Tag: ನಿಷೇಧಾಜ್ಞೆ

  • ಹೊಸ ವರ್ಷದ ಸಂಭ್ರಮ ಕಸಿದ ಕೋವಿಡ್ ಹೆಮ್ಮಾರಿ- ಬೆಂಗ್ಳೂರಿನ ಪ್ರಮುಖ ರಸ್ತೆಗಳೆಲ್ಲವೂ ನಿರ್ಜನ

    ಹೊಸ ವರ್ಷದ ಸಂಭ್ರಮ ಕಸಿದ ಕೋವಿಡ್ ಹೆಮ್ಮಾರಿ- ಬೆಂಗ್ಳೂರಿನ ಪ್ರಮುಖ ರಸ್ತೆಗಳೆಲ್ಲವೂ ನಿರ್ಜನ

    – ಮೈಸೂರು, ಮಡಿಕೇರಿಯಲ್ಲಿ ಪ್ರವಾಸಿಗರ ದಂಡು

    ಬೆಂಗಳೂರು: ಇಡೀ ಜಗತ್ತಿನಲ್ಲಿ ಕೊರೊನಾ ಸುನಾಮಿ ಎದ್ದಿದೆ. ಈ ವರ್ಷವೂ ಹೊಸ ವರ್ಷದ ಸಂಭ್ರಮಾಚರಣೆಗೆ ಕೊರೋನಾ ಕೊಳ್ಳಿ ಇಟ್ಟಿದೆ. ಎಲ್ಲಿಯೂ ಯಾವುದೇ ಸಂಭ್ರಮಾಚರಣೆಗಳು ಕಾಣುತ್ತಿಲ್ಲ. ರಾಜ್ಯದಲ್ಲಿ ಸತತ 2ನೇ ವರ್ಷವೂ ಸರ್ಕಾರ ಹೊಸ ವರ್ಷಾಚರಣೆಯ ಸಾರ್ವಜನಿಕ ಸಂಭ್ರಮಕ್ಕೆ ನಿರ್ಬಂಧ ವಿಧಿಸಿದೆ.

    ಬೆಂಗಳೂರಲ್ಲಿ ಸಂಜೆ 6 ಗಂಟೆಯಿಂದ ನಾಳೆ ಬೆಳಗ್ಗೆವರೆಗೂ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಪರಿಣಾಮ ಬಣ್ಣಬಣ್ಣದ ದೀಪಗಳಿಂದ ಅಲಂಕೃತಗೊಳ್ತಿದ್ದ, ಡಿಜೆ, ಅಬ್ಬರದ ಕುಣಿತ, ಜನಜಂಗುಳಿ.. ಹೀಗೆ ನಶೆಯ ಲೋಕದಲ್ಲಿ ತೇಲಿ ಹೋಗ್ತಿದ್ದ ಎಂ.ಜಿ.ರೋಡ್, ಬ್ರಿಗೇಡ್ ರೋಡ್, ಚರ್ಚ್‍ಸ್ಟ್ರೀಟ್‍ಗಳು ಬಿಕೋ ಎನ್ನುತ್ತಿವೆ. ಪೊಲೀಸರು ಪ್ರಮುಖ ರಸ್ತೆಗಳಿಗೆ ಬ್ಯಾರಿಕೇಡ್ ಎಳೆದು ಬಂದ್ ಮಾಡಿದ್ದಾರೆ.

    ಎಂ.ಜಿ ರಸ್ತೆ – ಅನಿಲ್ ಕುಂಬ್ಳೆ ಸರ್ಕಲ್ – ಮೆಯೋ ಹಾಲ್‍ವರೆಗೆ ನಿರ್ಜನ ಪ್ರದೇಶವಾಗಿ ಮಾರ್ಪಾಡು ಮಾಡಲಾಗಿದೆ. ರೆಸಿಡೆನ್ಸಿ ರಸ್ತೆ, ಸೇಂಟ್‍ಮಾಕ್ರ್ಸ್ ರೋಡ್, ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್‍ಸ್ಟ್ರೀಟ್ ಸೇರಿದಂತೆ 11 ಕಡೆ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಪಾರ್ಟಿ ಮುಗಿಸಿ ಬರುವ ಹೆಣ್ಣುಮಕ್ಕಳ ರಕ್ಷಣೆಗಾಗಿ 10 ಕಡೆ ಸೇಫ್ಟಿ ಐಲ್ಯಾಂಡ್‍ಗಳನ್ನ ನಿರ್ಮಿಸಲಾಗಿದೆ. ಇದನ್ನೂ ಓದಿ: ಬಂಡೀಪುರ ಸಫಾರಿಗೆ ಪ್ರವಾಸಿಗರ ದಂಡು- ರೆಸಾರ್ಟ್‍ಗಳೆಲ್ಲ ಹೌಸ್ ಫುಲ್

    ಬುಕ್ ಮಾಡಿದವರಿಗಷ್ಟೇ ಪಬ್, ರೆಸ್ಟೋರೆಂಟ್‍ಗಳಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಕೆಲವರು ಮಧ್ಯಾಹ್ನದಿಂದಲೇ ಪಾರ್ಟಿಯಲ್ಲಿ ತೊಡಗಿದ್ರು. ಇನ್ನು ಕೆಲವೇ ಕ್ಷಣಗಳಲ್ಲಿ ಹೋಟೆಲ್, ರೆಸ್ಟೋರೆಂಟ್, ಪಬ್, ಕ್ಲಬ್, ರೆಸಾರ್ಟ್, ಎಲ್ಲಾ ಅಂಗಡಿ-ಮುಂಗಟ್ಟು ಬಂದ್ ಆಗಲಿವೆ. ಪ್ರಮುಖ ರಸ್ತೆಯಲ್ಲಿ ಸಿಸಿಟಿವಿ ಕಣ್ಗಾವಲಿದ್ದು, ಪೊಲೀಸರು ಎಲ್ಲವನ್ನೂ ಮಾನಿಟರ್ ಮಾಡ್ತಿದ್ದಾರೆ. ನಿಯಮ ಉಲ್ಲಂಘಿಸಿದವರ ಮೇಲೆ ಕೇಸ್ ಹಾಕಲಿದ್ದಾರೆ.

    ಇತ್ತ ರಾಜ್ಯದ ಇತರೆ ಜಿಲ್ಲೆಗಳಲ್ಲಿಯೂ ಹೊಸ ವರ್ಷಾಚರಣೆಗೆ ಬ್ರೇಕ್ ಬಿದ್ದಿದೆ. ಚಿಕ್ಕಬಳ್ಳಾಪುರದ ನಂದಿಬೆಟ್ಟ ಜನವರಿ 2ರವರೆಗೆ ಬಂದ್ ಆಗಿದೆ. ಗುಡಿಬಂಡೆಯ ಆವಲಬೆಟ್ಟಕ್ಕೂ ನಿರ್ಬಂಧ ಹೇರಲಾಗಿದೆ. ಸ್ಕಂದಗಿರಿಯಲ್ಲಿ ಚಾರಣಕ್ಕೆ ಮಾತ್ರ ಅವಕಾಶ ಇದೆ. ಕೋಲಾರದ ಕೋಟಿಲಿಂಗೇಶ್ವರ ದೇವಸ್ಥಾನಕ್ಕೆ ಭಕ್ತರು ಬರುವಂತಿಲ್ಲ. ಮಂಡ್ಯದ ಮೇಲುಕೋಟೆ, ಕೆರೆ ತೊಣ್ಣೂರು, ಕುಂತಿಬೆಟ್ಟಕ್ಕೆ ತೆರಳುವುದಕ್ಕೆ ನಾಳೆ ರಾತ್ರಿ 10ವರೆಗೆ ನಿರ್ಬಂಧ ಹೇರಲಾಗಿದೆ. ಉಡುಪಿಯ ಸೇಂಟ್ ಮೇರಿಸ್ ದ್ವೀಪದಲ್ಲಿ ಪ್ರವಾಸಿಗರು ಕಂಡುಬಂದ್ರು.

    ದಕ್ಷಿಣ ಕನ್ನಡದ ಪಣಂಬೂರು, ತಣ್ಣೀರುಬಾವಿ, ಸೋಮೇಶ್ವರ, ಉಳ್ಳಾಲ, ಸುರತ್ಕಲ್ ಸೇರಿ ಎಲ್ಲಾ ಬೀಚ್‍ಗಳು ಸಂಜೆಯವರೆಗೂ ತುಂಬಿ ತುಳುಕ್ತಿದ್ವು. ಸಂಜೆ 7 ಗಂಟೆ ನಂತರ ಎಲ್ಲಾ ಬಂದ್ ಆಯ್ತು. ಉತ್ತರ ಕನ್ನಡದ ಬೀಚ್‍ಗಳಲ್ಲಿ ರಾತ್ರಿ 8 ಗಂಟೆಗೆ ಕಫ್ರ್ಯೂ ಜಾರಿ ಮಾಡಲಾಗಿದೆ. ಹೀಗಾಗಿ ಬಹುತೇಕ ಪ್ರವಾಸಿಗರು ಗೋವಾ ಬೀಚ್ ಕಡೆಗೆ ಮುಖ ಮಾಡಿದ್ರು. ಇನ್ನು, ಮೈಸೂರು ವರ್ಷದ ಕೊನೆಯ ದಿನ ತುಂಬಿ ತುಳುಕ್ತಿತ್ತು. ಅರಮನೆ, ಮೃಗಾಲಯ, ಚಾಮುಂಡಿಬೆಟ್ಟಕ್ಕೆ ಜನಸಾಗರವೇ ಹರಿದು ಬಂದಿತ್ತು. ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳಿಗೆ ದೊಡ್ಡಮಟ್ಟದಲ್ಲಿ ಪ್ರವಾಸಿಗರು ಬಂದಿದ್ದಾರೆ. ತುಮಕೂರಿನ ದೇವರಾಯನದುರ್ಗ, ನಾಮದಚಿಲುಮೆಗೆ ನಾಳೆ ಬೆಳಗ್ಗೆ 5 ಗಂಟೆವರೆಗೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.

  • ನಾಳೆ ಬಾಬರಿ ಮಸೀದಿ ಧ್ವಂಸಗೊಂಡ ದಿನ- ಮಥುರಾದಲ್ಲಿ ನಿಷೇಧಾಜ್ಞೆ ಜಾರಿ

    ನಾಳೆ ಬಾಬರಿ ಮಸೀದಿ ಧ್ವಂಸಗೊಂಡ ದಿನ- ಮಥುರಾದಲ್ಲಿ ನಿಷೇಧಾಜ್ಞೆ ಜಾರಿ

    ಲಕ್ನೋ: ಬಾಬರಿ ಮಸೀದಿ ಧ್ವಂಸಗೊಳಿಸಿದ ದಿನವಾದ ಡಿ.6ರಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ಅಯೋಧ್ಯೆಯಲ್ಲಿ ಮುನ್ನೆಚ್ಚರಿಕೆ ವಹಿಸಲಾಗುತ್ತಿದ್ದು, ಮಥುರಾದಲ್ಲೂ ಭದ್ರತೆ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ಹಿಂದೆ ಕೃಷ್ಣ ಜನ್ಮಭೂಮಿ ಮಥುರಾದಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಬಲಪಂಥೀಯ ಗುಂಪುಗಳಾದ ಅಖಿಲ ಭಾರತ ಹಿಂದೂ ಮಹಾಸಭಾ, ಶ್ರೀಕೃಷ್ಣ ಜನ್ಮಭೂಮಿ ನಿರ್ಮಾಣ ನ್ಯಾಸ್, ನಾರಾಯಣಿ ಸೇನೆ ಮತ್ತು ಶ್ರೀಕೃಷ್ಣ ಮುಕ್ತಿ ದಳಗಳು ಅನುಮತಿ ಕೋರಿದ್ದವು.

    ಅಷ್ಟೆ ಅಲ್ಲದೇ ದೇವರ ನಿಜವಾದ ಜನ್ಮಸ್ಥಳದಲ್ಲಿ ಕೃಷ್ಣನ ವಿಗ್ರಹವನ್ನು ಸ್ಥಾಪಿಸಲು ಅಖಿಲ ಭಾರತ ಹಿಂದೂ ಮಹಾಸಭಾ ಅನುಮತಿ ಕೋರಿತ್ತು. ಆದರೆ ಕೃಷ್ಣನ ಜನ್ಮಸ್ಥಳ ಇಲ್ಲಿನ ಪ್ರಮುಖ ದೇವಾಲಯದ ಸಮೀಪವಿರುವ ಮಸೀದಿಯಲ್ಲಿದೆ ಎಂದು ಹಿಂದೂ ಸಂಘಟನೆಗಳು ವಾದಿಸಿದ್ದವು. ಅದನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ನವನೀತ್ ಸಿಂಗ್ ಚಾಹಲ್ ತೀರಸ್ಕರಿಸಿ, ಶಾಂತಿ ಕದಡುವ ಯಾವುದೇ ಕಾರ್ಯಕ್ರಮಕ್ಕೆ ಅನುಮತಿ ನೀಡುವುದಿಲ್ಲ ಎಂದಿದ್ದರು. ಇದನ್ನೂ ಓದಿ: ಒಂದೇ ದಿನ ಕೋಟಿ ಲಸಿಕೆ ನೀಡಿಕೆ-5ನೇ ಸಲ ದಾಖಲೆ

    ಈ ಹಿನ್ನೆಲೆಯಲ್ಲಿ ಮಥುರಾದಲ್ಲಿ ನಿಷೇಧಾಜ್ಞೆಗಳು ಜಾರಿಗೊಳಿಸಲಾಗಿದೆ. ಜೊತೆಗೆ ಹೆಚ್ಚಿನ ಭದ್ರತೆಗಾಗಿ ಮಥುರಾವನ್ನು ಮೂರು ವಲಯಗಳಾಗಿ ವಿಂಗಡಿಸಲಾಗಿದೆ. ಕತ್ರ ಕೇಶವ ದೇವ್ ದೇವಸ್ಥಾನ ಮತ್ತು ಶಾಹಿ ಈದ್ಗಾ ಪ್ರದೇಶವನ್ನು ಕೆಂಪು ವಲಯ ಎಂದು ಗುರುತಿಸಲಾಗಿದೆ. ಅಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಪ್ರವೇಶ ಕೇಂದ್ರಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಕಾಫಿನಾಡಲ್ಲಿ ಪುನೀತ್ ರಾಜ್‍ಕುಮಾರ್ ಸ್ಮರಣಾರ್ಥ ಅಪ್ಪು ಕಪ್ ಕ್ರಿಕೆಟ್ ಪಂದ್ಯಾವಳಿ

  • ಸಕಲೇಶಪುರ ಪಟ್ಟಣದ ಮೂರು ಕಡೆ ನಿಷೇಧಾಜ್ಞೆ ಜಾರಿ

    ಸಕಲೇಶಪುರ ಪಟ್ಟಣದ ಮೂರು ಕಡೆ ನಿಷೇಧಾಜ್ಞೆ ಜಾರಿ

    ಹಾಸನ: ಗೋಹತ್ಯೆ ಹಾಗೂ ಗೋ ಮಾಂಸ ಮಾರಾಟ ನಿಷೇಧಿಸುವಂತೆ ಒತ್ತಾಯಿಸಿ ವಿಹೆಚ್‍ಪಿ, ಬಜರಂಗದಳದ ಕಾರ್ಯಕರ್ತರಿಂದ ಪ್ರತಿಭಟನೆ ಹಿನ್ನಲೆಯಲ್ಲಿ ಇಂದು ಮಧ್ಯರಾತ್ರಿ 12 ಗಂಟೆಯವರೆಗೆ ಸಕಲೇಶಪುರ ಪಟ್ಟಣದ ಮೂರು ಕಡೆ ನಿಷೇಧಾಜ್ಞೆ ಜಾರಿಯಾಗಿದೆ.

    ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ಸಂಘಟನೆಯಿಂದ ಕುಶಾಲನಗರ ಚಲೋ ಪ್ರತಿಭಟನೆ ಹಿನ್ನಲೆಯಲ್ಲಿ ಉಪವಿಭಾಗಾಧಿಕಾರಿ ಗಿರೀಶ್ ಆರ್.ನಂದನ್ ನಿಷೇದಾಜ್ಞೆ ಜಾರಿ ಮಾಡಿ ಆದೇಶ ಪ್ರಕಟಿಸಿದ್ದಾರೆ. ಹೀಗಾಗಿ ಸಕಲೇಶಪುರ ಪಟ್ಟಣದ ಕುಶಾಲನಗರ, ಪ್ರೇಮನಗರ ಹಾಗೂ ಅಜಾದ್ ರಸ್ತೆಯಲ್ಲಿ ಇಂದು ನಿಷೇಧಾಜ್ಞೆ ಜಾರಿಯಾಗಿದೆ.

    ಸಕಲೇಶಪುರದಲ್ಲಿ ಗೋ ಹತ್ಯೆ ನಡೆಸಿ ಚರಂಡಿಗಳಲ್ಲಿ ರಕ್ತ, ತ್ಯಾಜ್ಯ ಹರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲು ಅವಕಾಶ ಕೊಡುವಂತೆ ಮನವಿ ಮಾಡಲಾಗಿತ್ತು.

    ಜಿಲ್ಲಾಡಳಿತ ಪ್ರತಿಭಟನೆಗೆ ನಡೆಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದೆ.

  • ಕೊರೊನಾ ಮಹಾಸ್ಫೋಟ- ಮುಂಬೈನಲ್ಲಿ ಮತ್ತೆ ಸೆಕ್ಷನ್ 144 ಜಾರಿ

    ಕೊರೊನಾ ಮಹಾಸ್ಫೋಟ- ಮುಂಬೈನಲ್ಲಿ ಮತ್ತೆ ಸೆಕ್ಷನ್ 144 ಜಾರಿ

    – ಸೆ.30ರ ವರೆಗೂ ನಿಷೇಧಾಜ್ಞೆ ಅನ್ವಯ

    ಮುಂಬೈ: ಮಹಾನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಿಂದಾಗಿ ಪೊಲೀಸರು ನಗರದಲ್ಲಿ ಸಿಆರ್‌ಪಿಸಿ ಸೆಕ್ಷನ್ 144 ಜಾರಿ ಮಾಡಿದ್ದು, ಇಂದು ಮಧ್ಯರಾತ್ರಿಯಿಂದ ನಿಷೇಧಾಜ್ಞೆ ಜಾರಿಗೆ ಬರಲಿದೆ.

    ಸೆ.30ರ ವರೆಗೂ ಸೆಕ್ಷನ್ 144 ಜಾರಿ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರದೇಶ, ಧಾರ್ಮಿಕ ಸ್ಥಗಳಲ್ಲಿ ಗುಂಪುಗೂಡುವುದನ್ನು ನಿಷೇಧಿಸಲಾಗಿದೆ. ಸದ್ಯ ಮಹಾರಾಷ್ಟ್ರದಲ್ಲಿ 2,97,506 ಕೊರೊನಾ ಪಾಸಿಟಿವ್ ಸಕ್ರಿಯ ಪ್ರಕರಣಗಳಿವೆ.

    ಮುಂಬೈ ಪೊಲೀಸ್ ಉಪ ಆಯುಕ್ತರು ಆದೇಶವನ್ನು ಜಾರಿ ಮಾಡಿದ್ದು, ಮಹಾ ನಗರ ಪಾಲಿಕೆ ಘೋಷಣೆ ಮಾಡಿರುವ ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಸಂಚಾರವನ್ನು ನಿಷೇಧ ಮಾಡಲಾಗಿದೆ. ಸೆಕ್ಷನ್ 144 ಜಾರಿ ಆಗಿರುವುದರಿಂದ ಹೊಸ ಲಾಕ್‍ಡೌನ್ ನಿಯಮಗಳು ಜಾರಿ ಆಗುವುದಿಲ್ಲ. ವಾಡಿಕೆಯಂತೆ ಇದನ್ನು ಜಾರಿ ಮಾಡಲಾಗುತ್ತಿದೆ. ರಾಜ್ಯ ಸರ್ಕಾರದ ಆದೇಶದಂತೆ ಅನ್‍ಲಾಕ್ 4.0 ಮಾರ್ಗಸೂಚಿಗಳು ಮುಂದುವರಿಯುತ್ತಿವೆ ಮುಂಬೈ ಪೊಲೀಸರು ತಿಳಿಸಿದ್ದಾರೆ.

    ಆದರೆ ಈಗಾಗಲೇ ಕಂಟೈನ್ಮೆಂಟ್ ಜಾರಿಯಲ್ಲಿರುವ ನಿರ್ಬಂಧಗಳು ಮುಂದುವರಿಯಲಿದ್ದು, ಅಗತ್ಯ ಚಟುವಟಿಕೆಗಳು, ಅಗತ್ಯ ಆಹಾರಗಳ ಪೂರೈಕೆ ಮತ್ತು ವೈದ್ಯಕೀಯ ಸೇವೆಗಳು ಲಭ್ಯವಿರಲಿದೆ. ಉಳಿದಂತೆ ಕಂಟೈನ್ಮೆಂಟ್ ಹೊರಗಿನ ಪ್ರದೇಶಗಳಲ್ಲಿ ತುರ್ತು ಕರ್ತವ್ಯಗಳು, ಅಗತ್ಯ ಸೇವೆ ಒದಗಿಸುವ ಸಂಸ್ಥೆಗಳು, ದಿನಸಿ ಅಂಗಡಿಗಳು, ಆಸ್ಪತ್ರೆ, ಫಾರ್ಮಾ ಸಂಬಂಧಿತ ಸಂಸ್ಥೆಗಳು, ದೂರವಾಣಿ ಮತ್ತು ಇಂಟರ್ ನೆಟ್ ಸೇವೆ, ವಿದ್ಯುತ್, ಪೆಟ್ರೋಲಿಯಂ, ಬ್ಯಾಂಕಿಂಗ್, ಐಟಿ, ಆಹಾರ ಸರಕು ಸಾಗಾಣೆ ವಾಹನ ಮತ್ತು ಮಾಧ್ಯಮಗಳಿಗೆ ನಿರ್ಬಂಧಗಳಿಂದ ವಿನಾಯಿತಿ ನೀಡಲಾಗಿದೆ.

    ಕೋವಿಡ್ ನಿಯಂತ್ರಣಕ್ಕಾಗಿ ಮಹಾರಾಷ್ಟ್ರದ ಹಲವು ನಗರ ಮತ್ತು ಪಟ್ಟಣಗಳಲ್ಲಿ ಜನರು ಸ್ವಯಂ ಪ್ರೇರಿತ ಜನತಾ ಕಫ್ರ್ಯೂ ಜಾರಿ ಮಾಡುತ್ತಿದ್ದಾರೆ. ನಾಗಪುರದಲ್ಲೂ ವಾರಾಂತ್ಯಗಳಲ್ಲಿ ಜನತಾ ಕಫ್ರ್ಯೂ ವಿಧಿಸಲಾಗಿದೆ. ನಗರದಲ್ಲಿ ಹೆಚ್ಚಾಗುತ್ತಿರುವ ಕೋವಿಡ್ ಪ್ರಕರಣ ಹಾಗೂ ಸಾವುಗಳನ್ನು ಗಮನದಲ್ಲಿಟ್ಟುಕೊಂಡು ಜನ ಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಬೇಡಿಕೆ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ನಾಗ್ಪುರ ಮೇಯರ್ ಸಂದೀಪ್ ಜೋಶಿ ತಿಳಿಸಿದ್ದರು.

    ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 97,894 ಹೊಸ ಪ್ರಕರಣಗಳು ಮತ್ತು 1,132 ಸಾವುಗಳು ಸಂಭವಿಸಿವೆ. ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಗುರುವಾರಕ್ಕೆ 51 ಲಕ್ಷವನ್ನು ದಾಟಿದೆ. ಒಟ್ಟು ಪ್ರಕರಣಗಳ ಸಂಖ್ಯೆ 51,18,253ಕ್ಕೆ ತಲುಪಿದೆ. ಇಲ್ಲಿಯವರೆಗೆ ಒಟ್ಟು 10,09,976 ಸಕ್ರಿಯ ಪ್ರಕರಣಗಳಿದ್ದು, 40,25,080 ಮಂದಿ ಮಾರಣಾಂತಿಕ ವೈರಸ್‍ನಿಂದ ಚೇತರಿಸಿಕೊಂಡಿದ್ದಾರೆ. ಸೋಂಕಿಗೆ ಇದುವರೆಗೂ 83,198 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿಯನ್ನು ಬಿಡುಗಡೆ ಮಾಡಿದೆ.

  • ಬೆಂಗಳೂರು ನಗರದಲ್ಲಿ 144 ಸೆಕ್ಷನ್‌ ಜಾರಿ

    ಬೆಂಗಳೂರು ನಗರದಲ್ಲಿ 144 ಸೆಕ್ಷನ್‌ ಜಾರಿ

    ಬೆಂಗಳೂರು: ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಇಡೀ ಬೆಂಗಳೂರು ಕಮೀಷನರೇಟ್‌ ವ್ಯಾಪ್ತಿಯಲ್ಲಿ 144 ಸೆಕ್ಷನ್‌ ಜಾರಿಯಾಗಿದೆ.

    ಇಂದು ಬೆಳಗ್ಗೆ 6 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಕಮಲ್ ‌ಪಂಥ್‌ ಆದೇಶ ಹೊರಡಿಸಿದ್ದಾರೆ.

    ಯಾವುದಕ್ಕೆ ನಿಷೇಧ:
    – ಯಾವುದೇ ವ್ಯಕ್ತಿ ಸಾರ್ವಜನಿಕರಿಗೆ ಧಕ್ಕೆ ಉಂಟಾಗುಂತೆ ಯಾವುದೇ ಕೃತ್ಯದಲ್ಲಿ ತೊಡಗುವಂತಿಲ್ಲ.
    – ಎರಡಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ ಹಾಗೂ ಅನಗತ್ಯವಾಗಿ ಸಂಚರಿಸುವಂತಿಲ್ಲ. ಮೆರವಣಿಗೆ ಮತ್ತು ಸಭೆ ನಡೆಸುವಂತಿಲ್ಲ.

    – ಶಸ್ತ್ರಗಳನ್ನು, ದೊಣ್ಣೆ, ಕತ್ತಿ, ಈಟಿ, ಗದೆ, ಕಲ್ಲು, ಇಟ್ಟಿಗೆ, ಚಾಕು ಇತ್ಯಾದಿ ಮಾರಕಾಸ್ತ್ರಗಳನ್ನು ಅಥವಾ ದೈಹಿಕ ಹಿಂಸೆಯನ್ನು ಉಂಟು ಮಾಡುವ ಯಾವುದೇ ವಸ್ತುಗಳನ್ನು ಒಯ್ಯುವಂತಿಲ್ಲ ಮತ್ತು ಸಂಗ್ರಹಿಸುವಂತಿಲ್ಲ.
    – ವ್ಯಕ್ತಿಗಳ ಅಥವಾ ಅವರ ಶವಗಳ ಪ್ರತಿಕೃತಿಗಳನ್ನು ಪ್ರದರ್ಶನ ಮಾಡುವಂತಿಲ್ಲ.

  • ಅಯೋಧ್ಯೆಯಲ್ಲಿ ಭೂಮಿ ಪೂಜೆ- ಕೊಡಗಿನಲ್ಲಿ ನಿಷೇಧಾಜ್ಞೆ ಜಾರಿ

    ಅಯೋಧ್ಯೆಯಲ್ಲಿ ಭೂಮಿ ಪೂಜೆ- ಕೊಡಗಿನಲ್ಲಿ ನಿಷೇಧಾಜ್ಞೆ ಜಾರಿ

    ಮಡಿಕೇರಿ : ಅಯೋಧ್ಯೆಯಲ್ಲಿ ಆಗಸ್ಟ್ 05 ರಂದು ರಾಮಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜಾ ಶಿಲಾನ್ಯಾಸ ಕಾರ್ಯಕ್ರಮವು ನಡೆಯಲಿದೆ. ಹಾಗೆಯೇ ಕೋವಿಡ್-19 ಸೋಂಕು ಹರಡದಂತೆ ಸರ್ಕಾರದ ಮಾರ್ಗಸೂಚಿಯಂತೆ ಹಲವು ನಿರ್ಬಂಧಗಳನ್ನು ಪಾಲಿಸಬೇಕಿದೆ. ಈ ಹಿನ್ನೆಲೆ ಕೊಡಗು ಜಿಲ್ಲೆಯಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ದಂಡ ಪ್ರಕ್ರಿಯಾ ಸಂಹಿತೆ 1973ರ ಸೆಕ್ಷನ್ 144, 144(ಎ) ಮತ್ತು ಕರ್ನಾಟಕ ಪೊಲೀಸ್ ಆಕ್ಟ್ 1963ರ ಕಲಂ 35ರಡಿ ದತ್ತವಾದ ಅಧಿಕಾರದಂತೆ ಆಗಸ್ಟ್, 05 ರ 24 ಗಂಟೆ ಅವಧಿಯಲ್ಲಿ ಕೊಡಗು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶ ಹೊರಡಿಸಿದ್ದಾರೆ.

    ನಿಷೇಧಿತ ಅವಧಿಯಲ್ಲಿ ಪಾಲಿಸಬೇಕಾದ ಷರತ್ತುಗಳು:
    1. ಸರ್ಕಾರಿ ಕಾರ್ಯಕ್ರಮ ಮತ್ತು ಪೂರ್ವ ಯೋಜಿತ ನಿಶ್ಚಿತಾರ್ಥ, ಮದುವೆ, ನಾಮಕರಣ, ಗೃಹ ಪ್ರವೇಶ ಮುಂತಾದ ಸಮಾರಂಭಗಳು ಮತ್ತು ಪೂಜಾ ಮಂದಿರ, ಮಸೀದಿಗಳಲ್ಲಿ ನಡೆಯುವ ಪ್ರತಿನಿತ್ಯದ ಪ್ರಾರ್ಥನೆ ಹೊರತುಪಡಿಸಿ, ಉಳಿದಂತೆ ಯಾವುದೇ ಸಭೆ ಸಮಾರಂಭ ಮತ್ತು ಮೆರವಣಿಗೆಯನ್ನು ನಿಷೇಧಿಸಿದೆ.

    2. ಎಲ್ಲಾ ಸಾರ್ವಜನಿಕ/ ರಾಜಕೀಯ ಬಹಿರಂಗ ಸಭೆ-ಸಮಾರಂಭ, ಪ್ರಚೋದನಾಕಾರಿ ಹೇಳಿಕೆ/ ಘೋಷಣೆ, ಕಪ್ಪು ಬಾವುಟ/ ಕಪ್ಪು ಪಟ್ಟಿ ಪ್ರದರ್ಶನ, ಭಾಷಣ, ಮೆರವಣಿಗೆ, ಪ್ರತಿಭಟನೆ, ಜಾಥಾ, ಧರಣಿ, ಮುಷ್ಕರ, ರಸ್ತಾ-ರೋಕಾ, ಮುತ್ತಿಗೆ, ಪಟಾಕಿ ಸಿಡಿಸುವುದು ಹಾಗೂ ಕೋಮು ಭಾವನೆಗಳಿಗೆ ಧಕ್ಕೆಯಾಗುವಂತಹ ಯಾವುದೇ ವಿಜಯೋತ್ಸವ ಮತ್ತು ಕರಾಳ ದಿನ ಆಚರಣೆಯನ್ನು ನಿಷೇಧಿಸಿದೆ.

    3. ಯಾವುದೇ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್, ಕರ ಪತ್ರ, ಭಿತ್ತಿಪತ್ರ ಬಳಸುವುದು, ಅಂಟಿಸುವುದು ಅಥವಾ ಹಂಚುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಯಾವುದೇ ರೀತಿಯ ಮತೀಯ ಪ್ರಚೋದನಾತ್ಮಕ ಧ್ವಜ/ ಫಲಕ/ ಬಾವುಟಗಳ ಪ್ರದರ್ಶನ ಮತ್ತು ಬಳಕೆಯನ್ನು ನಿಷೇಧಿಸಿದೆ.

    4. ನಿಷೇಧಿತ ಅವಧಿಯಲ್ಲಿ ಜನರು ಗುಂಪು ಸೇರುವುದನ್ನು ನಿಷೇಧಿಸಿದೆ. ಸರ್ಕಾರಿ ಕರ್ತವ್ಯದ ನಿಮಿತ್ತ ಮತ್ತು ಬ್ಯಾಂಕ್/ ಎಟಿಎಂ ಭದ್ರತಾ ಕಾರ್ಯಕ್ಕಾಗಿ ನಿಯೋಜಿಸಲ್ಪಟ್ಟ ಸಿಬ್ಬಂದಿಗಳನ್ನು ಹೊರತುಪಡಿಸಿ, ಯಾರೇ ಖಾಸಗಿ ವ್ಯಕ್ತಿಗಳು ಯಾವುದೇ ರೀತಿಯ ಆಯುಧ ಹತ್ಯಾರುಗಳನ್ನು ಹೊಂದಿರುವುದು, ಪ್ರದರ್ಶಿಸುವುದು ಅಥವಾ ಹಿಡಿದುಕೊಂಡು ತಿರುಗಾಡುವುದನ್ನು ನಿಷೇಧಿಸಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.

  • ಬೆಂಗಳೂರಲ್ಲಿ ಮತ್ತೆ ಒಂದು ತಿಂಗಳು ರಾತ್ರಿ ನಿಷೇಧಾಜ್ಞೆ ಮುಂದುವರಿಕೆ

    ಬೆಂಗಳೂರಲ್ಲಿ ಮತ್ತೆ ಒಂದು ತಿಂಗಳು ರಾತ್ರಿ ನಿಷೇಧಾಜ್ಞೆ ಮುಂದುವರಿಕೆ

    – ರಾತ್ರಿ 9ರಿಂದ ಬೆಳಗಿನಜಾವ 5ರ ವರೆಗೆ ಓಡಾಡುವಂತಿಲ್ಲ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ರಾತ್ರಿ ನಿಷೇಧಾಜ್ಞೆ ಜಾರಿಯಾಗಲಿದ್ದು, ಈ ಕುರಿತು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ.

    ಜೂನ್ 1ರ ಮಧ್ಯರಾತ್ರಿಯಿಂದ ಜೂನ್ 30ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಮುಂದುವರಿಯಲಿದೆ. ರಾತ್ರಿ 9 ಗಂಟೆಯಿಂದ ಬೆಳಗಿನಜಾವ 5 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಈ ಸಂದರ್ಭದಲ್ಲಿ ಅಗತ್ಯ ಸೇವೆಗಳ ವಾಹನ ಸಂಚಾರ ಹೊರತುಪಡಿಸಿ ಉಳಿದ ವಾಹನಗಳ ಸಂಚಾರಕ್ಕೆ ನಿಷೇಧವಿದೆ. ಅಲ್ಲದೆ ಸಾರ್ವಜನಿಕರು ಸಹ ರಾತ್ರಿ 9 ಗಂಟೆ ಬಳಿಕ ಮನೆಯಿಂದ ಹೊರ ಬರುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

    ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟ ವೃದ್ಧರು, ಗರ್ಭಿಣಿಯರು ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ. ಅಗತ್ಯ ಸಂದರ್ಭ ಹೊರತುಪಡಿಸಿ ಊಳಿದ ವೇಳೆ ಹೊರಗಡೆ ಓಡಾಡುವಂತಿಲ್ಲ. ನಿಯಮಗಳನ್ನು ಪಾಲಿಸದಿದ್ದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಲಾಗಿದೆ.

  • ನಿಷೇಧಾಜ್ಞೆ ಉಲ್ಲಂಘನೆ- ಪ್ರಶ್ನಿಸಿದ ಮಹಿಳಾ ಪಿಎಸ್‍ಐ ಮೇಲೆ ಬಿಜೆಪಿ ಜಿಲ್ಲಾಧ್ಯಕ್ಷನ ದೌರ್ಜನ್ಯ

    ನಿಷೇಧಾಜ್ಞೆ ಉಲ್ಲಂಘನೆ- ಪ್ರಶ್ನಿಸಿದ ಮಹಿಳಾ ಪಿಎಸ್‍ಐ ಮೇಲೆ ಬಿಜೆಪಿ ಜಿಲ್ಲಾಧ್ಯಕ್ಷನ ದೌರ್ಜನ್ಯ

    ಮಂಡ್ಯ: ಕೊರೊನಾ ವಾರಿಯರ್ಸ್ ಮೇಲೆ ದೌರ್ಜನ್ಯ ಮುಂದುವರಿದಿದ್ದು, ಮಂಡ್ಯದಲ್ಲಿ ರಾಜಕೀಯ ಪುಡಾರಿಗಳು ಪೊಲೀಸರ ಮೇಲೆ ದೌರ್ಜನ್ಯ ಎಸಗಿದ್ದಾರೆ.

    ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯ ಮಹಿಳಾ ಪ್ರೊಬೇಷನರಿ ಪಿಎಸ್‍ಐ ನಿಖಿತಾ ಮೇಲೆ ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷ ವಿಜಯ್‍ಕುಮಾರ್ ದೌರ್ಜನ್ಯ ಎಸಗಿದ್ದಾರೆ. ವಿಜಯ್‍ಕುಮಾರ್ ಸರ್ಕಾರದ ಲಾಕ್‍ಡೌನ್ ನಿಯಮ ಉಲ್ಲಂಘಿಸಿ ಮಂಗಳವಾರ ಸಂಜೆ ಏಳು ಗಂಟೆಯ ನಂತರ ಕೆ.ಆರ್.ಪೇಟೆಯಲ್ಲಿ ಕಾರಿನಲ್ಲಿ ಸಂಚರಿಸುತ್ತಿದ್ದ. ಈ ವೇಳೆ ವಿಜಯ್‍ಕುಮಾರ್ ಕಾರು ತಡೆದ ನಿಖಿತಾ, ನಿಷೇಧಾಜ್ಞೆ ಜಾರಿಯಲ್ಲಿದೆ ಓಡಾಟ ಮಾಡಬಾರದು ಎಂದಿದ್ದಾರೆ. ಈ ವೇಳೆ ವಿಜಯ್ ಕುಮಾರ್ ಆವಾಜ್ ಹಾಕಿದ್ದಾರೆ.

    ನಾನು ಬಿಜೆಪಿ ಜಿಲ್ಲಾಧ್ಯಕ್ಷ, ನನ್ನ ನೀನು ಕೇಳುವ ಹಾಗೆ ಇಲ್ಲ. ನಿನ್ನದು ಅತೀಯಾಗುತ್ತಿದೆ. ನೀನು ಪಿಎಸ್‍ಐ ಅಲ್ಲ ಇನ್ನೂ ಪ್ರೊಬೇಷನರಿ. ನಾನು ಸಿಎಂ, ಡಿಸಿಎಂ, ಡಿಸಿ, ಎಸ್‍ಪಿಗೆ ಕರೆ ಮಾಡುತ್ತೇನೆ. ನನ್ನ ಮೇಲೆ ಹಲ್ಲೆ ಮಾಡಿದ್ದೀಯಾ ಅಂತಾ ದೂರು ನೀಡುತ್ತೇನೆ. ನಿನ್ನನ್ನು ಕೆಲಸದಿಂದ ತೆಗೆಸುತ್ತೇನೆ ಎಂದು ವಿಜಯ್‍ಕುಮಾರ್ ಬೆದರಿಸಿದ್ದಾನೆ.

    ಇದೀಗ ಅನಿತಾ ಅವರು ದೂರು ನೀಡಿದ್ದು, ಕೆಲಸಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ವಿಜಯ್‍ಕುಮಾರ್ ವಿರುದ್ಧ ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಅನ್ವಯ ವಿಜಯ್‍ಕುಮಾರ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ನಂತರ ಸ್ಟೇಷನ್ ಬೇಲ್‍ನಲ್ಲಿ ವಾಪಸ್ ಕಳುಹಿಸಿದ್ದಾರೆ. ರಾಜಕೀಯ ಪುಡಾರಿಗಳಿಗೆ ಜೈಲಿಲ್ಲ, ಸ್ಟೇಷನ್ ಬೇಲ್ ಸಿಕ್ಕಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಲಾಕ್‍ಡೌನ್ ವಿಸ್ತರಣೆ ಬೆನ್ನಲ್ಲೇ ಚಿತ್ರದುರ್ಗದಲ್ಲಿ ಮೇ 3ರವರೆಗೆ ನಿಷೇಧಾಜ್ಞೆ ಜಾರಿ

    ಲಾಕ್‍ಡೌನ್ ವಿಸ್ತರಣೆ ಬೆನ್ನಲ್ಲೇ ಚಿತ್ರದುರ್ಗದಲ್ಲಿ ಮೇ 3ರವರೆಗೆ ನಿಷೇಧಾಜ್ಞೆ ಜಾರಿ

    ಚಿತ್ರದುರ್ಗ: ಕೊರೊನಾ ವೈರಸ್ ಸೋಂಕು ಹರಡದಂತೆ ಸಾರ್ವಜನಿಕರ ಹಿತದೃಷ್ಟಿಯಿಂದ ಮುಂಜಾಗ್ರತೆ ಕ್ರಮವಾಗಿ ಚಿತ್ರದುರ್ಗ ಜಿಲ್ಲಾದ್ಯಂತ ಸಂತೆ, ಜಾತ್ರೆ, ಸಮಾವೇಶ, ಮೆರವಣಿಗೆ, ಸಮ್ಮೇಳನ, ಕ್ರೀಡಾಕೂಟ ಹಾಗೂ ಯಾವುದೇ ಧಾರ್ಮಿಕ ಸಮಾರಂಭ ನಡೆಸದಂತೆ ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯ ಮೇ 03ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.

    ಸಿಆರ್‌ಪಿಸಿ 1973ರ ಕಲಂ 144ರ ಮೇರೆಗೆ ಏಪ್ರಿಲ್ 14ರ ಮಧ್ಯರಾತ್ರಿ 12 ಗಂಟೆಯಿಂದ ಮೇ 03ರ ಮಧ್ಯರಾತ್ರಿ 12 ಗಂಟೆಯವರೆಗೆ ಜಿಲ್ಲಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ 05ಕ್ಕೂ ಹೆಚ್ಚು ಜನ ಸೇರದಂತೆ ನಿಷೇಧಿಸಿ ಡಿಸಿ ಆದೇಶಿಸಿದ್ದಾರೆ. ಸಾರ್ವಜನಿಕರಿಗೆ ಅಗತ್ಯವಿರುವ ವಸ್ತುಗಳು, ಆಹಾರ ಸಾಮಗ್ರಿಗಳ ಪೂರೈಕೆ, ತುರ್ತು ಆರೋಗ್ಯ ಸೇವೆ, ಅಗ್ನಿಶಾಮಕ ಸೇವೆ, ಶವಸಂಸ್ಕಾರ ಇನ್ನಿತರೆ ಅಗತ್ಯ ಸೇವೆಗಳ ಸೌಲಭ್ಯ ಇರಲಿದೆ.

    ಜಿಲ್ಲೆಯಲ್ಲಿನ ಸಿನಿಮಾ ಮಂದಿರ, ಮಾಲ್, ರಂಗಮಂದಿರ, ಪಬ್, ನೈಟ್ ಕ್ಲಬ್, ಸಂಗೀತಹಬ್ಬ, ವಸ್ತುಪ್ರದರ್ಶನಗಳು, ನಾಟಕ, ಮ್ಯಾರಥ್ಯಾನ್ ಸೇರಿದಂತೆ ಕ್ರೀಡಾಂಗಣದಲ್ಲಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ವೀಕ್ಷಿಸುವ ಕ್ರೀಡಾಕೂಟಗಳು, ಜಾತ್ರೆಗಳು, ವಾರದ ಸಂತೆಗಳನ್ನು ಮೇ 3ರ ಮಧ್ಯರಾತ್ರಿವರೆಗೆ ನಿಷೇಧಿಸಲಾಗಿದೆ. ಹೆಚ್ಚಾಗಿ ಜನ ಸೇರುವಂತಹ ಮದುವೆ, ಗೃಹಪ್ರವೇಶ, ನಾಮಕರಣ ಕಾರ್ಯಕ್ರಮಗಳನ್ನು ನಡೆಸಬಾರದು, ಇದನ್ನು ಮುಂದಿನ ದಿನಗಳಿಗೆ ಮುಂದೂಡಬೇಕು. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಹೆಚ್ಚು ಜನರನ್ನು ಆಹ್ವಾನಿಸದೇ ಮನೆಯಲ್ಲಿಯೇ ಕಾರ್ಯಕ್ರಮ ಮಾಡಿಕೊಳ್ಳಬೇಕು. ಧಾರ್ಮಿಕ ಕಾರ್ಯಕ್ರಮಗಳಿಗೆ ಆದಷ್ಟು ಕಡಿಮೆ ಸಂಖ್ಯೆ ಜನರು ಭಾಗವಹಿಸಬೇಕು ಎಂದು ಡಿಸಿ ಸೂಚಿಸಿದ್ದಾರೆ.

    ಹೆಚ್ಚು ಜನರು ಬಳಸುವ ಈಜುಕೊಳ, ಜಿಮ್, ಬೇಸಿಗೆ ಶಿಬಿರ ಮುಂತಾದವುಗಳನ್ನು ಮುಚ್ಚಬೇಕು. ಹೋಟೆಲ್, ರೆಸ್ಟೋರೆಂಟ್ ಸೇರಿದಂತೆ ಇನ್ನಿತರೆ ಜನಸಂದಣಿ ಸ್ಥಳಗಳಲ್ಲಿ ಆಹಾರ ಪದಾರ್ಥಗಳನ್ನು ಪಾರ್ಸೆಲ್ ಮೂಲಕ ಮಾತ್ರ ನೀಡಬೇಕು. ಶಾಲೆ, ಕಾಲೇಜು, ವಿಶ್ವವಿದ್ಯಾಲಯ, ಕೋಚಿಂಗ್ ಸೆಂಟರ್ ಗಳನ್ನು ಮುಚ್ಚಬೇಕು. ಜಿಲ್ಲೆಯಲ್ಲಿ ಎಲ್ಲರೂ ಈ ಸೂಚನೆ ಹಾಗೂ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆದೇಶ ಉಲ್ಲಂಘಿಸುವವರ ವಿರುದ್ಧ ಐಪಿಸಿ ಸೆಕ್ಷನ್ 188ರ ಅನ್ವಯ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

  • ಕಲಬುರಗಿ ಜಿಲ್ಲೆಯಲ್ಲಿ ಇಂದು ಸಂಜೆಯಿಂದ ನಿಷೇಧಾಜ್ಞೆ ಜಾರಿ

    ಕಲಬುರಗಿ ಜಿಲ್ಲೆಯಲ್ಲಿ ಇಂದು ಸಂಜೆಯಿಂದ ನಿಷೇಧಾಜ್ಞೆ ಜಾರಿ

    ಕಲಬುರಗಿ: ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತ ಕ್ರಮವಾಗಿ ಕಲಬುರಗಿ ನಗರದ ವಾರ್ಡ್ ನಂಬರ್ 30ರ ಜೊತೆ 14ಅನ್ನು ಕೂಡ ಕಂಟೇನ್‍ಮೆಂಟ್ ಝೋನ್ ಎಂದು ಗುರುತಿಸಿ ಎರಡು ವಾರ್ಡ್ ಗಳಲ್ಲಿ ಸ್ಯಾನಿಟೇಷನ್ ಮಾಡಲಾಗಿದೆ.

    ಕೋವಿಡ್-19 ಪರೀಕ್ಷೆಗೆ ನವದೆಹಲಿಯಿಂದ ಈಗಾಗಲೇ ರಿ-ಏಜೆಂಟ್ ಬಂದಿದ್ದು, ಮಾರ್ಚ್ 21ರಿಂದ ಪ್ರಯೋಗಾಲಯ ಆರಂಭವಾಗಲಿದೆ. ಮಹಾರಾಷ್ಟ್ರದಲ್ಲಿ ಹೆಚ್ಚಿನ ಕೊರೊನಾ ಸೋಂಕು ಕಂಡು ಬಂದಿರುವುದರಿಂದ ಜಿಲ್ಲೆಯಿಂದ ಮಹಾರಾಷ್ಟ್ರಕ್ಕೆ ಹೋಗುವ ಮತ್ತು ಅಲ್ಲಿಂದ ಬರುವ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಬಸ್‍ಗಳ ಸೇವೆ ರದ್ದುಗೊಳಿಸಲಾಗಿದೆ.

    ಸಾಮಾಜಿಕ ಜಾಲತಾಣದಲ್ಲಿ ಬರುವ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ. ಸುಳ್ಳು ಸುದ್ದಿ ಹರಿಸಿದರೆ ಅಂತವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕೊರೊನಾ ಸಹಾಯವಾಣಿ ಕೇಂದ್ರಗಳನ್ನು 2ರಿಂದ 4ಕ್ಕೆ ಹೆಚ್ಚಳ ಮಾಡಲಾಗಿದೆ. ಈ ಮೂಲಕ ಯಾವುದೇ ಆತಂಕ ಇದ್ದಲ್ಲಿ ಸಹಾಯವಾಣಿ ಸಂಖ್ಯೆ: 08472-278648, 278698, 278604, 278677 ನಂಬರಿಗೆ ಕರೆ ಮಾಡಬಹುದು ಎಂದು ಜಿಲ್ಲಾಧಿಕಾರಿ ಬಿ.ಶರತ್ ತಿಳಿಸಿದ್ದಾರೆ.

    ಸಹಾಯವಾಣಿಗೆ ಹುಸಿ ಕರೆ ಮಾಡಿದ್ದವರನ್ನು ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ. ಸರ್ಕಾರಿ ವ್ಯವಸ್ಥೆಯಲ್ಲಿ 32 ವೆಂಟಿಲೇಟರ್ ಲಭ್ಯವಿದ್ದು, ಜಿಮ್ಸ್ ಮತ್ತು ಇ.ಎಸ್.ಐ.ಸಿ.ಯ ಐಸೋಲೇಷನ್ ವಾರ್ಡ್ ನಲ್ಲಿ ತಲಾ 2 ವೆಂಟಿಲೇಟರ್ ಗಳು ಕೊರೊನಾ ಸೋಂಕಿತ ರೋಗಿಗಳ ಚಿಕಿತ್ಸೆಗೆ ಮೀಸಲಿರಿಸಲಾಗಿದೆ. ಅಗತ್ಯವಿದ್ದಲ್ಲಿ ಹೆಚ್ಚಿನ ವೆಂಟಿಲೇಟರ್ ಗಳನ್ನು ತರಿಸಲಾಗುವುದು ಎಂದು ಡಿಸಿ ಮಾಹಿತಿ ನೀಡಿದ್ದಾರೆ.