Tag: ನಿರ್ಭಯಾ ಕೇಸ್

  • ತೀರ್ಪು ಮರುಪರಿಶೀಲಿಸುವ ಅಗತ್ಯವೇ ಇಲ್ಲ- ನಿರ್ಭಯಾ ಗ್ಯಾಂಗ್ ರೇಪ್‍ಗೈದ ಕಾಮುಕರಿಗೆ ಗಲ್ಲು ಕಾಯಂ

    ತೀರ್ಪು ಮರುಪರಿಶೀಲಿಸುವ ಅಗತ್ಯವೇ ಇಲ್ಲ- ನಿರ್ಭಯಾ ಗ್ಯಾಂಗ್ ರೇಪ್‍ಗೈದ ಕಾಮುಕರಿಗೆ ಗಲ್ಲು ಕಾಯಂ

    ನವದೆಹಲಿ: ದೇಶದೆಲ್ಲೆಡೆ ತೀವ್ರ ಚರ್ಚೆ ಮತ್ತು ಭಾರೀ ಪ್ರತಿಭಟನೆಗೆ ಕಾರಣವಾಗಿದ್ದ ದೆಹಲಿಯ ನಿರ್ಭಯಾ ಗ್ಯಾಂಗ್‍ರೇಪ್ ಮತ್ತು ಕೊಲೆ ಪ್ರಕರಣದ ನಾಲ್ಕು ಮಂದಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಕಾಯಂ ಆಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಪ್ರಕಟಗೊಂಡ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಪುನರ್ ಪರಿಶೀಲನಾ ಅರ್ಜಿ ವಜಾಗೊಂಡಿದ್ದು ಗಲ್ಲು ಶಿಕ್ಷೆಯನ್ನು ಕಾಯಂಗೊಳಿಸಿ ಸುಪ್ರೀಂ ಕೋರ್ಟ್ ಇಂದು ಆದೇಶ ಪ್ರಕಟಿಸಿದೆ.

    ಈ ಹಿಂದೆ ನೀಡಿದ ಆದೇಶವನ್ನು ಪುನರ್ ಪರಿಶೀಲನೆ ನಡೆಸುವ ಅಗತ್ಯವೇ ಇಲ್ಲ ಎಂದು ಮುಖ್ಯ ನ್ಯಾ. ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಅಭಿಪ್ರಾಯಪಟ್ಟು ಅಪರಾಧಿಗಳು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು.

    ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಹೈ ಕೋರ್ಟ್ ನೀಡಿದ್ದ ಆದೇಶವನ್ನು ಎತ್ತಿ ಹಿಡಿದು ಗಲ್ಲು ಶಿಕ್ಷೆಯನ್ನು ಕಾಯಂಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಅಪರಾಧಿಗಳಾದ ಮುಕೇಶ್(29), ಪವನ್ ಗುಪ್ತಾ(22), ವಿನಯ್ ಶರ್ಮಾ(23) ತೀರ್ಪನ್ನು ಪುನರ್ ಪರಿಶೀಲಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾದ ಅಕ್ಷಯ್ ಕುಮಾರ್(31) ಪುನರ್ ಪರಿಶೀಲನಾ ಅರ್ಜಿಯನ್ನು ಸಲ್ಲಿಸಿರಲಿಲ್ಲ.

    2013ರಲ್ಲಿ ದೆಹಲಿಯ ವಿಚಾರಣಾಧೀನ ನ್ಯಾಯಾಲಯ ಗಲ್ಲುಶಿಕ್ಷೆ ನೀಡಿ ಆದೇಶ ನೀಡಿತ್ತು. 2014ರಲ್ಲಿ ದೆಹಲಿ ಹೈಕೋರ್ಟ್ ಕೇಳ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿತ್ತು. ಆದರೆ ಆರೋಪಿಗಳಾದ ಅಕ್ಷಯ್ ಠಾಕೂರ್, ವಿನಯ್ ಶರ್ಮಾ, ಪವನ್ ಗುಪ್ತಾ ಹಾಗೂ ಮುಕೇಶ್ ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. 2017ರ ಮೇ 5ರಂದು ಸನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಅಶೋಕ್ ಭೂಷಣ್ ಹಾಗೂ ಆರ್ ಭಾನುಮತಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಅಪರಾಧಿಗಳಿಗೆ ಗಲ್ಲು ಕಾಯಂಗೊಳಿಸಿ ಐತಿಹಾಸಿಕ ತೀರ್ಪು ಪ್ರಕಟಿಸಿತ್ತು.

    ಮುಂದೇನು?
    ಅಪರಾಧಿಗಳಿಗೆ ಮುಂದೆ ಬದುಕುವ ಎಲ್ಲ ಬಾಗಿಲಿಗಳು ಮುಗಿದಿದ್ದು ಕೊನೆಯದಾಗಿ ರಾಷ್ಟ್ರಪತಿಗಳಿಗೆ ಮನವಿ ಮಾಡಿ ಗಲ್ಲು ಶಿಕ್ಷೆಯ ಬದಲಿಗೆ ಜೀವವಾಧಿ ಶಿಕ್ಷೆ ನೀಡುವಂತೆ ಮನವಿ ಮಾಡಿಕೊಳ್ಳಬಹುದು. ಈ ವೇಳೆ ಅರ್ಜಿಯನ್ನು ಪುರಸ್ಕರಿಸಿ ಕ್ಷಮಾದಾನ ನೀಡಿದರೆ ಅಪರಾಧಿಗಳು ಗಲ್ಲು ಕುಣಿಕೆಯಿಂದ ಪಾರಾಗಬಹುದು.

    ಏನಿದು ಪ್ರಕರಣ?
    2012ರ ಡಿಸೆಂಬರ್ 16ರಂದು ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ತನ್ನ ಸ್ನೇಹಿತನ ಜೊತೆ ಸಿನಿಮಾ ನೋಡಿ ಬರುತ್ತಿದ್ದಾಗ ಡ್ರಾಪ್ ನೆಪದಲ್ಲಿ ಕಾಮುಕರು ಬಸ್ ನಲ್ಲಿ ಹತ್ತಿಸಿದ್ದರು. ಬಳಿಕ ಬಸ್‍ನಲ್ಲೇ ಸಾಮೂಹಿಕ ಅತ್ಯಾಚಾರ ನಡೆಸಿ, ಗುಪ್ತಾಂಗಕ್ಕೆ ರಾಡ್‍ನಿಂದ ಚುಚ್ಚಿದ್ದರು. ತೀವ್ರ ಅಸ್ವಸ್ಥಗೊಂಡ ಯುವತಿಯನ್ನು ಬಸ್‍ನಿಂದ ಕೆಳಗೆ ಎಸೆದಿದ್ದರು. ಆಕೆಯ ಜೊತೆಗಿದ್ದ ಸ್ನೇಹಿತನನ್ನೂ ಬಸ್‍ನಿಂದ ಕೆಳಗೆ ಎಸೆದು ಆರೋಪಿಗಳು ಪರಾರಿಯಾಗಿದ್ದರು. ದೆಹಲಿಯ ಆಸ್ಪತ್ರೆಯ ಬಳಿಕ ಹೆಚ್ಚಿನ ಚಿಕಿತ್ಸೆಗೆ ನಿರ್ಭಯಾಳನ್ನು ಸಿಂಗಾಪುರಕ್ಕೆ ಕಳುಹಿಸಿಕೊಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಡಿಸೆಂಬರ್ 29 ರಂದು ನಿರ್ಭಯಾ ಸಾವನ್ನಪ್ಪಿದ್ದಳು.

    ಅತ್ಯಾಚಾರ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ರಾಮ್ ಸಿಂಗ್ 2013ರಲ್ಲಿ ತಿಹಾರ್ ಜೈಲಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರೆ, ವಿನಯ್ ಶರ್ಮಾ 2016ರ ಆಗಸ್ಟ್ ನಲ್ಲಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದ. ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಇನ್ನೊಬ್ಬ ಮೂರು ವರ್ಷಗಳ ಕಾಲ ಬಾಲಮಂದಿರದಲ್ಲಿ ಕಳೆದ ನಂತರ ಡಿಸೆಂಬರ್ 2015ರಲ್ಲಿ ಬಿಡುಗಡೆಯಾಗಿದ್ದ.

    ಈ ಪ್ರಕರಣದ ಬಳಿಕ ಕೇಂದ್ರ ಸರ್ಕಾರ ಬಾಲಾಪರಾಧ ಕಾಯ್ದೆಗೆ ತಿದ್ದುಪಡಿ ತಂದಿದ್ದು ಹದಿನಾರರಿಂದ ಹದಿನೆಂಟು ವರ್ಷದ ಮಧ್ಯೆ ಇರುವವರು ಕ್ರೂರ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡರೆ ಅವರನ್ನು ವಯಸ್ಕರು ಎಂದೇ ಪರಿಗಣಿಸಲಾಗುತ್ತದೆ.

  • ಬೆಂಗ್ಳೂರಲ್ಲಿ ನಿರ್ಭಯಾ ಕೇಸ್‍ಗಿಂತ ಭೀಕರ ಪ್ರಕರಣ ಬೆಳಕಿಗೆ- 5 ವರ್ಷದ ಮಗುವಿನ ಮೇಲೆ ಮನೆ ಮಾಲೀಕನಿಂದ ಅತ್ಯಾಚಾರ, ಮಗು ಸಾವು

    ಬೆಂಗ್ಳೂರಲ್ಲಿ ನಿರ್ಭಯಾ ಕೇಸ್‍ಗಿಂತ ಭೀಕರ ಪ್ರಕರಣ ಬೆಳಕಿಗೆ- 5 ವರ್ಷದ ಮಗುವಿನ ಮೇಲೆ ಮನೆ ಮಾಲೀಕನಿಂದ ಅತ್ಯಾಚಾರ, ಮಗು ಸಾವು

    ಬೆಂಗಳೂರು: ನಗರದಲ್ಲಿ ಇಡೀ ಮಾನವ ಕುಲವೇ ತಲೆ ತಗ್ಗಿಸುವಂತಹ ಪೈಶಾಚಿಕ ಕೃತ್ಯವೊಂದು ನಡೆದಿದೆ. ದೆಹಲಿ ನಿರ್ಭಯಾ ಕೇಸ್ ಗಿಂತ ಭೀಕರ ಪ್ರಕರಣ ಬಯಲಾಗಿದೆ. ಐದು ವರ್ಷದ ಮಗುವಿನ ಮೇಲೆ ಕಾಮುಕ ಮನೆ ಮಾಲಿಕ ಅತ್ಯಾಚಾರವೆಸಗಿದ್ದು, ಮಗು ಈಗ ಸಾವನ್ನಪ್ಪಿದೆ.

    ಆಗಸ್ಟ್ 17 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮನೆ ಮಾಲೀಕ ಮಲ್ಲಿಕಾರ್ಜುನ ಈ ನೀಚ ಕೃತ್ಯವೆಸಗಿದ ಆರೋಪಿ. ಮನೆಯಲ್ಲಿ ಯಾರೂ ಇಲ್ಲದ ವೇಳೆ ತಿಂಡಿ ಕೊಡಿಸುವ ನೆಪದಲ್ಲಿ ಮಗುವನ್ನ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ಘಟನೆಯಿಂದ ಶಾಕ್‍ಗೆ ಒಳಗಾಗಿದ್ದ ಮಗುವನ್ನ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ.

    ಮೃತ ಮಗುವಿನ ತಾಯಿ ಭಾಗಮ್ಯ ಆರೋಪಿ ಮಲ್ಲಿಕಾರ್ಜುನ ಹಾಗೂ ಚಂದನ ಎಂಬವರ ಬಳಿ ಮಗುವನ್ನು ಬಿಟ್ಟಿದ್ದರು. ಚಂದನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಆರೋಪಿ ಮಲ್ಲಿಕಾರ್ಜುನ ನಿತ್ಯ ಮಗುವಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಚಂದನ ವೃತ್ತಿಯಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದು, ಈಕೆಯ ಜೊತೆಗಿದ್ದ ಮಲ್ಲಿಕಾರ್ಜುನ್ ಪಿಂಪ್ ಕೆಲಸ ಮಾಡ್ತಿದ್ದ. ಮಗು ಬೇಡವಾಗಿದ್ದ ಹಿನ್ನೆಲೆ ಯಾರಾದ್ರೂ ಸಾಕಿಕೊಳ್ಳಲಿ ಅಂತಾ ಭಾಗ್ಯಮ್ಮ ಮಗುವನ್ನ ಮಲ್ಲಿಕಾರ್ಜುನ್‍ಗೆ ನೀಡಿದ್ದರು. ಆದ್ರೆ ಮಲ್ಲಿಕಾರ್ಜುನ್ ಮಗುವಿಗೆ ಕಳೆದ ಎರಡು ತಿಂಗಳಿಂದ ಸರಿಯಾಗಿ ಊಟ ನೀಡ್ತಿರಲಿಲ್ಲ. ಹೀಗಾಗಿ ಮಗು ಅಲ್ಸರ್‍ನಿಂದ ಸಹ ಬಳಲುತ್ತಿತ್ತು. ಮೊದಲೇ ಅಲ್ಸರ್‍ನಿಂದ ಬಳುತ್ತಿದ್ದ ಮಗು ಮೇಲೆ ಅತ್ಯಾಚಾರ ನಡೆದು ಆಕೆಯ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು.

    ಗುಪ್ತಾಂಗಕ್ಕೆ ರಾಡ್ ಹಾಕಿದ್ದ ಪಾಪಿ: ಮಲ್ಲಿಕಾರ್ಜುನ ಮಗುವಿನ ಮೇಲೆ ಮೃಗದಂತೆ ವರ್ತಿಸಿದ್ದಾನೆ. ಮಗುವಿನ ಗುಪ್ತಾಂಗಕ್ಕೆ ಕಬ್ಬಿಣದ ರಾಡ್ ಹಾಕಿದ್ದಾನೆ. ಮಗುವಿನ ದೇಹವನ್ನು ಸಿಗರೇಟ್ ನಿಂದ ಸುಟ್ಟಿದ್ದಾನೆ. ಮಗು ದಿನಾ ಅಳುತ್ತಿದ್ರಿಂದ ಮಗುವಿನ ತಾಯಿ ಹತ್ತಿರದ ಮೂರ್ನಾಲ್ಕು ಖಾಸಗಿ ಆಸ್ಪತ್ರೆಗೆ ತೋರಿಸಿದ್ದರು. ಗುಪ್ತಾಂಗಕ್ಕೆ ರಾಡ್ ಹಾಕಿದ್ರಿಂದ ಮಗು ತೀವ್ರ ನೋವು ಅನುಭವಿಸಿತ್ತು. ತಲಘಟ್ಟಪುರ ಪೊಲೀಸ್ ಠಾಣೆಯ ಮಹಿಳಾ ಪೇದೆಯೊಬ್ಬರು ಮಗುವಿನ ಮೇಲೆ ರೇಪ್ ಆಗಿರೋದನ್ನ ಕನ್ಫರ್ಮ್ ಮಾಡಿದ್ದಾರೆ.

    ಘಟನೆ ಬಳಿಕ ಮಗುವನ್ನ ಮೊದಲು ಆರ್‍ಆರ್ ನಗರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ತಾಯಿ ಇಂದಿರಾಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರರಕ್ತ ಸ್ರಾವ ಹಿನ್ನೆಲೆಯಲ್ಲಿ ಸಂತ್ರಸ್ತ ಬಾಲಕಿಯ ತಾಯಿ ಮಗುವನ್ನ ಹುಳಿ ಮಾವು ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದ್ರೆ ಮುಗ್ಧ ಕಂದಮ್ಮ ಈಗ ಸಾವನ್ನಪ್ಪಿದೆ.

    ಈ ಬಗ್ಗೆ ಮಾತನಾಡಿದ ಡಿಸಿಪಿ ಶರಣಪ್ಪ, ಆಗಸ್ಟ್ 17ರಂದು ಭಾಗ್ಯಮ್ಮ ದೂರು ನೀಡಿದ್ದರು. ಪರಿಚಯಸ್ಥ ಮಲ್ಲಿಕಾರ್ಜುನ್‍ಗೆ ಮಗುವನ್ನ ನೀಡಿದ್ದರು. ಚಂದನ ಜೊತೆ ಸೇರಿಕೊಂಡು ಮಲ್ಲಿಕಾರ್ಜುನ ಮಗುವಿನ ಮೇಲೆ ಹಲ್ಲೆ ಮಾಡುತ್ತಿದ್ದ. ಅಲ್ಲದೇ ಮಲ್ಲಿಕಾರ್ಜುನ ಮಗುವನ್ನು ಅಸಭ್ಯವಾಗಿ ಮುಟ್ಟುತ್ತಿದ್ದ ಅಂತ ದೂರು ನೀಡಿದ್ದರು. ಈಗಾಗಲೇ ಇಬ್ಬರು ಆರೋಪಿಗಳನ್ನ ಬಂಧಿಸಿದ್ದೇವೆ. ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗು ನಿನ್ನೆ ರಾತ್ರಿ ಮೃತಪಟ್ಟಿದೆ ಅಂತ ಹೇಳಿದ್ರು

    ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಮಲ್ಲಿಕಾರ್ಜುನನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ಚಂದನ ಮತ್ತು ಮಲ್ಲಿಕಾರ್ಜುನ್‍ನನ್ನು ವಶಕ್ಕೆ ಪಡೆದಿದ್ದಾರೆ. ಇದೀಗ ಮಗು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.