Tag: ನಿಯಮಗಳು

  • ಕೋವಿಡ್ ನಿಯಮ ಉಲ್ಲಂಘನೆ- 14 ವಾಹನಗಳ ವಿರುದ್ಧ ಕೇಸ್, 4 ವಾಹನಗಳು ವಶಕ್ಕೆ

    ಕೋವಿಡ್ ನಿಯಮ ಉಲ್ಲಂಘನೆ- 14 ವಾಹನಗಳ ವಿರುದ್ಧ ಕೇಸ್, 4 ವಾಹನಗಳು ವಶಕ್ಕೆ

    ಹುಬ್ಬಳ್ಳಿ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಜಿಲ್ಲಾಡಳಿತ ಶ್ರಮಪಡುತ್ತಿದೆ. ಇಂದು ಧಾರವಾಡ (ಪೂರ್ವ) ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಸಮರ ಸಾರಿದ್ದಾರೆ.

    ಸರ್ಕಾರದ ಕೋವಿಡ್-19ರ ಮಾರ್ಗಸೂಚಿ ಅನ್ವಯ ಬಸ್, ಮೋಟಾರು ಕ್ಯಾಬ್, ಟೆಂಪೋ ಟ್ರಾವೆಲರ್ ವಾಹನಗಳಿಗೆ ಅನುಮತಿ ನೀಡಿರುವ ಆಸನಕ್ಕಿಂತ ಹೆಚ್ವಿನ ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ವಾಹನಗಳಿಗೆ ದಂಡ ಹಾಕುವ ಮೂಲಕ ಬಿಸಿ ಮುಟ್ಟಿಸಿದ್ದಾರೆ. ವಾಹನಗಳು ಶೇ.50ರಷ್ಟು ಪ್ರಯಾಣಿಕರನ್ನು ಮಾತ್ರ ಕರೆದುಕೊಂಡು ಹೋಗಬೇಕಿದ್ದು, ಸರ್ಕಾರದ ಮಾರ್ಗಸೂಚಿಯನ್ನು ಉಲ್ಲಂಘಿಸಿ ಶೇ.50ಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

    ಕಾರ್ಯಾಚರಣೆಯಲ್ಲಿ ಕೆಎಸ್‍ಆರ್‍ಟಿಸಿಯ 2, ಬೇಂದ್ರೆ ನಗರ ಸಾರಿಗೆಯ 3, ಬಿಆರ್‍ಟಿಎಸ್ ಕಂಪನಿಯ 2, ಪಿಎಸ್‍ಎ 1 ಬಸ್ ಹಾಗೂ 3 ಮೋಟಾರು ಕ್ಯಾಬ್‍ಗಳು ಹಾಗೂ 3 ಮ್ಯಾಕ್ಸಿಕ್ಯಾಬ್ ಸೇರಿ ಒಟ್ಟು 14 ವಾಹನಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಒಂದು ಬೇಂದ್ರೆ ನಗರ ಸಾರಿಗೆಯ ಬಸ್ ಹಾಗೂ 3 ಮ್ಯಾಕ್ಸಿಕ್ಯಾಬ್ ಸೇರಿದಂತೆ ಒಟ್ಟು 4 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

  • ಮದ್ವೆಗೆ 17 ರೂಲ್ಸ್ – ಪಾಲಿಸಬೇಕಾದ ನಿಯಮ ಯಾವುದು? ನಿರ್ಬಂಧ ಏನು?

    ಮದ್ವೆಗೆ 17 ರೂಲ್ಸ್ – ಪಾಲಿಸಬೇಕಾದ ನಿಯಮ ಯಾವುದು? ನಿರ್ಬಂಧ ಏನು?

    ಬೆಂಗಳೂರು: ಕೊರೊನಾ ವೈರಸ್ ತಡೆಗಟ್ಟಲು ಮಾಡಲಾಗಿದ್ದ ಲಾಕ್‍ಡೌನ್ ಅನ್ನು ಸರ್ಕಾರ ಕೆಲ ನಿಯಮವನ್ನು ಜಾರಿಗೆ ತರುವ ಮೂಲಕ ಹಂತ ಹಂತವಾಗಿ ಸಡಿಲಗೊಳಿಸುತ್ತಿದೆ. ಈ ಹಿನ್ನೆಲೆ ಮದುವೆ ಸಮಾರಂಭಗಳಿಗೂ ಕೆಲ ನಿಯಮಗಳನ್ನು ಸರ್ಕಾರ ಜಾರಿಗೆ ತಂದಿದ್ದು, ಇದನ್ನು ಮದುವೆ ಆಗೋರು ಹಾಗೂ ಸಮಾರಂಭದಲ್ಲಿ ಭಾಗಿಯಾಗುವ ಮಂದಿ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆ ಹೊರಡಿಸಿದೆ.

    ಸರ್ಕಾರ 17 ನಿಯಮಗಳನ್ನು ಪಟ್ಟಿ ಮಾಡಿದ್ದು, ಈ ನಿಯವನ್ನು ಮದುವೆ ಆಗೋರು ಹಾಗೂ ಸಮಾರಂಭದಲ್ಲಿ ಭಾಗಿಯಾಗುವ ಮಂದಿ ಪಾಲಿಸಬೇಕು ಎಂದು ತಿಳಿಸಿದೆ. ಮುಂಜಾಗೃತಾ ಕ್ರಮವಾಗಿ ಸರ್ಕಾರ ಈ 17 ನಿಯಮಗಳನ್ನು ರೂಪಿಸಿದ್ದು, ಸಾಮೂಹಿಕವಾಗಿ ಕೊರೊನಾ ವೈರಸ್ ಹಬ್ಬಬಾರದು ಎಂಬ ಉದ್ದೇಶದಿಂದ ಸರ್ಕಾರ ಈ ನಿಯಮ ಜಾರಿಗೆ ತಂದಿದೆ.

    17 ನಿಯಮಗಳು ಯಾವುದು?
    – ಮದುವೆಗಳಿಗೆ ಸ್ಥಳೀಯ ಆಡಳಿತ ಸಂಸ್ಥೆಗಳಿಂದ ಅನುಮತಿ ಕಡ್ಡಾಯ.
    – ಒಂದು ಮದುವೆಯಲ್ಲಿ 50 ಜನಕ್ಕಿಂತ ಹೆಚ್ಚು ಜನ ಸೇರುವ ಹಾಗಿಲ್ಲ.
    – ಸೂಕ್ತ ಸಾರ್ವಜನಿಕ ಸ್ಥಳ ಮತ್ತಿ ನೈಸರ್ಗಿಕ ವಾತಾವರಣ ಇರುವೆಡೆ ಮದುವೆ.
    – ಮದುವೆಗಳಲ್ಲಿ ಎಸಿಗಳು ನಿರ್ಬಂಧ.


    – ಗರ್ಭಿಣಿಯರು, 65 ವರ್ಷ ಮೇಲ್ಪಟ್ಟ ವೃದ್ಧರು, 10 ವರ್ಷದೊಳಗಿನ ಮಕ್ಕಳಿಗೆ ನಿರ್ಬಂಧ.
    – ಕಂಟೈನ್ಮೆಂಟ್ ವಲಯದವರಿಗೆ ನಿರ್ಬಂಧ.
    – ಮದುವೆ ಸ್ಥಳಗಳ ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್ ವ್ಯವಸ್ಥೆ.
    – ಮದುವೆಗೆ ಬರೋರಿಗೆ ಮಾಸ್ಕ್ ಕಡ್ಡಾಯ.
    – ಎಲ್ಲರಿಗೂ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ. 99.5 ಸೆಲ್ಸಿಯಸ್ ಉಷ್ಣತೆ, ಜ್ವರ, ಕೆಮ್ಮು, ನೆಗಡಿ, ಉಸಿರಾಟ ಸಮಸ್ಯೆ ಇರೋರನ್ನು       ನಿರ್ಬಂಧಿಸಲಾಗಿದೆ. ಹೀಗಾಗಿ ಅವರನ್ನು ಆಸ್ಪತ್ರೆಗೆ ಕಳಿಸಬೇಕು.


    – ಒಂದು ಮೀಟರ್ ಸಾಮಾಜಿಕ ಅಂತರ.
    – ಸಾಬೂನಿನಲ್ಲಿ ಹ್ಯಾಂಡ್ ವಾಷ್ ಗೆ ವ್ಯವಸ್ಥೆ ಇರಬೇಕು.
    – ಸಾರ್ವಜನಿಕವಾಗಿ ಉಗುಳುವಂತಿಲ್ಲ.
    – ಮದುವೆಗಳಲ್ಲಿ ಒಬ್ಬ ನೋಡಲ್ ಅಧಿಕಾರಿಯಿರುವುದು ಕಡ್ಡಾಯ.


    – ಮದುವೆಗೆ ಬಂದವರ ಲಿಸ್ಟ್ ನೋಡಲ್ ಅಧಿಕಾರಿಗೆ ಸಲ್ಲಿಸಬೇಕು.
    – ಮದುವೆಗೆ ಬರೋರು ಆರೋಗ್ಯ ಸೇತು ಆಪ್ ಡೌನ್ ಲೋಡ್ ಮಾಡಿಕೊಳ್ಳಬೇಕು.
    – ಮದುವೆ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಬೇಕು.
    – ಮದ್ಯ, ಪಾನ್, ಗುಟ್ಕಾ, ತಂಬಾಕು ಸೇವನೆ ನಿಷಿದ್ಧ.

  • ಕೇರಳದಲ್ಲಿ ನಿಯಂತ್ರಣಕ್ಕೆ ಬಂದ ಕೊರೊನಾ- 63ನೇ ವಯಸ್ಸಿನಲ್ಲಿ ಶೈಲಜಾ ಕಾರ್ಯಕ್ಕೆ ಜನಮೆಚ್ಚುಗೆ

    ಕೇರಳದಲ್ಲಿ ನಿಯಂತ್ರಣಕ್ಕೆ ಬಂದ ಕೊರೊನಾ- 63ನೇ ವಯಸ್ಸಿನಲ್ಲಿ ಶೈಲಜಾ ಕಾರ್ಯಕ್ಕೆ ಜನಮೆಚ್ಚುಗೆ

    – ಹಾಟ್‍ಸ್ಟಾಟ್ ಕೇರಳದಲ್ಲಿ ಸೋಂಕು ಹಿಡಿತಕ್ಕೆ ಬರಲು ಕಾರಣವೇನು?
    – ಕೇರಳದ 8 ಜಿಲ್ಲೆಗಳು ಕೊರೊನಾ ರಹಿತ

    ತಿರುವನಂತಪುರಂ: ಭಾರತದಲ್ಲಿ ಮೊದಲ ಕೊರೊನಾ ಪ್ರಕರಣ ದಾಖಲಾಗಿದ್ದ ಕೇರಳದಲ್ಲಿ ಈಗ ಕೊರೊನಾ ಹಿಡಿತಕ್ಕೆ ಬಂದಿದೆ. ಕೊರೊನಾ ವೈರಸ್ ನ ಹಾಟ್‍ಸ್ಟಾಟ್ ಆಗಿದ್ದ ಕೇರಳ ಅಲ್ಲಿನ ಆರೋಗ್ಯ ಸಚಿವೆ ಕೆಕೆ ಶೈಲಜಾ ಅವರ ದಿಟ್ಟ ಕಾರ್ಯದಿಂದ ಕೊರೊನಾ ಮುಕ್ತವಾಗುತ್ತಿದೆ.

    ಕಳೆದ ವರ್ಷ ಡಿಸೆಂಬರ್ ನಲ್ಲಿ ಚೀನಾದ ವುಹಾನ್ ಪ್ರದೇಶದಲ್ಲಿ ಕಾಣಿಸಿಕೊಂಡ ಕೊರೊನಾ ಇಂದು ವಿಶ್ವಕ್ಕೆ ಮಹಾಮಾರಿಯಾಗಿ ಕಾಡುತ್ತಿದೆ. ಭಾರತದಲ್ಲಿ ಈ ಸೋಂಕು ಮೊದಲಿಗೆ ಕಾಣಿಸಿಕೊಂಡಿದ್ದು ಕೇರಳದಲ್ಲಿ, ಚೀನಾದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗೆ ಈ ಸೋಂಕು ಜನವರಿ 30ರಂದು ಭಾರತದಲ್ಲಿ ಮೊದಲಿಗೆ ಪತ್ತೆಯಾಗಿತ್ತು. ಇದಾದ ನಂತರ ಕೇರಳ ಕೊರೊನಾ ಹಾಟ್‍ಸ್ಟಾಟ್ ಆಗಿತ್ತು.

    ಈ ಹಿಂದೆಯಿಂದಲೂ ಈ ರೀತಿಯ ಪರಿಸ್ಥಿತಿಯನ್ನು ಬಹಳ ಎದುರಿಸಿದ್ದ ಕೇರಳ, ನಿಫಾ, ಹೆಚ್1ಎನ್1, ಚಿಕನ್‍ಗುನ್ಯಾನಂತಹ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಿ ಗೆದ್ದಿತ್ತು. ಈ ಅನುಭವದಿಂದಲೇ ಕೇರಳ ಜನವರಿ 24ರಂದೇ ಕೊರೊನಾ ಕಂಟ್ರೋಲ್ ರೂಂ ಅನ್ನು ಓಪನ್ ಮಾಡಿತ್ತು. ಭಾರತದಲ್ಲಿ ಕೊರೊನಾ ಪ್ರಭಾವ ಹೆಚ್ಚಾಗುವುದಕ್ಕೂ ಮುನ್ನವೇ ಜನರನ್ನು ಐಸೋಲೇಟ್ ಮಾಡಲು ಶುರು ಮಾಡಿತ್ತು. ಜೊತೆಗೆ ಎನ್ 95 ಮಾಸ್ಕ್ ಗಳು ಮತ್ತು ಪಿಪಿಇ ಕಿಟ್‍ಗಳ ಖರೀದಿಗೆ ಮುಂದಾಗಿತ್ತು.

    ದಿಟ್ಟ ನಿರ್ಧಾರ ತೆಗೆದುಕೊಂಡ ಶೈಲಜಾ:
    ಇಂದು ಕೇರಳದಲ್ಲಿ ಕೊರೊನಾ ಹಿಡಿತಕ್ಕೆ ಬರಲು ಕಾರಣ ಅಲ್ಲಿನ ಕೊರೊನಾ ವಾರಿಯರ್ಸ್ ಮತ್ತು ಆರೋಗ್ಯ ಸಚಿವೆ ಕೆಕೆ ಶೈಲಜಾ ಅವರ ದಿಟ್ಟ ನಿರ್ಧಾರಗಳು. ಮೊದಲ ಕೊರೊನಾ ಪ್ರಕರಣ ದಾಖಲಾಗುತ್ತಿದ್ದಂತೆ ಎಚ್ಚೆತ್ತಿದ್ದ ಶೈಲಜಾ ಅವರು, ಮೂರು ಕಾರ್ಯಸೂಚಿಗಳನ್ನು ಜಾರಿಗೆ ತಂದಿದ್ದರು. ಸರ್ಕಾರಿ ಆಸ್ಪತ್ರೆಗಳು ರೋಗಿಗಳ ಸ್ನೇಹಿಯಾಗಿರಬೇಕು. ಹೈಟೆಕ್ ಆಗಿರಬೇಕು. ಹಣವಿಲ್ಲದ ಅಥವಾ ಕಡಿಮೆ ದುಡ್ಡಿಗೆ ಚಿಕಿತ್ಸೆ ನೀಡಬೇಕು ಎಂದು ಮೂರು ಕಾರ್ಯಸೂಚಿಗಳನ್ನು ಮಾಡಿಕೊಂಡಿದ್ದರು.

    ಈ ವಿಚಾರದ ಬಗ್ಗೆ ಮಾತನಾಡಿರುವ ಶೈಲಜಾ ಅವರು, ಈ ಸಮಯದಲ್ಲಿ ಪ್ರಾಥಮಿಕ ಆರೋಗ್ಯ ಘಟಕಗಳು ಬಹಳ ಮುಖ್ಯ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ಈಗ ನಮ್ಮಲ್ಲಿ ಗ್ರಾಮೀಣ ಪ್ರದೇಶದಲ್ಲೂ ಪರೀಕ್ಷಾ ಪ್ರಯೋಗಾಲಯಗಳನ್ನು ಮಾಡಲಾಗಿದೆ. ಅವು ವಿವಿಧ ರೋಗಗಳನ್ನು ಆರಂಭಿಕವಾಗಿಯೇ ಕಂಡುಹಿಡಿಯಲು ಸಮರ್ಥವಾಗಿವೆ. ನಮ್ಮಲ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಹೊಸ ಉಪಕರಣಗಳನ್ನು ಹೊಂದಿವೆ ಮತ್ತು ಉತ್ತಮ ಮೂಲಸೌಕರ್ಯಗಳನ್ನು ಹೊಂದಿವೆ ಎಂದು ತಿಳಿಸಿದ್ದಾರೆ.

    2018ರಲ್ಲಿ ನಿಫಾ ವೈರಸ್ ಬಂದಾಗಿನಿಂದ ನಮ್ಮ ಸರ್ಕಾರ ವೈದ್ಯಕೀಯ ಸಿಬ್ಬಂದಿಗೆ ನಿಯಮಿತ ತರಬೇತಿಯನ್ನು ಜಾರಿಗೆ ತಂದಿತು. ಇದು ಈಗ ಕೊರೊನಾ ತಡೆಗಟ್ಟುವಲ್ಲಿ ನಮಗೆ ಸಹಾಯವಾಯಿತು. ನಮ್ಮ ವೈದ್ಯಕೀಯ ಸಿಬ್ಬಂದಿ ಸಾಂಕ್ರಾಮಿಕ ರೋಗದ ವಿರುದ್ಧ ಏಕಾಏಕಿ ತಯಾರಿಗಾಗಿ ಅಣಕು ಡ್ರಿಲ್‍ಗಳನ್ನು ಸಹ ಮಾಡಿದ್ದರು. ಅವರ ಕಾರ್ಯದಿಂದ ನಾವು ಇಂದು ಕೊರೊನಾ ವಿರುದ್ಧ ಪ್ರಬಲವಾಗಿ ಹೋರಾಡುತ್ತಿದ್ದೇವೆ. ನಮ್ಮ ಈ ಕೆಲಸ ಖಂಡಿತವಾಗಿಯೂ ವ್ಯವಸ್ಥೆಯನ್ನು ಬಲಪಡಿಸಿತು ಎಂದು ಹೇಳಿದ್ದಾರೆ.

    ನಾವು ಕೆಲಸ ಮಾಡುವಾಗ ನಾವೇಲ್ಲ ಒಂದೇ ಎಂಬ ಭಾವನೆಯನ್ನು ಮೂಡಿಸಿಕೊಂಡಿದ್ದೆವು. ದಿನ ಕೆಳಮಟ್ಟದ ಆರೋಗ್ಯ ಸಿಬ್ಬಂದಿಯಿಂದ ಹಿಡಿದು ಎಲ್ಲರ ಜೊತೆ ವಿಡಿಯೋ ಕಾನ್ಫೆರೆನ್ಸ್ ಮಾಡುತ್ತಿದ್ದೇವು. ಆಶಾ ಕಾರ್ಯಕರ್ತೆಯರು ಜಿಲ್ಲಾ ಆರೋಗ್ಯಾಧಿಕಾರಿಗಳ ಜೊತೆ ದಿನಲೂ ನಾನು ಮಾತನಾಡುತ್ತಿದ್ದೆ. ಮಾಹಿತಿ ಪಡೆಯುತ್ತಿದ್ದೆ. ನಾವು ಹೀಗೆ ಕೆಳಹಂತದಿಂದ ಮಾಹಿತಿ ಪಡೆದುಕೊಂಡಿದ್ದು, ಕೆಲಸ ಮಾಡಲು ನಮಗೆ ಸಲಭವಾಗತ್ತದೆ ಎಂದು ಶೈಲಜಾ ಅವರು ಅಭಿಪ್ರಾಯ ಪಟ್ಟಿದ್ದಾರೆ.

    63 ವರ್ಷದ ಕೆಕೆ ಶೈಲಜಾ ಅವರಿಗೆ ಗಂಡ ಮತ್ತು ಇಬ್ಬರು ಮಕ್ಕಳು ಇದ್ದಾರೆ. ಈ ವಯಸ್ಸಿನಲ್ಲೂ ಪ್ರತಿದಿನ 8 ರಿಂದ 9 ಗಂಟೆಗಳ ಕಾಲ ಸಭೆ ಮತ್ತು ವಿಡಿಯೋ ಕಾನ್ಫೆರೆನ್ಸ್ ನಿರತರಾಗಿರುತ್ತಾರೆ. ಇದರ ಜೊತೆಗೆ ಮನೆಯಲ್ಲಿ ಇದ್ದರೆ ರಾತ್ರಿಯ ವೇಳೆಯೂ ಕೂಡ ಯಾವುದೇ ಕರೆ ಬರಲಿ ಮಾತನಾಡುತ್ತಾರೆ ಎಂದು ಅವರ ಮನೆಯವರು ಹೇಳಿದ್ದಾರೆ. 63ನೇ ವಯಸ್ಸಿನಲ್ಲೂ ತನ್ನ ರಾಜ್ಯಕ್ಕಾಗಿ ದುಡಿಯುತ್ತಿರುವ ಶೈಲಜಾ ಅವರ ಕಾರ್ಯಕ್ಕೆ ಎಲ್ಲಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಶೈಲಜಾ ಅವರ ಕಾರ್ಯಕ್ಷಮತೆಯಿಂದ ಇಂದು ಕೇರಳದ 8 ಜಿಲ್ಲೆಗಳು ಕೊರೊನಾ ಮುಕ್ತವಾಗಿವೆ. ಕೇರಳದಲ್ಲಿ ಕೊರೊನಾ ಹಾಟ್‍ಸ್ಟಾಟ್ ಆಗಿದ್ದ ಕಾಸರಗೋಡು, ಕೋಜಿಕೋಡ್, ಪಾಲಕ್ಕಾಡ್, ಅಲಾಪ್ಪುಜಾ, ಕೊಟ್ಟಾಯಂ, ಇಡುಕ್ಕಿ, ಪಥನಮತ್ತತ್ತ ಮತ್ತು ತಿರುವನಂತಪುರಂ ಜಿಲ್ಲೆಗಳು ಕೊರೊನಾ ರಹಿತ ಜಿಲ್ಲೆಗಳಾಗಿವೆ. ಜೊತೆಗೆ ಕೇರಳದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಕಮ್ಮಿ ಆಗುತ್ತಿದ್ದು, ಸೋಂಕಿನಿಂದ ಗಣಮುಖರಾಗುತ್ತಿರುವವರ ಸಂಖ್ಯೆ ಜಾಸ್ತಿಯಾಗಿದೆ.

    ಕೇರಳದಲ್ಲಿ ಕೊರೊನಾ ಕಾಣಿಸಿಕೊಂಡದಿಂದ ಇಲ್ಲಿಯವರೆಗೆ ಸುಮಾರು 512 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಕೇವಲ ಮೂರು ಜನರು ಸಾವನ್ನಪ್ಪಿದ್ದಾರೆ. ಜೊತೆಗೆ ಈಗ ಕೇವಲ 20 ಜನರು ಕೊರೊನಾ ಚಿಕತ್ಸೆ ಪಡೆಯುತ್ತಿದ್ದು, ಇನ್ನುಳಿದ 488 ಜನರು ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಚ್ ಆಗಿದ್ದಾರೆ. ಇಲ್ಲಿಯವರೆಗೂ ಸುಮಾರು 37,464 ಸ್ಯಾಂಪಲ್‍ಗಳನ್ನು ಪರೀಕ್ಷೆ ಮಾಡಿದ್ದು, ಅದರಲ್ಲಿ 36,630 ಸ್ಯಾಂಪಲ್ಸ್ ಗಳು ನೆಗೆಟಿವ್ ಬಂದಿವೆ.

    ಇದರ ಜೊತೆಗೆ ಕೆಕೆ ಶೈಲಜಾ ಅವರು, ಬೇರೆ ಪ್ರದೇಶದಿಂದ ಕೇರಳಕ್ಕೆ ಬಂದವರು ಕಡ್ಡಾಯವಾಗಿ ಕೊರೊನಾ ಪರೀಕ್ಷೆಗೆ ಒಳಪಡಬೇಕು. ಪರೀಕ್ಷೆಯಲ್ಲಿ ಕೊರೊನಾದ ಒಂದು ಲಕ್ಷಣ ಕಂಡುಬಂದರೂ ಅವರು ಕೋವಿಡ್ ಆಸ್ಪತ್ರೆಗೆ ದಾಖಲಾಗಬೇಕು. ಒಂದು ವೇಳೆ ಪರೀಕ್ಷೆಯಲ್ಲಿ ಲಕ್ಷಣ ಕಂಡುಬಾರದೆ ಇದ್ದರೇ ಅವರು 14 ದಿನಗಳ ಕಾಲ ಹೋಂ ಕ್ವಾರಂಟೈನ್‍ನಲ್ಲಿ ಇರಬೇಕು ಎಂದು ನಿಯಮ ಮಾಡಿದ್ದಾರೆ.

  • ಗುರುವಾರದಿಂದ ಕರ್ನಾಟಕದಲ್ಲಿ ಏನಿರುತ್ತೆ? ಏನಿರಲ್ಲ? ಕಡ್ಡಾಯ ಏನು?

    ಗುರುವಾರದಿಂದ ಕರ್ನಾಟಕದಲ್ಲಿ ಏನಿರುತ್ತೆ? ಏನಿರಲ್ಲ? ಕಡ್ಡಾಯ ಏನು?

    ಬೆಂಗಳೂರು: ರಾಜ್ಯ ಸರ್ಕಾರ ಕೊನೆಗೂ ಕೊರೋನಾ ಲಾಕ್‍ಡೌನ್ ಸಡಿಲಿಕೆ ಮಾಡಿದೆ. ಪಾದರಾಯನಪುರ ಗಲಭೆ ಬಳಿಕ ಮೇ ಮೂರವರೆಗೂ ಯಾವುದೇ ಸಡಿಲಿಕೆ ಇಲ್ಲ ಎಂದಿದ್ದ ಯಡಿಯೂರಪ್ಪ ನೇತೃತ್ವದ ಸರ್ಕಾರ ಇವತ್ತು ಯೂಟರ್ನ್ ತೆಗೆದುಕೊಂಡಿದೆ.

    ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಭಾಗಷಃ ಲಾಕ್‍ಡೌನ್ ಸಡಿಲಿಕೆ ಮಾಡಿ ತೀರ್ಮಾನ ತೆಗೆದುಕೊಂಡಿದೆ. ಹಾಟ್ ಸ್ಪಾಟ್, ನಾನ್ ಹಾಟ್‍ಸ್ಪಾಟ್ ಮತ್ತು ಹಸಿರು ವಲಯದ ಸೂತ್ರಗಳನ್ನು ಪಕ್ಕಕ್ಕೆ ಇಟ್ಟ ರಾಜ್ಯ ಸರ್ಕಾರ, ಕೊರೋನಾ ಸೋಂಕು ಹೆಚ್ಚಿರುವ ಕಂಟೈನ್‍ಮೆಂಟ್ ಜೋನ್‍ಗಳನ್ನು ಹೊರತುಪಡಿಸಿ ಉಳಿದ ಕಡೆ ಲಾಕ್‍ಡೌನ್ ಸಡಿಲ ಮಾಡುತ್ತಿದೆ.

    ಸಡಿಲಿಕೆ ನೀಡಿದರೂ ಷರತ್ತುಗಳು ಅನ್ವಯ ಆಗುತ್ತವೆ. ಕ್ವಾರಂಟೇನ್‍ನಲ್ಲಿರುವವರು ಹೊರ ಬರುವಂತೆ ಇಲ್ಲ. ಬೆಂಗಳೂರಿನಲ್ಲಿ ತಂಬಾಕು, ಗುಟ್ಕಾ, ಸಿಗರೇಟು ಮಾರಾಟ ನಿಷೇಧಿಸಿ ಬಿಬಿಎಂಪಿ ಸಹ ಆದೇಶ ಹೊರಡಿಸಿದೆ.

    ನಾಳೆಯಿಂದ ಏನಿರುತ್ತೆ..?
    * ತುರ್ತು ಸಂದರ್ಭಗಳಲ್ಲಿ ಖಾಸಗಿ ವಾಹನಗಳ ಸಂಚಾರ
    * ಮನೆ – ಕಚೇರಿ ನಡುವೆ ಸಂಚಾರಕ್ಕೆ ಪಾಸ್ ಕಡ್ಡಾಯ
    * ಎಲ್ಲಾ ರೀತಿಯ ಕೃಷಿ, ತೋಟಗಾರಿಕಾ ಚಟುವಟಿಕೆ
    * ಎಪಿಎಂಸಿ, ಬೀಜ, ಗೊಬ್ಬರ, ಕ್ರಿಮಿನಾಶಕಗಳ ಅಂಗಡಿ
    * ಮೀನುಗಾರಿಕೆ, ಹೈನೋದ್ಯಮ, ಕುಕ್ಕಟೋದ್ಯಮ
    * ಬ್ಯಾಂಕ್ ಚಟುವಟಿಕೆ, ಎಟಿಎಂ, ಷೇರುಪೇಟೆ

    * ಎಲ್ಲಾ ರೀತಿಯ ಪಿಂಚಣಿ ವಿತರಿಸಲು ಅವಕಾಶ
    * ಅಂಗನವಾಡಿಗಳಿಗೆ ಷರತ್ತುಬದ್ಧ ಅನುಮತಿ (ಮಕ್ಕಳು, ಗರ್ಭಿಣಿಯರ ಮನೆಗಳಿಗೆ ಪೌಷ್ಠಿಕಾಂಶ ಆಹಾರ ತಲುಪಿಸುವ ಕ್ರಮ)
    * ಆನ್‍ಲೈನ್ ತರಗತಿ, ಕೋರಿಯರ್ ಸೇವೆ
    * ಎಲೆಕ್ಟ್ರಿಷಿಯನ್, ಮೋಟಾರ್ ಮೆಕಾನಿಕ್, ಪ್ಲಂಬರ್, ಕಾರ್ಪೆಂಟರ್ ಸೇವೆ
    * ನರೇಗಾ ಯೋಜನೆಯಡಿ ನೀರಾವರಿ ಕಾಮಗಾರಿ
    * ತುರ್ತು ಮತ್ತು ಅಗತ್ಯ ವಸ್ತುಗಳ ತಯಾರಿಕಾ ಘಟಕ
    * ಗ್ರಾಮೀಣ ಪ್ರದೇಶಗಳಲ್ಲಿ ಆಹಾರ ಸಂಸ್ಕರಣೆ ಘಟಕ

    * ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ, ಕಟ್ಟಡ ನಿರ್ಮಾಣ, ನೀರಾವರಿ ಕಾಮಗಾರಿ
    * ಕೈಗಾರಿಕಾ ಪ್ರದೇಶಗಳಲ್ಲಿ ಸ್ಥಳೀಯ ಕಾರ್ಮಿಕ ಬಳಸಿಕೊಂಡು ನಿರ್ಮಾಣ
    * ಮೆಟ್ರೋ ರೈಲು ಕಾಮಗಾರಿ (ಸ್ಥಳೀಯ ಕಾರ್ಮಿಕರನ್ನು ಮಾತ್ರ ಬಳಸಿಕೊಳ್ಳಬೇಕು)
    * ಸೀಮೆಂಟ್, ಸ್ಟೀಲ್, ಜಲ್ಲಿ, ಟೈಲ್ಸ್, ಇಟ್ಟಿಗೆ ಸಾಗಿಸಲು ಅವಕಾಶ (ಇಬ್ಬರು ಚಾಲಕರು, ಓರ್ವ ಕ್ಲೀನರ್)
    * ಹೈವೇ ಪಕ್ಕದ ಡಾಬಾ, ಟ್ರಕ್ ರಿಪೇರಿ ಶಾಪ್‍ಗಳು (20 ಕಿಲೋಮೀಟರ್ ಅಂತರ)
    * ಪಾರ್ಸೆಲ್ ಮತ್ತು ಸರಕು ಸಾಗಣೆ ರೈಲು, ಕಾರ್ಗೋ ವಿಮಾನ

    * ಇ-ಕಾಮರ್ಸ್ ಸೇವೆ (ಅಗತ್ಯ ವಸ್ತುಗಳ ಪೂರೈಕೆಗಷ್ಟೇ ಅವಕಾಶ)
    * ತುರ್ತು ಮತ್ತು ಅಗತ್ಯ ಸೇವೆ ಒದಗಿಸುವ ಸರ್ಕಾರಿ ಕಚೇರಿಗಳು
    * ಸಚಿವರು, ಉನ್ನತಧಿಕಾರಿಗಳು ಕಚೇರಿಗೆ ಹಾಜರಾಗುವುದು ಕಡ್ಡಾಯ
    * ಶೇ.33ರಷ್ಟು ಕೆಳ ಹಂತದ ಅಧಿಕಾರಿಗಳಿಂದ ಕಚೇರಿ ನಡೆಸಬೇಕು
    * ಶೇ.33ರಷ್ಟು ನೌಕರರೊಂದಿಗೆ ಐಟಿ-ಬಿಟಿ ಕಚೇರಿಗಳು ಓಪನ್

    ಯಾವುದಕ್ಕೆ ಇಲ್ಲ ರಿಲೀಫ್..?
    > ಬಸ್, ರೈಲು, ನಮ್ಮ ಮೆಟ್ರೋ, ವಿಮಾನ ಸಂಚಾರ
    > ಅಂತರ್ ಜಿಲ್ಲೆ, ಅಂತರ್ ರಾಜ್ಯಗಳ ನಡುವಣ ಸಂಚಾರ
    > ಶೈಕ್ಷಣಿಕ ಸಂಸ್ಥೆಗಳು, ತರಬೇತಿ ಕೇಂದ್ರಗಳು
    > ಕೈಗಾರಿಕೆ, ವಾಣಿಜ್ಯ ಚಟುವಟಿಕೆ (ಅಗತ್ಯ ಸೇವೆ ಹೊರತುಪಡಿಸಿ)
    > ಆತಿಥ್ಯ ಸೇವೆಗಳು (ಅಗತ್ಯ ಸೇವೆ ಹೊರತುಪಡಿಸಿ)
    > ಓಲಾ, ಉಬರ್ ಕ್ಯಾಬ್, ಟ್ಯಾಕ್ಸಿ, ಆಟೋ ರಿಕ್ಷಾ
    > ಥಿಯೇಟರ್, ಶಾಪಿಂಗ್ ಮಾಲ್, ಜಿಮ್, ಈಜುಕೊಳ
    > ಹೋಟೆಲ್, ರೆಸ್ಟೋರೆಂಟ್, ಬಾರ್, ವೈನ್ ಶಾಪ್
    > ಎಲ್ಲಾ ರೀತಿಯ ಸಭೆ ಸಮಾರಂಭಗಳು
    > ಅಂತ್ಯಕ್ರಿಯೆಯಲ್ಲಿ 20ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವಂತಿಲ್ಲ

    ಕಡ್ಡಾಯವಾಗಿ ಏನು ಪಾಲಿಸಬೇಕು?
    > ಕಚೇರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು
    > ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ನಿಷೇಧ, ಸಾಮಾಜಿಕ ಅಂತರ
    > ಸಾರ್ವಜನಿಕ ಸ್ಥಳಗಳಲ್ಲಿ 5ಕ್ಕಿಂತ ಹೆಚ್ಚು ಮಂದಿ ನಿಲ್ಲುವಂತಿಲ್ಲ
    > ಕಚೇರಿಗಳಲ್ಲಿ ಥರ್ಮಲ್ ಸ್ಕ್ರೀನಿಂಗ್, ಹ್ಯಾಂಡ್ ಸ್ಯಾನಿಟೈಸರ್
    > 65 ವರ್ಷ ಮೇಲ್ಪಟ್ಟವರು, ಚಿಕ್ಕ ಮಕ್ಕಳ ತಾಯಂದಿರಿಗೆ ಮನೆಯಿಂದಲೇ ಕೆಲಸ
    > ಆರೋಗ್ಯ ಸೇತು ಆ್ಯಪ್ ಬಳಕೆ ಕಡ್ಡಾಯ, ದೊಡ್ಡ ಸಭೆ ಮಾಡುವಂತಿಲ್ಲ
    > ಡಿಸಿ ಅನುಮತಿ ಪಡೆದು ಮದುವೆ, ಇತ್ಯಾದಿ ಸಮಾರಂಭ

  • ಸರ್ಕಾರ ಜಾರಿಗೆತಂದ ನಿಯಮಗಳನ್ನು ಪಾಲಿಸಿ – ಕೈಮುಗಿದು ಶಿವಣ್ಣ ಮನವಿ

    ಸರ್ಕಾರ ಜಾರಿಗೆತಂದ ನಿಯಮಗಳನ್ನು ಪಾಲಿಸಿ – ಕೈಮುಗಿದು ಶಿವಣ್ಣ ಮನವಿ

    ಬೆಂಗಳೂರು: ಕೊರೊನಾ ವಿರುದ್ಧ ಸರ್ಕಾರ ಜಾರಿ ಮಾಡಿರುವ ನಿಯಮವನ್ನು ಪಾಲಿಸಿ ಎಂದು ನಟ ಶಿವರಾಜ್ ಕುಮಾರ್ ಅವರು ಜನರಲ್ಲಿ ಕೈಮುಗಿದು ಮನವಿ ಮಾಡಿದ್ದಾರೆ.

    ದೇಶದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ವೈರಸ್ ಅನ್ನು ತಡೆಯಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಹಲವಾರು ನಿಯಮಗಳನ್ನು ಜಾರಿಗೆ ತರುತ್ತಿವೆ. ಆದರೆ ಇದನ್ನು ನಮ್ಮ ಜನರು ಸರಿಯಾಗಿ ಪಾಲಿಸುವಲ್ಲಿ ವಿಫಲರಾಗುತ್ತಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ಶಿವಣ್ಣ ಸರ್ಕಾರ ನಿಯಮ ಪಾಲಿಸಿ, ಈ ಕೊರೊನಾ ವೈರಸ್ ವಿರುದ್ಧ ಹೋರಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

    ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಡಿಯೋ ಮಾಡಿರುವ ಶಿವಣ್ಣ, ಅದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಶಿವಣ್ಣ, ಸರ್ಕಾರ ರೂಪಿಸಿರುವ ನಿಯಮವನ್ನು ನಾವು ಕಟ್ಟುನಿಟ್ಟಾಗಿ ಪಾಲಿಸೋಣ. ಈ ಕೊರೊನಾ ಬಂದು ಎಲ್ಲರಿಗೂ ತೊಂದರೆ ಕೊಟ್ಟಿದೆ. ಅದನ್ನು ತಡೆಗಟ್ಟುವ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ನಾವು ಸರ್ಕಾರದ ಆದೇಶವನ್ನು ಪಾಲಿಸಬೇಕು ಎಂದು ಕೇಳಿಕೊಂಡಿದ್ದಾರೆ.

    ನಮಗೂ ಗೊತ್ತು ಈಗ ಹಬ್ಬ ಬಂದಿದೆ. ಎಲ್ಲರಿಗೂ ಕಷ್ಟವಾಗುತ್ತದೆ. ಆದರೆ ನಾವೆಲ್ಲರೂ ಈ ಹಬ್ಬವನ್ನು ಸರಳ ರೀತಿಯಲ್ಲಿ ಆಚರಣೆ ಮಾಡೋಣ. ನಾನು ಕೂಡ ನಿಮ್ಮ ಜೊತೆಯಲ್ಲಿ ಹಬ್ಬವನ್ನು ಸರಳವಾಗಿಯೇ ಆಚರಣೆ ಮಾಡುತ್ತೇನೆ. ಹಬ್ಬವನ್ನು ಅದ್ಧೂರಿಯಾಗಿ ಜಾಮ್‍ಜೂಮ್ ಎಂದು ಆಚರಣೆ ಮಾಡುವುದು ಬೇಡ. ತೊಂದರೆ ಎಲ್ಲರಿಗೂ ಆಗಿದೆ. ಆ ತೊಂದರೆ ವಿರುದ್ಧ ಹೋರಾಡುವ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳಬೇಕು ಎಂದು ಶಿವಣ್ಣ ತಿಳಿಸಿದ್ದಾರೆ.

    ಎಲ್ಲರೂ ಸಾಧ್ಯವಾದಷ್ಟು ಮನೆಯಲ್ಲೇ ಇರಿ. ನಾನು ಟಿವಿಯಲ್ಲಿ ನೋಡಿದ್ದೇನೆ ಸಾಕಷ್ಟು ಜನ ಹೊರಗೆ ಬಂದು ಪೊಲೀಸರ ಕೈಯಲ್ಲಿ ಏಟು ತಿನ್ನುತ್ತಿದ್ದಾರೆ. ನಮ್ಮಿಂದ ಪೊಲೀಸರಿಗೂ ತೊಂದರೆ. ಅವರಿಗೂ ಕೂಡ ಯಾವುದೇ ರೀತಿಯಲ್ಲಿ ಆದರೂ ಸೋಂಕು ತಗಲುಬಹುದು. ಆದರೂ ಅವರು ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಅದಷ್ಟು ಮನೆಯಲ್ಲೇ ಇರಿ ಪೊಲೀಸರಿಗೆ ಹಾಗೂ ಸರ್ಕಾರಕ್ಕೆ ತೊಂದರೆ ಕೊಡಬೇಡಿ. ಯಾವಗಲೂ ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳಿ. ಅದಷ್ಟು ಬೇಗ ಕೊರೊನಾ ವೈರಸ್ ಹೋಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡೋಣ ಎಂದು ಶಿವಣ್ಣ ವಿಡಿಯೋ ಮೂಲಕ ಕೈಮುಗಿದು ಮನವಿ ಮಾಡಿಕೊಂಡಿದ್ದಾರೆ.

  • ಅಯೋಧ್ಯೆ ತೀರ್ಪು – ಸೋಷಿಯಲ್ ಮೀಡಿಯಾಗಳಲ್ಲಿ ಪಾಲಿಸಲೇಬೇಕಾದ 9 ಸೂಚನೆಗಳು

    ಅಯೋಧ್ಯೆ ತೀರ್ಪು – ಸೋಷಿಯಲ್ ಮೀಡಿಯಾಗಳಲ್ಲಿ ಪಾಲಿಸಲೇಬೇಕಾದ 9 ಸೂಚನೆಗಳು

    ಬೆಂಗಳೂರು: ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಪೊಲೀಸರು ಕೆಲವೊಂದು ಕಠಿಣ ಎಚ್ಚರಿಕೆ ನೀಡಿದ್ದಾರೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು-ಸುದ್ದಿ ಹರಡದಂತೆ ಸೂಚನೆ ನೀಡಿದ್ದಾರೆ.

    ಪರ-ವಿರೋಧ ತೀರ್ಪು ಬಂದರೆ ವಿಜಯೋತ್ಸವ ಆಚರಿಸುವುದಾಗಲೀ ಅಥವಾ ಘೋಷಣೆ ಕೂಗುವುದನ್ನಾಗಲಿ ಮಾಡದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ:ಅಯೋಧ್ಯೆಯಲ್ಲಿ ಸರ್ಪಗಾವಲು – ಇಂಟರ್‌ನೆಟ್ ಸ್ಥಗಿತ, 8 ತಾತ್ಕಾಲಿಕ ಜೈಲು ಸ್ಥಾಪನೆ

    ಸಾರ್ವಜನಿಕರಿಗೆ ಸೂಚನೆಗಳು
    – ಫೇಸ್‍ಬುಕ್, ಇನ್‍ಸ್ಟಾಗ್ರಾಮ್, ವಾಟ್ಸಾಪ್, ಟ್ವಿಟ್ಟರ್ ಹಾಗೂ ಇನ್ನಿತರೆ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಸಂದೇಶಗಳನ್ನು, ಪೋಸ್ಟ್‌ಗಳನ್ನು, ಕಮೆಂಟ್‍ಗಳನ್ನು ಹಾಕಬೇಡಿ.

    – ಸಾಮಾಜಿಕ ಜಾಲತಾಣಗಳಿಗೆ ಸಂಬಂಧಿಸಿದಂತೆ ಕಟ್ಟು ನಿಟ್ಟಿನಿಂದ ನಿಯಮಗಳು ಅನ್ವಯವಾಗಲಿದ್ದು, ಫೇಸ್‍ಬುಕ್, ಇನ್‍ಸ್ಟಾಗ್ರಾಮ್, ವಾಟ್ಸಾಪ್, ಟ್ವಿಟ್ಟರ್ ಹಾಗೂ ಇನ್ನಿತರೆ ಜಾಲತಾಣಗಳ ಮೇಲೆ ಸೂಕ್ತ ನಿಗಾವಹಿಸಲಾಗಿದೆ.  ಇದನ್ನೂ ಓದಿ:ರಾಜ್ಯಾದ್ಯಂತ ಕಟ್ಟೆಚ್ಚರ – ಬಸ್ಸು ಆಟೋ, ಟ್ಯಾಕ್ಸಿ, ಮೆಟ್ರೋ ಯಥಾಸ್ಥಿತಿ

    – ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ತಪ್ಪು ಸಂದೇಶಗಳನ್ನು ಯಾರಿಗೂ ರವಾನಿಸಬೇಡಿ, ಈ ಬಗ್ಗೆ ಮಕ್ಕಳು, ಸಹೋದರ, ಸಹೋದರಿಯರು, ಅಕ್ಕಪಕ್ಕದವರು ಹಾಗೂ ಸಂಬಂಧಿಕರಿಗೆ ಈ ಮಾಹಿತಿಯನ್ನು ತಿಳಿಸಿ.

    – ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಧರ್ಮಕ್ಕೆ ಸಂಬಂಧಿಸಿದಂತೆ ಆಕ್ಷೇಪಾರ್ಹ ಪೋಸ್ಟ್‌ ಅಥವಾ ವೀಡಿಯೋ ಸಂದೇಶಗಳನ್ನು ಪೋಸ್ಟ್‌ ಮಾಡಬೇಡಿ. ಇದನ್ನೂ ಓದಿ:ಒಂದೂವರೆ ಶತಮಾನದ ಅಯೋಧ್ಯೆ ವ್ಯಾಜ್ಯ ಇಂದು ಇತ್ಯರ್ಥ – ಯಾರ ವಾದ ಏನು? ಯಾವ ವರ್ಷ ಏನಾಯ್ತು?

    – ಯಾವುದೇ ರಾಜಕೀಯ ಹಾಗೂ ಧಾರ್ಮಿಕ ವಿಷಯದ ಬಗ್ಗೆ ನಿಂದನೀಯ ಸಂದೇಶಗಳನ್ನು ಕಳುಹಿಸುವುದು, ರವಾನಿಸುವುದು ಅಪರಾಧವಾಗಿದ್ದು ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ. ಸುದ್ದಿಯ ಮೂಲವನ್ನು ಪರಿಶೀಲಿಸದೇ ಅದನ್ನು ಇತರರಿಗೆ ಕಳುಹಿಸಲು ಹೋಗಬೇಡಿ.

    – ರಾಮ ಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ವಿಚಾರವು ದೇಶದ ಅತೀ ಗಂಭೀರ ವಿಚಾರವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಗ್ರೂಪ್ ಸದಸ್ಯರುಗಳು ಗಂಭೀರವಾಗಿ ಯೋಚಿಸಿ, ಕಾನೂನು ಸುವ್ಯವಸ್ಥೆಗೆ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆಯನ್ನುಂಟು ಮಾಡುವಂತಹ ಸಂದೇಶಗಳನ್ನು ಹಾಕಬೇಡಿ. ಇದನ್ನೂ ಓದಿ:ಅಯೋಧ್ಯೆ ತೀರ್ಪು ಏನೇ ಬಂದ್ರೂ ಶಾಂತಿಯುತವಾಗಿ ಸ್ವಾಗತಿಸ್ತೀವಿ: ರೋಶನ್ ಬೇಗ್

    – ಸಾಮಾಜಿಕ ಜಾಲತಾಣಗಳಲ್ಲಿ ಬಂದಂತಹ ಪ್ರಚೋದನಾತ್ಮಕ ಸಂದೇಶಗಳನ್ನು ಬೇರೆ ಗ್ರೂಪ್‍ಗಳಿಗೆ ಮರು ಕಳುಹಿಸುವುದು (Forward) ಕಂಡುಬಂದಲ್ಲಿ, ಸಂದೇಶವನ್ನು ಕಳುಹಿಸಿದ ವ್ಯಕ್ತಿ ಮತ್ತು ಗ್ರೂಪ್ ಅಡ್ಮಿನ್‍ಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುವುದು.

    – ಈ ವಿಚಾರವು ದೇಶದ ಸಾರ್ವಭೌಮತ್ವ ಹಾಗೂ ಸೌಹಾರ್ದತೆಗೆ ನೇರವಾಗಿ ಪರಿಣಾಮ ಬೀರುವಂತಹ ವಿಚಾರವಾದ್ದರಿಂದ ಯಾವುದೇ ತಪ್ಪು ಸಂದೇಶವನ್ನು ರವಾನಿಸಬೇಡಿ.

    – ನ್ಯಾಯಾಲಯದ ತೀರ್ಪನ್ನು ನಿಂದಿಸಬೇಡಿ. ತೀರ್ಪಿನ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿ ಅಭಿಪ್ರಾಯವನ್ನು ಎಲ್ಲೂ ಹಂಚಿಕೊಳ್ಳಬೇಡಿ.

    ತಪ್ಪದೇ ಈ ಮೇಲ್ಕಂಡ ವಿಚಾರವನ್ನು ಎಲ್ಲರಿಗೂ ತಿಳಿಸಿ, ವಿಷಯದ ಸಂಬಂಧ ನಿಯಮಗಳ ಬಗ್ಗೆ ಗಮನಹರಿಸಿ ಹಾಗೂ ಗುಂಪುಗಳು ಸದಾ ಜಾಗರೂಕರಾಗಿ ಇರಿ. ಮಾದರಿ ಸಮಾಜಕ್ಕೆ ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಿ ಎಂದು ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತರು ಮನವಿ ಮಾಡಿಕೊಂಡಿದ್ದಾರೆ.

  • ಮಾಣಿಕ್ ಷಾ ಮೈದಾನದಲ್ಲಿ ಸೆಲ್ಫಿ, ಕಪ್ಪು ಬಟ್ಟೆಗೆ ನೋ ಎಂಟ್ರಿ

    ಮಾಣಿಕ್ ಷಾ ಮೈದಾನದಲ್ಲಿ ಸೆಲ್ಫಿ, ಕಪ್ಪು ಬಟ್ಟೆಗೆ ನೋ ಎಂಟ್ರಿ

    ಬೆಂಗಳೂರು: ಆಗಸ್ಟ್ 15ರಂದು 73 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತದೆ. ಮೈದಾನದಲ್ಲಿ ಶಾಮಿಯಾನ, ವೇದಿಕೆ ನಿರ್ಮಾಣ, ಬ್ಯಾರಿಕೇಡ್ ಮತ್ತು ಆಸನಗಳ ವ್ಯವಸ್ಥೆಯಾಗಿದೆ. ಹಾಗೆಯೇ ಈ ಬಾರಿ ಹೊಸ ನಿಯಮಗಳನ್ನು ಕೂಡ ಮಾಡಲಾಗಿದ್ದು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗಿಯಾಗುವವರು ಇದನ್ನೂ ಪಾಲಿಸಬೇಕಿದೆ.

    ಈ ಬಗ್ಗೆ ಬಿಬಿಎಂಪಿ ಕಮೀಷನರ್, ಬೆಂಗಳೂರು ನಗರ ಪೊಲೀಸ್ ಆಯುಕ್ತರು ಜಂಟಿ ಸುದ್ದಿಗೋಷ್ಠಿ ನಡೆಸಿ ಆ.15ರ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಆ.15ರಂದು ಮುಖ್ಯಮಂತ್ರಿಗಳು ಬೆಳಿಗ್ಗೆ 8.58ಕ್ಕೆ ಮೈದಾನ ಪ್ರವೇಶಿಸಲಿದ್ದು, 9 ಗಂಟೆ ಸರಿಯಾಗಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಆಗ ಪುಷ್ಪವೃಷ್ಠಿ ಮಾಡಿ 3 ಸೇನಾದಳದಿಂದ ಗೌರವ ಸ್ವೀಕರಿಸಲಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದರು.

    ಇಂದು ಬೆಂಗಳೂರು ಪೊಲೀಸ್ ಕಮೀಷನರ್ ಹಾಗೂ ಬಿಬಿಎಂಪಿ ಕಮೀಷನರ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ತಾಲೀಮು ನಡೆಸಿದರು. ಈ ವೇಳೆ ಪರೇಡ್ ಮಾಡುವ ತಂಡಗಳು ಶಿಸ್ತು ಕಾಯ್ದುಕೊಳ್ಳುವಂತೆ ಪೊಲೀಸ್ ಕಮೀಷನರ್ ಕ್ಲಾಸ್ ತೆಗೆದುಕೊಂಡರು. ಸ್ವಾತಂತ್ರ್ಯ ದಿನಾಚರಣೆ ವೇಳೆ ಪಥಸಂಚಲದಲ್ಲಿ  ಕೆಎಸ್‌ಆರ್‌ಪಿ, ಸ್ಕೌಟ್ಸ್, ಗೈಡ್ಸ್, ಎನ್‍ಸಿಸಿ, ಸೇವಾದಳ ಹಾಗೂ ಶಾಲಾ ಮಕ್ಕಳನ್ನು ಒಳಗೊಂಡ ಕವಾಯತು ಮತ್ತು ಬ್ಯಾಂಡಿನ 34 ತುಕಡಿಗಳಲ್ಲಿ ಸುಮಾರು 1130 ಮಂದಿ ಭಾಗವಹಿಸಲಿದ್ದಾರೆ.

    ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 1250 ಶಾಲಾ ಮಕ್ಕಳು ಭಾಗಿಯಾಗಲಿದ್ದು, ನಾಡಗೀತೆ, ರೈತ ಗೀತೆ, ಭಾರತಾಂಬೆಯ ಮಡಿಲಿನ ಮಕ್ಕಳು, ಜಲಿಯನ್ ವಾಲಾಬಾಗ್ ಹತ್ಯಾಕಾಂಡ 1919, ಜಿಮ್ನಾಸ್ಟಿಕ್ಸ್, ಕಳರಿಪಯಟ್ಟು ಕಾರ್ಯಕ್ರಮ ಪ್ರದರ್ಶನ ನೀಡಲಿದ್ದಾರೆ. ಜೊತೆಗೆ ಈ ಬಾರಿ ಹೊಸ ನಿಯಮಗಳನ್ನು ಕೂಡ ಮಾಡಲಾಗಿದೆ.

    ಏನಿದು ನಿಯಮ?
    – ಮೈದಾನದ ಒಳಗಡೆ ಸೆಲ್ಫಿ ತೆಗೆಯಲು ಅವಕಾಶ ಇಲ್ಲ
    – ಕಪ್ಪು ಬಟ್ಟೆ ಹಾಕಿದ್ರೆ ನೋ ಎಂಟ್ರಿ
    – 1 ಗಂಟೆ ಮುಂಚಿತವಾಗಿ ಕಾರ್ಯಕ್ರಮಕ್ಕೆ ಆಗಮಿಸಬೇಕು
    – ಗುರುತಿನ ಚೀಟಿ ಇದ್ರೆ ಮಾತ್ರ ಪ್ರವೇಶ
    – ಶೌಚಾಲಯ, ನೀರಿನ ವ್ಯವಸ್ಥೆ ಇದೆ
    – ಅನಗತ್ಯ ಲಗೇಜ್ ತರುವಂತಿಲ್ಲ
    – ಸಿಗರೇಟ್, ಬೆಂಕಿ ಪೆಟ್ಟಿಗೆ, ಕರಪತ್ರಗಳು, ಬಣ್ಣದ ದ್ರಾವಣ, ವಿಡಿಯೋ ಮತ್ತು ಸ್ಡಿಲ್ ಕ್ಯಾಮರಾ, ನೀರಿನ ಬಾಟಲ್, ಕ್ಯಾನ್, ಶಸ್ತ್ರಾಸ್ತ್ರ, ಹರಿತವಾದ ವಸ್ತು, ಚಾಕು – ಚೂರಿ, ಕಪ್ಪು ಕರವಸ್ತ್ರಗಳು, ತಿಂಡಿ, ಮದ್ಯದ ಬಾಟಲ್, ಮಾದಕ ವಸ್ತುಗಳು, ಬಾವುಟ, ಪಟಾಕಿ ಮತ್ತು ಸ್ಫೋಟಕ ವಸ್ತುಗಳು ತರುವಂತಿಲ್ಲ.

    ಮೈದಾನದಲ್ಲಿ 13,200 ಆಸನಗಳ ವ್ಯವಸ್ಥೆಯಿದ್ದು, ಇಡೀ ಕಾರ್ಯಕ್ರಮ ಮುಗಿಯುವವರೆಗೂ ಕಬ್ಬನ್ ರಸ್ತೆ ವಾಹನ ಸಂಚಾರ ಸ್ಥಗಿತಗೊಳ್ಳಲಿದೆ. ಅಲ್ಲದೆ ಮೈದಾನದ ಸುತ್ತ ಪೊಲೀಸರ ಸರ್ಪಗಾವಲಿನ ಜೊತೆಗೆ 50 ಸಿಸಿಟಿವಿ ಅಳವಡಿಕೆಯಾಗಿದೆ.

  • ಮತ್ತಷ್ಟು ರಂಜನೆ ನೀಡಲು ಐಪಿಎಲ್ 11ನೇ ಅವೃತ್ತಿಯಲ್ಲಿ ಬದಲಾಯ್ತು ನಿಯಮಗಳು!

    ಮತ್ತಷ್ಟು ರಂಜನೆ ನೀಡಲು ಐಪಿಎಲ್ 11ನೇ ಅವೃತ್ತಿಯಲ್ಲಿ ಬದಲಾಯ್ತು ನಿಯಮಗಳು!

    ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ ಆರಂಭದೊಂದಿಗೆ ಕ್ರಿಕೆಟ್ ಅಭಿಮಾನಿಗಳಿಗೆ ಭಾರೀ ಮನೋರಂಜನೆ ದೊರೆಯುತ್ತಿದ್ದು. ಟೀಂ ಫ್ರಾಂಚೈಸಿಗಳು ಟೂರ್ನಿಯಲ್ಲಿ ಹಣದ ಹೊಳೆಯನ್ನೇ ಹರಿಸಿದ್ದಾರೆ. ಇದರೊಂದಿಗೆ 11 ನೇ ಆವೃತ್ತಿಯ ಟೂರ್ನಿ ಹಲವು ವಿಶೇಷತೆಗಳಿಗೆ ಕಾರಣವಾಗಿದೆ.

    ಮಿಡ್ ಸೀಸನ್ ಟ್ರಾನ್ಸ್ ಫಾರ್: ಟೂರ್ನಿಯಲ್ಲಿ ಪ್ರಮುಖವಾಗಿ `ಮಿಡ್ ಸೀಸನ್ ಟ್ರಾನ್ಸ್ ಫಾರ್’ ಎಂಬ ಹೊಸ ನಿಯಮ ಜಾರಿಗೆಯಾಗಿದೆ. ಈ ನಿಯಮದ ಪ್ರಕಾರ ಟೂರ್ನಿಯಲ್ಲಿ ಯಾವುದೇ ಪಂದ್ಯವನ್ನು ಆಡದ ಆಟಗಾರರು ಹರಾಜದ ತಂಡದ ಬದಲಾಗಿ ಬೇರೆಂದು ತಂಡ ಸೇರಲು ಅವಕಾಶ ನೀಡಲಾಗಿದೆ. ಅಲ್ಲದೇ ಈ ವೇಳೆ ಎರಡು ಪಂದ್ಯ ಮತ್ತು ಅದಕ್ಕಿಂತ ಕಡಿಮೆ ಪಂದ್ಯಗಳನ್ನು ಆಡಿದ್ದರೂ, ತಂಡದ ಬದಲಾವಣೆಗೆ ಅವಕಾಶವಿದೆ.

     

    ಮಿಡ್ ಸೀಸನ್ ಟ್ರಾನ್ಸ್ ಫಾರ್ ನಿಯಮ ಟೂರ್ನಿಯ ಮಧ್ಯದಲ್ಲಿ ಕೇವಲ 5 ದಿನಗಳು ಮಾತ್ರ ಅವಕಾಶ ನೀಡಲಾಗಿದೆ. 2016 ರ ಈ ನಿಯಮ ಜಾರಿಯಲ್ಲಿ ಇಲ್ಲದ ಕಾರಣ ಬೌಲರ್ ಡೇಲ್ ಸ್ಟೇನ್ನ್ ಸ್ಟೈನ್ ಗುಜರಾತ್ ಲಯನ್ಸ್ ಪರ ಆಡಲು ಸಾಧ್ಯವಾಗಿರಲ್ಲ. ಹಲವು ಆಟಗಾರರು ಇಂತಹ ಸಮಸ್ಯೆಯನ್ನು ಎದುರಿಸಿದ್ದರು.

    ಡಿಆರ್ ಎಸ್: ಐಸಿಸಿ ಹಾಗೂ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ ಪಂದ್ಯಗಳಲ್ಲಿ ಜಾರಿ ಇದ್ದ ತೀರ್ಪು ಪುನರ್ ಪರಿಶೀಲನೆ ನೀಡುವ ನಿಯಮವನ್ನು ಜಾರಿ ಮಾಡಲಾಗಿದೆ. ಪಂದ್ಯದ ವೇಳೆ ಪ್ರತಿ ತಂಡಕ್ಕೂ ಒಂದು ಮನವಿಯನ್ನು ಸಲ್ಲಿಸುವ ಅವಕಾಶ ನೀಡಲಾಗಿದೆ.

    ಡಿಆರ್ ಎಸ್ ನಿಯಮವನ್ನು ಐಪಿಎಲ್ ಟೂರ್ನಿಯಲ್ಲಿ ಜಾರಿಗೆ ತರಲು ಹಲವು ವರ್ಷಗಳಿಂದ ಚಿಂತನೆ ನಡೆಸಲಾಗಿತ್ತು. ಇದರ ಭಾಗವಾಗಿ 11 ನೇ ಆವೃತ್ತಿಯಲ್ಲಿ ಈ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ಸ್ಪಷ್ಟನೆ ನೀಡಿದ್ದಾರೆ.

    ದೂರದರ್ಶನದಲ್ಲಿ ಐಪಿಎಲ್: ದೇಶದ ಗ್ರಾಮೀಣ ಭಾಗದ ಜನರಿಗೂ ಐಪಿಎಲ್ ತಲುಪಿಸುವ ಭಾಗವಾಗಿ ದೂದರ್ಶನದಲ್ಲೂ ಐಪಿಎಲ್ ಪಂದ್ಯಗಳ ಪ್ರಸಾರ ಮಾಡಲು ಅವಕಾಶ ನೀಡಲಾಗಿದೆ. ಈ ಕುರಿತು ನೇರ ಪ್ರಸಾರದ ಹಕ್ಕುಗಳನ್ನು ಖರೀದಿಸಿರುವ ಸ್ಟಾರ್ ವಾಹಿಯೂ ಅನುಮತಿ ನೀಡಿದೆ. ಆದರೆ ಸ್ಟಾರ್ ವಾಹಿನಿಯಲ್ಲಿ ಪ್ರಸಾರವಾದ ಒಂದು ಗಂಟೆ ತಡವಾಗಿ ದೂರದರ್ಶನದಲ್ಲಿ ಪ್ರಸಾರವಾಗಲಿದೆ.

    ವರ್ಚುವಲ್ ರಿಯಾಲಿಟಿ: ಅಂತರ್ಜಾಲದಲ್ಲಿ ಕ್ರಿಕೆಟ್ ನೇರ ಪ್ರಸಾರ ಮಾಡುತ್ತಿದ್ದ ಹಾಟ್ ಸ್ಟಾರ್ ಆ್ಯಪ್ ವರ್ಚುವಲ್ ರಿಯಾಲಿಟಿ ಸೇವೆಯನ್ನು ನೀಡುತ್ತಿದೆ. ಈ ಮಾದರಿಯಲ್ಲಿ ಪಂದ್ಯವನ್ನು ನೋಡಲು ಗ್ರಾಹಕರು ಮಾರುಕಟ್ಟೆಯಲ್ಲಿ ಹೊಸ ವಿಆರ್ ಗ್ಲಾಸ್ ಗಳನ್ನು ಖರೀದಿಸಬೇಕಿದೆ. ಅಲ್ಲದೇ ವಿಆರ್ ಸೇವೆ ತಂತ್ರಜ್ಞಾನವನ್ನು ಹೊಂದಿರುವ ಮೊಬೈಲ್ ನಲ್ಲಿ ಮಾತ್ರ ಈ ಸೇವೆ ಪಡೆಯಲು ಸಾಧ್ಯವಿದೆ.

    ವಿಆರ್ ವಿಶೇಷತೆ: ಆ್ಯಪ್ ನಲ್ಲಿ ಗ್ರಾಹಕರು ಲೈವ್ ಪ್ರಸಾರವನ್ನು ಅರ್ಧ ಗಂಟೆಗಳ ಕಾಲ ನಿಲ್ಲಿಸಿ ಮತ್ತೆ ನೋಡಲು ಅವಕಾಶ ನೀಡಲಾಗಿದೆ. ವಿಆರ್ ಬಳಕೆ ಮಾಡುವುದರಿಂದ ಕ್ರೀಡಾಂಗಣದ 360 ಡಿಗ್ರಿ ಕೋನದಲ್ಲಿಯೂ ವಿಕ್ಷೀಸಬಹುದಾಗಿದೆ. ಇದರಿಂದ ಮೈದಾನದಲ್ಲೇ ಕುಳಿತು ನೋಡುತ್ತಿರುವ ಅನುಭವ ಪಡೆಯಬಹುದು ಎಂದು ಸ್ಟಾರ್ ಇಂಡಿಯಾ ವಾಹಿನಿಯ ನಿರ್ದೇಶಕ ಸಂಜಾಯ್ ಗುಪ್ತಾ ತಿಳಿಸಿದ್ದಾರೆ.