Tag: ನಿಷೇಧಾಜ್ಞೆ

  • ಶುಕ್ರವಾರ ಮಂಗ್ಳೂರು, ಮಡಿಕೇರಿಯಲ್ಲಿ ನಿಷೇಧಾಜ್ಞೆ

    ಶುಕ್ರವಾರ ಮಂಗ್ಳೂರು, ಮಡಿಕೇರಿಯಲ್ಲಿ ನಿಷೇಧಾಜ್ಞೆ

    ಮಂಗಳೂರು/ಮಡಿಕೇರಿ: ಡಿಸೆಂಬರ್ 6 ಎಂದಾಕ್ಷಣ ಅಂದು ಕರಾಳ ದಿನ, ವಿಜಯೋತ್ಸವದ ದಿನ ಎಂದು ಈ ಹಿಂದೆಲ್ಲಾ ಆಚರಣೆ ಮಾಡುತ್ತಿದ್ದರು. ಆದರೆ ಈ ವರ್ಷ ಈಗಾಗಲೇ ಅಯೋಧ್ಯೆ ವಿವಾದಕ್ಕೆ ತೆರೆ ಬಿದ್ದಿದೆ.

    ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂ ಅನುಮತಿ ನೀಡಿದ್ದು, ಈ ತೀರ್ಪುನ್ನು ದೇಶದ ಜನ ಸ್ವಾಗತಿಸಿದ್ದು, ಎಲ್ಲರೂ ಶಾಂತಿಯುತವಾಗಿ ಕೋರ್ಟ್ ಆದೇಶಕ್ಕೆ ಗೌರವ ಕೊಟ್ಟಿದ್ದಾರೆ. ಆದರೂ ಡಿಸೆಂಬರ್ 6 ಬಾಬ್ರಿ ಮಸೀದಿಯನ್ನು ಕೆಡವಿದ ದಿನವಾಗಿರುವುದರಿಂದ ಶುಕ್ರವಾರ ರಾಜ್ಯದ ಸೂಕ್ಷ್ಮ ನಗರವಾದ ಮಂಗಳೂರಿನಲ್ಲಿ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆಯನ್ನು ಪೊಲೀಸ್ ಕಮೀಷನರ್ ಹೊರಡಿಸಿದ್ದಾರೆ.

    ಡಿಸೆಂಬರ್ 6ರ ಮುಂಜಾನೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಂಗಳೂರು ನಗರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಗೆ ಪೊಲೀಸ್ ಕಮೀಷನರ್ ಡಾ.ಪಿ ಎಸ್ ಹರ್ಷ ಆದೇಶಿಸಿದ್ದಾರೆ. ಈ ಸಂದರ್ಭ ವಿಜಯೋತ್ಸವ, ಮೆರವಣಿಗೆ, ಕರಾಳ ದಿನ, ಪ್ರತಿಭಟನೆಗಳನ್ನು ನಡೆಸದಂತೆ ಆದೇಶಿಸಿದ್ದಾರೆ. ನಗರದ ಜನತೆ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಬೇಕು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ ಎಸ್ ಹರ್ಷ ವಿನಂತಿಸಿಕೊಂಡಿದ್ದಾರೆ.

    ಇತ್ತ ಮಡಿಕೇರಿ ಜಿಲ್ಲೆಯಾದ್ಯಂತ ಸೆಕ್ಷನ್ 144 ನಿಷೇಧಾಜ್ಞೆ ಜಾರಿಗೊಳಿಸಿ ಎಂದು ಜಿಲ್ಲಾಧಿಕಾರಿ ಅನೀಸ್ ಕೆ.ಜಾಯ್ ಆದೇಶ ಹೊರಡಿಸಿದ್ದಾರೆ. ಕೊಡಗು ಮೊದಲೇ ಮತೀಯವಾಗಿ ಸೂಕ್ಷ್ಮ ಜಿಲ್ಲೆಯಾದ್ದರಿಂದ ಡಿಸೆಂಬರ್ 6 ರಂದು ಬಾಬ್ರಿ ಮಸೀದಿ ದ್ವಂಸದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಎರಡೂ ಕೋಮಿನ ಸದಸ್ಯರು ಕರಾಳ ದಿನ ಹಾಗೂ ವಿಜಯೋತ್ಸವ ಆಚರಿಸದಂತೆ ಕೊಡಗು ಎಸ್ಪಿ ಡಾ.ಸುಮನ್ ಡಿ ಪನ್ನೇಕರ್ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

  • ನಾಳೆಯಿಂದ ಬೆಂಗ್ಳೂರು ವ್ಯಾಪ್ತಿಯ 4 ಕ್ಷೇತ್ರಗಳಲ್ಲಿ ನಿಷೇಧಾಜ್ಞೆ ಜಾರಿ

    ನಾಳೆಯಿಂದ ಬೆಂಗ್ಳೂರು ವ್ಯಾಪ್ತಿಯ 4 ಕ್ಷೇತ್ರಗಳಲ್ಲಿ ನಿಷೇಧಾಜ್ಞೆ ಜಾರಿ

    ಬೆಂಗಳೂರು: ಉಪಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಸೋಮವಾರರಿಂದ ಬೆಂಗಳೂರು ವ್ಯಾಪ್ತಿಯ ನಾಲ್ಕು ಕ್ಷೇತ್ರಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

    ಸೋಮವಾರ ಬೆಂಗಳೂರು ನಗರದ ಕೆಆರ್ ಪುರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಶಿವಾಜಿನಗರ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಹೀಗಾಗಿ ನಾಮಪತ್ರ ಸಲ್ಲಿಕೆಯಾಗಲಿರುವ ಚುನಾವಣಾ ಕಚೇರಿ ಸುತ್ತಮುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ.

    ಸೋಮವಾರ ಬೆಳಗ್ಗೆ 10 ಗಂಟೆಯಿಂದ ನವೆಂಬರ್ 18ರ ಸಂಜೆ 4 ಗಂಟೆಯವರೆಗೆ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದೆ. ಅಷ್ಟೇ ಅಲ್ಲದೇ ಉಪಚುನಾವಣೆಯಲ್ಲಿ ಮೆರವಣಿಗೆ, ಸಂಭ್ರಮಾಚರಣೆ, ಪ್ರತಿಭಟನೆ, ಗುಂಪು ಸೇರುವುದು ಮತ್ತು ಆಯುಧಗಳನ್ನ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.

    ಕಚೇರಿ ಎಲ್ಲಿದೆ?
    ಕೆಆರ್ ಪುರ – ಹಳೇ ಮದ್ರಾಸ್ ರಸ್ತೆಯಲ್ಲಿರುವ ಕಂದಾಯ ಇಲಾಖೆಯೆ ಕಚೇರಿ
    ಯಶವಂತಪುರ – ಕೆಂಗೇರಿ ಉಪನಗರದಲ್ಲಿರುವ ಕರ್ನಾಟಕ ಬ್ಯಾಂಕ್ ಕಟ್ಟಡದ ಎರಡನೇ ಮಹಡಿ
    ಮಹಾಲಕ್ಷ್ಮಿ ಲೇಔಟ್ – ರಾಜಾಜಿನಗರ ಆರ್‌ಟಿಒ ಕಚೇರಿ ಸಂಕೀರ್ಣ
    ಶಿವಾಜಿನಗರ – ಮತದಾರರ ನೋಂದಣಾಧಿಕಾರಿಗಳ ಕಚೇರಿ, ಕ್ವೀನ್ಸ್ ರಸ್ತೆ

  • ಯಾದಗಿರಿ ನಗರದಲ್ಲಿ ಸೆಕ್ಷನ್ 144 ಜಾರಿ- ಪ್ರತಿಭಟನೆಗೆ ಕೈಜೋಡಿಸಲಿರುವ ಮಾಜಿ ಪ್ರಧಾನಿ ಎಚ್‍ಡಿಡಿ

    ಯಾದಗಿರಿ ನಗರದಲ್ಲಿ ಸೆಕ್ಷನ್ 144 ಜಾರಿ- ಪ್ರತಿಭಟನೆಗೆ ಕೈಜೋಡಿಸಲಿರುವ ಮಾಜಿ ಪ್ರಧಾನಿ ಎಚ್‍ಡಿಡಿ

    ಯಾದಗಿರಿ: ನಗರ ಪಿಎಸ್‍ಐ ಬಾಪುಗೌಡರನ್ನು ಅಮಾನತು ಮಾಡುವಂತೆ, ಕಳೆದ ಎರಡು ದಿನಗಳ ಜೆಡಿಎಸ್ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆ ಈಗ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕಾರ್ಯಕರ್ತರ ಹೋರಾಟಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಬುಧವಾರ ಕೈಜೋಡಿಸಲಿದ್ದಾರೆ.

    ಯಾದಗಿರಿ ನಗರ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಯಲಿದ್ದು, ಆದರೆ ಭದ್ರತಾ ದೃಷ್ಟಿಯಿಂದ ದೇವೇಗೌಡರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ಸೂಕ್ತವಲ್ಲ ಎಂದು ಜಿಲ್ಲಾಡಳಿತ ಮನವಿ ಮಾಡಿದೆ. ಜಿಲ್ಲಾಡಳಿತ ಮನವಿಗೆ ಸೊಪ್ಪು ಹಾಕದ ದೇವೇಗೌಡರು ಪ್ರತಿಭಟನೆಯಲ್ಲಿ ಭಾಗವಹಿಸುವುದು ಶತಸಿದ್ಧ ಎಂದು ಕಾರ್ಯಕರ್ತರ ಮುಖಾಂತರ ಜಿಲ್ಲಾಡಳಿತಕ್ಕೆ ಸಂದೇಶ ಕಳುಹಿಸಿದ್ದಾರೆ.

    ರೈಲಿನ ಮುಖಾಂತರ ಬುಧವಾರ ಬೆಳಿಗ್ಗೆ 6:40ಕ್ಕೆ ಯಾದಗಿರಿಗೆ ಆಗಮಿಸಲಿರುವ ದೇವೇಗೌಡರು, ಕೆಲ ಹೊತ್ತು ಸರ್ಕಿಟ್ ಹೌಸ್ ನಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. ಬಳಿಕ ಅಪಾರ ಜೆಡಿಎಸ್ ಕಾರ್ಯಕರ್ತರೊಂದಿಗೆ ನಗರ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಲಿದ್ದಾರೆ. ಇನ್ನೂ ನಾಳೆ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಿ 144 ಸೆಕ್ಷನ್ (ನಿಷೇಧಾಜ್ಞೆ) ಜಾರಿ ಮಾಡಿದ್ದಾರೆ.

    ಎಚ್‍ಡಿಡಿ ಹೇಳಿದ್ದೇನು?:  ಸಿಎಂ ಬಿಎಸ್‍ವೈ ಅವರ ಕಾರಿಗೆ ತಡೆಯೊಡ್ಡಿ ಪ್ರತಿಭಟನೆ ನಡೆಸಿದ ಯಾದಗಿರಿ ಪಕ್ಷದ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿ ಹಿಂಸೆ ನೀಡಲಾಗುತ್ತಿದೆ. ಸಿಎಂ ಕುಮಾರಸ್ವಾಮಿ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ನೀಡಿದ ಅನುದಾನವನ್ನು ಕಡಿತ ಮಾಡಿದ್ದ ಪರಿಣಾಮ ಕಾರ್ಯಕರ್ತರು ಸಿಎಂ ಅವರನ್ನು ಪ್ರಶ್ನೆ ಮಾಡಲು ತೆರಳಿದ್ದರು. ಈ ವೇಳೆ ಸಿಎಂ ಅವರ ಕಾರನ್ನು ತಡೆದಿದ್ದಾರೆ. ಈ ಕಾರಣಕ್ಕೆ ಪ್ರಕರಣ ದಾಖಲಿಸಿ ಅವರಿಗೆ ಕಾರ್ಯಕರ್ತರಿಗೆ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಆದ್ದರಿಂದ ಕಾರ್ಯರ್ಕತರಿಗೆ ಧೈರ್ಯ ಹೇಳುವ ಸಾಲುವಾಗಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇನೆ ಎಂದು ಬೆಂಗಳೂರಿನಲ್ಲಿ ಎಚ್‍ಡಿ ದೇವೇಗೌಡ ಅವರು ಹೇಳಿದರು.

  • ಶ್ರೀರಂಗಪಟ್ಟಣದ ಅಕ್ರಮ ಗಣಿಗಾರಿಕೆ ಪ್ರದೇಶದಲ್ಲಿ 1 ತಿಂಗಳು ನಿಷೇಧಾಜ್ಞೆ ಜಾರಿ

    ಶ್ರೀರಂಗಪಟ್ಟಣದ ಅಕ್ರಮ ಗಣಿಗಾರಿಕೆ ಪ್ರದೇಶದಲ್ಲಿ 1 ತಿಂಗಳು ನಿಷೇಧಾಜ್ಞೆ ಜಾರಿ

    ಮಂಡ್ಯ: ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಿಷೇಧಕ್ಕೆ ಮತ್ತೊಂದು ಹೆಜ್ಜೆ ಮುಂದಿಟ್ಟ ಜಿಲ್ಲಾಡಳಿತಕ್ಕೆ ತಾಲೂಕು ಆಡಳಿತ ಕೂಡ ಸಾಥ್ ನೀಡಿದ್ದು, ಶ್ರೀರಂಗಪಟ್ಟಣ ತಾಲೂಕಿನಲ್ಲೂ ಅಕ್ರಮ ಗಣಿಗಾರಿಕೆಗೆ ಬ್ರೇಕ್ ಬಿದ್ದಿದೆ.

    ಶ್ರೀರಂಗಪಟ್ಟಣ ತಾಲೂಕಿನ ಸುತ್ತಮುತ್ತಲ ಅಕ್ರಮ ಗಣಿಗಾರಿಕೆ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಶ್ರೀರಂಗಪಟ್ಟಣ ತಹಶೀಲ್ದಾರ್ ನಾಗೇಶ್ ಅವರು ನಿಷೇಧಾಜ್ಞೆ ಆದೇಶ ಹೊರಡಿಸಿದ್ದಾರೆ. ಸೆ. 09 ರಿಂದ ಅ. 08ರವರೆಗೆ ಅಂದರೆ ಒಂದು ತಿಂಗಳು ಅಕ್ರಮ ಗಣಿಗಾರಿಕೆ ನಡೆಯುವ ಪ್ರದೇಶದಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಕರಿಘಟ್ಟ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಈ ಅಕ್ರಮವನ್ನು ತಡೆಗಟ್ಟಲು ತಾಲೂಕು ಆಡಳಿತ ಈ ನಿರ್ಧಾರಕ್ಕೆ ಬಂದಿದೆ.

    ಜಕ್ಕನಹಳ್ಳಿ, ಚನ್ನನಕೆರೆ, ಕಾಳೇನಹಳ್ಳಿ, ಗಣಂಗೂರು, ಸಿದ್ದಾಪುರ, ಮುಂಡುಗದೊರೆ, ಹಂಗರಹಳ್ಳಿ, ಗೌಡಹಳ್ಳಿ, ಟಿ.ಎಂ. ಹೊಸೂರು, ಕೋಡಿಶೆಟ್ಟಿಪುರ, ಶ್ರೀರಾಂಪುರ, ನೀಲನಕೊಪ್ಪಲು ಸೇರಿದಂತೆ ಹಲವು ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

    ಈ ಪ್ರದೇಶಗಳಲ್ಲಿ ಹೆಚ್ಚಿನ ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತು. ಇದರಿಂದ ಪರಿಸರ ನಾಶವಾಗುವುದರ ಜೊತೆಗೆ ಸಾರ್ವಜನಿಕರಿಗೂ ಸಾಕಷ್ಟು ತೊಂದರೆ ಆಗುತ್ತಿತ್ತು. ಅಕ್ರಮ ಗಣಿಗಾರಿಕೆಗೆ ಬೇಸತ್ತ ಜನರು ಮತ್ತು ಗಣಿ ಇಲಾಖೆ ಅಧಿಕಾರಿಗಳು ದೂರು ನೀಡಿದ್ದರು. ಆದ್ದರಿಂದ ಇಂತಹ ಅಕ್ರಮ ಗಣಿಗಾರಿಕೆ ನಡೆಯುವ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈಗಾಗಲೇ ಪಾಂಡವಪುರ ತಾಲೂಕಿನಲ್ಲಿ ಜಿಲ್ಲಾಡಳಿತ ಅಕ್ರಮ ಗಣಿಗಾರಿಕೆ ನಿಷೇಧ ಮಾಡಿದೆ.

  • ಜಮ್ಮು ಕಾಶ್ಮೀರದಲ್ಲಿ ಸೂಕ್ಷ್ಮ ಪರಿಸ್ಥಿತಿಯಿದೆ, ಸುಧಾರಿಸಲು ಕೆಲ ಸಮಯ ಬೇಕಿದೆ- ಸುಪ್ರೀಂ

    ಜಮ್ಮು ಕಾಶ್ಮೀರದಲ್ಲಿ ಸೂಕ್ಷ್ಮ ಪರಿಸ್ಥಿತಿಯಿದೆ, ಸುಧಾರಿಸಲು ಕೆಲ ಸಮಯ ಬೇಕಿದೆ- ಸುಪ್ರೀಂ

    ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಪರಿಸ್ಥಿತಿ ತುಂಬಾ ಸೂಕ್ಷ್ಮವಿದೆ. ಒಂದು ರಾತ್ರಿಯ ಒಳಗಡೆ ಪರಿಸ್ಥಿತಿ ಬದಲಾಗಲು ಸಾಧ್ಯವಿಲ್ಲ. ಸರ್ಕಾರವನ್ನು ಅವಲಂಬಿಸಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

    ಸಾಮಾಜಿಕ ಕಾಯಕರ್ತ ತೆಹ್ಸಿನ್ ಪೂನವಲ್ಲಾ ಅವರು ಜಮ್ಮು ಕಾಶ್ಮೀರದಲ್ಲಿ ನಾಯಕರನ್ನು ಗೃಹ ಬಂಧನದಲ್ಲಿ ಇಡಲಾಗಿದೆ. ಅಷ್ಟೇ ಅಲ್ಲದೇ ಅನಿರ್ಧಿಷ್ಟವಧಿಗೆ ನಿಷೇಧಾಜ್ಞೆ ಜಾರಿಯಾಗಿದೆ. ಗೃಹ ಬಂಧನದಲ್ಲಿರುವ ನಾಯಕರನ್ನು ಬಿಡುಗಡೆಗೊಳಿಸಿ ನಿಷೇಧಾಜ್ಞೆಯನ್ನು ತೆರವುಗೊಳಿಸುವಂತೆ ಮನವಿ ಮಾಡಿ ಅರ್ಜಿ ಸಲ್ಲಿಸಿದರು.

    ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಅರುಣ್ ಮಿಶ್ರಾ, ಎಂಆರ್ ಶಾ, ಅಜಯ್ ರಸ್ತೋಗಿ ಅವರಿದ್ದ ತ್ರಿ ಸದಸ್ಯ ಪೀಠ ಪರಿಸ್ಥಿತಿ ಸರಿಯಾಗಲು ಕೆಲ ಸಮಯ ಬೇಕು ಎಂದು ಅಭಿಪ್ರಾಯಪಟ್ಟು ವಿಚಾರಣೆಯನ್ನು ಎರಡು ವಾರ ಮುಂದಕ್ಕೆ ಹಾಕಿತು.

    ಎಷ್ಟು ದಿನಗಳ ಕಾಲ ನಿಷೇಧಾಜ್ಞೆ ಮುಂದುವರಿಯುತ್ತದೆ ಎಂದು ಕೋರ್ಟ್ ಕೇಳಿದ ಪ್ರಶ್ನೆಗೆ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್, ಕೇಂದ್ರ ಸರ್ಕಾರ ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ. ನಿಷೇಧಾಜ್ಞೆ ಜಾರಿಯಾದ ಬಳಿಕ ಭದ್ರತಾ ಸಿಬ್ಬಂದಿಯಿಂದ ಒಂದೇ ಒಂದು ಸಾವು ಸಂಭವಿಸಿಲ್ಲ. 2016 ರಲ್ಲಿ ಕಾಣಿವೆ ರಾಜ್ಯದಲ್ಲಿ ಶಾಂತಿ ನೆಲೆಸಲು 3 ತಿಂಗಳು ಸಮಯ ಹಿಡಿದಿತ್ತು. ಈ ಸಂದರ್ಭದಲ್ಲಿ 47 ಮಂದಿ ಮೃತಪಟ್ಟಿದ್ದರು. ಈಗ ಹಂತ ಹಂತವಾಗಿ ಪರಿಸ್ಥಿತಿ ಸುಧಾರಣೆಯಾಗುತ್ತದೆ ಎಂದು ಉತ್ತರಿಸಿದರು.

    ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಜಿಲ್ಲಾ ಮ್ಯಾಜಿಸ್ಟ್ರೇಟ್ ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ. ಅಹಿತಹಕರ ಘಟನೆ ನಡೆಯದ ಮಾಹಿತಿಯನ್ನು ಪಡೆದುಕೊಂಡು ಒಂದೊಂದೆ ಜಿಲ್ಲೆಯಲ್ಲಿ ನಿಷೇಧಾಜ್ಞೆಯನ್ನು ಹಿಂತೆಗದುಕೊಳ್ಳಲಾಗುತ್ತಿದೆ ಎನ್ನುವ ವಿಚಾರವನ್ನು ಕೋರ್ಟ್ ಗಮನಕ್ಕೆ ತಂದರು.

    ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲೆ ಮನೇಕಾ ಗುರುಸ್ವಾಮಿ, ಕಾಶ್ಮೀರದ ಎಲ್ಲ ಭಾಗದಲ್ಲಿ ಮೊಬೈಲ್, ಇಂಟರ್‌ನೆಟ್ ಸ್ಥಗಿತಗೊಳಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಇದಕ್ಕೆ ನ್ಯಾ. ಮಿಶ್ರಾ ಅಲ್ಲಿ ಗಂಭೀರವಾದ ಸಮಸ್ಯೆಯಿದೆ. ಒಂದು ವೇಳೆ ತೆರವುಗೊಳಿಸಿದರೆ ಕಾನೂನು ಸುವ್ಯವಸ್ಥೆ ಧಕ್ಕೆ ಬರುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟರು.

    ಈ ಸಂದರ್ಭದಲ್ಲಿ ಆಸ್ಪತ್ರೆ, ಶಾಲೆ ಮತ್ತು ಪೊಲೀಸ್ ಠಾಣೆಗಳನ್ನು ಕಾರ್ಯನಿರ್ವಹಿಸಲು ಅನುಮತಿ ನೀಡಲು ಆದೇಶಿಸಿ ಎಂದು ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು.ಇದಕ್ಕೆ ನ್ಯಾ. ಮಿಶ್ರಾ, ಪರಿಸ್ಥಿತಿಯನ್ನು ಸುಧಾರಿಸಲು ಕೇಂದ್ರಕ್ಕೆ ಕೆಲ ಸಮಯವನ್ನು ನೀಡಬೇಕು ಎಂದು ಹೇಳಿದರು.

    ಕಾಶ್ಮೀರ ಜನತೆಗೆ ಸ್ವಾತಂತ್ರ್ಯ ನೀಡುತ್ತೇವೆ ಎಂದು ಹೇಳುವ ಸರ್ಕಾರ ನಿರ್ಬಂಧ ಹೇರಿದ್ದು ಹೇರಿದ್ದು ಎಷ್ಟು ಸರಿ? ಸಂಪೂರ್ಣವಾಗಿ ನಿರ್ಬಂಧ ಹೇರಿದ್ದು ಸರಿಯಲ್ಲ ಎಂದು ಮನೇಕಾ ಗುರುಸ್ವಾಮಿ ವಾದಿಸಿದರು. ಎರಡು ಕಡೆಯ ವಾದವನ್ನು ಆಲಿಸಿದ ಕೋರ್ಟ್ ವಿಚಾರಣೆಯನ್ನು ಎರಡು ವಾರಗಳ ಮುಂದಕ್ಕೆ ಹಾಕಿತು.

  • ಸಹಜ ಸ್ಥಿತಿಯತ್ತ ಜಮ್ಮು ಕಾಶ್ಮೀರ- ಶಾಲಾ, ಕಾಲೇಜುಗಳು ಪ್ರಾರಂಭ, ನಿಷೇಧಾಜ್ಞೆ ತೆರವು

    ಸಹಜ ಸ್ಥಿತಿಯತ್ತ ಜಮ್ಮು ಕಾಶ್ಮೀರ- ಶಾಲಾ, ಕಾಲೇಜುಗಳು ಪ್ರಾರಂಭ, ನಿಷೇಧಾಜ್ಞೆ ತೆರವು

    ಶ್ರೀನಗರ: ಹಲವು ದಿನಗಳಿಂದ ಸ್ತಬ್ಧವಾಗಿದ್ದ ಜಮ್ಮು-ಕಾಶ್ಮೀರ ಇದೀಗ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಐದು ಜಿಲ್ಲೆಗಳಲ್ಲಿ ನಿಷೇಧಾಜ್ಞೆಯನ್ನು ತೆರವುಗೊಳಿಸಲಾಗಿದೆ. ಉಳಿದೆಡೆಯೂ ನಿರ್ಬಂಧನೆಯನ್ನು ಸಡಿಲಗೊಳಿಸಲಾಗಿದೆ.

    ಜಮ್ಮುವಿನ ಐದು ಜಿಲ್ಲೆಗಳಲ್ಲಿ ನಿಷೇಧಾಜ್ಞೆಯನ್ನು ತೆರವುಗೊಳಿಸಿದ್ದು, ದೋಡಾ ಮತ್ತು ಕಿಶ್ತ್ವಾರ್ ಜಿಲ್ಲೆಗಳಲ್ಲಿ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಹೇರಿದ್ದ ನಿಷಾಧಾಜ್ಞೆಯನ್ನು ತೆರವುಗೊಳಿಸಿದ್ದರಿಂದ ಸ್ಥಗಿತಗೊಂಡಿದ್ದ ಸಾಮಾನ್ಯ ಚಟುವಟಿಕೆಗಳನ್ನು ಪುನರಾರಂಭಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಜಮ್ಮುವಿನ ಐದು ಜಿಲ್ಲೆಗಳ ಎಲ್ಲಾ ಶಾಲಾ-ಕಾಲೇಜುಗಳು ಪುನರಾರಂಭಗೊಂಡಿದ್ದು, ಅಲ್ಲದೆ, ಸರ್ಕಾರಿ ಕಚೇರಿಗಳ ಹಾಜರಾತಿಯಲ್ಲಿಯೂ ಸಹ ಹೆಚ್ಚಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಮ್ಮು, ಕಥುವಾ, ಸಾಂಬಾ, ಉಧಂಪುರ್ ಮತ್ತು ರಿಯಾಸಿಯ ಜಿಲ್ಲೆಗಳಲ್ಲಿ ಎಲ್ಲ ರೀತಿಯ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ. ಅಲ್ಲದೆ, ಎಲ್ಲ ಶಿಕ್ಷಣ ಸಂಸ್ಥೆಗಳು ಮತ್ತೆ ಪುನರಾರಂಭಗೊಂಡಿವೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

    ಆಗಸ್ಟ್ 5ರಂದು ನಿರ್ಬಂಧ ಹೇರಿದ ನಂತರ ಈ ಪ್ರದೇಶದಲ್ಲಿ ಯಾವುದೇ ಅಹಿತಕರ ಘನೆಗಳು ನಡೆದಿಲ್ಲ. ಹೀಗಾಗಿ ಈ ಜಿಲ್ಲೆಗಳು ಸಹಜ ಸ್ಥಿತಿಗೆ ಮರಳುತ್ತಿವೆ. ಎಲ್ಲ ಮಾರುಕಟ್ಟೆ, ಅಂಗಡಿ ಮುಂಗಟ್ಟುಗಳು ತೆರೆದಿವೆ. ಸಂಚಾರವು ಸಹ ಈ ಜಿಲ್ಲೆಗಳಲ್ಲಿ ಎಂದಿನಂತೆ ಸಹಜವಾಗಿದೆ. ಈ ಮೂಲಕ ಈ ಸ್ಥಳಗಳಲ್ಲಿ ಎಲ್ಲ ರೀತಿಯ ನಿರಾಳತೆಯನ್ನು ಜನರಿಗೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದರು.

    ಶುಕ್ರವಾರ ಜಮ್ಮು ಮತ್ತು ಶ್ರೀನಗರದಲ್ಲಿ ಪ್ರಾರ್ಥನೆಯು ಸಹ ಶಾಂತಿಯುತವಾಗಿ ನಡೆಯಿತು. ಆದರೆ ಪೂಂಚ್, ರಾಜೌರಿ ಹಾಗೂ ರಾಂಬಾನ್ ಜಿಲ್ಲೆಗಳಲ್ಲಿ ನಿರ್ಬಂಧಗಳನ್ನು ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಆಧಿಕೃತ ಆದೇಶದ ಪ್ರಕಾರ, ಜಮ್ಮು ಭಾಗದ 10 ಜಿಲ್ಲೆಗಳ ಆಡಳಿತ ಮಂಡಳಿಗಳು ಆಗಸ್ಟ್ 5ರಂದು ಸೆಕ್ಷನ್ 144 ಅಡಿಯಲ್ಲಿ ನಿಷೇಧಾಜ್ಞೆಯನ್ನು ಹೇರಲಾಗಿತ್ತು.

    ಕಿಶ್ತ್ವಾರ್ ಜಿಲ್ಲಾ ಅಭಿವೃದ್ಧಿ ಆಯುಕ್ತ ಅಂಗ್ರೆಜ್ ಸಿಂಗ್ ರಾಣಾ ಮಾತನಾಡಿ, ಸೋಮವಾರ ನಿಸೇಧಾಜ್ಞೆ ಹೇರಿದ ನಂತರ ಮೊದಲ ಬಾರಿಗೆ ಪಟ್ಟಣದ ವಿವಿಧ ಭಾಗಗಳಲ್ಲಿ ಹಂತ ಹಂತವಾಗಿ ಒಂದು ಗಂಟೆಗಳ ಕಾಲ ನಿರ್ಬಂಧಗಳನ್ನು ಸಡಿಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ಭದರ್ವಾ ಪಟ್ಟಣ ಮತ್ತು ದೋಡಾ ಜಿಲ್ಲೆ ಹಾಗೂ ಪಕ್ಕದ ಪ್ರದೇಶಗಳಲ್ಲಿಯೂ ಹಂತ ಹಂತವಾಗಿ ಕಫ್ರ್ಯೂವನ್ನು ಸಡಿಲಿಸಲಾಗುತ್ತಿದೆ. ರಾಂಬಾನ್ ಮತ್ತು ಪೂಂಚ್ ಜಿಲ್ಲೆಗಳು ಕೂಡ ಸಹಜ ಸ್ಥಿತಿಗೆ ಮರಳಿದ್ದು, ಶುಕ್ರವಾರ ಶಾಂತಿಯುತವಾಗಿ ಜನತೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಶಾಂತತೆ ಕಾಪಾಡಲು ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ಕಾಶ್ಮೀರ ವಿಚಾರದಲ್ಲಿ ಸರ್ಕಾರ ತೆಗೆದುಕೊಂಡ ನಿರ್ಧಾರದ ಬಗ್ಗೆ ಮಾತನಾಡುವಾಗ, ಸೋಮವಾರ ನಡೆಯುವ ಈದ್ ಹಬ್ಬದ ಸಂಭ್ರಮಕ್ಕೆ ಸರ್ಕಾರ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದರು. ಹಾಗೆಯೇ 370ನೇ ವಿಧಿಯಿಂದ ಸ್ವಾತಂತ್ರ್ಯ ಸಿಕ್ಕಿರುವುದು ವಾಸ್ತವ. ಆದರೆ ಈ ಹಿನ್ನೆಲೆಯಲ್ಲಿ ತೆಗೆದುಕೊಂಡಿರುವ ಮುನ್ನೆಚ್ಚರಿಕಾ ಕ್ರಮಗಳಿಂದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳಿದ್ದರು.

  • ವಿಧಾನಸೌಧ ಸುತ್ತಮುತ್ತ 2 ದಿನ ನಿಷೇಧಾಜ್ಞೆ ಜಾರಿ

    ವಿಧಾನಸೌಧ ಸುತ್ತಮುತ್ತ 2 ದಿನ ನಿಷೇಧಾಜ್ಞೆ ಜಾರಿ

    ಬೆಂಗಳೂರು: ಕಳೆದ ಮಂಗಳವಾರದಂದು ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಇದೀಗ ಮತ್ತೆ ವಿಧಾನಸೌಧ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

    ಸೋಮವಾರ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ವಿಶ್ವಾಸ ಮತಯಾಚನೆ ಮಾಡುವ ಹಿನ್ನೆಲೆಯಲ್ಲಿ ವಿಧಾನಸೌಧ ಸುತ್ತ-ಮುತ್ತ ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಆದೇಶ ಹೊರಡಿಸಿದ್ದಾರೆ.

    ಸೋಮವಾರ ಬೆಳಗ್ಗೆ 6 ಗಂಟೆಯಿಂದ ಮಂಗಳವಾರ ಮಧ್ಯಾಹ್ನ 12 ಗಂಟೆವರೆಗೂ ನಿಷೇಧಾಜ್ಞೆ ಮುಂದುವರಿಯಲಿದೆ. ಸೆಕ್ಷನ್ 144 ಸೆಕ್ಷನ್ ಅಡಿಯಲ್ಲಿ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿಷೇಧಾಜ್ಞೆ ಜಾರಿಯಾಗಿದೆ.

    ಮಂಗಳವಾರದಂದು ಪಕ್ಷೇತರ ಶಾಸಕರಾದ ಆರ್.ಶಂಕರ್ ಮತ್ತು ಹೆಚ್.ನಾಗೇಶ್ ನಗರದ ರೇಸ್‍ಕೋರ್ಸ್ ರಸ್ತೆಯಲ್ಲಿರುವ ನಿತೇಶ್ ಅಪಾರ್ಟ್‍ಮೆಂಟ್ ನಲ್ಲಿರುವ ವಿಷಯ ತಿಳಿಯುತ್ತಿದ್ದಂತೆ ಇಬ್ಬರಿಗಾಗಿ ನಡುರಸ್ತೆಯಲ್ಲಿ ಸಂಜೆ ಭಾರೀ ಹೈಡ್ರಾಮವೇ ನಡೆದಿತ್ತು. ಈ ಹಿನ್ನೆಲೆಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಮಂಗಳವಾರ ಸಂಜೆ 6 ಗಂಟೆಯಿಂದ ಗುರುವಾರ ಸಂಜೆ 6 ಗಂಟೆಯವರೆಗೆ ನಿಷೇಧಾಜ್ಞೆ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ನಗರದ ಎಲ್ಲ ಬಾರ್, ಪಬ್ ಬಂದ್ ಆಗಿರುತ್ತದೆ ಎಂದು ತಿಳಿಸಿದ್ದರು. ಆದರೆ ಬುಧವಾರ ಮಧ್ಯಾಹ್ನ ನಿಷೇಧಾಜ್ಞೆಯನ್ನು ವಾಪಸ್ ತೆಗೆದುಕೊಳ್ಳಲಾಗಿತ್ತು.

  • ಬಿಹಾರದಲ್ಲಿ ರಣಬಿಸಿಲಿಗೆ 117 ಬಲಿ- ಗಯಾದಲ್ಲಿ ಸೆಕ್ಷನ್ 144 ಜಾರಿ

    ಬಿಹಾರದಲ್ಲಿ ರಣಬಿಸಿಲಿಗೆ 117 ಬಲಿ- ಗಯಾದಲ್ಲಿ ಸೆಕ್ಷನ್ 144 ಜಾರಿ

    ಪಾಟ್ನಾ: ಬಿಹಾರ ರಾಜ್ಯದಲ್ಲಿ ರೌದ್ರಾವತಾರ ತೋರುತ್ತಿರುವ ರಣಬಿಸಿಲ ತಾಪಕ್ಕೆ ಬಲಿಯಾದವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದ್ದು, ಈವರೆಗೆ ಬಿಸಿಲ ಝಳಕ್ಕೆ 117 ಮಂದಿ ಮೃತಪಟ್ಟಿದ್ದಾರೆ.

    ಕಳೆದ 48 ಗಂಟೆಗಳಲ್ಲಿ ಮುಂಗರ್‍ನಲ್ಲಿ ಕನಿಷ್ಠ 5 ಮಂದಿ ಸಾವನ್ನಪ್ಪಿದ್ದು, ಔರಂಗಾಬಾದ್ ನಲ್ಲಿ 60, ಗಯಾದಲ್ಲಿ 35, ನವಾಡಾದಲ್ಲಿ 7, ಕೈಮುರ್ ನಲ್ಲಿ 2, ಅರ್ರಾ, ಸಮಸ್ತಿಪುರ್ ನಲ್ಲಿ ತಲಾ 1 ಮತ್ತು ನಳಂದದಲ್ಲಿ 6 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

    ರಣ ಬಿಸಿಲಿಗೆ ಸಾರ್ವಜನಿಕರು ಮೃತಪಡುತ್ತಿರುವ ಹಿನ್ನೆಲೆಯಲ್ಲಿ ಗಯಾ ಜಿಲ್ಲಾಧಿಕಾರಿ ಅಭಿಷೇಕ್ ಸಿಂಗ್ ಅವರು ಸೋಮವಾರ ಜಿಲ್ಲಾದ್ಯಂತ ಸೆಕ್ಷನ್ 144 ಜಾರಿ ಮಾಡಿದ್ದರು. ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಯಾರೂ ಮನೆಯಿಂದ ಹೊರಗೆ ಬರಬಾರದು ಎಂದು ಪ್ರಕಟಣೆ ಹೊರಡಿಸಿದ್ದರು.

    ಅಲ್ಲದೆ ಪ್ರಕಟಣೆಯಲ್ಲಿ ತಿಳಿಸಿರುವ ಸಮಯದಲ್ಲಿ ಜಿಲ್ಲೆಯಲ್ಲಿ ಯಾವುದೇ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳುವಂತಿಲ್ಲ. ಎಂಎನ್‍ಆರ್‍ಇಜಿಎ ಕಾರ್ಯಕ್ರಮಗಳ ಅಡಿಯಲ್ಲಿ ಬೆಳಗ್ಗೆ 10.30ರ ಬಳಿಕ ಯಾವುದೇ ತೆರೆದ ಸ್ಥಳಗಳಲ್ಲಿ ಕಾರ್ಮಿಕರು ಕೆಲಸ ಮಾಡಿಸುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಅಷ್ಟೇ ಅಲ್ಲದೆ, ಜೂನ್ 22ರವರೆಗೆ ಬಿಹಾರದ ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಈ ಮೂಲಕ ಬಿಸಿಲ ಝಳಕ್ಕೆ ಮೃತಪಡುವವರ ಸಂಖ್ಯೆ ತಗ್ಗಿಸಲು ಸರ್ಕಾರ ಕ್ರಮ ತೆಗೆದುಕೊಂಡಿದೆ.

    ಹಾಗೆಯೇ ಬಿಹಾರದ ಆರೋಗ್ಯ ಸಚಿವ ಮಂಗಲ್ ಪಾಂಡೆ ಅವರು ಗಯಾದ ಅನುಗ್ರಹ ನಾರಾಯಣ ಮಗಧ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೆ ಅವರಿಗೆ ಸರ್ಕಾರದಿಂದ ಅಗತ್ಯ ನೆರವನ್ನು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

    ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಸಿಲ ತಾಪಕ್ಕೆ ಬಲಿಯಾದ ಮೃತರ ಕುಟುಂಬಗಳಿಗೆ ತಲಾ ನಾಲ್ಕು ಲಕ್ಷ ರೂ.ಗಳ ಪರಿಹಾರ ಧನವನ್ನು ಘೋಷಿಸಿದ್ದಾರೆ. ಅಲ್ಲದೆ ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಪ್ರತಿಕ್ರಿಯಿಸಿ, ಜನರು ಬಿಸಿಲಿಗೆ ಹೋಗುವುದಕ್ಕಿಂತ ನೆರಳು ಇರುವ ಪ್ರದೇಶದಲ್ಲಿ ಇರುವುದು ಸೂಕ್ತ. ಅತಿಯಾದ ಬಿಸಿಲ ತಾಪಕ್ಕೆ ಮನುಷ್ಯನ ಆರೋಗ್ಯದಲ್ಲಿ ಏರುಪೇರು ಆಗುತ್ತದೆ. ಮೆದುಳು ಸಂಬಂಧಿ ರೋಗಗಳು ಬರುತ್ತವೆ ಎಂದು ಹೇಳಿದ್ದಾರೆ.

  • ವಯಾಗ್ರಾಕ್ಕಾಗಿ ಎರಡು ಗ್ರಾಮಗಳ ಕಿತ್ತಾಟ- ಹಿಮಾಲಯದ ಪರ್ವತದಲ್ಲಿ ನಿಷೇಧಾಜ್ಞೆ

    ವಯಾಗ್ರಾಕ್ಕಾಗಿ ಎರಡು ಗ್ರಾಮಗಳ ಕಿತ್ತಾಟ- ಹಿಮಾಲಯದ ಪರ್ವತದಲ್ಲಿ ನಿಷೇಧಾಜ್ಞೆ

    ಡೆಹ್ರಾಡೂನ್: ಅತ್ಯಮೂಲ್ಯ ನೈಸರ್ಗಿಕವಾಗಿ ದೊರೆಯುವ ‘ಕೀಡಾ ಜಾಡಿ’ ಅಥವಾ ಹಿಮಾಲಯನ್ ವಯಾಗ್ರಾಕ್ಕಾಗಿ ಉತ್ತರಾಖಂಡದ ಎರಡು ಗ್ರಾಮಗಳ ಜನರು ಕಿತ್ತಾಡಿದ್ದು ನಿಷೇಧಾಜ್ಞೆ ಜಾರಿಯಾಗಿದೆ.

    ನೈಸರ್ಗಿಕ ವಯಾಗ್ರಾ ಸಂಗ್ರಹಿಸುವ ವಿಚಾರವಾಗಿ ಪಿತೋರ್‍ಗಢ ಜಿಲ್ಲೆಯ ಬುಯಿ ಮತ್ತು ಪಾಟೋ ಗ್ರಾಮಗಳ ಜನರು ಜಗಳ ಮಾಡಿಕೊಂಡಿದ್ದಾರೆ. ವಯಾಗ್ರಾ ಬೆಳೆಯುವ ಪ್ರದೇಶ ನಮಗೆ ಸೇರಿದ್ದು ಎಂದು ಎರಡೂ ಗ್ರಾಮದವರು ಶಸ್ತ್ರಾಸ್ತ್ರ ಹಿಡಿದು ನಿಂತಿದ್ದಾರೆ.

    ಕಿತ್ತಾಟ ಯಾಕೆ?
    ಪಿತೋರ್‌ಗಢ ಜಿಲ್ಲೆಯ ಹಿಮಾಲಯ ಪ್ರದೇಶ ರಾಲಂ ಮತ್ತು ರಾಜರಾಂಘ ಬಗ್ಯಾಲ್ಸ್ ಹುಲ್ಲುಗಾವಲಿನಲ್ಲಿ ವಯಾಗ್ರಾ ಬೆಳೆಯುತ್ತಿದೆ. ಪರ್ವತದ ಎತ್ತರದಲ್ಲಿ ಬೆಳೆಯುವ ವಯಾಗ್ರಾವನ್ನು ಧಾರ್ಚುಲಾ ಮತ್ತು ಮುನ್ಸಿಯರಿ ಜನರು ಸಂಗ್ರಹಿಸುತ್ತಾರೆ. ಕೀಡಾ ಜಾಡಿ ಅಥವಾ ಹಿಮಾಲಯದ ವಯಾಗ್ರಾ ಸಸ್ಯ ಕಾಮೋತ್ತೇಜಕ ಮಾತ್ರೆಗಳ ರೀತಿಯಲ್ಲಿ ಕೆಲಸ ಮಾಡುತ್ತದೆ. ಹೀಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಒಂದು ಕೆಜಿ ‘ಕೀಡಾ ಜಾಡಿ’ಯ ಬೆಲೆ 18 ಲಕ್ಷ ರೂ. ಇದೆ. ಇದು ಬೇಸಿಗೆ ಕಾಲದಲ್ಲಿ ಮಾತ್ರ ಬೆಳೆಯುತ್ತದೆ.

    ಬುಯಿ ಮತ್ತು ಪಾಟೋ ಗ್ರಾಮಗಳ ಜನರು ರಾಲಂ ಹುಲ್ಲುಗಾವಲು ಪ್ರದೇಶ ತಮಗೇ ಸೇರಿದ್ದು ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೆ ವಯಾಗ್ರವನ್ನು ಯಾರೂ ಮುಟ್ಟದಂತೆ ಕಾವಲು ಕಾಯುತ್ತಿದ್ದಾರೆ. ಇದರಿಂದಾಗಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಪರಸ್ಪರ ಒಮ್ಮತದಿಂದ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಜಿಲ್ಲಾಡಳಿತವು ಎರಡೂ ಗ್ರಾಮದ ಜನರಿಗೆ ಸೂಚನೆ ನೀಡಿತ್ತು.

    ಸ್ವತಃ ಜಿಲ್ಲಾಧಿಕಾರಿಗಳು ಎರಡೂ ಗ್ರಾಮಗಳಿಗೆ ಭೇಟಿ ನೀಡಿ, ಗ್ರಾಮಸ್ಥರಿಗೆ ಕಿತ್ತಾಟ ನಿಲ್ಲಿಸುವಂತೆ ಸೂಚನೆ ನೀಡಿದ್ದರು. ಆದರೆ ಗ್ರಾಮಸ್ಥರ ಮಧ್ಯೆ ಸಮಸ್ಯೆ ಇತ್ಯರ್ಥವಾಗದ ಹಿನ್ನಲೆಯಲ್ಲಿ ಹಿಮಾಲಯದ ಗುಡ್ಡಾಗಾಡು ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ವರದಿಯಾಗಿದೆ.

  • ಮೇ 23, 24ರಂದು ಹಾಸನ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ

    ಮೇ 23, 24ರಂದು ಹಾಸನ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ

    – 2 ದಿನ ಮದ್ಯ ಮಾರಾಟಕ್ಕೆ ಬ್ರೇಕ್

    ಹಾಸನ: ಮೇ 23 ಮತ್ತು 24 ರಂದು ಹಾಸನ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಗೊಳಿಸಲು ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಸಿಂಗ್ ರಾಥೋಡ್ ಹೇಳಿದ್ದಾರೆ.

    ಮುಜಾಗೃತ ಕ್ರಮವಾಗಿ ಹಾಸನ ಜಿಲ್ಲೆಯಾದ್ಯಂತ ಮೆ 23 ಹಾಗೂ 24ರಂದು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮತ ಏಣಿಕೆ ಸಮಯದಲ್ಲಿ ಹಾಗೂ ಫಲಿತಾಂಶ ಪ್ರಕಟವಾದ ಬಳಿಕ ಯಾವುದೇ ಅಹಿತಕರ ಘಟನೆಗಳು ನಡೆಯಬಾರದೆಂದು ಈ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ 129 ಗ್ರಾಮಗಳನ್ನ ಸೂಕ್ಷ್ಮ ಪ್ರದೇಶಗಳನ್ನಾಗಿ ಗುರುತಿಸಲಾಗಿದೆ. ಅಲ್ಲದೆ ಈ 2 ದಿನ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ. ಜೊತೆಗೆ ಭದ್ರತೆಗಾಗಿ 1200 ಮಂದಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ಅವರು ತಿಳಿಸಿದರು.

    ಹಾಸನ ಡಿಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಇಂದು ಮತ ಎಣಿಕೆ ಕೇಂದ್ರದ ಸಿದ್ಧತೆಯನ್ನು ವೀಕ್ಷಣೆ ಮಾಡಿದ್ದಾರೆ. ಹಾಸನದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಈ ಬಾರಿ ಮತ ಎಣಿಕೆ ನಡೆಯಲಿದೆ. ಈಗಾಗಲೇ ಸ್ಟ್ರಾಂಗ್ ರೂಮ್‌ನಲ್ಲಿ ಅಭ್ಯರ್ಥಿಗಳ ಹಣೆಬರಹ ಭದ್ರವಾಗಿದೆ.

    ಅಷ್ಟೇ ಅಲ್ಲದೇ ಹಿಂದೆಂದೂ ಇರದ ನಿರ್ಬಂಧಗಳನ್ನು ಮಾಧ್ಯಮದವರ ಮೇಲೆ ಹೇರಲಾಗಿದೆ. ಮತ ಎಣಿಕೆ ಕೇಂದ್ರಗಳ ಬಳಿ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಹಾಗೆಯೇ ಮತ ಎಣಿಕೆ ಕೇಂದ್ರಗಳಿಗೆ ಅಧಿಕಾರಿಗಳ ಜೊತೆ ಮಾತ್ರ ಮಾಧ್ಯಮದವರಿಗೆ ಹೋಗಲು ಅವಕಾಶ ನೀಡಲಾಗುತ್ತದೆ. ಆದರೆ ಪದೇ ಪದೇ ಮತ ಎಣಿಕೆ ಕೇಂದ್ರಕ್ಕೆ ಮಾಧ್ಯಮ ಪ್ರತಿನಿಧಿಗಳು ಪ್ರವೇಶಿಸುವಂತಿಲ್ಲ ಎಂದು ಅಧಿಕಾರಿಗಳಿಗೆ ಡಿಸಿ ಸೂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.