Tag: ನಿಫ್ಟಿ

  • ಒಂದೇ ದಿನ 3 ಲಕ್ಷ ಕೋಟಿ ಕಳೆದುಕೊಂಡ ಹೂಡಿಕೆದಾರರು- ಏಷ್ಯನ್ ಪೇಂಟ್ಸ್, ಬಜಾಜ್ ಆಟೋ, ಮಾರುತಿಗೆ ಭಾರೀ ಲಾಭ

    ಒಂದೇ ದಿನ 3 ಲಕ್ಷ ಕೋಟಿ ಕಳೆದುಕೊಂಡ ಹೂಡಿಕೆದಾರರು- ಏಷ್ಯನ್ ಪೇಂಟ್ಸ್, ಬಜಾಜ್ ಆಟೋ, ಮಾರುತಿಗೆ ಭಾರೀ ಲಾಭ

    – ಪ್ರಧಾನಿ ಮೋದಿ ಆಲೋಚನೆಯಿಂದ ದೇಶ ಆರ್ಥಿಕತೆ ನಾಶ: ರಾಹುಲ್
    – ಮಾರುಕಟ್ಟೆ ತೆರೆಯುತ್ತಿದ್ದಂತೆ ಸೆನ್ಸೆಕ್ಸ್ 1,459 ಪಾಯಿಂಟ್ ಕುಸಿತ

    ಮುಂಬೈ: ಕೊರೊನಾ ವೈರಸ್ ಹಾಗೂ ಯೆಸ್ ಬ್ಯಾಂಕಿನ ಬಿಕ್ಕಟ್ಟಿನಿಂದ ಭಯಭೀತರಾದ ಹೂಡಿಕೆದಾರರು ಹೆಚ್ಚಿನ ಸಂಖ್ಯೆಯ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಇದರಿಂದಾಗಿ ಬಿಎಸ್‍ಇ ಸೆನ್ಸೆಕ್ಸ್ ಶುಕ್ರವಾರ 893.99 ಪಾಯಿಂಟ್‍ಗಳ ಕುಸಿತ ಕಂಡು 37,576.62 ಕ್ಕೆ ತಲುಪಿದೆ. ಅಂತೆಯೇ, ಎನ್‍ಎಸ್‍ಇ ನಿಫ್ಟಿ 368.15 ಪಾಯಿಂಟ್‍ಗಳ ಕುಸಿತದಿಂದ 11,000 ಪಾಯಿಂಟ್‍ಗಳ ಪಾತಾಳಕ್ಕೆ ತಲುಪಿದೆ.

    ಬ್ಯಾಂಕ್ ಷೇರುಗಳು ಬಿಎಸ್‍ಇಯಲ್ಲಿ ಶೇ.56 ಮತ್ತು ಎನ್‍ಎಸ್‍ಇಯಲ್ಲಿ ಶೇ.74 ಕುಸಿತ ಕಂಡಿವೆ. ಟಾಟಾ ಸ್ಟೀಲ್ ಷೇರುಗಳು ಬಿಎಸ್‍ಇಯಲ್ಲಿ ಅತಿ ಹೆಚ್ಚು ನಷ್ಟ ಅನುಭವಿಸಿದವು. ಬಜಾಜ್ ಆಟೋ, ಮಾರುತಿ ಮತ್ತು ಏಷ್ಯನ್ ಪೇಂಟ್ಸ್ ಮಾತ್ರ ಭಾರೀ ಲಾಭ ಗಳಿಸಿವೆ. ಇದನ್ನೂ ಓದಿ: ಕೊರೊನಾ ಎಫೆಕ್ಟ್- ಒಂದೇ ದಿನಕ್ಕೆ ಚಿನ್ನದ ಬೆಲೆ 990 ರೂ. ಹೆಚ್ಚಳ

    ಮಾರುಕಟ್ಟೆ ತೆರೆದ ಕೂಡಲೇ ಸೆನ್ಸೆಕ್ಸ್ 1,459 ಪಾಯಿಂಟ್ ಕುಸಿದು, 37,011.09ಕ್ಕೆ ತಲುಪಿತ್ತು. ಬಿಎಸ್‍ಇಯಲ್ಲಿ ಗುರುವಾರ ದಿನದಂತ್ಯಕ್ಕೆ 37,524 ಪಾಂಯಿಂಟ್ಸ್ ಇತ್ತು. ಆದರೆ ಇಂದಿನ ದಿನದಂತ್ಯಕ್ಕೆ 893.99 ಪಾಯಿಂಟ್ಸ್ ಕಳೆದುಕೊಂಡು, 37,576.62 ಪಾಯಿಂಟ್ಸ್ ಗೆ ತಲುಪಿದೆ.

    ಎನ್‍ಎಸ್‍ಇ ಇಂದು 279.55 ಪಾಯಿಂಟ್ಸ್ ಕುಸಿತ ಕಂಡಿದೆ. ಗುರುವಾರ ದಿನದಂತ್ಯಕ್ಕೆ 10,979 ಪಾಂಯಿಂಟ್ಸ್ ಹೊಂದಿದ್ದ ನಿಫ್ಟಿ ಇಂದಿನ ದಿನದ ಅಂತ್ಯಕ್ಕೆ 10,989.45 ಪಾಯಿಂಟ್ಸ್ ತಲುಪಿದೆ.

    ಎನ್‍ಎಸ್‍ಇಯಲ್ಲಿ ಬ್ಯಾಂಕ್ ಷೇರುಗಳು ಶೇ.76 ರಷ್ಟು ಕುಸಿದಿವೆ. ಎಸ್‍ಬಿಐ ಷೇರುಗಳು ಶೇ.12 ಕಡಿಮೆ ಆಗಿದೆ. ಗುರುವಾರ, ಯೆಸ್ ಬ್ಯಾಂಕ್ ಅನ್ನು ಉಳಿಸಲು ಸರ್ಕಾರ ಎಸ್‍ಬಿಐಗೆ ಫಾರ್ವರ್ಡ್ ಮಾಡಬಹುದು ಎಂಬ ವರದಿಯಿತ್ತು. ಈ ಕಾರಣದಿಂದಾಗಿ ಎಸ್‍ಬಿಐ ಷೇರುಗಳು ಕುಸಿತ ಕಂಡಿವೆ.

    ಕೊರೊನಾ ವೈರಸ್ ಸೋಂಕು ಹೆಚ್ಚುತ್ತಲೇ ಇದೆ. ವಿಶ್ವಾದ್ಯಂತ ಸೋಂಕಿತರ ಸಂಖ್ಯೆ 1 ಲಕ್ಷವನ್ನು ತಲುಪುತ್ತಿದೆ ಹಾಗೂ 3,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಪರಿಣಾಮ ವಿದೇಶಿ ಹೂಡಿಕೆದಾರರು ಭಾರತೀಯ ಮಾರುಕಟ್ಟೆಗಳಿಂದ ನಿರಂತರವಾಗಿ ಹಣವನ್ನು ಹಿಂತೆಗೆದುಕೊಳ್ಳುತ್ತಿದ್ದಾರೆ. ಕಳೆದ 14 ವಹಿವಾಟು ಅವಧಿಯಲ್ಲಿ ಎಫ್‍ಐಐಗಳು ಭಾರತೀಯ ಮಾರುಕಟ್ಟೆಯಿಂದ 18,343 ಕೋಟಿ ರೂ. ಹಿಂಪಡೆದಿದ್ದಾರೆ.

    ಅಮೆರಿಕದ ಷೇರು ಮಾರುಕಟ್ಟೆ ಡೌ ಜೋನ್ಸ್ ಶೇ.3.58 ಮತ್ತು ನಾಸ್ಡಾಕ್ ಶೇ.3.10 ಇಳಿದಿದೆ. ನಿಕ್ಕಿ ಶೇ.2.94 ಮತ್ತು ಆಸ್ಟ್ರೇಲಿಯಾದ ಮಾರುಕಟ್ಟೆ ಶೇ.2.44 ಕುಸಿದಿದೆ.

    ಮೋದಿಯಿಂದ ನಾಶ:
    ಯೆಸ್ ಬ್ಯಾಂಕ್‍ನಲ್ಲಿನ ಬಿಕ್ಕಟ್ಟಿನ ಬಗ್ಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸಹನೆಯನ್ನು ಕಾಂಗ್ರೆಸ್ ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ನೀಡಿದೆ. ಜೊತೆಗೆ ರಾಹುಲ್ ಗಾಂಧಿ ಅವರು, ಪ್ರಧಾನಿ ಮೋದಿ ಮತ್ತು ಅವರ ಆಲೋಚನೆಗಳು ಭಾರತದ ಆರ್ಥಿಕತೆಯನ್ನು ನಾಶಪಡಿಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

  • ಕೇಂದ್ರದ ಒಂದು ನಿರ್ಧಾರದಿಂದ ಒಂದೇ ದಿನ ಹೂಡಿಕೆದಾರರಿಗೆ ಸಿಕ್ತು 7 ಲಕ್ಷ ಕೋಟಿ

    ಕೇಂದ್ರದ ಒಂದು ನಿರ್ಧಾರದಿಂದ ಒಂದೇ ದಿನ ಹೂಡಿಕೆದಾರರಿಗೆ ಸಿಕ್ತು 7 ಲಕ್ಷ ಕೋಟಿ

    ಮುಂಬೈ: ಕೆಲ ತಿಂಗಳಿನಿಂದ ನಷ್ಟ ಅನುಭವಿಸುತ್ತಿದ್ದ ಹೂಡಿಕೆದಾರರು ಇವತ್ತು ಒಂದೇ ದಿನ 7 ಲಕ್ಷ ಕೋಟಿ ರೂ. ಹಣವನ್ನು ಗಳಿಸಿದ್ದಾರೆ. ಕೇಂದ್ರ ಸರ್ಕಾರ ಕಾರ್ಪೊರೇಟ್ ತೆರಿಗೆ ಇಳಿಸುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಸೆನ್ಸೆಕ್ಸ್ ಮತ್ತು ನಿಫ್ಟಿ ದಶಕದ ಬಳಿಕ ಭಾರೀ ಏರಿಕೆಯಾಗಿದ್ದರಿಂದ ಹೂಡಿಕೆದಾರರು ಭರ್ಜರಿ ಲಾಭಗಳಿಸಿದ್ದಾರೆ.

    ಕುಸಿತ ಹಾದಿಯಲ್ಲಿರುವ ದೇಶದ ಆರ್ಥಿಕತೆಗೆ ಇವತ್ತು ಕೇಂದ್ರ ಸರ್ಕಾರ ಉತ್ತೇಜನ ನೀಡುವ ನಿಟ್ಟಿನಲ್ಲಿ ದೇಶಿಯ ಕಂಪನಿಗಳ ಮೇಲಿನ ಎಲ್ಲಾ ಸೆಸ್ ಒಳಗೊಂಡಂತೆ ಕಾರ್ಪೋರೇಟ್ ತೆರಿಗೆಯನ್ನು ಶೇ.34.94ರಿಂದ ಶೇ. 25.17ಕ್ಕೆ ಇಳಿಸಿದೆ. ಹೆಚ್ಚು ಕಡಿಮೆ ಶೇ. 10ರಷ್ಟು ಕಾರ್ಪೋರೇಟ್ ತೆರಿಗೆ ಇಳಿಕೆ ಮಾಡಲಾಗಿದೆ. ಪ್ರಸಕ್ತ ಹಣಕಾಸು ವರ್ಷದಿಂದಲೇ ಅನ್ವಯವಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.

    ಈ ಬೆನ್ನಲ್ಲೇ ನಿರಂತರ ನಷ್ಟ ಅನುಭವಿಸುತ್ತಿದ್ದ ಷೇರು ಪೇಟೆಯಲ್ಲಿ ಲಾಭದ ಹೊಳೆಯೇ ಹರಿಯಿತು. ಷೇರುಪೇಟೆ ಸೂಚ್ಯಂಕ ಲಾಭಾಂಶದಲ್ಲಿ ದಶಕದ ಬಳಿಕ ಹೊಸ ದಾಖಲೆ ಬರೆಯಿತು. ಹಿಂದೆಂದೂ ಕಾಣದ ರೀತಿಯಲ್ಲಿ ಮುಂಬೈ ಷೇರುಪೇಟೆ ಒಂದೇ ದಿನ 2,000 ಅಂಶಗಳಿಗೂ ಹೆಚ್ಚು ಏರಿಕೆ ಕಂಡಿತು. ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ಕೂಡ ಏರಿಕೆಯಲ್ಲಿ ಮುಳುಗೆದ್ದಿತು. ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ ಬೆನ್ನಲ್ಲೇ ಬಿಎಸ್‍ಇ ಮಾರ್ಕೆಟ್ ಮೌಲ್ಯ 143.45 ಲಕ್ಷ ಕೋಟಿಗೆ ಜಿಗಿಯಿತು. ಹೂಡಿಕೆದಾರರ ಸಂಪತ್ತು 7 ಲಕ್ಷ ಕೋಟಿಗೂ ಹೆಚ್ಚು ಏರಿಕೆ ಕಂಡಿತು.

    ಎಷ್ಟು ಏರಿಕೆ ಆಯ್ತು?
    ಸೆನ್ಸೆಕ್ಸ್ ಗುರುವಾರ 36,093.43 ಅಂಶಗಳಲ್ಲಿ ಮುಕ್ತಾಯಗೊಂಡರೆ ಇಂದು 1,921.25 (ಶೇ.5.32) ಅಂಶಗಳ ಏರಿಕೆ ಕಂಡು 38,014.62 ಅಂಶಗಳಲ್ಲಿ ಕೊನೆಗೊಂಡಿತು. ನಿಫ್ಟಿ ನಿನ್ನೆ 10,704.80 ಅಂಶಗಳಲ್ಲಿ ಕೊನೆಯಾಗಿದ್ದರೆ ಇಂದು 569.40(ಶೇ.5.32) ಅಂಶ ಏರಿಕೆಯಾಗಿ 11,274.20 ಅಂಶಗಳಲ್ಲಿ ಮುಕ್ತಾಯವಾಯಿತು.

    ಈ ಹಿಂದೆ ಸೆನ್ಸೆಕ್ಸ್ 2009ರ ಮೇ 18 ರಂದು 2,111 ಅಂಶ ಏರಿಕೆ ಕಂಡಿದ್ದು ಇದು ಈವರೆಗೆ ಒಂದೇ ದಿನದಲ್ಲಿ ದಾಖಲಾದ ಅತಿ ಹೆಚ್ಚಿನ ಏರಿಕೆಯಾಗಿದೆ. ನಿಫ್ಟಿ 2009ರ ಮೇ 18 ರಂದು 713 ಅಂಶಗಳ ಏರಿಕೆ ಕಂಡಿತ್ತು.

    ಸುದ್ದಿಗೋಷ್ಠಿಯಲ್ಲಿ ಹೇಳಿದ್ದು ಏನು?
    ಗೋವಾದ ಪಣಜಿಯಲ್ಲಿ ಜಿಎಸ್‍ಟಿ ಕೌನ್ಸಿಲ್ ಸಭೆ ನಡೆಯುತ್ತಿದ್ದು ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶಿಯ ಕಂಪೆನಿಗಳಿಗೆ ವಿಧಿಸುತ್ತಿದ್ದ ಕಾರ್ಪೋರೇಟ್ ತೆರಿಗೆಯನ್ನು ಕಡಿತಗೊಳಿಸಲಾಗಿದೆ. ಹೊಸ ಸ್ಥಳೀಯ ಸಂಸ್ಥೆಗಳಿಗೂ ಕಾರ್ಪೋರೇಟ್ ಮಾದರಿಯಲ್ಲಿ ತೆರಿಗೆಯಲ್ಲಿ ವಿನಾಯಿತಿ ನೀಡುವ ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು. ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

    ಶೇ.30 ರಷ್ಟಿದ್ದ ಕಾರ್ಪೊರೇಟ್ ತೆರಿಗೆಯನ್ನು ಶೇ.22.2ಕ್ಕೆ ಇಳಿಸಲಾಗಿದೆ. ಈ ಹಿಂದೆ ಕಾರ್ಪೋರೇಟ್ ತೆರಿಗೆ, ಸೆಸ್, ಸಚಾರ್ಜ್ ಸೇರಿ ಶೇ.35 ಆಗುತಿತ್ತು. ಈಗ ಇದೆಲ್ಲ ಸೇರಿ ತೆರಿಗೆ ಶೇ.25.2ಕ್ಕೆ ಇಳಿಕೆಯಾಗಿದೆ. ಈ ತೆರಿಗೆ ದರ ಈ ವರ್ಷದ ಏಪ್ರಿಲ್ 1 ರಿಂದಲೇ ಜಾರಿಯಾಗಲಿದೆ.

    ತೆರಿಗೆ ಕಡಿತಗೊಳಿಸಿ ಘೋಷಣೆ ಮಾಡಿದ ಬಳಿಕ ಮೇಕ್ ಇನ್ ಇಂಡಿಯಾ ಯೋಜನೆಗೆ ಇದು ನೆರವಾಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಉದ್ಯೋಗಾವಕಾಶ ಹಾಗೂ ಆರ್ಥಿಕ ಚೇತರಿಕೆಗೆ ಸ್ಫೂರ್ತಿ ನೀಡಲಿದೆ ಎಂದು ತಿಳಿಸಿದರು.

  • ಶುಕ್ರವಾರ ನಿರ್ಮಲಾ ನೀಡಿದ ಟಾನಿಕ್‍ಗೆ 793 ಅಂಕ ಜಿಗಿದ ಸೆನ್ಸೆಕ್ಸ್

    ಶುಕ್ರವಾರ ನಿರ್ಮಲಾ ನೀಡಿದ ಟಾನಿಕ್‍ಗೆ 793 ಅಂಕ ಜಿಗಿದ ಸೆನ್ಸೆಕ್ಸ್

    ಮುಂಬೈ: ಆರ್ಥಿಕತೆಯನ್ನು ಮೇಲಕ್ಕೆ ಎತ್ತಲು ಶುಕ್ರವಾರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ನೀಡಿದ ‘ಟಾನಿಕ್’ನಿಂದ ಮುಂಬೈ ಷೇರು ಮಾರುಕಟ್ಟೆಯ ಸೂಚ್ಯಂಕ ಇಂದು ಒಂದೇ ದಿನದಲ್ಲಿ 793 ಅಂಕಗಳನ್ನು ಜಿಗಿಯುವ ಮೂಲಕ ಹೂಡಿಕೆದಾರರ ಮೊಗದಲ್ಲಿ ಸಂತಸ ಮೂಡಿಸಿದೆ.

    ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ನಿರ್ಮಲಾ ಸೀತಾರಾಮನ್ ವಿದೇಶಿ ಹೂಡಿಕೆದಾರರ ಮೇಲೆ ಹೇರಿದ್ದ ಹೆಚ್ಚುವರಿ ಶುಲ್ಕವನ್ನು ಹಿಂದಕ್ಕೆ ಪಡೆಯುತ್ತಿರುವಾಗಿ ಘೋಷಿಸಿದ್ದರು. ಈ ಮಧ್ಯೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಬಗ್ಗೆ ನನಗೆ ಗೌರವವಿದೆ. ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿರುವ ಅವರ ಕ್ರಮ ನಿಜಕ್ಕೂ ಶ್ಲಾಘನಿಯ. ಈ ಕಾರಣಕ್ಕೆ ಅವರು ದೊಡ್ಡ ನಾಯಕ. ಮಾತುಕತೆ ಮುಂದುವರಿಯುತ್ತದೆ ಎಂದು ಟ್ವೀಟ್ ಮಾಡಿ ಚೀನಾ ಜೊತೆಗಿನ ವ್ಯಾಪಾರ ಸಮರ ಮುಕ್ತಾಯಗೊಳಿಸುವ ಬಗ್ಗೆ ಸುಳಿವು ನೀಡಿದ್ದು ಸಹ ಸೆನ್ಸೆಕ್ಸ್ ಮೇಲಕ್ಕೆ ಹೋಗಲು ಸಹಕಾರಿ ಆಯಿತು.

    ಮಧ್ಯಾಹ್ನ ಮೂರು ಗಂಟೆಯ ವೇಳೆಗೆ 37,428 ಅಂಕಗಳಲ್ಲಿ ವಹಿವಾಟು ನಡೆಸುತ್ತಿದ್ದರೆ ನಿಫ್ಟಿ 200 ಅಂಕ ಏರಿಕೆಯಾಗಿ 11,040 ಅಂಕಗಳಲ್ಲಿ ವಹಿವಾಟು ನಡೆಸುತಿತ್ತು. ಅಂತಿಮವಾಗಿ ಸೆನ್ಸೆಕ್ಸ್ 37,494 ಅಂಕಗಳಲ್ಲಿ ಕೊನೆಯಾದರೆ ನಿಫ್ಟಿ ದಿನದಲ್ಲಿ 228 ಅಂಕ ಏರಿ 11,057 ಅಂಕಗಳಲ್ಲಿ ಕೊನೆಗೊಂಡಿತು.

    ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್ ಗಳಿಗೆ 70 ಸಾವಿರ ಕೋಟಿ ಪ್ಯಾಕೆಜ್ ಬಿಡುಗಡೆಯಾಗಲಿದೆ ಎಂದು ಘೋಷಿಸಿದ ಬಳಿಕ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್, ಅಲಹಾಬಾದ್ ಬ್ಯಾಂಕಿನ ಷೇರುಗಳು ಜಿಗಿದಿದೆ.

    ಈ ಬಗ್ಗೆ ಐಡಿಬಿಐ ಕ್ಯಾಪಿಟಲ್ ಸಂಸೋಧನಾ ವಿಭಾಗದ ಮುಖ್ಯಸ್ಥ ಎಕೆ ಪ್ರಭಾಕರ್ ಪ್ರತಿಕ್ರಿಯಿಸಿ, ಸರಿಯಾದ ಸಮಯದಲ್ಲಿ ಸರ್ಕಾರ ತನ್ನ ನಿರ್ಧಾರವನ್ನು ಪ್ರಕಟಿಸಿದ ಕಾರಣ ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆ ಕಂಡಿದೆ. ಇದೇ ರೀತಿ ಮುಂದುವರಿದಿದರೆ ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆ ಕಂಡು ಡಿಸೆಂಬರ್ ವೇಳೆಗೆ ದಾಖಲೆ ನಿರ್ಮಿಸಬಹುದು ಎಂದು ಅಂದಾಜಿಸಿದ್ದಾರೆ.

    ಭಾರತದ ಹೊರತು ಪಡಿಸಿ ಹಾಂಕಾಂಗ್, ಕೊರಿಯಾ, ಶಾಂಘೈ, ಜಪಾನ್ ಮಾರುಕಟ್ಟೆ ಬೆಳಗ್ಗಿಗಿಂತ ಮತ್ತಷ್ಟು ಕುಸಿತಕಂಡಿದೆ. ವಿಶ್ವದ ತೈಲ ಬೆಂಚ್ ಮಾರ್ಕ್ ಬ್ರೆಂಟ್ ಕಚ್ಚಾ ತೈಲ ದರ ಒಂದು ಬ್ಯಾರೆಲ್‍ಗೆ 58.22 ಡಾಲರ್(ಅಂದಾಜು 4,100 ರೂ.) ಬೆಲೆಯಲ್ಲಿ ಮಾರಾಟವಾಗುತಿತ್ತು.

    ಭಾರತದ ಆರ್ಥಿಕತೆ ಕುಸಿಯುತ್ತಿದ್ದು ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎನ್ನುವ ಭಾರೀ ಟೀಕೆ ಬರುತ್ತಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ಸುದ್ದಿಗೋಷ್ಠಿ ನಡೆಸಿ ಸರ್ಕಾರ ಕೈಗೊಂಡ ಕ್ರಮಗಳನ್ನು ತಿಳಿಸಿದ್ದರು.

    ಜಾಗತಿಕ ಆರ್ಥಿಕತೆ ಕುಸಿಯುತ್ತಿರುವ ವಿಚಾರ ಎಲ್ಲರಿಗೆ ತಿಳಿದಿದೆ. ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಸಮರದಿಂದಾಗಿ ಜಾಗತಿಕ ಮಟ್ಟದಲ್ಲಿ ಆರ್ಥಿಕತೆ ಸಮಸ್ಯೆಯಾಗಿದೆ. ಇದರಿಂದಾಗಿ ಭಾರತಕ್ಕೂ ಸಮಸ್ಯೆಯಾಗಿದ್ದು, ಆರ್ಥಿಕ ಪ್ರಗತಿ ಮೇಲೆ ಪರಿಣಾಮ ಬೀರಿದೆ. ಆದರೆ ಭಾರತ ಜಿಡಿಪಿಯಲ್ಲಿ ಅಮೆರಿಕ ಮತ್ತು ಚೀನಾಕ್ಕಿಂತ ಮುಂದಿದೆ. ಆರ್ಥಿಕತೆಯಲ್ಲಿ ಏರಿಳಿತ ನಡೆಯುತ್ತಲೇ ಇರುತ್ತದೆ. ಕುಸಿಯುತ್ತಿದೆ ಎನ್ನುವ ಕಾರಣಕ್ಕೆ ನಾವು ಸಮಸ್ಯೆಯಲ್ಲಿ ಸಿಲುಕಿದ್ದೇವೆ ಎಂದು ವದಂತಿ ಹಬ್ಬಿಸುವ ಅಗತ್ಯವಿಲ್ಲ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದರು.

    ವಿಶ್ವದ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ದರ ಉತ್ತಮವಾಗಿದೆ. ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೂ ಭಾರತದ ಆರ್ಥಿಕ ಪ್ರಗತಿ ಗಣನೀಯವಾಗಿ ಏರಿಕೆಯಲ್ಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.