Tag: ನಿಷೇಧ

  • 3 ದಿನ ಮಾದಪ್ಪನ ದರ್ಶನಕ್ಕೆ ಬ್ರೇಕ್

    3 ದಿನ ಮಾದಪ್ಪನ ದರ್ಶನಕ್ಕೆ ಬ್ರೇಕ್

    ಚಾಮರಾಜನಗರ: ಮೂರು ದಿನಗಳ ಕಾಲ ಇತಿಹಾಸ ಪ್ರಸಿದ್ಧ ಮಲೆ ಮಾದಪ್ಪನ ದರ್ಶನವಿಲ್ಲ ಎಂದು ಜಿಲ್ಲಾಡಳಿತ ಘೋಷಣೆ ಮಾಡಿದೆ.

    ಕೊರೊನಾ ಲಾಕ್‍ಡೌನ್ ಬಳಿಕ ಇತ್ತೀಚೆಗಷ್ಟೆ ದೇವಸ್ಥಾನ ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಆದರೆ ಈಗ ಜೂನ್ 19ರಿಂದ 21ರವರೆಗೆ ಮಾದಪ್ಪನ ದರ್ಶನಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ದರ್ಶನ ನಿಷೇಧಿಸಿ ಚಾಮರಾಜನಗರ ಜಿಲ್ಲಾಧಿಕಾರಿ ಎಂಆರ್ ರವಿ ಆದೇಶ ಹೊರಡಸಿದ್ದಾರೆ.

    ಜೂನ್ 19ರಂದು ದೇವರಿಗೆ ಎಣ್ಣೆ ಮಜ್ಜನ ಕಾರ್ಯಕ್ರಮವಿದೆ. ಇದರ ಜೊತೆಗೆ 20, 21ರಂದು ಅಮವಾಸ್ಯೆ ಪೂಜೆ ಹಿನ್ನೆಲೆ, ಮಾದಪ್ಪನ ಬೆಟ್ಟಕ್ಕೆ ಹೆಚ್ಚು ಜನರು ಆಗಮಿಸುವ ನಿರೀಕ್ಷೆ ಇದೆ. ಹೀಗಾಗಿ ಕೊರೊನಾ ವಿರುದ್ಧದ ಸಂರಕ್ಷಣಾ ದೃಷ್ಟಿಯಿಂದ ಮೂರು ದಿನಗಳ ದರ್ಶನ ನಿಷೇಧ ಮಾಡಲಾಗಿದೆ. ಸುಮಾರು 50 ಸಾವಿರ ಜನರು ಬೆಟ್ಟಕ್ಕೆ ಬರುವ ನಿರೀಕ್ಷೆ ಇದ್ದು, ಮುಂಜಾಗ್ರತಾ ದೃಷ್ಟಿಯಿಂದ ಮಾದಪ್ಪನ ದರ್ಶನಕ್ಕೆ ಅವಕಾಶ ಕೊಡದಿರಲೂ ಜಿಲ್ಲಾಡಳಿತದ ನಿರ್ಧಾರ ಮಾಡಿದೆ.

  • ತಬ್ಲಿಘಿ ಜಮಾತ್: 2,200 ವಿದೇಶಿಗರಿಗೆ 10 ವರ್ಷ ನಿಷೇಧ ವಿಧಿಸಿದ ಕೇಂದ್ರ

    ತಬ್ಲಿಘಿ ಜಮಾತ್: 2,200 ವಿದೇಶಿಗರಿಗೆ 10 ವರ್ಷ ನಿಷೇಧ ವಿಧಿಸಿದ ಕೇಂದ್ರ

    ನವದೆಹಲಿ: ದೆಹಲಿಯ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 2200 ಮಂದಿ ವಿದೇಶಿಯರಿಗೆ ಕೇಂದ್ರ ಸರ್ಕಾರ 10 ವರ್ಷಗಳ ನಿಷೇಧ ವಿಧಿಸಿದೆ.

    ಭಾರತದಲ್ಲಿ ಕೊರೊನಾ ಪ್ರಕರಣ ಆರಂಭಿಕವಾಗಿ ವರದಿಯಾಗುತ್ತಿದ್ದ ಸಂದರ್ಭದಲ್ಲಿ ತಬ್ಲಿಘಿ ಜಮಾತ್ ಧಾರ್ಮಿಕ ಸಭೆ ಇಡೀ ದೇಶಕ್ಕೆ ಶಾಕ್ ನೀಡಿತ್ತು. ದೇಶದ ಹಲವರು ರಾಜ್ಯಗಳಿಂದ ಆಗಮಿಸಿದ್ದ ಜಮಾತ್ ಸದಸ್ಯರಿಂದ ಸೋಂಕು ಹೆಚ್ಚಾಗಿ ಹರಡಿತ್ತು. ಭಾರತ ಮಾತ್ರವಲ್ಲದೇ ವಿದೇಶದಿಂದ ಆಗಮಿಸಿದ್ದ ಹಲವು ಪ್ರವಾಸಿಗರು ಕೂಡ ಸಭೆಯಲ್ಲಿ ಭಾಗಿಯಾಗಿದ್ದ ಮಾಹಿತಿ ಆ ಬಳಿಕ ಬಹಿರಂಗವಾಗಿತ್ತು. ಪ್ರವಾಸಿ ವೀಸಾ ಪಡೆದು ಭಾರತಕ್ಕೆ ಆಗಮಿಸಿದ್ದ ಹಲವರು ನಿಯಮಗಳನ್ನು ಮೀರಿ ಸಭೆಯಲ್ಲಿ ಭಾಗಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಈ ಸರ್ಕಾರ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ.

    2200ಕ್ಕೂ ಹೆಚ್ಚು ವಿದೇಶಿ ಪ್ರಜೆಗಳನ್ನು ಕೇಂದ್ರ ಗೃಹ ಇಲಾಖೆ ಬ್ಲಾಕ್ ಲಿಸ್ಟ್ ಗೆ ಸೇರಿಸಿದ್ದು, ಇವರ ಮೇಲೆ 10 ವರ್ಷ ಭಾರತಕ್ಕೆ ಆಗಮಿಸದಂತೆ ನಿಷೇಧ ವಿಧಿಸಿದೆ. ಜಮಾತ್ ಸಭೆಯಲ್ಲಿ ಭಾಗಿಯಾಗಿದ್ದ ಇವರು ನಿಯಮಗಳನ್ನು ಉಲ್ಲಂಘಿಸಿ ದೆಹಲಿಯ ಮರ್ಕಜ್ ಭವನದಲ್ಲಿ ಜರುಗಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಂದು ಸರ್ಕಾರ ಗುರುತಿಸಿದೆ. ನಿಷೇಧ ಪಟ್ಟಿಯಲ್ಲಿ ಹೆಚ್ಚಿನ ಮಂದಿ ಇಂಡೋನೇಷ್ಯಾಗೆ ಸೇರಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ದೆಹಲಿ ಕಾರ್ಯಕ್ರಮದ ಬಳಿಕ ಹಲವರು ದೇಶದ ವಿವಿಧ ಭಾಗಗಳಲ್ಲಿ ಜರುಗಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪರಿಣಾಮ ದೇಶದಲ್ಲಿ ಕೊರೊನಾ ಪ್ರಕರಣ ಸಂಖ್ಯೆ ದಿಢೀರ್ ಎಂದು ಹೆಚ್ಚಾಗಿತ್ತು. ಮೇ 13 ರಿಂದ 17ರ ವರೆಗೂ ದೆಲಿಯ ನಿಜಾಮುದ್ದೀನ್‍ನಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆದಿತ್ತು.

  • ಮದ್ಯ ನಿಷೇಧಿಸಿ ಎಂದವರ ವಿರುದ್ಧ ಕಿಡಿಕಾರಿದ ಶೆಟ್ಟರ್

    ಮದ್ಯ ನಿಷೇಧಿಸಿ ಎಂದವರ ವಿರುದ್ಧ ಕಿಡಿಕಾರಿದ ಶೆಟ್ಟರ್

    ಧಾರವಾಡ: ಲಾಕ್‍ಡೌನ್ ಮುಂಚೆಯೇ ಮದ್ಯ ಮಾರಾಟ ಇತ್ತಲ್ಲ, ಆಗ ಯಾಕೆ ಮದ್ಯ ನಿಷೇಧದ ಬಗ್ಗೆ ಚರ್ಚೆ ಆಗಲಿಲ್ಲ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಮದ್ಯ ನಿಷೇಧ ಮಾಡುವುದರ ವಿರುದ್ಧ ಕಿಡಿಕಾಡಿದ್ದಾರೆ.

    ಮದ್ಯ ಮಾರಾಟ ನಿಷೇಧಕ್ಕೆ ಬಿಜೆಪಿ ಶಾಸಕ ಬೆಲ್ಲದ ಆಗ್ರಹ ವಿಚಾರವಾಗಿ ಧಾರವಾಡದಲ್ಲಿ ಮಾತನಾಡಿದ ಅವರು, ವೈಯಕ್ತಿಕ ಅಭಿಪ್ರಾಯಗಳಿಗೆ ನಾನು ಪ್ರತಿಕ್ರಿಯೆ ಕೊಡಲ್ಲ ಎಂದು ಹೇಳಿದರು. ಸರ್ಕಾರ ನಡೆಸುವುದು ಬೇರೆ, ಅಭಿಪ್ರಾಯ ಹೇಳುವುದು ಬೇರೆ. ಎಲ್ಲೆಲ್ಲಿ ಅಭಿಪ್ರಾಯ ಹೇಳಬೇಕು ಅಲ್ಲಿ ಹೇಳುತ್ತೇವೆ. ವೈಯಕ್ತಿಕವಾಗಿ ಜನರೇ ಮದ್ಯ ಬೇಡ ಎನ್ನಬೇಕು ಎಂದು ಹೇಳಿದರು.

    ಜನ ಸಹಕಾರ ಕೊಟ್ಟಾಗ ಮಾತ್ರ ಲಾಕ್‍ಡೌನ್ ಯಶಸ್ಸು ಆಗುತ್ತದೆ. ಹಾಗೆಯೇ ಜನ ಮದ್ಯಪಾನ ಮಾಡುವುದಿಲ್ಲ ಎಂದು ನಿರ್ಣಯ ತಗೊಳ್ಳಲಿ. ಸಾವಿರ ಜನ ತಗೊಳ್ಳಿ, ಲಕ್ಷ ಜನ ಸ್ವಯಂ ನಿರ್ಧಾರ ತೆಗದುಕೊಳ್ಳಲಿ. ಎಲ್ಲವನ್ನು ಸರ್ಕಾರವೇ ಮಾಡಬೇಕಾ? ಕುಡುಕರಿಗೆ ಮಠಕ್ಕೆ ಪ್ರವೇಶ ಇಲ್ಲ ಎಂದು ಮಠಾಧೀಶರು ಹೇಳಲಿ. ಸ್ವಾಮೀಜಿಗಳು, ಧರ್ಮಗುರುಗಳು, ಪ್ರಾರ್ಥನಾ ಮಂದಿರಗಳು ನಿರ್ಧಾರ ತೆಗೆದುಕೊಳ್ಳಲಿ ಎಂದರು.

    ಈ ಪ್ರಾರ್ಥನಾ ಮಂದಿರಕ್ಕೆ ಕುಡುಕರ ಬರಬೇಡಿ ಎಂದು ಧರ್ಮಗುರುಗಳೇ ಹೇಳಲಿ. ಇಲ್ಲಿ ಕುಡುಕರಿಗೆ ಪ್ರವೇಶ ಇಲ್ಲ ಎಂದು ನಿರ್ಧಾರ ಮಾಡಿ ಬಿಡಲಿ ಎಂದರು. ಬಿಹಾರ, ಗುಜರಾತ್‍ನಲ್ಲಿ ಮದ್ಯ ಮಾರಾಟ ನಿಷೇಧ ವಿಚಾರವಾಗಿ ಮಾತನಾಡಿದ ಅವರು, ಒಂದು ಸಲ ಬಿಹಾರ ಗುಜರಾತ್ ಹೋಗಿ ನೋಡಿ ಬನ್ನಿ, ಅಲ್ಲಿ ಏನ್ ನಡೆಯುತ್ತದೆ ಎಂದು ಇಲ್ಲಿ ಡಿಬೇಟ್ ಮಾಡೋದಲ್ಲ ಎಂದು ಗುಜರಾತ್‍ನಲ್ಲಿ ಮದ್ಯ ಮಾರಾಟ ಇದೆ ಎಂದು ಪರೋಕ್ಷವಾಗಿ ಒಪ್ಪಿಕೊಂಡರು.

  • ಉ.ಕನ್ನಡ ಜಿಲ್ಲೆಯಾದ್ಯಂತ ತಂಬಾಕು ಉತ್ಪನ್ನ, ಮಾರಾಟ ಹಾಗೂ ಬಳಕೆ ನಿಷೇಧ

    ಉ.ಕನ್ನಡ ಜಿಲ್ಲೆಯಾದ್ಯಂತ ತಂಬಾಕು ಉತ್ಪನ್ನ, ಮಾರಾಟ ಹಾಗೂ ಬಳಕೆ ನಿಷೇಧ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ತಂಬಾಕು ಉತ್ಪನ್ನ, ಮಾರಾಟ ಹಾಗೂ ಬಳಕೆ ಮಾಡುವುದನ್ನು ನಿಷೇಧ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಕೆ.ಅವರು ಆದೇಶ ಹೊರಡಿಸಿದ್ದಾರೆ.

    ಪಾನ್ ಮಸಾಲಾ ಮತ್ತು ಅಡಿಕೆಯಿಂದ ತಯಾರಾದ ಉತ್ಪನ್ನಗಳಿಂದ ಕೋವಿಡ್-19 ಸಾಂಕ್ರಾಮಿಕ ರೋಗವು ವ್ಯಾಪಕವಾಗಿ ಹರಡುವ ಸಾಧ್ಯತೆ ಇದೆ. ಹೀಗಾಗಿ ಹೊಗೆ ರಹಿತ ತಂಬಾಕು ಉತ್ಪನ್ನಗಳನ್ನು ಮಾರಾಟ ಮತ್ತು ಬಳಕೆ ಮಾಡುವುದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕರ ಆರೋಗ್ಯ ಹಿತ ದೃಷ್ಟಿಯಿಂದ ಕೊರೊನಾ ಹತೋಟಿಗೆ ಬರುವವರೆಗೂ ಈ ನಿಷೇಧ ಜಾರಿಯಲ್ಲಿ ಇರುತ್ತದೆ ಎಂದು ಡಿಸಿ ಅದೇಶ ಮಾಡಿದ್ದಾರೆ.

    ಒಂದು ವೇಳೆ ಈ ಆದೇಶವನ್ನು ಉಲ್ಲಂಘಿಸಿದ್ದಲ್ಲಿ, ಸಾಂಕ್ರಾಮಿಕ ರೋಗಗಳ ಕಾಯ್ದೆ-1897, ವಿಪತ್ತು ನಿರ್ವಹಣಾ ಕಾಯ್ದೆ-2005, ಐಪಿಸಿ-1960, ಸಿ.ಆರ್.ಪಿ.ಸಿ.ಅಡಿಯಲ್ಲಿ ಪ್ರಕರಣ ದಾಖಲಿಲಾಗುವುದು. ಈ ನಿಯಮವನ್ನು ಉಲ್ಲಂಘಿಸಿದರೆ ಸಂಬಂಧಿಸಿದವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

  • ಪಾಕ್ ಕ್ರಿಕೆಟಿಗ ಉಮರ್ ಅಕ್ಮಲ್‍ಗೆ 3 ವರ್ಷ ನಿಷೇಧ

    ಪಾಕ್ ಕ್ರಿಕೆಟಿಗ ಉಮರ್ ಅಕ್ಮಲ್‍ಗೆ 3 ವರ್ಷ ನಿಷೇಧ

    – ಸ್ಪಾಟ್ ಫಿಕ್ಸಿಂಗ್ ಅಪ್ರೋಚ್ ಮಾಹಿತಿ ನೀಡಲು ವಿಫಲ

    ಇಸ್ಲಾಮಾಬಾದ್: ಪಾಕ್ ಕ್ರಿಕೆಟಿಗ ಉಮರ್ ಅಕ್ಮಲ್ ಮೇಲೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಎಲ್ಲಾ ಮಾದರಿಯ ಕ್ರಿಕೆಟ್‍ನಿಂದ 3 ವರ್ಷ ನಿಷೇಧಿಸಿದೆ.

    ಬೋರ್ಡ್ ಇಂದು ನಿಷೇಧ ಕುರಿತ ಮಾಹಿತಿಯನ್ನು ನೀಡಿದೆ. ಆದರೆ ಉಮರ್ ಅಕ್ಮಲ್ ಯಾವ ತಪ್ಪಿನ ವಿರುದ್ಧ ಕ್ರಮಕೈಗೊಳ್ಳಲಾಗಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ಆದರೆ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ಸ್ಪಾಟ್ ಫಿಕ್ಸಿಂಗ್ ಮಾಡಲು ಅಪ್ರೋಚ್ ಆಗಿರುವ ಕುರಿತು ಕ್ರಿಕೆಟ್ ಬೋರ್ಡಿಗೆ ಮಾಹಿತಿ ನೀಡಲು ವಿಫಲರಾದ ಕಾರಣದಿಂದ ಕ್ರಮಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.

    ಅಕ್ಮಲ್ ವಿರುದ್ಧ ಎರಡು ತಿಂಗಳ ಹಿಂದೆ ಭ್ರಷ್ಟಾಚಾರ ನೀತಿ ಸಂಹಿತೆ ಅಡಿ ತನಿಖೆ ಆರಂಭಿಸಲಾಗಿತ್ತು. ನಿಷೇಧ ಕುರಿತು ಮಾಹಿತಿ ನೀಡಿ ಪಿಸಿಬಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ. ನಿವೃತ್ತ ನ್ಯಾಯಮೂರ್ತಿ ಫಜಲ್ ಇ ಮಿರಾನ್ ನೇತೃತ್ವದ ಶಿಸ್ತು ಸಮಿತಿ 3 ವರ್ಷ ನಿಷೇಧ ವಿಧಿಸಿದೆ. ಫೆ.20 ರಂದು ಅಕ್ಮಲ್‍ರನ್ನು ಅಮಾನತು ಮಾಡಿ ಆದೇಶ ನೀಡಲಾಗಿತ್ತು.

    29 ವರ್ಷದ ಅಕ್ಮಲ್ ಪಾಕ್ ಪರ ಅಕ್ಟೋಬರಿನಲ್ಲಿ ಅಂತಿಮ ಪಂದ್ಯವನ್ನಾಡಿದ್ದರು. ಇದುವರೆಗೂ 21 ಟೆಸ್ಟ್, 121 ಏಕದಿನ ಹಾಗೂ 84 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಅಂತಿಮವಾಗಿ ಶ್ರೀಲಂಕಾ ವಿರುದ್ಧದ ಟಿ20 ಟೂರ್ನಿಯಲ್ಲಿ ಭಾಗಿಯಾಗಿದ್ದ ಅಕ್ಮಲ್, ಆಡಿದ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದರು.

  • ಕೊರೊನಾ ಭೀತಿ – ಮಂತ್ರಾಲಯಕ್ಕೆ ಯಾರೂ ಬರದಂತೆ ಸುಬುಧೇಂದ್ರತೀರ್ಥ ಶ್ರೀ ಮನವಿ

    ಕೊರೊನಾ ಭೀತಿ – ಮಂತ್ರಾಲಯಕ್ಕೆ ಯಾರೂ ಬರದಂತೆ ಸುಬುಧೇಂದ್ರತೀರ್ಥ ಶ್ರೀ ಮನವಿ

    ರಾಯಚೂರು: ಕೊರೊನಾ ಸೋಂಕು ಹರಡುವ ಭೀತಿ ಹೆಚ್ಚಳ ಹಿನ್ನೆಲೆ ರಾಯರ ಭಕ್ತರಿಗೆ ಮಂತ್ರಾಲಯಕ್ಕೆ ಬರದಂತೆ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮಿ ಭಕ್ತರಲ್ಲಿ ಮನವಿ ಮಾಡಿದ್ದಾರೆ.

    ಮಂತ್ರಾಲಯಕ್ಕೆ ಭಕ್ತರು ಆಗಮಿಸದೇ ಶ್ರೀಮಠದ ಶಾಖಾ ಮಠದಲ್ಲೇ ಭಕ್ತಿ ಸಮರ್ಪಿಸಬೇಕು. ದೇಶದ ನಾನಾ ಕಡೆ ಕೊರೊನಾ ಭೀತಿ ಹೆಚ್ಚಾಗಿದೆ. ಆರೋಗ್ಯ ಇಲಾಖೆಯ ಸೂಚನೆ ಮೇರೆಗೆ ಶ್ರೀಮಠಕ್ಕೆ ಭಕ್ತರ ಪ್ರವೇಶ ಸಂಪೂರ್ಣ ನಿಷೇಧಿಸಲಾಗಿದೆ. ಭಕ್ತರ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಅಂತ ಶ್ರೀಗಳು ಹೇಳಿದ್ದಾರೆ.

    ಮಠದಲ್ಲಿ ಎಂದಿನಂತೆಯೇ ಪೂಜೆ ಪುನಸ್ಕಾರಗಳು ನಡೆಯಲಿವೆ. ಕೊರೊನಾ ವೈರಸ್ ಹಾವಳಿ ಕೊನೆಗೊಂಡು ಪರಿಸ್ಥಿತಿ ಸಹಜತೆಗೆ ಮರಳಬೇಕಾಗಿದೆ. ಅಲ್ಲಿಯವರೆಗೂ ಭಕ್ತರಿಗೆ ದರ್ಶನವಕಾಶ ಸಂಪೂರ್ಣ ನಿಷೇಧಿಸಲಾಗಿದೆ ಅಂತ ಪೀಠಾಧಿಪತಿ ಸುಭುದೇಂದ್ರ ತೀರ್ಥರು ತಿಳಿಸಿದ್ದಾರೆ.

    ಇದುವರೆಗೆ ವಿದೇಶದಿಂದ ಬರುವ ಭಕ್ತರು ಹಾಗೂ ನೆಗಡಿ ಕೆಮ್ಮು ಇರುವವರು ಮಾತ್ರ ಬರಬೇಡಿ ಎಂದು ಮಠದ ಆಡಳಿತ ಮಂಡಳಿ ಸೂಚಿಸಿತ್ತು. ಅಲ್ಲದೆ ಭಕ್ತರಿಗೆ ಪಂಚಾಮೃತ ವಿತರಣೆ ನಿಲ್ಲಿಸಿತ್ತು. ಈಗ ಭೀತಿ ಹೆಚ್ಚಾಗಿರುವುದರಿಂದ ಯಾರೂ ಮಠಕ್ಕೆ ಬರುವುದು ಬರಬೇಡಿ ಎಂದು ಶ್ರೀಗಳು ಮನವಿ ಮಾಡಿದ್ದಾರೆ.

  • ಡಿಸಿ ಮಾತಿಗೆ ಕ್ಯಾರೇ ಎನ್ನದ ಜನ- ನಿಷೇಧವಿದ್ರೂ ಹಿಂಬದಿಯಿಂದ ಪಾರ್ಕಿಗೆ ಎಂಟ್ರಿ

    ಡಿಸಿ ಮಾತಿಗೆ ಕ್ಯಾರೇ ಎನ್ನದ ಜನ- ನಿಷೇಧವಿದ್ರೂ ಹಿಂಬದಿಯಿಂದ ಪಾರ್ಕಿಗೆ ಎಂಟ್ರಿ

    – ಆರೋಗ್ಯ ತುರ್ತುಪರಿಸ್ಥಿತಿ ಘೋಷಣೆ
    – ಮಾರುಕಟ್ಟೆಯ ವ್ಯಾಪಾರ, ವಹಿವಾಟು ಕುಸಿತ

    ಕಲಬುರಗಿ: ದೇಶದಲ್ಲಿಯೇ ಕೊರೊನಾ ವೈರಸ್‍ಗೆ ಕಲಬುರಗಿಯಲ್ಲಿ ಮೊದಲ ಸಾವು ಸಂಭವಿಸಿದ್ದರೂ ಕಲಬುರಗಿ ಸಾರ್ವಜನಿಕರಿಗೆ ಕೊರೊನಾ ಭೀತಿ ಉಂಟಾಗಿಲ್ಲ ಅನ್ನುವಂತಿದೆ.

    ಜನರು ಕೆಲ ದಿನಗಳವರೆಗೆ ಮನೆ ಬಿಟ್ಟು ಹೊರ ಬರಬೇಡಿ ಅಂತ ಶನಿವಾರ ಜಿಲ್ಲಾಧಿಕಾರಿಗಳು ಜನರಿಗೆ ಮನವಿ ಮಾಡಿದ್ದರು. ಅಲ್ಲದೆ ಪಾರ್ಕ್, ಮಾಲ್, ಥಿಯೇಟರ್‌ಗಳನ್ನು ಮುಚ್ಚಲು ಸಹ ಆದೇಶ ಮಾಡಿದ್ದರು. ಇದನ್ನೂ ಓದಿ: ತುರ್ತು ಪರಿಸ್ಥಿತಿ ಬಿಟ್ಟು ಮನೆಯಿಂದ ಹೊರ ಬರಬೇಡಿ- ಕಲಬುರಗಿ ಡಿಸಿ ಮನವಿ

    ಹೀಗಾಗಿ ನಗರದ ಪಾರ್ಕ್ ಗಳಿಗೆ ಪ್ರವೇಶ ನಿಷೇಧಿಸಿ ಬೀಗ ಹಾಕಲಾಗಿದೆ. ಆದರೂ ಜನ ಮಾತ್ರ ತಲೆ ಕಡೆಸಿಕೊಳ್ಳುತ್ತಿಲ್ಲ. ಪಾರ್ಕಿನ ಹಿಂಬದಿಯ ಗೇಟ್ ಮೂಲಕ ಒಳ ಬಂದು ವಾಕಿಂಗ್, ಯೋಗವನ್ನು ಮಾಡುತ್ತಿದ್ದಾರೆ.

    ಇದಕ್ಕೆ ಕೆಲ ಪ್ರಜ್ಞಾವಂತ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಜನರ ಹಿತಕ್ಕಾಗಿ ಈ ಕಠಿಣ ನಿರ್ಧಾರ ತೆಗೆದುಕೊಂಡಿದೆ. ಇದಕ್ಕೆ ನಾವು ಸಹ ಕೈಜೋಡಿಸಿದಾಗ ಮಾತ್ರ ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸಬಹುದು ಎಂದು ಪಬ್ಲಿಕ್ ಟಿವಿ ಬಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಮಾರುಕಟ್ಟೆಯ ವ್ಯಾಪಾರ, ವಹಿವಾಟು ಕುಸಿತ:
    ಕಲಬುರಗಿಗೆ ಆರೋಗ್ಯ ತುರ್ತುಪರಿಸ್ಥಿತಿ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಕಲಬುರಗಿ ನಗರಕ್ಕೆ ಮತ್ತು ಜಿಲ್ಲೆಗೆ ತರಕಾರಿ, ಹಾಲು ಮತ್ತು ಆಹಾರ ಸಾಮಾಗ್ರಿಗಳನ್ನು ಪೂರೈಕೆ ಮಾಡುವ ಕಣೀ ಮಾರುಕಟ್ಟೆಯಲ್ಲಿ ವ್ಯಾಪಾರ ಮತ್ತು ವಹಿವಾಟು ಕುಸಿತ ಕಂಡಿದೆ.

    ಸದಾ ಜನಸಂದಣಿಯಿಂದ ಮತ್ತು ನಡೆದಾಡಲು ಸಹ ಜಾಗವಿರದಷ್ಟು ಕಿಕ್ಕಿರಿದು ಸೇರುತ್ತಿದ್ದ ಜನ ಈಗ ಇತ್ತ ಕಡೆ ಮುಖ ಮಾಡುತ್ತಿಲ್ಲ. ಅಗತ್ಯ ಸಾಮಾಗ್ರಿಗಳನ್ನು ಖರೀದಿಸಲು ಎರಡು ಗಂಟೆ ಮಾತ್ರ ಅವಕಾಶ ನೀಡಲಾಗಿದೆ. ಹೀಗಾಗಿ ಬೆರಳೆಣಿಕೆಯಷ್ಟು ಜನ ಮಾರುಕಟ್ಟೆಯತ್ತ ಆಗಮಿಸಿ ತರಕಾರಿಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಜಿಲ್ಲಾಡಳಿತ ನಿರ್ಧಾರಕ್ಕೆ ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದರೆ, ಗ್ರಾಹಕರು ಜಿಲ್ಲಾಡಳಿತ ಕ್ರಮವನ್ನು ಸ್ವಾಗತಿಸಿದ್ದಾರೆ.

  • ಎಸ್‍ಡಿಪಿಐ, ಪಿಎಫ್‍ಐ ಸಂಘಟನೆಗಳನ್ನು ನಿಷೇಧಿಸುತ್ತೇವೆ: ಈಶ್ವರಪ್ಪ

    ಎಸ್‍ಡಿಪಿಐ, ಪಿಎಫ್‍ಐ ಸಂಘಟನೆಗಳನ್ನು ನಿಷೇಧಿಸುತ್ತೇವೆ: ಈಶ್ವರಪ್ಪ

    -ಸಚಿವಾಕಾಂಕ್ಷಿಗಳ ಋಣ ನಮ್ಮ ಮೇಲಿದೆ

    ಮೈಸೂರು: ಎಸ್‍ಡಿಪಿಐ ಹಾಗೂ ಪಿಎಫ್‍ಐ ಸಂಘಟನೆಗಳನ್ನು ರಾಜ್ಯದಲ್ಲಿ ನಿಷೇಧಿಸುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

    ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‍ಡಿಪಿಐ ಹಾಗೂ ಪಿಎಫ್‍ಐ ಭಯೋತ್ಪಾದನಾ ಸಂಘಟನೆಗಳು. ಅವುಗಳ ಚಟುವಟಿಕೆ ಏನು ಎಂಬುದು ಮೈಸೂರು, ಶಿವಮೊಗ್ಗದವರಿಗೂ ಅನುಭವ ಆಗಿದೆ. ಕೇರಳದಿಂದ ಬಂದು ಪಾಕಿಸ್ತಾನಕ್ಕೆ ಜೈ ಎಂದು ಘೋಷಣೆ ಕೂಗಿದ್ದನ್ನು ನೋಡಿದ್ದೇವೆ. ಕೊಲೆ ಮಾಡಿದ ಪ್ರಕರಣಗಳೂ ನಮ್ಮ ಮುಂದಿವೆ. ಇವೆಲ್ಲ ಕಾರಣಗಳನ್ನು ಮುಂದಿಟ್ಟುಕೊಂಡು ಎಸ್‍ಡಿಪಿಐ, ಪಿಎಫ್‍ಐ ಸಂಘಟನೆಗಳನ್ನು ನಿಷೇಧಿಸಲು ನಿರ್ಧರಿಸಲಾಗಿದೆ ಎಂದರು.

    ಈ ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಟೀಕೆಗೆ ತಿರುಗೇಟು ನೀಡಿದ ಅವರು, ಕುಮಾರಸ್ವಾಮಿಯವರು ಸಿನಿಮಾ ಮಾಡಿಕೊಂಡು ಇರಲಿ ಸಾಕು. ಅವರು ಸಿಎಂ ಆಗಿದ್ದವರು, ಅವರ ಸ್ಥಾನಕ್ಕೆ ತಕ್ಕಂತೆ ಪದ ಬಳಕೆ ಮಾಡಬೇಕು ಎಂದರು.

    ಋಣ ತೀರಿಸುತ್ತೇವೆ: ಸಚಿವ ಆಕಾಂಕ್ಷಿಗಳ ಋಣ ನಮ್ಮ ಮೇಲಿದೆ. ಅದನ್ನು ತೀರಿಸುವುದು ನಮ್ಮ ಕರ್ತವ್ಯ, ಬಿಜೆಪಿಗೆ ಬಂದು ಗೆದ್ದಿರುವ ಶಾಸಕರ ಋಣ ತೀರಿಸುವ ಕೆಲಸ ಮಾಡುತ್ತೇವೆ. ಅವರಿಂದಲೇ ನಮ್ಮ ಸರ್ಕಾರ ಬಂದಿದೆ. ಅವರ ಋಣವನ್ನು ನಾವು ತೀರಿಸಬೇಕಿದೆ ಅಷ್ಟೇ, ಇನ್ನೆರಡು ದಿನಗಳಲ್ಲಿ ಅದು ಆಗಲಿದೆ ಎಂದು ತಿಳಿಸಿದರು.

    ಪೂರ್ಣ ಬಹುಮತ ಬಾರದ ಕಾರಣ ಈ ಗೊಂದಲ ಉಂಟಾಗಿದೆ. ಆದಷ್ಟು ಬೇಗ ಪೂರ್ಣ ಪ್ರಮಾಣದ ಸಚಿವ ಸಂಪುಟ ಆಗಲಿದೆ. ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರವಾಸಕ್ಕೆ ಆಗಮಿಸಿದ ವೇಳೆ ಏನು ಚರ್ಚೆಯಾಗಿದೆ ನನಗೆ ಮಾಹಿತಿ ಇಲ್ಲ. ನಿಮಗೆ ಇರುವಷ್ಟೇ ಮಾಹಿತಿ ನನಗಿದೆ ಎಂದರು.

    ಈ ಬಗ್ಗೆ ಕಾಂಗ್ರೆಸ್ ಟೀಕೆಯಲ್ಲಿ ಅರ್ಥವಿಲ್ಲ. ಅಯೋಗ್ಯ ಸರ್ಕಾರ ಎಂದು ರಾಜ್ಯದ ಜನ ಅವರನ್ನು ಮನೆಯಲ್ಲಿ ಕೂರಿಸಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಜನ ವಿರೋಧಿ ಕೆಲಸ ಮಾಡಿದರು. ಜಾತಿಯನ್ನು ಒಡೆದರು, ಧರ್ಮದ ನಡುವೆ ಬೆಂಕಿ ಹಚ್ಚಿದರು. ಹೀಗಾಗಿ ಜನ ಅವರನ್ನು ಮನೆಗೆ ಕಳುಹಿಸಿದರು ಎಂದು ವಾಗ್ದಾಳಿ ನಡೆಸಿದರು.

    ಅಲ್ಲದೆ ಸಚಿವ ಸ್ಥಾನದ ಆಕಾಂಕ್ಷಿಗಳ ಬಗ್ಗೆ ಬಿಜೆಪಿಯ ಕೆಲ ನಾಯಕರ ಟೀಕೆ ಮಾಡುತ್ತಿರುವುದಕ್ಕೂ ಈಶ್ವರಪ್ಪ ಬೇಸರ ವ್ಯಕ್ತಪಡಿಸಿ, ಟೀಕೆ ಮಾಡುತ್ತಿರುವವರು ಬಾಯಿ ಮುಚ್ಚಿಕೊಂಡಿರಬೇಕು. ಅವರ ವಿರುದ್ಧ ಹಗುರವಾಗಿ ಮಾತನಾಡುವುದು ಸರಿಯಲ್ಲ. ಅವರಿಂದಲೇ ನಮ್ಮ ಸರ್ಕಾರ ಬಂದಿದೆ ಎಂದರು.

  • ಇಂಡೋ ಆಸಿಸ್ ಹೈವೋಲ್ಟೆಜ್ ಕದನ – ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತಾಮುತ್ತಾ ವಾಹನಗಳ ಪಾರ್ಕಿಂಗ್ ನಿಷೇಧ

    ಇಂಡೋ ಆಸಿಸ್ ಹೈವೋಲ್ಟೆಜ್ ಕದನ – ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತಾಮುತ್ತಾ ವಾಹನಗಳ ಪಾರ್ಕಿಂಗ್ ನಿಷೇಧ

    ಬೆಂಗಳೂರು: ನಾಳೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನದ ಹೈವೋಲ್ಟೆಜ್ ಪಂದ್ಯಾವಳಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರ, ಪಾರ್ಕಿಂಗ್, ವಾಹನ ನಿಲುಗಡೆ ಸೇರಿದಂತೆ ಕೆಲವೊಂದು ಬದಲಾವಣೆ ಮಾಡಲಾಗಿದೆ.

    ಇದರ ಪರಿಣಾಮ ಕ್ವೀನ್ಸ್ ರಸ್ತೆ, ಎಂ.ಜಿ ರೋಡ್, ಅನಿಲ್ ಕುಂಬ್ಳೆ ವೃತ್ತ, ಲಿಂಕ್ ರಸ್ತೆ, ಕಬ್ಬನ್ ರಸ್ತೆ, ರಾಜಭವನ ರಸ್ತೆ, ಟಿ ಚೌಡಯ್ಯ ರಸ್ತೆ ಮತ್ತು ಸೆಂಟ್ರಲ್ ಸ್ಟ್ರೀಟ್‍ನಲ್ಲಿ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 11.30 ರ ತನಕ ಪಾರ್ಕಿಂಗ್ ನಿಷೇಧ ಮಾಡಲಾಗಿದೆ.

    ಈ ಎಲ್ಲಾ ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧ ಮಾಡಿರುವ ಹಿನ್ನೆಲೆಯಲ್ಲಿ, ಶಾಂತಿನಗರ ಬಸ್ ನಿಲ್ದಾಣ, ಶಿವಾಜಿನಗರ ಬಸ್ ನಿಲ್ದಾಣ, ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನ, ಮಲ್ಯ ಆಸ್ಪತ್ರೆ ರಸ್ತೆ ಮತ್ತು ಸೆಂಟ್ ಜೋಸೆಫ್ ಬಾಲಕ ಶಾಲೆ ಮ್ಯೂಸಿಯಂ ರಸ್ತೆಯಲ್ಲಿ ಪಾರ್ಕಿಂಗ್ ಗೆ ಅವಕಾಶ ಮಾಡಿಕೊಡಲಾಗಿದೆ. ಇದರ ಜೊತೆಗೆ ಕ್ವೀನ್ ರಸ್ತೆ, ಕಬ್ಬನ್ ರಸ್ತೆ, ಬಿ.ಆರ್.ವಿ ಜಂಕ್ಷನ್, ಎಂ.ಜಿ ರೋಡ್‍ನಲ್ಲಿ ಮಧ್ಯಾಹ್ನ 11 ಗಂಟೆಯಿಂದ ರಾತ್ರಿ 11 ರ ತನಕ ಆಟೋ ಸಂಚಾರ ನಿಷೇಧ ಮಾಡಲಾಗಿದೆ.

    ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯುತ್ತಿದ್ದು, ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ತಂಡ ಹತ್ತು ವಿಕೆಟ್‍ಗಳ ಅಂತರದಲ್ಲಿ ಗೆದ್ದು ಬೀಗಿದರೆ, ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತ 36 ರನ್‍ಗಳ ಅಂತರದಲ್ಲಿ ಗೆದ್ದು ಸೇಡು ತೀರಿಸಿಕೊಂಡಿದೆ. ಸರಣಿಯನ್ನು ಗೆಲ್ಲಲು ನಾಳೆ ಬೆಂಗಳೂರಿನಲ್ಲಿ ನಡೆಯುವ ಪಂದ್ಯ ನಿರ್ಣಾಯಕವಾಗಿದ್ದು, ನಾಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೈವೋಲ್ಟೆಜ್ ಕದನ ನಡೆಯಲಿದೆ.

  • ರಾಜಾಸೀಟ್ ಉದ್ಯಾನವನದಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ

    ರಾಜಾಸೀಟ್ ಉದ್ಯಾನವನದಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ

    ಮಡಿಕೇರಿ: ಪ್ರವಾಸಿಗರ ನೆಚ್ಚಿನ ತಾಣ ರಾಜಾಸೀಟ್ ಉದ್ಯಾನವನದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ಬಳಸುವುದು ಮತ್ತು ಪುಷ್ಪಗಳನ್ನು ಕೀಳುವುದು ಕಂಡು ಬಂದಲ್ಲಿ 100 ರೂ. ದಂಡ ವಿಧಿಸಲು ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ರಾಜಾಸೀಟ್ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅನೀಸ್, ಫೆಬ್ರವರಿ 07 ರಿಂದ 10 ರವರೆಗೆ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಈ ಮೂಲಕ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.

    ಇದರ ಜೊತೆಗೆ ರಾಜಾಸೀಟಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಪಾದಚಾರಿ ಮಾರ್ಗವನ್ನು ಮತ್ತಷ್ಟು ವಿಸ್ತಾರಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ರಾಜಾಸೀಟ್ ಬಳಿ ಹೆಚ್ಚಿನ ವಿದ್ಯುತ್ ದೀಪಗಳ ಅಳವಡಿಕೆಗೆ ಮತ್ತು ನಿರ್ವಹಣೆಗೆ ಸೂಕ್ತ ಕ್ರಮಕೈಗೊಳ್ಳುವಂತೆ ನಗರಸಭೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿ ರಾಜಾಸೀಟ್ ಪ್ರವೇಶ ಶುಲ್ಕದಿಂದ ರೂ. 70 ಲಕ್ಷ ಆದಾಯ ಬಂದಿರುವುದನ್ನು ಅಧಿಕಾರಿಗಳ ಗಮನಕ್ಕೆ ತಂದರು. ಅಲ್ಲದೇ ಬರುವ ತಿಂಗಳು ರಾಜಾಸೀಟ್ ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯುತ್ತಿದ್ದು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.