Tag: ನಿಷೇಧ

  • ಅಂಡರ್-19 ವಿಶ್ವಕಪ್ ತಂಡದ ಸ್ಟಾರ್ ಆಟಗಾರನಿಗೆ 1 ವರ್ಷದ ನಿಷೇಧದ ಬರೆ

    ಅಂಡರ್-19 ವಿಶ್ವಕಪ್ ತಂಡದ ಸ್ಟಾರ್ ಆಟಗಾರನಿಗೆ 1 ವರ್ಷದ ನಿಷೇಧದ ಬರೆ

    ನವದೆಹಲಿ: 2018ರ ಅಂಡರ್-19 ವಿಶ್ವಕಪ್ ಫೈನಲ್‍ನಲ್ಲಿ ಶತಕ ಸಿಡಿಸಿದ್ದ ಆಟಗಾರ ಮಂಜೋತ್ ಕಾಲ್ರಾ ರಣಜಿ ಕ್ರಿಕೆಟ್‍ಗೆ 1 ವರ್ಷ ನಿಷೇಧವನ್ನು ಎದುರಿಸಿದ್ದಾರೆ. ಡೆಲ್ಲಿ ಮತ್ತು ಜಿಲ್ಲಾ ಕ್ರಿಕೆಟ್ ಬೋರ್ಡ್ (ಡಿಡಿಸಿಎ) ನಿಷೇಧವನ್ನು ವಿಧಿಸಿದ್ದು, ವಯಸ್ಸಿನ ತಪ್ಪು ಪ್ರಮಾಣ ಪತ್ರ ನೀಡಿ ವಯಸ್ಸನ್ನು ಮರೆಮಾಚಿದ ಆರೋಪವನ್ನು ಮಂಜೀತ್ ಕಾಲ್ರಾ ಎದುರಿಸುತ್ತಿದ್ದಾರೆ.

    ಎಡಗೈ ಬ್ಯಾಟ್ಸ್ ಮನ್ ಆಗಿರುವ ಮಂಜೋತ್ ಕಾಲ್ರಾ ಅಂಡರ್-19 ವಿಶ್ವಕಪ್ ನಲ್ಲಿ ಭಾರತ ತಂಡದ ಪರ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಆದರೆ ಕಾಲ್ರಾ ತಮ್ಮ ಅಂಡರ್-16 ಹಾಗೂ ಅಂಡರ್-19 ಕ್ರಿಕೆಟ್ ಆಡುವ ವೇಳೆ ಡೆಲ್ಲಿ ಸಂಸ್ಥೆಗೆ ನಕಲಿ ಪ್ರಮಾಣ ಪತ್ರ ನೀಡಿದ್ದರು.

    ಇಂತಹದ್ದೇ ಅಪರಾಧದಲ್ಲಿ ದೆಹಲಿ ತಂಡದ ಉಪನಾಯಕ ನಿತೀಶ್ ರಾಣಾ ಅವರಿಗೆ ಯಾವುದೇ ಶಿಕ್ಷೆಯಾಗಿಲ್ಲ. ಶಿಸ್ತುಕ್ರಮದಿಂದ ಅವರಿಗೆ ವಿನಾಯಿತಿ ನೀಡಿ, ಹೆಚ್ಚಿನ ದಾಖಲೆಗಳನ್ನು ನೀಡಲು ಕೋರಲಾಗಿತ್ತು.

    ಡೆಲ್ಲಿ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರಾಗಿದ್ದ ನಿವೃತ್ತ ನ್ಯಾಯಮೂರ್ತಿ, ಬಾದರ್ ದುರಾಜ್ ಅಹ್ಮದ್ ಅವರು ತಮ್ಮ ಅಂತಿಮ ದಿನದಂದು ಆದೇಶವನ್ನು ಜಾರಿ ಮಾಡಿದ್ದಾರೆ. ಆದೇಶದ ಅನ್ವಯ ಕಾಲ್ರಾ 1 ವರ್ಷ ರಣಜಿ ಕ್ರಿಕೆಟ್ ಪಂದ್ಯಗಳನ್ನು ಆಡುವಂತಿಲ್ಲ. ಅಲ್ಲದೇ ಅಂಡರ್-23 ಕ್ರಿಕೆಟ್‍ಗೆ 2 ವರ್ಷ ನಿಷೇಧ ಮಾಡಲಾಗಿದೆ.

    ಬಿಸಿಸಿಐ ಮಾಹಿತಿಯ ಅನ್ವಯ ಕಾಲ್ರಾ 20 ವರ್ಷ, 351 ದಿನ ವಯಸ್ಸಾಗಿದ್ದು, ಕಳೆದ ವಾರ ಅಂಡರ್-23 ರಲ್ಲಿ ದೆಹಲಿ ತಂಡದಲ್ಲಿ ಬಂಗಾಳದ ವಿರುದ್ಧ ನಡೆದ ಪಂದ್ಯದಲ್ಲಿ ಭಾಗವಹಿಸಿದ್ದರು. ಈ ಪಂದ್ಯದಲ್ಲಿ ಕಾಲ್ರಾ 80 ರನ್ ಗಳಿಸಿದ್ದರು. ದೆಹಲಿ ತಂಡದಲ್ಲಿ ಶಿಖರ್ ಧವನ್ ಅವರ ಸ್ಥಾನವನ್ನು ರೀ-ಪ್ಲೇಸ್ ಮಾಡುವ ಎಂಬ ಭರವಸೆಯನ್ನು ಮೂಡಿಸಿದ್ದರು. ಐಪಿಎಲ್‍ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸದಸ್ಯರಾಗಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಡೆಲ್ಲಿ ಕ್ರಿಕೆಟ್ ಮಂಡಳಿಯ ಪ್ರಧಾನ ಕಾರ್ಯದರ್ಶಿ ವಿನೋದ್ ತಿಹರಾ, ಈ ಹಿಂದೆ ನಿತೀಶ್ ರಾಣಾ ಎಂದು ಅಪರಾಧಿ ಎಂದು ಹೇಳಲಾಗದ ಅದೇ ಅಪರಾಧಕ್ಕೆ ಕಾಲ್ರಾ ಅವರಿಗೆ ಶಿಕ್ಷೆ ವಿಧಿಸಲಾಗಿದೆ. ಇದು ತಮಗೆ ಅಚ್ಚರಿಯನ್ನು ತಂದಿದ್ದು, ಬಾದರ್ ದುರಾಜ್ ಅಹ್ಮದ್ ಅವರು ತಮ್ಮ ಕರ್ತವ್ಯದ ಅಂತಿಮ ದಿನದ ರಾತ್ರಿ 11:30ರ ಮೊದಲು ಈ ಆದೇಶವನ್ನು ನೀಡಿದ್ದಾರೆ. ಈಗ ಇದು ಸ್ವಲ್ಪ ವಿಲಕ್ಷಣವಾಗಿ ಕಾಣುತ್ತಿದೆ. ಆದರೆ ಈ ಹುದ್ದೆಗೆ ಹೊಸಬರು ನೇಮಕವಾಗಿ ಕಾಲ್ರಾ ಮೇಲಿನ ನಿಷೇಧವನ್ನು ತೆರವು ಮಾಡುವವರೆಗೂ ನಾವು ಆತನನ್ನು ತಂಡಕ್ಕೆ ಪರಿಗಣಿಸಲು ಸಾಧ್ಯವಿಲ್ಲ. ನಾವು ಅಸಹಾಯಕರಾಗಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  • ಮಧ್ಯಪ್ರದೇಶದಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ನಿಷೇಧ

    ಮಧ್ಯಪ್ರದೇಶದಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ನಿಷೇಧ

    ಭೋಪಾಲ್: ಮಧ್ಯಪ್ರದೇಶದಲ್ಲಿ ಗುಜರಾತಿ, ಜೈನ್ ಮತ್ತು ಸಿಂಧಿ ಸಮುದಾಯದವರು ಪ್ರೀ ವೆಡ್ಡಿಂಗ್ ಫೋಟೋಶೂಟ್ ನಿಷೇಧ ಮಾಡಿದ್ದಾರೆ.

    ಭೋಪಾಲ್ ನಲ್ಲಿ ಗುಜರಾತಿ, ಜೈನ ಮತ್ತು ಸಿಂಧಿ ಸಮುದಾಯದ ಮುಖಂಡರು ಮದುವೆಗೆ ಮುಂಚೆಯೇ ವಧು ಮತ್ತು ವರ ಜೊತೆಯಲ್ಲಿ ಫೋಟೋ ತೆಗೆಸಿಕೊಳ್ಳುವುದು ನಮ್ಮ ಸಂಸ್ಕೃತಿಯಲ್ಲ. ಆದ್ದರಿಂದ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿದವರನ್ನು ಸಮುದಾಯದಿಂದ ಹೊರಹಾಕುತ್ತೇವೆ ಎಂದು ಬೆದರಿಕೆ ಹಾಕಿವೆ.

    ಸಮುದಾಯಗಳ ಈ ನಿರ್ಧಾರಕ್ಕೆ ಬೆಂಬಲ ಸೂಚಿಸಿರುವ ಮಧ್ಯಪ್ರದೇಶದ ಸಾರ್ವಜನಿಕ ಸಂಪರ್ಕ ಸಚಿವ ಪಿಸಿ ಶರ್ಮಾ, ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಎಂಬುದು ನಮ್ಮ ಸಂಸ್ಕೃತಿ ಅಲ್ಲ. ಇಲ್ಲಿನ ಜನರು ನಿಷೇಧಿಸಿರುವುದನ್ನು ಸಾಮಾಜಿಕ ದೃಷ್ಟಿಕೋನದಿಂದ ನಾನು ಒಳ್ಳೆಯದು ಎಂದು ನಂಬುತ್ತೇನೆ. ಜನರ ಹಿಂದಿನ ಸಂಸ್ಕೃತಿ ಮತ್ತು ಹಳೆಯ ಸಂಪ್ರದಾಯದ ಪ್ರಕಾರ ಮದುವೆಯಾದರೆ ವಿವಾಹ ಹೆಚ್ಚು ಯಶಸ್ವಿಯಾಗುತ್ತದೆ ಮತ್ತು ಸಂತೋಷದಾಯಕವಾಗಿ ಇರುತ್ತದೆ ಎಂದು ಹೇಳಿದ್ದಾರೆ.

    ಸಮಾಜದ ಈ ನಿರ್ಧಾರವನ್ನು ಸಮರ್ಥನೆ ಮಾಡಿಕೊಂಡಿರುವ ಗುಜರಾತಿ ಸಮುದಾಯದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂಜಯ್ ಪಾಟೀಲ್, ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಎಂಬುದು ಒಂದು ತಪ್ಪು ಕಲ್ಪನೆ. ಎಷ್ಟೋ ವಿವಾಹಗಳು ನಿಶ್ಚಿತಾರ್ಥ ಆದ ನಂತರ ಮುರಿದು ಬೀಳುತ್ತವೆ. ಆದ್ದರಿಂದ ಈ ರೀತಿಯ ಸಂಪ್ರದಾಯವನ್ನು ನಾವು ತಡೆಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

    ಈ ವಿಚಾರದ ಬಗ್ಗೆ ಭೋಪಾಲ್ ಜೈನ ಸಮಾಜದ ಅಧ್ಯಕ್ಷರಾದ ಪ್ರಮೋದ್ ಹಿಮಾಂಶು ಅವರು ಮಾತನಾಡಿ, ನಮ್ಮ ಸಮಾಜದ ಆಧ್ಯಾತ್ಮಿಕ ಗುರುಗಳು ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಅನ್ನು ಅಶ್ಲೀಲ ಎಂದು ಹೇಳಿದ ನಂತರ ನಾವು ನಮ್ಮ ಸಮಾಜದಲ್ಲಿ ಅದನ್ನು ನಿಷೇಧ ಮಾಡಿದ್ದೇವೆ ಎಂದು ಹೇಳಿದ್ದಾರೆ.

    ಫೋಟೋ ಶೂಟ್ ನಿಷೇಧಿಸಿದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಸಿಂಧಿ ಸಮಾಜದ ಅಧ್ಯಕ್ಷ ಭಗವಾನ್ ದಾಸ್ ಇಸ್ರಾನಿ ಅವರು, ನಮ್ಮ ಸಮುದಾಯದಲ್ಲೂ ಕೂಡ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಅನ್ನು ನಿಷೇಧ ಮಾಡಿದ್ದೇವೆ. ಈ ನಿಯಮವನ್ನು ಪಾಲಿಸುವಂತೆ ನಮ್ಮ ಸಮುದಾಯದ ಸದಸ್ಯರಿಗೆ ಈಗಾಗಲೇ ತಿಳಿಸಿದ್ದೇವೆ ಎಂದು ಹೇಳಿದ್ದಾರೆ.

    ಕಳೆದ ವರ್ಷ ಚತ್ತೀಸ್‍ಗಢದ ಸಿಂಧಿ ಮತ್ತು ಮಹೇಶ್ವರಿ ಸಮುದಾಯಗಳು ಇದೇ ರೀತಿಯಲ್ಲಿ ಮದುವೆಗೂ ಮುಂಚೆಯೇ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಬಾರದು ಎಂದು ನಿಷೇಧ ಮಾಡಿದ್ದವು.

  • ಕ್ರಿಕೆಟ್ ಪಂದ್ಯಕ್ಕೂ ಮುನ್ನ ಇನ್‍ಸ್ಟಾ ಪೋಸ್ಟ್ – ಆಟಗಾರ್ತಿಗೆ 3 ತಿಂಗಳು ನಿಷೇಧ

    ಕ್ರಿಕೆಟ್ ಪಂದ್ಯಕ್ಕೂ ಮುನ್ನ ಇನ್‍ಸ್ಟಾ ಪೋಸ್ಟ್ – ಆಟಗಾರ್ತಿಗೆ 3 ತಿಂಗಳು ನಿಷೇಧ

    ಸಿಡ್ನಿ: ಕ್ರಿಕೆಟ್ ಮೈದಾನದಲ್ಲಿ ಅಸಭ್ಯ ವರ್ತನೆ ತೋರಿದ ಆಟಗಾರರು/ ಆಟಗಾರ್ತಿಯರು ನಿಷೇಧಕ್ಕೆ ಒಳಗಾಗಿರುವುದನ್ನು ನೀವು ಓದಿರಬಹುದು. ಆದರೆ ಆಸ್ಟ್ರೇಲಿಯಾದಲ್ಲಿ ಆಡುವ 11 ಮಂದಿ ಆಟಗಾರ್ತಿಯರ ವಿವರವನ್ನು ಪಂದ್ಯಕ್ಕೂ ಮುನ್ನ ಬಹಿರಂಗ ಪಡಿಸಿದ್ದ ಆಟಗಾರ್ತಿಗೆ 3 ತಿಂಗಳ ನಿಷೇಧ ಹೇರಲಾಗಿದೆ.

    ಬಿಗ್ ಬ್ಯಾಷ್ ಲೀಗ್ ಟಿ 20ಯಲ್ಲಿ ಹೋಬಾರ್ಟ್ ತಂಡದ ಕೀಪರ್ ಎಮಿಲಿ ಸ್ಮಿತ್ ಸಿಡ್ನಿ ಥಂಡರ್ ತಂಡದ ವಿರುದ್ಧ ಆಡುತ್ತಿರುವ 11ರ ಬಳಗದ ಆಟಗಾರ್ತಿಯರ ಹೆಸರು ಇರುವ ವಿಡಿಯೋ ಪೋಸ್ಟ್ ಅನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪ್ರಕಟಿಸಿದ್ದರು.

    ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಕ್ರಿಕೆಟ್ ಆಸ್ಟ್ರೇಲಿಯಾ ಭ್ರಷ್ಟಾಚಾರ ನಿಯಮ ಉಲ್ಲಂಘಿಸಿದ್ದಕ್ಕೆ 1 ವರ್ಷ ನಿಷೇಧ ಹೇರಿ 9 ತಿಂಗಳ ಶಿಕ್ಷೆಯನ್ನು ಅಮಾನತುಗೊಳಿಸಿದೆ.

    ಕ್ರಿಕೆಟ್ ಆಸ್ಟ್ರೇಲಿಯಾದ ಭ್ರಷ್ಟಾಚಾರ ವಿರೋಧಿ ನೀತಿ ಸಂಹಿತೆಯ ಪ್ರಕಾರ ಪಂದ್ಯಕ್ಕೂ ಮುನ್ನ ಆಟಗಾರರ/ ಆಟಗಾರ್ತಿಯರ ಹೆಸರನ್ನು ಅನುಮತಿ ಇಲ್ಲದೇ ಯಾರೂ ಪ್ರಕಟಿಸುವಂತಿಲ್ಲ. ಅಷ್ಟೇ ಅಲ್ಲದೆ ತಂಡದ ಒಳಗಿನ ವಿಚಾರವನ್ನು ಸಾಮಾಜಿಕ ಜಾಲತಾಣ/ ಮಾಧ್ಯಮಗಳಿಗೆ ತಿಳಿಸುವಂತಿಲ್ಲ.

    ಪಂದ್ಯಕ್ಕೂ ಮುನ್ನ ತಂಡದ ವಿವರವನ್ನು ಪ್ರಕಟಿಸಿದರೆ ಬೆಟ್ಟಿಂಗ್ ನಡೆಸುವ ಮಂದಿಗೆ ಸಹಾಯವಾಗುತ್ತದೆ. ಹೀಗಾಗಿ ಈ ಪ್ರಕರಣವನ್ನು ಆಸ್ಟ್ರೇಲಿಯಾ ಗಂಭೀರವಾಗಿ ಪರಿಗಣಿಸಿ ಶಿಸ್ತು ಕ್ರಮವನ್ನು ಕೈಗೊಂಡಿದೆ.

    3 ತಿಂಗಳು ನಿಷೇಧ ಇರುವ ಪರಿಣಾಮ ಎಮಿಲಿ ಸ್ಮಿತ್ ಈ ವರ್ಷದ ಬಿಗ್ ಬ್ಯಾಷ್ ಟಿ -20ಯಲ್ಲಿ ಆಡುವ ಎಲ್ಲ ಪಂದ್ಯಗಳನ್ನು ಕಳೆದುಕೊಂಡಿದ್ದಾರೆ.

  • 8 ತಿಂಗಳ ನಿಷೇಧದ ಬಳಿಕ ಪೃಥ್ವಿ ಶಾ ಕಮ್‍ಬ್ಯಾಕ್

    8 ತಿಂಗಳ ನಿಷೇಧದ ಬಳಿಕ ಪೃಥ್ವಿ ಶಾ ಕಮ್‍ಬ್ಯಾಕ್

    ಮುಂಬೈ: ಕಳೆದ 8 ತಿಂಗಳ ಹಿಂದೆ ಬಿಸಿಸಿಐನಿಂದ ನಿಷೇಧಕ್ಕೆ ಒಳಗಾಗಿದ್ದ ಟೀಂ ಇಂಡಿಯಾ ಯುವ ಆರಂಭಿಕ ಆಟಗಾರ ಪೃಥ್ವಿ ಶಾ ಮತ್ತೆ ಕ್ರಿಕೆಟ್‍ಗೆ ಕಮ್‍ಬ್ಯಾಕ್ ಮಾಡುವ ನಿರೀಕ್ಷೆ ಇದ್ದು, ಮುಂಬೈ ತಂಡದ ಪರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.

    ಡೋಪಿಂಗ್ ಪರೀಕ್ಷೆಯಲ್ಲಿ ಪೃಥ್ವಿ ಶಾ ಮಾದಕ ದ್ರವ್ಯ ಸೇವನೆ ಮಾಡಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಬಿಸಿಸಿಐ ನಿಷೇಧ ಹೇರಿ ಆದೇಶ ನೀಡಿತ್ತು. ನ.15ಕ್ಕೆ ಪೃಥ್ವಿ ಶಾ ನಿಷೇಧ ಅಂತ್ಯವಾಗಲಿದ್ದು, ಈ ಹಿನ್ನೆಲೆಯಲ್ಲಿ ಮುಂಬರುವ ಪಂದ್ಯಗಳಲ್ಲಿ ಮುಂಬೈ ತಂಡವನ್ನು ಪೃಥ್ವಿ ಶಾ ಪ್ರತಿನಿಧಿಸುವ ಸಾಧ್ಯತೆ ಇದೆ. ಮುಂಬೈ ಆಯ್ಕೆ ಸಮಿತಿಯ ತಾತ್ಕಾಲಿಕ ಅಧ್ಯಕ್ಷ ಮಿಲಿಂದ್ ಈ ಕುರಿತು ಮಾಹಿತಿ ನೀಡಿದ್ದು, ಪೃಥ್ವಿ ಶಾ ಆಯ್ಕೆಯನ್ನು ಪರಿಗಣಿಸಿ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ.

    ಸದ್ಯ ಮುಂಬೈ ತಂಡ ಸೈಯದ್ ಅಲಿ ಟ್ರೋಫಿಯ ಮೊದಲ 3 ಪಂದ್ಯಗಳಿಗೆ ತಂಡವನ್ನು ಈಗಾಗಲೇ ಘೋಷಣೆ ಮಾಡಲಾಗಿದ್ದು, ಮುಂಬೈ ತಂಡದ ಪ್ರಮುಖ ಯುವ ಆಟಗಾರರಾದ ಶ್ರೇಯರ್ ಅಯ್ಯರ್, ಶಾರ್ದೂಲ್ ಠಾಕೂರ್, ಶಿವಂ ದುಬೆ ಅವರು ಬಾಂಗ್ಲಾ ವಿರುದ್ಧದ ಟಿ20 ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ. ಶಾ ಮೇಲಿನ ನಿಷೇಧ ತೆರವಾಗುವ ವೇಳೆಗೆ ಮುಂಬೈ ಟೂರ್ನಿಯಲ್ಲಿ ತನ್ನ 7 ಪಂದ್ಯಗಳನ್ನು ಆಡಲಿದೆ.

    19 ವರ್ಷದ ಪೃಥ್ವಿ ಶಾ ಟೀಂ ಇಂಡಿಯಾ ಪರ 2018 ರಲ್ಲಿ 2 ಟೆಸ್ಟ್ ಪಂದ್ಯಗಳನ್ನು ವೆಸ್ಟ್ ಇಂಡೀಸ್ ವಿರುದ್ಧ ಆಡಿದ್ದರು. ಈ ಹಿಂದೆ ನಡೆದಿದ್ದ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ವೇಳೆ ಡೋಪಿಂಗ್ ಪರೀಕ್ಷೆ ನಡೆಸಲಾಗಿತ್ತು. ಡೋಪಿಂಗ್ ಪರೀಕ್ಷೆಯಲ್ಲಿ ವಿಫಲರಾದ ಪರಿಣಾಮ ಶಾ ಮಾರ್ಚ್ 16 ರಿಂದ ನವೆಂಬರ್ 15ರ ವರೆಗೂ ಅಮಾನತು ಎದುರಿಸಿದ್ದರು. ಪೃಥ್ವಿ ಶಾ ಮುಂಬೈ ಕ್ರಿಕೆಟ್ ಅಸೋಸಿಯೆಷನ್ ಅಡಿ ನೋಂದಣಿಯಾಗಿದ್ದಾರೆ. ಶಾ ತನ್ನ ಅಜಾಗರೂಕತೆಯಿಂದ ನಿಷೇಧಿತ ವಸ್ತುವನ್ನು ಸೇವಿಸಿದ್ದರು. ಇದನ್ನು ಸಾಮಾನ್ಯ ಕೆಮ್ಮು ಸಿರಪ್‍ಗಳಲ್ಲಿ ಕಾಣಬಹುದಾಗಿದೆ ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿತ್ತು.

  • ನವೆಂಬರ್ 10 ರಂದು ಬೆಂಗಳೂರಿನಾದ್ಯಂತ ಮದ್ಯ ಮಾರಾಟ ಬಂದ್

    ನವೆಂಬರ್ 10 ರಂದು ಬೆಂಗಳೂರಿನಾದ್ಯಂತ ಮದ್ಯ ಮಾರಾಟ ಬಂದ್

    ಬೆಂಗಳೂರು: ನವೆಂಬರ್ 10 ರಂದು ಬೆಂಗಳೂರಿನಾದ್ಯಂತ ಬೆಳಗ್ಗೆ 6 ಗಂಟೆಯಿAದ ಮಧ್ಯರಾತ್ರಿ 12 ಗಂಟೆಯವರೆಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.

    ಈ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಅವರು ಆದೇಶ ಹೊರಡಿಸಿದ್ದಾರೆ. ನವೆಂಬರ್ 10 ರಂದು ಮುಸ್ಲಿಂ ರ ಹಬ್ಬ ಈದ್ ಮಿಲಾದ್ ಇರುವ ಕಾರಣ ಅಂದು ಬೆಳಗ್ಗೆ 6 ರಿಂದ ಮಧ್ಯರಾತ್ರಿ 12 ಗಂಟೆವರೆಗೂ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಆದೇಶದಲ್ಲಿ ಏನಿದೆ?
    ನ.10 ರಂದು ಬೆಂಗಳೂರು ನಗರಾದ್ಯಂತ ಮುಸ್ಲಿಮರು ಈದ್ ಮಿಲಾದ್ ಹಬ್ಬವನ್ನು ಆಚರಿಸುವ ಪ್ರಯುಕ್ತ ಮಸೀದಿಗಳಲ್ಲಿ ಪ್ರಾರ್ಥನೆ ಮುಗಿಸಿ ನಂತರ ಮೆರವಣಿಗಯಲ್ಲಿ ಸ್ಥಬ್ಧ ಚಿತ್ರಗಳು ಧ್ವನಿ ವರ್ಧಕಗಳನ್ನು ಉಪಯೋಗಿಸಿಕೊಂಡು, ಆಯುಧಗಳನ್ನು ಹಾಗೂ ಇನ್ನಿತರೆ ವಸ್ತುಗಳನ್ನು ಪ್ರದರ್ಶಿಸಿ ಕುಣಿಯುತ್ತಾ ರಸ್ತೆಗಳಲ್ಲಿ ವಾಹನಗಳಲ್ಲಿ ನಡಿಗೆಯಲ್ಲಿ ವೈಎಂಸಿಎ ಮೈದಾನ ಹಾಗೂ ನಗರದ ಇತರೆ ಮೈದಾನಗಳಲ್ಲಿ ನಡೆಯುವ ಕಾರ್ಯಕ್ರದಲ್ಲಿ ಭಾಗವಹಿಸಲಿದ್ದಾರೆ.

    ಈ ಮೆರವಣಿಗೆಯಲ್ಲಿ ಹೆಚ್ಚಿನ ಜನರು ಭಾಗವಹಿಸಲಿದ್ದು, ಮೆರವಣಿಗೆ ನಡೆಯುವ ಸಮಯದಲ್ಲಿ ಕಿಡಿಗೇಡಿಗಳು ಮದ್ಯದ ಅಮಲಿನಲ್ಲಿ ಕೃತ್ಯಗಳನ್ನೆಸಗಿ ಸಾರ್ವಜನಿಕ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡುವ ಸಂಭವಿರುತ್ತದೆ. ಈದ್ ಮಿಲಾದ್ ಮೆರವಣಿಗೆಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯುವ ಉದ್ದೇಶದಿಂದ ಹಾಗೂ ಕಾನೂನು ಸುವ್ಯಸ್ಥೆ ಕಾಪಾಡುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಮದ್ಯಪಾನ ಮಾರಾಟವನ್ನು ನಿಷೇಧಿಸುವುದು ಸೂಕ್ತವೆಂದು ಈ ನಿರ್ಧಾರ ಮಾಡಲಾಗಿದೆ ಎಂದು ಆಯುಕ್ತರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

    ಭಾರತೀಯದಂಡ ಪ್ರಕ್ರಿಯ ಸಂಹಿತೆ ಕಲಂ 144 ರ ಉಪ ಕಲಂ (1) ಮತ್ತು (3) ರ ಅನ್ವಯ ದಿನಾಂಕ 10.11.2019 ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರೀತಿಯ ಬಾರ್‌ಗಳು, ವೈನ್ಸ್ಶಾಪ್‌ಗಳು, ಪಬ್‌ಗಳು ಹಾಗೂ ಎಲ್ಲಾ ರೀತಿಯ ಮದ್ಯ ಮಾರಾಟ ಮಾಡುವ ಅಂಗಡಿಗಳನ್ನು ಮುಚ್ಚಬೇಕು ಎಂದು ತಿಳಿಸಲಾಗಿದೆ.

  • ಆರ್‌ಎಸ್‌ಎಸ್‌ ದೇಶವನ್ನು ವಿಭಜಿಸುತ್ತದೆ, ನಿಷೇಧಿಸಿ – ಸಿಖ್ ಮುಖಂಡ

    ಆರ್‌ಎಸ್‌ಎಸ್‌ ದೇಶವನ್ನು ವಿಭಜಿಸುತ್ತದೆ, ನಿಷೇಧಿಸಿ – ಸಿಖ್ ಮುಖಂಡ

    ಚಂಡೀಗಢ: ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು(ಆರ್‌ಎಸ್‌ಎಸ್‌) ನಿಷೇಧಿಸಬೇಕು ಎಂದು ಸಿಖ್ ಉನ್ನತ ಸಂಸ್ಥೆ ಅಕಾಲ್ ತಖ್ತ್ ಮುಖ್ಯಸ್ಥ ಗಿಯಾನಿ ಹಪ್ರ್ರೀತ್ ಸಿಂಗ್ ಹೇಳಿಕೆ ನೀಡಿದ್ದಾರೆ.

    ಅಮೃತಸರದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಆರ್‌ಎಸ್‌ಎಸ್‌ ಮುಕ್ತವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿರುವುದರಿಂದ ರಾಷ್ಟ್ರವನ್ನು ವಿಭಜಿಸುತ್ತದೆ. ಅಲ್ಲದೆ ಆರ್‌ಎಸ್‌ಎಸ್‌ ಕೇಂದ್ರ ಸರ್ಕಾರವನ್ನು ಆಳುವ ಸೈದ್ಧಾಂತಿಕ ಮಾರ್ಗದರ್ಶಕವಾಗಿದೆ. ಆರ್‌ಎಸ್‌ಎಸ್‌ ದೇಶದಲ್ಲಿ ವಿಭಜನೆಯುಂಟುಮಾಡುತ್ತಿದೆ. ಅದರ ನಾಯಕರ ಹೇಳಿಕೆಗಳು ಸಹ ದೇಶದ ಹಿತಾಸಕ್ತಿಗೆ ವಿರುದ್ಧವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಆರ್‌ಎಸ್‌ಎಸ್‌ಗೆ ಬಿಜೆಪಿಯೊಂದಿಗೆ ಸಂಬಂಧವಿರುವ ಕುರಿತು ಪ್ರಸ್ತಾಪವಾದಾಗ ಗಿಯಾನಿ ಈ ಕುರಿತು ಮಾತನಾಡಿದ್ದು, ಆರ್‌ಎಸ್‌ಎಸ್‌ ದೇಶದ ಹಿತಾಸಕ್ತಿಗಾಗಿ ಇಲ್ಲ. ಬದಲಿಗೆ ದೇಶಕ್ಕೆ ನೋವುಂಟು ಮಾಡುತ್ತಿದ್ದು, ದೇಶವನ್ನು ನಾಶ ಮಾಡುತ್ತಿದೆ ಎಂದು ಹರಿಹಾಯ್ದರು.

    ಅಕಾಲ್ ತಖ್ತ್ ಸಿಖ್ ಸಮುದಾಯದ ಅತ್ಯುನ್ನತ ಸ್ಥಾನವಾಗಿದೆ. ಅಮೃತಸರದಲ್ಲಿರುವ ಈ ಅಕಾಲ್ ತಖ್ತ್, ಸುವರ್ಣ ಮಂದಿರ ಕೇಂದ್ರಿತ ಧಾರ್ಮಿಕ ಕಟ್ಟಡಗಳ ಸಂಕೀರ್ಣವಾಗಿದೆ. ಸಿಖ್ ಸಮುದಾಯದವರು ಆರ್‌ಎಸ್‌ಎಸ್‌ ಸೈದ್ಧಾಂತಿಕತೆ ಕುರಿತು ವಾಗ್ದಾಳಿ ನಡೆಸುತ್ತಿರುವುದು ಇದೇ ಮೊದಲಲ್ಲ. ಕಳೆದ ವಾರ ಶಿರೋಮಣಿ ಗುರುದ್ವಾರ ಪರಬಂಧಕ್ ಸಮಿತಿ(ಎಸ್‍ಜಿಪಿಸಿ) ಅಧ್ಯಕ್ಷ ಗೋಬಿಂದ್ ಸಿಂಗ್ ಲಾಂಗೋವಾಲ್ ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಭಾರತವನ್ನು ಹಿಂದೂ ರಾಷ್ಟ್ರ ಎಂದು ಕರೆದಿದ್ದನ್ನು ಆಕ್ಷೇಪಿಸಿದ್ದರು.

    ದಸರಾ ಸಂದರ್ಭದಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಭಾರತದಲ್ಲಿ ವಾಸಿಸುವವರೆಲ್ಲರೂ ಹಿಂದೂಗಳೇ ಏಕೆಂದರೆ ಭಾರತ ಹಿಂದೂ ರಾಷ್ಟ್ರವಾಗಿದೆ ಎಂದು ಹೇಳಿದ್ದರು. ಇದಕ್ಕೆ ಎಸ್‍ಜಿಪಿಸಿ ಮುಖ್ಯಸ್ಥರು ವಿರೋಧ ವ್ಯಕ್ತಪಡಿಸಿದ್ದರು.

    ಎಸ್‍ಜಿಪಿಸಿಯನ್ನು ಸಿಖ್ ಸಮುದಾಯದ ಸಂಸತ್ತು ಎಂದೇ ಕರೆಯಲಾಗುತ್ತದೆ. ಸಮುದಾಯಕ್ಕೆ ಸಂಬಂಧಿಸಿದ ಎಲ್ಲ ಗುರುದ್ವಾರಗಳು ಹಾಗೂ ಧಾರ್ಮಿಕ ವಿಷಯಗಳನ್ನು ನಿರ್ವಹಿಸುತ್ತದೆ. ಇದರ ಪದಾಧಿಕಾರಿಗಳನ್ನು ಸಿಖ್ ಸಮುದಾಯದವರು ಮತ ಚಲಾಯಿಸುವ ಮೂಲಕ ಆಯ್ಕೆ ಮಾಡುತ್ತಾರೆ.

  • ಅಧಿವೇಶನದಲ್ಲಿ ಮಾಧ್ಯಮ ನಿರ್ಬಂಧಕ್ಕೆ ಸರ್ಕಾರ ಚಿಂತನೆ

    ಅಧಿವೇಶನದಲ್ಲಿ ಮಾಧ್ಯಮ ನಿರ್ಬಂಧಕ್ಕೆ ಸರ್ಕಾರ ಚಿಂತನೆ

    ಬೆಂಗಳೂರು: ವಿಧಾನಸೌಧದಲ್ಲಿ ಇದೇ 10ರಿಂದ 3 ದಿನ ನಡೆಯುವ ಅಧಿವೇಶನದಲ್ಲಿ ದೃಶ್ಯ ಮಾಧ್ಯಮಕ್ಕೆ ನಿರ್ಬಂಧ ಹೇರುವ ಬಗ್ಗೆ ಸರ್ಕಾರ ಚಿಂತಿಸಿದೆ ಎನ್ನಲಾಗುತ್ತಿದೆ.

    ಸರ್ಕಾರದ ಈ ಚಿಂತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಚಿಕ್ಕಮಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿ, ಬಹಳಷ್ಟು ಮಾಧ್ಯಮಗಳು ಬಿಜೆಪಿ ಪರವಾಗಿ ಕೆಲಸ ಮಾಡಿದ್ದವು. ಆ ಕಾರಣದಿಂದ ನಿಷೇಧ ಹೇರಲು ಹೊರಟಿದ್ದಾರೆ. ನಮ್ಮ ಸರ್ಕಾರ ಇದ್ದಾಗ ನಿರ್ಬಂಧ ಹೇರಲು ಚಿಂತಿಸಿರಲಿಲ್ಲ ಎಂದು ಹೇಳಿದ್ದಾರೆ.

    ಇತ್ತ ಮಡಿಕೇರಿಯಲ್ಲಿ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ಮಾಧ್ಯಮಗಳಿಗೆ ನಿರ್ಬಂಧ ಹೇರುವುದು ಸಾಧ್ಯವಿಲ್ಲದ ಮಾತು. ವಿಧಾನಸೌಧದಲ್ಲಿ ಮೀಡಿಯಾ ಗ್ಯಾಲರಿ ಇದೆ ಎಂದು ತಿಳಿಸಿದರು.

    ಈ ಹಿಂದೆಯೂ ಕೂಡ ಬಿಜೆಪಿ ಸರ್ಕಾರ ಆಡಳಿತ ಅವಧಿಯಲ್ಲಿ ವಿಧಾನಸೌಧ ಕಲಾಪದಲ್ಲಿ ದೃಶ್ಯ ಮಾಧ್ಯಮ ನಿರ್ಬಂಧಕ್ಕೆ ಚಿಂತನೆ ನಡೆಸಲಾಗಿತ್ತು. ಆದರೆ ಅಂದು ಕೂಡ ವಿರೋಧ ಪಕ್ಷ ಹಾಗೂ ಮಾಧ್ಯಮಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಚಿಂತನೆಯನ್ನು ಕೈಬಿಡಲಾಗಿತ್ತು. ಆದರೆ ಸದ್ಯ ಈ ಚಿಂತನೆ ಮತ್ತೆ ನಡೆದಿದೆ ಎನ್ನಲಾಗಿದೆ. ಆ ಮೂಲಕ ಲೋಕಸಭಾ ಮಾದರಿಯಲ್ಲಿ ಕಲಾಪದ ನೇರ ಪ್ರಸಾರ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಸದನದಲ್ಲಿ ಮಾಡುವ ತಪ್ಪುಗಳನ್ನು ಮಾಧ್ಯಮಗಳು ತೋರಿಸುವ ಭಯದಿಂದ ಮಾಧ್ಯಮಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ ಎನ್ನಲಾಗಿದೆ.

  • ಕರ್ನಾಟಕ ವಿರುದ್ಧ ಕೇರಳ ಪ್ರತಿಭಟನೆ – ಸ್ಥಳಕ್ಕೆ ಭೇಟಿ ನೀಡಿ ರಾಹುಲ್ ಬೆಂಬಲ

    ಕರ್ನಾಟಕ ವಿರುದ್ಧ ಕೇರಳ ಪ್ರತಿಭಟನೆ – ಸ್ಥಳಕ್ಕೆ ಭೇಟಿ ನೀಡಿ ರಾಹುಲ್ ಬೆಂಬಲ

    ತಿರುವನಂತಪುರಂ: ಕರ್ನಾಟಕದ ಬಂಡೀಪುರ ಅರಣ್ಯದಲ್ಲಿ ರಾತ್ರಿ ಸಂಚಾರಕ್ಕೆ ಅನುಮತಿ ನೀಡಬೇಕೆಂಬ ಕೇರಳದ ವಯನಾಡಿನ ಜನತೆಯ ಹೋರಾಟಕ್ಕೆ ಸಂಸದ ರಾಹುಲ್ ಗಾಂಧಿ ಆಗಮಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ.

    ರಾತ್ರಿ ವೇಳೆ ಅರಣ್ಯದಲ್ಲಿ ವಾಹನ ಸಂಚಾರ ಮಾಡುವುದರಿಂದ ಅಪಘಾತ ಸಂಭವಿಸಿ ಹೆಚ್ಚಿನ ಕಾಡು ಪ್ರಾಣಿಗಳು ಸಾವನ್ನಪ್ಪುತ್ತವೆ ಎಂದು ಕರ್ನಾಟಕ ಸರ್ಕಾರ  ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಅರಣ್ಯದಲ್ಲಿ ವಾಹನ ಸಂಚಾರವನ್ನು ನಿಷೇಧ ಮಾಡಿತ್ತು. ಇದನ್ನು ತೆಗೆದು ಹಾಕುವಂತೆ ಕೇರಳ ಜನತೆ ಪ್ರತಿಭಟನೆ ಮಾಡುತ್ತಿದ್ದಾರೆ.

    ಇಂದು ಈ ವಿಚಾರವಾಗಿ ಕೇರಳದ ಪ್ರತಿಭಟನೆ ನಡೆಯುತ್ತಿರುವ ಸುಲ್ತಾನ್ ಬತ್ತೇರಿ ಪಟ್ಟಣಕ್ಕೆ ಆಗಮಿಸಿದ ರಾಹುಲ್ ಗಾಂಧಿ ಅವರು, ನಿಷೇಧ ವಿರೋಧಿಸಿ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್‍ಐ), ಯೂತ್ ಕಾಂಗ್ರೆಸ್ ಮತ್ತು ಯೂತ್ ಲೀಗ್‍ನ ಕಾರ್ಯಕರ್ತರು ಕಳೆದ ಹತ್ತು ದಿನದಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿರುವವರನ್ನು ರಾಹುಲ್ ಗಾಂಧಿಯವರು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಅವರು, ಕೇರಳ ಮತ್ತು ಕರ್ನಾಟಕವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 766 ರಲ್ಲಿ ರಾತ್ರಿ ಸಂಚಾರ ನಿಷೇಧ ಮಾಡಿದ್ದನ್ನು ವಿರೋಧಿಸಿ ಕೇರಳ ಯುವಕರು ಮಾಡುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಲು ನಾನು ವಯನಾಡಿಗೆ ಬಂದಿದ್ದೇನೆ. ಇದಕ್ಕೂ ಮುಂಚೆ ಉಪವಾಸದಿಂದ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವವರನ್ನು ನೋಡಿ ಆರೋಗ್ಯವನ್ನು ವಿಚಾರಿಸಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

    ಬಂಡೀಪುರ ಅರಣ್ಯದಿಂದ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯ ಸಂಚಾರವನ್ನು 9 ಗಂಟೆಗಳ ಕಾಲ ನಿಷೇಧ ಮಾಡಿದರೆ ಕೇರಳ ಮತ್ತು ಕರ್ನಾಟಕ ಜನರಿಗೆ ತೊಂದರೆ ಉಂಟಾಗುತ್ತದೆ. ಇದನ್ನು ವಿರೋಧಿಸಿ ಕೆಲ ಯುವಕರು ಸೆಪ್ಟಂಬರ್ 25 ರಿಂದ ಮಾಡುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ನಾನು ಬೆಂಬಲ ನೀಡುತ್ತೇನೆ ಎಂದು ಈ ಹಿಂದೆ ಟ್ವೀಟ್ ಮಾಡಿದ್ದರು.

    ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿ ಮಾಡಿ ರಾಹುಲ್ ಗಾಂಧಿ ನಿಷೇಧ ಸಂಬಂಧ ಚರ್ಚೆ ಮಾಡಿದ್ದರು. ರಾಹುಲ್ ಗಾಂಧಿ ಬೆಂಬಲದಿಂದ ವಯನಾಡು ಕ್ಷೇತ್ರದ ಸ್ಥಳೀಯರು ಪ್ರತಿಭಟನೆ ಮಾಡಿದ್ದು, ಇದರಲ್ಲಿ ಒಂದು ಸಾವಿರಕ್ಕೂ ಅಧಿಕ ರೈತರು ಮತ್ತು ಸ್ಥಳೀಯರು ಭಾಗವಹಿಸಿದ್ದರು.

    ಏನಿದು ಪ್ರಕರಣ?
    ಹುಲಿ, ಆನೆ, ಕಾಡೆಮ್ಮೆ ಸೇರಿದಂತೆ ಅಳಿವಿನಂಚಿನಲ್ಲಿರುವ ಪ್ರಾಣಿಗಳು ಅಪಘಾತದಿಂದ ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ 2009ರಲ್ಲಿ ಬಂಡೀಪುರ ಅಭಯಾರಣ್ಯದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 212 ಮತ್ತು 69 ರಲ್ಲಿ ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆಯವರೆಗೆ ವಾಹನ ಸಂಚಾರವನ್ನು ನಿಷೇಧಿಸಿ ಚಾಮಾರಾಜನಗರ ಜಿಲ್ಲಾ ಆಡಳಿತ ಆದೇಶ ಹೊರಡಿಸಿತ್ತು. ವಾಹನಗಳ ಸಂಚಾರ ನಿಷೇಧವನ್ನು ರದ್ದುಪಡಿಸದಂತೆ ಕರ್ನಾಟಕ ಹೈಕೋರ್ಟ್ 2010ರಲ್ಲಿ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಕೇರಳ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದು ವಿಚಾರಣೆ ನಡೆಯುತ್ತಿದೆ. ಕೇರಳ ಸರ್ಕಾರ ಈ ಹಿಂದೆ ಸಾಕಷ್ಟು ಬಾರಿ ನಿಷೇಧ ತೆರವುಗೊಳಿಸುವಂತೆ ರಾಜ್ಯ ಸರ್ಕಾರವನ್ನು ಕೇಳಿಕೊಂಡಿತ್ತು. ಕೇರಳದ ಲಾಬಿಗೆ ರಾಜ್ಯ ಸರ್ಕಾರ ಮಣಿದಿರಲಿಲ್ಲ.

    ಪರಿಸ್ಥಿತಿಯನ್ನು ಅಧ್ಯಯನ ನಡೆಸಲು ಸುಪ್ರೀಂ ಕೋರ್ಟ್ ಕೇಂದ್ರ ಸಾರಿಗೆ ಸಚಿವಾಲಯದ ಮುಖ್ಯ ಕಾರ್ಯದರ್ಶಿ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಪ್ರತಿನಿಧಿಗಳ ಜೊತೆ ಕರ್ನಾಟಕ, ತಮಿಳುನಾಡು, ಕೇರಳದ ಸಾರಿಗೆ ಸಚಿವಾಲಯದ ಅಧಿಕಾರಿಗಳನ್ನು ಹೊಂದಿದ್ದ ಸಮಿತಿಯನ್ನು ರಚಿಸುವಂತೆ ಸೂಚಿಸಿತ್ತು. ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಹಿಂದಿದ್ದ ನಾಲ್ಕೂ ಸರ್ಕಾರಗಳು ಸಮ್ಮತಿ ಸೂಚಿಸಿರಲಿಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ನೀಡಿರಲಿಲ್ಲ. ಸಿಎಂ ಕುಮಾರಸ್ವಾಮಿ ಸರ್ಕಾರದ ಜೊತೆಗೂ ಕೇರಳ ಮಾತುಕತೆ ನಡೆಸಿತ್ತು.

    ಬಲಿಯಾದ ಪ್ರಾಣಿಗಳ ಸಂಖ್ಯೆ ಎಷ್ಟು?
    ರಾತ್ರಿ ಸಂಚಾರ ನಿಷೇಧಕ್ಕೂ ಮುನ್ನ ಅಂದ್ರೆ 2004-09ರ ಅವಧಿಯಲ್ಲಿ ಬಂಡಿಪುರ ಅರಣ್ಯ ಪ್ರದೇಶದಲ್ಲಿ 86 ಪ್ರಾಣಿಗಳು ಅಪಘಾತಕ್ಕೆ ಬಲಿಯಾಗಿವೆ. ರಾತ್ರಿ ಸಂಚಾರ ನಿಷೇಧ ಬಳಿಕ 2010-18ರ ಅವಧಿಯಲ್ಲಿ 17 ಪ್ರಾಣಿ ಮೃತಪಟ್ಟಿವೆ. ಒಟ್ಟಿನಲ್ಲಿ ರಾತ್ರಿ ವಾಹನ ಸಂಚಾರ ನಿಷೇಧದ ಬಳಿಕ ಅಪಘಾತದಲ್ಲಿ ಸತ್ತ ಪ್ರಾಣಿಗಳ ಸಂಖ್ಯೆ ಇಳಿಕೆಯಾಗಿತ್ತು. ಇದೀಗ ಮತ್ತೆ ಸಂಚಾರ ಮುಕ್ತ ಮಾಡಿದ್ರೆ ಮತ್ತೆ ಪ್ರಾಣಿಗಳು ಬಲಿಯಾಗುತ್ತವೆ ಅಂತ ಪ್ರಾಣಿಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ.

    ಯಾವ ವರ್ಷದಲ್ಲಿ ಎಷ್ಟು ಪ್ರಾಣಿಗಳು ಪ್ರಾಣ ಕಳೆದುಕೋಂಡಿವೆ ಎಂಬ ವಿವರ ಈ ಕೆಳಗಿನಂತಿದೆ:
    2004-32, 200 -7, 2007-41, 2008-2, 2009-2, 2010-3, 2011-7, 2012-10, 2013-6, 2014-1, 2015-2, 2016-1, 2017-2, 2018- 2 ಪ್ರಾಣಿಗಳು ಮೃತಪಟ್ಟಿವೆ.

  • ‘ನನ್ನ ಮಗುವಿನ ಮೇಲಾಣೆ ತಪ್ಪು ಮಾಡಿಲ್ಲ’: ಶ್ರೀಶಾಂತ್

    ‘ನನ್ನ ಮಗುವಿನ ಮೇಲಾಣೆ ತಪ್ಪು ಮಾಡಿಲ್ಲ’: ಶ್ರೀಶಾಂತ್

    ನವದೆಹಲಿ: ಕಳೆದ ತಿಂಗಳು ಭಾತದ ವೇಗಿ ಶ್ರೀಶಾಂತ್ ಮೇಲಿನ ನಿಷೇಧವನ್ನು ಕಡಿಮೆ ಮಾಡಿ ಬಿಸಿಸಿಐ ಸಮಿತಿ ನಿರ್ಣಯ ತೆಗೆದುಕೊಂಡಿದ್ದು ಎಲ್ಲರಿಗೂ ತಿಳಿದಿದೆ. ಸ್ಪಾಟ್ ಫಿಕ್ಸಿಂಗ್ ಆರೋಪದ ಕುರಿತು ಇತ್ತೀಚೆಗೆ ತಮ್ಮ ಮೇಲಿನ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೀಶಾಂತ್, ‘ನನ್ನ ಮಗುವಿನ ಮೇಲಾಣೆ ನಾನು ಆ ತಪ್ಪು ಮಾಡಿಲ್ಲ’ ಎಂದು ಭಾವುಕರಾಗಿದ್ದಾರೆ.

    ನನ್ನ ತಂದೆ, ಮಗುವಿನ ಮೇಲಾಣೆ, ನಾನು ಯಾವುದೇ ರೀತಿಯ ಫಿಕ್ಸಿಂಗ್ ಮಾಡಿಲ್ಲ. ಅಂತಹ ಯೋಚನೆಯೇ ನನಗೆ ಬಂದಿಲ್ಲ. ಇಂದು ನನ್ನ ತಂದೆ, ತಾಯಿ ಅನಾರೋಗ್ಯದಿಂದ ಬಳುತ್ತಿದ್ದಾರೆ. ಕಳೆದ 5 ವರ್ಷಗಳಿಂದಲೂ ಆರೋಗ್ಯದ ಸಮಸ್ಯೆ ಎದುರಿಸುತ್ತಿದ್ದು, ಇಂದು ನಾನು ಆಡುವ ಪಂದ್ಯವನ್ನು ಅವರು ನೋಡಲು ಸಾಧ್ಯವಾಗದ ಸ್ಥಿತಿಗೆ ತಲುಪಿದ್ದಾರೆ. 100 ಕೋಟಿ ರೂ. ಕೊಟ್ಟರೂ ನಾನು ಅಂತಹ ಕೆಲಸ ಮಾಡುವುದಿಲ್ಲ ಎಂದು ಶ್ರೀಶಾಂತ್ ಹೇಳಿದ್ದಾರೆ.

    ಮುಂದಿನ ವರ್ಷದ ಆಗಸ್ಟ್ ವೇಳೆಗೆ ಶ್ರೀಶಾಂತ್ ಮೇಲಿನ ನಿಷೇಧದ ಅವಧಿ ಪೂರ್ಣಗೊಳ್ಳಲಿದ್ದು, 7 ವರ್ಷದ ನಿಷೇಧದ ಅವಧಿ ಅಂತ್ಯವಾಗಲಿದೆ. ನಿಷೇಧ ತೆರವಾದ ಬಳಿಕ ಮತ್ತೆ ತಾವು ಕ್ರಿಕೆಟ್ ಆಡಬೇಕು ಎಂದು ಶ್ರೀಶಾಂತ್ ಹೇಳಿದ್ದು, ವಿಶ್ವ ಕ್ರಿಕೆಟ್‍ನಲ್ಲಿ ಹಲವು ಲೀಗ್ ಆಡುತ್ತಿದ್ದಾರೆ. ನನ್ನ ಕುಟುಂಬವನ್ನು ರಕ್ಷಣೆ ಮಾಡಿಕೊಳ್ಳಲು ನಾನು ಕ್ರಿಕೆಟ್‍ಗೆ ಕಮ್ ಬ್ಯಾಕ್ ಮಾಡಬೇಕಿದೆ ಎಂದು ಹೇಳಿದ್ದಾರೆ.

  • ಶ್ರೀಲಂಕಾ ಕ್ರಿಕೆಟಿಗನಿಗೆ 1 ವರ್ಷ ನಿಷೇಧ ವಿಧಿಸಿದ ಐಸಿಸಿ

    ಶ್ರೀಲಂಕಾ ಕ್ರಿಕೆಟಿಗನಿಗೆ 1 ವರ್ಷ ನಿಷೇಧ ವಿಧಿಸಿದ ಐಸಿಸಿ

    ದುಬೈ: ಶ್ರೀಲಂಕಾ ತಂಡದ ಆಫ್ ಸ್ಪಿನ್ ಆಲ್‌ರೌಂಡರ್ ಅಖಿಲ ಧನಂಜಯ ಮೇಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) 1 ವರ್ಷ ನಿಷೇಧ ವಿಧಿಸಿದೆ.

    ಅನುಮಾನಾಸ್ಪದ ಬೌಲಿಂಗ್ ಸಾಬೀತಾದ ಕಾರಣದಿಂದ ಐಸಿಸಿ ಈ ನಿರ್ಧಾರವನ್ನ ಕೈಗೊಂಡಿದ್ದು, ಸ್ವತಂತ್ರ ವಿಶ್ಲೇಷಣೆ ನಡೆದ ಬಳಿಕ ಈ ತೀರ್ಮಾನವನ್ನು ಪ್ರಕಟಿಸಿದೆ.

    ಕಳೆದ ತಿಂಗಳು ನ್ಯೂಜಿಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದ ವೇಳೆ ಅನುಮಾನಾಸ್ಪದ ಬೌಲಿಂಗ್ ಆರೋಪ ಕೇಳಿ ಬಂದಿತ್ತು. ಪರಿಣಾಮ ಆಗಸ್ಟ್ 23ರಂದು ಚೆನ್ನೈನಲ್ಲಿ ಅಖಿಲ ಧನಂಜಯ ಐಸಿಸಿ ವಿಚಾರಣೆಗೆ ಹಾಜರಾಗಿದ್ದರು. ಈ ವಿಚಾರಣೆಯಲ್ಲಿ ಅನುಮಾನಾಸ್ಪದ ಬೌಲಿಂಗ್ ಶೈಲಿ ಕಂಡು ಬಂದ ಹಿನ್ನೆಲೆಯಲ್ಲಿ ಮಂಡಳಿ ನಿಷೇಧವನ್ನು ವಿಧಿಸಿದೆ.

    2 ವರ್ಷದ ಅವಧಿಯಲ್ಲಿ 2 ಬಾರಿ ಅನುಮಾಸ್ಪದ ಬೌಲಿಂಗ್ ಆರೋಪ ಕೇಳಿ ಬಂದ ಕಾರಣದಿಂದ ಅಖಿಲ ಧನಂಜಯ ವಿರುದ್ಧ ವಿಚಾರಣೆ ನಡೆಸಲಾಗಿತ್ತು. ನಿಷೇಧದ ಸಮಯದಲ್ಲಿ ಆಟಗಾರನಿಗೆ ತನ್ನ ಬೌಲಿಂಗ್ ಶೈಲಿಯಲ್ಲಿನ ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶ ನೀಡಲಾಗಿದೆ. ಈ ಅವಧಿ ಅಂತ್ಯವಾದ ಬಳಿಕ ಮತ್ತೊಮ್ಮೆ ಧನಂಜಯ ಬೌಲಿಂಗ್ ವಿಚಾರವಾಗಿ ಐಸಿಸಿ ಮಂಡಳಿಯನ್ನು ಸಂಪರ್ಕಿಸಬಹುದಾಗಿದೆ. ಈ ಹಿಂದೆ 2018 ಡಿಸೆಂಬರ್ ತಿಂಗಳಿನಲ್ಲಿ ಧನಂಜಯ ಬೌಲಿಂಗ್ ಮೇಲೆ ನಿಷೇಧ ವಿಧಿಸಲಾಗಿತ್ತು. ಆ ಬಳಿಕ 2013 ಜನವರಿಯಲ್ಲಿ ನಿಷೇಧ ತೆರವುಗೊಳಿಸಲಾಗಿತ್ತು.