Tag: ನಿರಂಜನಾನಂದಪುರಿ ಸ್ವಾಮೀಜಿ

  • ಕಾಯಿಲೆಗಳಲ್ಲಿಯೇ ಸ್ವಾಭಿಮಾನಿ ಕಾಯಿಲೆ ಅಂದ್ರೆ ಕೊರೊನಾ : ಕಾಗಿನೆಲೆ ಶ್ರೀ

    ಕಾಯಿಲೆಗಳಲ್ಲಿಯೇ ಸ್ವಾಭಿಮಾನಿ ಕಾಯಿಲೆ ಅಂದ್ರೆ ಕೊರೊನಾ : ಕಾಗಿನೆಲೆ ಶ್ರೀ

    ಶಿವಮೊಗ್ಗ: ವಾತಾರಣದಲ್ಲಿ ಆಯಾ ಕಾಲಕ್ಕೆ ತಕ್ಕಂತೆ ಹಲವು ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಕೊರೊನಾ ಆ ರೀತಿ ಕಾಯಿಲೆ ಅಲ್ಲ. ಕೊರೊನಾ ಎನ್ನುವುದು ಸ್ವಾಭಿಮಾನಿ ಕಾಯಿಲೆ ಎಂದು ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದ್ದಾರೆ.

    ಶಿವಮೊಗ್ಗದಲ್ಲಿ ಸಚಿವ ಈಶ್ವರಪ್ಪ ಅವರ ಜನ್ಮ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೊರೊನಾ ಎನ್ನುವುದು ಬಹಳ ದೊಡ್ಡ ಕಾಯಿಲೆ ಅಲ್ಲ. ನಿರ್ಲಕ್ಷ್ಯ ಮಾಡುವವರಿಗೆ ದೊಡ್ಡ ಕಾಯಿಲೆ. ಹೀಗಾಗಿಯೇ ಕಾಯಿಲೆಗಳಲ್ಲಿಯೇ ಅತೀ ಸ್ವಾಭಿಮಾನಿ ಕಾಯಿಲೆ ಎನ್ನುವುದು ಇದ್ದರೆ ಅದು ಕೊರೊನಾ ಕಾಯಿಲೆ ಎಂದರು. ಇದನ್ನು ಓದಿ: ವಿಜಯನಗರ, ಉಡುಪಿಯಲ್ಲಿ ಅರ್ಚಕರಿಗೆ ಫುಡ್ ಕಿಟ್ ವಿತರಣೆ

    ಕೊರೊನಾ ಎನ್ನುವುದು ಹೊರಗಡೆಯೇ ಇರುತ್ತದೆ. ನೀನು ಹೋಗಿ ಮಾತನಾಡಿಸುವ ತನಕ, ನೀನು ಹೋಗಿ ಮುಟ್ಟಿಕೊಳ್ಳುವ ತನಕ, ನೀನು ಹೋಗಿ ಅಲ್ಲಿ ಒದ್ದಾಡುವ ತನಕ ಅದು ನಿನ್ನ ಬಳಿ ಸುಳಿಯುವುದೇ ಇಲ್ಲ. ನೀವು ಅದನ್ನು ಮಾತನಾಡಿಸಲಿಲ್ಲ ಅಂದರೆ ನೀವು ಸೇಫ್ ಆಗಿರುತ್ತೀರಾ. ಹೀಗಾಗಿಯೇ ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್ ಧರಿಸಬೇಕು ಹಾಗೂ ಸ್ಯಾನಿಟೈಸರ್ ಬಳಸಬೇಕು. ಜೊತೆಗೆ ಸ್ವಾಭಿಮಾನಿ ಕೊರೊನಾ ನಮ್ಮ ಮನೆಯೊಳಗೆ ಬಾರದಂತಹ ರೀತಿ ನೋಡಿಕೊಳ್ಳಬೇಕು. ಎಲ್ಲರೂ ಜಾಗೃತರಾಗಿರಬೇಕು ಎಂದು ಸ್ವಾಮೀಜಿ ತಿಳಿಸಿದರು. ಇದನ್ನು ಓದಿ: ರಾಜ್ಯ ಅನ್‍ಲಾಕ್ ಆದ್ರೂ ದೇಗುಲ ತಕ್ಷಣ ತೆರೆಯಲ್ಲ: ಕೋಟ ಶ್ರೀನಿವಾಸ ಪೂಜಾರಿ

  • ಸಿಎಂ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ ಕಾಗಿನೆಲೆ ಶ್ರೀ

    ಸಿಎಂ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ ಕಾಗಿನೆಲೆ ಶ್ರೀ

    ಬೆಂಗಳೂರು: ಸಮ್ಮಿಶ್ರ ಸರ್ಕಾರದ ಪರ ಹಾಗೂ ವಿರೋಧ ಹೇಳಿಕೆ ನೀಡುವ ಮೂಲಕ ಸ್ವಾಮೀಜಿಗಳು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗುತ್ತಿದ್ದಾರೆ. ನಂಜಾವಧೂತ ಸ್ವಾಮೀಜಿ ಎಚ್‍ಡಿಕೆಯನ್ನು ಬೆಂಬಲಿಸಿದ ಬೆನ್ನಲ್ಲೇ ಕಾಗಿನೆಲೆ ಪೀಠಾಧ್ಯಕ್ಷ ನಿರಂಜನಾನಂದಪುರಿ ಸ್ವಾಮೀಜಿ ವಿರೋಧ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮದೊಂದಿಗೆ ಮಾತನಾಡಿದ ನಿರಂಜನಾನಂದಪುರಿ ಸ್ವಾಮೀಜಿ, ಸಮ್ಮಿಶ್ರ ಸರ್ಕಾರ ಸಂಪುಟದಲ್ಲಿ ಕುರುಬ ಸಮುದಾಯಕ್ಕೆ ಹೆಚ್ಚಿನ ಸ್ಥಾನಮಾನ ನೀಡಿಲ್ಲ. ಅಷ್ಟೇ ಅಲ್ಲದೇ ಈಗ ಕುರುಬ ಸಮುದಾಯದ ಅಧಿಕಾರಿಗಳನ್ನು ಹತ್ತಿಕ್ಕಲು ಮುಖ್ಯಮಂತ್ರಿ ಸಮ್ಮಿಶ್ರ ಸರ್ಕಾರ ಮಾಡುತ್ತಿದೆ ಎಂದು ಅವರು ಕಿಡಿಕಾರಿದರು.

    ಸಮ್ಮಿಶ್ರ ಸರ್ಕಾರವು ಒಂದು ಜಾತಿ, ಸಮುದಾಯದ ಅಧಿಕಾರಿಗಳ ವಿರುದ್ಧ ದ್ವೇಷ ಸಾಧಿಸುತ್ತಿದೆ. ಇಂತಹ ಬೆಳವಣಿಗೆಯನ್ನು ಕೂಡಲೇ ಕುಮಾರಸ್ವಾಮಿಯವರು ನಿಲ್ಲಿಸಬೇಕು. ಇಲ್ಲವೇ ಪರಿಣಾಮ ಎದುರಿಸಲು ಸಜ್ಜಾಗಬೇಕು ಎಂದು ಎಚ್ಚರಿಕೆ ನೀಡಿದರು.

    ಸರ್ಕಾರ ಸಮುದಾಯದ ದ್ವೇಷ ಸಾಧನೆ ಮಾಡುತ್ತಿದೆಯೇ ಹೊರತು, ರೈತರ ಆತ್ಮಹತ್ಯೆ ತಡೆಯುವ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಶ್ರೀಗಳು ಸಮ್ಮಿಶ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು.

    ಸರ್ಕಾರಕ್ಕೆ ಎಚ್ಚರಿಕೆ: ಆರಂಭದಲ್ಲಿ ಕುರುಬ ಸಮಾಜದ ಮುಖಂಡರಾದ ಸಿದ್ದರಾಮಯ್ಯರನ್ನು ಸರ್ಕಾರ ಕಡೆಗಣಿಸಿದ್ದ ಸರ್ಕಾರ ಈಗ ಕುರುಬ ಜನಾಂಗದ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿದೆ. ಈ ಸರ್ಕಾರ ಅಸ್ತಿತ್ವಕ್ಕೆ ಬರಲು ಕುರುಬ ಸಮಾಜ ಬಹಳ ಮಹತ್ವದ ಪಾತ್ರ ವಹಿಸಿದೆ. ನಮ್ಮ ಸಮಾಜ ಕಡೆಗಣಿಸಿದರೆ ಹೋರಾಟ ಮಾಡಬೇಕಾದೀತು ಎಂದು ಕುರುಬ ಸಮಾಜದ ಮುಖಂಡ ಸಣ್ಣಕ್ಕಿ ಮೈತ್ರಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

    ಬೆಂಗಳೂರಿನಲ್ಲಿ ಬುಧವಾರ ನಡೆದಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ಗುರುಗುಂಡಾ ಬ್ರಹ್ಮೇಶ್ವರ ಸ್ವಾಮಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಅವರು ಸಮ್ಮಿಶ್ರ ಸರ್ಕಾರದ ಪರವಾಗಿ ಮಾತನಾಡಿದ್ದರು. ಅಲ್ಲದೇ ಸರ್ಕಾರ ಉಳಿಸಿಕೊಂಡು ಹೋಗುವಂತೆ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಸಲಹೆ ನೀಡಿರುವುದಾಗಿ ಹೇಳಿಕೆ ನೀಡಿದ್ದರು. ಆದರೆ ಈಗ ಸಮ್ಮಿಶ್ರ ಸರ್ಕಾರ ಎರಡು ಸಮುದಾಯಗಳ ನಡುವೆ ದ್ವೇಷಕ್ಕೆ ಕಾರಣವಾಯಿತೇ ಎನ್ನುವ ಪ್ರಶ್ನೆ ರಾಜಕೀಯ ವಲಯದಲ್ಲಿ ಸದ್ದು ಮಾಡುತ್ತಿದೆ.

  • ಬೆಂಬಲಿಗರಿಗೆ ಅವಾಚ್ಯ ಪದಗಳಿಂದ ನಿಂದಿಸಿದ ನಿರಂಜನಾನಂದಪುರಿ ಸ್ವಾಮೀಜಿ- ಆಡಿಯೋ ವೈರಲ್

    ಬೆಂಬಲಿಗರಿಗೆ ಅವಾಚ್ಯ ಪದಗಳಿಂದ ನಿಂದಿಸಿದ ನಿರಂಜನಾನಂದಪುರಿ ಸ್ವಾಮೀಜಿ- ಆಡಿಯೋ ವೈರಲ್

    ದಾವಣಗೆರೆ: ಕನಕ ಗುರು ಪೀಠ ಶಾಖಾ ಮಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಆವಾಚ್ಯ ಶಬ್ದಗಳನ್ನು ಬಳಸಿದ ಆಡಿಯೋ ಈಗ ಸಖತ್ ವೈರಲ್ ಆಗಿದೆ.

    ದಾವಣಗೆರೆ ಜಿಲ್ಲೆ, ಹರಿಹರ ತಾಲೂಕಿನ ಬೆಳ್ಳೂಡಿ ಸಮೀಪದ ಕನಕ ಗುರು ಪೀಠ ಶಾಖಾ ಮಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಅವಾಚ್ಯ ಶಬ್ದ ಬಳಸಿ ಬಾಯಿಗೆ ಬಂದಂತೆ ಮಾತನಾಡಿರುವ ಆಡಿಯೋ ಎಲ್ಲೆಡೆ ಹರಿದಾಡ್ತಿದೆ. ಜೂನ್ 2 ರಂದು ಬೆಳ್ಳೂಡಿ ಮಠದಲ್ಲಿ ಆಯೋಜಿಸಿದ್ದ ಕುರುಬ ಸಮಾಜದ ಮುಖಂಡರ ಸಭೆಯಲ್ಲಿ ಸೊಂಟದ ಕೆಳಗಿನ ಭಾಷೆ ಬಳಸಿ ಒಬ್ಬ ರೌಡಿಯಂತೆ ವರ್ತಿಸಿರುವುದನ್ನ ರೆಕಾರ್ಡ್ ಮಾಡಿ ವಾಟ್ಸಪ್‍ನಲ್ಲಿ ಹರಿಬಿಟ್ಟಿದ್ದಾರೆ.

    ಹರಿಹರ ತಾಲೂಕು ಕುರುಬ ಸಮುದಾಯದ ಕೆಲ ನಾಯಕರು ವಿಧಾನಸಭಾ ಕ್ಷೇತ್ರದ ಟಿಕೆಟ್ ಗಾಗಿ ಸ್ವಾಮೀಜಿ ಹಿಂದೆ ದುಂಬಾಲು ಬಿದಿದ್ದಾರೆ. ಅಲ್ಲದೆ ಮುಖಂಡರು ಬಹಿರಂಗವಾಗಿ ಕಿತ್ತಾಡುತ್ತಿದ್ದನ್ನ ಕಂಡಿದ್ದ ನಿರಂಜನಾನಂದಪುರಿ ಸ್ವಾಮೀಜಿ, ನಿಮ್ಮಂಥವರಿಂದಲೇ ಸಮಾಜದ ಮರ್ಯಾದೆ ಹಾಳಾಗಿರೋದು. ನಾನು ಮನಸ್ಸು ಮಾಡಿದ್ರೆ ಲಿಂಗಾಯಿತರನ್ನ ಎಂಎಲ್‍ಎ ಮಾಡ್ತಿನಿ ನೋಡ್ತಿರಾ. ನಾಚಿಕೆ ಆಗಲ್ವಾ, ಹೊಟ್ಟೆಗೆ ಅನ್ನ ತಿಂತಿರೋ ಏನ್ ತಿಂತಿರೋ. ಯಾವನ್ ಗೆಲ್ತಿರೋ ಗೆಲ್ರೋ ನೋಡೋಣ ಅಂತ ಫುಲ್ ಗರಂ ಆಗಿರೋದು ಆಡಿಯೋದಲ್ಲಿದೆ.

    ಜೂನ್ 2 ರಂದು ಮಠಕ್ಕೆ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಭೇಟಿ ನೀಡಿದ್ರು. ಈಶ್ವರಪ್ಪ ನೇತೃತ್ವದಲ್ಲಿ ಸಭೆ ಮುಗಿದ ಬಳಿಕ ಮಾಧ್ಯಮದವರನ್ನ ಹೊರಗಿಟ್ಟು ಸಭೆ ಮುಂದುವರಿಸಿದ ನಿರಂಜನಾನಂದಪುರಿ ಸ್ವಾಮೀಜಿ ಸಮಾಜದ ಮುಖಂಡರಿಗೆ ಸೊಂಟದ ಕೆಳಗಿನ ಭಾಷೆ ಬಳಸಿ ನಿಂದಿಸಿದ್ದಾರೆ. ಒಬ್ಬ ಖಾವಿಧಾರಿಯಾಗಿ ಹೀಗೆ ಪದ ಬಳಕೆ ಮಾಡಿರೋದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ಸ್ವಾಮೀಜಿ ಭಕ್ತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಕ್ಕೆ ರಾಜ್ಯದ ಹಲವು ಮಠದ ಪೀಠಾಧ್ಯಕ್ಷರು ಅವರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧಾರವಾಡದಲ್ಲಿ ಕೂಡಲ ಸಂಗಮ ಪೀಠದ ಪೀಠಾಧ್ಯಕ್ಷೆ ಮಾತೇ ಮಹಾದೇವಿ ಹೇಳಿಕೆ ನೀಡಿದ್ದು, ಸ್ವಾಮೀಜಿಗಳು ಅತ್ಯಂತ ಸೌಜನ್ಯದಿಂದ ಮಾತನಾಡಬೇಕು. ಸ್ವಾಮೀಜಿಗಳು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದು, ಖಾವಿಧಾರಿಗಳಿಗೆ ಅವಮಾನ ಮಾಡಿದ್ದಾರೆ ಎಂದು ಹೇಳಿದ ಮಾತೆ, ಈ ರೀತಿ ನಿಂದನೆ ಮಾಡಿ ಸ್ವಾಮೀಜಿ ಭಕ್ತರಿಗೆ ನೋವುಂಟು ಮಾಡಿದ್ದಾರೆ ಎಂದು ಹೇಳಿದರು.

    ಇನ್ನೊಂದೆಡೆ ಕುಡುಬ ಮಠವಾದ ರೇವಣಸಿದ್ದೇಶ್ವರ ಮಠದ ಬಸವರಾಜ್ ದೇವ್ರು ಸ್ವಾಮೀಜಿ ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರಂಜನಾನಂದ ಸ್ವಾಮೀಜಿ ತಮ್ಮ ಹೇಳಿಕೆ ವಾಪಸ್ ಪಡೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರುವ ಅವರು, ಕನಕ ಗುರು ಪೀಠದ ಸ್ವಾಮೀಜಿಗಳ ಬಗ್ಗೆ ಭಕ್ತರಾಗಿರುವ ಸಿಎಂ ಸಿದ್ಧರಾಮಯ್ಯ ಹಾಗೂ ಎಚ್‍ಎಂ ರೇವಣ್ಣ ತಮ್ಮ ನಿಲುವನ್ನ ತಿಳಿಸಲಿ ಎಂದು ಹೇಳಿದರು.

    ಈ ಬಗ್ಗೆ ದಾವಣಗೆರೆಯಲ್ಲಿ ಕಾಗಿನೆಲೆ ಪೀಠದ ಭಕ್ತ ಮಂಡಳಿ ಸುದ್ದಿಗೋಷ್ಠಿ ನಡೆಸಿದ್ದು, ಯಾರೋ ಕಿಡಿಗೇಡಿಗಳು, ಮಠದ ಏಳಿಗೆಯನ್ನು ಸಹಿಸದ ವ್ಯಕ್ತಿಗಳು ಈ ರೀತಿ ಮಾಡಿದ್ದಾರೆ. ಸ್ವಾಮೀಜಿಯವರು ಸಮಾಜದ ಏಳಿಗೆಗಾಗಿ ಶ್ರಮಿಸಿದವರು. ಸಮಾಜವನ್ನು ತಿದ್ದಲು ಈ ರೀತಿ ಪದ ಬಳಕೆ ಮಾಡಿದ್ದು, ಅದನ್ನು ಬಿಟ್ಟು ಬೇರೆ ಕಾರಣಕ್ಕೆ ಅಲ್ಲ ಎಂದು ಭಕ್ತ ಮಂಡಳಿಯ ಸದಸ್ಯ ಮಹೇಶ್ವರಪ್ಪ ಹೇಳಿದ್ರು. ಅಲ್ಲದೆ ಹರಿಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದ್ರು.

    https://www.youtube.com/watch?v=6KrNjQ-Ih6U