Tag: ನಿಷೇಧ

  • 5 ದಿನ ಮಾದಪ್ಪನ ಬೆಟ್ಟಕ್ಕೆ ಪ್ರವೇಶ ನಿಷೇಧ

    5 ದಿನ ಮಾದಪ್ಪನ ಬೆಟ್ಟಕ್ಕೆ ಪ್ರವೇಶ ನಿಷೇಧ

    ಚಾಮರಾಜನಗರ: ಕೊರೊನಾ ಹಿನ್ನೆಲೆ ಈ ಬಾರಿ ಮಲೆಮಹದೇಶ್ವರ ಬೆಟ್ಟಕ್ಕೆ 5 ದಿನಗಳ ಕಾಲ ಪ್ರವೇಶವನ್ನು ನಿಷೇಧಿಸಲಾಗಿದೆ.

    ಗುರುವಾರ ಶಿವರಾತ್ರಿ ಹಬ್ಬವಿರುವುದರಿಂದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮಲೆಮಹದೇಶ್ವರ ಬೆಟ್ಟಕ್ಕೆ ಮಾದಪ್ಪನ ದರ್ಶನ ಪಡೆಯಲು ಜನಸಾಗರವೇ ಹರಿದು ಬರುತ್ತದೆ. ಹೀಗಾಗಿ ಮಾರ್ಚ್ 9 ರಿಂದ 14 ರವರೆಗೆ ಶಿವರಾತ್ರಿ ಜಾತ್ರೆಗೆ ನಿಷೇಧ ಹೇರಲಾಗಿದೆ.

    ಭಾನುವಾರ ಚಿನ್ನದ ರಥದ ಸೇವೆ ಮಾಡಲು ಬೆಟ್ಟದಲ್ಲಿ ಮಾದಪ್ಪನ ಭಕ್ತರು ಮುಗಿ ಬಿದ್ದಿದ್ದರು. ಅಲ್ಲದೆ ನಿನ್ನೆ ಒಂದೇ ದಿನ ವಿವಿಧ ಸೇವೆಗಳಿಂದ ದೇವಾಲಯಕ್ಕೆ 9,22,024 ರೂ. ಹಣ ಸಂಗ್ರಹವಾಗಿದೆ. ಕೊರೊನಾ ಕಾರಣದಿಂದ ಈ ಬಾರಿಯ ಮಹಾಶಿವರಾತ್ರಿ ಹಬ್ಬವನ್ನು ಸರಳ ಹಾಗೂ ಸಂಪ್ರದಾಯಕವಾಗಿ ಆಚರಣೆ ಮಾಡಲಾಗುತ್ತಿದ್ದು, ಐದು ದಿನಗಳ ಕಾಲ ಬೆಟ್ಟದಲ್ಲಿ ವಾಸ ಮಾಡುವ ನಿವಾಸಿಗಳಿಗೆ ಮಾತ್ರ ಮಾದಪ್ಪನ ದರ್ಶನ ದೊರೆಯಲಿದೆ.

    ಹೊರಗಿನಿಂದ ಬೆಟ್ಟಕ್ಕೆ ಬರುವ ಭಕ್ತರಿಗೂ, ಕಾಲ್ನಡಿಗೆಯಿಂದ ಬರುವ ಭಕ್ತರಿಗೂ ಬೆಟ್ಟಕ್ಕೆ ಪ್ರವೇಶ ನಿಷೇಧಸಿಲಾಗಿದೆ ಎಂಬುವುದರ ಬಗ್ಗೆ ಈಗಾಗಲೇ ಜಿಲ್ಲಾಡಳಿತ, ಪ್ರಾಧಿಕಾರ ಆದೇಶ ಹೊರಡಿಸಿದೆ.

  • ಅ.17 ರಿಂದ 14 ದಿನ ಮೈಸೂರಿನ ಪ್ರವಾಸಿ ತಾಣಗಳು ಬಂದ್

    ಅ.17 ರಿಂದ 14 ದಿನ ಮೈಸೂರಿನ ಪ್ರವಾಸಿ ತಾಣಗಳು ಬಂದ್

    – ಪ್ರವಾಸಿಗರಿಗೆ ನಿಷೇಧ ಹೇರಿದ ಜಿಲ್ಲಾಡಳಿತ
    – ಇಂದು ಮಧ್ಯರಾತ್ರಿಯಿಂದಲೇ ಚಾಮುಂಡಿ ಬೆಟ್ಟಕ್ಕೆ ನಿಷೇಧ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2020 ಹಿನ್ನೆಲೆಯಲ್ಲಿ ಬಿಗಿ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದ್ದು, ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳ ಭೇಟಿಗೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.

    ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಮೈಸೂರು ಅರಮನೆ, ಮೃಗಾಲಯಕ್ಕೆ 15 ದಿನಗಳ ಕಾಲ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಅಕ್ಟೋಬರ್ 17ರಿಂದ ನವೆಂಬರ್ 1ರವರೆಗೆ ಸಂಪೂರ್ಣ ನಿಷೇಧ ಮಾಡಲಾಗಿದೆ. ಚಾಮುಂಡಿ ಬೆಟ್ಟಕ್ಕೆ ಇಂದು ಮಧ್ಯರಾತ್ರಿಯಿಂದಲೇ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.

    ನಂಜನಗೂಡು ದೇವಾಲಯಕ್ಕೂ ಪ್ರವೇಶ ನಿಷೇಧ ಮಾಡಿದ್ದು, ಅಕ್ಟೋಬರ್ 17ರಿಂದ ನವೆಂಬರ್ 1ರವರೆಗೆ ಪ್ರವಾಸಿಗರು ಹೋಗುವಂತಿಲ್ಲ. ಮೈಸೂರಿನ ಜೊತೆಗೆ ಮಂಡ್ಯ ಪ್ರವಾಸಿ ತಾಣಗಳನ್ನು ಮುಚ್ಚಲಾಗುವುದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ. ಈ ಬಾರಿ ಸರಳ, ಸಾಂಪ್ರದಾಯಿಕ ಹಾಗೂ ವರ್ಚುವಲ್ ದಸರಾ ಮಾಡೋಣ ಎಂದು ಫೇಸ್‍ಬುಕ್ ಲೈವ್‍ನಲ್ಲಿ ಮೈಸೂರು ಡಿಸಿ ರೋಹಿಣಿ ಸಿಂಧೂರಿ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಮೈಸೂರು ಜಿಲ್ಲೆ ಕೊರೊನಾ ಸೋಂಕಿನಲ್ಲಿ ರಾಜ್ಯದಲ್ಲೆ ಎರಡನೇ ಸ್ಥಾನದಲ್ಲಿದೆ. ಕೊರೊನಾ ಸಾವಿನ ಪ್ರಮಾಣ ಮೈಸೂರು ಜಿಲ್ಲೆಯಲ್ಲಿ ರಾಜ್ಯದ ಶೇಖಡ 10% ರಷ್ಟಿದೆ. ಹೀಗಾಗಿ ಕೊರೊನಾ ನಿಯಂತ್ರಣಕ್ಕೆ ಈ ಕ್ರಮಗಳು ಅನಿವಾರ್ಯವಾಗಿವೆ. ಸಾರ್ವಜನಿಕರು ತಮ್ಮ ಮನೆಯಲ್ಲೆ ಇದ್ದು ಈ ಬಾರಿ ದಸರಾ ಆಚರಿಸಲು ಸಹಕಾರ ನೀಡಬೇಕೆಂದು ರೋಹಿಣಿ ಸಿಂಧೂರಿ ಮನವಿ ಮಾಡಿದ್ದಾರೆ.

  • ಆನ್‌ಲೈನ್ ರಮ್ಮಿ ಗೇಮ್ ನಿಷೇಧಿಸಲು ರಾಜ್ಯಸಭೆಯಲ್ಲಿ ಸಂಸದ ಕೆ.ಸಿ ರಾಮಮೂರ್ತಿ ಆಗ್ರಹ

    ಆನ್‌ಲೈನ್ ರಮ್ಮಿ ಗೇಮ್ ನಿಷೇಧಿಸಲು ರಾಜ್ಯಸಭೆಯಲ್ಲಿ ಸಂಸದ ಕೆ.ಸಿ ರಾಮಮೂರ್ತಿ ಆಗ್ರಹ

    ನವದೆಹಲಿ: ಆನ್‌ಲೈನ್ ರಮ್ಮಿ ಗೇಮ್‍ನಿಂದ ದೇಶದ ಯುವಕರು ದಾರಿ ತಪ್ಪುತ್ತಿದ್ದು, ಹಣ ಕಳೆದುಕೊಂಡು ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆನ್‌ಲೈನ್ ರಮ್ಮಿ ನಿಷೇಧಿಸುವಂತೆ ರಾಜ್ಯಸಭೆ ಸಂಸದ ಕೆ.ಸಿ ರಾಮಮೂರ್ತಿ ಆಗ್ರಹಿಸಿದ್ದಾರೆ.

    ಇಂದು ರಾಜ್ಯಸಭೆಯಲ್ಲಿ ಈ ಬಗ್ಗೆ ವಿಶೇಷ ಗಮನ ಸೆಳೆದ ಕೆ.ಸಿ ರಾಮಮೂರ್ತಿ, ಕ್ರಿಕೆಟಿಗ ಎಂ.ಎಸ್ ಧೋನಿ ಮತ್ತು ಅನೇಕ ನಟ-ನಟಿಯರು ಈ ಗೇಮ್ ಗಳಿಗೆ ಜಾಹೀರಾತು ನೀಡುತ್ತಿದ್ದು ಇದರಿಂದ ದೇಶದ ಯುವಕರು ಪ್ರೇರಣೆಗೊಳ್ಳುತ್ತಿದ್ದಾರೆ ಎಂದರು.

    ಆನ್‌ಲೈನ್ ರಮ್ಮಿ ಕೌಶಲ್ಯಯುತ ಆಟ ಎಂದು ಪರಿಗಣಿಸಿದೆ ಆದರೆ ಹೆಚ್ಚಿನ ಹಣ ಪಡೆಯುವ ದುರಾಸೆಯಲ್ಲಿ ಹೆಚ್ಚಿನ ಹಣವನ್ನು ಜೂಜಿನಲ್ಲಿಡಲಾಗುತ್ತಿದೆ. ಬೆಟ್ಟಿಂಗ್ ಎನ್ನುವುದು ಕೌಶಲ್ಯವಲ್ಲ ಈ ಬೆಳವಣಿಗಳನ್ನು ಕುಟುಂಬದ ಆರ್ಥಿಕತೆಯನ್ನು ಹಾಳು ಮಾಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

    ಬೆಟ್ಟಿಂಗ್ ದಂಧೆಗೆ ಬೀಳುವ ಯುವಕರು ಆನ್‌ಲೈನ್ ಗೇಮಿಂಗ್ ವ್ಯಸನಿಗಳಾಗುತ್ತಿದ್ದಾರೆ. ವಿಶೇಷ ಜಾಹೀರಾತು ಬಳಸಿ ಇದು ಲಾಭದಾಯಕ ಎಂದು ಬಿಂಬಿಸಲಾಗುತ್ತಿರುವುದು ದುರದೃಷ್ಟಕರ. ಇದನ್ನು ನಂಬಿ ಯುವಕರು ಹಣ ಕಳೆದುಕೊಂಡು ಬಳಿಕ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ.

    ಕೆಪಿಎಂಜಿ ವರದಿಯನ್ನು ಉಲ್ಲೇಖಿಸಿದ ಅವರು, ಆನ್‍ಲೈನ್ ರಿಯಲ್ ಮನೀ ಗೇಮಿಂಗ್ ಉದ್ಯಮವು 2,200 ಕೋಟಿ ರೂ. ಎಂದು ಅಂದಾಜಿಸಲಾಗಿದೆ ಮತ್ತು ಇದು ವಾರ್ಷಿಕವಾಗಿ 30% ರಷ್ಟು ಬೆಳೆಯುತ್ತಿದೆ. 2023 ರ ವೇಳೆಗೆ 12,000 ಕೋಟಿ ರೂ ಆಗಲಿದೆ.

    ಪ್ರಪಂಚದಲ್ಲಿ ಈ ವೇಗದಲ್ಲಿ ಬೆಳೆಯಬಲ್ಲ ಯಾವುದೇ ಉದ್ಯಮವನ್ನು ನಾನು ನೋಡಿಲ್ಲ, ಆನ್‍ಲೈನ್ ರಮ್ಮಿಯನ್ನು ಒಳಗೊಂಡ ಆನ್‍ಲೈನ್ ನೈಜ ಹಣದ ಗೇಮಿಂಗ್ ಯಾವ ವೇಗದಲ್ಲಿ ಹರಡುತ್ತಿದೆ ಎಂಬುದನ್ನು ಇದು ಸ್ಪಷ್ಟವಾಗಿ ಸೂಚಿಸುತ್ತದೆ ಹೀಗಾಗಿ ಆನ್‍ಲೈನ್ ರಮ್ಮಿ ಗೇಮ್ ನಿಷೇಧಿಸುವಂತೆ ಒತ್ತಾಯಿಸಿದರು.

  • ಆಗಸ್ಟ್ 22ರಿಂದ ಮದ್ಯ ಮಾರಾಟ ನಿಷೇಧ: ಡಿಸಿ

    ಆಗಸ್ಟ್ 22ರಿಂದ ಮದ್ಯ ಮಾರಾಟ ನಿಷೇಧ: ಡಿಸಿ

    ಧಾರವಾಡ: ಅಗಸ್ಟ್ 22ರಿಂದ ಸೆಪ್ಟಂಬರ್ 4ರವರೆಗೆ ಗಣೇಶ ಹಬ್ಬದ ಆಚರಣೆ ಪ್ರಯುಕ್ತ ಧಾರವಾಡ ಜಿಲ್ಲೆಯ ನಗರ ಮತ್ತು ಗ್ರಾಮಗಳಲ್ಲಿ ಗಣೇಶ ವಿಗ್ರಹಗಳ ವಿಸರ್ಜನಾ ನಡೆಯುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಮದ್ಯ ಮಾರಾಟ ನಿಷೇಧಿಸಿ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.

    ಗಣೇಶ ಹಬ್ಬಕ್ಕೆ ಸಂಬಂಧಿಸಿದಂತೆ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21(1) ಕಾಯ್ದೆಯಡಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಮುಂಜಾಗ್ರತಾ ಕ್ರಮವಾಗಿ ಈ ಆದೇಶ ಹೊರಡಿಸಲಾಗಿದೆ. ಸಮಾರಂಭ, ಸಂಗೀತ, ನೃತ್ಯ, ಮುಂತಾದ ಮನರಂಜನಾ ಕಾರ್ಯಕ್ರಮಗಳನ್ನು ನಿರ್ಬಂಧಿಸಲಾಗಿದೆ.

    ಗಣೇಶ ಮೂರ್ತಿಯನ್ನು ತಮ್ಮ ಮನೆಯ ಆವರಣದಲ್ಲಿ, ನೀರಿನ ಬ್ಯಾರಲ್, ಬಕೆಟ್‍ಗಳಲ್ಲಿ ವಿಸರ್ಜನೆ ಮಾಡಬೇಕು. ಯಾವುದೇ ರೀತಿಯಾಗಿ ಜನ ಸಂದಣಿ ಉಂಟು ಮಾಡಬಾರದು. ಭಕ್ತಾದಿಗಳಿಗೆ ಸ್ಯಾನಿಟೈಸರ್, ಮಾಸ್ಕ್ ಧರಿಸಲು ಸೂಚಿಸಬೇಕು, ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕು, ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪಿಸಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

  • ಎಸ್‍ಡಿಪಿಐ ನಿಷೇಧಿಸುವ ಧೈರ್ಯ ಬಿಜೆಪಿಗೆ ಇದೆಯೇ – ಸಿದ್ದು ಪ್ರಶ್ನೆ

    ಎಸ್‍ಡಿಪಿಐ ನಿಷೇಧಿಸುವ ಧೈರ್ಯ ಬಿಜೆಪಿಗೆ ಇದೆಯೇ – ಸಿದ್ದು ಪ್ರಶ್ನೆ

    ಬೆಂಗಳೂರು: ಮುಸ್ಲಿಂ ಸಂಘಟನೆಯಾದ ಎಸ್‍ಡಿಪಿಐ ನಿಷೇಧಿಸುವ ಧೈರ್ಯ ಬಿಜೆಪಿಗೆ ಇದೆಯೇ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

    ಕಾವಲ್ ಭೈರಸಂದ್ರ ಗಲಭೆಯ ತನಿಖೆಯ ಹಾದಿ ತಪ್ಪಿಸುವ ಕೆಲಸವನ್ನು ಬಿಜೆಪಿ ಸರ್ಕಾರ ಯೋಜಿತ ರೀತಿಯಲ್ಲಿ ಮಾಡುತ್ತಿದೆ. ದಿನಕ್ಕೊಬ್ಬ ಸಚಿವರು, ಶಾಸಕರು ಭೇಟಿ ನೀಡಿ, ಗಲಭೆಗೆ ಎಸ್‍ಡಿಪಿಐ, ಕಾಂಗ್ರೆಸ್, ಭಯೋತ್ಪಾದಕರು ಕಾರಣ ಎಂದು ನೀಡುತ್ತಿರುವ ತರಹೇವಾರಿ ಹೇಳಿಕೆಗಳೇ ಇದಕ್ಕೆ ಸಾಕ್ಷಿ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

    ಇಂದು ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿ, ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಸಿದ್ದರಾಮಯ್ಯ, ಗಲಭೆಯ ಹಿಂದಿನ ಅಪರಾಧಿಗಳನ್ನು ಪತ್ತೆ ಹಚ್ಚುವುದಕ್ಕಿಂತ ಹೆಚ್ಚು ಈ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಿಲುಕಿಸುವುದು ಹೇಗೆ? ಇದನ್ನು ಕೋಮುಗಲಭೆ ಎಂದು ಬಣ್ಣಿಸಿ ರಾಜಕೀಯ ಲಾಭ ಗಳಿಸುವುದು ಹೇಗೆ? ಎನ್ನುವ ಬಗ್ಗೆ ಬಿಜೆಪಿ ಪಕ್ಷದ ನಾಯಕರು ತಲೆಕೆಡಿಸಿಕೊಂಡಿದ್ದಾರೆ ಎಂದು ದೂರಿದ್ದಾರೆ.

    ಜೊತೆಗೆ ಬಿಜೆಪಿ ಸ್ಪಷ್ಟವಾಗಿ ಎರಡು ಗುಂಪುಗಳಾಗಿ ಒಡೆದುಹೋಗಿದೆ. ಯಡಿಯೂರಪ್ಪ ಅವರ ಪದಚ್ಯುತಿಗೆ ಕೆಲವು ಆರ್‍ಎಸ್‍ಎಸ್ ಸಮೀಪವರ್ತಿ ನಾಯಕರು ನಡೆಸುತ್ತಿರುವ ಪ್ರಯತ್ನಕ್ಕೆ ಕೆಜೆಹಳ್ಳಿ-ಡಿಜೆಹಳ್ಳಿ ಪ್ರಕರಣವನ್ನು ಯಥೇಚ್ಚವಾಗಿ ಬಳಸಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ.

    ರಾಜ್ಯದಲ್ಲಿ ಅತ್ಯಧಿಕ ಮತಗಳಿಸಿ ಆಯ್ಕೆಯಾಗಿರುವ ನಮ್ಮದೇ ಪಕ್ಷದ ಶಾಸಕರು ಮತ್ತು ನಮ್ಮ ಪಕ್ಷದ ಕಾರ್ಪೋರೇಟರ್‍ಗಳು ಇರುವಾಗ ಕಾವಲಭೈರಸಂದ್ರ ಗಲಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇರುವ ಆಸಕ್ತಿಯಾದರು ಏನು? ಅಲ್ಲಿ ಚುನಾವಣೆಯಲ್ಲಿ ಎದುರಿಸಲಾಗದ ರಾಜಕೀಯ ಪಕ್ಷಗಳೇ ಪ್ರಕರಣದ ರಾಜಕೀಯ ಲಾಭ ಪಡೆಯಲು ಹೊರಟಿರುವುದು ಸ್ಪಷ್ಟ ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.

    ಕಾವಲಭೈರಸಂದ್ರ ಗಲಭೆಯ ನಿಜವಾದ ತನಿಖೆ ಬಿಜೆಪಿ ಸರ್ಕಾರದ ಗುಪ್ತಚರ ಇಲಾಖೆಯ ವೈಫಲ್ಯದಿಂದ ಶುರುವಾಗಬೇಕು. ಸರ್ಕಾರದ ಪ್ರಕಾರ ಇದು ಪೂರ್ವಯೋಜಿತ ಕೃತ್ಯವಾಗಿದ್ದರೆ ಅದು ಯಾಕೆ ಪೊಲೀಸರ ಗಮನಕ್ಕೆ ಬಂದಿಲ್ಲ? ಪ್ರಚೋದನಕಾರಿ ಪೋಸ್ಟ್ ಹಾಕಿರುವ ನವೀನ್ ವಿರುದ್ಧ ಪ್ರಕರಣ ದಾಖಲಿಸಲು ವಿಳಂಬಕ್ಕೆ ಯಾರು ಕಾರಣ ಎಂದು ಪ್ರಶ್ನೆ ಮಾಡಿದ್ದಾರೆ.

    ಎಸ್‍ಡಿಪಿಐ ನಾಯಕರು ತಪ್ಪು ಮಾಡಿದ್ದರೆ ಅವರನ್ನು ಶಿಕ್ಷಿಸಿ, ಆ ಸಂಘಟನೆ ತಪ್ಪು ಮಾಡಿದ್ದರೆ ಅದರ ವಿರುದ್ಧ ಕ್ರಮಕೈಗೊಳ್ಳಿ. ಮುಸ್ಲಿಂ ಮತಗಳನ್ನು ಒಡೆಯಲು ಎಸ್‍ಡಿಪಿಐ ಅನ್ನು ಯೋಜಿತ ರೀತಿಯಲ್ಲಿ ಬಳಸಿಕೊಳ್ಳುತ್ತಾ ಬಂದಿರುವ ಬಿಜೆಪಿಗೆ ಅದನ್ನು ನಿಷೇಧಿಸುವ ಧೈರ್ಯ ಇದೆಯೇ ಎಂದು ಸವಾಲು ಹಾಕಿದ್ದಾರೆ.

  • ಡಿಜೆ, ಕೆಜಿ ಹಳ್ಳಿಯಲ್ಲಿ ಇಂದು ನಮಾಜ್‍ಗೆ ನಿಷೇಧ – ಡಿಸಿಪಿ ಶರಣಪ್ಪ ಖಡಕ್ ಸೂಚನೆ

    ಡಿಜೆ, ಕೆಜಿ ಹಳ್ಳಿಯಲ್ಲಿ ಇಂದು ನಮಾಜ್‍ಗೆ ನಿಷೇಧ – ಡಿಸಿಪಿ ಶರಣಪ್ಪ ಖಡಕ್ ಸೂಚನೆ

    ಬೆಂಗಳೂರು: ನಿಷೇದಾಜ್ಞೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ಇಂದು ನಮಾಜ್‍ಗೆ ನಿಷೇಧ ಮಾಡಲಾಗಿದೆ.

    ಇಂದು ಶುಕ್ರವಾರ ಆಗಿರುವುದರಿಂದ ಸಾಮೂಹಿಕವಾಗಿ ನಮಾಜ್ ಮಾಡುತ್ತಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಹೀಗಾಗಿ ಸಾಮೂಹಿಕ ಪ್ರಾರ್ಥನೆಗಾಗಿ ಅವಕಾಶ ನಿಷೇಧಿಸಲಾಗಿದೆ. ಕೇವಲ ಮೌಲ್ವಿ ಒಬ್ಬರು ಮಾತ್ರ ಹೋಗಿ ನಮಾಜ್ ಮಾಡಲು ಅವಕಾಶ ನೀಡಲಾಗಿದೆ. ಇಂದು ನಿಷೇದಾಜ್ಞೆ ಪ್ರದೇಶದಲ್ಲಿ ನಮಾಜ್ ನಿಷೇಧ ಮಾಡಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಭದ್ರತೆಯನ್ನು ನಿಯೋಜನೆ ಮಾಡಲಾಗಿದೆ. ಕೆಎಸ್‌ಆರ್‌ಪಿ, ಸಿಎಆರ್ ತುಕಡಿ ಸೇರಿ ಸುಮಾರು 1,500 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.

    ಅಲ್ಲದೇ ಭದ್ರತೆಯಲ್ಲಿರುವ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನಮಾಜ್ ಇದೇ ಎಂದು ಯಾರೂ ಕೂಡ ಅಡ್ಡಾಡದಂತೆ ನೋಡಿಕೊಳ್ಳಿ. ಯಾರೂ ಕೂಡ ಮೈಮರೆತು ಇರಬೇಡಿ, ಅನವಶ್ಯಕವಾಗಿ ಓಡಾಡದಂತೆ ನಿಗಾ ವಹಿಸಿ ಎಂದು ಡಿಸಿಪಿ ಶರಣಪ್ಪ ಖಡಕ್ ಸೂಚನೆ ನೀಡಿದ್ದಾರೆ.

    ಸೂಕ್ಷ್ಮ ಪರಿಸ್ಥಿತಿಯನ್ನ ಅರ್ಥ ಮಾಡಿಕೊಳ್ಳಬೇಕು, ಯಾವುದೇ ರೀತಿ ನಿರ್ಲಕ್ಷಕ್ಕೆ ಅವಕಾಶ ಇಲ್ಲ. ನಮ್ಮ ಡ್ಯೂಟಿಯಲ್ಲಿ ಶಿಸ್ತಿನಿಂದ, ಪರಿಸ್ಥಿತಿಯನ್ನ ಗಣನೆಗೆ ತೆಗೆದುಕೊಂಡು ಕಾರ್ಯ ನಿರ್ವಹಿಸಿ. ನಾವು ದೊಡ್ಡ ಕುಟುಂಬ ಇದ್ದೇವೆ, ಒಂದಾಗಿ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಇದು ನಿಮ್ಮ ವ್ಯಾಪ್ತಿಯಲ್ಲಿ ಇಲ್ಲದೆ ಹೋದರು ತಾರತಮ್ಯ ಮಾಡಬಾರದು. ಖಾಕಿಯ ಹೆಮ್ಮೆಯನ್ನ ಉಳಿಸಿಕೊಳ್ಳಬೇಕು ಎಂದು ಡಿಸಿಪಿ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.

    144 ಸೆಕ್ಷನ್ ಜಾರಿಯಾಗಿದೆ. ಹೀಗಾಗಿ ನಮಾಜ್‍ಗೆ ಅನುಮತಿ ಇಲ್ಲ. ಯಾರ ಮೇಲೂ ಅನವಶ್ಯಕ ಲಾಠಿ ಬಿಸುವಂತಿಲ್ಲ. ಬೆಂಗಳೂರು, ಕರ್ನಾಟಕ ಪೊಲೀಸರು ಅಂದರೆ ಎಲ್ಲರೂ ಹೆಮ್ಮೆಪಡಬೇಕು. ಆ ರೀತಿ ಕೆಲಸ ಮಾಡಬೇಕು. ನಾನು ವ್ಯಾಪ್ತಿಯಲ್ಲಿ ರೌಂಡ್ಸ್‌ನಲ್ಲಿ ಇರುತ್ತೀನಿ ಎಂದು ಶರಣಪ್ಪ ತಿಳಿಸಿದರು.

  • ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಭಕ್ತರು ಬರುವುದು ಬೇಡ: ಶ್ರೀವೆಂಕಪ್ಪ ಒಡೆಯರ್ ಮನವಿ

    ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಭಕ್ತರು ಬರುವುದು ಬೇಡ: ಶ್ರೀವೆಂಕಪ್ಪ ಒಡೆಯರ್ ಮನವಿ

    ಬಳ್ಳಾರಿ: ಕೊರೊನಾ ದಿನೇ ದಿನೇ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಳ್ಳಾರಿ ಸುಪ್ರಸಿದ್ಧ ದೇವಾಲಯ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧ ಮಾಡಲಾಗಿದೆ.

    ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದೆ. ಆದರೆ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕು ಮೈಲಾರದ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಭಕ್ತರು ಹೆಚ್ಚು ಬರುತ್ತಲೇ ಇದ್ದಾರೆ. ಹೀಗಾಗಿ ದೇವಸ್ಥಾನಕ್ಕೆ ಬರಬೇಡಿ ಎಂದು ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಮನವಿ ಮಾಡಿಕೊಂಡಿದ್ದಾರೆ.

    ಐತಿಹಾಸಿಕ ಸುಕ್ಷೇತ್ರ ಮೈಲಾರಲಿಂಗೇಶ್ವರ ದೇವರಿಗೆ ಮಹಾರಾಷ್ಟ್ರ, ಆಂಧ್ರಪ್ರದೇಶದ ಹಾಗೂ ಬೆಂಗಳೂರು ಸೇರಿದಂತೆ ಲಕ್ಷಾಂತರ ಭಕ್ತರು ಇದ್ದಾರೆ. ಹಾಗಾಗಿ ಭಕ್ತರು ದೇವಸ್ಥಾನಕ್ಕೆ ಬಂದು ದೇವರ ದರ್ಶನ ನಿಷೇಧ ಮಾಡಲಾಗಿದೆ. ಮನೆಯಲ್ಲಿ ಭಕ್ತರು ಮೈಲಾರಲಿಂಗೇಶ್ವರ ದೇವರ ಪೂಜೆ ಮಾಡಿ, ಕೊರೊನಾ ಸೋಂಕು ಕಡಿಮೆ ಆದ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡುತ್ತೇವೆ. ದೇವಸ್ಥಾನದ ಲಕ್ಷಾಂತರ ಭಕ್ತರು ಸಹಕರಿಸಲು ದೇವಸ್ಥಾನದ ಧರ್ಮದರ್ಶಿ ಶ್ರೀವೆಂಕಪ್ಪ ಒಡೆಯರ್ ಮನವಿ ಮಾಡಿಕೊಂಡಿದ್ದಾರೆ.

  • ನಾಳೆಯಿಂದ 5 ದಿನ ಚಾಮುಂಡಿ ಬೆಟ್ಟ ಪ್ರವೇಶಕ್ಕೆ ನಿರ್ಬಂಧ

    ನಾಳೆಯಿಂದ 5 ದಿನ ಚಾಮುಂಡಿ ಬೆಟ್ಟ ಪ್ರವೇಶಕ್ಕೆ ನಿರ್ಬಂಧ

    ಮೈಸೂರು: ಕೊರೊನಾ ವೈರಸ್ ಭೀತಿ ದಿನೇ ದಿನೇ ಹೆಚ್ಚಾಗುತ್ತಿರುವ ಕಾರಣ ನಾಳೆಯಿಂದ ಐದು ದಿನ ಮೈಸೂರು ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

    ನಾಳೆ ಮೂರನೇ ಆಷಾಢ ಶುಕ್ರವಾರ ಹಾಗೂ ವಾರಾಂತ್ಯ ಶನಿವಾರ, ಭಾನುವಾರದಂದು ಚಾಮುಂಡಿ ಬೆಟ್ಟಕ್ಕೆ ಭಕ್ತಾದಿಗಳ ಪ್ರವೇಶಕ್ಕೆ ನಿರ್ಬಂಧವಿದೆ. ಇದರ ಜೊತೆಗೆ ಸೋಮವಾರ ಚಾಮುಂಡೇಶ್ವರಿ ದೇವಿಯ ಜನ್ಮೋತ್ಸವವಿರುವ ಕಾರಣ ಹಾಗೂ ಆಷಾಢ ಮಾಸದ ಕಡೆಯ ಮಂಗಳವಾರ ಸೇರಿ ಸತತ ಐದು ದಿನಗಳ ಕಾಲ ಚಾಮುಂಡಿಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಮಾಡಲಾಗಿದೆ.

    ಜುಲೈ 17ರಂದು ಕಡೆಯ ಆಷಾಢ ಶುಕ್ರವಾರ ಇರುವ ಕಾರಣ ಅಂದು ಕೂಡ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಉತ್ತನಹಳ್ಳಿ ದೇವಾಲಯಕ್ಕೂ ನಾಳೆಯಿಂದ ಸತತ ಐದು ದಿನಗಳ ಕಾಲ ಹಾಗೂ ಕೊನೆಯ ಆಷಾಢ ಶುಕ್ರವಾರ ಜುಲೈ 17ರಂದು ಭಕ್ತರ ಪ್ರವೇಶಕ್ಕೆ ನಿರ್ಬಂಧವಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಆದೇಶ ಮಾಡಿದ್ದಾರೆ.

  • ಕಲಬುರಗಿ, ಬಾಗಲಕೋಟೆಯಲ್ಲಿ ಮದುವೆಗೆ ನಿಷೇಧ

    ಕಲಬುರಗಿ, ಬಾಗಲಕೋಟೆಯಲ್ಲಿ ಮದುವೆಗೆ ನಿಷೇಧ

    ಬಾಗಕೋಟೆ/ಕಲಬುರಗಿ: ಮದುವೆ ಸಮಾರಂಭಗಳಲ್ಲಿ ಭಾಗವಹಿಸಿದ ಜನರಿಗೆ ಹೆಚ್ಚಾಗಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಜನ ಸೇರುವ ಮದುವೆ ಸಮಾರಂಭಗಳಿಗೆ ಅನುಮತಿ ನೀಡದಂತೆ ಕಲಬುರಗಿ ಮತ್ತು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಆದೇಶ ಹೊರಡಿಸಿದ್ದಾರೆ.

    ಡಿಸಿಎಂ ಗೋವಿಂದ ಕಾರಜೋಳ ಈ ಬಗ್ಗೆ ಪತ್ರ ಬರೆದು ಕಲಬುರಗಿ ಮತ್ತು ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪರ್ಯಾಯವಾಗಿ ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ಮದುವೆ ಕಾರ್ಯಗಳನ್ನ ನಡೆಸುವಂತೆ ಆದೇಶ ಹೊರಡಿಸಿದ್ದಾರೆ.

    ಪತ್ರದಲ್ಲಿ ಏನಿದೆ?
    ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಸರ್ಕಾರವು ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೂ ಕೊರೊನಾ ನಿಯಂತ್ರಣಕ್ಕೆ ಬಾರದಿರುವುದು ಆತಂಕಕಾರಿ ಸಂಗತಿಯಾಗಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಮದುವೆ ಸಮಾರಂಭಗಳಲ್ಲಿ ಹೆಚ್ಚು ಜನ ಭಾಗವಹಿಸುತ್ತಿದ್ದಾರೆ. ಇದರ ಪರಿಣಾಮದಿಂದ ಮದುವೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರಿಗೂ ಕೊರೊನಾ ಸೋಂಕು ಹರಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಆ ಕಾರಣಕ್ಕಾಗಿ ಜಿಲ್ಲೆಯಲ್ಲಿ ಇನ್ನೂ ಮುಂದೆ ಜನ ಸೇರಿಸಿ ಮದುವೆ ಸಮಾರಂಭಗಳನ್ನು ಆಚರಿಸಲು ಅನುಮತಿ ನೀಡಬಾರದು. ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ಮದುವೆ ಕಾರ್ಯಗಳನ್ನು ನಡೆಸಲು ಪರವಾನಿಗೆ ನೀಡುವಂತೆ ಸೂಚಿಸಿದೆ.

    ಇತ್ತೀಚೆಗಷ್ಟೆ ಹಲವೆಡೆ ಮದುವೆ ಸಮಾರಂಭಗಳಲ್ಲಿ ಭಾಗವಹಿಸಿದ ಜನರಿಗೆ ಕೊರೊನಾ ಸೋಂಕು ತಗುಲಿತ್ತು. ಈ ಹಿನ್ನೆಲೆಯಲ್ಲಿ ಜನ ಸೇರುವ ಮದುವೆ ಸಮಾರಂಭಗಳಿಗೆ ಅನುಮತಿ ನೀಡದಂತೆ ಕ್ರಮಗೊಳ್ಳಲಾಗಿದೆ.

    ಈ ಬಗ್ಗೆ ಬಾಗಲಕೋಟೆ ಡಿಸಿ ಕೆ.ರಾಜೇಂದ್ರ ಸುದ್ದಿಗೋಷ್ಠಿ ನಡೆಸಿದ್ದು, ಜಿಲ್ಲೆಯಲ್ಲಿ ಮದುವೆ, ಸೀಮಂತ ಹಾಗೂ ಅಂತ್ಯಸಂಸ್ಕಾರ ಅವಾಂತರದಿಂದಲೇ 70ಕ್ಕೂ ಹೆಚ್ಚು ಪ್ರಕರಣಗಳು ಬಂದಿವೆ. ಕಲಾದಗಿ ಅಬಕಾರಿ ಸಬ್ ಇನ್ಸ್‌ಪೆಕ್ಟರ್ ಮದುವೆ, ಇಳಕಲ್ ಮದುವೆ, ಡಾಣಕಶಿರೂರ ಸೀಮಂತ, ಚಿಕ್ಕಮ್ಯಾಗೇರಿ ರೈಲ್ವೆ ಟಿಕೆಟ್ ಕಲೆಕ್ಟರ್ ಅಂತ್ಯಸಂಸ್ಕಾರ ಈ ಪ್ರಕರಣಗಳಲ್ಲಿ ಕೋವಿಡ್ ನಿಯಮ ಉಲ್ಲಂಘನೆಯಾಗಿದೆ. ಈ ಪ್ರಕರಣಗಳಿಂದಲೇ 70ಕ್ಕೂ ಹೆಚ್ಚು ಪ್ರಕರಣ ಬಂದಿವೆ. ಇನ್ನೂ ಹೆಚ್ಚಿನ ಪಾಸಿಟಿವ್ ಪ್ರಕರಣ ಬರುವ ಸಾಧ್ಯತೆ ಇದೆ ಎಂದು ತಿಳಿಸಿದರು.

    ಇದೆಲ್ಲ ಗಮನಿಸಿದ ಡಿಸಿಎಂ ಗೋವಿಂದ ಕಾರಜೋಳ ಸೂಚನೆ ನೀಡಿದ್ದಾರೆ. ಡಿಸಿಎಂ ಸೂಚನೆ ಮೇರೆಗೆ ಜಿಲ್ಲೆಯಲ್ಲಿ ಮದುವೆ, ಸೀಮಂತ ಕಾರ್ಯ ನಿಷೇಧ ಮಾಡಲಾಗಿದೆ. ಮದುವೆಯಾಗುವವರು ಕೇವಲ ನೊಂದಣಾಧಿಕಾರಿ ಕಚೇರಿಗಳಲ್ಲಿ ಮಾತ್ರ ಮಾಡಿಕೊಳ್ಳಬೇಕು. ಯಾರೇ ಮರಣ ಹೊಂದಿದರು ತಾಲೂಕಾಡಳಿತದ ಮತ್ತು ಸ್ಥಳೀಯ ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಡಿಸಿ ಸೂಚನೆ ನೀಡಿದರು.

  • ಭಾರತದಲ್ಲಿ ಬ್ಯಾನ್ ಬಳಿಕ ಟಿಕ್ ಟಾಕ್‌ಗೆ ಮತ್ತೊಂದು ಶಾಕ್

    ಭಾರತದಲ್ಲಿ ಬ್ಯಾನ್ ಬಳಿಕ ಟಿಕ್ ಟಾಕ್‌ಗೆ ಮತ್ತೊಂದು ಶಾಕ್

    ನವದೆಹಲಿ : ಕೇಂದ್ರ ಸರ್ಕಾರದ ಬಳಿಕ ಚೀನಾ ಕಂಪನಿಗಳಿಗೆ ಭಾರತದ ವಕೀಲರಿಂದ ಬಿಗ್ ಶಾಕ್ ಎದುರಾಗಿದೆ. ಟಿಕ್ ಟಾಕ್ ಪರ ವಾದ ಮಂಡಿಸಲು‌ ಭಾರತದ ಪ್ರಮುಖ ವಕೀಲರು ನಿರಾಕರಿಸಿದ್ದಾರೆ‌.

    ಬಳಕೆದಾರರ ವೈಯಕ್ತಿಕ ಮಾಹಿತಿ ಮತ್ತು ಭದ್ರತೆ ಕಾರಣ ನೀಡಿ ಟಿಕ್ ಟಾಕ್ ಸೇರಿ ಭಾರತದಲ್ಲಿ 59 ಚೀನಾ ನಿರ್ಮಿತ ಮೊಬೈಲ್ ಆ್ಯಪ್ ಗಳನ್ನು ನಿರ್ಬಂಧಿಸಿರುವುದನ್ನು  ಟಿಕ್ ಟಾಕ್ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ಮುಂದಾಗಿದೆ. ಈ ಕಾರಣಕ್ಕೆ ಸುಪ್ರೀಂಕೋರ್ಟ್‌ನಲ್ಲಿ ತನ್ನ ಪರ ವಾದ ಮಂಡಿಸಲು ಭಾರತದ ಪ್ರಖ್ಯಾತ ವಕೀರನ್ನು ಸಂಪರ್ಕಿಸುವ ಪ್ರಯತ್ನ ಮಾಡುತ್ತಿದೆ.

    ಈ ಪೈಕಿ ಕೇಂದ್ರ ಸರ್ಕಾರದ ಮಾಜಿ ಅಟಾರ್ನಿ ಜನರಲ್ ಮುಕುಲ್ ರೊಹ್ಟಗಿ ಅವರನ್ನ ಭೇಟಿ ಮಾಡಿ ಟಿಕ್ ಟಾಕ್ ಪ್ರತಿನಿಧಿಸಲು ಮನವಿ ಮಾಡಿದ್ದು ರೊಹ್ಟಗಿ ಮನವಿ ತಿರಸ್ಕರಿಸಿದ್ದಾರೆ. ಸರ್ಕಾರ ತೆಗೆದುಕೊಂಡ ನಿರ್ಧಾರದ ವಿರುದ್ಧವಾಗಿ ಯಾವುದೇ ಚೀನಾ ಕಂಪನಿಗಳ ಪರ ವಾದ ಮಂಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರಿಂದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸುವ ಪ್ಲ್ಯಾನ್ ಗೆ ಹಿನ್ನಡೆಯಾಗಿದೆ.

    ಮಂಗಳವಾರ ಟಿಕ್ ಟಾಕ್ ಬಗ್ಗೆ ನಿರ್ಬಂಧ ಬಗ್ಗೆ ಸ್ಪಷ್ಟನೆ ನೀಡಿದ್ದ ಸಂಸ್ಥೆ, ಭಾರತದ ಕಾನೂನುಗಳ ವ್ಯಾಪ್ತಿಗೆ ಒಳಪಟ್ಟು ಕಾರ್ಯನಿರ್ವಹಿಸುತ್ತಿದ್ದೇವೆ ಬಳಕೆದಾರರು ಯಾವ ಮಾಹಿತಿಯನ್ನು ಚೀನಾ ಸೇರಿದಂತೆ ಇತರೆ ದೇಶಗಳೊಂದಿಗೆ ಹಂಚಿಕೊಂಡಿಲ್ಲ‌. ಭಾರತದ ಸಮಗ್ರತೆ ಧಕ್ಕೆ ತರುವ ಕೆಲಸ ಸಂಸ್ಥೆ ಮಾಡುವುದಿಲ್ಲ ಎಂದಿತ್ತು. ಬಗ್ಗೆ ಕೇಂದ್ರ ಸರ್ಕಾರಕ್ಕೂ ಮನವರಿಕೆ ಮಾಡುವ ಪ್ರಯತ್ನ ಮಾಡುವುದಾಗಿ ಟಿಕ್ ಟಾಕ್ ಹೇಳಿತ್ತು.

    ಅಪ್ಲಿಕೇಶನ್‌ಗಳ ಮೂಲಕ ಚೀನಾ ಭಾರತ ಪ್ರಜೆಗಳ ಮಾಹಿತಿಗಳನ್ನು ಕದಿಯುತ್ತಿದೆ. ಹೀಗಾಗಿ ಸುರಕ್ಷತೆಯ ದೃಷ್ಟಿಯಿಂದ 52 ಅಪ್ಲಿಕೇಶನ್‌ಗಳನ್ನು ನಿಷೇಧಿಸಿ ಎಂದು ಗುಪ್ತಚರ ಇಲಾಖೆ ಸರ್ಕಾರಕ್ಕೆ ತಿಳಿಸಿತ್ತು. ಈ ಅಪ್ಲಿಕೇಶನ್‌ಗಳ ಮೂಲಕ ಚೀನಾ ಸ್ಪೈವೇರ್‌ ಅಥವಾ ದುರುದ್ದೇಶಪೂರಿತ ತಂತ್ರಾಂಶಗಳನ್ನು ಸೇರಿಸಿ ಡೇಟಾವನ್ನು ಕದಿಯಬಹುದು ಎಂಬ ಗಂಭೀರ ಆರೋಪ ಈಗ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಸುರಕ್ಷತೆಯ ಕಾರಣ ನೀಡಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಟಿಕ್‌ಟಾಕ್‌ ಸೇರಿದಂತೆ 59 ಚೀನಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ.

    ಭಯ ಯಾಕೆ?
    ಅಪ್ಲಿಕೇಶನ್‌ಗಳಿಂದ ಚೀನಾ ಏನು ಮಾಡಬಹುದು ಎಂದು ಪ್ರಶ್ನೆ ಏಳುವುದು ಸಹಜ. ಸದ್ಯ ಮೊಬೈಲ್‌ ಕ್ಷೇತ್ರದಲ್ಲಿ ಚೀನಾ ಕಂಪನಿಗಳೇ ಟಾಪ್‌ ಸ್ಥಾನದಲ್ಲಿವೆ. ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂ ಒಂದು ಬಿಟ್ಟರೆ ಫೋನಿನ ಹಾರ್ಡ್‌ ವೇರ್‌ ಮತ್ತು ಅಪ್ಲಿಕೇಶನ್‌ ಸಾಫ್ಟ್‌ವೇರ್‌ಗಳ ಸಂಪೂರ್ಣ ಹಿಡಿತ ಚೀನಾಕ್ಕಿದೆ. ಹೀಗಾಗಿ ಈ ಅಪ್ಲಿಕೇಶನ್‌ಗಳ ಮೂಲಕ ಚೀನಾ ಇಡಿ ದೇಶದ ಪ್ರಜೆಗಳ ಸಂವಹನ ವ್ಯವಸ್ಥೆಯನ್ನು ತನ್ನತ್ತ ತೆಗೆದುಕೊಳ್ಳಬಹುದು ಎಂಬ ಆರೋಪ ಈ ಹಿಂದಿನಿಂದಲೂ ಇದೆ. ವಿಶೇಷವಾಗಿ ಯುದ್ಧದ ಸಂದರ್ಭದಲ್ಲಿ ಸಂವಹನ ವ್ಯವಸ್ಥೆಯನ್ನು ತನ್ನ ತೆಕ್ಕೆಗೆ ಪಡೆದರೆ ಯಾವ ಸರ್ಕಾರಕ್ಕೂ ಏನು ಮಾಡಲು ಸಾಧ್ಯವಿಲ್ಲ.