Tag: ನಿರ್ಮಲಾ ಸೀತಾರಮನ್

  • ಸಮಸ್ಯೆ ಆಲಿಸಲು ಬಂದ ನಿರ್ಮಲಾ- ಮನೆಗೆ ಕರ್ಕೊಂಡು ಹೋದ ಮಹಿಳೆಯರು

    ಸಮಸ್ಯೆ ಆಲಿಸಲು ಬಂದ ನಿರ್ಮಲಾ- ಮನೆಗೆ ಕರ್ಕೊಂಡು ಹೋದ ಮಹಿಳೆಯರು

    ಬೆಳಗಾವಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಳಗಾವಿ ಜಿಲ್ಲೆಯ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಸ್ಥಳೀಯರು ನಮ್ಮ ಮನೆಗೆ ಬನ್ನಿ ಮೇಡಂ, ನಮ್ಮ ಮನೆಗೆ ಬನ್ನಿ ಎಂದು ಸಚಿವೆಯನ್ನು ತಮ್ಮ ಜೊತೆಗೆ ಕರೆದುಕೊಂಡು ಹೋಗಿದ್ದಾರೆ.

    ನಿರ್ಮಲಾ ಅವರು ಧಾಮನೆ ರೋಡಿನಲ್ಲಿ ಹಾನಿಯಾದ ಜಮೀನು ವೀಕ್ಷಣೆ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ನೇಕಾರ ಕಾಲೋನಿಯ ಮಹಿಳೆಯರು, ಮನೆಗಳು ಮುಳುಗಿವೆ ನಮ್ಮ ಮನೆಗೆ ಬನ್ನಿ ಮೇಡಂ, ನಮ್ಮ ಮನೆಗೆ ಬನ್ನಿ ಎಂದು ಕೆಸರಿನಲ್ಲಿಯೇ ನಿರ್ಮಲಾ ಅವರನ್ನು ಕರೆದುಕೊಂಡು ಹೋಗಿದ್ದಾರೆ.

    ನೇಕಾರ ಕಾಲೋನಿಯಲ್ಲಿ ಮನೆಯ ಒಳಗಡೆ ಹೋಗಿ ನಿರ್ಮಲಾ ಅವರು ಪರಿಸ್ಥಿತಿ ಅವಲೋಕಿಸಿದ್ದಾರೆ. ಕಾಲೋನಿಯ ಬಹುತೇಕ ರಸ್ತೆ ಕೇಸರಿನಿಂದ ಆವರಿಸಿದ್ದು ಅದರಲ್ಲೇ ಸಚಿವೆ ಕೇಸರಿಲ್ಲದ ಕಡೆ ಹೆಜ್ಜೆ ಇಟ್ಟಿದ್ದಾರೆ. ಈ ವೇಳೆ ಸ್ಥಳೀಯರು ಭಾರತ ಮಾತಾಕಿ ಜೈ ಎಂದು ಘೋಷಣೆ ಕೂಗಿದ್ದಾರೆ.

    ಬಳಿಕ ಮಹಿಳೆಯರು ಮನೆ ಕಳೆದುಕೊಂಡು ನಾವು ಬೀದಿಗೆ ಬಂದಿದ್ದೇವೆ. ನಮ್ಮನ್ನು ಉಳಿಸಿ ಎಂದು ನಿರ್ಮಲಾ ಅವರ ಎದುರು ಕಣ್ಣೀರಿಟ್ಟಿದ್ದಾರೆ. ಮಹಿಳೆಯರು ಸಮಸ್ಯೆ ಆಲಿಸಿದ ನಂತರ ನಿರ್ಮಲಾ ಅವರು, ಎಲ್ಲವನ್ನೂ ಸರಿ ಪಡಿಸುತ್ತೇವೆ. ನಿಮ್ಮ ಜತೆಗೆ ನಾವಿದ್ದೇವೆ ಎಂದು ಭರವಸೆ ನೀಡಿದ್ದಾರೆ.

    ನಿರ್ಮಲಾ ಅವರು ಸಾಯಿಭವನ, ಮರಾಠಾ ಕಾಲೋನಿ, ಧಾಮಣೆ ರೋಡ್ ಸೇರಿದಂತೆ ಹಲವು ಕಡೆ ಭೇಟಿ ನೀಡಿದ್ದಾರೆ. ಈ ವೇಳೆ ನಿರ್ಮಲಾ ಅವರು ಪ್ರವಾಹದ ಪರಿಸ್ಥಿತಿ ಈಗ ಹೇಗಿದೆ, ಮತ್ತೆ ಏನಾದರೂ ಸೇನಾ ಹೆಲಿಕಾಪ್ಟರ್ ಸೇರಿದಂತೆ ಬೇರೆ ಯಾವುದಾದರೂ ಸಹಾಯ ಬೇಕಾ ಎಂದು ಜಿಲ್ಲಾಧಿಕಾರಿಯನ್ನು ಕೇಳಿದ್ದಾರೆ. ಇದೇ ವೇಳೆ ಕೇಂದ್ರ ಸಚಿವ ಸುರೇಶ್ ಅಂಗಡಿ ಬೆಳಗಾವಿ ನಗರ ಸೇರಿದಂತೆ ತಾಲೂಕುವಾರು ಹಾನಿಯಾದ ಕುರಿತು ಸಚಿವೆಗೆ ಮಾಹಿತಿ ನೀಡಿದ್ದಾರೆ.

    ನಿರ್ಮಲಾ ಸೀತಾರಮನ್ ಅವರು ಸಚಿವ ಸುರೇಶ್ ಅಂಗಡಿ, ಡಿಸಿ, ಎಸ್.ಪಿ ಹಾಗೂ ಸ್ಥಳೀಯ ಶಾಸಕರೊಡನೆ ಬೆಳಗಾವಿಯ ವಿಮಾನ ನಿಲ್ದಾಣದಲ್ಲಿಯೇ ಸಭೆ ನಡೆಸಿದ್ದಾರೆ. ಅಲ್ಲದೆ ನಿರ್ಮಲಾ ಅವರು ಇಲ್ಲಿಯವರೆಗೂ ಜಿಲ್ಲೆಯಾದ್ಯಂತ ಆಗಿರುವ ಮಳೆ ಹಾನಿ ಕುರಿತು ಡಿಸಿಯಿಂದ ಮಾಹಿತಿ ಪಡೆಯುತ್ತಿದ್ದಾರೆ.

  • ಇಂದು ಶೋಭಾ ಕರಂದ್ಲಾಜೆ ನಾಮಪತ್ರ ಸಲ್ಲಿಕೆ- ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸಾಥ್

    ಇಂದು ಶೋಭಾ ಕರಂದ್ಲಾಜೆ ನಾಮಪತ್ರ ಸಲ್ಲಿಕೆ- ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸಾಥ್

    ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಇಂದು ಮಧ್ಯಾಹ್ನ 12.15 ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಸುವ ಸಂದರ್ಭ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಜೊತೆಯಾಗಲಿದ್ದಾರೆ.

    ಕಳೆದ ರಾತ್ರಿ 1 ಗಂಟೆಗೆ ಉಡುಪಿಗೆ ಆಗಮಿಸಿರುವ ನಿರ್ಮಲಾ ಸೀತಾರಾಮನ್ ಮಣಿಪಾಲದ ಕಂಟ್ರಿ ಇನ್ ಹೋಟೆಲ್‍ನಲ್ಲಿ ತಂಗಿದ್ದಾರೆ. ಉಡುಪಿ ಕೃಷ್ಣ ಮಠ ಭೇಟಿ ನೀಡಿ ಪರ್ಯಾಯ ಶ್ರೀಪಲಿಮಾರು ವಿದ್ಯಾಧೀಶ ಶ್ರೀಪಾದರ ಜೊತೆ ಮಾತುಕತೆ ನಡೆಸಲಿದ್ದಾರೆ.

    ಬಳಿಕ ಮೀನುಗಾರ ಮುಖಂಡರ ಜೊತೆ ಚರ್ಚಿಸಿ, ಕಣ್ಮರೆಯಾದ ಮೀನುಗಾರರ ಕುಟುಂಬವನ್ನು ಭೇಟಿ ಮಾಡಿ ನೌಕಾಸೇನೆ ನಡೆಸಿರುವ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಲಿದ್ದಾರೆ. ಮಲ್ಪೆಯಲ್ಲಿ ಇರುವ ಎರಡು ಕುಟುಂಬಗಳಿಗೆ ಧೈರ್ಯ ತುಂಬಲಿದ್ದಾರೆ.

    ನಂತರ ಕಡಿಯಾಳಿಯಲ್ಲಿರುವ ಬಿಜೆಪಿ ಕಚೇರಿ ಸಮೀಪ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ. ಮಣಿಪಾಲದಲ್ಲಿ ಶೋಭಾ ಕರಂದ್ಲಾಜೆ ನಾಮಪತ್ರ ಸಲ್ಲಿಸುವ ವೇಳೆ ನಿರ್ಮಲಾ ಸೀತಾರಾಮನ್ ಜೊತೆಗಿರಲಿದ್ದಾರೆ.