Tag: ನೀತಿ ಸಂಹಿತೆ

  • ಬೆಂಗಳೂರಿನಲ್ಲಿ ರೇಣುಕಾಚಾರ್ಯಗೆ ಶಾಕ್ – ನೀತಿ ಸಂಹಿತೆ ಉಲ್ಲಂಘನೆ ಕೇಸ್?

    ಬೆಂಗಳೂರಿನಲ್ಲಿ ರೇಣುಕಾಚಾರ್ಯಗೆ ಶಾಕ್ – ನೀತಿ ಸಂಹಿತೆ ಉಲ್ಲಂಘನೆ ಕೇಸ್?

    ಬೆಂಗಳೂರು: ಶಾಸಕ ಎಂ.ಪಿ ರೇಣುಕಾಚಾರ್ಯ (MP Renukacharya) ಅವರಿಗೆ ಚುನಾವಣಾಧಿಕಾರಿಗಳು ಭಾನುವಾರ ಬಿಸಿ ಮುಟ್ಟಿಸಿದ್ದಾರೆ.

    ಕೇಂದ್ರ ಚುನಾವಣಾ ಆಯೋಗವು (Election Commission of India) ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ದಿನಾಂಕ ಪ್ರಕಟಿಸುತ್ತಿದ್ದಂತೆ, ನೀತಿ ಸಂಹಿತೆ (Code Of Conduct) ಜಾರಿಗೊಂಡಿದೆ. ಇದರ ಹೊರತಾಗಿಯೂ ರೇಣುಕಾಚಾರ್ಯ ಅವರು ಚುನಾವಣಾಧಿಕಾರಿಗಳ ಅನುಮತಿಯಿಲ್ಲದೆ ಭಾನುವಾರ ಬೆಂಗಳೂರಿನ (Bengaluru) ಗುರುರಾಜ ಕಲ್ಯಾಣಮಂಟಪದಲ್ಲಿ ಸಭೆ ನಡೆಸಿದ್ದಾರೆ. ಇದನ್ನೂ ಓದಿ: ಮತ್ತೆ ರಾಜ್ಯಕ್ಕೆ ಮೋದಿ – ಕಾಂಗ್ರೆಸ್‌, ಜೆಡಿಎಸ್‌ ಭದ್ರಕೋಟೆಯಲ್ಲೇ ನಡೆಯಲಿದೆ ಸಮಾವೇಶ

    ಸಭೆ ನಡೆಸಲು ಚುನಾವಣಾ ಆಯೋಗ ಹಾಗೂ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಗುರುರಾಜ ಕಲ್ಯಾಣ ಮಂಟಪಕ್ಕೆ ಎಂಟ್ರಿ ಕೊಟ್ಟು ಕಾರ್ಯಕ್ರಮ ನಿಲ್ಲಿಸಲು ಮುಂದಾಗಿದ್ದಾರೆ. ಅಧಿಕಾರಿಗಳು ಭೇಟಿ ನೀಡಿದ ಬಳಿಕವೂ ರೇಣುಕಾಚಾರ್ಯ ಅವರು ಮಾತು ಮುಂದುವರಿಸಲು ಯತ್ನಿಸಿದಾಗ ಅಧಿಕಾರಿಗಳು ಮೈಕ್ ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ರೇಣುಕಾಚಾರ್ಯ ಅವರು ಸರ್ ಇರಿ ಸ್ವಲ್ಪ ಇರಿ ಅಂತಾ ಭಾಷಣ ಮುಂದುವರಿಸಿದ್ದಾರೆ. ಬಳಿಕ ನೆರೆದಿದ್ದ ಸಭೀಕರಿಗೆ ನೀತಿ ಸಂಹಿತೆ ಉಲ್ಲಂಘನೆಯಾಗುತ್ತೆ ಅಂತಾ ಹೇಳಿ ಕಾರ್ಯಕ್ರಮವನ್ನ ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ.

    ಸಭೆಯ ಸಂಪೂರ್ಣ ವೀಡಿಯೋ ಮಾಡಿಕೊಂಡಿರುವ ಚುನಾವಣಾಧಿಕಾರಿಗಳು ನೀತಿ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆ ಕೇಸ್ ಹಾಕಲು ಸಿದ್ಧತೆ ನಡೆಸಿದ್ದಾರೆ. ಇದನ್ನೂ ಓದಿ: ಸ್ಮಶಾನದಲ್ಲಿ ಪೂಜೆ ಮಾಡಿ ಚುನಾವಣಾ ಪ್ರಚಾರ ವಾಹನಕ್ಕೆ ಚಾಲನೆ: ಸತೀಶ್‌ ಜಾರಕಿಹೊಳಿ‌

  • ಗುಬ್ಬಿ ಮೇಲೆ ಬ್ರಹ್ಮಾಸ್ತ್ರ-ಗೃಹ ಸಚಿವರು ಕಾರು ನಿಲ್ಲಿಸದಿದ್ದರೂ ಪೇದೆಗಳಿಗೆ ಶಿಕ್ಷೆ

    ಗುಬ್ಬಿ ಮೇಲೆ ಬ್ರಹ್ಮಾಸ್ತ್ರ-ಗೃಹ ಸಚಿವರು ಕಾರು ನಿಲ್ಲಿಸದಿದ್ದರೂ ಪೇದೆಗಳಿಗೆ ಶಿಕ್ಷೆ

    -ನೀತಿ ಸಂಹಿತಿ ಉಲ್ಲಂಘಿಸಿದ್ದು ಸಚಿವರು, ಪೇದೆಗಳಿಗೆ ಅಮಾನತು ಶಿಕ್ಷೆ

    ಮಂಡ್ಯ: ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರ ಕಾರ್ ತಪಾಸಣೆ ನಡೆಸಿಲ್ಲ ಎಂದು ಕರ್ತವ್ಯ ಲೋಪ ಆರೋಪದಡಿ ಇಬ್ಬರು ಪೇದೆಗಳನ್ನು ಎಸ್‍ಪಿ ಪರಶುರಾಮ್ ಅಮಾನತು ಮಾಡಿದ್ದಾರೆ.

    ಶ್ರೀನಿವಾಸ್ ಮತ್ತು ಗೌರಮ್ಮ ಅಮಾನುತುಗೊಂಡ ಮದ್ದೂರು ಸಂಚಾರಿ ಠಾಣೆ ಪೇದೆಗಳು. ನವೆಂಬರ್ 20ರಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ನಿಡಘಟ್ಟ ಸಮೀಪದ ಚೆಕ್ ಪೋಸ್ಟ್ ಬಳಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ತೆರಳುತ್ತಿದ್ದರು. ಈ ವೇಳೆ ಪೇದೆ ಕಾರ್ ನಿಲ್ಲಿಸುವಂತೆ ಸೂಚಿಸಿದ್ದರು. ಪೇದೆ ಹೇಳದನ್ನ ಲೆಕ್ಕಿಸದ ಸಚಿವರು ಕಾರು ನಿಲ್ಲಿಸದೇ ಹೋಗಿದ್ದರು. ಈ ಸಂಬಂಧ ಗೃಹ ಸಚಿವರ ಕಾರು ಚಾಲಕನ ವಿರುದ್ಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಇದೀಗ ಮಂಡ್ಯ ಎಸ್‍ಪಿ, ಸಚಿವರ ಕಾರ್ ಪರಿಶೀಲನೆ ನಡೆಸಿಲ್ಲ ಎಂದು ಅಮಾನತುಗೊಳಿಸಿ ಆದೇಶ ನೀಡಿದ್ದಾರೆ. ನವೆಂಬರ್ 20ರಂದು ಎರಡು ಕಡೆ ಚೆಕ್ ಪೋಸ್ಟ್ ಸಿಬ್ಬಂದಿ ಬೆಂಗಳೂರಿಂದ ಮೈಸೂರಿನತ್ತ ತೆರಳುತ್ತಿದ್ದ ಬಸವರಾಜ್ ಅವರ ವಾಹವನ್ನು ತಡೆದಿದ್ದರು. ಸಚಿವರು ವಾಹನ ನಿಲ್ಲಿಸದೇ ನಿಡಘಟ್ಟ ಹಾಗೂ ಮಂಡ್ಯ ತಾಲೂಕಿನ ಹನಕೆರೆ ಬಳಿ ನೀತಿ ಸಂಹಿತೆ ಉಲ್ಲಂಘಿಸಿದ್ದರು. ಇದೀಗ ಮಾಡದ ತಪ್ಪಿಗೆ ಪೇದೆಗಳು ಅಮಾನತುಗೊಂಡಿದ್ದಾರೆ.

  • ಬೆಂಗಳೂರಿನ 4 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ – ಇಂದಿನಿಂದ ನೀತಿ ಸಂಹಿತೆ ಜಾರಿ

    ಬೆಂಗಳೂರಿನ 4 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ – ಇಂದಿನಿಂದ ನೀತಿ ಸಂಹಿತೆ ಜಾರಿ

    – ಇವಿಎಂ ಜೊತೆ ವಿವಿ ಪ್ಯಾಟ್ ಇರಲಿದೆ
    – 4 ಕ್ಷೇತ್ರಗಳಲ್ಲಿ 1361 ಮತಗಟ್ಟೆ ಸ್ಥಾಪನೆ

    ಬೆಂಗಳೂರು: ಸಿಲಿಕಾನ್ ಸಿಟಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ 5ರಂದು ಮತದಾನ ನಡೆಯಲಿದ್ದು, ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಿದೆ ಎಂದು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಬಿ.ಹೆಚ್.ಅನಿಲ್ ಕುಮಾರ್ ಮಾಹಿತಿ ನೀಡಿದರು.

    ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರದ ಕೆ.ಆರ್ ಪುರ, ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ಶಿವಾಜಿನಗರಗಳಿಗೆ ಡಿಸೆಂಬರ್ 5 ಮತದಾನ ನಡೆಯಲಿದ್ದು, ಚುನಾವಣಾ ಸಿದ್ಧತೆ ಆರಂಭಗೊಂಡಿದೆ. ನೀತಿ ಸಂಹಿತೆ ಸಹ ಇಂದಿನಿಂದಲೇ ಜಾರಿಯಾಗಲಿದೆ ಎಂದು ತಿಳಿಸಿದರು.

    ಉಪ ಚುನಾವಣೆಯಲ್ಲಿ ಈ ಬಾರಿಯೂ ಇವಿಎಂ ಜೊತೆ ವಿವಿ ಪ್ಯಾಟ್ ಕಡ್ಡಾಯವಾಗಿದ್ದು, ಬೆಂಗಳೂರಿನ ಆಯಾ ವಿಧಾನಸಭಾ ಕ್ಷೇತ್ರಗಳ ಭದ್ರತಾಕೊಠಡಿಯಲ್ಲೇ ಇವಿಎಂ ಶೇಖರಿಸಿಡಲಾಗಿದೆ. ಮಾದರಿ ನೀತಿ ಸಂಹಿತೆ ಇಂದಿನಿಂದ ಡಿ.11ರ ವರೆಗೆ ಜಾರಿಯಲ್ಲಿರಲಿದೆ. ಪ್ರತಿ ಮತಗಟ್ಟೆಗೆ ಒಬ್ಬ ಅಧ್ಯಕ್ಷಾಧಿಕಾರಿ, ಮೂವರು ಮತಗಟ್ಟೆ ಅಧಿಕಾರಿ ನೇಮಕವಾಗಿದ್ದಾರೆ. 4 ಕ್ಷೇತ್ರಗಳಿಗೆ ಒಟ್ಟು 5,988 ಚುನಾವಣಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಮೈಕ್ರೋ ಅಬ್ಸರ್ವರ್ಸ್ ಗಳನ್ನೂ ಮತದಾನ ಪ್ರಕ್ರಿಯೆಗೆ ನಿಯೋಜನೆ ಮಾಡಲಾಗಿದ್ದು, ಚುನಾವಣಾ ಸಿಬ್ಬಂದಿ ಹಾಗೂ ಮೈಕ್ರೋ ಅಬ್ಸರ್ವರ್ಸ್ ಗೆ ಎರಡು ಹಂತದಲ್ಲಿ ತರಬೇತಿ ನೀಡಲಾಗುತ್ತದೆ ಎಂದು ವಿವರಿಸಿದರು.

    ಉಪಚುನಾವಣೆ ದೂರುಗಳಿಗೆ ಸಂಬಂಧಿಸಿದಂತೆ ನಿಯಂತ್ರಣ ಕೊಠಡಿ ಸ್ಥಾಪನೆ ಮಾಡಲಾಗಿದೆ. ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದರೂ 080 22975561 ಅಥವಾ 88841 18033 ಗೆ ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ. ಚುನಾವಣಾ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಸಿಬ್ಬಂದಿ ಜೊತೆಗೂ ಸಭೆ ನಡೆಸಲಾಗುವುದು ಎಂದರು.

    ಇಂದಿನಿಂದ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ನಾಮಪತ್ರ ಸಲ್ಲಿಸಲು ನ.18 ಕೊನೆಯ ದಿನವಾಗಿದೆ. ನ.19 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನ.21 ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದೆ.

    ಡಿ.5 ರಂದು ಮತದಾನ ನಡೆಯಲಿದ್ದು, ಬೆಳಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಡಿ.9 ರಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ. ಡಿ.11ಕ್ಕೆ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.

    4 ಕ್ಷೇತ್ರಗಳಿಂದ ಈಗಾಗಲೇ 6 ನಾಮಪತ್ರ ಸಲ್ಲಿಕೆಯಾಗಿದ್ದು, ಕೆ.ಆರ್ ಪುರ ಕ್ಷೇತ್ರದಲ್ಲಿ 437 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಯಶವಂತಪುರ ಕ್ಷೇತ್ರದಲ್ಲಿ 461, ಮಹಾಲಕ್ಷ್ಮಿ ಲೇಔಟ್ 270, ಶಿವಾಜಿನಗರ 193 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 4 ಕ್ಷೇತ್ರದಲ್ಲಿ ಒಟ್ಟು 1361 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಕೆಆರ್ ಪುರ ಕ್ಷೇತ್ರದಲ್ಲಿ ಒಟ್ಟು 4,81,132, ಯಶವಂತಪುರದಲ್ಲಿ 4,75,759, ಮಹಾಲಕ್ಷ್ಮಿ ಲೇಔಟ್ ನಲ್ಲಿ 2,83,885, ಶಿವಾಜಿನಗರದಲ್ಲಿ 1,91,618 ಮತದಾರರಿದ್ದಾರೆ.

  • ಚುನಾವಣೆಯ ನಂತ್ರ ಮೊದಲ ಕ್ಯಾಬಿನೆಟ್: ಏನು ಚರ್ಚೆಯಾಗಬಹುದು?

    ಚುನಾವಣೆಯ ನಂತ್ರ ಮೊದಲ ಕ್ಯಾಬಿನೆಟ್: ಏನು ಚರ್ಚೆಯಾಗಬಹುದು?

    ಬೆಂಗಳೂರು: ಎರಡೂವರೆ ತಿಂಗಳ ಬಳಿಕ, ಲೋಕಸಭೆ ಚುನಾವಣೆ ನಂತರ ರಾಜ್ಯ ಸಚಿವ ಸಂಪುಟ ಸಭೆ ಇಂದು ನಡೆಯಲಿದೆ.

    ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಸಂಪುಟ ಸಭೆಯಲ್ಲಿ ಬರದ ವಿಚಾರ, ಬರ ಪರಿಹಾರ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಯಲಿದೆ. ಬರ ಪರಿಹಾರಕ್ಕಾಗಿ ಸಚಿವರ ತಂಡ ನೇಮಿಸಿ ಕಾರ್ಯಾಚರಣೆ ನಡೆಸಲು ಸೂಚಿಸುವ ಸಾಧ್ಯತೆಯಿದೆ.

    ನೀತಿ ಸಂಹಿತೆ ಸಡಿಲಿಸಿ ಬರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಚುನಾವಣಾ ಆಯೋಗ ಅನುಮತಿ ನೀಡಿದೆ. ಹೀಗಾಗಿ ಕೆಲ ತುರ್ತು ಕಾಮಗಾರಿಗಳಿಗಷ್ಟೇ ಅನುಮೋದನೆ ನೀಡಲು ಸಂಪುಟಕ್ಕೆ ಅಧಿಕಾರವಿದೆ. ಗ್ರಾಮೀಣಾಭಿವೃದ್ಧಿ, ಕಂದಾಯ, ಡಿಪಿಎಆರ್‍ಗೆ ಸಂಬಂಧಿಸಿದ ಇಲಾಖೆಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ. ಒಟ್ಟಾರೆ 52 ವಿಷಯಗಳ ಬಗ್ಗೆ ಚರ್ಚೆ ನಡೆಸಿ ಹಲವು ನಿರ್ಧಾರಗಳನ್ನ ಪೆಂಡಿಂಗ್ ಇಡುವ ಸಾಧ್ಯತೆಯಿದೆ.

    ಸಿಎಂ ಮೇಲೆ ಅಸಮಾಧಾನ:
    ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮೇಲೆ ಈಗ ಸಂಪುಟ ಸದಸ್ಯರು ಸಹ ಅಸಮಾಧಾನಗೊಂಡಿದ್ದಾರೆ ಎನ್ನುವ ವಿಚಾರ ಈಗ ತಿಳಿದು ಬಂದಿದೆ. ಸಿಎಂ ಅವರಿಗೆ ದೇವಾಲಯಗಳನ್ನು ಸುತ್ತಲೂ ಸಮಯವಿದೆ. ಆದರೆ ನಮ್ಮ ಇಲಾಖೆಯ ಸಮಸ್ಯೆಯ ಬಗ್ಗೆ ಚರ್ಚೆ ಮಾಡಲು ಸಮಯವಿಲ್ಲ ಎಂದು ಕೆಲ ಸಚಿವರು ತಮ್ಮ ಆಪ್ತರ ಜೊತೆ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಕೆಲ ಸಚಿವರ ಜೊತೆ ಅವರ ಖಾತೆಗೆ ಸಂಬಂಧಿಸಿದ ವಿಚಾರದ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಯಿದೆ.

  • ಹೆಲಿಕಾಪ್ಟರ್‌ನಲ್ಲಿದ್ದ ಬಿಎಸ್‍ವೈ ಬ್ಯಾಗ್ ಕೆಳಗಿಳಿಸಿ ಪರಿಶೀಲನೆ

    ಹೆಲಿಕಾಪ್ಟರ್‌ನಲ್ಲಿದ್ದ ಬಿಎಸ್‍ವೈ ಬ್ಯಾಗ್ ಕೆಳಗಿಳಿಸಿ ಪರಿಶೀಲನೆ

    ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೂ ಇಂದು ನೀತಿ ಸಂಹಿತೆಯ ಬಿಸಿ ತಟ್ಟಿದೆ.

    ಶಿವಮೊಗ್ಗದಿಂದ ಚಳ್ಳಕೆರೆಗೆ ಪ್ರಚಾರ ಸಭೆಗೆಂದು ಹೆಲಿಕಾಪ್ಟರ್ ಮೂಲಕ ಯಡಿಯೂರಪ್ಪ ಹೊರಟಿದ್ದರು. ಆದರೆ ಅವರ ಲಗೇಜನ್ನು ಚುನಾವಣಾಧಿಕಾರಿಗಳು ಅಮೂಲಾಗ್ರವಾಗಿ ಪರಿಶೀಲನೆ ನಡೆಸಿದ್ದಾರೆ. ಯಡಿಯೂರಪ್ಪ ಹೆಲಿಪ್ಯಾಡ್‍ಗೆ ಬಂದು ಹೆಲಿಕಾಪ್ಟರ್ ಏರಿ ಕುಳಿತ ನಂತರ ಚುನಾವಣಾ ಅಧಿಕಾರಿಗಳು ಬಂದಿದ್ದಾರೆ.

    ಹೆಲಿಕಾಪ್ಟರ್‌ನಲ್ಲಿಟ್ಟಿದ್ದ ಯಡಿಯೂರಪ್ಪ ಬ್ಯಾಗ್‍ಗಳನ್ನು ಮತ್ತೆ ಕೆಳಗಿಳಿಸಿದ್ದಾರೆ. ನಂತರ ಬ್ಯಾಗ್ ಒಳಗಿದ್ದ ಬಟ್ಟೆ – ಬುಕ್ ಇನ್ನಿತರ ವಸ್ತುಗಳನ್ನು ಹೊರ ತೆಗೆದು ಫ್ಲೈಯಿಂಗ್ ಸ್ಕ್ವಾಡ್ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ಬಳಿಕೆ ಮತ್ತೆ ವಸ್ತುಗಳನ್ನು ಒಳಗಡೆ ಇಟ್ಟಿದ್ದಾರೆ. ಇಷ್ಟು ಪ್ರಕ್ರಿಯೆ ಸುಮಾರು 10 ನಿಮಿಷಗಳ ಕಾಲ ನಡೆದಿದೆ. ಅಷ್ಟು ಹೊತ್ತಿನವರೆಗೂ ಬಿ.ಎಸ್.ಯಡಿಯೂರಪ್ಪ ಅವರು ಹೆಲಿಕಾಪ್ಟರ್ ನಲ್ಲೇ ಕುಳಿತಿದ್ದರು.

  • ಪ್ರಚಾರದ ಭರದಲ್ಲಿ ಸಿಎಂರಿಂದ ನೀತಿ ಸಂಹಿತೆ ಉಲ್ಲಂಘನೆ!

    ಪ್ರಚಾರದ ಭರದಲ್ಲಿ ಸಿಎಂರಿಂದ ನೀತಿ ಸಂಹಿತೆ ಉಲ್ಲಂಘನೆ!

    ತುಮಕೂರು: ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಹಲವು ಯೋಜನೆಗಳ ಘೋಷಣೆ ಮಾಡುವ ಮೂಲಕ ಸಿಎಂ ಕುಮಾರಸ್ವಾಮಿ ಅವರು ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

    ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರು, ಒಣಗಿ ಹೋದ ತೆಂಗಿನ ಮರಕ್ಕೆ 400 ರೂ ಪರಿಹಾರ ಈಗಾಗಲೇ ಕೊಡುತಿದ್ದೇವೆ. ಅದು ಸಾಕಾಗಲ್ಲ ಎಂದು ಹೇಳಿದ್ದರು.

    ಜಯಚಂದ್ರ ಅವರ ಮಾತಿಗೆ ಪ್ರತಿಕ್ರಿಯಿಸಿದ ಸಿಎಂ, ಜಯಚಂದ್ರ ಅವರು 400 ರಿಂದ 1000 ರೂ. ಗೆ ಏರಿಕೆ ಮಾಡಬೇಕು ಅಂದಿದ್ದಾರೆ. ಆ ಕುರಿತು ಚುನಾವಣೆ ಮುಗಿದ ಬಳಿಕ ನೋಡೋಣ ಎಂದು ಪರೋಕ್ಷವಾಗಿ 1000 ರೂ. ಕೊಡುವ ಭರವಸೆ ಸಿಎಂ ನೀಡಿದರು. ಹಾಗೆಯೇ ಭದ್ರಾ ಮೇಲ್ದಂಡೆ ನೀರನ್ನು ಶಿರಾ ಚಿಕ್ಕನಾಯಕನಹಳ್ಳಿಗೆ ಹರಿಸುತ್ತೇನೆ. 8 ರಿಂದ 10 ತಿಂಗಳ ಅವಕಾಶ ಕೊಡಿ. ಚಿಕ್ಕನಾಯಕನಹಳ್ಳಿ ತಾಲೂಕಿನ ಕೆರೆಕಟ್ಟೆ ತುಂಬಿಸುವ ಕೆಲಸ ಮಾಡಬೇಕಿದೆ. ನೀತಿ ಸಂಹಿತೆ ಇರುವುದರಿಂದ ಹೆಚ್ಚಿಗೆ ಹೇಳಿಕೆ ಆಗೋಲ್ಲ ಎಂದಿದ್ದರು.

    ಹೀಗಾಗಿ ಚುನಾವಣಾ ವೇಳೆಯಲ್ಲಿ ಈ ಆಶ್ವಾಸನೆಗಳನ್ನು ನೀಡುವ ಮೂಲಕ ಸಿಎಂ ಅವರು ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ  ಎಂದು ಕುಮಾರಸ್ವಾಮಿ ವಿರುದ್ಧ ಆರೋಪ ವ್ಯಕ್ತವಾಗುತ್ತಿದೆ.

  • ತೇಜಸ್ವಿ ಸೂರ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‍ನಿಂದ ದೂರು

    ತೇಜಸ್ವಿ ಸೂರ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‍ನಿಂದ ದೂರು

    ಬೆಂಗಳೂರು: ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

    ಪ್ರಧಾನಿ ನರೇಂದ್ರ ಮೋದಿ ಜೊತೆಗೆ ನೀವು ನಿಂತರೆ ಭಾರತೀಯರು. ಒಂದು ವೇಳೆ ಮೋದಿ ಅವರ ವಿರುದ್ಧ ನಿಂತರೆ ನೀವು ದೇಶ ವಿರೋಧಿಗಳು ಎಂದು ತೇಜಸ್ವಿ ಸೂರ್ಯ ಭಾಷಣ ಮಾಡಿದ್ದರು. ಕಾಂಗ್ರೆಸ್ ಈ ಹೇಳಿಕೆಯ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

    ಭಾಷಣದಲ್ಲಿ ಏನಿದೆ?
    ಕಳೆದ 60 ವರ್ಷಗಳಿಂದ ಪ್ರಜೆಗಳಲ್ಲಿರುವ ದೇಶಪ್ರೇಮವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಒಂದು ವೇಳೆ ಅವರು ದೇಶಪ್ರೇಮಿಗಳಾಗಿದ್ದರೆ ಭಾರತವನ್ನು ಬಡರಾಷ್ಟ್ರವನ್ನಾಗಿ ಇರಲು ಬಿಡುತ್ತಿರಲಿಲ್ಲ. ಆದರೆ ಈಗ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಲ್ಲರೂ ಒಂದಾಗಿ ನಿಂತಿದ್ದಾರೆ. ಪ್ರಧಾನಿ ಮೋದಿ ವಿರುದ್ಧ ನಿಲ್ಲುವವರು ಯಾರಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಆಡಳಿತಕ್ಕೆ ಬಂದರೆ ಕಾಂಗ್ರೆಸ್ ಸರ್ಕಾರ ಮತ್ತೆ ಆಡಳಿತಕ್ಕೆ ಬರುವುದಿಲ್ಲ. ಮೋದಿ ಪರ ನೀವು ನಿಂತರೆ ಭಾರತೀಯರು. ಒಂದು ವೇಳೆ ಮೋದಿ ಅವರ ವಿರುದ್ಧ ನಿಂತರೆ ನೀವು ದೇಶ ವಿರೋಧಿಗಳು ಎಂದು ತೇಜಸ್ವಿ ಸೂರ್ಯ ಭಾಷಣ ಮಾಡಿದ್ದರು. ತಮ್ಮ ಭಾಷಣದಲ್ಲಿ ಕುಟುಂಬ ರಾಜಕಾರಣದ ವಿರುದ್ಧವೂ ವಾಗ್ದಾಳಿ ನಡೆಸಿದ್ದರು.

    https://twitter.com/Tejasvi_Surya/status/1108973963747614720

  • ನೀತಿ ಸಂಹಿತೆ ಅರಿವಿಲ್ಲದ ಅಧಿಕಾರಿಗಳಿಂದ ಗಣ್ಯ ವ್ಯಕ್ತಿಗಳಿಗೆ ಅಗೌರವ

    ನೀತಿ ಸಂಹಿತೆ ಅರಿವಿಲ್ಲದ ಅಧಿಕಾರಿಗಳಿಂದ ಗಣ್ಯ ವ್ಯಕ್ತಿಗಳಿಗೆ ಅಗೌರವ

    ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಅರಿವಿಲ್ಲದೆ ಅಧಿಕಾರಿಗಳು, ಗ್ರಾಮ ಪಂಚಾಯ್ತಿ ಕಚೇರಿಯಲ್ಲಿದ್ದ ಗಣ್ಯರ ಭಾವಚಿತ್ರವನ್ನು ತೆರವುಗೊಳಿಸಿದ ಘಟನೆ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ನಡೆದಿದೆ.

    ಸೋಲದೇವನಹಳ್ಳಿಯ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಗಣ್ಯರು, ಸ್ವಾತಂತ್ರ್ಯ ಹೋರಾಟಗಾರರು, ಮಹಾನ್ ಪುರುಷರ ಭಾವಚಿತ್ರಗಳನ್ನು ಹಾಕಲಾಗಿತ್ತು. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಅಧಿಕಾರಿಗಳು ಮಹಾತ್ಮ ಗಾಂಧೀಜಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಭಾವಚಿತ್ರಗಳನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ.

    ಚುನಾವಣೆ ನೀತಿ ಸಂಹಿತೆಯ ಬಗ್ಗೆ ಅಧಿಕಾರಿಗಳಿಗೆ ಅರಿವಿಲ್ಲ. ಹೀಗಾಗಿ ದೇಶದ ಮಹಾನ್ ವ್ಯಕ್ತಿಗಳಿಗೆ ಅಗೌರವ ತೋರಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಕೊಡಗಿನಲ್ಲಿ ಮದ್ವೆಗೆ ತಟ್ಟಿದ ಚುನಾವಣಾ ನೀತಿಸಂಹಿತೆ!

    ಕೊಡಗಿನಲ್ಲಿ ಮದ್ವೆಗೆ ತಟ್ಟಿದ ಚುನಾವಣಾ ನೀತಿಸಂಹಿತೆ!

    ಮಡಿಕೇರಿ: ತನ್ನ ಆಚಾರ, ವಿಚಾರ, ಪದ್ಧತಿ ಪರಂಪರೆಯಿಂದ ಪ್ರಸಿದ್ಧಯಾಗಿರುವ ಕೊಡಗಿನ ಜನತೆಯ ಮದುವೆ ಸಮಾರಂಭಕ್ಕೆ ನೀತಿಸಂಹಿತೆ ತಟ್ಟಿದೆ.

    ಸದ್ಯ ವಿವಾಹವಾಗಲು ಚೈತ್ರಕಾಲವಾಗಿರುವುದರಿಂದ ಜಿಲ್ಲೆಯಲ್ಲಿ ಮದುವೆಯ ಭರಾಟೆ ಜೋರಾಗಿದೆ. ಆದರೆ ಹೀಗೆ ನಡೆಯುತ್ತಿರುವ ಮದುವೆಗಳಿಗೆ ಒಂದು ರೀತಿಯ ಸಂಕಷ್ಟ ಎದುರಾಗಿದೆ. ಕೊಡಗಿನಲ್ಲಿ ಪ್ರತಿ ಮದುವೆ ಶುಭ ಸಮಾರಂಭಗಳಿಗೆ ಮದ್ಯಪಾನ ಮಾಡುವುದು ಇಲ್ಲಿನ ಸಂಸ್ಕೃತಿಯಲ್ಲಿ ಒಂದು ಭಾಗವೇ ಆಗಿ ಹೋಗಿದೆ. ಆದರೆ ಚುನಾವಣಾ ಆಯೋಗದ ನೀತಿ ಸಂಹಿತೆ ಕೊಡಗಿನ ಜನರಿಗೆ ತಲೆನೋವಾಗಿ ಪರಿಣಮಿಸಿದೆ.

    ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನದಂತೆ ಈಗಾಗಲೇ ಅಬಕಾರಿ ಇಲಾಖೆಯಿಂದ ಕಲ್ಯಾಣ ಮಂಟಪಗಳಿಗೆ ಲಿಖಿತ ನೋಟಿಸ್ ಜಾರಿಗೊಳಿಸಿದ್ದು, ಕಲ್ಯಾಣ ಮಂಟಪ ಅಥವಾ ಶುಭ ಸಮಾರಂಭ ಸ್ಥಳಗಳಲ್ಲಿ ಮದ್ಯ ಸೇವನೆಗೆ ಅವಕಾಶ ನೀಡದಂತೆಯೂ, ಮದ್ಯ ಸಂಗ್ರಹ ಮಾಡಿ ಇಟ್ಟುಕೊಳ್ಳದಂತೆಯೂ ನಿರ್ದೇಶಿಸಿದೆ. ಮದುವೆ ಸೇರಿದಂತೆ ಶುಭ ಸಮಾರಂಭಗಳಲ್ಲಿ ಸಾಮಾನ್ಯವಾಗಿ ಕಿಕ್ಕೇರಿಸಿಕೊಳ್ಳುತ್ತಿದ್ದ ಮಂದಿ ಈ ನಿಯಮದಿಂದ ತುಂಬಾನೇ ಬೇಸರ ಮಾಡಿಕೊಳ್ಳುವಂತಾಗಿದೆ ಎಂದು ಅಬಕಾರಿ ಉಪ ನಿರೀಕ್ಷಕ ವೀರಣ್ಣ ಹೇಳಿದ್ದಾರೆ.

    ಚುನಾವಣೆ ನೀತಿ ಸಂಹಿತೆ ನಡುವೆಯೂ ಮದ್ಯ ಬಳಕೆಗೆ ಅವಕಾಶ ಬೇಕು ಎಂದ್ರೆ ಒಂದು ದಿನಕ್ಕೆ 11,500ರೂ ಹಣ ಸಂದಾಯ ಮಾಡಿ ಪರವಾನಿಗೆ ಪಡೆಯಬೇಕು ಎಂದು ಆದೇಶ ಮಾಡಲಾಗಿದೆ. ಈ ಮೊತ್ತ ಸರ್ಕಾರಕ್ಕೆ ಜಮೆಯಾಗಲಿದ್ದು, ವಾಪಸ್ ಪಡೆಯಲು ಅವಕಾಶ ಇರುವುದಿಲ್ಲ. ಚುನಾವಣೆ ಘೋಷಣೆಗೆ ಮುನ್ನವೇ ಜಿಲ್ಲೆಯ ಅನೇಕ ಕಡೆಗಳಲ್ಲಿ ವಿವಾಹ ಸಮಾರಂಭಗಳು ನಿಶ್ಚಯ ಆಗಿವೆ.

    ಸಾಮಾನ್ಯವಾಗಿ ಮದುವೆಯ ಮುನ್ನ ದಿನವಾದ ಚಪ್ಪರ ಹಾಗೂ ಮದುವೆ ದಿನ ಮದ್ಯವನ್ನು ನೀಡುವುದು ಹಿಂದಿನಿಂದಲೂ ನಡೆದುಕೊಂಡ ಬಂದ ಸಂಪ್ರದಾಯ. ಹೀಗಾಗಿ ಸದ್ಯ 2 ದಿನಕ್ಕೆ ಪರವಾನಿಗೆ ಬೇಕು ಅಂದ್ರೆ 23 ಸಾವಿರ ಹಣವನ್ನ ಅಬಕಾರಿ ಇಲಾಖೆಗೆ ಕಟ್ಟಬೇಕಾಗುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಮದುವೆ ಮಂಟಪಗಳ ಬಾಡಿಗೆ ಹಾಗೂ ಇತರ ಖರ್ಚು ವೆಚ್ಚಗಳನ್ನು ಭರಿಸಿ ಶುಭ ಸಮಾರಂಭಗಳನ್ನು ನೆರವೇರಿಸಲು ಸಾಮಾನ್ಯ ಕುಟುಂಬಗಳು ಬವಣೆ ಪಡುತ್ತಿರುವಾಗ, ಹೆಚ್ಚುವರಿ ಸುಮಾರು 25 ಸಾವಿರ ಹಣವನ್ನ ಪಾವತಿಸುವುದು ನಮಗೆ ಕಷ್ಟವಾಗುತ್ತಿದೆ ಎಂದು ಸ್ಥಳೀಯ ನವೀನ್ ತಿಳಿಸಿದ್ದಾರೆ.

  • ರೋಗಿಗಳಿಗೆ ತಟ್ಟಿದ ಚುನಾವಣಾ ಬಿಸಿ- ಉಚಿತ ಚಿಕಿತ್ಸೆಗೆ ನೀತಿಸಂಹಿತೆ ಅಡ್ಡಿ

    ರೋಗಿಗಳಿಗೆ ತಟ್ಟಿದ ಚುನಾವಣಾ ಬಿಸಿ- ಉಚಿತ ಚಿಕಿತ್ಸೆಗೆ ನೀತಿಸಂಹಿತೆ ಅಡ್ಡಿ

    ಬೆಂಗಳೂರು: ಒಂದೆಡೆ ರಾಜ್ಯದಲ್ಲಿ ಚುನಾವಣಾ ಕಾವು ರಂಗೇರುತ್ತಾ ಇದೆ. ಮತ್ತೊಂದೆಡೆ ಹೊಸ ಯೋಜನೆ, ಹೊಸ ಕಾಮಗಾರಿಗೆ ನೀತಿ ಸಂಹಿತೆಯಿಂದಾಗಿ ಬ್ರೇಕ್ ಬಿದ್ದಿದೆ. ಇದರ ನಡುವೆ ಆಸ್ಪತ್ರೆಗೆ ದಾಖಲಾದ ರೋಗಿಯೊಬ್ಬರು ಕಣ್ಣೀರು ಹಾಕುತ್ತಾ ಪರದಾಡೋ ಸ್ಥಿತಿ ನಿರ್ಮಾಣವಾಗಿದೆ.

    ಹೌದು. ಬಿಪಿಎಲ್ ಕಾರ್ಡ್ ಮತ್ತು ಆರೋಗ್ಯ ಭಾಗ್ಯ ಕಾರ್ಡನ್ನ ನಂಬಿ ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ನೀತಿ ಸಂಹಿತೆಯಿಂದಾಗಿ ಚಿಕಿತ್ಸೆ ಸಿಗುತ್ತಿಲ್ಲ. ಕಳೆದ 20 ದಿನಗಳ ಹಿಂದೆ ಬಾಣಸವಾಡಿಯ ಚಂದ್ರು ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆಗಾಗಿ ಅಲ್ಲಿನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯವರೇನೋ ಶಸ್ತ್ರ ಚಿಕಿತ್ಸೆ ಮಾಡ್ತೀವಿ ಕಾರ್ಡ್ ಇದ್ಯಯಲ್ಲ ಎಂದು ಮೊದಲು ಭರವಸೆ ಕೊಟ್ಟಿದ್ದಾರೆ. ಆದ್ರೆ ಬಿಲ್ಲಿಂಗ್ ಟೈಂನಲ್ಲಿ ಆನ್‍ಲೈನ್‍ನಲ್ಲಿ ನೋಡಿದಾಗ ಬಿಪಿಎಲ್‍ಕಾರ್ಡ್‍ನಲ್ಲಿ ವ್ಯಕ್ತಿಯ ಹೆಸರು ನಾಪತ್ತೆಯಾಗಿದೆ. ಸರಿ ಇನ್ನೇನು ತಿದ್ದುಪಡಿ ಮಾಡಿಕೊಂಡು ಬರೋಣವೆಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ರೋಗಿಯ ಸಂಬಂಧಿಕರು ಹೋದ್ರೆ ಚುನಾವಣಾ ಸಂದರ್ಭದಲ್ಲಿ ಯಾವ ಲೋಪದೋಷವನ್ನು ಸರಿಮಾಡಲು ಸಾಧ್ಯವೇ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹೀಗಾಗಿ ರೋಗಿ ಚಿಕಿತ್ಸೆ ಸಿಗದೆ ಪರದಾಡುವಂತಾಗಿದೆ.


    ಅತ್ತ ಲಕ್ಷ ಲಕ್ಷ ಬಿಲ್ ಕಟ್ಟಲಾರದೇ ರೋಗಿಯ ಕಡೆಯವರು ಪರದಾಟ ಪಟ್ಟಿದ್ದಾರೆ. ಈ ಬಗ್ಗೆ ಆಹಾರ ಮತ್ತು ನಾಗರಿಕ ಸರಬಾರಜು ಇಲಾಖೆಯವರನ್ನು ಕೇಳಿದ್ರೆ, ನಾವು ನೀತಿಸಂಹಿತೆ ಮುಗಿದ ಮೇಲೆ ಪಡಿತರ ಚೀಟಿ ದೋಷವನ್ನು ಸರಿಪಡಿಸಬಹುದು. ಈ ಬಗ್ಗೆ ನೋಟಿಸ್ ಬೋರ್ಡ್ ಕೂಡ ಹಾಕಲಾಗಿದೆ ಎಂದು ಇಲಾಖೆಯ ಪೂರ್ವವಲಯ ಉಪ ನಿರ್ದೇಶಕ ನಾಗಭೂಷಣ್ ಹೇಳಿದ್ದಾರೆ.

    ರಾಜಕೀಯ ಆಸೆ ಆಮಿಷಗಳಿಗೆ ಬ್ರೇಕ್ ಹಾಕಲು ನೀತಿ ಸಂಹಿತೆ ಇದೆ. ಆದ್ರೆ ಕೆಲವೊಮ್ಮೆ ಈ ನಿಯಮಗಳು ಸಾಮಾನ್ಯ ಜನರಿಗೆ ಅದೆಷ್ಟು ತೊಂದರೆ ಕೊಡ್ತವೆ ಅನ್ನೋದಕ್ಕೆ ಈ ಘಟನೆಯೇ ನಿದರ್ಶನವಾಗಿದೆ.