Tag: ನಿರ್ಭಯಾ ಗ್ಯಾಂಗ್ ರೇಪ್

  • ನಿರ್ಭಯಾ ಗ್ಯಾಂಗ್‍ರೇಪ್: ಅಪರಾಧಿಗಳಿಗೆ ಗಲ್ಲು ಕಾಯಂ

    ನಿರ್ಭಯಾ ಗ್ಯಾಂಗ್‍ರೇಪ್: ಅಪರಾಧಿಗಳಿಗೆ ಗಲ್ಲು ಕಾಯಂ

    ನವದೆಹಲಿ: ದೇಶದೆಲ್ಲೆಡೆ ತೀವ್ರ ಚರ್ಚೆ ಮತ್ತು ಭಾರೀ ಪ್ರತಿಭಟನೆಗೆ ಕಾರಣವಾಗಿದ್ದ ದೆಹಲಿಯ ನಿರ್ಭಯಾ ಗ್ಯಾಂಗ್‍ರೇಪ್ ಮತ್ತು ಕೊಲೆ ಪ್ರಕರಣದ ನಾಲ್ಕು ಮಂದಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಕಾಯಂ ಆಗಿದೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.

    2013ರಲ್ಲಿ ದೆಹಲಿಯ ವಿಚಾರಣಾಧೀನ ನ್ಯಾಯಾಲಯ ಗಲ್ಲುಶಿಕ್ಷೆ ನೀಡಿ ಆದೇಶ ನೀಡಿತ್ತು. 2014ರಲ್ಲಿ ದೆಹಲಿ ಹೈಕೋರ್ಟ್ ಕೇಳ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿತ್ತು. ಆದರೆ ಆರೋಪಿಗಳಾದ ಅಕ್ಷಯ್ ಠಾಕೂರ್, ವಿನಯ್ ಶರ್ಮಾ, ಪವನ್ ಗುಪ್ತಾ ಹಾಗೂ ಮುಕೇಶ್ ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.

    ಇಂದು ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಅಶೋಕ್ ಭೂಷಣ್ ಹಾಗೂ ಆರ್ ಭಾನುಮತಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಗಲ್ಲು ಕಾಯಂಗೊಳಿಸಿ ಐತಿಹಾಸಿಕ ತೀರ್ಪು ಪ್ರಕಟಿಸಿದೆ.

    ಏನಿದು ಪ್ರಕರಣ?
    2012ರ ಡಿಸೆಂಬರ್ 16ರಂದು ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ತನ್ನ ಸ್ನೇಹಿತನ ಜೊತೆ ಸಿನಿಮಾ ನೋಡಿ ಬರುತ್ತಿದ್ದಾಗ ಡ್ರಾಪ್ ನೆಪದಲ್ಲಿ ಕಾಮುಕರು ಬಸ್ ನಲ್ಲಿ ಹತ್ತಿಸಿದ್ದರು. ಬಳಿಕ ಬಸ್‍ನಲ್ಲೇ ಸಾಮೂಹಿಕ ಅತ್ಯಾಚಾರ ನಡೆಸಿ, ಗುಪ್ತಾಂಗಕ್ಕೆ ರಾಡ್‍ನಿಂದ ಚುಚ್ಚಿದ್ದರು. ತೀವ್ರ ಅಸ್ವಸ್ಥಗೊಂಡ ಯುವತಿಯನ್ನು ಬಸ್‍ನಿಂದ ಕೆಳಗೆ ಎಸೆದಿದ್ದರು. ಆಕೆಯ ಜೊತೆಗಿದ್ದ ಸ್ನೇಹಿತನನ್ನೂ ಬಸ್‍ನಿಂದ ಕೆಳಗೆ ಎಸೆದು ಆರೋಪಿಗಳು ಪರಾರಿಯಾಗಿದ್ದರು. ದೆಹಲಿಯ ಆಸ್ಪತ್ರೆಯ ಬಳಿಕ ಹೆಚ್ಚಿನ ಚಿಕಿತ್ಸೆಗೆ ನಿರ್ಭಯಾಳನ್ನು ಸಿಂಗಾಪುರಕ್ಕೆ ಕಳುಹಿಸಿಕೊಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಡಿಸೆಂಬರ್ 29 ರಂದು ನಿರ್ಭಯಾ ಸಾವನ್ನಪ್ಪಿದ್ದಳು.

    ಅತ್ಯಾಚಾರ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ರಾಮ್ ಸಿಂಗ್ 2013ರಲ್ಲಿ ತಿಹಾರ್ ಜೈಲಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರೆ, ವಿನಯ್ ಶರ್ಮಾ 2016ರ ಆಗಸ್ಟ್ ನಲ್ಲಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದ. ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಇನ್ನೊಬ್ಬ ಮೂರು ವರ್ಷಗಳ ಕಾಲ ಬಾಲಮಂದಿರದಲ್ಲಿ ಕಳೆದ ನಂತರ ಡಿಸೆಂಬರ್ 2015ರಲ್ಲಿ ಬಿಡುಗಡೆಯಾಗಿದ್ದ.

    ಈ ಪ್ರಕರಣದ ಬಳಿಕ ಕೇಂದ್ರ ಸರ್ಕಾರ ಬಾಲಾಪರಾಧ ಕಾಯ್ದೆಗೆ ತಿದ್ದುಪಡಿ ತಂದಿದ್ದು ಹದಿನಾರರಿಂದ ಹದಿನೆಂಟು ವರ್ಷದ ಮಧ್ಯೆ ಇರುವವರು ಕ್ರೂರ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡರೆ ಅವರನ್ನು ವಯಸ್ಕರು ಎಂದೇ ಪರಿಗಣಿಸಲಾಗುತ್ತದೆ.