Tag: ನಿಷಾದ್ ಪಕ್ಷ

  • ಯುಪಿ ಮಹಾಘಟಬಂಧನ್‍ಗೆ ಹೊಡೆತ – ಗೋರಖ್‍ಪುರದ ಸಂಸದ ಬಿಜೆಪಿಗೆ ಸೇರ್ಪಡೆ

    ಯುಪಿ ಮಹಾಘಟಬಂಧನ್‍ಗೆ ಹೊಡೆತ – ಗೋರಖ್‍ಪುರದ ಸಂಸದ ಬಿಜೆಪಿಗೆ ಸೇರ್ಪಡೆ

    ನವದೆಹಲಿ: ಅತಿ ಹೆಚ್ಚು ಸ್ಥಾನವನ್ನು ಹೊಂದಿ ಇಡೀ ದೇಶದ ಗಮನ ಸೆಳೆಯುತ್ತಿರುವ ಉತ್ತರ ಪ್ರದೇಶದಲ್ಲಿ ಮೋದಿಯನ್ನು ಸೋಲಿಸಬೇಕೆಂದು ಪ್ರಯತ್ನ ನಡೆಸುತ್ತಿರುವ ಮಹಾಘಟಬಂಧನ್ ಮೈತ್ರಿಕೂಟದಲ್ಲಿದ್ದ ನಿಷಾದ್ ಪಕ್ಷ ಬಿಜೆಪಿಯನ್ನು ಬೆಂಬಲಿಸಲಿದೆ.

    ಹಾಲಿ ಗೋರಖ್‍ಪುರ ಕ್ಷೇತ್ರದ ಸಂಸದ ಪ್ರವೀಣ್ ನಿಷಾದ್ ಅವರು ದೆಹಲಿಯಲ್ಲಿ ಕೇಂದ್ರ ಸಚಿವ ಜೆಪಿ ನಡ್ಡಾ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ನಿಷಾದ್ ಪಕ್ಷದ ಮುಖ್ಯಸ್ಥ ಸಂಜಯ್ ನಿಷಾದ್ ಪ್ರತಿಕ್ರಿಯಿಸಿ, ನರೇಂದ್ರ ಮೋದಿಯವರು ಮತ್ತೆ ದೇಶದ ಪ್ರಧಾನಿಯಾಗಬೇಕು. ಹೀಗಾಗಿ ಉತ್ತರ ಪ್ರದೇಶ ಚುನಾವಣೆಯಲ್ಲಿ ನಾವು ಬಿಜೆಪಿಯನ್ನು ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ.

    ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ತೆರವಾದ ಸ್ಥಾನಕ್ಕೆ ಪ್ರವೀಣ್ ನಿಷಾದ್ ಅವರು ಸಮಾಜವಾದಿ ಪಕ್ಷದ ಚಿಹ್ನೆಯ ಅಡಿ ಸ್ಪರ್ಧಿಸಿದ್ದರು. ಇವರಿಗೆ ಮಾಯಾವತಿ ಸಹ ಬೆಂಬಲ ನೀಡಿದ್ದ ಪರಿಣಾಮ ಗೋರಖ್‍ಪುರ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.

    ಉಪಚುನಾವಣೆಯಲ್ಲಿ ನಿಷಾದ್ ಪಕ್ಷದ ಜೊತೆಗಿ ಮೈತ್ರಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಲೋಕಸಭೆಯಲ್ಲೂ ಎಸ್‍ಪಿ, ಬಿಎಸ್‍ಪಿ, ಆರ್‍ಎಲ್‍ಡಿ ಮೈತ್ರಿ ಮಾಡಿಕೊಂಡಿತ್ತು. ಆದg ‘ಮಹಾಘಟಬಂಧನ್’ ಸೇರಿದ ಮೂರೇ ದಿನಗಳಲ್ಲಿ ನಿಷಾದ್ ಪಾರ್ಟಿ ಮೈತ್ರಿಕೂಟದಿಂದ ಹೊರಬಿದ್ದಿತ್ತು.

    ಆಗಿದ್ದು ಏನು?
    ‘ಮಹಾರಾಜ್‍ಗಂಜ್ ಕ್ಷೇತ್ರದಲ್ಲಿ ನಿಷಾದ್ ಪಕ್ಷ ತನ್ನದೇ ಚಿಹ್ನೆಯಡಿ ಸ್ಪರ್ಧಿಸಲು ಬಯಸಿತ್ತು. ಆದರೆ ಸಮಾಜವಾದಿ ಪಕ್ಷ ಅದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಎಸ್‍ಪಿ ಚಿಹ್ನೆಯಡಿ ಸ್ಪರ್ಧಿಸಲು ಪಕ್ಷದ ಕಾರ್ಯಕರ್ತರು ವಿರೋಧಿಸಿದ್ದರು. ಅಷ್ಟೇ ಅಲ್ಲದೇ ಮಹಾಘಟಬಂಧನ್ ಬ್ಯಾನರ್ ಗಳಲ್ಲಿ ಎಸ್‍ಪಿ, ಬಿಎಸ್‍ಪಿ ನಾಯಕರಿಗೆ ಮಣೆ ಹಾಕುತ್ತಿದ್ದ ಹಿನ್ನೆಲೆಯಲ್ಲಿ ನಿಷಾದ್ ಪಕ್ಷ ಅಸಮಾಧನಗೊಂಡಿತ್ತು.

    ಪರಿಣಾಮ ಏನು?
    ಒಟ್ಟು 80 ಲೋಕಸಭಾ ಕ್ಷೇತ್ರಗಳಿರುವ ಉತ್ತರ ಪ್ರದೇಶದಲ್ಲಿ 2014ರ ಚುನಾವಣೆಯಲ್ಲಿ ಬಿಜೆಪಿ 71, ಎಸ್‍ಪಿ 5, ಕಾಂಗ್ರೆಸ್ 2 ಕ್ಷೇತ್ರವನ್ನು ಗೆದ್ದುಕೊಂಡಿತ್ತು. ಉತ್ತರ ಪ್ರದೇಶದಲ್ಲಿ ಯಾರಿಗೆ ಹೆಚ್ಚು ಸ್ಥಾನ ಬರುತ್ತದೋ ಆ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಏರುತ್ತದೆ ಎನ್ನುವ ಮತು ಪ್ರಚಲಿತದಲ್ಲಿದೆ. ಹೀಗಾಗಿ ಈ ಬಾರಿ ಮೋದಿಯನ್ನು ಸೋಲಿಸಲು ಕಾಂಗ್ರೆಸ್ ಹೊರತುಪಡಿಸಿ ಎಸ್‍ಪಿ, ಬಿಎಸ್‍ಪಿ ಮೈತ್ರಿ ಮಾಡಿಕೊಂಡಿದೆ. ಈ ಮೈತ್ರಿ ಬಿಜೆಪಿಗೆ ಹೊಡೆತ ನೀಡುವ ಸಾಧ್ಯತೆಯಿದೆ ಎಂದು ಸಮೀಕ್ಷೆಗಳು ಹೇಳಿವೆ. ಉತ್ತರಪ್ರದೇಶದ ಪೂರ್ವ ಭಾಗದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ನಿಷಾದ್ ಪಂಗಡದ ಜನರಿದ್ದಾರೆ. ಗೋರಾಖ್‍ಪುರ ಕ್ಷೇತ್ರದಲ್ಲಿ ನಿಷಾದ್ ಪಂಗಡಕ್ಕೆ ಸೇರಿದ 3.5 ಲಕ್ಷ ಮಂದಿ ಜನರಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವ ಕಾರಣ ಎನ್‍ಡಿಎ ಮತಪ್ರಮಾಣ ಹೆಚ್ಚಾಗಲಿದ್ದು ಮಹಾಘಟಬಂದನ್ ಮತ್ತು ಕಾಂಗ್ರೆಸ್‍ಗೆ ಹೊಡೆತ ನೀಡುವ ಸಾಧ್ಯತೆಯಿದೆ.

    ಗೋರಖ್‍ಪುರ ಯೋಗಿ ಆದಿತ್ಯನಾಥ್ ಅವರ ಭದ್ರಕೋಟೆಯಾಗಿದ್ದು, ಅಲ್ಲಿಂದ ಎಸ್‍ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರವೀಣ್ ನಿಷಾಧ್ ಬಿಜೆಪಿಯ ಭುಪೇಂದ್ರ ಶುಕ್ಲಾ ಅವರನ್ನು 21 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು.