Tag: ನಿರಾಶ್ರಿತ ಕೇಂದ್ರ

  • ನಿರಾಶ್ರಿತ ಕೇಂದ್ರದಲ್ಲಿದ್ದ 57 ಬಾಲಕಿಯರಿಗೆ ಕೊರೊನಾ – ಇಬ್ಬರು ಗರ್ಭಿಣಿ, ಓರ್ವಳಿಗೆ ಏಡ್ಸ್

    ನಿರಾಶ್ರಿತ ಕೇಂದ್ರದಲ್ಲಿದ್ದ 57 ಬಾಲಕಿಯರಿಗೆ ಕೊರೊನಾ – ಇಬ್ಬರು ಗರ್ಭಿಣಿ, ಓರ್ವಳಿಗೆ ಏಡ್ಸ್

    -ನಿರಾಶ್ರಿತ ಕೇಂದ್ರ ಸೀಲ್‍ಡೌನ್

    ಲಕ್ನೋ/ಕಾನ್ಪುರ: ಸರ್ಕಾರದ ನಿರಾಶ್ರಿತರ ಕೇಂದ್ರ (ಬಾಲ ಗೃಹ)ದಲ್ಲಿದ್ದ 57 ಯುವತಿಯರಿಗೆ ಕೊರೊನಾ ಸೋಂಕು ತಗುಲಿದ್ದು, ಇಬ್ಬರು ಗರ್ಭಿಣಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಇಷ್ಟು ಮಾತ್ರವಲ್ಲದೇ ಓರ್ವ ಯುವತಿ ಹೆಚ್‍ಐವಿ ಪಾಸಿಟಿವ್ ನಿಂದ ಬಳಲುತ್ತಿದ್ದಾಳೆ. ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಸಾರ್ವಜನಿಕರು ತನಿಖೆಗೆ ಅದೇಶಿಸಬೇಕೆಂದು ಆಗ್ರಹಿಸಿದ್ದಾರೆ.

    ನಿರಾಶ್ರಿತ ಕೇಂದ್ರದಲ್ಲಿ 57 ಬಾಲಕಿಯರಿಗೆ ಸೋಂಕು ತಗುಲಿರೋದು ದೃಢ ಪಡುತ್ತಿದ್ದಂತೆ ಎಲ್ಲರನ್ನು ಕೋವಿಡ್-19 ಚಿಕಿತ್ಸೆಗಾಗಿ ರಾಮಾ ಮೆಡಿಕಲ್ ಕಾಲೇಜಿಗೆ ಶಿಫ್ಟ್ ಮಾಡಲಾಗಿತ್ತು. ಈ ವೇಳೆ 17 ವರ್ಷದ ಇಬ್ಬರು ಅಪ್ರಾಪ್ತೆಯರು ಗರ್ಭಿಣಿ ಆಗಿರೋದು ವಿಚಾರ ತಿಳಿದಿದ್ದು, ಜೊತೆಗೆ ಒಬ್ಬಳಿಗೆ ಹೆಚ್‍ಐವಿ ಪಾಸಿಟಿವ್ ಎಂಬ ವಿಷಯ ಬಯಲಾಗಿದೆ. ಗರ್ಭಿಣಿಯಾಗಿರುವ ಅಪ್ರಾಪ್ತೆಯರನ್ನು ಹೆರಿಗೆ ಆಸ್ಪತ್ರೆಗೆ ರವಾನಿಸಲಾಗಿದೆ.

    ನಿರಾಶ್ರಿತರ ಕೇಂದ್ರ ಸೀಲ್‍ಡೌನ್: ಕಾನ್ಪುರ ಸ್ವರೂಪ ನಗರದಲ್ಲಿರುವ ಬಾಲಕಿಯರ ನಿರಾಶ್ರಿತರ ಕೇಂದ್ರವನ್ನು ಆರೋಗ್ಯಾಧಿಕಾರಿಗಳು ಸೀಲ್‍ಡೌನ್ ಮಾಡಿದ್ದಾರೆ. ನಿರಾಶ್ರಿತ ಕೇಂದ್ರದ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಬಾಲಕಿಯರು ಯಾವುದೇ ಟ್ರಾವೆಲ್ ಹಿಸ್ಟರಿ ಹೊಂದಿಲ್ಲ. ಇಬ್ಬರು ಅಪ್ರಾಪ್ತೆಯರು ನಿರಾಶ್ರಿತ ಕೇಂದ್ರ ಬಂದಿದ್ದು ಯಾಗಾ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

    ಬಾಲಕಿಯರು ವಾಸವಾಗಿದ್ದ ಕಟ್ಟಡವನ್ನು ಸೀಲ್‍ಡೌನ್ ಮಾಡಲಾಗಿದೆ. ಬಾಲಕಿಯರಿಗೆ ಸಂಬಂಧಿಸಿದ ಎಲ್ಲ ದಾಖಲೆಗಳು ಅದೇ ಕಟ್ಟಡದಲ್ಲಿವೆ. ಇಬ್ಬರು ಬಾಲಕಿಯರ ಹಿನ್ನೆಲೆ ಮತ್ತು ಯಾರೊಂದಿಗೆ ಸಂಪರ್ಕದಲ್ಲಿದ್ದರು ಎಂಬುದರ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಜಿಲ್ಲಾ ಪ್ರೊಬೆಷನ್ ಆಫಿಸರ್ ಅಜಿತ್ ಕುಮಾರ್ ಹೇಳಿದ್ದಾರೆ.

  • ಯುವತಿಯನ್ನು ಅಪಹರಿಸಿ, ಚಲಿಸುತ್ತಿದ್ದ ಕಾರಿನಲ್ಲಿ ನಾಲ್ವರಿಂದ ಗ್ಯಾಂಗ್ ರೇಪ್

    ಯುವತಿಯನ್ನು ಅಪಹರಿಸಿ, ಚಲಿಸುತ್ತಿದ್ದ ಕಾರಿನಲ್ಲಿ ನಾಲ್ವರಿಂದ ಗ್ಯಾಂಗ್ ರೇಪ್

    ಪಾಟ್ನಾ: ನಿರಾಶ್ರಿತ ಕೇಂದ್ರದಿಂದ ರಕ್ಷಿಸಲ್ಪಟ್ಟ 18 ವರ್ಷದ ಯುವತಿಯನ್ನು ಅಪಹರಿಸಿ 4 ಮಂದಿ ಕಾಮುಕರು ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿರುವ ಅಮಾನವೀಯ ಘಟನೆ ಬಿಹಾರದಲ್ಲಿ ನಡೆದಿದೆ.

    ಶುಕ್ರವಾರದಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮೂಲಗಳ ಪ್ರಕಾರ, ಮುಜಾಫರ್‍ಪುರ ನಿರಾಶ್ರಿತ ಕೇಂದ್ರದಿಂದ ರಕ್ಷಿಸಲ್ಪಟ್ಟ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ನಿರಾಶ್ರಿತ ಕೇಂದ್ರದಿಂದ ರಕ್ಷಿಸಿದ ಬಳಿಕ ಯುವತಿ ಮುಜಾಫರ್ ಪುರದ ಪಶ್ಚಿಮ ಚಂಪರನ್ ಜಿಲ್ಲೆಯಲ್ಲಿ ತನ್ನ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದಳು. ಶುಕ್ರವಾರ ಸಂಜೆ ಯುವತಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ನಾಲ್ವರು ಮುಸುಕುಧಾರಿಗಳು ಅವಳನ್ನು ಅಪಹರಿಸಿದ್ದಾರೆ. ಬಳಿಕ ಆಕೆಯನ್ನು ಕಾರಿನಲ್ಲಿ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿ ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋಗಿದ್ದಾರೆ.

    ಈ ಬಗ್ಗೆ ಯುವತಿ ಶನಿವಾರ ಸಂಜೆ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾಳೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಸಂತ್ರಸ್ತೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿದೆ. ಈಗ ಅದರ ವರದಿಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ಸ್ಟೆಷನ್ ಹೌಸ್ ಆಫಿಸರ್(ಎಸ್‍ಎಚ್‍ಓ), ಯುವತಿಯನ್ನು ನಿರಾಶ್ರಿತ ಕೇಂದ್ರದಿಂದ ರಕ್ಷಿಸಿರುವ ವಿಚಾರ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಆರೋಪಿಗಳನ್ನು ಬಂಧಿಸಲು ತಂಡವನ್ನು ರಚಿಸಿ ತನಿಖೆ ನಡೆಸುತ್ತಿದ್ದೇವೆ ಎಂದಿದ್ದಾರೆ.

    ಶುಕ್ರವಾರ ಸಂಜೆ ಸಂಬಂಧಿಕರನ್ನು ಭೇಟಿ ಮಾಡಲು ಹೋಗುತ್ತಿದ್ದ ವೇಳೆ 4 ಮಂದಿ ನನ್ನನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

  • ನಿರಾಶ್ರಿತ ಕೇಂದ್ರದಲ್ಲಿ ತಹಶೀಲ್ದಾರ್ ವಿರುದ್ಧ ಸಂತ್ರಸ್ತರು ಕಿಡಿ

    ನಿರಾಶ್ರಿತ ಕೇಂದ್ರದಲ್ಲಿ ತಹಶೀಲ್ದಾರ್ ವಿರುದ್ಧ ಸಂತ್ರಸ್ತರು ಕಿಡಿ

    ಕೊಡಗು: ಪ್ರವಾಹಕ್ಕೆ ತತ್ತರಿಸಿ ನಿರಾಶಿತ್ರ ಕೇಂದ್ರ ಸೇರಿದ್ದ ಸಂತ್ರಸ್ತರನ್ನು ತಹಶೀಲ್ದಾರ್ ಕೀಳಾಗಿ ಕಾಣುತ್ತಿದ್ದಾರೆ ಎನ್ನುವ ಕಾರಣಕ್ಕೆ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರದ ವಾಲ್ಮೀಕಿ ಭವನದ ಮುಂದೆ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕುಶಾಲನಗರದ ವಾಲ್ಮೀಕಿ ಭವನದಲ್ಲಿ ನಿರಾಶ್ರಿತ ಕೇಂದ್ರ ಶುರುವಾದ ದಿನದಿಂದಲೂ ಒಂದಿಲ್ಲೊಂದು ಕಾರಣಗಳಿಂದ ಸುದ್ದಿಯಾಗುತ್ತಲೇ ಇದೆ. ಮಂಗಳವಾರ ತಡರಾತ್ರಿಯು ಸಹ ಸಂತ್ರಸ್ತರು ತಹಶೀಲ್ದಾರ್ ಮಹೇಶ್ ವಿರುದ್ಧ ರೊಚ್ಚಿಗೆದ್ದು, ಪತ್ರಿಭಟನೆ ನಡೆಸುತ್ತಿದ್ದರು. ಅಲ್ಲದೇ ನಿರಾಶ್ರಿತ ಕೇಂದ್ರದಲ್ಲಿ ಶೌಚಾಲಯ ವ್ಯವಸ್ಥೆಯಿಲ್ಲ. ಸರಿಯಾಗಿ ಊಟ ನೀಡುತ್ತಿಲ್ಲ ಹಾಗೂ ಎಲ್ಲಾ ಅಧಿಕಾರಿಗಳು ನಮ್ಮನ್ನು ಭಿಕ್ಷುಕರಂತೆ ನೋಡುತ್ತಾರೆ ಎಂದು ಆರೋಪಿಸಿದ್ದರು.

    ಈ ವೇಳೆ ತಹಶೀಲ್ದಾರ್ ಮಹೇಶ್‍ರವರು ಮಹಿಳೆಯೊಬ್ಬರ ಮೈಯನ್ನ ಮುಟ್ಟಿದರು ಎಂದು ಆರೋಪಿಸಿ ಅವರ ಮೇಲೆ ಮುತ್ತಿಗೆ ಹಾಕುವ ಯತ್ನ ಮಾಡಿದರು. ಕೂಡಲೇ ಪ್ರತಿಭಟನಾಕಾರರಿಂದ ತಪ್ಪಿಸಿಕೊಂಡು ತಹಶೀಲ್ದಾರ್ ಕೋಣೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡು, ನಾನು ಏನು ತಪ್ಪು ಮಾಡಿಲ್ಲ ಅಂತ ಕ್ಷಮೆಯಾಚಿಸಿದರು.

    ಸುಮಾರು 400 ಜನರು ಇರುವ ನಿರಾಶ್ರಿತ ಕೇಂದ್ರದಲ್ಲಿ ಕೇವಲ ಮೂರೇ ಮೂರು ಶೌಚಾಲಯ. ಶೌಚಾಲಯದ ವ್ಯವಸ್ಥೆ ಸರಿಪಡಿಸಿ ಹಾಗೂ ಊಟವನ್ನು ಸರಿಯಾಗಿ ನೀಡಿ ಎಂದು ಪ್ರಾರಂಭವಾದಗಿನಿಂದಲೂ ಹೇಳುತ್ತಲೆ ಬಂದಿದ್ದರು. ಸಮಸ್ಯೆಗಳನ್ನು ಪರಿಹರಿಸದೇ ಕೀಳಾಗಿ ನೋಡಿದ್ದರಿಂದ ರೊಚ್ಚಿಗೆದ್ದು ಪ್ರತಿಭಟನೆಗೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

    ಸಂತ್ರಸ್ತ ಕೇಂದ್ರದಲ್ಲಿ ಪ್ರತಿಭಟನೆ ಜೋರಾದಾಗ ಪೊಲೀಸರು ಮಧ್ಯ ಪ್ರವೇಶಿಸಿದರು. ಈ ವೇಳೆ ಪ್ರತಿಭಟನೆ ವಿಕೋಪಕ್ಕೆ ತಿರುಗುವ ಲಕ್ಷಣ ಗೋಚರಿದ ತಕ್ಷಣ ಜಿಲ್ಲಾಧಿಕಾರಿ ಶ್ರೀವಿದ್ಯಾರವರು ತಡರಾತ್ರಿ 12.15ಕ್ಕೆ ಆಗಮಿಸಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು. ಅಲ್ಲದೇ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿ, ಸರಿಯಾಗಿ ವ್ಯವಸ್ಥೆ ಕೈಗೊಳ್ಳುತ್ತೇನೆ. ಒಂದು ವೇಳೆ ತಹಶೀಲ್ದಾರ್ ವಿರುದ್ಧ ತಪ್ಪು ಕಂಡುಬಂದರೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೀನಿ ಎನ್ನುವ ಭರವಸೆ ನೀಡಿದ ಮೇಲೆ ಪ್ರತಿಭಟನಾಕಾರರು ತಮ್ಮ ಹೋರಾಟವನ್ನು ಕೈ ಬಿಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪರಿಹಾರ ಸಾಮಗ್ರಿಗಳನ್ನು ಭುಜದ ಮೇಲೆ ಹೊತ್ತು ಸಾಗಿದ ಸಚಿವ- ಇತ್ತ ಬಿಸ್ಕೆಟ್ ಎಸೆದ ರೇವಣ್ಣ!

    ಪರಿಹಾರ ಸಾಮಗ್ರಿಗಳನ್ನು ಭುಜದ ಮೇಲೆ ಹೊತ್ತು ಸಾಗಿದ ಸಚಿವ- ಇತ್ತ ಬಿಸ್ಕೆಟ್ ಎಸೆದ ರೇವಣ್ಣ!

    ತಿರುವನಂತಪುರ: ಕೇರಳದ ಶಿಕ್ಷಣ ಸಚಿವರಾದ ರವೀಂದ್ರನಾಥ್‍ರವರು ಪರಿಹಾರ ಸಾಮಗ್ರಿಗಳನ್ನು ಸ್ವತಃ ಹೆಗಲ ಮೇಲೆ ಹೊತ್ತುಕೊಂಡು ನಿರಾಶ್ರಿತ ಕೇಂದ್ರಗಳಿಗೆ ಸಾಗಿಸಿದ್ದಾರೆ.

    ತುರ್ತು ಪರಿಸ್ಥಿತಿ ಅಥವಾ ಪ್ರವಾಹ ಪರಿಸ್ಥಿತಿ ಸಂದರ್ಭಗಳಲ್ಲಿ ಅಧಿಕಾರಿಗಳು ಹಾಗೂ ಸಚಿವರು ಯಾವ ರೀತಿ ಜನರ ಕಷ್ಟಕ್ಕೆ ಸ್ಪಂದಿಸುತ್ತಾರೆ ಎನ್ನುವುದು ಮುಖ್ಯ. ಇದೇ ರೀತಿ ಪ್ರಕೃತಿ ವಿಕೋಪ ಸಂಭವಿಸಿದ ಸಂದರ್ಭಗಳಲ್ಲಿ ಆಳುವ ಮಂದಿ ಹೇಗೆ ನಡ್ಕೋತಾರೆ ಅನ್ನೋದಕ್ಕೆ ಎರಡು ಉದಾಹರಣೆಗಳು ನಮ್ಮ ಮುಂದಿವೆ.

    ಕೇರಳದ ತ್ರಿಶೂರ್ ಜಿಲ್ಲೆಯ ನಿರಾಶ್ರಿತ ಕೇಂದ್ರದಲ್ಲಿ ನೆಲೆಸಿದ್ದ ನಿರಾಶ್ರಿತರಿಗೆ ಪರಿಹಾರ ಸಾಮಗ್ರಿಗಳು ಸಿಗದೇ ಜನ ನರಕ ಯಾತನೇ ಅನುಭವಿಸುತ್ತಿದ್ದರು. ಇದರ ಮಾಹಿತಿ ಪಡೆದ ರವೀಂದ್ರನಾಥ್‍ರವರು ಖುದ್ದು ಸ್ಥಳಕ್ಕೆ ಪರಿಹಾರ ಸಾಮಗ್ರಿಗಳ ಸಮೇತ ಭೇಟಿ ನೀಡಿದ್ದರು. ಈ ವೇಳೆ ಆಹಾರ ಸಾಮಾಗ್ರಿಗಳನ್ನು ತಮ್ಮ ಹೆಗಲ ಮೇಲೆಯೇ ಇಟ್ಟುಕೊಂಡು ನಿರಾಶ್ರಿತ ಕೇಂದ್ರಕ್ಕೆ ತಲುಪಿಸುವ ಕೆಲಸ ಮಾಡಿದ್ದಾರೆ. ಜನರ ಕಷ್ಟಕ್ಕೆ ಸಚಿವರು ಹೆಗಲು ಕೊಟ್ಟಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಸಚಿವರನ್ನು ಜನ ಬಾಹುಬಲಿಯಂದೇ ಕರೆಯುತ್ತಿದ್ದಾರೆ.

    ಆದರೆ ಇದಕ್ಕೆ ಭಿನ್ನವಾದ ಘಟನೆ ನಮ್ಮ ರಾಜ್ಯದಲ್ಲಿ ನಡೆದಿದ್ದು ದುರಾದೃಷ್ಟವೇ ಸರಿ, ಕಳೆದ ವಾರ ಲೋಕೋಪಯೋಗಿ ಸಚಿವರಾದ ಎಚ್.ಡಿ.ರೇವಣ್ಣನವರು ಹಾಸನ ಜಿಲ್ಲೆಯ ರಾಮನಾಥಪುರ ನಿರಾಶ್ರಿತ ಕೇಂದ್ರಕ್ಕೆ ಭೇಟಿ ನೀಡಿದ್ದಾಗ, ನಿರಾಶ್ರಿತರಿಗೆ ಪ್ರಾಣಿಗಳಿಗೆ ಎಸೆಯುವ ರೀತಿ ಬಿಸ್ಕೆಟ್ ಪ್ಯಾಕ್‍ಗಳನ್ನು ಎಸೆಯುವ ಮೂಲಕ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಎಂತಹುದೇ ಅನಿವಾರ್ಯ ಪರಿಸ್ಥಿತಿಯಲ್ಲಿದ್ದರು, ಆ ರೀತಿ ನಡೆದುಕೊಳ್ಳಬಾರದಿತ್ತೆಂದು ಸಾರ್ವಜನಿಕರು ಸಚಿವರ ನಡೆಗೆ ಭಾರೀ ವಿರೋಧ ವ್ಯಕ್ತಪಡಿಸಿದ್ದರು.  ಇದನ್ನೂ ಓದಿ: ಅಧಿಕಾರದ ಮದದಲ್ಲಿ ಅಮಾನವೀಯ ಕೆಲಸ- ಕೊಡಗು ಸಂತ್ರಸ್ತರಿಗೆ ಬಿಸ್ಕೆಟ್ ಎಸೆದ ಸೂಪರ್ ಸಿಎಂ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv