Tag: ನಿಷೇಧಾಜ್ಞೆ

  • ಪೊಲೀಸರಿಗೆ ಸರಿಯಾದ ಊಟ, ಮಲಗೋಕೆ ಜಾಗ ಇಲ್ಲ – ಇದು ದಕ್ಷಿಣ ಕನ್ನಡದ ಗಲಭೆ ಎಫೆಕ್ಟ್

    ಪೊಲೀಸರಿಗೆ ಸರಿಯಾದ ಊಟ, ಮಲಗೋಕೆ ಜಾಗ ಇಲ್ಲ – ಇದು ದಕ್ಷಿಣ ಕನ್ನಡದ ಗಲಭೆ ಎಫೆಕ್ಟ್

    ಮಂಗಳೂರು: ಕಳೆದೆರಡು ತಿಂಗಳಿಂದ ದಕ್ಷಿಣ ಕನ್ನಡ ಜಿಲ್ಲೆ ಬೂದಿಮುಚ್ಚಿದ ಕೆಂಡದಂತಾಗಿತ್ತು. ಗಲಭೆ ನಿಯಂತ್ರಣಕ್ಕೆ ಸರ್ಕಾರವೇನೋ ಕಳೆದ 58 ದಿನಗಳಿಂದ ನಿಷೇಧಾಜ್ಞೆ ಹೇರಿದೆ. ಆದ್ರೆ ತಮ್ಮ ಮನೆ, ಕುಟುಂಬ ಎಲ್ಲವನ್ನೂ ಬಿಟ್ಟು ಕಾರ್ಯನಿರ್ವಹಿಸುತ್ತಿರುವ ಪೊಲೀಸರ ಪರಿಸ್ಥಿತಿ ನೋಡಿದ್ರೆ ಅಯ್ಯೋ ಪಾಪ ಎನ್ನುವಂತಿದೆ.

    ಹೌದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 58 ದಿನಗಳಿಂದ ನಿಷೇಧಾಜ್ಞೆ ಹೇರಲಾಗಿದೆ. ಕೆಎಸ್‍ಆರ್‍ಪಿ ಜೊತೆಗೆ ಬಳ್ಳಾರಿ, ದಾವಣಗೆರೆ ಸೇರಿ 12 ಜಿಲ್ಲೆಗಳ ಒಂದು ಸಾವಿರಕ್ಕೂ ಹೆಚ್ಚು ಪೊಲೀಸರು ಕಾವಲು ಕಾಯುತ್ತಿದ್ದಾರೆ. ಕಳೆದೆರಡು ತಿಂಗಳಿಂದ ಹೆಂಡತಿ, ಮಕ್ಕಳನ್ನೂ ನೋಡದೇ ಕಾರ್ಯನಿರ್ವಹಿಸುತ್ತಿರೋ ಇವರಿಗೆ ಉಳಿದುಕೊಳ್ಳಲು ಸರಿಯಾದ ವ್ಯವಸ್ಥೆ ಕಲ್ಪಿಸಿಲ್ಲ. ಜೊತೆಗೆ ಇವರಿಗೆ ಕೊಡ್ತಿರೋದು ಕೇವಲ ಅನ್ನ, ಸಾರು ಮಾತ್ರ.

    ಮೊದಲು 4 ತಾಲೂಕು ವ್ಯಾಪ್ತಿಯಲ್ಲಿದ್ದ ನಿಷೇಧಾಜ್ಞೆಯನ್ನು ಈಗ ಬಂಟ್ವಾಳಕ್ಕೆ ಸೀಮಿತಗೊಳಿಸಲಾಗಿದೆ. ಆದ್ರೆ ನಿಷೇಧಾಜ್ಞೆ ನಡುವೆಯೇ 2 ಕೊಲೆಗಳು ನಡೆದಿವೆ. ಈಗಲೂ ಬಂಟ್ವಾಳದ ಪರಿಸ್ಥಿತಿ ಸುಧಾರಣೆ ಆಗಿಲ್ಲ.

    ಗಲಭೆ ಎಬ್ಬಿಸಿ ಶಾಂತಿಗಾಗಿ ಸೆಕ್ಷನ್ ಜಾರಿಮಾಡಿರುವ ಜನನಾಯಕರು ಇನ್ನಾದ್ರೂ ಈ ಬಗ್ಗೆ ಗಮಹರಿಸಬೇಕಿದೆ. ಶಾಂತಿಗಾಗಿ ಕಾಯುವ ಪೊಲೀಸರಿಗೆ ಕನಿಷ್ಠ ಸೌಲಭ್ಯವನ್ನಾದ್ರೂ ಒದಗಿಸಬೇಕಿದೆ.

  • ದಕ್ಷಿಣ ಕನ್ನಡದ ಕಲ್ಲಡ್ಕದಲ್ಲಿ ಮತ್ತೆ ಗುಂಪು ಘರ್ಷಣೆ – ಇಂದು ಮಧ್ಯರಾತ್ರಿವರೆಗೆ 4 ತಾಲೂಕುಗಳಲ್ಲಿ ನಿಷೇಧಾಜ್ಞೆ

    ದಕ್ಷಿಣ ಕನ್ನಡದ ಕಲ್ಲಡ್ಕದಲ್ಲಿ ಮತ್ತೆ ಗುಂಪು ಘರ್ಷಣೆ – ಇಂದು ಮಧ್ಯರಾತ್ರಿವರೆಗೆ 4 ತಾಲೂಕುಗಳಲ್ಲಿ ನಿಷೇಧಾಜ್ಞೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದಲ್ಲಿ ಮತ್ತೆ ಘರ್ಷಣೆ ನಡೆದಿದೆ. ಕೆಲ ದಿನಗಳ ಹಿಂದೆ ಕೋಮುಗಲಭೆಯಾಗಿದ್ದ ಕಲ್ಲಡ್ಕದಲ್ಲಿ ಜೂನ್ 16 ವರೆಗೆ ನಿಷೇಧಾಜ್ಞೆ ಹಾಕಲಾಗಿತ್ತು. ಆದರೂ ಮಂಗಳವಾರದಂದು ಎರಡು ಯುವಕರ ನಡುವಿನ ಘರ್ಷಣೆ ಕೋಮುಗಲಭೆಗೆ ತಿರುಗಿದೆ.

    ಸಂಜೆ ವೇಳೆಗೆ ರತ್ನಾಕರ್ ಹಾಗೂ ಕಲೀಲ್ ಎಂಬವರ ನಡುವೆ ಮಾತಿನ ಚಕಮಕಿ ನಡೆದು ರತ್ನಾಕರ್‍ಗೆ ಚೂರಿಯಿಂದ ಇರಿಯಲಾಗಿತ್ತು. ಇದರಿಂದ ಎರಡೂ ಗುಂಪಗಳ ಯುವಕರು ಪರಸ್ಪರ ಕಲ್ಲು ತೂರಾಟ ನಡೆಸಿದ್ದರು. ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಇದ್ದರೂ ಪೊಲೀಸರ ಎದುರೇ ಉಭಯ ಬಣಗಳು ಕಲ್ಲು ತೂರಾಟ ನಡೆಸಿದೆ. ಈ ವೇಳೆ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಘರ್ಷಣೆಯಲ್ಲಿ ಎರಡೂ ಗುಂಪಿನ ಯುವಕರು ಸೇರಿದಂತೆ ಪೊಲೀಸರಿಗೂ ಗಾಯಗಳಾಗಿದ್ದು ಗಾಯಾಳುಗಳನ್ನು ಮಂಗಳೂರು ಹಾಗೂ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಘರ್ಷಣೆಗೆ ಸಂಬಂಧಿಸಿದಂತೆ ಪೊಲೀಸರು 22 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ನಾಲ್ಕು ತಾಲೂಕು ವ್ಯಾಪ್ತಿಗೆ ನಿಷೇಧಾಜ್ಞೆ ವಿಸ್ತರಿಸಲಾಗಿದೆ. ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಹಾಗೂ ಸುಳ್ಯ ತಾಲೂಕಿನಲ್ಲಿ ಇಂದು ಮಧ್ಯರಾತ್ರಿ 12 ಗಂಟೆವರೆಗೆ ನಿಷೇಧಾಜ್ಞೆ ವಿಧಿಸಲಾಗಿದೆ.

    ಸ್ಥಳಕ್ಕೆ ಹೆಚ್ಚಿನ ಪೊಲೀಸರನ್ನು ಕರೆಸಲಾಗಿದ್ದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಭದ್ರತೆಯ ಸಲುವಾಗಿ 6 ಕೆಎಸ್‍ಆರ್‍ಪಿ, 4 ಡಿಎಆರ್ ತುಕಡಿಗಳನ್ನು ಕಲ್ಲಡ್ಕದಲ್ಲಿ ನಿಯೋಜಿಸಲಾಗಿದೆ.

  • ಮಧ್ಯಪ್ರದೇಶದಲ್ಲಿ ಗೋಲಿಬಾರ್‍ಗೆ ಐದು ಬಲಿ: ಈರುಳ್ಳಿ, ಬೇಳೆಗೆ ಬೆಂಬಲ ಬೆಲೆ ಕೇಳಿದ್ದಕ್ಕೆ ಗುಂಡು

    ಮಧ್ಯಪ್ರದೇಶದಲ್ಲಿ ಗೋಲಿಬಾರ್‍ಗೆ ಐದು ಬಲಿ: ಈರುಳ್ಳಿ, ಬೇಳೆಗೆ ಬೆಂಬಲ ಬೆಲೆ ಕೇಳಿದ್ದಕ್ಕೆ ಗುಂಡು

    ಮಂಡ್‍ಸೌರ್: ಮಧ್ಯಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದು, ಐದು ಮಂದಿ ರೈತರು ಮೃತಪಟ್ಟಿದ್ದಾರೆ.

    ಈರುಳ್ಳಿ ಹಾಗೂ ಬೇಳೆ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ರೈತರ ನಡೆಸುತ್ತಿರುವ ಹೋರಾಟ ಇವತ್ತು ಮಂಡ್‍ಸೌರ್ ಜಿಲ್ಲೆಯಲ್ಲಿ ಹಿಂಸಾರೂಪಕ್ಕೆ ತಿರುಗಿತ್ತು. ಮಂಡ್‍ಸೌರ್ ಜಿಲ್ಲೆಯ ಪಿಪ್ಲಿಯಾಮಂಡಿ ಪ್ರದೇಶದಲ್ಲಿ ರೈತರು-ಪೊಲೀಸರ ಮಧ್ಯೆ ಘರ್ಷಣೆ ನಡೆಯಿತು.

    ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಫೈರಿಂಗ್ ಮಾಡಿದ್ರು. ಘಟನೆಯಲ್ಲಿ ಕನ್ನಯ್ಯಲಾಲ್ ಪಾಟಿದಾರ್ ಹಾಗೂ ಬನ್‍ಶೀ ಪಾಟೀದಾರ್ ಅನ್ನೋರು ಸೇರಿ ಐವರು ರೈತರು ಬಲಿಯಾಗಿದ್ದಾರೆ. ಕೆಲವರು ಗಾಯಗೊಂಡಿದ್ದಾರೆ.

    ಮಂಡ್‍ಸೌರ್‍ನಲ್ಲಿ ನಿಷೇಧಾಜ್ಞೆ ಜಾರಿಯಾಗಿದ್ದು, ವದಂತಿ ಹರಡದಂತೆ ಕೆಲ ಪ್ರದೇಶಗಳ್ಲಿ ಇಂಟರ್‍ನೆಟ್ ಸೇವೆ ರದ್ದು ಮಾಡಲಾಗಿದೆ. ಘಟನೆ ಬಗ್ಗೆ ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ.

    ಗೋಲಿಬಾರ್ ಖಂಡಿಸಿ ಬುಧವಾರ ಮಧ್ಯಪ್ರದೇಶ ಬಂದ್‍ಗೆ ಕಿಸಾನ್ ಮಜ್ದೂರ್ ಸಂಘ ಕರೆ ನೀಡಿದೆ. ಆದ್ರೆ ರೈತರ ಎಲ್ಲಾ ಬೇಡಿಕೆ ಈಡೇರಿಕೆ ಸರ್ಕಾರ ಕ್ರಮಕೈಗೊಂಡಿದೆ. ನಮ್ಮದು ರೈತ ಸರ್ಕಾರ ಅಂತ ಸಿಎಂ ಶಿವರಾಜ್ ಚೌವ್ಹಾಣ್ ಹೇಳಿದ್ದಾರೆ.

    ಪೊಲೀಸರು ಶೂಟ್ ಮಾಡಿಲ್ಲ ಸಮಾಜಘಾತುಕರು ಈ ಕೃತ್ಯ ಎಸಗಿದ್ದಾರೆ ಅಂತ ಗೃಹ ಸಚಿವ ಭೂಪೇಂದ್ರ ಸಿಂಗ್ ಹೇಳಿದ್ರೆ, ಉಜ್ಜೈನಿ ಎಸಿ ಓಂ ಝಾ ಮಾತ್ರ ಪೊಲೀಸರೇ ಶೂಟ್ ಮಾಡಿದ್ರಿಂದ ರೈತರು ಸಾವನ್ನಪ್ಪಿದ್ದಾರೆ ಅಂತ ಹೇಳಿರೋದು ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ.

    ಮೃತ ರೈತರ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಲಾಗುವುದು ಎಂದು ಸರ್ಕಾರ ಹೇಳಿದೆ. ಈ ಮಧ್ಯೆ, ದೇಶದ ರೈತರ ಜೊತೆ ಕೇಂದ್ರ ಸರ್ಕಾರ ಯುದ್ಧ ಮಾಡ್ತಿದೆ. ರೈತರು ಹಕ್ಕುಗಳನ್ನ ಕೇಳಿದ್ರೆ ಬುಲೆಟ್ ಪ್ರಯೋಗಿಸೋದು ಬಿಜೆಪಿಯ `ನವಭಾರತ’ ಅಂತ ರಾಹುಲ್ ಗಾಂಧಿ ಟೀಕಿಸಿದ್ದಾರೆ.