Tag: ನಿಷೇಧಾಜ್ಞೆ

  • ರಾಜ್ಯಾದ್ಯಂತ ಇಂದೂ ನಿಷೇಧಾಜ್ಞೆ – ಬಹುತೇಕ ಕರ್ನಾಟಕ ಶಾಂತ

    ರಾಜ್ಯಾದ್ಯಂತ ಇಂದೂ ನಿಷೇಧಾಜ್ಞೆ – ಬಹುತೇಕ ಕರ್ನಾಟಕ ಶಾಂತ

    ಬೆಂಗಳೂರು: ಪೌರತ್ವ ಕಾಯ್ದೆ ವಿರೋಧಿಸಿ ಎರಡು ದಿನಗಳಿಂದ ಒಂದು ರೀತಿಯಲ್ಲಿ ಪ್ರಕ್ಷುಬ್ಧವಾಗಿದ್ದ ಕರ್ನಾಟಕ ಶಾಂತವಾಗಿದೆ.

    ಬೆಂಗಳೂರು, ಕಲಬುರಗಿ ಸೇರಿದಂತೆ ಎಲ್ಲಾ ಕಡೆ ಸಹಜ ಜೀವನ ಇದೆ. ಈ ಹಿಂದೆ ಹೇಳಿರುವಂತೆ ಮೂರನೇ ದಿನವಾದ ಇಂದು ಕೂಡ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನಿಷೇಧಾಜ್ಞೆ ಮುಂದುವರಿದಿದೆ.

    ಶುಕ್ರವಾರ ನಿಷೇಧಾಜ್ಞೆ, ಬಿಗಿ ಭದ್ರತೆ ನಡುವೆಯೂ ಟೌನ್‍ಹಾಲ್‍ನಲ್ಲಿ ಮಹ್ಮದ್ ಮತ್ತು ಎಲ್ಡೋ ಎಂಬ ಪ್ರತಿಭಟನಾಕಾರರು ಪ್ರತ್ಯೇಕವಾಗಿ ಪ್ರತಿಭಟನೆಗೆ ಮುಂದಾದ್ರು. ಆದರೆ ಪೊಲೀಸರು ಅವರಿಗೆ ಬುದ್ಧಿ ಹೇಳಿ ವಾಪಸ್ ಕಳಿಸಿದರು. ಸಂಜೆ ಸೆಂಟ್ರಲ್ ಕಾಲೇಜ್ ಕ್ಯಾಂಪಸ್‍ನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ರು. ಉಳಿದಂತೆ ಬೆಂಗಳೂರಿನಲ್ಲಿ ಯಾವುದೇ ಪ್ರತಿಭಟನೆ ನಡೆಯಲಿಲ್ಲ.

    ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಅಂಟಿಕೊಂಡಿರುವ ಚಿಕ್ಕಮಗಳೂರಿನ ಕೆಲವೆಡೆ ಇಂಟgರ್ನೆಟ್ ಬಂದ್ ಮಾಡಲಾಗಿದೆ. ರಾಜ್ಯದಲ್ಲಿ ನಿಷೇಧಾಜ್ಞೆ ಹೇರಿಕೆ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ, ಸದ್ಯ ಪೊಲೀಸರು ವಿಧಿಸಿರುವ ನಿಷೇಧಾಜ್ಞೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ.

    ಪ್ರತಿಭಟನೆ ನಡೆಸಲು ಬಯಸುವ ಸಂಘಟನೆಗಳು ಇಂದು ಹೊಸದಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಮೂರು ದಿನಗಳ ಒಳಗೆ ತೀರ್ಮಾನ ಮಾಡಬೇಕು ಎಂದು ಪೊಲೀಸರಿಗೆ ನಿರ್ದೇಶನ ನೀಡಿ ಮಧ್ಯಂತರ ಆದೇಶ ಹೊರಡಿಸಿದೆ. ಜನವರಿ 7ಕ್ಕೆ ಮುಂದಿನ ವಿಚಾರಣೆ ನಡೆಯಲಿದೆ.

  • ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ- ಮೂರನೇ ದಿನವೂ ಮುಂದುವರಿದ ನಿಷೇಧಾಜ್ಞೆ

    ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ- ಮೂರನೇ ದಿನವೂ ಮುಂದುವರಿದ ನಿಷೇಧಾಜ್ಞೆ

    ಬೆಂಗಳೂರು: ನಗರದಾದ್ಯಂತ ಇಂದು ಸಹ ನಿಷೇಧಾಜ್ಞೆ ಜಾರಿಯಲ್ಲಿದ್ದು ಪೌರತ್ವ ಕಾಯ್ದೆ ವಿರೋಧಿಸಿ ಮತ್ತು ಪರವಾಗಿ ಯಾವುದೇ ಪ್ರತಿಭಟನೆ ಹಾಗೂ ಮೆರವಣಿಗೆ ಮಾಡದಂತೆ ಪೊಲೀಸರು ನಿಷೇಧಾಜ್ಞೆಯನ್ನು ಹೊರಡಿಸಿದ್ದಾರೆ. ಗುರುವಾರ ಮತ್ತು ಶುಕ್ರವಾರ ನಗರದಲ್ಲಿ ನಿಷೇಧಾಜ್ಞೆ ಇದ್ದರೂ ಹಲವಾರು ಮಂದಿ ಪ್ರತಿಭಟನೆ ಮಾಡಲು ಮುಂದಾಗಿದ್ದರು.

    ನಗರದಲ್ಲಿ ಇಂದು ಸಹ ಕೆಲವರು ಪ್ರತಿಭಟನೆ ನಡೆಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಭದ್ರತೆಯನ್ನು ಹೆಚ್ಚಳ ಮಾಡಿಕೊಂಡಿದ್ದಾರೆ. ಪೊಲೀಸರ ಜೊತೆಗೆ ಕೆಎಸ್‍ಆರ್ ಪಿ ಹಾಗೂ ಸಿಎಆರ್ ತುಕಡಿಗಳ ನಿಯೋಜನೆ ಮಾಡಿಕೊಂಡಿರುವ ಪೊಲೀಸ್ ಇಲಾಖೆ ರಾಜಧಾನಿಯಲ್ಲಿ ಯಾವುದೇ ಪ್ರತಿಭಟನೆ ಹಾಗೂ ಮೆರವಣಿಗೆ ಆಗದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.

    ಇಂದು ಬೆಂಗಳೂರು ಎಂದಿನಂತೆ ಸಹಜ ಸ್ಥಿತಿಯಲ್ಲಿದೆ. 10 ಗಂಟೆಯ ಬಳಕ ಪ್ರತಿಭಟನೆ ಆಗುವ ಸಾಧ್ಯತೆಗಳಿವೆ. ಶಿವಾಜಿನಗರದಲ್ಲಿ ಒಂದು ಕೆಎಸ್‍ಆರ್ ಪಿ ತುಕಡಿ ನಿಯೋಜನೆ ಮಾಡಿದ್ದು ಯಾವುದೇ ಪ್ರತಿಭಟನೆಯಾಗದಂತೆ ಮುಂಜಾಗ್ರತ ಕ್ರಮ ಕೈಗೊಂಡಿದ್ದಾರೆ. ಶುಕ್ರವಾರ ಶಿವಾಜಿನಗರದ ಗಲ್ಲಿ ಗಲ್ಲಿಯಲ್ಲಿ ಪೊಲೀಸರು ಪೇರಡ್ ಮಾಡಿ ಜನರು ಆತಂಕ ಪಡುವ ಆಗತ್ಯವಿಲ್ಲ ಜೊತೆಗೆ ಪ್ರತಿಭಟನೆ ಮಾಡಬಾರದು ಎಂದು ತಿಳಿಸಿದ್ದಾರೆ.

  • ನಿಷೇಧಾಜ್ಞೆ ಜಾರಿಯಿಂದಾಗಿ ಪಿಎಸ್‍ಐ ನೇಮಕಾತಿ ಮುಂದೂಡಿಕೆ

    ನಿಷೇಧಾಜ್ಞೆ ಜಾರಿಯಿಂದಾಗಿ ಪಿಎಸ್‍ಐ ನೇಮಕಾತಿ ಮುಂದೂಡಿಕೆ

    ಹುಬ್ಬಳ್ಳಿ: ಪೌರತ್ವ ಕಾಯ್ದೆ ಜಾರಿ ವಿಚಾರವಾಗಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿಯಾಗಿದೆ. ಆದ್ದರಿಂದ ಪಿಎಸ್‍ಐ ನೇಮಕಾತಿಯನ್ನು ಮುಂದೂಡಲಾಗಿದೆ ಎಂದು ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.

    ಡಿಸೆಂಬರ್ 20ರಿಂದ 24ರವರೆಗೆ ಪಿಎಸ್‍ಐ ಹುದ್ದೆಗಳಿಗೆ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳ ಸಹಿಷ್ಣುತೆ ಮತ್ತು ದೇಹದಾರ್ಢ್ಯತೆ ಪರೀಕ್ಷೆ ನಡೆಯಬೇಕಾಗಿತ್ತು. ಆದರೆ ನಿಷೇಧಾಜ್ಞೆ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಯುತ್ತಿರುವುದರಿಂದ ಪಿಎಸ್‍ಐ ನೇಮಕಾತಿಯನ್ನು ಮುಂದೂಡಲಾಗಿದೆ.

    ಡಿಸೆಂಬರ್ 26ರಿಂದ ಜನವರಿ 17ರವರೆಗೆ ಪಿಎಸ್‍ಐ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದೆಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ದಿಲೀಪ್ ತಿಳಿಸಿದ್ದಾರೆ.

  • ಕುಂದಾನಗರಿಯಲ್ಲಿ ನಿಷೇಧಾಜ್ಞೆ – ಕಲ್ಲು ತೂರಾಟ ಮಾಡಿದ ಮೂವರು ಅರೆಸ್ಟ್

    ಕುಂದಾನಗರಿಯಲ್ಲಿ ನಿಷೇಧಾಜ್ಞೆ – ಕಲ್ಲು ತೂರಾಟ ಮಾಡಿದ ಮೂವರು ಅರೆಸ್ಟ್

    ಬೆಳಗಾವಿ: ನಗರದಲ್ಲಿ ಯಾವುದೇ ಪ್ರತಿಭಟನೆಗಳು ನಡೆಯಲಿ ಏಕಾಏಕಿ ಕಲ್ಲು ತೂರಾಟಗಳು ನಡೆದು ನಂತರ ನಾಲ್ಕೈದು ದಿನಗಳು ಖಾಕಿ ನಿದ್ದೆಗೆಟ್ಟು ಕಿಡಿಗೇಡಿಗಳನ್ನು ಬಂಧಿಸುವ ಕಾರ್ಯದಲ್ಲಿ ತೊಡಗುತ್ತಿತ್ತು. ಆದರೆ ಪೌರತ್ವ ವಿರೋಧಿಸಿ ಕೆಲ ಸಂಘಟನೆಗಳು ಬೆಳಗಾವಿ ನಗರಲ್ಲಿ ಪ್ರತಿಭಟನೆ ಹಾಗೂ ರಸ್ತೆ ತಡೆ ನಡೆಸಿದ್ದವು. ಇದನ್ನೇ ಬಂಡವಾಳವಾಗಿಸಿಕೊಂಡ ಕೆಲ ಯುವಕರ ಗುಂಪು ಕಲ್ಲು ತೂರಾಟ ನಡೆಸಿ ನಗರ ಸಂಚಾರಿ ಬಸ್‍ಗಳನ್ನು ಜಖಂಗೊಳಿಸಿದ್ದಾರೆ.

    ಈ ಬಾರಿ ಬೆಳಗಾವಿ ನಗರ ಪೋಲಿಸರ ಕಣ್ಗಾವಲು ಪಡೆ ಕೆಲ ಆಯಾಕಟ್ಟಿನ ಸ್ಥಳಗಳಲ್ಲಿ ಗುಪ್ತವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದರು. ಅಹಿತಕರ ಘಟನೆ ನಡೆಯುತ್ತಿದ್ದಂತೆ ಸಿಸಿಟಿವಿಯ ಹದ್ದಿನ ಕಣ್ಣಿನಲ್ಲಿ ಕೆಲ ದೃಶ್ಯಗಳು ಸೆರೆಯಾಗಿದ್ದವು. ಈ ದೃಶ್ಯಗಳನ್ನೇ ಸ್ಟಿಲ್ ಮಾಡಿ ನೋಡಿ, ಕಲ್ಲು ತೂರಾಟದಲ್ಲಿ ಭಾಗಿಯಾಗಿದ್ದ ವಾಸಿಂ ಮೊಕಾಶಿ, ಮೊಹ್ಮದತಾಹಿರ್ ಹಾಗೂ ಅಮಾನುಲ್ಲಾನನ್ನು ಪೊಲೀಸರು ಬಂಧಿಸಿದ್ದಾರೆ.

    ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧ ಪ್ರತಿಭಟನೆ ಹಿನ್ನೆಲೆ ಬೆಳಗಾವಿ ನಗರ ಮತ್ತು ಬೆಳಗಾವಿ ಉತ್ತರ ವಲಯ ಐಜಿಪಿ ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಹಲವರಿಗೆ ಇದರ ಬಿಸಿ ತಟ್ಟಿದೆ.

    ಪೋಲಿಸರಿಗೂ ತಟ್ಟಿದ ಬಿಸಿ:
    ಪೌರತ್ವ ನಿಷೇಧ ಕಾಯ್ದೆ ವಿಚಾರವಾಗಿ ಉತ್ತರ ವಲಯ ಐಜಿಪಿ ನಿಷೇಧಾಜ್ಞೆ ಜಾರಿಗೊಳಿಸುತ್ತಿದ್ದಂತೆ ಬೆಳಗಾವಿ ನಗರದಲ್ಲಿ ನಡೆಯುತ್ತಿದ್ದ ಪೊಲೀಸ್ ಕ್ರೀಡಾಕೂಡ ದಿಢೀರ್ ರದ್ದಾಗಿದೆ. ಒಂದು ವರ್ಷದಿಂದ ತಯಾರಿ ನಡೆಸಿದ್ದ ಇಲಾಖೆಯ ಕ್ರೀಡಾಪಟುಗಳಿಗೆ ಇದರಿಂದ ಭಾರೀ ನಿರಾಸೆಯುಂಟಾಗಿದೆ.

    ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಸ್ಪರ್ಧೆಗಳನ್ನು ಮೊಟಕುಗೊಳಿಸಿ, ತಕ್ಷಣ ತುರ್ತು ಕರ್ತವ್ಯಕ್ಕೆ ಹಾಜರಾಗಿ ಎಂದು ಎಸ್‍ಪಿ ಅವರು ಬೆಳಗಾವಿ ಮೈದಾನದಲ್ಲಿ ಘೋಷಿಸುತ್ತಿದ್ದಂತೆ ವಾಲಿಬಾಲ್, ಕಬಡ್ಡಿ, ರನ್ನಿಂಗ್ ರೇಸ್, ಉದ್ದ ಜಿಗಿತ, ಎತ್ತರ ಜಿಗಿತ ಎಲ್ಲಾ ಸ್ಫರ್ಧೆಗಳು ನಿಂತಿವೆ.

    ಪ್ರತಿಭಟನಾನಿರತ ರೈತರು ರಾತ್ರೋರಾತ್ರಿ ಖಾಲಿ:
    ಬೆಳಗಾವಿ ಜಿಲ್ಲೆ ರಾಮದುರ್ಗ ತಹಸಿಲ್ದಾರ್ ಕಚೇರಿ ಎದುರು ರೈತರು, ನಿರಾಶ್ರೀತರು ಕಳೆದ ಎರಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಪೌರತ್ತ ತಿದ್ದುಪಡಿ ಕಾಯ್ದೆ ಕುರಿತು ರಾಜ್ಯ ಮತ್ತು ರಾಷ್ಟ್ರದಾದ್ಯಂತ ವಾತಾವರಣ ಚೆನ್ನಾಗಿಲ್ಲ. ಈಗಾಗಲೇ ಸೆಕ್ಷನ್ 144 ಜಾರಿಯಾಗಿದೆ ಎಂದು ಪೊಲೀಸರು ಪ್ರತಿಭಟನಾನಿರತ ರೈತರಿಗೆ ಹೇಳಿದರು. ಇದನ್ನು ನಂಬದ ರೈತರು ಕೆಲ ಗಂಟೆಗಳ ಕಾಲ ಈ ಕುರಿತು ಚರ್ಚೆ, ವಿಮರ್ಶೆ ನಡೆಸಿ ಕಡೆಗೆ ಮಧ್ಯರಾತ್ರಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದಿದ್ದಾರೆ. ಮೂರು ದಿನಗಳಿಂದ ರೈತರ ಪ್ರತಿಭಟನೆಯಿಂದ ಕಂಗಾಲಾಗಿದ್ದ ರಾಮದುರ್ಗ ತಹಸಿಲ್ದಾರ್ ಅವರಿಗೆ ಈ ನಿಷೆದಾಜ್ಞೆ ವರವಾಗಿ ಪರಿಣಮಿಸಿದೆ.

    ಕಂಡಲ್ಲಿ ಗುಂಡು:
    ಪ್ರತಿಭಟನೆ ಹೆಸರಿನಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಹಾನಿ ಮಾಡುವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಬಸ್, ರೈಲು ಬೋಗಿಗಳಿಗೆ ಬೆಂಕಿ ಹಚ್ಚಿದವರನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲಬೇಕು ಎಂದು ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ಸುರೇಶ ಅಂಗಡಿ ಪುನರುಚ್ಚರಿಸಿದ್ದಾರೆ. ಬುಧವಾರ ಘಟಪ್ರಭಾ ರೈಲು ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಈ ಬಗ್ಗೆ ಸಚಿವರು ಪ್ರತಿಕ್ರಿಯಿಸಿದ್ದರು.

  • ನಿಷೇಧಾಜ್ಞೆ ಮಧ್ಯೆಯೂ ಪ್ರತಿಭಟನೆ- ವಿವಿಧ ಸಂಘಟನೆಗಳ ಮುಖಂಡರ ಬಂಧನ

    ನಿಷೇಧಾಜ್ಞೆ ಮಧ್ಯೆಯೂ ಪ್ರತಿಭಟನೆ- ವಿವಿಧ ಸಂಘಟನೆಗಳ ಮುಖಂಡರ ಬಂಧನ

    ಹುಬ್ಬಳ್ಳಿ: ಪೌರತ್ವ ಕಾಯ್ದೆ ವಿರೋಧಿಸಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿವಿಧ ಸಂಘಟನೆಗಳ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ.

    ನಿಷೇಧಾಜ್ಞೆ ಮಧ್ಯೆಯೂ ಅಂಬೇಡ್ಕರ್ ವೃತ್ತದಲ್ಲಿ ಸೇರಿದ ವಿವಿಧ ಸಂಘಟನೆಗಳ ಸುಮಾರು 10-15 ಜನ ಮುಖಂಡರಿಗೆ ಪ್ರತಿಭಟನೆ ನಡೆಸದಂತೆ ಪೊಲೀಸರು ಎಚ್ಚರಿಕೆ ನೀಡಿದ್ದರು. ಆದರೂ ಪೊಲೀಸರ ಮಾತು ಕೇಳದೆ ಪ್ರತಿಭಟನೆಗೆ ಮುಂದಾದ ಮುಖಂಡರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

    ನಿಷೇಧಾಜ್ಞೆ ಮಧ್ಯೆಯೂ ಪ್ರತಿಭಟನೆಗೆ ಮುಂದಾದ ಪ್ರತಿಭಟನಾಕಾರರನ್ನು ತಕ್ಷಣ ಪೊಲೀಸರು ಬಂಧಿಸಿದರು. ಸಿದ್ದು ತೇಜಿ, ರಾಜಶೇಖರ ಮೆಣಸಿನಕಾಯಿ, ಅನ್ವರ ಮುಧೋಳ, ಬಾಬಾಜಾನ ಮುಧೋಳ, ವಿಜಯ ಗುಂಟ್ರಾಳ, ಮಹೇಶ ಪತ್ತಾರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

  • ಗದಗದಲ್ಲಿ ನಿಷೇಧಾಜ್ಞೆ- ಎಲ್ಲಾ ಪ್ರತಿಭಟನೆಗಳಿಗೂ ಬ್ರೇಕ್

    ಗದಗದಲ್ಲಿ ನಿಷೇಧಾಜ್ಞೆ- ಎಲ್ಲಾ ಪ್ರತಿಭಟನೆಗಳಿಗೂ ಬ್ರೇಕ್

    ಗದಗ: ಜಿಲ್ಲೆಯಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡಲು 3 ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಿ ಗದಗ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಆದೇಶ ಹೊರಡಿಸಿದ್ದಾರೆ.

    ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು 144 ಸೆಕ್ಷನ್ ಜಾರಿ ಹಿನ್ನಲೆ ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಸರ್ಕಾರ ತಡೆಯಾಜ್ಞೆ ವಿರೋಧಿಸಿ ಪ್ರತಿಭಟನೆಗೆ ಮುಂದಾದ ಸಂಘಟನೆಗಳ ಪ್ರತಿಭಟನೆಗೂ ಬ್ರೇಕ್ ಬಿದ್ದಿದೆ. ಮದುವೆ, ಧಾರ್ಮಿಕ ಕಾರ್ಯ, ಶವ ಸಂಸ್ಕಾರ ಕಾರ್ಯಗಳನ್ನು ಹೊರತುಪಡಿಸಿ ಈ ಅವಧಿಯಲ್ಲಿ ಐದಕ್ಕಿಂತ ಹೆಚ್ಚು ಜನರು ಗುಂಪಾಗಿ ಓಡಾಡುವಂತಿಲ್ಲ. ಜೊತೆಗೆ ಮಾರಕಾಸ್ತ್ರಗಳನ್ನ ಕೊಂಡೊಯ್ಯುವುದು, ಯಾವುದೇ ಜೀವಂತ ವ್ಯಕ್ತಿಯ ಭಾವಚಿತ್ರ ಮೆರವಣಿಗೆ ಮತ್ತು ಪ್ರತಿಭಟನೆ ಮಾಡುವುದನ್ನು ನಿಷೇಧಿಸಲಾಗಿದೆ. ಹಾಗೆಯೇ ಸಾರ್ವಜನಿಕ ಶಾಂತಿಗೆ ಭಂಗ ತರುವ ಮಾತು, ಹಾಡು, ಅಣಕ, ವಾದ್ಯ ಬಾರಿಸುವುದು ಮುಂತಾದವುಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ಜಿಲ್ಲೆಯಲ್ಲಿ ಎಲ್ಲೆಡೆ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಆದರೆ ಬಸ್ ಸಂಚಾರ, ವ್ಯಾಪಾರ-ವಹಿವಾಟು, ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ. ಬುಧವಾರ ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಸರ್ಕಾರ ಪರಿಸರ ಮತ್ತು ಅರಣ್ಯ ಇಲಾಖೆ ತಡೆಯಾಜ್ಞೆ ನೀಡಿತ್ತು. ಈ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಕೆಲ ಸಂಘಗಳು ಮುಂದಾಗಿದ್ದವು. ಆದರೆ ನಿಷೇಧಾಜ್ಞೆ ಜಾರಿ ಹಿನ್ನೆಲೆ ಆ ಪ್ರತಿಭಟನೆಗೂ ಬ್ರೇಕ್ ಬಿದ್ದಿದೆ, ಸಂಘಟನೆಗಳು ಪ್ರತಿಭಟನೆ ಹಿಂಪಡೆದುಕೊಂಡಿದ್ದಾರೆ.

  • ಹಾವೇರಿ ಜಿಲ್ಲೆಯಲ್ಲಿ ಮೂರು ದಿನಗಳ ಕಾಲ 144 ಸೆಕ್ಷನ್ ಜಾರಿ

    ಹಾವೇರಿ ಜಿಲ್ಲೆಯಲ್ಲಿ ಮೂರು ದಿನಗಳ ಕಾಲ 144 ಸೆಕ್ಷನ್ ಜಾರಿ

    ಹಾವೇರಿ: ಪೌರತ್ವ ಕಾಯ್ದೆ ವಿರೋಧಿಸಿ ರಾಜ್ಯಾದ್ಯಾಂತ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಮುಂಜಾಗ್ರತ ಕ್ರಮವಾಗಿ ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.

    ನಿಷೇಧಾಜ್ಞೆ ಜಾರಿಯಾಗಿದ್ದರೂ ಜಿಲ್ಲೆಯಲ್ಲಿ ಸಹಜ ಸ್ಥಿತಿಯಿದೆ. ಎಂದಿನಂತೆ ವ್ಯಾಪರ-ವಹಿವಾಟು, ಬಸ್ ಸಂಚಾರ ಪ್ರಾರಂಭವಾಗಿವೆ. ಅಲ್ಲದೆ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ನಗರದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ತೆ ಮಾಡಲಾಗಿದೆ.

    ಬುಧವಾರ ರಾತ್ರಿಯಿಂದ ಡಿಸೆಂಬರ್ 21ರ ರಾತ್ರಿ 12 ಗಂಟೆಯವರೆಗೆ ನಿಷೇದಾಜ್ಞೆ ಜಾರಿ ಮಾಡಲಾಗಿದೆ. ಈವರೆಗೂ ಯಾವುದೇ ಸಂಘಟನೆಗಳು ಪ್ರತಿಭಟನೆ ಮಾಡೋ ಬಗ್ಗೆ ಮಾಹಿತಿ ನೀಡಿಲ್ಲ. ಅಲ್ಲದೆ ಹಾವೇರಿ ಜಿಲ್ಲೆಯ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ.

  • ವಿಜಯಪುರದಲ್ಲಿ ನಿಷೇಧಾಜ್ಞೆ ಜಾರಿ – ತಾತ್ಕಾಲಿಕವಾಗಿ ರ‍್ಯಾಲಿ ಕೈಬಿಟ್ಟ ಯತ್ನಾಳ್

    ವಿಜಯಪುರದಲ್ಲಿ ನಿಷೇಧಾಜ್ಞೆ ಜಾರಿ – ತಾತ್ಕಾಲಿಕವಾಗಿ ರ‍್ಯಾಲಿ ಕೈಬಿಟ್ಟ ಯತ್ನಾಳ್

    ವಿಜಯಪುರ: ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಗೆ ವಿಜಯಪುರ ಜಿಲ್ಲೆಯಲ್ಲಿ ಭಾರೀ ಪರ ಹಾಗೂ ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿತ್ತು. ಹೀಗಾಗಿ ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಈ ಹಿನ್ನೆಲೆ ಪೌರತ್ವ ತಿದ್ದುಪಡಿ ಕಾಯ್ದೆ ಪರ ರ‍್ಯಾಲಿ ನಡೆಸುವುದನ್ನು ತಾತ್ಕಾಲಿಕವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೈಬಿಟ್ಟಿದ್ದಾರೆ.

    ನಗರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧವಾಗಿ ಕೆಲ ಸಂಘಟನೆಗಳು ಬೃಹತ್ ಪ್ರತಿಭಟನೆಯನ್ನು ನಡೆಸಿದ್ದರು. ಈ ಕಾಯ್ದೆಯ ಪರವಾಗಿ ನಗರದಲ್ಲಿ ಶಾಸಕ ಯತ್ನಾಳ್ ನೇತೃತ್ವದಲ್ಲಿ ಬೃಹತ್ ರ‍್ಯಾಲಿ ಕೂಡ ನಡೆಸಲು ನಿರ್ಧರಿಸಲಾಗಿತ್ತು. ಇನ್ನು ಇದರ ಬಗ್ಗೆ ಪೂರ್ವ ಭಾವಿ ಸಭೆ ಕೂಡ ನಡೆಸಲಾಗಿತ್ತು.

    ಆದರೆ ಇಂದು ಬೆಳಗ್ಗೆ 6 ಗಂಟೆಯಿಂದ 21ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ಆದೇಶ ಹೊರಡಿಸಿದ್ದಾರೆ. ಇದರ ಹಿನ್ನೆಲೆ ಯತ್ನಾಳ್ ನಡೆಸಲು ಇಚ್ಛಿಸಿದ್ದ ಕಾಯ್ದೆ ಪರ ರ‍್ಯಾಲಿಯನ್ನ ತಾತ್ಕಾಲಿಕವಾಗಿ ಕೈ ಬಿಡಲಾಗಿದೆ.

    ಎಂದಿನಂತೆ ಜಿಲ್ಲೆಯಾದ್ಯಂತ ಜನಜೀವನ ಮುಂದುವರಿದಿದ್ದು, ಅಹಿತಕರ ಘಟನೆ ನಡೆಯದಂತೆ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

  • ಸೂಕ್ಷ್ಮ ಜಿಲ್ಲೆ ಕೊಡಗಿನಲ್ಲಿ ನಿಷೇಧಾಜ್ಞೆ ಜಾರಿ

    ಸೂಕ್ಷ್ಮ ಜಿಲ್ಲೆ ಕೊಡಗಿನಲ್ಲಿ ನಿಷೇಧಾಜ್ಞೆ ಜಾರಿ

    ಮಡಿಕೇರಿ: ಸಿಎಎ(ಪೌರತ್ವ ತಿದ್ದುಪಡಿ ಕಾಯ್ದೆ) ಮತ್ತು ಎನ್​ಆರ್​ಸಿ (ರಾಷ್ಟ್ರೀಯ ನಾಗರಿಕ ನೊಂದಣಿ) ಕಾಯ್ದೆ ವಿರೋಧ ಹಿನ್ನೆಲೆಯಲ್ಲಿ ಇಂದಿನಿಂದ 2 ದಿನಗಳು ಜಿಲ್ಲೆಯಲ್ಲಿ ಸೆಕ್ಷನ್ 144 ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಡಳಿತ ಆದೇಶ ನೀಡಿದೆ.

    ಕೊಡಗು ಮತೀಯವಾಗಿ ಅತೀ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಇಂದಿನಿಂದ 21ರ ಮಧ್ಯರಾತ್ರಿವರೆಗೆ ಕೊಡಗಿನಲ್ಲಿ ನಿಷೇಧಾಜ್ಞೆ ಹೊರಡಿಸುವಂತೆ ಕೊಡಗು ಎಸ್ಪಿ ಸುಮನ್ ಡಿ ಪನ್ನೇಕರ್ ಜಿಲ್ಲಾಧಿಕಾರಿಗೆ ಅನೀಸ್ ಕಣ್ಮಣಿ ಜಾಯ್ ಅವರಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಮನವಿ ಪುರಸ್ಕರಿಸಿ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.

    ಸಾರ್ವಜನಿಕ ಶಾಂತಿ, ನೆಮ್ಮದಿಗೆ ಭಂಗ ತರದಂತೆ ಕ್ರಮ ಕೈಗೊಳ್ಳಲಾಗಿದ್ದು, ಎಸ್‍ಪಿ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಪ್ರತಿಭಟನೆ, ಮೆರವಣಿಗೆ ಹಾಗೂ ದಿಕ್ಕಾರ ಕೂಗುವ ಕಾರ್ಯಕ್ರಮ ನಡೆಸುವಂತಿಲ್ಲ. ಐದಕ್ಕಿಂತ ಹೆಚ್ಚು ಜನರು ಒಂದೆಡೆ ಗುಂಪು ಗೂಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ಆದೇಶ ಉಲ್ಲಂಘಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಡಿಸಿ ಅವರು ಎಚ್ಚರಿಕೆ ಕೂಡ ನೀಡಿದ್ದಾರೆ. ಸದ್ಯ ಮಡಿಕೇರಿಯಲ್ಲಿ ಬೆಳಗ್ಗೆಯಿಂದಲೂ ಸಹಜ ಸ್ಥಿತಿಯಿದ್ದು, ಎಂದಿನಂತೆ ಸಾರ್ವಜನಿಕ ಚಟುವಟಿಕೆ ಆರಂಭವಾಗಿದೆ. ಶಾಲಾ ಕಾಲೇಜು ಕಡೆಗೆ ವಿದ್ಯಾರ್ಥಿಗಳು ತೆರೆಳುತ್ತಿದ್ದಾರೆ.

  • ಪೌರತ್ವ ಕಾಯ್ದೆ – ಮೈಸೂರಿನಲ್ಲಿ ಪ್ರತಿಭಟನೆ ನಡೆಸದಂತೆ ನಿಷೇಧಾಜ್ಞೆ

    ಪೌರತ್ವ ಕಾಯ್ದೆ – ಮೈಸೂರಿನಲ್ಲಿ ಪ್ರತಿಭಟನೆ ನಡೆಸದಂತೆ ನಿಷೇಧಾಜ್ಞೆ

    ಮೈಸೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮೈಸೂರಿನಲ್ಲಿ ಯಾರೂ ಪ್ರತಿಭಟನೆ ನಡೆಸುವಂತಿಲ್ಲ. ಇಂತಹದೊಂದು ಆದೇಶವನ್ನು ಮೈಸೂರು ಪೊಲೀಸ್ ಕಮಿಷನರ್ ಜಾರಿ ಮಾಡಿದ್ದಾರೆ.

    ಇವತ್ತು ಮೈಸೂರಿನಲ್ಲಿ ಪೌರತ್ವ ಮಸೂದೆ ವಿರೋಧಿಸಿ ಕೆಲ ಸಂಘಟನೆ ಗಳು ಪ್ರತಿಭಟನೆ ಆಯೋಜಿಸಿತ್ತು. ಈ ಪ್ರತಿಭಟನೆಗಳಿಗೆ ನಗರ ಪೊಲೀಸ್ ಆಯುಕ್ತರು ಅನುಮತಿ ನಿರಾಕರಿಸಿದ್ದರು. ಆದರೂ, ಕೆಲ ಸಂಘಟನೆಗಳು ಅನುಮತಿ ಇಲ್ಲದೆ ಪ್ರತಿಭಟನೆ ಮಾಡಲು ಮುಂದಾಗಿದ್ದವು. ಈ ಕಾರಣ ಈ ನಿಷೇಧ ಆದೇಶವನ್ನು ನಗರ ಪೊಲೀಸ್ ಆಯುಕ್ತರು ಜಾರಿ ಮಾಡಿದ್ದಾರೆ.

    ಕಾನೂನು ಸುವ್ಯವಸ್ಥೆ ಹದಗೆಡುತ್ತದೆ ಎಂಬ ಕಾರಣದಿಂದ ಪ್ರತಿಭಟನೆ ನಡೆಸದಂತೆ ಮೈಸೂರು ಪೊಲೀಸ್ ಕಮಿಷನರ್ ಕೆ.ಟಿ.ಬಾಲಕೃಷ್ಣ ಆದೇಶಿಸಿದ್ದಾರೆ. ಮೈಸೂರಿನ ಗಾಂಧಿ ಚೌಕ, ಮಹಾವೀರ್ ವೃತ್ತ, ಎ.ವಿ.ರಸ್ತೆ ,ಅಶೋಕ ರಸ್ತೆ ಮತ್ತು ಪುರಭವನದ ಸುತ್ತಮುತ್ತ 500 ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಾಗಿದ್ದು ಬೈಕ್ ರ‍್ಯಾಲಿ, ಪ್ರತಿಭಟನೆ ನಡೆಸದಂತೆ ಆದೇಶಿಸಲಾಗಿದೆ. ಇಂದು ಮಧ್ಯರಾತ್ರಿ 12 ಗಂಟೆ ವರೆಗೆ ಈ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.