Tag: ನಿವಾಸಿಗಳು

  • 10 ಕೋಟಿಗೆ ಒಂದು ವಿಲ್ಲಾ – ಮಳೆಗೆ ನಿವಾಸಿಗಳು ವಿಲವಿಲ

    10 ಕೋಟಿಗೆ ಒಂದು ವಿಲ್ಲಾ – ಮಳೆಗೆ ನಿವಾಸಿಗಳು ವಿಲವಿಲ

    ಬೆಂಗಳೂರು: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಸಿಲಿಕಾನ್ ಸಿಟಿ ಬೆಂಗಳೂರು ನಿವಾಸಿಗಳು ತತ್ತರಿಸಿ ಹೋಗಿದ್ದಾರೆ. ಈ ನಡುವೆ ಯಮಲೂರು ಬಳಿ ಕೋಟಿಗಟ್ಟಲೆ ಬೆಲೆಯ ವಿಲ್ಲಾಗಳಿಗೂ ಮಳೆಯ ನೀರು ನುಗ್ಗಿದ್ದು, ಅವಾಂತರ ಸೃಷ್ಟಿಯಾಗಿದೆ.

    ಹೌದು ಕೋಟಿಗಟ್ಟಲೇ ಹಣ ಕೊಟ್ಟು ಖರೀದಿಸಿದ ಅತ್ಯಂತ ಪ್ರತಿಷ್ಟಿತ ವಿಲ್ಲಾಗಳಿಗೂ ಮಳೆಯ ನೀರು ನುಗ್ಗಿದ್ದು, ಮನೆಯಿಂದ ಹೊರಬರಲಾಗದೇ ಜನರು ಪರದಾಡುತ್ತಿದ್ದಾರೆ. ಲಕ್ಷಗಟ್ಟಲೇ ಬೆಲೆಯ ಐಷಾರಾಮಿ ಕಾರುಗಳು ನೀರಿಗೆ ಮುಳುಗಡೆಯಾಗಿದೆ. ವಿಲ್ಲಾದ ಜನ ಈಗ ಟ್ರ್ಯಾಕ್ಟರ್ ಮೂಲಕ ಸಂಚಾರ ಮಾಡುತ್ತಿದ್ದಾರೆ. ಐಟಿ ಬಿಟಿ ಕಂಪನಿ ಉದ್ಯೋಗಿಗಳಿಗೆ ಟ್ರಾಕ್ಟರ್‌ಗಳೇ ಆಸರೆಯಾಗಿದೆ. ಎಸಿ ಕಾರು, ಎಸಿ ಬಸ್‍ಗಳಲ್ಲಿ ಓಡಾಡುತ್ತಿದ್ದವರು ಇದೀಗ ಟ್ರಾಕ್ಟರ್‌ನಲ್ಲಿ ಪ್ರಯಾಣಿಸುವ ಸ್ಥಿತಿ ಎದುರಾಗಿದೆ.

    ಹೆಚ್‍ಎಎಲ್‍ಟು ಬೆಳ್ಳಂದೂರು ಸಂಪರ್ಕಿಸುವ ರಸ್ತೆಗಳಲ್ಲಿ ನಾಲ್ಕು ಆಡಿ ನೀರು ತುಂಬಿದ್ದು, ಐದು ನಿಮಿಷಕ್ಕೊಂದಂತೆ ಎರಡು ಕಡೆಗಳಲ್ಲಿ ಹತ್ತಕ್ಕೂ ಹೆಚ್ಚು ಟ್ರಾಕ್ಟರ್‌ಗಳು ಪ್ರಯಾಣಕ್ಕೆ ಸಿದ್ದವಾಗಿವೆ. ಇನ್ನೂ ಬೆಳ್ಳಂದೂರು, ಯಮಲೂರು, ಚಲ್ಲಘಟ್ಟ ಕಡೆಗಳಿಗೆ ಹೋಗುವವರ ಸ್ಥಿತಿ ಕೇಳುವವರೆ ಇಲ್ಲದಂತಾಗಿದೆ. ಇದನ್ನೂ ಓದಿ: ನಿಮ್ಮ ಸರ್ಕಾರದಲ್ಲಿ ದಿಂಬು, ಚೆಂಬು ಖರೀದಿಯಲ್ಲೂ ನಡೆದ ಭ್ರಷ್ಟಾಚಾರ ನೆನಪಿಸಿಕೊಳ್ಳಿ- ಸಿದ್ದುಗೆ ಸುನಿಲ್ ತಿರುಗೇಟು

    ಯಮಲೂರು, ಕೆರೆ ನೀರು, ರಾಜಕಾಲುವೆ ನೀರು ಐಟಿ, ಬಿಟಿ ಕಂಪನಿಗಳಿಗೂ ನುಗ್ಗಿದ್ದು ಅವಾಂತರ ಸೃಷ್ಟಿಯಾಗಿದೆ. ಇದೀಗ ಮಳೆ ನೀರನ್ನು ಹೊರ ತೆಗೆಯಲು ಕ್ರೈನ್‍ಗಳು, ಜೆಸಿಬಿಗಳು, ಅಗ್ನಿಶಾಮಕ ಸಿಬ್ಬಂದಿ, ಎನ್‍ಡಿಆರ್‌ಎಫ್ ತಂಡಗಳು ಕಾರ್ಯಾಚರಣೆ ನಡೆಸುತ್ತಿದೆ. ಇದನ್ನೂ ಓದಿ: ಕಾಕ್‍ಪಿಟ್‍ನಲ್ಲಿ ಕೇಳಿಸಿತು ಶಿಳ್ಳೆ – ಮಧ್ಯದಲ್ಲಿಯೇ ಹಿಂದಿರುಗಿದ ವಿಸ್ತಾರ ವಿಮಾನ

    Live Tv
    [brid partner=56869869 player=32851 video=960834 autoplay=true]

  • ರಾತ್ರೋರಾತ್ರಿ ಪುನೀತ್ ಹೆಸರಿಟ್ಟಿದ್ದ ಬಡಾವಣೆ ನಾಮಫಲಕ ಧ್ವಂಸ – ಸ್ಥಳೀಯರ ಆಕ್ರೋಶ

    ರಾತ್ರೋರಾತ್ರಿ ಪುನೀತ್ ಹೆಸರಿಟ್ಟಿದ್ದ ಬಡಾವಣೆ ನಾಮಫಲಕ ಧ್ವಂಸ – ಸ್ಥಳೀಯರ ಆಕ್ರೋಶ

    ಕೋಲಾರ: ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೆಸರಿಟ್ಟಿದ್ದ ಬಡಾವಣೆ ನಾಮಫಲಕವನ್ನು ದುಷ್ಕರ್ಮಿಗಳು ಜೆಸಿಬಿಯಿಂದ ರಾತ್ರೋರಾತ್ರಿ ಧ್ವಂಸ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ದೇಶಿಹಳ್ಳಿ ಗ್ರಾಮದಲ್ಲಿ ಕಳೆದ ಹಲವು ವರ್ಷಗಳ ಹಿಂದೆ ಮಾಜಿ ಪುರಸಭಾ ಸದಸ್ಯ ಮುರಗಯ್ಯ ಎಂಬುವರು ನಿರ್ಮಾಣ ಮಾಡಿದ್ದ ಬಡಾವಣೆಗೆ ಯಾವುದೇ ಹೆಸರು ಇಟ್ಟಿರಲಿಲ್ಲ. ಆದರೆ ಬಡಾವಣೆ ನಿವಾಸಿಗಳೆಲ್ಲಾ ನಿರ್ಧಾರ ಮಾಡಿ ಇತ್ತೀಚೆಗೆ ಕೆಸರನಹಳ್ಳಿ ಪಂಚಾಯತಿಗೆ ಮನವಿ ಪತ್ರ ಕೊಟ್ಟು ಬಡಾವಣೆಗೆ ಪುನೀತ್ ರಾಜ್ ಕುಮಾರ್ ಅವರ ಹೆಸರು ಇಡಲು ಅನುಮತಿ ಕೋರಿದ್ದರು. ನಂತರ ಪಂಚಾಯತಿ ಅಧಿಕಾರಿಗಳ ಮೌಖಿಕ ಒಪ್ಪಿಗೆ ಹಾಗೂ ಆಶ್ವಾಸನೆ ಮೇರೆಗೆ ನಾಮಫಲಕ ಅಳವಡಿಸಿದ್ದರು. ಇದನ್ನೂ ಓದಿ: ತಲೆಕೂದಲು ತೆಗೆದ ಫೋಟೋ ಶೇರ್ ಮಾಡಿ ಶಾಕಿಂಗ್ ಸುದ್ದಿ ಕೊಟ್ಟ ಮೋಹಿನಿ ನಟಿ

    ಭಾನುವಾರ ರಾತ್ರಿ ಬಡಾವಣೆ ನಿರ್ಮಾಣ ಮಾಡಿದ್ದ ಮಾಜಿ ಪುರಸಭೆ ಸದಸ್ಯ ಮುರಗಯ್ಯ ಜೆಸಿಬಿ ಕಳುಹಿಸಿ ಬೋರ್ಡ್ ಧ್ವಂಸ ಮಾಡಿ ತೆರವು ಮಾಡಿಸಿದ್ದಾರೆ. ಈ ವಿಷಯ ತಿಳಿದ ಬಡಾವಣೆ ನಿವಾಸಿಗಳು ರಾತ್ರಿಯೇ ನಾಮಫಲಕವನ್ನು ತೆರೆವು ಮಾಡದಂತೆ ಪ್ರತಿರೋಧ ಒಡ್ಡಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಬಂಗಾರಪೇಟೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ, ಜೆಸಿಬಿ ಹಾಗೂ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಬಡಾವಣೆ ನಿವಾಸಿಗಳು ನೀಡಿದ ದೂರನ್ನು ಆಧರಿಸಿ ಪ್ರಕರಣ ದಾಖಲು ಮಾಡಿಕೊಂಡಿರುವ ಬಂಗಾರಪೇಟೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪುನೀತ್ ಸಿನಿಮಾದ ಕಥೆಗೆ ಯುವರಾಜ್ ಕುಮಾರ್ ನಾಯಕ?

  • ಮತ ಕೇಳಲು ಬರಬೇಡಿ- ಹುಬ್ಬಳ್ಳಿ ಮತದಾರರಿಂದ ಮನೆಗೆ ಬಹಿಷ್ಕಾರದ ಬೋರ್ಡ್

    ಮತ ಕೇಳಲು ಬರಬೇಡಿ- ಹುಬ್ಬಳ್ಳಿ ಮತದಾರರಿಂದ ಮನೆಗೆ ಬಹಿಷ್ಕಾರದ ಬೋರ್ಡ್

    ಹುಬ್ಬಳ್ಳಿ: ಮತ ಕೇಳಲು ಬರಬೇಡಿ ಎಂಬ ಬೋರ್ಡ್ ಹಿಡಿದು ನಿಂತು ಹಾಗೂ ಮನೆ ಗೇಟ್‍ಗಳಿಗೆ ಅಂಟಿಸಿ ಮತದಾರರು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.

    ಕಳೆದ ಹಲವು ವರ್ಷದಿಂದ ಮುಖ್ಯ ರಸ್ತೆಯಿಂದ ಕಾಲೋನಿಗೆ ಸಂಪರ್ಕಿಸುವ ರಸ್ತೆ ಬಂದ್ ಮಾಡಿರುವುದನ್ನು ತೆರವುಗೊಳಿಸಿ, ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿ ಈ ಪ್ರತಿಭಟನೆ ನಡೆಸಿದ್ದಾರೆ. ಭೈರಿದೇವರಕೊಪ್ಪದ ರಾಜಧಾನಿ ಕಾಲೋನಿ, ನಮ್ರತಾ ಕಾಲೋನಿ, ಮಲ್ಲನಗೌಡರ ಚಾಳದ ನಿವಾಸಿಗಳು ಪಾಲಿಕೆ ಚುನಾವಣೆ ವೇಳೆ ಮತದಾನ ಬಹಿಷ್ಕರಿಸುವುದಾಗಿ ಪ್ರತಿಭಟಿಸಿದ್ದಾರೆ. ಸಾವಿರಾರು ಮತದಾರರು ಮನೆ ಮನೆಗೆ ಬಹಿಷ್ಕಾರದ ಬೋರ್ಡ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಮ್ಮ ಕಾಲೋನಿಗೆ ಸೂಕ್ತ ರಸ್ತೆ ಸಂಪರ್ಕ ಆಗುವರೆಗೆ ಮತದಾನ ಬಹಿಷ್ಕಾರ ಮಾಡುತ್ತೇವೆ. ಇಲ್ಲಿ ಮತಯಾಚಿಸಲು ಯಾರೂ ಬರಬಾರದು. ಸಮಸ್ಯೆ ಬಗೆಹರಿಸಿ ಮತಯಾಚನೆಗೆ ಬರುವಂತೆ ಚುನಾವಣಾ ಅಭ್ಯರ್ಥಿಗಳಿಗೆ ನಿವಾಸಿಗಳು ತಿಳಿಸಿದ್ದಾರೆ. ಸೆಪ್ಟೆಂಬರ್ 3ರಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ನಡೆಯಲಿದ್ದು, ಮತದಾನ ಬಹಿಷ್ಕಾರ ಅಭ್ಯರ್ಥಿಗಳಿಗೆ ಇನ್ನಿಲ್ಲದ ಸಂಕಷ್ಟ ತಂದಿದೆ. ಇದನ್ನೂ ಓದಿ: ಒಬ್ಬ ಮನುಷ್ಯನಿಗೆ ತಿಂಗಳಿಗೆ 5 ಕೆಜಿ ಅಕ್ಕಿ ಸಾಕು ಹೇಳಿಕೆ ವಾಪಸ್ ಪಡೆಯಲ್ಲ: ಕತ್ತಿ

    ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ್, ಸಂಸದ ಪ್ರಲ್ಹಾದ್ ಜೋಶಿ, ಜಿಲ್ಲಾಧಿಕಾರಿ ಸೇರಿದಂತೆ ಎಲ್ಲ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೂ ಸಮಸ್ಯೆ ಕಗ್ಗಂಟಾಗಿಯೇ ಉಳಿದಿದೆ. ಹೀಗಾಗಿ ನಾವು ಮತದಾನ ಬಹಿಷ್ಕರಿಸಿದ್ದೇವೆ ಎಂದು ಬ್ಯಾನರ್‍ನಲ್ಲಿ ಬರೆಯಲಾಗಿದೆ.

    ಈ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಬಿಜೆಪಿ ನಾಯಕರು, ಸ್ಥಳೀಯರೊಂದಿಗೆ ಚರ್ಚಿಸಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರೊಂದಿಗೆ ಸಭೆ ನಡೆಸಿ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಮೂರ್ನಾಲ್ಕು ದಿನಗಳಲ್ಲಿ ಬಂದ್ ಮಾಡಿರುವ ರಸ್ತೆ ತೆರವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸದಿದ್ದರೆ, ಕೋರ್ಟ್ ಮೆಟ್ಟಿಲೇರುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.

  • ಲಾಕ್‍ಡೌನ್ ಸಮಯದಲ್ಲಿ ಹಣ ಕೂಡಿಸಿ, ಬಡಾವಣೆ ನಿವಾಸಿಗಳಿಂದ ಕೆರೆ ನಿರ್ಮಾಣ

    ಲಾಕ್‍ಡೌನ್ ಸಮಯದಲ್ಲಿ ಹಣ ಕೂಡಿಸಿ, ಬಡಾವಣೆ ನಿವಾಸಿಗಳಿಂದ ಕೆರೆ ನಿರ್ಮಾಣ

    ಧಾರವಾಡ: ಕಳೆದ 8 ವರ್ಷಗಳಿಂದ ಕೆರೆ ನಿರ್ಮಾಣಕ್ಕಾಗಿ ಸರ್ಕಾರವನ್ನು ಎದುರು ಕಣ್ಣು ತೆರೆದು ಕುಳಿತಿದ್ದ ಬಡಾವಣೆಯ ಜನತೆ, ಕಾದು ಬೇಸತ್ತು ಇದೀಗ ತಾವೇ ಮುಂದೆ ನಿಂತು ಕೆರೆ ನಿರ್ಮಾಣ ಮಾಡಿದ್ದಾರೆ.

    ಜನ ಮನಸು ಮಾಡಿದರೆ ಏನೆಲ್ಲಾ ಮಾಡಬಹುದು ಎನ್ನುವುದಕ್ಕೆ ಧಾರವಾಡದ ಲಕಮನಹಳ್ಳಿ ಕೆರೆ ಉದಾಹರಣೆಯಾಗಿದ್ದು, ಧಾರವಾಡ ಹೊರವಲಯದ ಲಕಮನಹಳ್ಳಿ ಕೈಗಾರಿಕಾ ಪ್ರದೇಶದ ಬಸವೇಶ್ವರ, ಶಾಖಾಂಬರಿ ನಗರ, ನಂದಿನ ಲೇಔಟ್ ಹಾಗೂ ಗುರುದೇವ ನಗರದ ಜನತೆ ಲಾಕ್‍ಡೌನ್ ಸಮಯದಲ್ಲಿ 1.05 ಎಕರೆ ಕೆರೆಯನ್ನು ನಿರ್ಮಾಣ ಮಾಡಿ ಮೆಚ್ಚುಗೆಗೆ ಪಾತ್ರಾಗಿದ್ದಾರೆ.

    ಈ ಮೂಲಕ ಹಲವು ವರ್ಷಗಳ ತಮ್ಮ ಮಹದಾಸೆಯನ್ನು ತಾವೇ ಸಾಕಾರಗೊಳಿಸಿದ್ದಾರೆ. ಕಳೆದ 8 ವರ್ಷಗಳಿಂದ ಕೆರೆ ನಿರ್ಮಾಣ ಮಾಡುವಂತೆ ಇಲ್ಲಿಯ ಜನರು ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದರು. ಆದರೆ ಯಾರೂ ಕೈ ಜೋಡಿಸಲಿಲ್ಲ. ನಂತರ ಲಾಕ್‍ಡೌನ್ ಸಮಯದಲ್ಲಿ ಕೆರೆ ಜಾಗವನ್ನು ಸ್ವಚ್ಛಗೊಳಿಸಿದ ನಿವಾಸಿಗಳು, ನಾವೇ ಯಾಕೆ ಕೆರೆ ನಿರ್ಮಾಣ ಮಾಡಬಾರದು ಎಂದು ಕೆಲಸ ಪ್ರಾರಂಭಿಸಿದರು.

    ಅದೇ ರೀತಿ 3.5 ಲಕ್ಷ ರೂ.ಹಣವನ್ನು ತಮ್ಮ ಬಡಾವಣೆಯ ಜನರಿಂದ ಸಂಗ್ರಹಿಸಿದರು. ಕೆಲವರು ಹಣದ ಜೊತೆ ಶ್ರಮದಾನ ಮಾಡಿದ್ರೆ, ಇನ್ನು ಕೆಲವರು ಹಣ ಕೊಟ್ಟರು. ಪ್ರತಿಯೊಬ್ಬರೂ ತಮ್ಮ ಶಕ್ತಿಗೆ ತಕ್ಕಂತೆ 2 ಸಾವಿರದಿಂದ 50 ಸಾವಿರ ವರೆಗೆ ಹಣ ನೀಡಿದ್ದಾರೆ. ಕೆರೆ ಒತ್ತುವರಿ ಮಾಡಿದವರನ್ನು ಬಿಡಿಸಿ, ಜನರೇ ಕೆರೆ ನಿರ್ಮಾಣ ಮಾಡಲು ಲಾಕ್‍ಡೌನ್ ಕೂಡಾ ಕಾರಣವಾಯಿತು.

  • ರಾಯಚೂರು ಘನತಾಜ್ಯ ವಿಲೇವಾರಿ ಘಟಕಕ್ಕೆ ಬೆಂಕಿ- ನಗರದಾದ್ಯಂತ ಆವರಿಸಿರುವ ದಟ್ಟ ಹೊಗೆ

    ರಾಯಚೂರು ಘನತಾಜ್ಯ ವಿಲೇವಾರಿ ಘಟಕಕ್ಕೆ ಬೆಂಕಿ- ನಗರದಾದ್ಯಂತ ಆವರಿಸಿರುವ ದಟ್ಟ ಹೊಗೆ

    – ನಗರಸಭೆ ದಿವ್ಯ ನಿರ್ಲಕ್ಷ್ಯಕ್ಕೆ ನಿವಾಸಿಗಳ ಪರದಾಟ
    – ಘನತಾಜ್ಯ ವಿಲೇವಾರಿ ವೈಫಲ್ಯದಿಂದ ಘಟಕದಲ್ಲಿ ಬೆಂಕಿ

    ರಾಯಚೂರು: ದೇಶದ ರಾಜಧಾನಿ ದೆಹಲಿಯನ್ನೇ ಮೀರಿಸುವ ಮಟ್ಟಕ್ಕೆ ರಾಯಚೂರು ನಗರ ಬೆಳೆದಿದೆ. ಆದರೆ ಇದು ಅಭಿವೃದ್ಧಿಯಲ್ಲಲ್ಲಾ ಹೊಗೆಯಲ್ಲಿ ಮಾತ್ರ. ಈಗ ರಾಯಚೂರಿನಲ್ಲಿ ಎಲ್ಲಿ ನೋಡಿದ್ರೂ ಹೊಗೆ ತುಂಬಿಕೊಂಡಿದ್ದು ಜನ ನರಕಯಾತನೆ ಅನುಭವಿಸುತ್ತಿದ್ದಾರೆ. ರಾಯಚೂರು ನಗರ ಶಾಸಕ ಡಾ. ಶಿವರಾಜ್ ಪಾಟೀಲ್ ಮನೆಯ ಹತ್ತಿರದಲ್ಲೇ ಇರುವ ಘನತಾಜ್ಯ ಘಟಕದಿಂದ ಹೊಗೆ ಬರುತ್ತಿದೆ. ನಗರದ ಘನ ತ್ಯಾಜ್ಯ ವಿಲೇವಾರಿ ಘಟಕದ ನಿರ್ವಹಣೆ ವೈಫಲ್ಯ ಇದಕ್ಕೆಲ್ಲಾ ಕಾರಣವಾಗಿದೆ.

    ಸುಮಾರು 10 ಎಕರೆ ಪ್ರದೇಶದಲ್ಲಿ ಕಸಕ್ಕೆ ಬೆಂಕಿ ಬಿದ್ದಿರುವುದರಿಂದ ನಗರದಲ್ಲಿ ಹೊಗೆ ತುಂಬಿದೆ. ನಗರದ ಅಶೋಕ್ ಕುಮಾರ್ ಕಾಲೋನಿ, ಡ್ಯಾಡಿ ಕಾಲೋನಿ, ನಿಜಲಿಂಗಪ್ಪ ಕಾಲೋನಿ ಹಾಗೂ ಯಕ್ಲಾಸಪುರ ಗ್ರಾಮ ಸಂಪೂರ್ಣ ಹೊಗೆಯಿಂದ ಕೂಡಿದೆ. ನಗರಸಭೆ, ನಗರಾಭಿವೃದ್ಧಿ ಕೋಶ, ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಹೊಗೆ ತುಂಬಿದೆ. ಆಗಾಗ ಬೆಂಕಿ ಬೀಳುತ್ತಲೇ ಇದ್ದು ಜನ ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಬಾರಿ ಭಾರೀ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದೆ.

    ನಗರಪ್ರದೇಶ ಹಾಗೂ ಯಕ್ಲಾಸಪುರ ಗ್ರಾಮಕ್ಕೆ ಹತ್ತಿರದಲ್ಲೇ ಇರುವುದರಿಂದ ಘನತಾಜ್ಯ ವಿಲೆವಾರಿ ಘಟಕವನ್ನು ಸ್ಥಳಾಂತರ ಮಾಡಬೇಕು ಎಂದು ಜನ ಆಕ್ರೋಶಗೊಂಡಿದ್ದಾರೆ. ಜನರ ಆಕ್ರೋಶದಿಂದ ಎಚ್ಚೆತ್ತಿರುವ ಅಧಿಕಾರಿಗಳು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಹೊಗೆ ಪ್ರಮಾಣ ಹಾಗೇ ಇರುವುದರಿಂದ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳು ಬೀರುತ್ತಿದ್ದು ಜನರಿಗೆ ಮಾಸ್ಕ್ ಗಳನ್ನು ನೀಡಲು ನಗರಸಭೆ ಮುಂದಾಗಿದೆ. ಆದರೆ ಆಸ್ಪತ್ರೆಗಳ ತಾಜ್ಯ, ಮಾಂಸ ಪದಾರ್ಥಗಳ ತ್ಯಾಜ್ಯ,ಪ್ಲಾಸ್ಟಿಕ್ ಸೇರಿ ನಾನಾ ವಸ್ತುಗಳು ಸುಡುತ್ತಿರುವುದರಿಂದ ಅಪಾಯಕಾರಿ ಹೊಗೆ ಜನರನ್ನ ಬಾಧಿಸುತ್ತಿದೆ.

    ತಾಜ್ಯವನ್ನ ಸಮರ್ಪಕವಾಗಿ ವಿಲೇವಾರಿ ಮಾಡಲಾಗದೇ ನಗರಸಭೆ ಹಾಗೂ ನಗರಾಭಿವೃದ್ಧಿ ಕೋಶದ ಅಧಿಕಾರಿಗಳೆ ಬೆಂಕಿ ಹಚ್ಚಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ತುಂಬಾ ದಿನಗಳಿಂದ ಕಸ ಉಳಿದಿದ್ದರಿಂದ ಬೆಂಕಿ ತಾನಾಗೇ ಹೊತ್ತಿಕೊಂಡಿದೆ ಎಂದು ಸಮಜಾಯಿಷಿ ಹೇಳುತ್ತಿದ್ದಾರೆ.

    ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ಈ ಹಿಂದೆ ಘಟಕವನ್ನು ನವೀಕರಣಗೊಳಿಸಲಾಗಿತ್ತು. ಕ್ಯಾಷೊಟೆಕ್ ಸಂಸ್ಥೆಗೆ ನಿರ್ವಹಣೆಯನ್ನು ನೀಡಲಾಗಿತ್ತು. ಆಗ ಕಸದಿಂದ ರಸ ತೆಗೆಯುವ ಹಾಗೆ ಒಣ ಹಾಗೂ ಹಸಿ ತ್ಯಾಜ್ಯಗಳನ್ನು ಬೇರ್ಪಡಿಸಿ ಗೊಬ್ಬರ ತಯಾರಿಸಲಾಗುತ್ತಿತ್ತು. ಪ್ಲಾಸ್ಟಿಕ್, ಪೇಪರ್ ಪ್ರತ್ಯೇಕಿಸಿ ಇಟ್ಟಿಗೆ ಮಾಡಲಾಗುತ್ತಿತ್ತು. ಜೊತೆಗೆ ಕಸದಿಂದಲೇ ಲಕ್ಷಾಂತರ ರೂ. ಆದಾಯ ಕೂಡ ಬರುತ್ತಿತ್ತು. ಆದರೆ ಈಗ ನಗರಸಭೆ ಹಾಗೂ ನಗರಾಭಿವೃದ್ಧಿ ಕೋಶ ನಿರ್ವಹಣೆ ಆರಂಭಿಸಿದಾಗಿನಿಂದ ಎಲ್ಲವೂ ಹಳ್ಳ ಹಿಡಿದಿದೆ.

    ಪ್ರತಿನಿತ್ಯ ಸುತ್ತಮುತ್ತಲ ಜನ ನರಕಯಾತನೆ ಅನುಭವಿಸುತ್ತಿದ್ದು ಕೂಡಲೇ ಸ್ಥಳಾಂತರ ಮಾಡುವಂತೆ ಒತ್ತಾಯಿಸಿದ್ದಾರೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಮುಂದಾಗಬೇಕು ಅಂತ ಇಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.

  • ಸ್ಲಂ ನಿವಾಸಿಗಳಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಿ ಹುಟ್ಟುಹಬ್ಬ ಆಚರಿಸಿದ ಪ್ರಣಿತಾ

    ಸ್ಲಂ ನಿವಾಸಿಗಳಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಿ ಹುಟ್ಟುಹಬ್ಬ ಆಚರಿಸಿದ ಪ್ರಣಿತಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಪ್ರಣಿತಾ ಸುಭಾಷ್ ಇಂದು ತಮ್ಮ 28ನೇ ವರ್ಷದ ಹುಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ನಗರದ ರಾಗಿ ಗುಡ್ಡ ಸ್ಲಂ ನಿವಾಸಿಗಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಕೊಡಿಸಿದ್ದಾರೆ.

    ಪ್ರಣಿತಾ ಪ್ರತಿ ವರ್ಷ ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಹುಟ್ಟುಹಬ್ಬದಂದು ಪ್ರಣಿತಾ ಸರ್ಕಾರಿ ಶಾಲೆ ದತ್ತು ಪಡೆದುಕೊಂಡು, 5 ಲಕ್ಷ ರೂ. ಹಣವನ್ನು ನೀಡಿದ್ದರು. ಈ ಬಾರಿ ರಾಗಿ ಗುಡ್ಡ ಸ್ಲಂ ನಿವಾಸಿಗಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಕೊಡಿಸಿದ್ದಾರೆ.

    ಪ್ರಣಿತಾ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಲು ‘ಪ್ರಣಿತಾ ಫೌಂಡೇಶನ್ ಸಂಸ್ಥೆ’ ಆರಂಭಿಸಿದ್ದಾರೆ. ಈ ಸಂಸ್ಥೆಯಿಂದ ಮೊದಲ ಬಾರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯವನ್ನು ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ತಂಡ ಮೊದಲ ಬಾರಿಗೆ ಸ್ವತಂತ್ರವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ತಂಡದ ಎಲ್ಲಾ ಸದಸ್ಯರಿಗೆ ಧನ್ಯವಾದ. ಇಂತಹ ಕಾರ್ಯಗಳು ಮತ್ತಷ್ಟು ಮಾಡುವ ಆಸೆ ಇದೆ ಎಂದು ತಿಳಿಸಿದರು.

    ಪ್ರಣಿತಾ ಫೌಂಡೇಶನ್ ಸಂಸ್ಥೆ ಕೈಗೊಳ್ಳುವ ಎಲ್ಲಾ ಸಾಮಾಜಿಕ ಕಾರ್ಯಗಳ ಮಾಹಿತಿ ಒಳಗೊಂಡ www.pranithafoundation.org ವೆಬ್ ಸೈಟ್ ಕೂಡ ಬಿಡುಗಡೆ ಮಾಡಿದ್ದಾರೆ. ಇವರೊಂದಿಗೆ ಕೈಜೋಡಿಸಲು ಇಷ್ಟಪಡುವವರು ವೆಬ್ ಸೈಟ್ ಮೂಲಕ ಸಂಪರ್ಕಿಬಹುದು.

    ದರ್ಶನ್ ಅಭಿನಯದ ‘ಪೊರ್ಕಿ’ ಸಿನಿಮಾದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದ ಪ್ರಣಿತಾ ಆ ಬಳಿಕ ಜರಾಸಂಧ, ಸ್ನೇಹಿತರು, ಬ್ರಹ್ಮ, ಸೆಕೆಂಡ್ ಹ್ಯಾಡ್ ಲವರ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಪ್ರಣಿತಾ ಬಾಲಿವುಡ್‍ಗೂ ಎಂಟ್ರಿ ನೀಡಿದ್ದು, ಅಜಯ್ ದೇವಗನ್ ಅಭಿನಯದ `ಭುಜ್: ದಿ ಪ್ರೈಡ್ ಆಫ್ ಇಂಡಿಯಾ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಂದಹಾಗೇ 2017ರಲ್ಲಿ ಬಿಡುಗಡೆಯಾಗಿದ್ದ `ಮಾಸ್ ಲೀಡರ್’ ಪ್ರಣಿತಾರ ಕೊನೆಯ ಕನ್ನಡ ಸಿನಿಮಾ ಆಗಿದೆ. ಕನ್ನಡಕ್ಕಿಂತಲೂ ಹೆಚ್ಚು ಬೇರೆ ಬೇರೆ ಭಾಷೆಗಳಲ್ಲಿ ನಟಿಸಿರುವ ಅವರು ಕರ್ನಾಟಕದ ಜನರ ಬಗ್ಗೆ ಇರುವ ಸಾಮಾಜಿಕ ಕಳಕಳಿಯನ್ನು ಮಾತ್ರ ಮರೆತಿಲ್ಲ.

  • ರಾಜಧಾನಿಯಲ್ಲಿ ಬಯಲು ಶೌಚಕ್ಕೂ ಬಾಡಿಗೆ -ಮಾವಿನ ತೋಪಿನಲ್ಲಿ ಶೌಚಕ್ಕೆ ತಿಂಗಳಿಗೆ 200 ರೂ.

    ರಾಜಧಾನಿಯಲ್ಲಿ ಬಯಲು ಶೌಚಕ್ಕೂ ಬಾಡಿಗೆ -ಮಾವಿನ ತೋಪಿನಲ್ಲಿ ಶೌಚಕ್ಕೆ ತಿಂಗಳಿಗೆ 200 ರೂ.

    ಬೆಂಗಳೂರು: ಬಯಲು ಶೌಚಾಲಯದಿಂದ ಮುಕ್ತಿ ಎಂದು ಪ್ರಧಾನಿ ಮೋದಿ ಹೇಳುತ್ತಿದ್ದರೆ, ಅದಕ್ಕೆ ಬ್ರೇಕ್ ಮಾತ್ರ ಬಿದ್ದಿಲ್ಲ. ಗ್ರಾಮ ಪ್ರದೇಶಗಳನ್ನು ಬಿಡಿ ನಗರಗಳಲ್ಲೂ ಇನ್ನೂ ಬಯಲು ಶೌಚಾಲಯವನ್ನೇ ಜನ ಅವಲಂಬಿಸಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಸುಮಾರು 200ಕ್ಕೂ ಹೆಚ್ಚಿನ ಕುಟುಂಬಗಳಿಂದ ಬಯಲು ಶೌಚಾಲಯಕ್ಕೆ ಎಂದು 200 ರೂ. ತಿಂಗಳಿಗೆ ಬಾಡಿಗೆ ನೀಡುತ್ತಿದ್ದಾರೆ.

    ಸಿಲಿಕಾನ್ ಸಿಟಿಯಲ್ಲಿ ಸುಮಾರು 200ಕ್ಕೂ ಹೆಚ್ಚು ಕುಟುಂಬಗಳು ಬಯಲು ಶೌಚಾಲಯಕ್ಕೆ ತಿಂಗಳು ಇನ್ನೂರರಂತೆ ಆ ಜಮೀನಿನ ಮಾಲೀಕನಿಗೆ ನೀಡಬೇಕು. ಸುಮಾರು 200ಕ್ಕೂ ಹೆಚ್ಚು ಕುಟುಂಬಗಳು ಕೆಆರ್ ಪುರಂನ ಹೊರಮಾವು ಬಳಿಯ ಬಿಬಿಎಂಪಿಯ ವಾರ್ಡ್ ನಂಬರ್ 26ರ ಚಿಕ್ಕನಂಜುಂಡಪ್ಪ ಲೇಔಟ್ ಬಳಿ ರೇವಣ್ಣ ಎಂಬವರ ಜಾಗದಲ್ಲಿ ಹಲವು ವರ್ಷಗಳಿಂದ ವಾಸವಿವೆ. ದೂರದ ಕರ್ನಾಟಕ ಅಂದರೆ ಗಡಿಭಾಗದ ಈ ಜನ ಕೆಲಸ ಅರಸಿ ಬಂದು ಇಲ್ಲಿ ಜೋಪಡಿಗಳನ್ನು ಹಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಜಾಗದ ಮಾಲೀಕ ರೇವಣ್ಣ ಇವರಿಗೆ ತಮ್ಮ ಸ್ವಂತ ಜಾಗದಲ್ಲಿ ಜೋಪಡಿ ಹಾಕಲು ಬಿಟ್ಟಿದ್ದಾರೆ. ಆದರೆ ಶೌಚಾಲಯಕ್ಕೆ ಪಕ್ಕದ ಕೃಷ್ಣ ಮೂರ್ತಿ ಎಂಬವರ ಮಾವಿನ ತೋಪನ್ನು ಬಳಸಲು ಹೇಳಿದ್ದಾರೆ. ಇದನ್ನು ಲಾಭ ಮಾಡಿಕೊಳ್ಳಲು ಮಾವಿನ ತೋಪಿನ ಮಾಲೀಕ ಸುಮಾರು 1 ವರ್ಷದಿಂದ ಒಂದು ಕುಟುಂಬವೊಂದ್ದಕ್ಕೆ ತಿಂಗಳಿಗೆ 200 ರೂ. ವಸೂಲಿ ಮಾಡುತ್ತಿದ್ದಾನೆ.

    ಈ ಬಗ್ಗೆ ಜೋಪಡಿ ನಿವಾಸಿಗಳನ್ನು ಪ್ರಶ್ನಿಸಿದಾಗ ಅವರು ಹೇಳಿದ್ದು ಹೀಗೆ;
    ಪಬ್ಲಿಕ್ ಟಿವಿ: ಜಮೀನಿನ ಮಾಲೀಕರೇ ದುಡ್ಡು ಕೊಡಿ ಎಂದು ಬಂದು ಕೇಳಿದ್ರಾ?
    ಜೋಪಡಿ ವಾಸಿ: ಇಲ್ಲ ಅವರೇ ಬಂದು ಮಾತಾಡಿದ್ದು, ಒಂದು ಜೋಪಡಿಗೆ 200 ರೂ. ಕೊಡಿ, ಇಲ್ಲ ಖಾಲಿ ಮಾಡ್ಕೊಂಡ್ ಹೋಗಿ. ಖಾಲಿ ಮಾಡ್ಕೊಂಡ್ ಹೋದ್ರೆ ಎಲ್ಲಿ ಸರ್ ಹೋಗೋದು. ಅಷ್ಟೊಂದು ಬಾಡಿಗೆ ಕೊಟ್ಟು. ಅದಕ್ಕೆ 200 ರೂ. ಕೊಟ್ಟು ಸುಮ್ಮನಾಗ್ತೀವಿ.
    ಪಬ್ಲಿಕ್ ಟಿವಿ: ಹೆಣ್ಣು ಮಕ್ಕಳು ಇರ್ತಾರೆ ಹೇಂಗ್ ಬಯಲು ಶೌಚ ಯೂಸ್ ಮಾಡ್ತೀರಿ.
    ಜೋಪಡಿ ವಾಸಿ: ತೋಪಲ್ಲಿ ಒಂದು ಕಡೆ ಅವರು ಹೋಗ್ತಾರೆ, ಮತ್ತೊಂದು ಕಡೆ ನಾವ್ ಹೋಗ್ತಿವಿ. ಏನ್ ಮಾಡೋದು ಸರ್.
    ಪಬ್ಲಿಕ್ ಟಿವಿ: 200 ರೂ. ತಗೊಂಡು ಕ್ಲೀನ್ ಮಾಡ್ತಾರಂತ. ಮಣ್ಣು ಏನಾದ್ರೂ ಹಾಕ್ತಾರ.
    ಜೋಪಡಿ ವಾಸಿ: ಏನೂ ಮಾಡಲ್ಲ ಸರ್. ಸುಮ್ನೆ ಬಾಡಿಗೆ ಅಂತ 200 ರೂ. ತಗೋತಾರೆ.
    ಪಬ್ಲಿಕ್ ಟಿವಿ: ಏನೇನ್ ಕೆಲಸ ಮಾಡ್ತೀರ?
    ಜೋಪಡಿ ವಾಸಿ: ಗಾರೆ ಕೆಲಸ, ಸೆಂಟ್ರಿಂಗ್ ಕೆಲಸ, ಪ್ಲಂಬರ್, ಡ್ರೈವರ್ ಕೆಲಸ ಮಾಡ್ತೀವಿ.
    ಪಬ್ಲಿಕ್ ಟಿವಿ: ಯಾವ ಊರಿನವರು?
    ಜೋಪಡಿ ವಾಸಿ: ಮಂತ್ರಾಲಯ, ಬಳ್ಳಾರಿ ಕಡೆಯವರಿದ್ದೀವಿ.

    ಜಾಗದ ಮಾಲೀಕ ಕೃಷ್ಣ ಮೂರ್ತಿ, ನೀವು ಶೌಚಕ್ಕೆ ನಮ್ಮ ತೋಟವನ್ನು ಬಳಸುತ್ತಿದ್ದೀರಿ ಜೆಸಿಬಿ ಮೂಲಕ ಮಣ್ಣು ಬದಲಿಸಿ ಸ್ವಚ್ಛಗೊಳಿಸಬೇಕಾಗುತ್ತೆ ಎಂದು 200 ರೂ. ಫಿಕ್ಸ್ ಮಾಡಿದ್ದಾರೆ. ಇನ್ನೇನ್ ಮಾತನಾಡುವುದಕ್ಕೆ ಆಗುತ್ತೆ, ಹೇಗೋ ಉಳಿಯಲು ಜಾಗ ಇದ್ಯಲ್ಲ ಎಂದು ಅಲ್ಲಿನ ವಾಸಿಗಳು ದುಡ್ಡು ನೀಡುತ್ತಾ ಬಂದಿದ್ದಾರೆ. ಮಹಿಳೆಯರು ಒಂದು ಭಾಗಕ್ಕೆ, ಪುರುಷರು ಮತ್ತೊಂದು ಭಾಗದಲ್ಲಿ ಶೌಚಕ್ಕೆ ಹೋಗುತ್ತೇವೆ. ಏನೂ ತೊಂದರೆ ಇಲ್ಲ ಎಂದು ಇಲ್ಲಿನ ನಿವಾಸಿಗಳು ಹೇಳುತ್ತಿದ್ದಾರೆ. ಆದರೆ ಬಯಲು ಶೌಚಾಲಯ ತಪ್ಪು ಎಂಬುದು ಅವರಿಗೆ ಗೊತ್ತಾಗುತ್ತಿಲ್ಲ.

  • ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ: ಭೇಟಿ ಮಾಡಲು ಬಂದ ಗದಗ ಶಾಸಕರಿಗೆ ಘೇರಾವ್

    ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ: ಭೇಟಿ ಮಾಡಲು ಬಂದ ಗದಗ ಶಾಸಕರಿಗೆ ಘೇರಾವ್

    ಗದಗ: ತಡರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಗದಗ ಹಾಗೂ ಬೆಟಗೇರಿಯ ಅವಳಿ ನಗರಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಎಚ್.ಕೆ.ಪಾಟೀಲ್‍ರಿಗೆ ಸ್ಥಳೀಯ ನಿವಾಸಿಗಳು ಘೇರಾವ್ ಹಾಕಿದ್ದಾರೆ.

    ತಡರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಬೆಟಗೇರಿಯ ವಾಂಬೆ ಬಡಾವಣೆಯ ಮನೆಗಳಿಗೆ ರಾಜಕಾಲುವೆ ನೀರು ಅಪಾರ ಪ್ರಮಾಣದಲ್ಲಿ ನುಗ್ಗಿದೆ. ಇದರಿಂದಾಗಿ ಬಡಾವಣೆಯ ಜನ ತತ್ತರಿಸಿ ಹೋಗಿದ್ದಾರೆ. ಮನೆಗೆ ನೀರು ನುಗ್ಗಿದ್ದರಿಂದ ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಹಾಳಾಗಿ ಹೋಗಿವೆ. ಅಲ್ಲದೆ ಮಹಿಳೆಯರು ಮಕ್ಕಳು ಬೀದಿಗೆ ಬಿದ್ದಿದ್ದಾರೆ.

    ರಾತ್ರಿಯಿಡಿ ನಿವಾಸಿಗಳು ಕೊಳಚೆ ನೀರನ್ನು ಹೊರ ಹಾಕುವಲ್ಲಿ ನಿರತರಾಗಿದ್ದರು. ವಿಷಯ ತಿಳಿಯುತ್ತಿದ್ದಂತೆ ಶಾಸಕ ಎಚ್.ಕೆ.ಪಾಟೀಲ್ ಅವರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ಸ್ಥಳೀಯರು ಘೇರಾವ್ ಹಾಕಿದ್ದಾರೆ. ಅಲ್ಲದೇ ಕೂಡಲೇ ಸಮಸ್ಯೆಗಳನ್ನು ಪರಿಹರಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ನಗರಸಭೆಗೆ ಮಾಹಿತಿ ನೀಡಿದ್ದರೂ ಕೂಡ ಇಲ್ಲಿಯವರೆಗೂ ಯಾವೊಬ್ಬ ಅಧಿಕಾರಿಯು ಸ್ಥಳಕ್ಕೆ ಹಾಜರಾಗಿಲ್ಲ. ಕೂಡಲೇ ಸಮಸ್ಯೆಗಳನ್ನು ಬಗೆಹರಿಸುವಂತೆ ಶಾಸಕರಿಗೆ ಇದೇ ವೇಳೆ ಸ್ಥಳೀಯ ನಿವಾಸಿಗಳು ತಾಕೀತು ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv