Tag: ನಿಷೇಧ

  • ಪಾಕ್ ವಾಯುಮಾರ್ಗದಲ್ಲಿ ಭಾರತದ ವಿಮಾನ ಹಾರಾಟ ನಿಷೇಧಕ್ಕೆ ಇಮ್ರಾನ್ ನಿರ್ಧಾರ

    ಪಾಕ್ ವಾಯುಮಾರ್ಗದಲ್ಲಿ ಭಾರತದ ವಿಮಾನ ಹಾರಾಟ ನಿಷೇಧಕ್ಕೆ ಇಮ್ರಾನ್ ನಿರ್ಧಾರ

    ನವದೆಹಲಿ: ಅಫ್ಘಾನಿಸ್ತಾನದ ಜೊತೆಗೆ ವಾಣಿಜ್ಯ ವಹಿವಾಟಿಗೆ ಭಾರತ ಬಳಸಿಕೊಳ್ಳುತ್ತಿರುವ ಭೂ ಮಾರ್ಗ ಹಾಗೂ ಪಾಕಿಸ್ತಾನ ವಾಯುಮಾರ್ಗದಲ್ಲಿ ಭಾರತೀಯ ವಿಮಾನಗಳ ಹಾರಾಟಕ್ಕೆ ಸಂಪೂರ್ಣ ನಿಷೇಧ ಹೇರಲು ಪ್ರಧಾನಿ ಇಮ್ರಾನ್ ಖಾನ್ ನಿರ್ಧರಿಸಿದ್ದಾರೆ.

    ಈ ಬಗ್ಗೆ ಮಂಗಳವಾರ ಪಾಕಿಸ್ತಾನ ವಿಜ್ಞಾನ ಮತ್ತು ತಂತ್ರಜ್ಞಾನದ ಸಚಿವ ಫವಾದ್ ಹುಸೇನ್ ಅವರು ಟ್ವೀಟ್ ಮಾಡಿ, ಸಚಿವ ಸಂಪುಟ ಸಭೆಯಲ್ಲಿ ಇಮ್ರಾನ್ ಖಾನ್ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಈ ನಿರ್ಧಾರ ಸಂಬಂಧ ಪಾಕ್ ಕಾನೂನು ಪ್ರಕ್ರಿಯೆಗಳನ್ನು ನಡೆಸುತ್ತಿದೆ ಎಂದು ತಿಳಿಸಿದ್ದಾರೆ.

    ಫೆಬ್ರವರಿ 14ರ ಪುಲ್ವಾಮಾ ದಾಳಿಗೆ ಪ್ರತ್ಯುತ್ತರವಾಗಿ ಫೆಬ್ರವರಿ 26ರಂದು ಬಾಲಾಕೋಟ್‍ನಲ್ಲಿ ಜೈಷ್-ಎ-ಮೊಹಮ್ಮದ್ ಉಗ್ರರ ತರಬೇತಿ ಶಿಬಿರದ ಮೇಲೆ ಭಾರತದ ವಾಯುಸೇನೆ ವಾಯು ದಾಳಿ ನಡೆಸಿತ್ತು. ಹೀಗಾಗಿ ಪಾಕಿಸ್ತಾನ ತನ್ನ ವಾಯು ಮಾರ್ಗವನ್ನು ಸಂಪೂರ್ಣ ಸ್ಥಗಿತಗೊಳಿಸಿತ್ತು. ಆದರೆ ಮಾರ್ಚ್ 27ರಂದು ನವದೆಹಲಿ, ಬ್ಯಾಂಕಾಕ್ ಹಾಗೂ ಕೌಲಾಲಂಪುರ ವಿಮಾನಗಳ ಹಾರಾಟಕ್ಕೆ ಅನುವು ಮಾಡಿಕೊಟ್ಟಿತ್ತು.

    ಮೇ 15ರಿಂದ ಮೇ 30ರವೆಗೆ ಮತ್ತೆ ಪಾಕ್ ವಾಯು ಮಾರ್ಗದಲ್ಲಿ ಭಾರತಕ್ಕೆ ತೆರಳುವ ವಿಮಾನಗಳಿಗೆ ನಿರ್ಬಂಧ ಹೇರಿತ್ತು. ಈ ನಿಷೇಧವನ್ನು ಪಾಕ್ ಜುಲೈ 16ರಂದು ತೆರವುಗೊಳಿಸಿತ್ತು. ಏರ್ ಇಂಡಿಯಾ ಸೇರಿದಂತೆ 50 ವಿಮಾನಗಳು ಪ್ರತಿದಿನ ಪಾಕಿಸ್ತಾನದ ವಾಯು ಮಾರ್ಗದಲ್ಲಿ ಸಂಚರಿಸುತ್ತವೆ. ಇದರಲ್ಲಿ ಅಮೆರಿಕ, ಯುರೋಪ್ ಮತ್ತು ಮಿಡಲ್ ಈಸ್ಟ್ ದೇಶಗಳಿಗೆ ತೆರಳುವ ವಿಮಾನಗಳು ಕೂಡ ಸೇರಿವೆ.

    ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ಬಳಿಕ ಎರಡು ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಉಲ್ಭಣಗೊಂಡಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಭಾರತದ ಜೊತೆ ಇದ್ದ ವಾಣಿಜ್ಯ ವ್ಯವಹಾರ, ಭಾರತಕ್ಕೆ ಪಾಕಿನಿಂದ ತೆರಳುವ ಬಸ್ಸುಗಳು ಹಾಗೂ ರೈಲು ಸೇವೆಯನ್ನು ಆಗಸ್ಟ್ 5ರಿಂದ ಸ್ಥಗಿತಗೊಳಿಸಿದೆ.

    ಈ ವಿಚಾರವಾಗಿ ಯುಎನ್ ಜನರಲ್ ಅಸೆಂಬ್ಲಿ ಸೇರಿದಂತೆ ಅಂತರಾಷ್ಟ್ರೀಯ ಮಟ್ಟದ ಎಲ್ಲಾ ವೇದಿಕೆಯನ್ನು ಪ್ರಶ್ನೆ ಮಾಡುವುದಾಗಿ ಇಮ್ರಾನ್ ಖಾನ್ ಹೇಳಿದ್ದರು. ಹೀಗಾಗಿ ಇದು ಭಾರತ ಪಾಕಿಸ್ತಾನ ನಡುವಿನ ಕಿತ್ತಾಟ. ನಮ್ಮ ದೇಶದ ಆಂತರಿಕ ವಿಚಾರ. ಹೀಗಾಗಿ ಮೂರನೇ ದೇಶವನ್ನು ಇದರಲ್ಲಿ ತಂದು ಸಂಕಷ್ಟಕ್ಕೆ ಸಿಲುಕಿಸಲು ನಮಗೆ ಇಷ್ಟವಿಲ್ಲ. ತಾವೇ ಇದನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು ಭಾರತ ಹೇಳಿತ್ತು.

  • ಪೃಥ್ವಿ ಶಾ ಮೇಲೆ 8 ತಿಂಗಳು ನಿಷೇಧ ವಿಧಿಸಿದ ಬಿಸಿಸಿಐ

    ಪೃಥ್ವಿ ಶಾ ಮೇಲೆ 8 ತಿಂಗಳು ನಿಷೇಧ ವಿಧಿಸಿದ ಬಿಸಿಸಿಐ

    ನವದೆಹಲಿ: ಟೀಂ ಇಂಡಿಯಾ ಯುವ ಆಟಗಾರ ಪೃಥ್ವಿ ಶಾರನ್ನು ಎಲ್ಲಾ ಕ್ರಿಕೆಟ್ ಮಾದರಿ ಪಂದ್ಯಗಳಿಂದ 8 ತಿಂಗಳು ನಿಷೇಧ ಮಾಡಿ ಬಿಸಿಸಿಐ ಆದೇಶಿಸಿದೆ. ಡೋಪಿಂಗ್ ಪರೀಕ್ಷೆಯಲ್ಲಿ ಮಾದಕ ದ್ರವ್ಯ ಸೇವನೆ ಮಾಡಿದ್ದಾರೆ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಬಿಸಿಸಿಐ ಈ ಆದೇಶ ನೀಡಿದೆ.

    19 ವರ್ಷದ ಪೃಥ್ವಿ ಶಾ ಟೀಂ ಇಂಡಿಯಾ ಪರ 2018 ರಲ್ಲಿ 2 ಟೆಸ್ಟ್ ಪಂದ್ಯಗಳನ್ನು ವೆಸ್ಟ್ ಇಂಡೀಸ್ ವಿರುದ್ಧ ಆಡಿದ್ದರು. ಸದ್ಯ ಅವರು ಗಾಯದ ಸಮಸ್ಯೆಯಿಂದ ಚೇತರಿಕೆ ಪಡೆಯುತ್ತಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ವೇಳೆ ಡೋಪಿಂಗ್ ಪರೀಕ್ಷೆ ನಡೆಸಲಾಗಿತ್ತು.

    ಪೃಥ್ವಿ ಶಾರೊಂದಿಗೆ ಮತ್ತಿಬ್ಬರು ದೇಶಿಯ ಕ್ರಿಕೆಟ್ ಆಟಗಾರರಾದ ವಿದರ್ಭದ ಅಕ್ಷಯ್ ದುಲ್ಲರ್ ಮತ್ತು ರಾಜಸ್ಥಾನದ ದಿವ್ಯಾ ಗುಜರಾಜ್ ಅವರು ಕೂಡ ಬಿಸಿಸಿಐ ಕ್ರಿಕೆಟ್ ಮಂಡಳಿಯ ಡೋಪಿಂಗ್ ಪರೀಕ್ಷೆಯಲ್ಲಿ ಅನುತೀರ್ಣರಾಗಿದ್ದಾರೆ. ಸದ್ಯ ಶಾ 8 ತಿಂಗಳ ನಿಷೇಧಕ್ಕೆ ಒಳಗಾಗಿರುವುದರಿಂದ ಮಾರ್ಚ್ 16 ರಿಂದ ನವೆಂಬರ್ 15ರ ವರೆಗೂ ಅಮಾನತು ಎದುರಿಸಲಿದ್ದಾರೆ.

    ಪೃಥ್ವಿ ಶಾ ಮುಂಬೈ ಕ್ರಿಕೆಟ್ ಅಸೋಸಿಯೆಷನ್ ಅಡಿ ನೋಂದಣಿಯಾಗಿದ್ದು, ಡೋಪಿಂಗ್ ಪರೀಕ್ಷೆಯಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ. ಶಾ ತನ್ನ ಅಜಾಗರೂಕತೆಯಿಂದ ನಿಷೇಧಿತ ವಸ್ತುವನ್ನು ಸೇವಿಸಿದ್ದಾನೆ. ಇದನ್ನು ಸಾಮಾನ್ಯ ಕೆಮ್ಮು ಸಿರಪ್‍ಗಳಲ್ಲಿ ಕಾಣವಹುದಾಗಿದೆ ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಬಗ್ಗೆ ಶಾ, ಬಿಸಿಸಿಐಗೆ ವಿವರಣೆ ನೀಡಿದ್ದಾರೆ.

  • ಲಂಕಾದಲ್ಲಿ ಕೋಮು ಸಂಘರ್ಷ, ಮಸೀದಿ ಮೇಲೆ ದಾಳಿ – ಫೇಸ್‍ಬುಕ್, ವಾಟ್ಸಾಪ್ ಬ್ಯಾನ್

    ಲಂಕಾದಲ್ಲಿ ಕೋಮು ಸಂಘರ್ಷ, ಮಸೀದಿ ಮೇಲೆ ದಾಳಿ – ಫೇಸ್‍ಬುಕ್, ವಾಟ್ಸಾಪ್ ಬ್ಯಾನ್

    ನವದೆಹಲಿ: ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ದಾಳಿಯಿಂದ ಕೋಮುಗಲಭೆ ಜಾಸ್ತಿಯಾಗಿದ್ದು ಮಸೀದಿ ಹಾಗೂ ಮುಸ್ಲಿಂ ವ್ಯಾಪಾರಿಗಳ ಅಂಗಡಿ ಮೇಲೆ ದಾಳಿ ಹೆಚ್ಚಾಗುತ್ತಿದೆ. ಹೀಗಾಗಿ ತಾತ್ಕಾಲಿಕವಾಗಿ ಶ್ರೀಲಂಕಾದಲ್ಲಿ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಲಾಗಿದೆ.

    ಫೇಸ್‍ಬುಕ್ ಮತ್ತು ವಾಟ್ಸಾಪ್ ಸೇರಿದಂತೆ ಕೆಲವು ಸಾಮಾಜಿಕ ಜಾಲತಾಣಗಳನ್ನು ಶ್ರೀಲಂಕಾ ಸರ್ಕಾರ ನಿಷೇಧಿಸಿದೆ. ಈಸ್ಟರ್ ದಿನದಂದು ಸಂಭವಿಸಿದ ಬಾಂಬ್ ದಾಳಿಯಲ್ಲಿ 290ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಇದಾದ ಬಳಿಕ ಮಸೀದಿ ಹಾಗೂ ಮುಸ್ಲಿಂ ವ್ಯಾಪಾರಿಗಳ ಮೇಲೆ ದಾಳಿಗಳು ಆರಂಭವಾಗಿದೆ. ಈ ಹಿನ್ನಲೆಯಲ್ಲಿ ಈಗ ಶ್ರೀಲಂಕಾ ಸರ್ಕಾರ ಈ ಕ್ರಮವನ್ನು ತೆಗೆದುಕೊಂಡಿದೆ.

    ಬಹುಪಾಲು ಕ್ರಿಶ್ಚಿಯನ್ ಧರ್ಮದವರೇ ವಾಸಿಸುವ ಪಶ್ಚಿಮ ಕರಾವಳಿಯ ಪಟ್ಟಣ ಚಿಲಾದಲ್ಲಿ ಫೇಸ್‍ಬುಕ್ ಮೂಲಕ ಪ್ರಾರಂಭವಾದ ಗಲಾಟೆ ಮುಸ್ಲಿಂರ ಮೇಲೆ ಹಲ್ಲೆ ನಡೆಯುವ ಮಟ್ಟಿಗೆ ಬಂದು ನಿಂತಿದೆ. ಈ ವಿವಾದದಿಂದ ಸಾರ್ವಜನಿಕರು ಹಲವಾರು ಮಸೀದಿ ಹಾಗೂ ಮುಸ್ಲಿಂ ವ್ಯಾಪಾರಿಗಳ ಅಂಗಡಿ ಮೇಲೆ ಕಲ್ಲು ತೂರಾಟವನ್ನು ನಡೆಸಿದ್ದಾರೆ.

    ಈ ದಾಳಿಯಲ್ಲಿ ಹಲವು ಮಸೀದಿಗಳು ಮತ್ತು ಮುಸ್ಲಿಂ ಮನೆಗಳು ಹಾನಿಗೀಡಾಗಿವೆ ಎಂದು ಶ್ರೀಲಂಕಾದ ಮುಸ್ಲಿಂ ಕೌನ್ಸಿಲ್ ಹೇಳಿದೆ. ಆದರೆ ನಿಖರವಾದ ಹಾನಿ ಮತ್ತು ಬಂಧನಕ್ಕೆ ಒಳಗಾದವರ ಸಂಖ್ಯೆಯು ಸ್ಪಷ್ಟವಾಗಿ ಲಭ್ಯವಾಗಿಲ್ಲ.

    ಸಾಮಾಜಿಕ ಜಾಲತಾಣಗಳಲ್ಲಿ ಕೋಮುಗಲಭೆಗಳಿಗೆ ಉತ್ತೇಜನ ನೀಡುವಂತಹ ಪೋಸ್ಟ್ ಹಾಗೂ ಸಂದೇಶಗಳು ರವಾನೆಯಾಗುತ್ತಿದೆ. ಆದ್ದರಿಂದ ರಾಷ್ಟ್ರದಲ್ಲಿ ಶಾಂತಿ, ಸುವ್ಯವಸ್ಥೆ ಹದಗೆಡುತ್ತಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳ ಮೇಲೆ ನಿಷೇಧ ಹೇರಲಾಗಿದೆ ಎಂದು ಶ್ರೀಲಂಕಾ ಸರ್ಕಾರ ತಿಳಿಸಿದೆ.

  • ಸುಂದರವಾಗಿರುವುದೇ ತಪ್ಪಾಯ್ತು- ಸಿಕ್ಕಾಪಟ್ಟೆ ಚಂದ ಎಂದು ನಟಿಯನ್ನು ನಿಷೇಧಿಸಿದ್ರು!

    ಸುಂದರವಾಗಿರುವುದೇ ತಪ್ಪಾಯ್ತು- ಸಿಕ್ಕಾಪಟ್ಟೆ ಚಂದ ಎಂದು ನಟಿಯನ್ನು ನಿಷೇಧಿಸಿದ್ರು!

    ಪನೋಮ್ ಪೆನ್: ಸಾಮಾನ್ಯವಾಗಿ ಎಲ್ಲರನ್ನೂ ತಕ್ಷಣ ಸೆಳೆಯೋದು ಸೌಂದರ್ಯ. ಅದು ವಸ್ತುವಾಗಿದ್ದರೂ ಸರಿ ಮನುಷ್ಯರಾಗಿದ್ದರೂ ಸರಿ, ಸುಂದರವಾಗಿ ಯಾವುದು ಇರುತ್ತೆ ಜನ ಅತ್ತ ಮುಖ ಮಾಡುತ್ತಾರೆ. ಆದರೆ ಕಾಂಬೋಡಿಯಾದಲ್ಲಿ ನಟಿಯೊಬ್ಬಳು ಅಗತ್ಯಕ್ಕಿಂತ ಹೆಚ್ಚು ಸುಂದರವಾಗಿದ್ದಾಳೆ ಎಂದು ಆಕೆಗೆ ಅಲ್ಲಿನ ಸರ್ಕಾರ ನಿಷೇಧ ಹೇರಿದೆ.

    ಸುಂದರವಾಗಿ ಕಾಣಲು ಹುಡುಗಿಯರು ಇನ್ನಿಲ್ಲದ ಕಸರತ್ತು ಮಾಡ್ತಾರೆ. ಸೌಂದರ್ಯ ವರ್ಧಕ, ಬ್ಯೂಟಿಪಾರ್ಲರ್ ಮೊರೆ ಹೋಗ್ತಾರೆ. ಆದರೆ ಕಾಂಬೋಡಿಯಾದಲ್ಲಿ ನಟಿಯೊಬ್ಬಳಿಗೆ ತನ್ನ ಅತೀಯಾದ ಸೌಂದರ್ಯವೇ ಮುಳುವಾಗಿದೆ. ಕಾಂಬೋಡಿಯನ್ ನಟಿ ಡೆನಿ ನಾನ್(26) ಈಗ ಭಾರಿ ಸುದ್ದಿಯಲ್ಲಿದ್ದಾಳೆ. ಹೌದು, ಡೆನ್ನಿ ನಾನ್‍ಗೆ ಕಾಂಬೋಡಿಯಾ ಸರ್ಕಾರ ಆಕೆ ಸಿಕ್ಕಾಪಟ್ಟೆ ಸುಂದರವಾಗಿದ್ದೀಯ ಎಂದು ಒಂದು ವರ್ಷದ ನಿಷೇಧ ವಿಧಿಸಿದೆ.

    ಡೆನ್ನಿ ಫೋಟೋಗಳು ದೇಶದ ನೀತಿ ಸಂಹಿತೆಯನ್ನು ಉಲ್ಲಂಘಿಸುವಂತಿದೆ. ಅಗತ್ಯಕ್ಕಿಂತ ಹೆಚ್ಚು ಸುಂದರವಾಗಿದ್ದಾಳೆ ಎಂಬುದೇ ನಟಿಯ ನಿಷೇಧಕ್ಕೆ ಕಾರಣ ಎಂದು ಕಾಂಬೋಡಿಯನ್ ಸಂಸ್ಕೃತಿ ಮತ್ತು ಕಲೆ ಸಚಿವಾಲಯ ತಿಳಿಸಿದೆ.

    ಈ ರೀತಿ ನಿಷೇಧಕ್ಕೊಳಗಾಗುವಂತಹ ಯಾವುದೇ ಕೆಲಸ ನಾನು ಮಾಡಿಲ್ಲವೆಂದು ಡೆನ್ನಿ ಹೇಳಿದ್ದಾರೆ. ಡೆನ್ನಿ ಫೇಸ್‍ಬುಕ್ ಪೇಜ್ ಹೊಂದಿದ್ದು, ಅದರಲ್ಲಿ ಆಕೆಯನ್ನು 30 ಲಕ್ಷಕ್ಕೂ ಹೆಚ್ಚು ಮಂದಿ ಫಾಲೋ ಮಾಡುತ್ತಿದ್ದಾರೆ.

  • ದೇವರ ಹುಂಡಿಯಲ್ಲಿ ವಿದೇಶಿ ಕರೆನ್ಸಿ ಹಾಗೂ ನಿಷೇಧಿತ ನೋಟು ಪತ್ತೆ

    ದೇವರ ಹುಂಡಿಯಲ್ಲಿ ವಿದೇಶಿ ಕರೆನ್ಸಿ ಹಾಗೂ ನಿಷೇಧಿತ ನೋಟು ಪತ್ತೆ

    ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಘಾಟಿ ಸುಬ್ರಹಣ್ಯ ಕ್ಷೇತ್ರದ ಹುಂಡಿ ಎಣಿಕೆ ಕಾರ್ಯ ಇಂದು ನಡೆದಿದ್ದು, 28,18,831 ರೂ. ಹಣ ಸಂಗ್ರಹವಾಗಿದೆ.

    ಪ್ರತಿ ತಿಂಗಳು ದೇವಾಲಯದ ಹುಂಡಿ ಎಣಿಕೆ ಕಾರ್ಯ ನಡೆಯಲಿದ್ದು ಏಪ್ರಿಲ್ ತಿಂಗಳ ಹುಂಡಿ ಎಣಿಕೆ ಕಾರ್ಯ ಇಂದು ನಡೆಯಿತು. ಏಪ್ರಿಲ್ ತಿಂಗಳಲ್ಲಿ ಹೆಚ್ಚಿನ ರಜಾ ದಿನಗಳಿದ್ದ ಕಾರಣ ದೇವಾಲಯಕ್ಕೆ ಭಕ್ತರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹೋಗಿದ್ದು, ಅತಿ ಹೆಚ್ಚಿನ ಹಣ ಸಂಗ್ರಹವಾಗಿದೆ.

    ಹುಂಡಿಯಲ್ಲಿ ಬ್ಯಾನ್ ಆಗಿದ್ದ 500 ಮುಖಬೆಲೆಯ 23 ನೋಟುಗಳು ಹಾಗೂ ಅಮೇರಿಕ, ಮಲೇಷ್ಯಾ ಕರೆನ್ಸಿ ಪತ್ತೆಯಾಗಿವೆ. ಇದಲ್ಲದೆ 2 ಗ್ರಾಂ ಬಂಗಾರ ಹಾಗೂ 1 ಕೆಜಿ 250 ಗ್ರಾಂ ಬೆಳ್ಳಿ ಅಭರಣಗಳು ಸಹ ಸಂಗ್ರಹವಾಗಿವೆ. ಈ ಬಾರಿ ಹುಂಡಿ ಎಣಿಕೆ ಕಾರ್ಯದಲ್ಲಿ ಭಕ್ತರು ಸಹ ಭಾಗವಹಿಸಿದ್ದರು. ವಿಡಿಯೋ ಚಿತ್ರೀಕರಣದೊಂದಿಗೆ ಎಣಿಕೆ ಕಾರ್ಯ ನಡೆಸಲಾಗಿದೆ.

  • ಭಾರತದಲ್ಲಿ ಟಿಕ್‍ಟಾಕ್ ಬ್ಯಾನ್ – ಗೂಗಲ್, ಆಪಲ್ ಕಂಪನಿಗಳಿಗೆ ಕೇಂದ್ರ ಸೂಚನೆ

    ಭಾರತದಲ್ಲಿ ಟಿಕ್‍ಟಾಕ್ ಬ್ಯಾನ್ – ಗೂಗಲ್, ಆಪಲ್ ಕಂಪನಿಗಳಿಗೆ ಕೇಂದ್ರ ಸೂಚನೆ

    ನವದೆಹಲಿ: ಜನಪ್ರಿಯ ವಿಡಿಯೋ ಶೇರಿಂಗ್ ಅಪ್ಲಿಕೇಶನ್ ಚೀನಾ ಮೂಲದ ಟಿಕ್ ಟಾಕ್ ಅನ್ನು ಆಪ್‍ಪ್ಲೇ ಸ್ಟೋರ್ ನಿಂದ ತೆಗೆದು ಹಾಕಿ ಎಂದು ಗೂಗಲ್ ಮತ್ತು ಆಪಲ್ ಕಂಪನಿಗಳಿಗೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸೂಚನೆ ನೀಡಿದೆ.

    ಮದ್ರಾಸ್ ಹೈ ಕೋರ್ಟ್ ಈ ಅಪ್ಲಿಕೇಶನ್ ತೆಗೆದು ಹಾಕುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಈ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಅಪ್ಲಿಕೇಶನ್ ತೆಗೆದು ಹಾಕುವಂತೆ ಸೂಚನೆ ನೀಡಿದೆ.

    ಈ ಅಪ್ಲಿಕೇಶನ್ ನಲ್ಲಿ ಜನ ಆಕ್ಷೇಪಾರ್ಹ ವಿಡಿಯೋಗಳನ್ನು ಹಂಚಿ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಹೀಗಾಗಿ ಈ ಆ್ಯಪನ್ನು ನಿಷೇಧಿಸಬೇಕೆಂದು ಅರ್ಜಿದಾರರು ಸಾರ್ವಜನಿಕಾ ಹಿತಾಸಕ್ತಿ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದರು. ಅರ್ಜಿದಾರರ ವಾದವನ್ನು ಪುರಸ್ಕರಿಸಿದ ಮದ್ರಾಸ್ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಆ್ಯಪ್ ನಿಷೇಧಿಸುವಂತೆ ಏ.3 ರಂದು ಮಧ್ಯಂತರ ಆದೇಶ ಹೊರಡಿಸಿತ್ತು.

    ಟಿಕ್ ಟಾಕ್ ಆ್ಯಪನ್ನು ಅಭಿವೃದ್ಧಿಪಡಿಸಿದ ಬೈಟ್‍ಡಾನ್ಸ್ ಟೆಕ್ನಾಲಜಿ ಈ ಆದೇಶಕ್ಕೆ ತಡೆ ನೀಡುವಂತೆ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಮಂಗಳವಾರ ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾ. ರಂಜನ್ ಗೊಗೋಯ್ ಮತ್ತು ನ್ಯಾ. ಸಂಜೀವ್ ಖನ್ನಾ ಅವರಿದ್ದ ದ್ವಿಸದಸ್ಯ ಪೀಠ ಈ ಆದೇಶಕ್ಕೆ ತಡೆ ನೀಡುವುದಿಲ್ಲ ಎಂದು ಹೇಳಿ ಮುಂದಿನ ವಿಚಾರಣೆಯನ್ನು ಏಪ್ರಿಲ್ 22ಕ್ಕೆ ಮುಂದೂಡಿತು.

    ಸುಪ್ರೀಂ ಕೋರ್ಟ್ ಮದ್ರಾಸ್ ಹೈ ಕೋರ್ಟ್ ಆದೇಶಕ್ಕೆ ತಡೆ ನೀಡದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಆ್ಯಪನ್ನು ಕಿತ್ತು ಹಾಕುವಂತೆ ಆಪಲ್ ಮತ್ತು ಗೂಗಲ್ ಕಂಪನಿಗಳಿಗೆ ಸೂಚಿಸಿದೆ. ಕೇಂದ್ರದ ಸೂಚನೆಯ ಹಿನ್ನೆಲೆಯಲ್ಲಿ ಗೂಗಲ್ ಮತ್ತು ಆಪಲ್ ಕಂಪನಿ ಆ್ಯಪ್ ಸ್ಟೋರ್ ನಿಂದ ಟಿಕ್ ಟಾಕ್ ಕಿತ್ತು ಹಾಕಿದೆ.

    ಕಂಪನಿ ಸ್ಪಷ್ಟನೆ:
    ವಿವಾದ ಸಂಬಂಧ ಸ್ಪಷ್ಟನೆ ನೀಡಿರುವ ಬೈಟ್‍ಡಾನ್ಸ್ ಟೆಕ್ನಾಲಜಿ, ಟಿಕ್ ಟಾಕ್ ನಲ್ಲಿ ಶೇರ್ ಮಾಡಲಾಗುತ್ತಿರುವ ಜನರ ವಿಡಿಯೋಗಳಿಗೆ ಕಂಪನಿಯನ್ನು ಜವಾಬ್ದಾರಿಯನ್ನಾಗಿ ಮಾಡಲು ಸಾಧ್ಯವಿಲ್ಲ. ಭಾರತದ ಕಾನೂನಿನ ಮೇಲೆ ನಂಬಿಕೆ ಗೌರವವಿದ್ದು ಇಲ್ಲಿಯವರೆಗೆ ಸುಮಾರು 60 ಲಕ್ಷ ಆಕ್ಷೇಪಾರ್ಹ ವಿಡಿಯೋಗಳನ್ನು ಡಿಲೀಟ್ ಮಾಡಿದ್ದೇವೆ. ಈ ಸಂಬಂಧ ವಿಡಿಯೋಗಳ ಮೇಲೆ ಮತ್ತಷ್ಟು ನಿಗಾ ವಹಿಸುತ್ತೇವೆ ಎಂದು ತಿಳಿಸಿದೆ.

    ಆ್ಯಪ್ ವಿಶ್ಲೇಷಣಾ ಸಂಸ್ಥೆ ಸೆನ್ಸರ್ ಟವರ್ ಪ್ರಕಾರ ಭಾರತದಲ್ಲಿ 24 ಕೋಟಿಗೂ ಹೆಚ್ಚು ಟಿಕ್ ಟಾಕ್ ಅಪ್ಲಿಕೇಶನ್ ಡೌನ್‍ಲೋಡ್ ಆಗಿದೆ. 2016ರ ಸೆಪ್ಟೆಂಬರ್ ತಿಂಗಳಿನಲ್ಲಿ ಟಿಕ್ ಟಾಕ್ ಬಿಡುಗಡೆಯಾಗಿತ್ತು.

    ಟಿಕ್ ಟಾಕ್‍ನಂತಹ ಆ್ಯಪ್ ಯುವಜನತೆಯ ಭವಿಷ್ಯ ಹಾಗೂ ಮಕ್ಕಳ ಮನಸ್ಥಿತಿಯನ್ನು ಹಾಳು ಮಾಡುತ್ತಿದೆ. ಈ ಕುರಿತು ಮದ್ರಾಸ್ ಹೈ ಕೋರ್ಟ್ ನ  ನ್ಯಾ. ಎನ್ ಕಿರುಬಕರನ್ ಹಾಗೂ ನ್ಯಾ. ಎಸ್ ಸುಂದರ್ ಅವರಿದ್ದ ದ್ವಿಸದಸ್ಯ ಪೀಠ ಟಿಕ್ ಟಾಕ್ ವಿಡಿಯೋಗಳನ್ನು ಪ್ರಸಾರ ಮಾಡುವ ಮಾಧ್ಯಮಗಳನ್ನು ನಿಷೇಧಿಸುವಂತೆ ಆದೇಶಿಸಿದ್ದರು. ಮಕ್ಕಳು ಸೈಬರ್ ಸಂತ್ರಸ್ತ್ರರಾಗುವುದನ್ನು ತಪ್ಪಿಸಲು ಅಮೆರಿಕ ಸರ್ಕಾರ ಮಕ್ಕಳ ಆನ್‍ಲೈನ್ ಗೌಪ್ಯತೆ ರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದಿದೆ. ಇದೇ ರೀತಿಯಲ್ಲಿ ಕೇಂದ್ರ ಸರ್ಕಾರ ಕಾನೂನು ರೂಪಿಸಬೇಕು ಎಂದು ಪೀಠ ಅಭಿಪ್ರಾಯಪಟ್ಟಿತ್ತು.

    ಫೆಬ್ರವರಿಯಲ್ಲಿ ತಮಿಳುನಾಡು ವಿಧಾನಸಭಾ ಅಧಿವೇಶನದಲ್ಲಿ ನಾಗಪಟ್ಟಣದ ಶಾಸಕ ತಮೀಮ್ ಅನ್ಸಾರಿ ಈ ಅಪ್ಲಿಕೇಶನ್ ಅನ್ನು ನಿಷೇಧ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಅಪ್ಲಿಕೇಶನ್ ನಿಂದಾಗಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುತ್ತಿದೆ ಎಂದು ಸದನಕ್ಕೆ ತಿಳಿಸಿದ್ದರು.

  • ಗಮನಿಸಿ, ಮಲೆನಾಡಿನ ಹಲವು ಪ್ರೇಕ್ಷಣೀಯ ಸ್ಥಳಕ್ಕೆ ಪ್ರವಾಸಿಗರಿಗಿಲ್ಲ ಎಂಟ್ರಿ!

    ಗಮನಿಸಿ, ಮಲೆನಾಡಿನ ಹಲವು ಪ್ರೇಕ್ಷಣೀಯ ಸ್ಥಳಕ್ಕೆ ಪ್ರವಾಸಿಗರಿಗಿಲ್ಲ ಎಂಟ್ರಿ!

    ಚಿಕ್ಕಮಗಳೂರು: ಮರಣ ಮೃದಂಗ ಬಾರಿಸುತ್ತಿರುವ ಮಂಗನಜ್ವರಕ್ಕೆ ಮಲೆನಾಡಿಗರು ತತ್ತರಿಸಿ ಹೋಗಿದ್ದು, ಈ ಕಾಯಿಲೆ ಇಲ್ಲಿಗೆ ಬರುವ ಪ್ರವಾಸಿಗರಿಗೂ ತಗಲುವ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವು ಪ್ರೇಕ್ಷಣೀಯ ಸ್ಥಳಕ್ಕೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ.

    ಮಲೆನಾಡು ಹಾಗೂ ಸುತ್ತಮುತ್ತಲ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿರೋ ಕ್ಯಾಸನೂರು ಅರಣ್ಯ ಕಾಯಿಲೆ (ಕೆಎಫ್‍ಡಿ) ವೈರಾಣುವಿನಿಂದ ಅನೇಕ ಮಂದಿ ಮೃತಪಟ್ಟಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ಈ ಕಾಯಿಲೆ ಈ ಭಾಗಕ್ಕೆ ಬರುವ ಪ್ರವಾಸಿಗರಿಗೂ ತಗಲಬಾರದೆಂದು ಮುಂಜಾಗೃತೆ ಕ್ರಮವಾಗಿ ಪ್ರವಾಸಿಗರಿಗೆ ಮಲೆನಾಡಿನ ಪ್ರವಾಸಿ ತಾಣಗಳಿಗೆ ಪ್ರವೇಶವನ್ನು ನಿಷೇಧಿಸಿದೆ. ಕುದುರೆಮುಖಕ್ಕೆ ಒಳಪಡುವ ಹಲವು ಪ್ರದೇಶಗಳಲ್ಲಿ ಟ್ರಕ್ಕಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ:ಏನಿದು ಮಂಗನ ಜ್ವರ? ಕಾಯಿಲೆ ಹೇಗೆ ಬರುತ್ತೆ? ರೋಗ ಲಕ್ಷಣ ಏನು? ಚಿಕಿತ್ಸೆ ಹೇಗೆ- ಇಲ್ಲಿದೆ ಸಂಪೂರ್ಣ ಮಾಹಿತಿ

    ಮಂಗನ ಕಾಯಿಲೆ ಹಿನ್ನೆಲೆಯಲ್ಲಿ ಗಣನೀಯವಾಗಿ ಪ್ರವಾಸಿಗರ ಸಂಖ್ಯೆ ಇಳಿಮುಖಗೊಂಡಿದೆ. ಪ್ರವಾಸಿಗರ ಚಾರಣಕ್ಕೆ ಅರಣ್ಯ ಇಲಾಖೆಯಿಂದ ನಿಷೇಧ ಹೇರಿದೆ. ಈ ಭಾಗದಲ್ಲಿ ಕೆ.ಎಫ್.ಡಿ ವೈರಾಣು ಪತ್ತೆ ಹಿನ್ನೆಲೆ ಕುದುರೆಮುಖ ಗಿರಿಶ್ರೇಣಿ, ಕೂಡಲ್ ಫಾಲ್ಸ್, ಕೊಡಚಾದ್ರಿ, ಕುರೆಂಜಲ್ ಗಿರಿಶ್ರೇಣಿ ಪ್ರದೇಶಗಳಿಗೆ ಪ್ರವಾಸಿಗರು ಪ್ರವೇಶಿಸಬಾರದೆಂದು ಅರಣ್ಯ ಇಲಾಖೆ ಸೂಚನೆ ನೀಡಿದೆ.

    ಅಷ್ಟೇ ಅಲ್ಲದೆ ಕಾರ್ಕಳಕ್ಕೆ ಒಳಪಡುವ ಪ್ರದೇಶದಲ್ಲೂ ಟ್ರಕ್ಕಿಂಗ್ ನಿಷೇಧಿಸಲಾಗಿದೆ. ಕಾರ್ಕಳ ಹಾಗೂ ಚಿಕ್ಕಮಗಳೂರು, ಕುದುರೆಮುಖ ವ್ಯಾಪ್ತಿಯಲ್ಲಿ ಕೆಎಫ್‍ಡಿ ಭೀತಿ ಹೆಚ್ಚಾಗಿದ್ದು, ಮುಂಜಾಗೃತೆ ಕ್ರಮವಾಗಿ ಅರಣ್ಯ ಇಲಾಖೆ ಮಲೆನಾಡಿಗೆ ಬರೋ ಪ್ರವಾಸಿಗರಿಗೆ ಹಾಗೂ ಜನರಿಗೆ ಎಚ್ಚರದಿಂದಿರಲು ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಏಕಾಏಕಿ ಮದ್ಯ ನಿಷೇಧ ಸಾಧ್ಯವಿಲ್ಲ- ಸಿಎಂ ಕುಮಾರಸ್ವಾಮಿ

    ಏಕಾಏಕಿ ಮದ್ಯ ನಿಷೇಧ ಸಾಧ್ಯವಿಲ್ಲ- ಸಿಎಂ ಕುಮಾರಸ್ವಾಮಿ

    ಬೆಂಗಳೂರು: ಮದ್ಯವನ್ನು ಏಕಾಏಕಿ ನಿಷೇಧ ಮಾಡಲು ಸಾಧ್ಯವಿಲ್ಲ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

    ಮದ್ಯಪಾನ ನಿಷೇಧಕ್ಕಾಗಿ ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಇಂದು ಪ್ರತಿಕ್ರಿಯೆ ನೀಡಿದ ಸಿಎಂ, ಸಾರಾಯಿ ನಿಷೇಧ ಮಾಡಿದ್ದು ನಾವೇ. ಆದರೆ ಮದ್ಯ ನಿಷೇಧದ ಸಾಧಕ-ಬಾಧಕಗಳ ಕುರಿತು ಸಂಪುಟದಲ್ಲಿ ಚರ್ಚೆ ಮಾಡಲಾಗುತ್ತದೆ. ಅಧಿಕಾರಿಗಳು, ಸಚಿವರ ಜೊತೆ ಚರ್ಚೆ ನಡೆಸಿದ ಬಳಿಕ ಸೂಕ್ತ ತಿರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

    ಮದ್ಯಪಾನ ನಿಷೇಧಕ್ಕೆ ಆಗ್ರಹಿಸಿ ಸಾವಿರಾರು ಮಹಿಳೆಯರು ಚಿತ್ರದುರ್ಗದಿಂದ ಜನವರಿ 19ರಂದು ಕಾಲ್ನಡಿಗೆ ಮೂಲಕ ಬೆಂಗಳೂರಿಗೆ ಹೊರಟಿದ್ದರು. ಸತತ 10 ದಿನಗಳ ಕಾಲ ನಡೆದುಕೊಂದು ಬಂದು ಮಂಗಳವಾರ ರಾಜಧಾನಿಯನ್ನು ತಲುಪಿದ್ದಾರೆ. ಮಲ್ಲೇಶ್ವರಂನ ಗ್ರೌಂಡ್‍ನಲ್ಲಿ ವಾಸ್ತವ್ಯ ಹೂಡಿದ್ದ ಮಹಿಳೆಯರು ಚಳಿಯಲ್ಲೇ ರಾತ್ರಿ ಕಳೆದರು. ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿರುವ ಹಿನ್ನಲೆಯಲ್ಲಿ ಅವರನ್ನು ಫ್ರೀಡಂ ಪಾರ್ಕ್ ಬಳಿಯೇ ತಡೆಯಲು ಪೊಲೀಸರು ಪ್ಲಾನ್ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಮುಂಬೈ ಅಂಡರ್ – 16 ತಂಡದ ನಾಯಕನಿಗೆ 3 ವರ್ಷ ನಿಷೇಧ

    ಮುಂಬೈ ಅಂಡರ್ – 16 ತಂಡದ ನಾಯಕನಿಗೆ 3 ವರ್ಷ ನಿಷೇಧ

    – ಸಹ ಆಟಗಾರರ ಮುಂದೆ ನಾಯಕನ ಎಕ್ಸ್ ಪೋಸ್ ಕುಚೇಷ್ಠೆ

    ಮುಂಬೈ: ಮುಂಬೈ ಕ್ರಿಕೆಟ್ ಅಸೋಸಿಯೇಶನ್ (ಎಂಸಿಎ) ಸಂಸ್ಥೆ ಅಂಡರ್ 16 ತಂಡದ ನಾಯಕ ಮುಷೀರ್ ಖಾನ್ ಮೇಲೆ 3 ವರ್ಷಗಳ ನಿಷೇಧ ಹೇರಲು ತೀರ್ಮಾನಿಸಿದೆ.

    ತಂಡದ ಆಟಗಾರರ ಮುಂದೆ ಅಶ್ಲೀಲವಾಗಿ ವರ್ತಿಸಿರುವ ಆರೋಪದ ಮೇರೆಗೆ ಎಂಸಿಎ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಆಂಧ್ರಪ್ರದೇಶದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ನಡೆದ ವಿಜಯ್ ಮರ್ಚೆಂಟ್ ಕ್ವಾರ್ಟರ್ ಫೈನಲ್ ಪಂದ್ಯದ ವೇಳೆ ಘಟನೆ ನಡೆದಿದ್ದು, ಈ ಕುರಿತು ತಂಡದ ಆಟಗಾರು ಮಂಡಳಿಗೆ ದೂರು ನೀಡಿದ್ದರು. ಅಲ್ಲದೇ ಮುಷೀರ್ ಖಾನ್ ಈ ಹಿಂದೆಯೂ ಕೂಡ ಅಸಭ್ಯ ವರ್ತನೆ ತೋರಿದ್ದ ಬಗ್ಗೆ ದೂರುಗಳು ಕೇಳಿ ಬಂದಿತ್ತು.

    ಮುಂಬೈ ಸಂಸ್ಥೆಯ ನಿಷೇಧದ ಪರಿಣಾಮವಾಗಿ ಮುಷೀರ್ ಖಾನ್ 2022ರ ವರೆಗೂ ಯಾವುದೇ ತಂಡದ ಪರ ಆಡುವ ಆಗಿಲ್ಲ. ಎಂಸಿಎ ಆಡಳಿತ ಮಂಡಳಿಯ ಈ ನಿರ್ಧಾರವನ್ನು ಕ್ರಿಕೆಟ್ ಕ್ಲಬ್ ಕೂಡ ಸ್ವಾಗತಿಸಿದೆ. ಅಲ್ಲದೇ ಇಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕು ಸಂಸ್ಥೆಗೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಈ ನಿರ್ಧಾರ ಕೇವಲ ಅಂಡರ್ 16 ತಂಡದ ಆಟಗಾರರ ಮೇಲೆ ಮಾತ್ರವಲ್ಲದೇ ರಣಜಿ ಆಟಗಾರರ ಮೇಲೂ ಪರಿಣಾಮ ಉಂಟು ಮಾಡಲಿದೆ ಎಂದು ತಿಳಿಸಿದೆ.

    ಅಂದಹಾಗೇ ಮುಷೀರ್ ಖಾನ್ ಟೀಂ ಇಂಡಿಯಾ ಯುವ ಆಟಗಾರ ಸರ್ಫರಾಜ್ ಖಾನ್ ಸಹೋದರನಾಗಿದ್ದಾನೆ. ಸರ್ಫರಾಜ್ ಖಾನ್ ಇಂಡಿಯಾ ಅಂಡರ್ 19 ತಂಡ ಹಾಗೂ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೊಸ ವರ್ಷದಂದು ಪ್ರವಾಸಿ ತಾಣ ಮುತ್ತತ್ತಿಗೆ ನೋ ಎಂಟ್ರಿ

    ಹೊಸ ವರ್ಷದಂದು ಪ್ರವಾಸಿ ತಾಣ ಮುತ್ತತ್ತಿಗೆ ನೋ ಎಂಟ್ರಿ

    ಮಂಡ್ಯ: ಹೊಸ ವರ್ಷದ ಹಿನ್ನೆಲೆ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮುತ್ತತ್ತಿಗೆ ಒಂದು ದಿನ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಮಳವಳ್ಳಿ ತಹಶೀಲ್ದಾರ್ ಕೆ.ಚಂದ್ರಮೌಳಿ ಆದೇಶ ಹೊರಡಿಸಿದ್ದಾರೆ.

    ಜಿಲ್ಲೆಯ ಮುತ್ತತ್ತಿಯು ಒಂದು ಪ್ರೇಕ್ಷಣಿಯ ಸ್ಥಳ. ಇಲ್ಲಿ ಸುತ್ತಮುತ್ತಲು ಕಾವೇರಿ ನದಿ ಹರಿಯುವುದರಿಂದ ಬೆಂಗಳೂರು, ಕನಕಪುರ, ಮಳವಳ್ಳಿ ಸೇರಿದಂತೆ ಹಲವೆಡೆಯಿಂದ ಹೊಸ ವರ್ಷದ ಹಿನ್ನೆಲೆಯಲ್ಲಿ ಬಹಳಷ್ಟು ಮಂದಿ ಪ್ರವಾಸಿಗರು ಬಂದು ಆಚರಣೆ ಮಾಡುತ್ತಾರೆ. ನಿಸರ್ಗದ ಮಡಿಲಲ್ಲಿ ಮೋಜು ಮಸ್ತಿ ಮಾಡಿ ಹೊಸ ವರ್ಷವನ್ನು ಖುಷಿಯಿಂದ ಸ್ವಾಗತಿಸುತ್ತಾರೆ. ಹೀಗೆ ಸಂಭ್ರಮಿಸುವ ವೇಳೆ ಹಲವು ಅಹಿತಕರ ಘಟನೆಗಳು ಕೂಡ ಈ ಹಿಂದೆ ಸಂಭವಿಸಿದೆ. ಅಲ್ಲದೆ ಪ್ರದೇಶದಲ್ಲಿ ಹೊಸ ವರ್ಷ ಆಚರಣೆಗೆಂದು ಬರುವ ಪುಂಡ ಪೋಕರಿಗಳಿಗೆ ಕಡಿವಾಣ ಹಾಕಬೇಕೆಂದು ಇಲ್ಲಿನ ಆಡಳಿತ ಮಂಡಳಿ ಹೊಸ ತೀರ್ಮಾನವನ್ನು ತೆಗೆದುಕೊಂಡಿದೆ. ಇದನ್ನೂ ಓದಿ: ಹಚ್ಚಹಸಿರಿನ ಮಧ್ಯೆ ಹಾಲ್ನೊರೆ ಸೂಸುತ್ತಾ ಜುಳು-ಜುಳು ಹರೀತಿದೆ ಇರ್ಪು ಫಾಲ್ಸ್

    ಈ ಬಾರಿ ಮುತ್ತತ್ತಿಯಲ್ಲಿ ಪ್ರವಾಸಿಗರು ಹೊಸ ವರ್ಷ ಆಚರಣೆಗೆ ಬರುವಂತಿಲ್ಲ. ಹೌದು, ಡಿಸೆಂಬರ್ 31 ರ ಬೆಳಗ್ಗೆ 6 ಗಂಟೆಯಿಂದ 2019 ಜನವರಿ 1ರ ಮಧ್ಯರಾತ್ರಿವರೆಗೂ ಪ್ರವಾಸಿಗರ ಪ್ರವೇಶವನ್ನು ಮುತ್ತತ್ತಿಯಲ್ಲಿ ನಿಷೇಧಿಸಲಾಗಿದೆ. ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಮುತ್ತತ್ತಿ ಅರಣ್ಯ ಪ್ರದೇಶದಲ್ಲಿ ಪ್ರವಾಸಿಗರು ಮೋಜು ಮಸ್ತಿ ಮಾಡುವ ಸಾಧ್ಯತೆ ಹೆಚ್ಚಾಗಿದ್ದು, ಕಳೆದ ಕೆಲವು ವರ್ಷಗಳಿಂದ ಹಲವು ಪ್ರಕರಣಗಳು ದಾಖಲಾಗುತ್ತಲೇ ಇದೆ. ಇದನ್ನು ತಡೆಯಬೇಕು ಎಂಬ ಉದ್ದೇಶದಿಂದ ಪೊಲೀಸ್ ಇಲಾಖೆ ಮುತ್ತತ್ತಿಯಲ್ಲಿ ಪ್ರವಾಸಿಗರನ್ನು ಹೊಸ ವರ್ಷ ಆಚರಣೆಗೆ ಬಿಡಬಾರದು ಎಂದು ಅಲ್ಲಿನ ಅಧಿಕಾರಗಳ ಬಳಿ ಮನವಿ ಮಾಡಿಕೊಂಡಿದ್ದರು.

    ಮುತ್ತತ್ತಿ ಅರಣ್ಯ ಪ್ರದೇಶದಲ್ಲಿ ಕಾವೇರಿ ನದಿ ಹರಿಯುತ್ತಿದ್ದು, ಮೋಜು ಮಸ್ತಿ ವೇಳೆ ಅಹಿತಕರ ಘಟನೆ ನಡೆಯುವ ಸಾಧ್ಯತೆ ಇದೆ. ಆದ್ದರಿಂದ ಪ್ರವಾಸಿಗರ ಹಿತದೃಷ್ಟಿಗಾಗಿ ಮುತ್ತತ್ತಿಗೆ ಹೊಸ ವರ್ಷದ ವೇಳೆ ಪ್ರವಾಸಿಗರಿಗೆ ನಿಷೇಧ ಹೇರಿ ಮಳವಳ್ಳಿ ತಹಶೀಲ್ದಾರ್ ಕೆ.ಚಂದ್ರಮೌಳಿ ಅವರು ಪೊಲೀಸರ ಮನವಿಗೆ ಸಮ್ಮತಿಸಿ ಆದೇಶ ಹೊರಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv