವನ್ನು ಕೊಡದ ಚಿತ್ರತಂಡ ಜನವರಿ ಮೊದಲ ಅಥವಾ ಎರಡನೇ ವಾರದಲ್ಲಿ ಗೋಧ್ರಾ ಚಿತ್ರದ ಟೀಸರ್ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿದೆ.

    ಸಮಾಜದಲ್ಲಿ ನಡೆಯುವ ಶೋಷಣೆಯ ವಿರುದ್ಧ ಬಂಡೆದ್ದು ಹೋರಾಟಗಾರನಾಗುವ ವ್ಯಕ್ತಿಯ ಕಥೆಯನ್ನು ಗೋಧ್ರಾ ಚಿತ್ರತಂಡ ಹೇಳ ಹೊರಟಿದೆ. ಸತೀಶ್ ನೀನಾಸಂ, ಶ್ರದ್ಧಾ ಶ್ರೀನಾಥ್ ಚಿತ್ರದಲ್ಲಿ ಪತ್ರಿಕೋಧ್ಯಮ ವಿದ್ಯಾರ್ಥಿಗಳಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅಚ್ಯುತ್ ಕುಮಾರ್ ರಾಜಕರಣಿಯಾಗಿ, ವಸಿಷ್ಠ ಸಿಂಹ ಪೈಲೆಟ್ ಆಗಿ ಮಿಂಚಿದ್ದಾರೆ. ಕೆ.ಎಸ್.ನಂದೀಶ್ ಗೋಧ್ರಾ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಮೊದಲ ಬಾರಿ ನಿರ್ದೇಶನ ಮಾಡಿದ್ದಾರೆ. ಜಾಕೋಬ್ ಫಿಲಮ್ಸ್, ಲೀಡರ್ ಫಿಲ್ಮ್ ಪ್ರೊಡಕ್ಷನ್ಸ್ ಬ್ಯಾನರ್ ನಡಿ ಚಿತ್ರ ನಿರ್ಮಾಣವಾಗುತ್ತಿದೆ.

  • ನವಿರುಹಾಸ್ಯದೊಂದಿಗೆ ಪ್ರೇಕ್ಷಕರ ಮನಗೆದ್ದ ಬ್ರಹ್ಮಚಾರಿ!

    ನವಿರುಹಾಸ್ಯದೊಂದಿಗೆ ಪ್ರೇಕ್ಷಕರ ಮನಗೆದ್ದ ಬ್ರಹ್ಮಚಾರಿ!

    ಬೆಂಗಳೂರು: ಕೆಲವೇಕೆಲ ನಿರ್ದೇಶಕರಿಗೆ ಮಾತ್ರವೇ ಇಡೀ ಸಿನಿಮಾದ ತುಂಬಾ ಹಾಸ್ಯರಸವನ್ನು ಪರಿಣಾಮಕಾರಿಯಾಗಿ ಜಿನುಗಿಸುವ ಕಲೆ ಸಿದ್ಧಿಸಿರುತ್ತದೆ. ಅಂಥವರ ಸಾಲಿನಲ್ಲಿ ಚಂದ್ರಮೋಹನ್ ಕೂಡಾ ಸೇರಿಕೊಳ್ಳುತ್ತಾರೆ. ಈ ವಿಚಾರವನ್ನು ‘ಬ್ರಹ್ಮಚಾರಿ’ ಚಿತ್ರದ ಅಮೋಘ ಪ್ರದರ್ಶನವೇಸಾಕ್ಷೀಕರಿಸುವಂತಿದೆ. ಇದರೊಂದಿಗೆ ನೀನಾಸಂ ಸತೀಶ್ ಮತ್ತು ಅದಿತಿ ಪ್ರಭುದೇವಜೋಡಿಯೂ ಮಸ್ತಾಗಿರೋ ಕಥೆಯೊಂದಿಗೆ ಪ್ರೇಕ್ಷಕರ ಮನಗೆದ್ದಿದೆ.

    ಆರಂಭದಿಂದಕಡೇಯವರೆಗೂ ಕಚಗುಳಿಯಿಡುತ್ತಾ ಸಾಗುವ ನವಿರು ಹಾಸ್ಯ ಬೆರೆತ ಮನೋರಂಜನಾತ್ಮಕಕಥೆಗೆ ಪ್ರೇಕ್ಷಕರೆಲ್ಲ ಮನ ಸೋತಿದ್ದಾರೆ. ಈ ಬಲದಿಂದಲೇ ಭರ್ಜರಿ ಗೆಲುವುದಕ್ಕಿಸಿಕೊಳ್ಳುವ ಹುಮ್ಮಸ್ಸಿನೊಂದುಗೆ ಬ್ರಹ್ಮಚಾರಿ ಮುಂದುವರೆಯುತ್ತಿದ್ದಾನೆ. ಇದು ಉದಯ್ ಕೆ ಮೆಹ್ತಾ ನಿರ್ಮಾಣ ಮಾಡಿರುವ ಚಿತ್ರ. ಅವರು ನಿರ್ಮಾಣ ಮಾಡಿದ್ದಾರೆಂದರೆ ಅದ್ದೂರಿಯಾಗಿರುತ್ತದೆ, ಕಥೆಯೂ ಭಿನ್ನವಾಗಿರುತ್ತದೆಂಬ ಪ್ರೇಕ್ಷಕರ ನಂಬಿಕೆ ಬ್ರಹ್ಮಚಾರಿಯ ಮೂಲಕವೂ ಮುಂದುವರೆದಿದೆ.

    ಇದರೊಂದಿಗೆ ಅಯೋಗ್ಯ ಚಿತ್ರದಿಂದ ಶುರುವಾದ ನೀನಾಸಂ ಸತೀಶ್ ಅವರ ಮಹಾ ಗೆಲುವಿನ ಪರ್ವವೂ ಅನೂಚಾನವಾಗಿಯೇ ಮುಂದುವರೆಯುತ್ತಿದೆ. ಗಂಡಸರ ಬೆಡ್‍ರೂಂ ಸಮಸ್ಯೆಗಳನ್ನೇ ಕೇಂದ್ರವಾಗಿಟ್ಟುಕೊಂಡ ಚಿತ್ರಗಳು ಕಾಶೀನಾಥ್ ಜಮಾನದಲ್ಲಿಯೇ ಬಂದಿವೆ. ಇದೂ ಕೂಡಾ ಅದೇ ಜಾಡಿನದ್ದಾದರೂ ಬ್ರಹ್ಮಚಾರಿಯನ್ನು ಚಂದ್ರಮೋಹನ್ ಬೇರೆಯದ್ದೇ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಆರಂಭಿಕವಾಗಿ ಫಸ್ಟ್ ನೈಟ್ ಟೀಸರ್ ಮುಂತಾದವುಗಳ ಮೂಲಕ ಸದ್ದು ಮಾಡಿದ್ದ ಚಿತ್ರ ಬ್ರಹ್ಮಚಾರಿ. ನಂತರ ಟ್ರೇಲರ್‍ನಲ್ಲಿ ಕಾಣಿಸಿದ್ದ ಸಂಭಾಷಣೆಗಳನ್ನು ಕಂಡು ಫ್ಯಾಮಿಲಿ ಪ್ರೇಕ್ಷಕರು ಕೊಂಚ ಕಸಿವಿಸಿಗೊಂಡಂತಿದ್ದರು. ಆದರೆ ಇಡೀ ಚಿತ್ರದಲ್ಲಿ ಒಂದೇ ಒಂದು ವಲ್ಗರ್ ಅನ್ನಿಸುವಂಥಾದೃಷ್ಯ, ಡೈಲಾಗುಗಳಿಲ್ಲವೆಂದು ಚಿತ್ರತಂಡ ಅಡಿಗಡಿಗೆ ಹೇಳಿಕೊಂಡು ಬಂದಿತ್ತು. ಅದೂಕೂಡಾ ನಿಜವಾಗಿದೆ. ಈ ಕಾರಣದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಫ್ಯಾಮಿಲಿ ಪ್ರೇಕ್ಷಕರು ಈ ಸಿನಿಮಾನೋಡಿ ಎಂಜಾಯ್ ಮಾಡಲಾರಂಭಿಸಿದ್ದಾರೆ.

    ಯಾವುದೇ ಸಿನಿಮಾಗಳಿಗಾದರೂ ಫ್ಯಾಮಿಲಿಪ್ರೇಕ್ಷಕರ ಸಾಥ್ ಸಿಕ್ಕರೆ ಗೆಲುವು ಸಲೀಸಾಗುತ್ತದೆ. ಈ ಪ್ರೀತಿಯಿಂದಲೇ ಬ್ರಹ್ಮಚಾರಿಯಶಸ್ವಿಯಾಗಿ ಎರಡನೇ ವಾರವನ್ನು ಪೂರೈಸಿಕೊಂಡು ಮುಂದುವರೆಯೋತವಕದಲ್ಲಿದ್ದಾನೆ. ರಾಜ್ಯಾದ್ಯಂತ ಈ ಕ್ಷಣಕ್ಕೂ ಸದರಿ ಚಿತ್ರ ಹೌಸ್ ಪುಲ್ ಪ್ರದರ್ಶನವನ್ನೇಕಾಣುತ್ತಿದೆ.

  • ಬ್ರಹ್ಮಚಾರಿಯ ಸಖಿ ಅದಿತಿ ಪ್ರಭುದೇವ ಏನಂತಾರೆ?

    ಬ್ರಹ್ಮಚಾರಿಯ ಸಖಿ ಅದಿತಿ ಪ್ರಭುದೇವ ಏನಂತಾರೆ?

    ನೀನಾಸಂ ಸತೀಶ್ ಮತ್ತು ಅದಿತಿ ಪ್ರಭುದೇವ ಜೋಡಿಯಾಗಿ ನಟಿಸಿರುವ ಬ್ರಹ್ಮಚಾರಿ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಂದ್ರ ಮೋಹನ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಚಿತ್ರ ಔಟ್ ಆಂಡ್ ಔಟ್ ಮನೋರಂಜನಾತ್ಮಕ ಸಿನಿಮಾ ಅನ್ನೋದು ಈಗಾಗಲೇ ಪ್ರೇಕ್ಷಕರ ಪಾಲಿಗೆ ಪಕ್ಕಾ ಆಗಿದೆ. ಭರಪೂರ ಹಾಸ್ಯವಿದ್ದರೂ ವಲ್ಗಾರಿಟಿಯ ಸೋಂಕಿಲ್ಲದ ಈ ಚಿತ್ರ ಹಾಸ್ಯ ಧಾಟಿಯಾಚೆಗೂ ಗಹನವಾದ ಕಥೆಯೊಂದಿಗೆ ನಿರ್ದೇಶಕ ಚಂದ್ರಮೋಹನ್ ಈ ಚಿತ್ರವನ್ನು ರೂಪಿಸಿದ್ದಾರೆ. ಇದುವರೆಗೂ ಹಲವಾರು ಪಾತ್ರಗಳನ್ನು ನಿರ್ವಹಿಸಿರುವ ಅದಿತಿ ಪ್ರಭುದೇವ ಈ ಮೂಲಕ ಮೊದಲ ಬಾರಿ ಹಾಸ್ಯಾತ್ಮಕ ಸಿನಿಮಾದ ಭಾಗವಾಗಿದ್ದಾರೆ.

    ಅದಿತಿ ಪ್ರಭುದೇವ ಪಾಲಿಗೆ ಇದೊಂದು ಹೊಸ ಜಾನರಿನ ಸಿನಿಮಾ. ಆರಂಭದಲ್ಲಿ ಇದರ ಕಾಮಿಡಿ ಝಲಕ್ ಮತ್ತು ತಮ್ಮ ಪಾತ್ರದ ವಿಶೇಷತೆಗೆ ಮನಸೋತೇ ಅದಿತಿ ನಟಿಸಲು ಒಪ್ಪಿಕೊಂಡಿದ್ದರಂತೆ. ಪ್ರತಿ ಸಿನಿಮಾಗಳೂ ತನ್ನ ಪಾಲಿಗೆ ಹೊಸ ಕಲಿಕೆಗೆ ಕಾರಣವಾಗಬೇಕೆಂಬ ಹಂಬಲವಿಟ್ಟುಕೊಂಡಿರೋ ಅವರ ಪಾಲಿಗೆ ಬ್ರಹ್ಮಚಾರಿ ಚಿತ್ರದ ಮೂಲಕ ಹೊಸತನದ ಅನುಭವ ದಕ್ಕಿದೆಯಂತೆ. ಯಾವ ಪ್ರೇಕ್ಷಕರೇ ಆಗಿದ್ದರೂ ತಮ್ಮ ಖಾಸಗಿ ಬದುಕಿನ ಜಂಜಾಟಗಳಿಂದ ಮುಕ್ತವಾಗಿ ಎಲ್ಲವನ್ನೂ ಮರೆತು ಮೈ ಮರೆಯಲೋಸ್ಕರವೇ ಸಿನಿಮಾ ಮಂದಿರಗಳತ್ತ ಬರುತ್ತಾರೆ. ಹಾಗೆ ಬಂದ ಪ್ರತಿಯೊಬ್ಬರಿಗೂ ಭರ್ಜರಿ ಮನರಂಜನೆ ನೀಡುವಲ್ಲಿ ಬ್ರಹ್ಮಚಾರಿ ಗೆಲುವು ಕಾಣುತ್ತಾನೆಂಬ ನಂಬಿಕೆ ಅದಿತಿಯದ್ದು.

    ಇದೇ ಸಂದರ್ಭದಲ್ಲಿ ಅವರು ಇಡೀ ಚಿತ್ರದಲ್ಲಿ ಎಲ್ಲಿಯೂ ಮುಜುಗರ ಪಟ್ಟುಕೊಳ್ಳುವಂಥಾ ಸನ್ನಿವೇಶಗಳಿಲ್ಲ ಎಂಬುದನ್ನೂ ಒತ್ತಿ ಹೇಳುತ್ತಾರೆ. ಒಟ್ಟಾರೆಯಾಗಿ ಈ ಸಿನಿಮಾ ದೊಡ್ಡ ಗೆಲುವು ದಾಖಲಿಸೋದರೊಂದಿಗೆ ತನ್ನ ಕೆರಿಯರ್‍ನಲ್ಲಿಯೂ ಭಿನ್ನ ಸಿನಿಮಾವಾಗಿ ನೆಲೆಗೊಳ್ಳುತ್ತದೆಂಬ ನಂಬಿಕೆಯೂ ಅವರಲ್ಲಿದೆ. ಯಾವ ವೆರೈಟಿಯ ಪಾತ್ರಗಳನ್ನಾದರೂ ತುಸು ಕಷ್ಟವಾದರೂ ಮಾಡಿ ಬಿಡಬಹುದು. ಆದರೆ ಏಕಾಏಕಿ ಕಾಮಿಡಿ ಟೈಮಿಂಗಿಗೆ ಒಗ್ಗಿಕೊಳ್ಳೋದು ಮಾತ್ರ ಅಕ್ಷರಶಃ ಹರಸಾಹಸ. ಕೊಂಚ ಕಷ್ಟವಾದರೂ ಅದಿತಿ ಅದನ್ನು ಸಮರ್ಥವಾಗಿ ನಿಭಾಯಿಸಿದ್ದರಂತೆ. ಇಲ್ಲಿ ಅವರ ಪಾತ್ರ ಕೂಡಾ ಸೊಗಸಾಗಿದೆಯಂತೆ. ಅಂದಹಾಗೆ, ಉದಯ್ ಮೆಹ್ತಾ ನಿರ್ಮಾಣ ಮಾಡಿರೋ ಈ ಸಿನಿಮಾ ಇದೇ ವಾರ ತೆರೆ ಕಾಣುತ್ತಿದೆ.

  • ಭರ್ಜರಿಯಾಗಿ ನಗಿಸಲಿದ್ದಾರೆ ಬ್ರಹ್ಮಚಾರಿ ಸತೀಶ್!

    ಭರ್ಜರಿಯಾಗಿ ನಗಿಸಲಿದ್ದಾರೆ ಬ್ರಹ್ಮಚಾರಿ ಸತೀಶ್!

    ನೀನಾಸಂ ಸತೀಶ್ ಆರಂಭದಿಂದಲೂ ಮಂಡ್ಯ ಶೈಲಿಯ ಭಾಷಾ ಸೊಗಡಿನಿಂದ ನಗಿಸುತ್ತಾ ಬಂದವರು. ಇದರೊಂದಿಗೆ ವಿಶಿಷ್ಟ ನಟನಾಗಿ ನೆಲೆ ಕಂಡುಕೊಂಡಿದ್ದ ಅವರು ಆ ನಂತರದಲ್ಲಿ ನಾಯಕನಾಗಿಯೂ ಥರ ಥರದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆದರೆ ಬ್ರಹ್ಮಚಾರಿಯಲ್ಲಿ ಅವರದ್ದು ಅದೆಲ್ಲಕ್ಕಿಂತಲೂ ಮಜವಾದ ಪಾತ್ರವೆಂಬುದು ಈ ಹಿಂದೆ ಟ್ರೇಲರ್‍ನೊಂದಿಗೇ ಸಾಬೀತಾಗಿದೆ. ಅದಿತಿ ಪ್ರಭುದೇವ ಪಾತ್ರವೂ ಕೂಡಾ ಪ್ರೇಕ್ಷಕರೆಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಪ್ರತಿ ಪ್ರೇಕ್ಷಕರೂ ಕೂಡಾ ಇಂಥಾ ಹಾಸ್ಯ ಪ್ರಧಾನ ಚಿತ್ರಗಳನ್ನು ಕಣ್ತುಂಬಿಕೊಂಡು ಮನಸಾರೆ ನಕ್ಕು ಹಗುರಾಗಲು ಕಾದು ಕೂತಿರುತ್ತಾರೆ. ಅವರೆಲ್ಲರ ಪಾಲಿಗೆ ಫುಲ್ ಮೀಲ್ಸ್‍ನಂತಿರೋ ಬ್ರಹ್ಮಚಾರಿ ಚಿತ್ರ ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

    ನಿರ್ಮಾಪಕ ಉದಯ್ ಮೆಹ್ತಾ ಅವರು ಹೇಳಿದ್ದ ಒಂದೆಳೆ ಕಥೆಯನ್ನು ನಿರ್ದೇಶಕ ಚಂದ್ರಮೋಹನ್ ವಿಸ್ತರಿಸಿ, ಅದಕ್ಕೊಂದು ಸಿನಿಮಾ ಚೌಕಟ್ಟು ಕೊಡುವುದಕ್ಕೆ ವರ್ಷಗಳಷ್ಟು ಕಾಲ ಹಿಡಿದಿತ್ತು. ಈ ಹೊತ್ತಿನಲ್ಲಿ ಬ್ರಹ್ಮಚಾರಿ ಯಾರಾಗಬೇಕೆಂಬಂಥಾ ಪ್ರಶ್ನೆ ಉದ್ಭವವಾದಾಗ ಚಂದ್ರಮೋಹನ್ ಹಾಗೂ ನಿರ್ಮಾಪಕ ಉದಯ್ ಮೆಹ್ತಾರಿಗೆ ನೀನಾಸಂ ಸತೀಶ್ ಮಾತ್ರವೇ ಈ ಪಾತ್ರಕ್ಕೆ ಸೂಟ್ ಆಗುತ್ತಾರೆ ಅನ್ನಿಸಿತ್ತಂತೆ. ಈ ಒಂದೆಳೆಯನ್ನು ಸತೀಶ್‍ಗೆ ಹೇಳಿದಾಗ ಅವರು ಖುಷಿಗೊಂಡಿದ್ದರಾದರೂ ಅದನ್ನು ಹೇಗೆ ಕಟ್ಟಿಕೊಡುತ್ತಾರೆ, ವಲ್ಗರ್ ಆಗಿಯೇನಾದರೂ ರೂಪಿಸುತ್ತಾರಾ ಎಂಬ ಆತಂಕ ಇತ್ತಂತೆ. ಆದರೆ ಅಂತಿಮವಾಗಿ ಸಿದ್ಧಗೊಂಡ ಕಥೆ ಹೇಳಿದಾಗ ಸತೀಶ್ ಥ್ರಿಲ್ ಆಗಿದ್ದರಂತೆ.

    ಒಂದು ಗಂಭೀರ ದೈಹಿಕ ಸಮಸ್ಯೆಯನ್ನು ಹಾಸ್ಯದ ಧಾಟಿಯಲ್ಲಿ ಹೇಳಿದ್ದರೂ ಸಹ ಎಲ್ಲಿಯೂ ಮುಜುಗರವಾಗದಂತೆ ಕಟ್ಟಿ ಕೊಟ್ಟಿರುವ ರೀತಿಯೇ ಸತೀಶ್ ಅವರಿಗೆ ಹಿಡಿಸಿತ್ತಂತೆ. ನಿರ್ದೇಶಕ ಚಂದ್ರ ಮೋಹನ್ ಅವರಿಗೆ ಈ ಪಾತ್ರ ಹೀಗೆಯೇ ಮೂಡಿ ಬರಬೇಕೆಂಬ ಕನಸಿನಂಥಾ ಕಲ್ಪನೆ ಇತ್ತು. ಅದಕ್ಕೂ ಒಂದು ಕೈ ಮಿಗಿಲಾಗಿಯೇ ಬ್ರಹ್ಮಚಾರಿಯ ಪಾತ್ರಕ್ಕೆ ಸತೀಶ್ ಜೀವ ತುಂಬಿದ್ದಾರಂತೆ. ಅಯೋಗ್ಯ ಭರ್ಜರಿ ಯಶ ಕಂಡ ನಂತರ ಚಂಬಲ್ ಚಿತ್ರದ ಮೂಲಕ ಸತೀಶ್ ಪ್ರತಿಭೆಯ ಮತ್ತೊಂದು ಮಗ್ಗುಲಿನ ಪರಿಚಯವಾಗಿತ್ತು. ಅವರೀಗ ಬ್ರಹ್ಮಚಾರಿ ಮೂಲಕ ಮತ್ತೆ ನಗುವಿನ ಸೆಲೆ ಚಿಮ್ಮಿಸಲು ಅಣಿಗೊಂಡಿದ್ದಾರೆ. ಬ್ರಹ್ಮಚಾರಿ ಅಯೋಗ್ಯ ನಂತರದಲ್ಲಿ ಸತೀಶ್ ಅವರ ಕೈ ಹಿಡಿದಿರೋ ಗೆಲುವಿನ ಸರಣಿಯನ್ನು ಮುಂದುವರೆಸೋ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ.

  • ಇವನು ಫ್ಯಾಮಿಲಿ ಎಂಟರ್‌ಟೈನರ್ ಬ್ರಹ್ಮಚಾರಿ!

    ಇವನು ಫ್ಯಾಮಿಲಿ ಎಂಟರ್‌ಟೈನರ್ ಬ್ರಹ್ಮಚಾರಿ!

    ದಯ್ ಮೆಹ್ತಾ ನಿರ್ಮಾಣ ಮಾಡಿರುವ ಬ್ರಹ್ಮಚಾರಿ ಚಿತ್ರ ಈ ವಾರವೇ ರಾಜ್ಯಾದ್ಯಂತ ತೆರೆಗಾಣುತ್ತಿದೆ. ನೀನಾಸಂ ಸತೀಶ್ ನಟಿಸಿರೋ ಈ ಚಿತ್ರ ಈಗಾಗಲೇ ಟ್ರೇಲರ್, ಹಾಡುಗಳ ಮೂಲಕ ಬಹು ನಿರೀಕ್ಷಿತ ಚಿತ್ರವಾಗಿ ಹೊರ ಹೊಮ್ಮಿದೆ. ಫಸ್ಟ್ ನೈಟ್ ಟೀಸರ್ ನಿಂದ ಶುರುವಾಗಿ ಟ್ರೇಲರ್ ತನಕ ಬ್ರಹ್ಮಚಾರಿ ಪ್ರೇಕ್ಷಕರನ್ನು ಮರುಳು ಮಾಡಿಕೊಂಡು ಬಂದು ಇದೀಗ ಬಿಡುಗಡೆಯ ಹಂತ ತಲುಪಿಕೊಂಡಿದ್ದಾನೆ. ವಿಶೇಷವೆಂದರೆ, ಸಂಪೂರ್ಣ ಮನೋರಂಜನೆಯನ್ನೇ ಉದ್ದೇಶವಾಗಿಸಿಕೊಂಡಿರೋ ಈ ಸಿನಿಮಾ ಪಕ್ಕಾ ಫ್ಯಾಮಿಲಿ ಎಂಟರ್ ಟೈನ್ಮೆಂಟ್ ಪ್ಯಾಕೇಜಿನಂತೆ ಮೂಡಿ ಬಂದಿದೆಯಂತೆ. ಈ ಕಾರಣದಿಂದಲೇ ಚಿತ್ರತಂಡ ಕುಟುಂಬ ಸಮೇತರಾಗಿ ಬಂದು ನೋಡುವಂತೆ ಪ್ರೇಕ್ಷಕರಿಗೆ ಆಹ್ವಾನ ನೀಡುತ್ತಾ ಬಂದಿದೆ.

    ಈ ಹಿಂದೆ ಬಾಂಬೆ ಮಿಠಾಯಿ ಮತ್ತು ಡಬಲ್ ಇಂಜಿನ್ ಎಂಬ ಹಾಸ್ಯ ಪ್ರಧಾನ ಚಿತ್ರಗಳನ್ನು ನಿರ್ದೇಶನ ಮಾಡಿ ಗೆದ್ದಿದ್ದವರು ಚಂದ್ರ ಮೋಹನ್. ಈ ಥರದ ಸಿನಿಮಾಗಳನ್ನು ರೂಪಿಸೋದು, ಇಡೀ ಸಿನಿಮಾದಲ್ಲಿ ಪ್ರತೀ ಹಂತದಲ್ಲಿಯೂ ಪ್ರೇಕ್ಷಕರನ್ನು ನಗಿಸೋದೆಲ್ಲ ಅಷ್ಟು ಸಲೀಸಿನ ಸಂಗತಿಯಲ್ಲ. ಆದರೆ ಚಂದ್ರಮೋಹನ್ ಅದನ್ನು ಕರಗತ ಮಾಡಿಕೊಂಡಿದ್ದಾರೆ. ಈ ಕಾರಣದಿಂದಲೇ ಎರಡು ಸರಣಿ ಗೆಲುವುಗಳನ್ನು ತನ್ನದಾಗಿಸಿಕೊಂಡು, ಇದೀಗ ಬ್ರಹ್ಮಚಾರಿ ಮೂಲಕ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಿಂದಿದ್ದಾರೆ. ಈಗಾಗಲೇ ಈ ಸಿನಿಮಾ ಸೃಷ್ಟಿಸಿರುವ ಕ್ರೇಜ್ ಮತ್ತು ಅದರ ವಿಶಿಷ್ಟ ಕಂಟೆಂಟಿನ ವಿಚಾರಗಳೆಲ್ಲವೂ ಬ್ರಹ್ಮಚಾರಿಗೆ ಪ್ರೇಕ್ಷಕರೆಲ್ಲ ಬೇಷರತ್ತಾಗಿ ಫಿದಾ ಆಗುವಂಥಾ ಲಕ್ಷಣಗಳನ್ನೇ ಧ್ವನಿಸುವಂತಿವೆ.

    ಗುಪ್ತ ಸಮಸ್ಯೆಗಳನ್ನು ಒಳಗೇ ಇಟ್ಟುಕೊಂಡು, ಕನಿಷ್ಟ ಅದಕ್ಕೊಂದು ಚಿಕಿತ್ಸೆ ಪಡೆಯಲೂ ಮುಜುಗರ ಪಡುವ, ಹೇಗೋ ಅದು ಬಟಾಬಯಲಾದ ನಂತರ ಮಾನಸಿಕ ಹಿಂಸೆ ಅನುಭವಿಸುವಂಥಾ ಅದೆಷ್ಟೋ ಜನರಿದ್ದಾರೆ. ಅಂಥಾದ್ದೊಂದು ಗುಪ್ತ ಸಮಸ್ಯೆಯಿಂದ ಬಳಲೋ ನಾಯಕನ ಪಡಿಪಾಟಲುಗಳನ್ನು ಎಲ್ಲಿಯೂ ವಲ್ಗರ್ ಅನ್ನಿಸದಂತೆ, ಸಭ್ಯತೆಯ ಗೆರೆ ದಾಟದಂತೆ, ಪ್ರತೀ ಫ್ರೇಮಿನಲ್ಲಿಯೂ ನಗಿಸುವಂತೆ ಕಟ್ಟಿ ಕೊಡುವಲ್ಲಿ ಚಂದ್ರ ಮೋಹನ್ ಗೆದ್ದಿದ್ದಾರಂತೆ. ಚಿತ್ರತಂಡದಲ್ಲಿಯೂ ಆ ಬಗೆಗಿನ ಗಾಢವಾದ ವಿಶ್ವಾಸವಿದೆ. ಈಗಾಗಲೇ ಹೊರ ಬಂದಿರುವ ಟೀಸರ್ ಮತ್ತು ಟ್ರೇಲರ್ ಗಳಲ್ಲಿ ಅದರ ಕುರುಹುಗಳಿವೆ.

    ಉದಯ್ ಮೆಹ್ತಾ ನಿರ್ಮಾಣದ ಚಿತ್ರಗಳೆಂದ ಮೇಲೆ ಅಲ್ಲಿ ಅದ್ಧೂರಿತನದ ಹಾಜರಿ ಇದ್ದೇ ಇರುತ್ತದೆಂಬ ನಂಬಿಕೆ ಪ್ರೇಕ್ಷಕರಲ್ಲಿದೆ. ಬ್ರಹ್ಮಚಾರಿಯನ್ನೂ ಕೂಡಾ ಅವರು ಅಷ್ಟೇ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಹಾಡುಗಳಲ್ಲಿಯೇ ಅದಕ್ಕೆ ಸಾಕ್ಷಿಗಳು ಸಿಗುವಂತಿವೆ. ಟ್ರೇಲರ್ ಮತ್ತು ಟೀಸರ್ ಗಳಲ್ಲಿ ಕಚಗುಳಿ ಇಡುವಂತಾ ಸನ್ನಿವೇಶ, ಡೈಲಾಗುಗಳಿಂದಲೇ ಬ್ರಹ್ಮಚಾರಿ ಲಕಲಕಿಸಿದ್ದಾನೆ. ಹಾಗಂತ ಇದನ್ನೇನು ಡಬಲ್ ಮೀನಿಂಗ್‍ಗಳಿಂದ ತುಂಬಿರೋ ಸಿನಿಮಾ ಅಂದುಕೊಳ್ಳಬೇಕಿಲ್ಲ. ಇದು ಕುಟುಂಬ ಸಮೇತರಾಗಿ ನೋಡಿ ಎಂಜಾಯ್ ಮಾಡುವಂಥಾ ಚಿತ್ರ. ಒಂದೇ ಒಂದು ಮುಜುಗರದ ಸನ್ನಿವೇಶಗಳೂ ಈ ಸಿನಿಮಾದಲ್ಲಿಲ್ಲವಂತೆ. ಅಂತೂ ನೀನಾಸಂ ಸತೀಶ್ ಬ್ರಹ್ಮಚಾರಿಯಾಗಿ ತಮ್ಮ ಗೆಲುವಿನ ಸರಣಿಯನ್ನು ಮುಂದುವರೆಸೋದರಲ್ಲಿ ಯಾವ ಸಂದೇಹವೂ ಇಲ್ಲ.

  • ಕೇಂದ್ರ ಸರ್ಕಾರಕ್ಕೆ ನಟ ನೀನಾಸಂ ಸತೀಶ್ ಟಾಂಗ್

    ಕೇಂದ್ರ ಸರ್ಕಾರಕ್ಕೆ ನಟ ನೀನಾಸಂ ಸತೀಶ್ ಟಾಂಗ್

    ಬೆಂಗಳೂರು: ನಟ ಸತೀಶ್ ನೀನಾಸಂ ನೆರೆ ಪರಿಹಾರ ನೀಡುವಲ್ಲಿ ವಿಳಂಬ ಮಾಡುತ್ತಿರುವ ಕೇಂದ್ರ ಸರ್ಕಾರಕ್ಕೆ ಟಾಂಗ್ ನೀಡಿದ್ದಾರೆ.

    ನೀನಾಸಂ ಸತೀಶ್ ಅವರು ತಮ್ಮ ಟ್ವಿಟ್ಟರಿನಲ್ಲಿ, “ನಾನು ನಿಮ್ಮ ಯಾವ ಪಕ್ಷದವನೂ ಅಲ್ಲ, ನನ್ನದು ಮನುಷ್ಯ ಪಕ್ಷ, ಬಡವರ ಪಕ್ಷ, ಹಸಿದವರ ಪಕ್ಷ. ಯಾವ ಸರ್ಕಾರವಾದರೂ ಕೇಳುವ ಹಕ್ಕು ನನಗಿದೆ. ನೆರೆ ಸಂತ್ರಸ್ತರ ವಿಚಾರದಲ್ಲಿ ನಿಮ್ಮ ಪಕ್ಷಗಳನ್ನು ಬದಿಗಿಟ್ಟು, ಅವರ ಕಷ್ಟಗಳಿಗೆ ಎಲ್ಲರು ಒಗ್ಗಟ್ಟಾಗಿ ಕೆಲಸ ಮಾಡುವ ಬುದ್ಧಿ ಬರಲಿ. ದಯಮಾಡಿ ನನ್ನನ್ನು ನಿಮ್ಮ ಯಾವ ಪಕ್ಷಕ್ಕೂ ಸೇರಿಸಬೇಡಿ ಪ್ಲೀಸ್” ಎಂದು ಟ್ವೀಟ್ ಮಾಡಿದ್ದಾರೆ.

    ಇತ್ತೀಚೆಗೆ ಚಿಂತಕ ಸೂಲಿಬೆಲೆ ಅವರು ಕೂಡ ತಮ್ಮ ಯುವಲೈವ್ ವೆಬ್‍ಸೈಟಿನಲ್ಲಿ ಬರಹ ಪ್ರಕಟಿಸಿದ್ದರು. ಅದರಲ್ಲಿ, ನಿಜ ಹೇಳಬೇಕೆಂದರೆ ಪ್ರವಾಹದ ನಂತರವೇ ಬೆಂಗಳೂರಿನ ಸಂಸದ ಅನಂತ್ ಕುಮಾರ್ ಅವರ ಅನುಪಸ್ಥಿತಿ ಎದ್ದು ಕಾಣುತ್ತಿರುವುದು. ಕೇಂದ್ರ ಸರ್ಕಾರದಲ್ಲಿ ಕರ್ನಾಟಕದ ದನಿಯನ್ನು ಪ್ರಭಾವಿಯಾಗಿ ಮಂಡಿಸಬಲ್ಲ ಸಂಸದರೇ ಇಲ್ಲವೇನೋ ಎನಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದರು.

    ಕರ್ನಾಟಕದ ಒಳಿತಿಗಾಗಿ ಕೇಂದ್ರದೊಂದಿಗೆ ಗುದ್ದಾಡಿ ಬೇಕಾದ್ದನ್ನು ಪಡೆದುಕೊಂಡು ಬರಬಲ್ಲ ಸಾಮರ್ಥ್ಯ ಯಾವ ಸಂಸದರಿಗೂ ಇಲ್ಲವಲ್ಲ ಎಂಬುದೇ ದುಃಖದ ಸಂಗತಿ. ಮತ್ತು ಇವರು ಒಬ್ಬಿಬ್ಬರಲ್ಲ, ಬರೋಬ್ಬರಿ 25 ಜನ. ಇನ್ನುಳಿದ ಮೂವರಲ್ಲಿ ಒಬ್ಬರು ಈಗ ತಾನೇ ಸಂಸತ್ತು ಪ್ರವೇಶಿಸಿರುವ ಸುಮಲತಾ ಆದರೆ ಪ್ರಜ್ವಲ್ ಅವರದ್ದೂ ಹೆಚ್ಚು ಕಡಿಮೆ ಅದೇ ಸ್ಥಾನ. ಇವರುಗಳಿಗೆ ಸಂಸತ್ತಿನ ಕಾರ್ಯವೈಖರಿಯ ಅರಿವಾಗುವುದರೊಳಗೆ ಅದರ ಕಾರ್ಯ ಅವಧಿ ಮುಗಿದು ಹೋಗಿರುತ್ತದೆ. ಕಾಂಗ್ರೆಸ್ಸಿನ ಒಬ್ಬೇ ಒಬ್ಬ ಸಂಸದ ಅಣ್ಣನನ್ನು ಬಿಡಿಸಿಕೊಂಡು ಬರುವುದರಲ್ಲಿ ತಿಪ್ಪರಲಾಗ ಹಾಕುತ್ತಿದ್ದಾರೆ. ಹೀಗಾಗಿ ಕರ್ನಾಟಕದ ಪರವಾಗಿ, ಕನ್ನಡದ ಪರವಾಗಿ ಸಮರ್ಥವಾಗಿ ದನಿ ಎತ್ತಬಲ್ಲವರೇ ಇಲ್ಲವಾಗಿಬಿಟ್ಟಿದ್ದಾರೆ ಎಂದು ಹೇಳಿದ್ದರು.

  • ಪರಿಮಳ ಲಾಡ್ಜಿನತ್ತ ಹೊರಟ ಚಿರಯವ್ವನೆ ಸುಮನ್ ರಂಗನಾಥ್!

    ಪರಿಮಳ ಲಾಡ್ಜಿನತ್ತ ಹೊರಟ ಚಿರಯವ್ವನೆ ಸುಮನ್ ರಂಗನಾಥ್!

    ಬೆಂಗಳೂರು: ನೀನಾಸಂ ಸತೀಶ್ ಮತ್ತು ನೀರ್ ದೋಸೆ ಖ್ಯಾತಿಯ ನಿರ್ದೇಶಕ ವಿಜಯ್ ಪ್ರಸಾದ್ ಕಾಂಬಿನೇಷನ್ನಿನ ಚಿತ್ರದ ಬಗ್ಗೆ ನಿಖರ ಮಾಹಿತಿಗಳೇ ಹೊರ ಬಿದ್ದಿವೆ. ಆರಂಭದಲ್ಲಿ ಈ ಸಿನಿಮಾಗೆ ಗಣೇಶ ಮೆಡಿಕಲ್ಸ್ ಅನ್ನೋ ನಾಮಕರಣವಾಗಿತ್ತು. ಆದರೀಗ ಅದೇ ಟೀಮು ಜೊತೆ ಸೇರಿ ಪರಿಮಳ ಲಾಡ್ಜ್ ಅನ್ನೋ ಸಿನಿಮಾ ಶುರು ಮಾಡಿದೆ. ದೊಡ್ಡ ತಾರಾಗಣವಿರೋ ಈ ಚಿತ್ರದಲ್ಲಿ ನೀನಾಸಂ ಸತೀಶ್ ನಾಯಕನಾಗಿ ನಟಿಸಲಿದ್ದಾರೆ. ಸುಮನ್ ರಂಗನಾಥ್ ಕೂಡಾ ವಿಶೇಷ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ.

    ಈ ಹಿಂದೆ ಬ್ಯೂಟಿಫುಲ್ ಮನಸುಗಳು ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದ ಪ್ರಸನ್ನ ಪರಿಮಳ ಲಾಡ್ಜಿಗೆ ಹಣ ಹೂಡಿದ್ದಾರೆ. ವಿಜಯ ಪ್ರಸಾದ್ ಚಿತ್ರಗಳೆಂದ ಮೇಲೆ ವಾಸ್ತವಿಕ ವಿಚಾರಗಳನ್ನೇ ಲಘುವಾದ ಶೈಲಿಯಲ್ಲಿ ಹೇಳೋ ಮಸ್ತ್ ಆಗಿರೋ ಕಥೆ ಇರುತ್ತದೆ ಅನ್ನೋದರಲ್ಲಿ ಯಾವ ಸಂಶಯವೂ ಇಲ್ಲ. ಪರಿಮಳ ಲಾಡ್ಜ್ ಕಥೆಯನ್ನಂತೂ ಇಂಥಾದ್ದೇ ಮಜವಾದ ಕಥಾ ಎಳೆಯೊಂದಿಗೆ ಅವರು ರೂಪಿಸಲು ಮುಂದಾಗಿದ್ದಾರೆ. ಇದರಲ್ಲಿನ ಮಹತ್ವದ ಪಾತ್ರವೊಂದರಲ್ಲಿ ಸುಮನ್ ರಂಗನಾಥ್ ನಟಿಸಿದ್ದಾರೆ.

    ಈ ಸಿನಿಮಾ ಮೂಲಕವೇ ವರ್ಷಾಂತರಗಳ ನಂತರ ಲೂಸ್ ಮಾದ ಯೋಗಿ ಮತ್ತು ವಿಜಯ ಪ್ರಸಾದ್ ಮತ್ತೆ ಒಂದಾಗಿದ್ದಾರೆ. ಯೋಗಿ ಕೂಡಾ ಈ ಸಿನಿಮಾದಲ್ಲಿ ನಟಿಸಲಿದ್ದಾರಂತೆ. ಸದ್ಯಕ್ಕೆ ಇಷ್ಟು ಮಂದಿಯ ತಾರಾಗಣ ನಿಗದಿಯಾಗಿದೆ. ಸುಮನ್ ರಂಗನಾಥ್ ಕೂಡಾ ನಟಿಸೋದು ಪಕ್ಕಾ ಆಗಿದೆ. ಸುಮನ್ ಈ ಹಿಂದೆ ಸಿದ್ಲಿಂಗು, ನೀರ್ ದೋಸೆ ಮತ್ತು ತೋತಾಪುರಿ ಚಿತ್ರದಲ್ಲಿಯೂ ನಟಿಸಿದ್ದಾರೆ. ಇದೀಗ ಅವರು ಪರಿಮಳ ಲಾಡ್ಜ್ ಗೂ ಎಂಟ್ರಿ ಕೊಡಲಿದ್ದಾರೆ. ಇದು ವಿಜಯ ಪ್ರಸಾದ್ ಮತ್ತು ಸುಮನ್ ಕಾಂಬಿನೇಷನ್ನಿನ ನಾಲ್ಕನೇ ಚಿತ್ರವಾಗಿಯೂ ದಾಖಲಾಗುತ್ತದೆ.