Tag: ನೀತಿ ಸಂಹಿತೆ

  • ದಿನೇಶ್ ಅಮೀನ್ ಮಟ್ಟು ಸೇರಿದಂತೆ ಐವರು ಪ್ರಗತಿಪರ ಚಿಂತಕರ ವಿರುದ್ಧ ಕೇಸ್

    ದಿನೇಶ್ ಅಮೀನ್ ಮಟ್ಟು ಸೇರಿದಂತೆ ಐವರು ಪ್ರಗತಿಪರ ಚಿಂತಕರ ವಿರುದ್ಧ ಕೇಸ್

    ಉಡುಪಿ: ಸಹಬಾಳ್ವೆ ಸಂಘಟನೆ ನೇತೃತ್ವದಲ್ಲಿ ನಡೆದ ಸರ್ವ ಜನೋತ್ಸವ ಕಾರ್ಯಕ್ರಮದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿ ಚುನಾವಣಾ ಪ್ರಚಾರ ಮಾಡಿದ ಐವರು ಪ್ರಗತಿಪರ ಚಿಂತಕರ ವಿರುದ್ಧ ಕೇಸು ದಾಖಲಾಗಿದೆ.

    ಹಿಂದೂ ಧರ್ಮವನ್ನು ನಿಂದಿಸಿ ಪ್ರಚೋದನಕಾರಿ ಭಾಷಣ ಮಾಡಿದ್ದ ಸಹಬಾಳ್ವೆ ಅಧ್ಯಕ್ಷ ಸಹಿತ ಐವರ ಮೇಲೆ ಪ್ರಕರಣ ದಾಖಲಾಗಿದೆ. ಸಹಬಾಳ್ವೆ ಉಡುಪಿ ಅಧ್ಯಕ್ಷ ಅಮೃತ್ ಶೆಣೈ, ಹಿರಿಯ ಪತ್ರಕರ್ತ-ಪ್ರಗತಿಪರ ಚಿಂತಕ ದಿನೇಶ್ ಅಮೀನ್ ಮಟ್ಟು, ದಲಿತ ಮುಖಂಡ ಇಂದೂಧರ ಹೊನ್ನಾಪುರ, ಜಿ.ಎನ್ ನಾಗರಾಜ್, ಸಾಮಾಜಿಕ ಚಿಂತಕ ಮಹೇಂದ್ರ ಕುಮಾರ್ ಅವರ ಮೇಲೆ ಚುನಾವಣಾ ಆಯೋಗ ಫ್ಲೈಯಿಂಗ್ ಸ್ಕ್ವಾಡ್ ಮೂಲಕ ಪ್ರಕರಣ ದಾಖಲು ಮಾಡಿಕೊಂಡಿದೆ. ಇದನ್ನೂ ಓದಿ:ಪ್ರಕಾಶ್ ರೈ ಮತ ವಿಭಜನೆಗೆ ಹೊರಟಿದ್ದಾರೆ: ದಿನೇಶ್ ಅಮಿನ್ ಮಟ್ಟು

    ಉಡುಪಿಯಲ್ಲಿ ನಡೆದ ಸರ್ವಜನೋತ್ಸವದಲ್ಲಿ ದಿನೇಶ್ ಅಮೀನ್ ಮಟ್ಟು ಮತ್ತು ಇತರರು ಮಾ. 17 ರಂದು ಕಲ್ಸಂಕದ ರಾಯಲ್ ಗಾರ್ಡನ್‍ನಲ್ಲಿ ನಡೆದ ಸಹಬಾಳ್ವೆ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದರು. ಚುನಾವಣಾ ಪ್ರಚಾರದ ಜೊತೆಗೆ ಧರ್ಮಗಳ ನಿಂದನೆ ಮಾಡಿದ್ದರು. ಪ್ರಧಾನಿ ಮೋದಿ, ಪೇಜಾವರಶ್ರೀ, ಪ್ರಕಾಶ್ ರೈ ಮೇಲೆ ವಾಗ್ದಾಳಿ ಮಾಡಿದ್ದರು. ಹಿಂದೂ ಧರ್ಮದ ಹೆಸರು ತೆಗೆದು ಟೀಕೆ ಮಾಡಿದ್ದರು.

    ಬಳಿಕ ಯಾರಿಗೆ ಮತಹಾಕಿ, ಯಾರಿಗೆ ಮತ ಹಾಕಬೇಡಿ ಎಂದು ಸಾರ್ವಜನಿಕರ ಮೇಲೆ ಒತ್ತಡ ಹೇರಿದ್ದರು. ಈ ಬಗ್ಗೆ ಚುನಾವಣಾ ವೀಕ್ಷಣಾಧಿಕಾರಿಗಳು ಕೊಟ್ಟ ದೂರಿನ ಹಿನ್ನೆಲೆಯಲ್ಲಿ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ನಾಟಕ ಕಂಪನಿಗಳಿಗೂ ತಟ್ಟಿತು ಲೋಕಸಭಾ ಚುನಾವಣೆಯ ಬಿಸಿ- ಹೀಗೆ ಆದ್ರೆ ಅನ್ನ ತಿನ್ನೋದು ಹೇಗೆ?

    ನಾಟಕ ಕಂಪನಿಗಳಿಗೂ ತಟ್ಟಿತು ಲೋಕಸಭಾ ಚುನಾವಣೆಯ ಬಿಸಿ- ಹೀಗೆ ಆದ್ರೆ ಅನ್ನ ತಿನ್ನೋದು ಹೇಗೆ?

    – ರಾತ್ರಿ ನಾಟಕ ಆಯೋಜಿಸದಂತೆ ಆಯೋಗದಿಂದ ಸೂಚನೆ
    – ನಾಟಕ ಮಾಡದೇ ಇದ್ದರೆ ನಾವು ಬದುಕೋದು ಹೇಗೆ – ಕಲಾವಿದರ ಪ್ರಶ್ನೆ

    ಬಳ್ಳಾರಿ: ಲೋಕಸಭಾ ಚುನಾವಣೆಯ ಬಿಸಿ ನಾಟಕ ಕಂಪನಿಗಳಿಗೂ ತಟ್ಟಿದೆ. ಕೂಟ್ಟೂರಿನ ಶ್ರೀ ಗುರು ಕೊಟ್ಟೂರೇಶ್ವರ ರಥೋತ್ಸವ ನಿಮಿತ್ತ ಹಲವು ನಾಟಕ ಕಂಪನಿಗಳು ಪ್ರದರ್ಶನ ನೀಡುತ್ತಿವೆ. ಆದರೆ ಇದೀಗ ರಾತ್ರಿ 10 ಗಂಟೆಯ ನಂತರ ಶೋ ನಡೆಸದಂತೆ ಚುನಾವಣಾಧಿಕಾರಿಗಳು ತಾಕೀತು ಮಾಡಿರುವುದು ಬಡ ಕಲಾವಿದರ ಹೊಟ್ಟೆ ಮೇಲೆ ಹೊಡೆದಂತಾಗಿದೆ.

    ರಾತ್ರಿ ಶೋ ನಡೆದರೆ ಮಾತ್ರ ಬಡ ಕಲಾವಿದರಿಗೆ ದುಡಿಮೆ ಹೊಟ್ಟೆಗೆ ಅನ್ನವಾಗಿದೆ. ಹೀಗಾಗಿ ರಾಜ್ಯದ ಯಾವ ನಾಟಕ ಕಂಪನಿಗಳಿಗೆ ಇರದ ನಿಯಮ ಬಳ್ಳಾರಿಯ ಕೊಟ್ಟೂರು ಪಟ್ಟಣದಲ್ಲಿ ಇರುವ ಗುಬ್ಬಿ ನಾಟಕ ಕಂಪನಿಗಳಿಗೆ ಮಾತ್ರ ನೀತಿ ಸಂಹಿತೆ ಬಿಸಿನಾ ಎಂದು ಕಲಾವಿದರು ಪ್ರಶ್ನೆ ಮಾಡುತ್ತಿದ್ದಾರೆ.

    ಎಲ್ಲ ಜಿಲ್ಲೆಯಲ್ಲೂ ನಡೆಯುವಂತಹ ಜಾತ್ರೆಯಲ್ಲಿ ಕಲಾವಿದರು ನಾಟಕ ಪ್ರದರ್ಶನ ಮಾಡುತ್ತಾರೆ. ಹೀಗಾಗಿ ನಾಟಕ ಕಂಪನಿಗಳಿಗೆ ಜಾತ್ರೆಗಳೇ ಆದಾಯವಾಗಿವೆ. ಬಳ್ಳಾರಿಯ ಕೊಟ್ಟೂರು ಪಟ್ಟಣದಲ್ಲಿ ಎರಡು ನಾಟಕ ಕಂಪನಿಗಳು ಬೀಡುಬಿಟ್ಟಿವೆ. ಆದರೆ ಅಧಿಕಾರಿಗಳು ರಾತ್ರಿ ವೇಳೆ ಪ್ರದರ್ಶನ ಮಾಡಬಾರದು ಎಂದು ನೋಟಿಸ್ ಕೊಟ್ಟಿದ್ದಾರೆ. ಸಿನಿಮಾಗಳಿಗೆ ಇಲ್ಲದ ನೀತಿ ಸಂಹಿತೆ, ನಾಟಕ ಕಂಪನಿಗಳಿಗೆ ಏಕೆ ಎಂದು ಕಲಾವಿದರು ಪ್ರಶ್ನೆ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜ್ಯೋತಿಷಿಗಳಿಗೂ ತಟ್ಟಿದ ನೀತಿ ಸಂಹಿತೆಯ ಬಿಸಿ!

    ಜ್ಯೋತಿಷಿಗಳಿಗೂ ತಟ್ಟಿದ ನೀತಿ ಸಂಹಿತೆಯ ಬಿಸಿ!

    ಮಂಡ್ಯ: ಜ್ಯೋತಿಷ್ಯ ಮಂದಿರದ ಬೋರ್ಡ್ ನಲ್ಲಿ ಹಸ್ತದ ಚಿಹ್ನೆ ಇದ್ದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಬೋರ್ಡ್ ಗೆ ಪೇಪರ್ ಹಚ್ಚಿ ಮುಚ್ಚಿದ್ದಾರೆ.

    ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರದಿಂದ ನೀತಿ ಸಂಹಿತೆ ಜಾರಿಯಾಗಿದೆ. ಹೀಗಾಗಿ ಅಶೋಕ ನಗರದಲ್ಲಿರುವ ಜ್ಯೋತಿಷ್ಯ ಮಂದಿರದ ಬೋರ್ಡ್ ಗೆ ಅಧಿಕಾರಿಗಳು ಪೇಪರ್ ಹಚ್ಚಿ ಮುಚ್ಚಿದ್ದಾರೆ.

    ಸಾಮಾನ್ಯವಾಗಿ ಹಲವು ಜ್ಯೋತಿಷ್ಯ ಕೇಂದ್ರಗಳಲ್ಲಿ ನಿಮ್ಮ ಹಸ್ತವನ್ನು ನೋಡಿ ಜ್ಯೋತಿಷ್ಯ ಹೇಳುತ್ತೇವೆ ಅಂತ ಜ್ಯೋತಿಷಿಗಳು ಹಸ್ತದ ಚಿಹ್ನೆ ಇರುವ ಬೋರ್ಡ್ ಗಳನ್ನು ಹಾಕಿರುತ್ತಾರೆ. ಆದ್ರೆ ಈ ಹಸ್ತ ಕಾಂಗ್ರೆಸ್ ಪಕ್ಷದ ಚಿಹ್ನೆ ಕೂಡ ಆಗಿರುವುದರಿಂದ ಚುನಾವಣಾ ಅಧಿಕಾರಿಗಳು ಈ ಬಗ್ಗೆ ಕ್ರಮ ತೆಗೆದುಕೊಂಡಿದ್ದಾರೆ.

    ಸದ್ಯ ಜಾರಿಯಲ್ಲಿರುವ ನೀತಿ ಸಂಹಿತೆ ಅವಧಿ ಮುಗಿಯುವವರೆಗೂ ಜ್ಯೋತಿಷಿ ಕೇಂದ್ರದ ಮುಂದೆ ಹಸ್ತ ಚಿಹ್ನೆ ಇರುವ ಬೋರ್ಡ್ ಹಾಕಬಾರದು ಎಂದು ಚುನಾವಣಾ ಅಧಿಕಾರಿಗಳು ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಂಸದ, ಶಾಸಕ ತಲ್ವಾರ್ ಹಿಡಿದ ಫೋಟೋ ಫೇಸ್‍ಬುಕ್‍ಗೆ ಅಪ್ಲೋಡ್..!

    ಸಂಸದ, ಶಾಸಕ ತಲ್ವಾರ್ ಹಿಡಿದ ಫೋಟೋ ಫೇಸ್‍ಬುಕ್‍ಗೆ ಅಪ್ಲೋಡ್..!

    – ನೀತಿ ಸಂಹಿತೆ ಉಲ್ಲಂಘಿಸಿದ ಬಿಜೆಪಿ ಕಾರ್ಯಕರ್ತರು

    ಧಾರವಾಡ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ ಇದ್ದಾಗಲೇ ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಹಾಗೂ ಶಾಸಕ ಅರವಿಂದ್ ಬೆಲ್ಲದ ಅವರು ತಲ್ವಾರ್ ಹಿಡಿದ ಫೋಟೋವನ್ನು ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ನೀತಿ ಸಂಹಿತೆ ನಿಯಮವನ್ನು ಉಲ್ಲಂಘಿಸಿದ್ದಾರೆ.

    ಪ್ರಹ್ಲಾದ್ ಜೋಶಿ ಮತ್ತು ಅರವಿಂದ ಬೆಲ್ಲದ ಕೈಯಲ್ಲಿ ತಲ್ವಾರ್ ಹಿಡಿದ ಫೋಟೋವನ್ನು ಬಿಜೆಪಿ ಪಕ್ಷದ ಕಾರ್ಯಕರ್ತರೊಬ್ಬರು ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

    ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಯಾವುದೇ ಆಯುಧ ಪ್ರದರ್ಶಿಸಬಾರದು. ಆಯುಧ ಹಿಡಿದ ಫೋಟೋ ಕೂಡ ಸಾರ್ವಜನಿಕವಾಗಿ ಹಂಚಿಕೊಳ್ಳೋದು ಕೂಡ ತಪ್ಪು. ಆದ್ರೆ ಬಿಜೆಪಿ ಕಾರ್ಯಕರ್ತ, ಜೋಶಿ ಹಾಗೂ ಬೆಲ್ಲದ ತಲ್ವಾರ್ ಹಿಡಿದ ಫೋಟೋ ಹಾಕಿ ಮತ್ತೊಮ್ಮೆ ನಾವೇ ಗೆಲ್ಲೋದು ಎಂದು ಪೋಸ್ಟ್ ಮಾಡಿದ್ದಾರೆ.

    ಶಕ್ತಿ ಧಾರವಾಡ ಬಿಜೆಪಿ ಯುವಮೋರ್ಚಾ ಕಾರ್ಯಕರ್ತ, ಎರಡು ದಿನಗಳ ಹಿಂದೆ ಧಾರವಾಡದ ಅಶೋಕ ಹೊಟೇಲ್‍ಗೆ ಬಂದಾಗ ಜನಪ್ರತಿನಿಧಿಗಳು ತಲ್ವಾರ್ ಹಿಡಿದು ಫೋಟೋಗೆ ಪೋಸ್ ಕೊಟ್ಟಿದ್ದರು. ಅದೇ ಫೋಟೋವನ್ನು ನೀತಿ ಸಂಹಿತೆ ಜಾರಿಯಾದ ಬಳಿಕ ಕಾರ್ಯಕರ್ತ ಪೋಸ್ಟ್ ಮಾಡಿ ಚುನಾವಣಾ ಆಯೋಗದ ನಿಯಮವನ್ನು ಉಲ್ಲಂಘಿಸಿದ್ದಾರೆ.

    https://www.facebook.com/shakti.hiremath/posts/2113167555464960

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ತೆಲಂಗಾಣದ ಐವರು ನಾಯಕರಿಗೆ ನೋಟಿಸ್

    ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ತೆಲಂಗಾಣದ ಐವರು ನಾಯಕರಿಗೆ ನೋಟಿಸ್

    ಹೈದರಾಬಾದ್: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಡಿ ತೆಲಂಗಾಣದ 5 ಜನ ಹಿರಿಯ ನಾಯಕರಿಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ.

    ತೆಲಂಗಾಣ ರಾಜ್ಯ ನೀರಾವರಿ ಸಚಿವ ಟಿ.ಹರೀಶ್ ರಾವ್, ಕಾಂಗ್ರೆಸ್ ನಾಯಕ ರೇವಂತ್ ರೆಡ್ಡಿ, ತೆಲಗು ದೇಶಂ ಪಕ್ಷದ (ಟಿಡಿಪಿ) ನಾಯಕ ವಂಟೇರು ಪ್ರತಾಪ್ ರೆಡ್ಡಿ, ರೇವೂರಿ ಪ್ರಕಾಶ್ ರೆಡ್ಡಿ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ತೆಲಂಗಾಣ ರಾಜ್ಯ ಚುನಾವಣೆ ಆಯೋಗದ ಆಯುಕ್ತ ರಜತ್ ಕುಮಾರ್ ಹೇಳಿದ್ದಾರೆ.

    ಅಷ್ಟೇ ಅಲ್ಲದೆ ತೆಲಂಗಾಣ ಪ್ರದೇಶ ಕಾಂಗ್ರೆಸ್ (ಟಿಪಿಸಿಸಿ) ಅಧ್ಯಕ್ಷ ಉತ್ತಮ್ ಕುಮಾರ್ ರೆಡ್ಡಿ ಅವರ ವಿರುದ್ಧವೂ ದೂರು ಕೇಳಿ ಬಂದಿದೆ. ಹೀಗಾಗಿ ಅವರಿಗೂ ನೋಟಿಸ್ ನೀಡಿದ್ದೇವೆ. ನೋಟಿಸ್ ತಕ್ಷಣವೇ ಪ್ರತಿಕ್ರಿಯೆ ನೀಡುವಂತೆ ಸೂಚಿಸಲಾಗಿದೆ ಎಂದು ರಜತ್ ಕುಮಾರ್ ತಿಳಿಸಿದರು.

    ಬಿಜೆಪಿ ಮುಖಂಡರೊಬ್ಬರಿಗೆ ಟಿಆರ್‍ಎಸ್ ಅಭ್ಯರ್ಥಿ ಗಂಗುಲ ಕಮಲಾಕರ್ ಬೆದರಿಗೆ ಹಾಕಿದ್ದಾರೆ ಎನ್ನುವ ಆರೋಪ ಬಂದಿದೆ. ಈ ಕುರಿತು ತನಿಖೆ ಆರಂಭವಾಗಿದೆ. ಮತದಾನದ ದಿನದಂದು ಭದ್ರತಾ ದೃಷ್ಟಿಯಿಂದ 48 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಒಟ್ಟು 32,749 ಕೇಂದ್ರಗಳಲ್ಲಿ ಮತದಾನ ನಡೆಯಲಿದೆ ಎಂದು ಮಾಹಿತಿ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡರಿಂದ ನೀತಿ ಸಂಹಿತೆ ಉಲ್ಲಂಘನೆ

    ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡರಿಂದ ನೀತಿ ಸಂಹಿತೆ ಉಲ್ಲಂಘನೆ

    ಬಾಗಲಕೋಟೆ: ಜಮಖಂಡಿ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮ ಗೌಡ ಅವರು ಚುನಾವಣೆಯಂದೇ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ.

    ಮತಗಟ್ಟೆ ಕೇಂದ್ರದ ಆವರಣದಲ್ಲೆ ಅಭ್ಯರ್ಥಿಯಿಂದ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಜಮಖಂಡಿ ತಾಲೂಕಿನ ನಾಗನೂರ ಗ್ರಾಮದಲ್ಲಿ ಆರತಿ ಬೆಳಗಿದ ಮಹಿಳೆಯ ತಟ್ಟೆಯಲ್ಲಿ 100 ರೂಪಾಯಿ ನೋಟು ಇಡುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ.

    ಆನಂದ ನ್ಯಾಮಗೌಡ ಅವರು ನಾಗನೂರ ಗ್ರಾಮದ ಮತಗಟ್ಟೆ ಸಂಖ್ಯೆ 97 ಹಾಗೂ 98ಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಮತಗಟ್ಟೆ ಕೇಂದ್ರದಲ್ಲಿ ಮಹಿಳೆಯರು ಆರತಿ ಬೆಳಗಿದ್ದಾರೆ. ಇದೇ ಸಂದರ್ಭದಲ್ಲಿ ನ್ಯಾಮಗೌಡ ಆರತಿ ತಟ್ಟೆಯಲ್ಲಿ 100 ರೂಪಾಯಿ ನೋಟು ಇಟ್ಟಿದ್ದಾರೆ.

    ಮಹಿಳೆಯರಿಂದ ಮತದಾನ ಜಾಗೃತಿ:
    ಜಮಖಂಡಿ ತಾಲೂಕಿನ ನಾಗನೂರಿನಲ್ಲಿ ಆಶಾ ಕಾರ್ಯಕರ್ತೆಯರು ವಿಶಿಷ್ಟವಾಗಿ ಮತದಾರರಲ್ಲಿ ಜಾಗೃತಿ ಮೂಡಿಸಿದ್ದಾರೆ. ನಾಗನೂರ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿರುವ 97 ಹಾಗೂ 98 ಮತಗಟ್ಟೆಯಲ್ಲಿ ಮತದಾರರಿಗೆ ಆರತಿ ಬೆಳಗಿದ್ದಾರೆ. ಅಂಗನವಾಡಿ ಆಶಾ ಕಾರ್ಯಕರ್ತೆಯರು ಮತದಾನಕ್ಕೆ ಆಗಮಿಸುತ್ತಿರುವ ಪ್ರತಿಯೊಬ್ಬರಿಗೂ ಕುಂಕುಮ ಹಚ್ಚಿ, ಆರತಿ ಬೆಳಗಿದ್ದಾರೆ.

    ಮತದಾನಕ್ಕೆ ಬಂದವರಿಗೆ ಆರತಿ ಎತ್ತಿ ಪೂಜೆ ಸಲ್ಲಿಸುವ ಮೂಲಕ ಆಶಾ ಕರ್ಯಕರ್ತೆಯರ ಮತದಾನದ ಜಾಗೃತಿ ಕೆಲಸಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚುನಾವಣಾ ನೀತಿ ಸಂಹಿತೆ ಜಾರಿಯಾದ್ರೂ ಕೊಪ್ಪಳದಲ್ಲಿ ಅಕ್ರಮ ಮದ್ಯ ಮಾರಾಟ ಫುಲ್ ಜೋರು

    ಚುನಾವಣಾ ನೀತಿ ಸಂಹಿತೆ ಜಾರಿಯಾದ್ರೂ ಕೊಪ್ಪಳದಲ್ಲಿ ಅಕ್ರಮ ಮದ್ಯ ಮಾರಾಟ ಫುಲ್ ಜೋರು

    ಕೊಪ್ಪಳ: ರಾಜ್ಯದಲ್ಲಿ ಮಂಗಳವಾರದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದರೂ ಕೊಪ್ಪಳ ಜಿಲ್ಲೆಯಲ್ಲಿ ಮಾತ್ರ ಅಕ್ರಮ ಮದ್ಯ ಮಾರಾಟ ಜೋರಾಗಿದೆ.

    ಗಂಗಾವತಿ ತಾಲೂಕಿನಲ್ಲಿ ಮನೆ-ಮನೆಯಲ್ಲಿ ಅಕ್ರಮ ಮದ್ಯ ಸಿಗುತ್ತದೆ. ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ತಾಲೂಕಿನ ಬಹುತೇಕ ಗ್ರಾಮಗಳಿಗೆ ಅಕ್ರಮ ಮದ್ಯ ಸಾಗಿಸುತ್ತಿದ್ದಾರೆ. ಗ್ರಾಮದ ಮನೆ ಮನೆಯಲ್ಲಿ ಅಕ್ರಮ ಮದ್ಯ ಮಾರಾಟದ ದಂಧೆ ಜೋರಾಗಿದೆ. ಆದ್ರೆ ಅಕ್ರಮವನ್ನು ತಡೆಯಬೇಕಾದ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪಗಳು ಗಂಗಾವತಿ ತಾಲೂಕಿನಾದ್ಯಂತ ಕೇಳಿಬರುತ್ತಿದೆ.

    ಕಳೆದ ಹತ್ತು ವರ್ಷದಿಂದ ಗಂಗಾವತಿ ಅಬಕಾರಿ ಇಲಾಖೆಯನ್ನ ಮನೆ ಮಾಡಿಕೊಂಡ ಮಾಜಿ ಶಾಸಕ ಅನ್ಸಾರಿಯ ಸ್ನೇಹಿತ ಚಿನ್ನಪ್ಪ, ಮಾಮೂಲಿ ಪಡೆದು ಅಕ್ರಮ ಮದ್ಯ ಮಾರಾಟಕ್ಕೆ ಸಾಥ್ ನೀಡಿದ ಆರೋಪ ಕೇಳಿ ಬಂದಿತ್ತು. ಪ್ರತಿ ಮದ್ಯದ ಅಂಗಡಿಗಳಿಂದ ತಿಂಗಳಿಗೆ ಹತ್ತು ಸಾವಿರ ಮಾಮೂಲಿ ಪಡೆದು ಚಿನ್ನಪ್ಪ ಮನೆಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದಾರೆ ಎನ್ನಲಾಗಿದೆ.

    ಮದ್ಯ ಮಾರಾಟದ ಕುರಿತು ಸಂಘಟನೆಗಳು ಚಿನ್ನಪ್ಪನ ವಿರುದ್ಧ ಮೇಲಾಧಿಕಾರಿಗಳ ಗಮನಕ್ಕೆ ತಂದ ಸಂಘಟನೆಯ ಕಾರ್ಯಕರ್ತರಿಗೆ ಬೆದರಿಕೆ ಹಾಕಿದ್ದಾರಂತೆ. ಒಟ್ಟಿನಲ್ಲಿ ಇದೀಗ ಜಿಲ್ಲಾಧಿಕಾರಿಗಳು ಅಕ್ರಮ ಮದ್ಯ ಮಾರಾಟವನ್ನು ನಿಲ್ಲಿಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ.

    https://youtu.be/y_4sS2Ug7KE

  • ಸಿದ್ದರಾಮಯ್ಯ ಹೊರಡುತ್ತಿದ್ದಂತೆಯೇ ಚಿಕ್ಕಬಳ್ಳಾಪುರದಲ್ಲಿ ಬಾಡೂಟ ಸೀಜ್

    ಸಿದ್ದರಾಮಯ್ಯ ಹೊರಡುತ್ತಿದ್ದಂತೆಯೇ ಚಿಕ್ಕಬಳ್ಳಾಪುರದಲ್ಲಿ ಬಾಡೂಟ ಸೀಜ್

    ಚಿಕ್ಕಬಳ್ಳಾಪುರ: ಕರ್ನಾಟಕ ಚುನಾವಣೆಯ ದಿನಾಂಕ ಘೋಷಣೆಯಾಗಿ, ಚುನಾವಣಾ ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೇ ರಾಜ್ಯದಲ್ಲೇ ಮೊಟ್ಟ ಮೊದಲ ಪ್ರಕರಣವೊಂದು ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

    ಸಿದ್ದರಾಮಯ್ಯ ಅವರು ಚಿಕ್ಕಬಳ್ಳಾಪುರದಿಂದ ಹೊರಟ ಕೂಡಲೇ ಜಿಲ್ಲಾ ಚುನಾವಣಾಧಿಕಾರಿಗಳು ಸಿಎಂ ಭೇಟಿ ನಿಮಿತ್ತ ಆಯೋಜಿಸಿದ್ದ ಬಾಡೂಟ ಸೀಜ್ ಮಾಡಿದ್ದಾರೆ.

    ಕೋಚಿಮುಲ್ ನ ನಿರ್ದೇಶಕ ಹಾಗೂ ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷರಾಗಿದ್ದ ಕೆವಿ ನಾಗರಾಜ್ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ನಾಗರಾಜ್ `ಕೈ’ ಹಿಡಿದ್ರು. ಈ ಹಿನ್ನೆಲೆಯಲ್ಲಿ ಅವರು ಕಣಜೇನಹಳ್ಳಿ ಗ್ರಾಮದಲ್ಲಿ ಸುಮಾರು 3 ಸಾವಿರ ಮಂದಿಗೆ ಬಾಡೂಟ ಆಯೋಜನೆ ಮಾಡಿದ್ದರು.

    ಆದ್ರೆ ಇತ್ತ ಚುನಾವಣಾ ದಿನಾಂಕ ಘೋಷಣೆಯಾದ ಬೆನ್ನಲ್ಲೇ ನೀತಿ ಸಂಹಿತೆ ಜಾರಿಯಾಗಿದ್ದು, ಮೆಗಾಡೈರಿ ಉದ್ಘಾಟನೆಗೆ ತೆರಳಿದ್ದ ಮುಖ್ಯಮಂತ್ರಿ ಅವರು ಉದ್ಘಾಟನೆ ಮಾಡದೇ ಅಲ್ಲಿಂದ ನಾಗರಾಜ್ ಮನೆಗೆ ತೆರಳಿದ್ದಾರೆ. ಸಿಎಂ ಭೇಟಿ ಹಿನ್ನೆಲೆಯಲ್ಲಿ ನಾಗರಾಜ್ ಮನೆಯಲ್ಲಿ ಬಾಡೂಟ ಆಯೋಜನೆ ಮಾಡಿದ್ದರು.

    ಸಿಎಂ ಅವರು ಮನೆಯಿಂದ ವಾಪಸ್ಸಾಗುತ್ತಿದ್ದಂತೆಯೇ ಚಿಕ್ಕಬಳ್ಳಾಪುರ ಜಿಲ್ಲಾ ಚುನಾವಣಾಧಿಕಾರಿಗಳು ನಾಗರಾಜ್ ಮನೆಗೆ ದಾಳಿ ನಡೆಸಿ ಬಾಡೂಟ ಸೀಜ್ ಮಾಡಿದ್ದಾರೆ. ಅಧಿಕಾರಿಗಳು ಬರುತ್ತಿದ್ದಂತೆಯೇ ಬಾಡೂಟ ಸವಿಯುತ್ತಿದ್ದವರು ದಿಕ್ಕಾಪಾಲಾಗಿ ಓಡಿದ್ದಾರೆ.

  • ಹೆಲಿಕಾಪ್ಟರ್ ಹತ್ತುವಾಗ ಇಲ್ಲದ ನೀತಿ ಸಂಹಿತೆ ಇಳಿಯುವಷ್ಟರಲ್ಲಿ ಜಾರಿ-ಸಂಕಷ್ಟಕ್ಕೆ ಸಿಲುಕಿದ ಇಂಧನ ಸಚಿವ

    ಹೆಲಿಕಾಪ್ಟರ್ ಹತ್ತುವಾಗ ಇಲ್ಲದ ನೀತಿ ಸಂಹಿತೆ ಇಳಿಯುವಷ್ಟರಲ್ಲಿ ಜಾರಿ-ಸಂಕಷ್ಟಕ್ಕೆ ಸಿಲುಕಿದ ಇಂಧನ ಸಚಿವ

    ಶಿವಮೊಗ್ಗ: ಹೆಲಿಕಾಪ್ಟರ್ ಹತ್ತುವಾಗ ಇಲ್ಲದ ನೀತಿ ಸಂಹಿತೆ ಇಳಿಯುಷ್ಟರಲ್ಲಿಯೇ ಜಾರಿಯಾಗಿದ್ದರಿಂದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕೆಲ ಕಾಲ ಸಂಕಷ್ಟಕ್ಕೆ ಸಿಲುಕಿದ ಘಟನೆ ಇಂದು ನಡೆಯಿತು.

    ಜಕ್ಕೂರು ವಿಮಾನ ನಿಲ್ದಾಣದಿಂದ ಸಚಿವರು ಶಿವಮೊಗ್ಗದಲ್ಲಿ ನಿಗದಿಯಾಗಿ ಮೆಸ್ಕಾ ಅಧಿಕಾರಿಗಳ ಸಭೆಯಲ್ಲಿ ಭಾಗಿಯಾಗಲು ಪ್ರಯಾಣ ಬೆಳೆಸಿದ್ದರು. ಸಚಿವರನ್ನು ಕರೆದೊಯ್ಯಲು ಶಿವಮೊಗ್ಗ ಹೆಲಿಪ್ಯಾಡ್ ಗೆ ಬಂದಿದ್ದ ಸರ್ಕಾರಿ ವಾಹನವನ್ನು ಜಿಲ್ಲಾಡಳಿತ ಹಿಂದೆ ಪಡೆದಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಖಾಸಗಿ ಕಾರ್ ವ್ಯವಸ್ಥೆ ಮಾಡಿದ್ದರು.

    ಮಧ್ಯಾಹ್ನ 12.40ಕ್ಕೆ ಶಿವಮೊಗ್ಗ ಹೆಲಿಪ್ಯಾಡ್‍ಗೆ ಬಂದ ಸಚಿವರು ನೀತಿ ಸಂಹಿತೆ ಉಲ್ಲಂಘನೆಯ ಬಗ್ಗೆ ಮಾತನಾಡಿ, ಹೌದು ನಾನು ಕಾಪ್ಟರ್ ಹತ್ತುವಾಗ ಯಾವುದೇ ನೀತಿ ಸಂಹಿತೆ ಜಾರಿಯಾಗಿರಲಿಲ್ಲ. ಆದ್ರೆ ಮಾರ್ಗ ಮಧ್ಯೆ ನೀತಿ ಸಂಹಿತೆ ಜಾರಿಯಾಗಿರುವುದು ಗೊತ್ತಾಯಿತು. ಹಾಗಾಗಿ ಹೆಲಿಪ್ಯಾಡ್ ನಿಂದ ಖಾಸಗಿ ವಾಹನದಲ್ಲಿಯೇ ತೆರಳುತ್ತಿದ್ದೇನೆ ಅಂತಾ ಹೇಳಿದ್ರು.

  • ನಟಿ ಪೂಜಾ ಗಾಂಧಿಗೆ ಬಿಗ್ ರಿಲೀಫ್

    ನಟಿ ಪೂಜಾ ಗಾಂಧಿಗೆ ಬಿಗ್ ರಿಲೀಫ್

    ರಾಯಚೂರು: ಕಳೆದ ನಾಲ್ಕೂವರೆ ವರ್ಷಗಳಿಂದ ನಟಿ ಪೂಜಾಗಾಂಧಿ ರಾಯಚೂರಿನಲ್ಲಿ ಎದುರಿಸುತ್ತಿದ್ದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಿಂದ ಕೊನೆಗೂ ಮುಕ್ತಿ ಪಡೆದಿದ್ದಾರೆ.

    ರಾಯಚೂರಿನ ಜೆಎಂಎಫ್ ಸಿ 2ನೇ ನ್ಯಾಯಾಲಯದ ನ್ಯಾಯಾಧೀಶರಾದ ಪೂರ್ಣಿಮಾ ಯಾದವ್ ಸಾಕ್ಷ್ಯಾಧಾರ ಕೊರತೆಯಿಂದ ಪೂಜಾಗಾಂಧಿ ಖುಲಾಸೆಯಾಗಿದ್ದಾರೆ ಎಂದು ತೀರ್ಪು ಪ್ರಕಟಿಸಿದ್ದಾರೆ.

    ಏನಿದು ಪ್ರಕರಣ?
    2013 ರಲ್ಲಿ ರಾಯಚೂರು ನಗರ ಕ್ಷೇತ್ರಕ್ಕೆ ಬಿಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಚುನಾವಣೆಯಲ್ಲಿ ಬಿಎಸ್‍ಆರ್ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಪೂಜಾ ಗಾಂಧಿ ಅನುಮತಿ ಇಲ್ಲದ ವಾಹನವನ್ನು ಚುನಾವಣಾ ಪ್ರಚಾರಕ್ಕೆ ಬಳಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದರು. ಈ ಬಗ್ಗೆ ಸದರಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 5 ಬಾರಿ ವಿಚಾರಣೆಗೆ ಗೈರಾಗಿದ್ದ ಪೂಜಾ ಗಾಂಧಿಗೆ ವಾರೆಂಟ್ ಜಾರಿ ಮಾಡಲಾಗಿತ್ತು. ಅಂದಿನಿಂದಲೂ ಪೂಜಾಗಾಂಧಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಎದುರಿಸುತ್ತಿದ್ದರು.

    ಈ ಪ್ರಕರಣದ ಆರೋಪದಿಂದ ಈಗ ಪೂಜಾಗಾಂದಿ ಮುಕ್ತಿಯಾಗಿದ್ದಾರೆ ಎಂದು ಪೂಜಾಗಾಂಧಿ ಪರ ವಕೀಲ ನಾಗರಾಜ್ ನಾಯಕ ಹೇಳಿದ್ದಾರೆ. ತೀರ್ಪಿನಿಂದ ತುಂಬಾ ಖುಷಿಯಾಗಿದೆ. ಪ್ರಕರಣ ಮುಗಿದರೂ ರಾಯಚೂರಿಗೆ ಮತ್ತೆ ಮತ್ತೆ ಬರ್ತಿನಿ ಎಂದು ಪೂಜಾಗಾಂಧಿ ಹೇಳಿದ್ದಾರೆ. ಹೊಸ ವರ್ಷವನ್ನ ಪ್ರತಿ ದಿನದಂತೆ ಖುಷಿಯಾಗಿ ಸ್ವಾಗತಿಸುತ್ತೇನೆ. ನಾನು ಯಾವಾಗ ಮದುವೆ ಆಗುತ್ತೇನೆ ಆಗ ಹೇಳುತ್ತೇನೆ ಎಂದು ಪೂಜಾಗಾಂಧಿ ಹೇಳಿದರು.