Tag: ನಿರ್ಗತಿಕರು

  • ನಿರ್ಗತಿಕರಿಗೆ ಆಹಾರ ನೀಡುವಾಗ ಸೆಲ್ಫಿ, ಫೋಟೋ ತೆಗೆದರೆ ಎಫ್‍ಐಆರ್

    ನಿರ್ಗತಿಕರಿಗೆ ಆಹಾರ ನೀಡುವಾಗ ಸೆಲ್ಫಿ, ಫೋಟೋ ತೆಗೆದರೆ ಎಫ್‍ಐಆರ್

    ಜೈಪುರ: ನಿರ್ಗತಿಕರಿಗೆ ಆಹಾರ ನೀಡುವಾಗ ಸೆಲ್ಫಿ ತೆಗೆಯುವುದು ವಿಡಿಯೋ ಮಾಡುವುದು ಮಾಡಿದರೆ ಅಂತವರ ಮೇಲೆ ಕಠಿಣ ಕ್ರಮ ಕೈಗೊಂಡು ಎಫ್‍ಐಆರ್ ದಾಖಲಿಸಲಾಗುವುದು ಎಂದು ರಾಜಸ್ಥಾನದ ಅಜ್ಮೀರ್ ಜಿಲ್ಲೆಯ ಡಿಸಿ ಖಡಕ್ ವಾರ್ನಿಂಗ್ ನೀಡಿದ್ದಾರೆ.

    ಕೊರೊನಾ ವೈರಸ್ ಭೀತಿಗೆ ದೇಶ ಲಾಕ್‍ಡೌನ್ ಆಗಿ 15ಕ್ಕೂ ಹೆಚ್ಚಿನ ದಿನಗಳಾಗಿವೆ. ಈ ನಡುವೆ ಕೆಲವರಿಗೆ ಊಟ ನೀರು ಸಿಗದೆ ಪರಾದಾಡುತ್ತಿದ್ದಾರೆ. ಈ ರೀತಿಯ ನಿರ್ಗತಿಕರಿಗೆ ಕೆಲವರು ಆಹಾರ ನೀಡುವ ಕೆಲಸ ಮಾಡುತ್ತಿದ್ದಾರೆ. ಆದರೆ ಈ ವೇಳೆ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಬಾರದು ಎಂದು ಅಜ್ಮೀರ್ ಜಿಲ್ಲೆಯ ಡಿಸಿ ವಿಶ್ವ ಮೋಹನ್ ಶರ್ಮಾ ಆದೇಶ ಮಾಡಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಡಿಸಿ ವಿಶ್ವ ಮೋಹನ್ ಶರ್ಮಾ, ಲಾಕ್‍ಡೌನ್ ಸಮಯದಲ್ಲಿ ನಿರ್ಗತಿಕರಿಗೆ ಬಡವರಿಗೆ ಆಹಾರ ನೀಡುವುದು ಒಳ್ಳೆಯ ಕೆಲಸ. ದೇಶ ಈ ರೀತಿಯ ಸಂಕಷ್ಟಕ್ಕೆ ಸಿಲುಕಿದ ಪರಿಸ್ಥಿತಿಯಲ್ಲಿ ಸಹಾಯ ಮಾಡುವ ಜನರಿಗೆ ನಾವು ಪ್ರೋತ್ಸಾಹ ನೀಡುತ್ತೇವೆ. ಆದರೆ ಇದನ್ನೇ ಮುಂದೆ ಇಟ್ಟುಕೊಂಡು ಬಡವರಿಗೆ ಸಹಾಯ ಮಾಡಿ ಅದರ ಫೋಟೋ ತಗೆದುಕೊಳ್ಳುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

    ಊಟವಿಲ್ಲದವರಿಗೆ ಆಹಾರ ನೀಡಿ ಈ ವೇಳೆ ಅವರ ಜೊತೆ ಸೆಲ್ಫಿ ತೆಗೆದುಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಬಾರದು. ಇದರಿಂದ ಅವರಿಗೇ ಅವಮಾನ ಮಾಡಿದ ರೀತಿಯಲ್ಲಿ ಆಗುತ್ತದೆ. ಆದ್ದರಿಂದ ಈ ರೀತಿಯ ಪ್ರಕರಣಗಳು ನಮ್ಮ ಜಿಲ್ಲೆಯಲ್ಲಿ ಕಂಡುಬಂದರೆ ಅಂತವರ ವಿರುದ್ಧ ಕಠಿಣ ಕ್ರಮ ತೆಗದುಕೊಳ್ಳಲಾಗುವುದು ಜೊತೆಗೆ ಎಫ್‍ಐಆರ್ ಕೂಡ ಹಾಕಲಾಗುವುದು ಎಂದು ಡಿಸಿ ವಾರ್ನಿಂಗ್ ನೀಡಿದ್ದಾರೆ.

    ಕಳೆದ 16 ದಿನಗಳಿಂದ ದೇಶದಲ್ಲಿ ಹಲವಾರು ಜನರು ಸಂಸ್ಥೆಗಳು ಸೆಲೆಬ್ರಿಟಿಗಳು ಹಸಿದವರಿಗೆ ಆಹಾರ ನೀಡುವ ಕೆಲಸ ಮಾಡುತ್ತಿವೆ. ಆದರೆ ಇದರ ಜೊತೆ ಕೆಲ ಜನರು ಮಾಡಿರುವ ಸಹಾಯವನ್ನು ಫೋಟೋದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಾರೆ. ಇತ್ತೀಚೆಗೆ ಅಜ್ಮೀರ್ ಜಿಲ್ಲೆಯಲ್ಲಿ ಆಹಾರವಿಲ್ಲದವರಿಗೆ ಎರಡು ಬಾಳೆಹಣ್ಣು ನೀಡಿ ಫೋಟೋ ತೆಗದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿತ್ತು. ಈ ಕಾರಣದಿಂದ ಡಿಸಿ ಈ ಆದೇಶ ಹೊರಡಿಸಿದ್ದಾರೆ.

  • ವ್ಯಾಪಾರಕ್ಕಲ್ಲ, ಹಸಿದವರ ಹೊಟ್ಟೆ ತುಂಬಿಸಲು ದಿನಪೂರ್ತಿ ಹೋಟೆಲ್ ಓಪನ್

    ವ್ಯಾಪಾರಕ್ಕಲ್ಲ, ಹಸಿದವರ ಹೊಟ್ಟೆ ತುಂಬಿಸಲು ದಿನಪೂರ್ತಿ ಹೋಟೆಲ್ ಓಪನ್

    – ಪೊಲೀಸ್, ನರ್ಸ್, ನಿರ್ಗತಿಕರಿಗೆ ಊಟ
    – ಸ್ವಂತ ಕಾರಿನಲ್ಲಿ ತುಂಬಿ ಆಹಾರ ವಿತರಣೆ

    ಮಡಿಕೇರಿ: ಕೊರೊನಾ ಮಹಾಮಾರಿಯಿಂದ ದೇಶವೇ ಲಾಕ್‍ಡೌನ್ ಆಗಿದ್ದು, ಅಂಗಡಿ ಮುಂಗಟ್ಟು, ಹೋಟೆಲ್ ಗಳು ಸಂಪೂರ್ಣ ಬಂದ್ ಆಗಿದೆ. ಆದರೆ ಈ ಹೋಟೆಲ್ ಮಾತ್ರ ದಿನಪೂರ್ತಿ ತೆರೆದಿದೆ. ಆದರೆ ವ್ಯಾಪಾರಕ್ಕಲ್ಲ, ಬದಲಿಗೆ ಹಸಿದವರ ಹೊಟ್ಟೆ ತುಂಬಿಸಲು.

    ಕುಶಾಲನಗರ ಸಮೀಪದ ಕೊಪ್ಪದಲ್ಲಿರುವ ಸಾಯಿ ಅಮೃತ್ ಹೋಟೆಲ್‍ನ ಮಾಲೀಕ ಚಂದ್ರಶೇಖರ್ ಈ ಮಹತ್ತರ ಕೆಲಸವನ್ನು ಕಳೆದ 11 ದಿನಗಳಿಂದ ಮಾಡುತ್ತಿದ್ದಾರೆ. ಚೆಕ್ ಪೋಸ್ಟ್ ಗಳಲ್ಲಿ, ಜನಸಂದಣಿ ಇರುವಲ್ಲಿ ಕರ್ತವ್ಯ ನಿರತರಾಗಿರುವ ಪೊಲೀಸರಿಗೆ, ದಾದಿಯರಿಗೆ ಅಷ್ಟೇ ಅಲ್ಲ ಭಿಕ್ಷುಕರಿಗೆ ಮೂರು ಹೊತ್ತು ಊಟ ಪೂರೈಕೆ ಮಾಡುತ್ತಿದ್ದಾರೆ.

    ಹೋಟೆಲ್ ತೆರೆದು ಅಲ್ಲಿಯೇ ನಿತ್ಯ ಅಡುಗೆ ತಯಾರಿಸಿ, ಬಳಿಕ ಸ್ವತಃ ತಮ್ಮದೇ ಕಾರಿನಲ್ಲಿ ತುಂಬಿಕೊಂಡು ಪೊಲೀಸರು ಕೆಲಸ ನಿರ್ವಹಿಸುತ್ತಿರುವ ಸ್ಥಳಗಳಿಗೆ ಊಟ ಕೊಂಡೊಯ್ದು, ಹಸಿದ ಹೊಟ್ಟೆಗಳನ್ನು ತುಂಬಿಸುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಕೊಪ್ಪ, ಕುಶಾಲನಗರ, ಕೂಡಿಗೆ ಮತ್ತು ಗುಡ್ಡೆಹೊಸೂರು ಗ್ರಾಮಗಳ ಸುತ್ತಮುತ್ತ ಇರುವ ನೂರಾರು ನಿರ್ಗತಿಕರನ್ನು ಹುಡುಕಿ ಅವರಿಗೆ ಮೂರು ಹೊತ್ತು ಆಹಾರ ನೀಡಿ ಅವರ ಹಸಿವು ನೀಗಿಸುತ್ತಿದ್ದಾರೆ. ದೇವರು ನಮಗೆ ಕೊಟ್ಟಿದ್ದಾನೆ, ಏನೂ ಇಲ್ಲದವರು ಹಸಿವಿನಿಂದ ಇರಬಾರದು. ಆದ್ದರಿಂದ ಲಾಕ್‍ಡೌನ್ ಮುಗಿಯುವವರೆಗೆ ಆಹಾರ ಪೂರೈಸುತ್ತೇನೆ ಎಂದು ಚಂದ್ರಶೇಖರ್ ಸದ್ದಿಲ್ಲದೆ ನೂರಾರು ಜನರ ಹಸಿವು ನೀಗಿಸುತ್ತಿದ್ದಾರೆ.

  • ನಿರ್ಗತಿಕರಿಗೆ ಉಚಿತವಾಗಿ ಅಗತ್ಯ ವಸ್ತುಗಳ ವಿತರಣೆ – ರಾಜ್ಯಕ್ಕೆ ಮಾದರಿಯಾದ ಗ್ರಾಮ ಪಂಚಾಯ್ತಿ

    ನಿರ್ಗತಿಕರಿಗೆ ಉಚಿತವಾಗಿ ಅಗತ್ಯ ವಸ್ತುಗಳ ವಿತರಣೆ – ರಾಜ್ಯಕ್ಕೆ ಮಾದರಿಯಾದ ಗ್ರಾಮ ಪಂಚಾಯ್ತಿ

    ರಾಮನಗರ: ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು ದೇಶವೇ ಲಾಕ್‍ಡೌನ್ ಮಾಡಲಾಗಿದೆ. ಇದರಿಂದ ನಿರ್ಗತಿಕರು, ಬಡವರು ಒಂದೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದಾರೆ. ಇದನ್ನು ಮನಗಂಡ ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮ ಪಂಚಾಯ್ತಿ ನಿರ್ಗತಿಕರಿಗೆ ಅಗತ್ಯ ವಸ್ತುಗಳನ್ನು ಉಚಿತವಾಗಿ ವಿತರಿಸುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ.

    ಪಬ್ಲಿಕ್ ಟಿವಿಯ ಪಬ್ಲಿಕ್ ಹೀರೋ ಆಗಿ ಗುರುತಿಸಿಕೊಂಡಿದ್ದ ಪಿಡಿಓ ಯತೀಶ್ ತಮ್ಮ ಪಂಚಾಯ್ತಿಯ ಅಧ್ಯಕ್ಷರು, ಸದಸ್ಯರ ಜೊತೆ ಚರ್ಚೆ ನಡೆಸಿ ಇಂತಹದೊಂದು ಉತ್ತಮ ಕಾರ್ಯಕ್ಕೆ ಮುಂದಾಗಿ ಸಾರ್ವಜನಿಕರ ಮೆಚ್ಚುಗೆ ಗಳಿಸಿದ್ದಾರೆ.

    ಚಕ್ಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅತೀ ಬಡವರು, ನಿರ್ಗತಿಕರನ್ನು ಗುರುತಿಸಲಾಗಿದ್ದು, ಮೊದಲ ಹಂತವಾಗಿ 146 ಕುಟುಂಬದವರಿಗೆ ಅಗತ್ಯ ವಸ್ತುಗಳಾದ ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಗೋಧಿ ಹಿಟ್ಟು, ಈರುಳ್ಳಿ, ಸಾಂಬಾರ್ ಪುಡಿ, ಹುರುಳಿ ಕಾಳು, ರವೆ, ಸಕ್ಕರೆ ಸೇರಿದಂತೆ ಸುಮಾರು 600 ರೂ. ಮೌಲ್ಯದ ವಸ್ತುಗಳನ್ನು ವಿತರಣೆ ಮಾಡಿದ್ದಾರೆ.

    ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಇರುವ ಕಡು ಬಡವರು ಹಾಗೂ ಹೊರ ರಾಜ್ಯದಿಂದ ಉದ್ಯೋಗ ಅರಸಿ ಬಂದಿರುವ ಕೂಲಿ ಕಾರ್ಮಿಕ ಕುಟುಂಬಗಳಿಗೆ ಆಹಾರ ಧಾನ್ಯ ವಿತರಣೆ ಮಾಡಿದ್ದು, ಮುಂದಿನ ದಿನಗಳಲ್ಲಿ ಸ್ಥಿತಿವಂತರನ್ನು ಬಿಟ್ಟು ಉಳಿದವರಿಗೆಲ್ಲಾ ಅಗತ್ಯ ವಸ್ತುಗಳ ವಿತರಣೆ ಮಾಡುವುದಾಗಿ ಪಂಚಾಯ್ತಿ ಪಿಡಿಓ ಯತೀಶ್ ತಿಳಿಸಿದರು.

  • ನಗರಸಭೆಯಿಂದ ನಿರಾಶ್ರಿತರಿಗೆ ಹೇರ್ ಕಟಿಂಗ್, ಹೊಸಬಟ್ಟೆ

    ನಗರಸಭೆಯಿಂದ ನಿರಾಶ್ರಿತರಿಗೆ ಹೇರ್ ಕಟಿಂಗ್, ಹೊಸಬಟ್ಟೆ

    ಚಾಮರಾಜನಗರ: ಕೊರೊನಾ ವೈರಸ್ ಭೀತಿಗೆ ಜನರೆಲ್ಲ ಮನೆ ಸೇರಿದ್ದಾರೆ. ಆದರೆ ನಿರ್ಗತಿಕರು ಮಾತ್ರ ಸೂರಿಲ್ಲದೆ ಬೀದಿಯಲ್ಲೇ ಪರದಾಡುವಂತಾಗಿದೆ. ಇಂಥವರಿಗೆ ಆಶ್ರಯ ನೀಡಲು ಚಾಮರಾಜನಗರ ನಗರಸಭೆ ಪರಿಹಾರ ಕೇಂದ್ರ ತೆರೆದಿದ್ದು, ಜಿಲ್ಲೆಯಲ್ಲಿರುವ ನಿರ್ಗತಿಕರಿಗೆ ಆಹಾರ, ಬಟ್ಟೆ ನೀಡಿ ಕ್ಷೇಮವಾಗಿ ನೋಡಿಕೊಳ್ಳುತ್ತಿದೆ.

    ನಗರಸಭೆ ವತಿಯಿಂದ ನಗರದ ಸಿಡಿಎಸ್ ಭವನದಲ್ಲಿ ತೆರೆದಿರುವ ನಿರಾಶ್ರಿತರ ತಾತ್ಕಾಲಿಕ ಕೇಂದ್ರದಲ್ಲಿ ಇಬ್ಬರು ಮಾನಸಿಕ ಅಸ್ವಸ್ಥರು ಸೇರಿದಂತೆ ಐವರು ನಿರಾಶ್ರಿತರಿಗೆ ಕ್ಷೌರ ಮಾಡಿಸಿ ಹೊಸ ಬಟ್ಟೆಗಳನ್ನು ನೀಡಲಾಗಿದೆ. ಕೊರೊನಾ ಹರಡುವಿಕೆ ಕಡಿಮೆಯಾಗುವರೆಗೂ ಅವರ ಯೋಗಕ್ಷೇಮವನ್ನು ನೋಡಿಕೊಳ್ಳಲಾಗುತ್ತಿದೆ.

    ಇಡೀ ದೇಶವೇ ಸಂಪೂರ್ಣ ಲಾಕ್ ಡೌನ್ ಆಗಿರುವುದರಿಂದ ಊಟಕ್ಕೆ ಪರದಾಡುತ್ತಿದ್ದ ಇವರಿಗೆ ಆಹಾರ-ವಸತಿ ಸೌಕರ್ಯ ಕಲ್ಪಿಸಲಾಗಿದೆ. ಜೊತೆಗೆ, 14 ಮಂದಿ ರಾಜಸ್ಥಾನದ ಪಾನಿಪೂರಿ ವ್ಯಾಪಾರಿಗಳಿಗೂ ಊಟದ ವ್ಯವಸ್ಥೆ ಮಾಡಿದ್ದು, ಕೊರೊನಾ ಆತಂಕ ಮುಗಿಯುವವರೆಗೂ ಅವರ ಯೋಗಕ್ಷೇಮ ನೋಡಿಕೊಳ್ಳಲಾಗುವುದು ಎಂದು ನಗರಸಭೆ ಆಯುಕ್ತ ರಾಜಣ್ಣ ತಿಳಿಸಿದರು.

  • ಹಸಿವು ಅಂತ ಬಂದೋರಿಗೆ ಹೊಟ್ಟೆ ತುಂಬಾ ಊಟ ಹಾಕ್ತಾರೆ ಕೋಲಾರದ ಅಪ್ಸರ್ ಪಾಷಾ

    ಹಸಿವು ಅಂತ ಬಂದೋರಿಗೆ ಹೊಟ್ಟೆ ತುಂಬಾ ಊಟ ಹಾಕ್ತಾರೆ ಕೋಲಾರದ ಅಪ್ಸರ್ ಪಾಷಾ

    – ಮಂಗಳವಾರ, ಶುಕ್ರವಾರ ಬಿರಿಯಾನಿ ಊಟ
    – 6 ಜನ ಅನಾಥರಿಗೆ ಮನೆಯಲ್ಲೇ ಆಶ್ರಯ

    ಕೋಲಾರ: ಜಿಲ್ಲೆಯ ಸೈಯದ್ ಅಪ್ಸರ್ ಪಾಷಾ ಎಂಬವರು ಹಸಿವಿನಿಂದ ನೊಂದು ಅನ್ನದ ಬೆಲೆ ತಿಳಿದವರು. ಮದರ್ ತೆರೇಸಾರಿಂದ ಆಕರ್ಷಿತರಾಗಿ ಅವರಂತೆಯೇ ನಡೆಯುವವರು. ಹಗಲು ರಾತ್ರಿಯೆನ್ನದೇ ಹಸಿದವರ ಹೊಟ್ಟೆ ತುಂಬಿಸುವವರು. ಜೊತೆಗೆ ತಮ್ಮ ಮನೆಯಲ್ಲೇ 6 ಮಂದಿ ಅನಾಥರಿಗೆ ಆಶ್ರಯದಾತರಾಗಿದ್ದಾರೆ.

    ಇವರು ಹೊಟೇಲ್ ಆರಂಭಿಸಿ ಅನಾಥರಿಗೆ ಊಟ ಹಾಕುತ್ತಿಲ್ಲ. ಬದಲಾಗಿ ಪುಟ್ಟ ಧರ್ಮಛತ್ರವನ್ನು ಸ್ಥಾಪಿಸಿ ಈ ಮೂಲಕ ಅನಾಥರು, ಬಡವರು, ವಯಸ್ಸಾದವರು, ಅಂಗವಿಕರು, ವಿದ್ಯಾರ್ಥಿಗಳು ಹೀಗೆ ಯಾರೇ ಹಸಿವು ಅಂತಾ ಬಂದರೂ ಅವರ ಹೊಟ್ಟೆ ತುಂಬಾ ಊಟ ಹಾಕುತ್ತಾರೆ. ಪ್ರತಿದಿನ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆ ತನಕ ಇವರಿಗೆ ಇದೇ ಕಾಯಕ.

    ಕೋಲಾರದ ಬಂಗಾರಪೇಟೆಯ ಈ ಪಬ್ಲಿಕ್ ಹೀರೋಗೆ 2 ಹೊಟೇಲ್‍ಗಳಿವೆ. ಅದರಲ್ಲಿ ಬಂದ ಶೇ.50 ರಷ್ಟು ಹಣವನ್ನು ಹೀಗೆ ಸಮಾಜಸೇವೆಗೆ ಬಳಸ್ತಾರೆ. ವಿಶೇಷತೆ ಅಂದ್ರೆ ಮಂಗಳವಾರ ಹಾಗೂ ಶುಕ್ರವಾರ ಬಿರಿಯಾನಿ ಊಟ ಮಾಡಿ ಬಡಿಸ್ತಾರೆ. ಈ ಸೇವೆಯಲ್ಲೇ ನೆಮ್ಮದಿ ಕಂಡುಕೊಂಡಿದ್ದಾರೆ.

    ಪಾಷಾ ಅವರ ಸಮಾಜಸೇವೆ ಇಷ್ಟೇ ಅಲ್ಲ. 6 ಜನ ಅನಾಥ ಮಕ್ಕಳನ್ನ ತಮ್ಮ ಮನೆಯಲ್ಲಿಯೇ ಸಾಕುತ್ತಿದ್ದಾರೆ. ರಾತ್ರಿ ನಿದ್ದೆ ಬರದಿದ್ದಾಗ ಪಟ್ಟಣದಲ್ಲಿ ಸಂಚಾರ ಮಾಡಿ ಬೀದಿ ಬದಿ ಮಲಗಿರುವ ನಿರ್ಗತಿಕರಿಗೆ ಕಂಬಳಿ ಕೊಡೋದರ ಜೊತೆ ತಮ್ಮ ಕೈಲಾದ ಸಹಾಯ ಮಾಡ್ತಾರೆ.

    ಎಲ್ಲಾ ಇರೋರಿಗೆ ದಾನ ಮಾಡುವ ಮನಸ್ಸಿರಲ್ಲ. ಕೆಲವರಿಗೆ ದಾನ ಮಾಡುವ ಮನಸ್ಸಿದ್ರೆ ದುಡ್ಡಿರಲ್ಲ. ಇಂತಹ ಕಾಲದಲ್ಲೂ ಹಸಿದ ಹೊಟ್ಟೆಗೆ ಅನ್ನ ಹಾಕೋ ಪಾಷಾ ಅವರಿಗೆ ದೊಡ್ಡ ಸಲಾಂ.

    https://www.youtube.com/watch?v=W_feeyDHo-k