Tag: ನಿಷೇಧ

  • ರಂಗನತಿಟ್ಟು ಪಕ್ಷಿಧಾಮದಲ್ಲಿ ಮತ್ತೆ ಬೋಟಿಂಗ್ ಸ್ಥಗಿತ!

    ರಂಗನತಿಟ್ಟು ಪಕ್ಷಿಧಾಮದಲ್ಲಿ ಮತ್ತೆ ಬೋಟಿಂಗ್ ಸ್ಥಗಿತ!

    ಮಂಡ್ಯ: ಕೆಆರ್‌ಎಸ್‌ ಅಣೆಕಟ್ಟೆಯಿಂದ ಹೊರ ಹರಿವು 26 ಸಾವಿರ ಕ್ಯೂಸೆಕ್‍ಗೆ ಏರಿಕೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ಸ್ಥಗಿತಗೊಳಿಸಲಾಗಿದೆ.

    ಕಳೆದ ಹಲವು ದಿನಗಳ ಹಿಂದೆ ಕಾವೇರಿ ನದಿಯಲ್ಲಿ ಪ್ರವಾಹದ ಭೀತಿ ಉಂಟಾಗಿದ್ದರಿಂದ ರಂಗನತಿಟ್ಟು ಪಕ್ಷಿಧಾಮಕ್ಕೆ ಪ್ರವಾಸಿಗರಿಗೆ ನಿಷೇಧ ಹೇರಿ, ಬೋಟಿಂಗ್ ಸ್ಥಗಿತಗೊಳಿಸಲಾಗಿತ್ತು. ಆದರೆ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ಎರಡು ದಿನಗಳ ಹಿಂದಷ್ಟೆ ಬೋಟಿಂಗ್ ಪುನರಾರಂಭ ಮಾಡಲಾಗಿತ್ತು.

    ಇದೀಗ ಕಾವೇರಿ ನದಿಯಲ್ಲಿ ಮತ್ತೆ ಹೊರಹರಿವು 26 ಸಾವಿರ ಕ್ಯೂಸೆಕ್‍ಗೆ ಹೆಚ್ಚಳವಾಗಿರುವುದರಿಂದ ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್‍ಗೆ ಮಾತ್ರ ನಿಷೇಧ ಹೇರಲಾಗಿದೆ. ಹೀಗಾಗಿ ಮುಂಜಾಗ್ರತವಾಗಿ ಈ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಆದರೆ ಎಂದಿನಂತೆ ಪಕ್ಷಿಧಾಮ ವೀಕ್ಷಿಸಲು ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎನ್‍ಜಿಟಿ ಆದೇಶ ರದ್ದು- ಜಂತರ್-ಮಂತರ್ ನಲ್ಲಿ ಪ್ರತಿಭಟನೆಗೆ ಅವಕಾಶ: ಸುಪ್ರೀಂ ಕೋರ್ಟ್

    ಎನ್‍ಜಿಟಿ ಆದೇಶ ರದ್ದು- ಜಂತರ್-ಮಂತರ್ ನಲ್ಲಿ ಪ್ರತಿಭಟನೆಗೆ ಅವಕಾಶ: ಸುಪ್ರೀಂ ಕೋರ್ಟ್

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆಗೆ ಹೆಸರಾಗಿದ್ದ ಜಂತರ್-ಮಂತರ್ ನಲ್ಲಿ ಯಾವುದೇ ಪ್ರತಿಭಟನೆಯನ್ನು ನಡೆಸದಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್‍ಜಿಟಿ) ಹೇರಿದ್ದ ನಿಷೇಧವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿ ಮಹತ್ವದ ಆದೇಶ ಪ್ರಕಟಿಸಿದೆ.

    ಜಂತರ್-ಮಂತರ್ ನಲ್ಲಿ ಪ್ರತಿಭಟನೆಗೆ ತಡೆ ಹಾಕಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ ಹಾಗೂ ಅಶೋಕ್ ಭೂಷಣ್ ಅವರಿದ್ದ ದ್ವಿಸದಸ್ಯ ಪೀಠ, ಪ್ರತಿಭಟನೆ ನಡೆಸುವುದು ನಾಗರಿಕರ ಹಕ್ಕು ಆಗಿದ್ದು, ಶಾಂತಿಯುತ ಪ್ರತಿಭಟನೆಗೆ ಸಾರ್ವಜನಿಕರಿಗೆ ಅವಕಾಶವಿದೆ. ಜಂತರ್-ಮಂತರ್ ಹಾಗೂ ಬೋಟ್ ಕ್ಲಬ್ ಬಳಿ ನಡೆಯುವ ಪ್ರತಿಭಟನೆಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಸಾಧ್ಯವಿಲ್ಲವೆಂದು ಪೀಠ ತಿಳಿಸಿದೆ.

    ಯಾವುದೇ ಕಾರಣಕ್ಕೂ ಪ್ರತಿಭಟನೆಗಳನ್ನು ನಿರ್ಬಂಧಿಸುವ ಹಕ್ಕು ಯಾರಿಗೂ ಇರುವುದಿಲ್ಲ ಎಂದು ಅಭಿಪ್ರಾಯಟ್ಟಿರುವ ಕೋರ್ಟ್ ಈ ಪ್ರದೇಶಗಳಲ್ಲಿ ಧರಣಿ ನಡೆಸುವ ಸಂಬಂಧ ಮಾರ್ಗಸೂಚಿಗಳನ್ನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

    ಏನಿದು ಪ್ರಕರಣ?
    ಶಾಂತಿ ಮತ್ತು ಆರೋಗ್ಯ ಪೂರ್ಣ ವಾತಾವರಣದಲ್ಲಿ ಜೀವಿಸಬೇಕು. ಆದರೆ ಜಂತರ್-ಮಂತರ್ ಗಳಲ್ಲಿ ನಡೆಯುವ ಪ್ರತಿಭಟನೆಗಳಲ್ಲಿ ಬಳಸುವ ಧ್ವನಿವರ್ಧಕಗಳಿಂದ ನಿದ್ದೆ ಮಾಡುವ ಮತ್ತು ಬದುಕುವ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ. ಹೀಗಾಗಿ ಈ ಸ್ಥಳದಲ್ಲಿ ಶಾಂತಿ ನೆಲೆಸಬೇಕಾದರೆ ಪ್ರತಿಭಟನೆಗಳನ್ನು ನಿಷೇಧಿಸಬೇಕು ಎಂದು ವರುಣ್ ಸೇಠ್ ಎಂಬವರು ಎನ್‍ಜಿಟಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿದ ಎನ್‍ಜಿಟಿ 2017ರ ಅಕ್ಟೋಬರ್ ನಲ್ಲಿ ಶಬ್ದ ಮಾಲಿನ್ಯದ ಹಿನ್ನೆಲೆಯಲ್ಲಿ ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆಗಳನ್ನು ನಿಷೇಧಿಸಿತ್ತು.

    ಪ್ರತಿಭಟನೆಗಳಿಗೆ ರಾಮಲೀಲಾ ಮೈದಾನ ಅಥಾನ ಅಜ್ಮೀರಿ ಗೇಟ್ ಪರ್ಯಾಯ ಜಾಗ ಕಲ್ಪಿಸುವಂತೆ ದೆಹಲಿ ಸರ್ಕಾರ ಮತ್ತು ಪಾಲಿಕೆಗೆ ಸೂಚಿಸಿತ್ತು. ಈ ಆದೇಶ ಪ್ರಕಟವಾದ ಕ್ಷಣದಿಂದಲೇ ಈ ಸ್ಥಳದಲ್ಲಿ ಧ್ವನಿವರ್ಧಕಗಳನ್ನು ಬಳಸಿ ಯಾವುದೇ ಪ್ರತಿಭಟನೆ, ಧರಣಿ, ಜನರನ್ನು ಉದ್ದೇಶಿಸಿ ಯಾರು ಮಾತನಾಡಕೂಡದು ಎಂದು ಸೂಚಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು.

  • ನಿಷೇಧದ ನಡುವೆಯೂ ಶಿರಾಡಿ ಘಾಟ್ ನಲ್ಲಿ ಭಾರೀ ವಾಹನಗಳ ಸಂಚಾರ!

    ನಿಷೇಧದ ನಡುವೆಯೂ ಶಿರಾಡಿ ಘಾಟ್ ನಲ್ಲಿ ಭಾರೀ ವಾಹನಗಳ ಸಂಚಾರ!

    ಹಾಸನ: ನಿಷೇಧದ ನಡುವೆಯೂ ಶಿರಾಡಿ ಘಾಟ್ ನಲ್ಲಿ ಭಾರೀ ವಾಹನಗಳ ಸಂಚಾರವಾಗುತ್ತಿದ್ದು, ಅಪಾಯಕಾರಿ ರಸ್ತೆಯಲ್ಲಿ ಆತಂಕದ ನಡುವೆ ಸಣ್ಣ ವಾಹನಗಳು ಸಂಚಾರ ಮಾಡುತ್ತಿದೆ.

    ರಸ್ತೆ ದುರಸ್ಥಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಲಾರಿ, ಬಸ್ ಸೇರಿ ಭಾರಿ ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ನಿಷೇಧ ಹೇರಿತ್ತು. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಬೃಹತ್ ವಾಹನಗಳನ್ನು ನಿಷೇಧಿಸಲಾಗಿತ್ತು. ಆದರೆ ಈಗ ನಿಷೇಧದ ನಡುವೆಯೂ ಭಾರೀ ವಾಹನ ಎಗ್ಗಿಲ್ಲದೆ ಸಂಚಾರ ಮಾಡುತ್ತಿದೆ.

    ಕಾಂಕ್ರಿಟೀಕರಣಕ್ಕಾಗಿ ಕಳೆದ ಆರು ತಿಂಗಳಿನಿಂದ ವಾಹನ ಸಂಚಾರವನ್ನು ಸರ್ಕಾರ ನಿಷೇಧಿಸಿತ್ತು. ಬಳಿಕ ಜುಲೈ 15ರ ಬಳಿಕ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಆದರೆ ಲಘು ವಾಹನಗಳ ಜೊತೆ ಭಾರೀ ವಾಹನಗಳ ಸಂಚಾರದಿಂದ ಜನರಲ್ಲಿ ಆತಂಕ ಮೂಡಿದೆ. ಸದ್ಯ ಜನರು ಕಣ್ಮುಚ್ಚಿ ಕುಳಿತ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.

    ಕಳೆದ ಜನವರಿ 20 ರಿಂದ ಆರಂಭವಾಗಿದ್ದ 74 ಕೋಟಿ ರೂ. ವೆಚ್ಚ, 12.38 ಕಿಮೀ ಉದ್ದದ ಕಾಂಕ್ರೀಟ್ ರಸ್ತೆ ಕಾಮಗಾರಿ ಮುಗಿದಿದ್ದು, ಸಚಿವ ಹೆಚ್.ಡಿ.ರೇವಣ್ಣ ಜುಲೈ 15ರಂದು ವಾಸ್ತು ಪ್ರಕಾರ ಶಿರಾಡಿ ಘಾಟ್ ಉದ್ಘಾಟಿಸಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿತ್ತು.

  • ಪ್ಲಾಸ್ಟಿಕ್ ವಿರುದ್ಧ ಮತ್ತೆ ಬಿಬಿಎಂಪಿ ಸಮರ – ಹೋಟೆಲ್, ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಸಿದರೆ ಲೈಸೆನ್ಸ್ ರದ್ದು

    ಪ್ಲಾಸ್ಟಿಕ್ ವಿರುದ್ಧ ಮತ್ತೆ ಬಿಬಿಎಂಪಿ ಸಮರ – ಹೋಟೆಲ್, ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಸಿದರೆ ಲೈಸೆನ್ಸ್ ರದ್ದು

    ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಪ್ಲಾಸ್ಟಿಕ್ ಬಳಕೆ ನಿಷೇಧವಿದ್ದರು ಸಹ ರಾಜ್ಯ ರಾಜಧಾನಿಯಲ್ಲಿ ಪ್ಲಾಸ್ಟಿಕ್ ಬಳಕೆಗೆ ಮಾತ್ರ ಕಡಿವಾಣ ಹಾಕಲು ಅಧಿಕಾರಿಗಳು ವಿಫಲರಾಗಿದ್ದಾರೆ. ಆದರೆ ಸದ್ಯ ಮತ್ತೊಮ್ಮೆ ಪ್ಲಾಸ್ಟಿಕ್ ಬಳಕೆ ಮಾಡುವವರ ವಿರುದ್ಧ ಸಮರ ಸಾರಿರುವ ಬಿಬಿಎಂಪಿ ಹೋಟೆಲ್, ಅಂಗಡಿ ಸೇರಿದಂತೆ ಇತರೆ ಕಡೆ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡಿದರೆ ವ್ಯಾಪಾರಿ ಲೈಸೆನ್ಸ್ ರದ್ದು ಮಾಡುವ ಕುರಿತು ಚಿಂತನೆ ನಡೆಸಿದೆ.

    ಬಿಬಿಎಂಪಿ ಕೌನ್ಸಿಲ್ ನಲ್ಲಿ ಇಂದು ನಡೆದ ಕಸ ನಿರ್ವಹಣೆ ಕುರಿತ ವಿಶೇಷ ಸಭೆಯಲ್ಲಿ ಈ ಕುರಿತು ಅಭಿಪ್ರಾಯ ವ್ಯಕ್ತವಾಗಿದೆ. ಪ್ಲಾಸ್ಟಿಕ್ ಬಳಕೆ ಬ್ಯಾನ್ ಆಗಿದ್ದರೂ ನಗರದಾದ್ಯಂತ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ ಎಂದು ಜಯನಗರ ಶಾಸಕಿ ಸೌಮ್ಯ ರೆಡ್ಡಿ ಸೇರಿದಂತೆ ಪಾಲಿಕೆ ಸದಸ್ಯರು ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಸಂಪತ್ ರಾಜ್ಯ ನಗರದಾದ್ಯಂತ ಎಲ್ಲಾ ವ್ಯಾಪಾರಸ್ಥರಿಗೆ ಹತ್ತು ದಿನಗಳ ಕಾಲ ಗಡುವು ನೀಡಲಾಗುವುದು. ಅಷ್ಟರಲ್ಲಿ ಬೀದಿ ವ್ಯಾಪಾರ, ಹೋಟೆಲ್, ಅಂಗಡಿ, ಶೋರೂಂ ಎಲ್ಲಾ ಕಡೆ ಸಂಪೂರ್ಣವಾಗಿ ಪ್ಲಾಸ್ಟಿಕ್ ಬಳಕೆ ನಿಷೇಧಿಸದಿದ್ದರೆ ಆ ಅಂಗಡಿಯ ವ್ಯಾಪಾರ ಪರವಾನಗಿ ರದ್ದು ಮಾಡಲಾಗುವುದು ಎಂದು ಸೂಚಿಸಿದರು.

    ಬಿಬಿಎಂಪಿ ವಿಶೇಷ ಕೌನ್ಸಿಲ್ ಸಭೆ ಆರಂಭವಾಗುತ್ತಿದಂತೆ, ಸಮರ್ಪಕವಾಗಿ ತ್ಯಾಜ್ಯ ನಿರ್ವಹಣೆ ಮಾಡಲು ಬಿಬಿಎಂಪಿ ವಿಫಲವಾಗಿದೆ ಎಂದು ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಸ್ವಚ್ಛತೆಯಲ್ಲಿ ನಗರ ಕಡಿಮೆ ಶ್ರೇಯಾಂಕ ಪಡೆದಿದೆ ಎಂದು ಸಭೆಯ ಗಮನ ಸೆಳೆದರು. ಇದಕ್ಕೆ ತಿರುಗೇಟು ಕೊಟ್ಟ ಆಡಳಿತ ಪಕ್ಷದ ನಾಯಕ ಶಿವರಾಜ್, ಬೆಂಗಳೂರಿಗೆ ಕಡಿಮೆ ಶ್ರೇಯಾಂಕ ನೀಡಲಾಗಿದೆ. ಆದರೆ ವಿವಿಧ ಯೋಜನೆಗಳ ಮೂಲಕ ನಗರದ ಸ್ವಚ್ಛತೆ ಅಭಿವೃದ್ಧಿ ಪಡಿಸಲಾಗಿದೆ. ಆದರೂ ಕಡಿಮೆ ಶ್ರೇಯಾಂಕ ನೀಡಿದ್ದಾರೆ. ಇದಕ್ಕೆ ಇಲ್ಲಿನ ಬ್ಯಾನರ್, ಫೋಟೋ ಗಳಲ್ಲಿ ಪ್ರಧಾನಿ ಬದಲಿಗೆ ಸಿಎಂ ಫೋಟೋ ಹಾಕಿದ್ದೇ ಕಾರಣನಾ ಎಂದು ಪ್ರಶ್ನೆ ಮಾಡಿದರು. ಈ ಮಾತಿಗೆ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ಶ್ರೇಯಾಂಕ ನೀಡಲು ಸಮಿತಿ ಇದೇ. ಮೈಸೂರಿಗೂ ಶ್ರೇಯಾಂಕ ಕಡಿಮೆ ನೀಡಲಾಗಿದೆ. ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಲು ನೀವು ಆಯ್ಕೆ ಮಾಡಿರುವ ಅಂಬಾಸಿಡರ್ ಎಷ್ಟು ಬಾರಿ ಸಭೆಗೆ ಆಗಮಿಸಿದ್ದಾರೆ ಎಂದು ಪ್ರಶ್ನಿಸಿದರು.

    ಇನ್ನು ಬಿಬಿಎಂಪಿ ಪುನಃರಚನೆ ಸಂಬಂಧ ಜುಲೈ 13 ರಂದು ವಿಶೇಷ ಸಭೆ ಕರೆಯಲಾಗಿದ್ದು, ರಾಜ್ಯ ಸರ್ಕಾರಕ್ಕೆ ನೀಡಿರುವ ಬಿಎಸ್ ಪಾಟೀಲ್ ವರದಿ ಆಧರಿಸಿ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ.

  • ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ನದಿ- ಹೊಗೆನಕಲ್ ಫಾಲ್ಸ್ ವೀಕ್ಷಣೆಗೆ ಬ್ರೇಕ್- ವಿಡಿಯೋ ನೋಡಿ

    ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ನದಿ- ಹೊಗೆನಕಲ್ ಫಾಲ್ಸ್ ವೀಕ್ಷಣೆಗೆ ಬ್ರೇಕ್- ವಿಡಿಯೋ ನೋಡಿ

    ಬೆಂಗಳೂರು: ಕರ್ನಾಟಕದಲ್ಲಿ ಉತ್ತಮ ಮುಂಗಾರು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಹೆಚ್ಚುವರಿ ನೀರು ಹರಿಯುತ್ತಿರುವುದರಿಂದ ತಮಿಳುನಾಡಿನ  ಹೊಗೆನೆಕಲ್ ಪ್ರವಾಸಿ ತಾಣದಲ್ಲಿ ಪ್ರವಾಸಿಗರ ವೀಕ್ಷಣೆಗೆ ಬ್ರೇಕ್ ಹಾಕಲಾಗಿದೆ.

    ಕರ್ನಾಟಕ ಕಬಿನಿನಿ ಜಲಾಶಯದಿಂದ ನೀರು ಬಿಡುಗಡೆ ಮಾಡಿರುವ ಹಿನ್ನಲೆಯಲ್ಲಿ ಹೊಗೆನೆಕಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹೊಗೆನಕಲ್  ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಪಾಯದ ಮಟ್ಟದಲ್ಲಿ ಕಾವೇರಿ ನೀರು ಹರಿಯುತ್ತಿರುವುದರಿಂದ ಮುಂಜಾಗ್ರತೆಯ ಕ್ರಮವಾಗಿ ತಮಿಳುನಾಡಿನ ಜಿಲ್ಲಾಡಳಿತದಿಂದ ಆದೇಶ ಹೊರಡಿಸಲಾಗಿದೆ. ಇಲ್ಲಿಗೆ ಕರ್ನಾಟಕದ ಪ್ರವಾಸಿಗರೇ ಹೆಚ್ಚಾಗಿ ಹೋಗುವುದರಿಂದ ಮುಂಜಾಗ್ರತಾ ಕ್ರಮವಾಗಿ ನಿರ್ಬಂಧ ಹೇರಲಾಗಿದೆ.

    ಇನ್ನು ಕಳೆದ ಒಂದು ವಾರದಿಂದ ಸುರಿದ ಮಳೆಗೆ ಮಲೆನಾಡಿನ ನದಿಗಳು ಮೈದುಂಬಿಹರಿಯುತ್ತಿದ್ದು, ವಿಶ್ವವಿಖ್ಯಾತ ಜೋಗ ಜಲಪಾತ ಸಹ ತುಂಬಿ ಹರಿಯುತ್ತಿದೆ. ರಾಜಾ, ರೋರರ್, ರಾಕೆಟ್, ರಾಣಿ ಧುಮ್ಮಿಕ್ಕುತ್ತಿವೆ. ಶರಾವತಿ ನದಿ ಜಲಾನಯನ ಪ್ರದೇಶಗಳಾದ ಹೊಸನಗರ, ಸಾಗರ ತಾಲೂಕುಗಳಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ ಆಗುತ್ತಿರುವುದು ಜಲಪಾತ ಕಳೆಕಟ್ಟಲು ಕಾರಣವಾಗಿದೆ.

  • ಬೆಂಗ್ಳೂರಲ್ಲಿ ಇಂದು ಮಧ್ಯರಾತ್ರಿವರೆಗೆ ಮದ್ಯ ನಿಷೇಧ!

    ಬೆಂಗ್ಳೂರಲ್ಲಿ ಇಂದು ಮಧ್ಯರಾತ್ರಿವರೆಗೆ ಮದ್ಯ ನಿಷೇಧ!

    ಬೆಂಗಳೂರು: ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಆರು ಸ್ಥಾನಗಳಿಗೆ ಮತದಾನ ಆರಂಭವಾಗಿದೆ. ಇಂದು ಮಧ್ಯರಾತ್ರಿಯಿಂದಲೇ ಮದ್ಯ ನಿಷೇಧ ಮಾಡಲಾಗಿದ್ದು, ಚುನಾವಣಾ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

    ಸಂಜೆ 5 ಗಂಟೆವರೆಗೂ ಮತದಾನ ನಡೆಯಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಗುರುವಾರ ಮಧ್ಯರಾತ್ರಿ 12 ಗಂಟೆಯಿಂದ ಇಂದು ಮಧ್ಯ ರಾತ್ರಿವರೆಗೂ ಮಧ್ಯ ಮಾರಾಟ ನಿಷೇಧ ಮಾಡಲಾಗಿದೆ.

    ರಿಸಲ್ಟ್ ದಿನದಂದೂ ಮದ್ಯವಿಲ್ಲ:
    ಮತ ಎಣಿಕೆ ಹಿನ್ನೆಲೆಯಲ್ಲಿ ಜೂನ್ 11 ರ ಮಧ್ಯರಾತ್ರಿ 12 ಗಂಟೆಯಿಂದ ಜೂನ್ 12 ಮಧ್ಯರಾತ್ರಿ 12 ವರೆಗೆ ಮದ್ಯ ನಿಷೇಧ ಮಾಡಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಮತ್ತು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಇನ್ನು ಚುನಾವಣೆ ನಡೆಯುವ ಕೇಂದ್ರಗಳ ಬಳಿ 144 ಸೆಕ್ಷನ್ ಜಾರಿ ಮಾಡುವಂತೆ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.

    ಪದವೀಧರ ಕ್ಷೇತ್ರದಲ್ಲಿ 65254 ಮತದಾರರಿದ್ದು, 22 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕರ್ನಾಟಕ ಆಗ್ನೇಯ, ಕರ್ನಾಟಕ ದಕ್ಷಿಣ, ಕರ್ನಾಟಕ ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ಬೆಂಗಳೂರು ಪದವೀಧರ, ಕರ್ನಾಟಕ ನೈರುತ್ಯ, ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರಗಳಿಗೆ ಮತದಾನ ಶುರುವಾಗಿದೆ. ಜೂನ್ 12ರಂದು ಮತ ಎಣಿಕೆ ನಡೆಯಲಿದೆ.

  • ಕರ್ನಾಟಕದಲ್ಲಿ ರಜನಿಕಾಂತ್ ನಟನೆಯ ಕಾಳ ಸಿನಿಮಾ ಬ್ಯಾನ್

    ಕರ್ನಾಟಕದಲ್ಲಿ ರಜನಿಕಾಂತ್ ನಟನೆಯ ಕಾಳ ಸಿನಿಮಾ ಬ್ಯಾನ್

    ಬೆಂಗಳೂರು: ಕಾವೇರಿ ವಿಚಾರದಲ್ಲಿ ಕನ್ನಡಿಗರನ್ನ ಕೆಣಕಿರುವ ನಟ ರಜನಿಕಾಂತ್ ಭಾರೀ ದಂಡವನ್ನೇ ತೆರುವಂತಾಗಿದೆ. ರಜನಿ ನಟನೆಯ ಬಹುನಿರೀಕ್ಷಿತ ಕಾಳ ಚಿತ್ರ ಪ್ರದರ್ಶನಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಷೇಧ ಹೇರಿದೆ.

    ಜೂನ್ 7ಕ್ಕೆ ಕಾಳ ಸಿನಿಮಾ ರಿಲೀಸ್ ಆಗಲಿರುವ ಹಿನ್ನೆಲೆಯಲ್ಲಿ ಇವತ್ತು ಫಿಲ್ಮ್ ಚೇಂಬರ್ ತುರ್ತಾಗಿ ಪ್ರದರ್ಶನಕರು ಮತ್ತು ವಿತರಕರ ಸಭೆ ನಡೆಸಿತು.

    ಸಭೆ ಬಳಿಕ ಪ್ರತಿಕ್ರಿಯಿಸಿದ ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ.ರಾ. ಗೋವಿಂದ್, ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಕಾಳ ಸಿನಿಮಾ ಬಿಡುಗಡೆಯಾಗಲು ಬಿಡುವುದಿಲ್ಲ. ರಾಜ್ಯದ ಹಿತದೃಷ್ಟಿಯಿಂದ ವಿತರಕರಾದ ಸೌರಬ್ ಅವರೇ ವಿತರಣೆಯಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿಸಿದರು.

    ರಜನಿ ಜೊತೆಗೆ ಕಮಲ್ ಹಾಸನ್ ಚಿತ್ರಗಳಿಗೂ ಮುಂದೆ ನಿಷೇಧ ಹೇರುತ್ತೇವೆ. ಆದರೆ ಉಳಿದ ನಾಯಕರ ಚಿತ್ರಗಳಿಗೆ ವಿರೋಧ ಇಲ್ಲ ಎಂದು ತಿಳಿಸಿದರು.

    ಕಾಳ ಚಿತ್ರವು ತಮಿಳಿನ ಬಹು ನಿರೀಕ್ಷಿತ ಚಿತ್ರವಾಗಿದ್ದು, ಸ್ವತಃ ರಜನಿಕಾಂತ್ ರವರ ಅಳಿಯ ಧನುಷ್‍ರವರು ನಿರ್ಮಿಸಿದ್ದಾರೆ. ಕಬಾಲಿ ಚಿತ್ರದ ನಿರ್ದೇಶಕರಾದ ಪ.ರಂಜಿತ್‍ರವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಂತೋಷ್ ನಾರಾಯಣ್ ಸಿನಿಮಾಗೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ನಾನಾ ಪಾಟೇಕರ್, ಹುಮಾ ಕ್ವಿರೇಷಿ, ಈಶ್ವರಿ ರಾವ್ ಸೇರಿದಂತೆ ಬಹು ತಾರಾಗಣವನ್ನು ಹೊಂದಿದೆ.

  • ರಾಜರಥ ಸಿನಿಮಾ ತಂಡದ ವಿರುದ್ಧ ಮತ್ತೊಂದು ದೂರು ದಾಖಲು

    ರಾಜರಥ ಸಿನಿಮಾ ತಂಡದ ವಿರುದ್ಧ ಮತ್ತೊಂದು ದೂರು ದಾಖಲು

    ಬೆಂಗಳೂರು: ರಾಜರಥ ಸಿನಿಮಾ ತಂಡದ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ.

    ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ರಾಜರಥ ಸಿನಿಮಾ ತಂಡದ ವಿರುದ್ಧ ದೂರು ನೀಡಿದ್ದು, ತಕ್ಷಣ ರಾಜರಥ ಸಿನಿಮಾ ಪ್ರದರ್ಶನ ನಿಲ್ಲಿಸದೆ ಇದ್ದರೆ ಪ್ರತಿಭಟನೆ ನಡೆಸುವ ಕುರಿತು ಎಚ್ಚರಿಕೆ ನೀಡಿದೆ. ಅಲ್ಲದೇ ರಾಜರಥ ಸಿನಿಮಾ ನಟ ನಟಿ ಮತ್ತು ನಿರ್ದೇಶಕರನ್ನು ಆರು ತಿಂಗಳ ಕಾಲ ಚಿತ್ರೋದ್ಯಮದಿಂದ ಅಮಾನತು ಮಾಡಬೇಕು ಎಂದು ಸಂಘಟನೆಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಂದರ್ಶನದಲ್ಲಿ ಕನ್ನಡ ಸಿನಿಮಾವನ್ನ ನೋಡದೇ ಇರುವರು ಅಂತ ಹೇಳಿಲ್ಲ, ರಾಜರಥ ಸಿನಿಮಾವನ್ನ ನೋಡದೇ ಇರುವವರು ಕಚಡಾಗಳು ಎಂದು ಹೇಳಿಕೆ ಕೊಟ್ಟಿರುವುದು ನೋವುಂಟು ಮಾಡಿದೆ ಎಂದು ದೂರಿನಲ್ಲಿ ಸಂಘಟನೆ ಆರೋಪಿಸಿದೆ.

    ಕರ್ನಾಟಕ ಸಂಘಟನೆಗಳ ಒಕ್ಕೂಟ ಇದೇ ಕಾರಣಕ್ಕಾಗಿ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಚಿತ್ರ ತಂಡದ ವಿರುದ್ಧ ಮಂಗಳವಾರ ದೂರು ದಾಖಲಿಸಿತ್ತು.

    ಖಾಸಗಿ ರೇಡಿಯೋ ಕಾರ್ಯಕ್ರಮದಲ್ಲಿ ಭಾಗಿವಹಿಸಿದ್ದ ರಾಜರಥ ಸಿನಿಮಾ ತಂಡ, ರಾಜರಥ ಸಿನಿಮಾ ನೋಡದ ಪ್ರೇಕ್ಷಕ “ಕಚಡ ನನ್ಮಕ್ಳು” ಎನ್ನುವ ಹೇಳಿಕೆ ನೀಡಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಸಾರ್ವಜನಿಕ ವಲಯದಿಂದ ತೀವ್ರ ಅಕ್ರೋಶ ವ್ಯಕ್ತವಾಗಿತ್ತು.  ಇದನ್ನೂ ಓದಿ: ರಾಜರಥ ಸಿನಿಮಾ ವಿವಾದದ ಕುರಿತಾಗಿ ಅಚ್ಚರಿಯ ಹೇಳಿಕೆ ನೀಡಿದ ರ‍್ಯಾಪಿಡ್ ರಶ್ಮಿ

    ಈ ಕುರಿತು ಮಂಗಳವಾರ ಫೀಲ್ಮ ಚೇಂಬರ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಚಿತ್ರದ ನಿರ್ದೇಶಕ ಹಾಗೂ ನಾಯಕರಾದ ಭಂಡಾರಿ ಸಹೋದದರು ಚಿತ್ರರಂಗ ಹಾಗೂ ಕನ್ನಡ ಅಭಿಮನಿಗಳ ಕ್ಷಮೆ ಕೋರಿದ್ದರು. ರಾಜರಥ ಚಿತ್ರದ ಬಿಡುಗಡೆಗೆ ಮುನ್ನ ಭಾಗವಹಿಸಿದ ಒಂದು ಹಾಸ್ಯಮಯ ಕಾರ್ಯಕ್ರಮದ ಸಣ್ಣ ತುಣುಕು ನಿಮ್ಮೆಲ್ಲರಿಗು ನೋವುಂಟು ಮಾಡಿರುವುದಕ್ಕೆ ಕ್ಷಮೆ ಯಾಚಿಸುತ್ತೇವೆ. ಸಂದರ್ಶನಕ್ಕು ಮುನ್ನ, ಹಲವರು ಕನ್ನಡ ಸಿನಿಮಾ ನೋಡುವುದಿಲ್ಲ, ಹಲವಾರು ಒಳ್ಳೆ ಚಿತ್ರಗಳು ಬರುತ್ತಿವೆ ಆದರು ಏಕೆ ಹೀಗೆ, ಎಂದು ಚರ್ಚಿಸಿದ್ದೆವು. ಹಾಗೆ ಸಂದರ್ಶನದಲ್ಲಿ ಬಂದ ಪ್ರಶ್ನೆಗೆ ಆ ಹಿನ್ನೆಲೆಯಲ್ಲಿ ಕೊಟ್ಟ ತಪ್ಪು ಉತ್ತರವದು. ಇದು ಖಂಡಿತವಾಗಿಯು ಕನ್ನಡ ಪ್ರೇಕ್ಷಕರನ್ನುದ್ದೇಶಿಸಿ ಹೇಳಿದ ಮಾತಲ್ಲ. ನಾವು ಏನೇ ಯಶಸ್ಸು ಕಂಡಿದ್ದರೂ ಅದಕ್ಕೆ ಪ್ರೇಕ್ಷಕರೇ ಕಾರಣ. ನಮ್ಮ ಯಾವುದೇ ಬೇರೆ ಸಂದರ್ಶನಗಳನ್ನು ನೋಡಿದರೂ ನಮ್ಮ ಗೆಲುವಿಗೆ ಪ್ರೇಕ್ಷಕರೆ ಕಾರಣ ಎಂದು ಹಲವು ಬಾರಿ ಹೇಳಿದ್ದೇವೆ. ಕನ್ನಡ ಮತ್ತು ಕನ್ನಡ ಸಿನಿಮಾದ ಬಗ್ಗೆ ನಮಗೆ ಅಪಾರ ಅಭಿಮಾನ, ಅದಕ್ಕಾಗಿಯೇ ಪ್ರತಿ ಹಾಡಿನಲ್ಲೂ ಅಚ್ಚ ಕನ್ನಡವನ್ನೇ ಬಳಸುತ್ತೇವೆ. ಕಾರ್ಯಕ್ರಮದಲ್ಲಿ ತಪ್ಪಾಗಿ ಆಡಿದ ಮಾತುಗಳನ್ನು ದಯವಿಟ್ಟು ಮನ್ನಿಸಿ. ಯಾರಿಗೂ ನೋವುಂಟು ಮಾಡಬೇಕು ಅನ್ನುವ ಉದ್ದೇಶ ನಮ್ಮದಲ್ಲ. ನಿಮ್ಮ ಆಶಿರ್ವಾದ ನಮ್ಮ ಮೇಲೆ ಸದಾ ಇರಲಿ ಎಂದು ಬರೆದು ತನ್ನ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

  • ಜಾರ್ಖಂಡ್ ನಲ್ಲಿ ಪಿಎಫ್‍ಐ ಸಂಘಟನೆ ನಿಷೇಧ ವಿರೋಧಿಸಿ ಮಂಗ್ಳೂರಲ್ಲಿ ಪ್ರತಿಭಟನೆ

    ಜಾರ್ಖಂಡ್ ನಲ್ಲಿ ಪಿಎಫ್‍ಐ ಸಂಘಟನೆ ನಿಷೇಧ ವಿರೋಧಿಸಿ ಮಂಗ್ಳೂರಲ್ಲಿ ಪ್ರತಿಭಟನೆ

    ಮಂಗಳೂರು: ಜಾರ್ಖಂಡ್ ಸರ್ಕಾರ ಪಿಎಫ್‍ಐ ಸಂಘಟನೆಯನ್ನು ನಿಷೇಧಿಸಿದ ಕ್ರಮವನ್ನು ಖಂಡಿಸಿ ದಕ್ಷಿಣ ಕನ್ನಡ ಪಿಎಫ್‍ಐ ಜಿಲ್ಲಾ ಸಮಿತಿ ಇಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದೆ.

    ಪ್ರತಿಭಟನೆ ವೇಳೆ ಕೇಂದ್ರ ಮತ್ತು ಜಾರ್ಖಂಡ್ ಸರ್ಕಾರದ ವಿರುದ್ಧ ಹರಿಹಾಯ್ದ ಪ್ರತಿಭಟನಕಾರರು ಸರ್ಕಾರದ ಕ್ರಮದ ವಿರುದ್ಧ ಕಾನೂನು ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.

    ಪಿಎಫ್‍ಐ ಸಂಘಟನೆ ಯಾವುದೇ ರಾಷ್ಟ್ರವಿರೋಧಿ ಕೃತ್ಯವನ್ನು ನಡೆಸಿಲ್ಲ. ಈ ಕುರಿತು ಯಾವುದೇ ಸಾಕ್ಷ್ಯಧಾರಗಳು ಇಲ್ಲ. ಆದರೆ ಜಾರ್ಖಂಡ್ ಸರ್ಕಾರ ಮಾತ್ರ ಕೇಂದ್ರದ ಒತ್ತಡದಿಂದ ಸಂಘಟನೆಯನ್ನ ನಿಷೇಧಿಸಿದೆ ಎಂದು ಆರೋಪಿಸಿದರು.

    ದೇಶದಲ್ಲಿ ಬಿಜೆಪಿ ಸರ್ಕಾರ ಸಂವಿಧಾನ ಬದಲಿಸುವ ಹೇಳಿಕೆ ನೀಡುತ್ತಿದೆ. ಮನುಸಂಸ್ಕೃತಿಯನ್ನು ಜಾರಿಗೊಳಿಸಿ ಹುನ್ನಾರವನ್ನು ಮಾಡುತ್ತಿದೆ. ಆರ್ ಎಸ್‍ಎಸ್ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ದೇಶದ ಜಾತ್ಯಾತೀತ ನೀತಿಗೆ ಹೋರಾಟ ನಡೆಸುತ್ತಿರುವ ಪಿಎಫ್‍ಐ ಸಂಘಟನೆ ಗೆ ಇಂತಹ ಕ್ರಮಗಳು ಯಾವುದೇ ಪರಿಣಾಮವನ್ನು ಬೀರುವುದಿಲ್ಲ ಎಂದು ಹೇಳಿದರು.

    ಪ್ರತಿಭಟನೆಯಲ್ಲಿ ಪಿಎಫ್‍ಐ ರಾಜ್ಯ ಕಾರ್ಯದರ್ಶಿ ಯಾಸಿರ್ ಹಸನ್, ಎಸ್‍ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ದಕ್ಷಿಣ ಕನ್ನಡ ಜಿಲ್ಲಾ ಇಮಾಮ್ಸ್ ಕೌನ್ಸಿಲ್ ಅಧ್ಯಕ್ಷ ರಫೀಕ್ ದಾರಿಮಿ, ಪಿಎಫ್‍ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್, ಜಿಲ್ಲಾ ಸಮಿತಿ ಸದಸ್ಯ ಸಿರಾಜುದ್ದೀನ್, ದಲಿತ ಮುಖಂಡ ರಾಕೇಶ್ ಮತ್ತಿತರರು ಪಾಲ್ಗೊಂಡಿದ್ದರು.

  • ದೇಶದೆಲ್ಲೆಡೆ ಬಿಡುಗಡೆಯಾಗಲಿದೆ ಪದ್ಮಾವತ್ – 4 ರಾಜ್ಯಗಳ ಆದೇಶಕ್ಕೆ ಸುಪ್ರೀಂ ತಡೆ

    ದೇಶದೆಲ್ಲೆಡೆ ಬಿಡುಗಡೆಯಾಗಲಿದೆ ಪದ್ಮಾವತ್ – 4 ರಾಜ್ಯಗಳ ಆದೇಶಕ್ಕೆ ಸುಪ್ರೀಂ ತಡೆ

    ನವದೆಹಲಿ: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಚಿತ್ರ ಬಿಡುಗಡೆಗಿದ್ದ ಅಡ್ಡಿ ದೂರವಾಗಿದ್ದು, ಇದೇ 25 ರಂದು ದೇಶದೆಲ್ಲೆಡೆ ಬಿಡುಗಡೆಯಾಗಬೇಕು ಎಂದು ಸುಪ್ರೀಂ ಹೇಳಿದೆ.

    ನಾಲ್ಕು ರಾಜ್ಯಗಳಲ್ಲಿ `ಪದ್ಮಾವತ್’ ಚಿತ್ರ ಪ್ರದರ್ಶನಕ್ಕೆ ನಿಷೇಧ ಹೇರಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಇಂದು ನಡೆಯಿತು. ಈ ವೇಳೆ ರಾಜ್ಯಗಳ ಆದೇಶಕ್ಕೆ ತಡೆ ನೀಡಿದ ಪೀಠ ಕಾನೂನು ಸುವ್ಯಸ್ಥೆ ಕಾಪಾಡುವುದು ಆಯಾ ರಾಜ್ಯಗಳ ಕೆಲಸ ಎಂದು ಹೇಳಿತು.

    ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರಿದ್ದ ಪೀಠವು ಬಿಡುಗಡೆ ನಿಷೇಧಿಸಿ ಹೊರಡಿಸಿದ್ದ ನಾಲ್ಕು ರಾಜ್ಯಗಳ ಆದೇಶಕ್ಕೆ ತಡೆ ನೀಡಿದೆ.

    ಇದೇ ವೇಳೆ ಚಿತ್ರದ ಕುರಿತು ಬಂದಿರುವ ಆಕ್ಷೇಪಣೆಗಳನ್ನು ಪರಿಗಣಿಸಿದರೆ ಭಾರತದ 60 ರಷ್ಟು ಸಾಹಿತ್ಯವನ್ನು ಓದುವ ಹಾಗೇ ಇಲ್ಲ ಎಂದು ಮುಖ್ಯ ನ್ಯಾ. ಮಿಶ್ರಾ ಅಭಿಪ್ರಾಯಪಟ್ಟರು. ಈ ವೇಳೆ ಚಿತ್ರ ನಿರ್ಮಾಣ ಮಾಡಿದ ಸಂಸ್ಥೆಯಾದ ವಿಯಾಕಾಮ್ 18 ಪರವಾಗಿ ವಾದಿಸಿದ ಹಿರಿಯ ವಕೀಲ ಹರೀಶ್ ಸಾಳ್ವೆ, ಚಿತ್ರ ಬಿಡುಗಡೆ ರಾಜ್ಯಗಳು ನಿಷೇಧ ಹೇರಿದ ಜೊತೆಗೆ ಅಭಿನಯಿಸಿದ ಕಲಾವಿದರಿಗೂ ಜೀವ ಬೆದರಿಕೆ ಬಂದಿದೆ. ಹೀಗಾಗಿ ಅವರಿಗೂ ಭದ್ರತೆ ನೀಡಬೇಕೆಂದು ಮನವಿ ಮಾಡಿದರು.

    ಅಂತಿಮವಾಗಿ ಪೀಠ ನಾಲ್ಕು ರಾಜ್ಯಗಳ ನಿಷೇಧ ವಿಧಿಸಿ ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಿ ಮುಂದಿನ ವಿಚಾರಣೆಯನ್ನು ಮಾರ್ಚ್ 26ಕ್ಕೆ ಮುಂದೂಡಿತು.

    ಚಿತ್ರೀಕರಣ ಆರಂಭವಾದ ಸಮಯದಿಂದಲೂ ಸಾಕಷ್ಟು ವಿವಾದಗಳಿಗೆ ‘ಪದ್ಮಾವತ್’ ಚಿತ್ರ ಕಾರಣವಾಗಿತ್ತು. ಹಲವು ಬಾರಿ ಕತ್ತರಿ ಪ್ರಯೋಗಿಸಿ ಬಳಿಕ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿತ್ತು. ನಿದೇರ್ಶಕ ಸಂಜಯ್ ಲೀಲಾ ಭನ್ಸಾಲಿ ಚಿತ್ರವನ್ನು ಜನವರಿ 25 ರಂದು ಬಿಡುಗಡೆ ಮಾಡುತ್ತಿರುವುದಾಗಿ ತಿಳಿಸಿದ್ದರು.

    ಆದರೆ ಚಿತ್ರದ ಬಿಡುಗಡೆ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವುದು ಕಷ್ಟಸಾಧ್ಯ ಎಂಬ ಕಾರಣ ನೀಡಿ, ಪದ್ಮಾವತ್ ಚಿತ್ರದ ಪ್ರದರ್ಶನಕ್ಕೆ ರಾಜಸ್ಥಾನ, ಹರಿಯಾಣ, ಗುಜರಾತ್, ಮಧ್ಯಪ್ರದೇಶ ಸರ್ಕಾರಗಳು ಚಿತ್ರ ಬಿಡುಗಡೆಗೆ ನಿಷೇಧ ಹೇರಿ ಆದೇಶ ಹೊರಡಿಸಿತ್ತು.

    ಸೆನ್ಸಾರ್ ಮಂಡಳಿ ಅನುಮತಿ ನೀಡಿದ್ದರೂ ಸಿನಿಮಾವನ್ನು ತಡೆಯುವ ಹಕ್ಕು ಯಾವ ರಾಜ್ಯಕ್ಕೂ ಇಲ್ಲ. ತಮ್ಮ ಸಿನಿಮಾ ಎಲ್ಲಾ ರಾಜ್ಯಗಳಲ್ಲೂ ಬಿಡುಗಡೆಯಾಗುವಂತೆ ಅವಕಾಶ ನೀಡಬೇಕೆಂದು ನಿರ್ಮಾಪಕರು ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಈ ಚಿತ್ರದಲ್ಲಿ ನಟಿಸಿರುವ ದೀಪಿಕಾ ಪಡುಕೋಣೆ, ಶಾಹಿದ್ ಕಪೂರ್, ರಣವೀರ್ ಸಿಂಗ್ ಜೀವ ಬೆದರಿಕೆ ಇರುವ ಕಾರಣ ಯಾರು ಚಿತ್ರದ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿಲ್ಲ.