Tag: ನಿಧಿ

  • ಹೌದು, ಕಾಂಗ್ರೆಸ್ಸಿಗೆ ಈಗ ಹಣದ ಕೊರತೆಯಿದೆ: ಶಶಿ ತರೂರ್

    ಹೌದು, ಕಾಂಗ್ರೆಸ್ಸಿಗೆ ಈಗ ಹಣದ ಕೊರತೆಯಿದೆ: ಶಶಿ ತರೂರ್

    ನವದೆಹಲಿ: ಕಾಂಗ್ರೆಸ್ ಈಗ ಹಣದ ಕೊರತೆಯನ್ನು ಎದುರಿಸುತ್ತಿದೆ ಎಂದು ಮಾಜಿ ಸಚಿವ, ಸಂಸದ ಶಶಿ ತರೂರ್ ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷವೂ ಸೇರಿದಂತೆ ದೇಶದಲ್ಲಿ ಎಲ್ಲಾ ವಿರೋಧ ಪಕ್ಷಗಳು ಹಣದ ಕೊರತೆಯನ್ನು ಎದುರಿಸುತ್ತಿವೆ ಎಂದು ಅವರು ಹೇಳಿದ್ದಾರೆ.

    ಪಕ್ಷ ಹಣದ ಕೊರತೆಯನ್ನು ಎದುರಿಸುತ್ತಿದ್ದು ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಕ್ಕೆ ಚಂದಾ ಹಣವನ್ನು ನೀಡಬೇಕು. ಪಕ್ಷಕ್ಕೆ ಹಣವನ್ನು ಕೊಡುವುದರ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು.ಇದನ್ನೂ ಓದಿ:ಕಾಂಗ್ರೆಸ್ ಖಜಾನೆಯಲ್ಲಿ ಈಗ ದುಡ್ಡಿಲ್ಲ- ಲೋಕ ಚುನಾವಣೆಯ ವೇಳೆ ಸಂಕಷ್ಟ!

    ಇದಕ್ಕೆ ಪ್ರತಿಕ್ರಿಯಿಸಿರುವ ಶಶಿ ತರೂರ್ ಯಾವ ಪಕ್ಷ ಅಧಿಕಾರದಲ್ಲಿ ಇರುತ್ತದೋ ಅವರಿಗೆ ಸಾಕಷ್ಟು ನಿಧಿ ಹರಿದು ಬರುತ್ತದೆ. ಬಿಜೆಪಿ ಅಧಿಕಾರದಲ್ಲಿ ಇರುವುದರಿಂದ ಅದರ ಲಾಭ ಪಡೆಯುತ್ತಿದೆ. ವಿರೋಧ ಪಕ್ಷಗಳು ಹಣದ ಸಮಸ್ಯೆಯನ್ನು ಎದುರಿಸುತ್ತಿವೆ. ಅದರಲ್ಲೂ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಹೆಚ್ಚಿನ ಕೊರತೆಯನ್ನು ಅನುಭವಿಸುತ್ತಿದೆ ಎಂದು ಹೇಳಿ ಚಂದ ಎತ್ತಲು ಜನರ ಬಳಿ ಹೋಗುವ ಪಕ್ಷದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

    ಮುಂಬರುವ ದಿನಗಳಲ್ಲಿ ಜನರಿಂದ ನಿಧಿಯನ್ನು ಸಂಗ್ರಹಿಸುವುದು ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳಿಗೆ ಉತ್ತಮ ನಡೆಯಾಗಲಿದೆ. ಕರ್ನಾಟಕದಲ್ಲಿ ಬಹಳಷ್ಟು ನಾಯಕರು ಚುನಾವಣಾ ಪ್ರಚಾರಕ್ಕೆ ತಮ್ಮ ಹಣವನ್ನೇ ಬಳಸಿದ್ದಾರೆ. ಒಂದು ಕ್ಷೇತ್ರದಲ್ಲಿ ಜನರಿಂದಲೇ ನಿಧಿ ಸಂಗ್ರಹಿಸುವ ಪ್ರಯತ್ನ ಮಾಡಿ ಯಶಸ್ವಿಯಾದೆವು. ಇದನ್ನು ಮುಂಬರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಮುಂದುವರಿಸಬಹುದಾಗಿದೆ ಎಂದು ಹೇಳಿದರು.

     

  • ಕುಂಭ ರಾಶಿಯ ಮಹಿಳೆಯನ್ನು ಬಲಿಕೊಟ್ಟರೆ ನಿಧಿ ಸಿಗುತ್ತೆ- ಪತಿಯಿಂದ ಪತ್ನಿ ಬಲಿಗೆ ಸಂಚು

    ಕುಂಭ ರಾಶಿಯ ಮಹಿಳೆಯನ್ನು ಬಲಿಕೊಟ್ಟರೆ ನಿಧಿ ಸಿಗುತ್ತೆ- ಪತಿಯಿಂದ ಪತ್ನಿ ಬಲಿಗೆ ಸಂಚು

    ಬೆಂಗಳೂರು: ನಿಧಿ ಆಸೆಗಾಗಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಬಲಿ ಪಡೆಯಲು ಸಂಚು ರೂಪಿಸಿರುವ ಘಟನೆ ನಗರದ ಉಳ್ಳಾಲದಲ್ಲಿ ನಡೆದಿದೆ.

    ಮಹಾಲಿಂಗೇಶ್ ನಿಧಿ ಆಸೆಗಾಗಿ ಪತ್ನಿಯನ್ನು ಬಲಿ ಕೊಡಲು ಸಂಚು ರೂಪಿಸಿದ್ದ ಆರೋಪಿ. ಕುಂಭ ರಾಶಿಯ ಮಹಿಳೆಯನ್ನು ಬಲಿಕೊಟ್ಟರೆ ನಿಧಿ ಸಿಗುತ್ತೆ ಎಂಬ ವದಂತಿ ಹಿನ್ನೆಲೆ ಪತ್ನಿ ಸವಿತಾರನ್ನು ಬಲಿಕೊಡಲು ಸಿದ್ಧತೆ ನಡೆಸಿದ್ದ.

    ಈ ಕುರಿತು ಮಾಹಿತಿ ಪಡೆದ ಸವಿತಾ ಅವರು ಗಂಡನಿಂದ ರಕ್ಷಣೆ ಪಡೆಯಲು ಮಹಿಳಾ ಆಯೊಗದ ಮೊರೆ ಹೋಗಿದ್ದಾರೆ. ಮಹಿಳಾ ಆಯೋಗದ ಮಾಹಿತಿ ಮೇರೆಗೆ ಪೊಲೀಸರು ಮಹಾಲಿಂಗೇಶ್ ನನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?: ಕಳೆದ 15 ವರ್ಷಗಳ ಹಿಂದೆ ಮಹಾಲಿಂಗೇಶ್ ಹಾಗೂ ಸವಿತಾರ ಮದುವೆಯಾಗಿತ್ತು. ಇಬ್ಬರ ದಾಂಪತ್ಯ ಜೀವನಕ್ಕೆ ಮೂವರು ಹೆಣ್ಣು ಮಕ್ಕಳು ಸಾಕ್ಷಿಯಾಗಿದ್ದಾರೆ. ಆದರೆ ಪತ್ನಿ ಮೂವರು ಹೆಣ್ಣು ಮಕ್ಕಳನ್ನು ಹೆತ್ತ ಕಾರಣದಿಂದ ಮಹಾಲಿಂಗೇಶ್ ಕಿರುಕುಳ ನೀಡುತ್ತಿದ್ದ. ಅಲ್ಲದೇ ಉಳ್ಳಾಲ ಬಳಿ 7 ವರ್ಷಗಳ ಹಿಂದೆ ದೇವಾಲಯವನ್ನು ನಿರ್ಮಾಣ ಮಾಡಿರುವ ಮಹಾಲಿಂಗೇಶ್ ನಿಧಿ ಆಸೆಗಾಗಿ ಸಂಚು ರೂಪಿಸಿದ್ದ ಎನ್ನಲಾಗಿದೆ.

    ಈ ಕುರಿತು ಮಾಹಿತಿ ನೀಡಿರುವ ಪತ್ನಿ ಸವಿತಾ, ತನ್ನ ಪತಿಗೆ ಈ ಕೃತ್ಯ ಸಂಚು ರೂಪಿಸಲು ಮಾರ್ಥಂಡ ಎಂಬಾತ ಬೆಂಬಲ ನೀಡುತ್ತಿದ್ದಾನೆ. ಅವರ ಮಾತಿನ ಹಿನ್ನೆಲೆಯಲ್ಲಿ ತನಗೆ ಕಿರುಕುಳ ನೀಡಲು ಆರಂಭಿಸಿದ್ದ. ಅಲ್ಲದೇ ವದರಕ್ಷಿಣೆ ತರುವಂತೆ ಹಿಂಸೆ ನೀಡಿದ್ದ. ಕಿರುಕುಳ ತಡೆಯಲು ಸಾಧ್ಯವಾಗದೆ 27 ಲಕ್ಷ ರೂ. ನೀಡಿದ್ದೇನೆ. ತನ್ನ ತಂಗಿಯನ್ನು ಮದುವೆ ಮಾಡಿಕೊಡಲು ಒತ್ತಡ ಹಾಕಿದ್ದ. ಪತಿ ತನ್ನ ತಂದೆ ತಾಯಿಗೂ ಹಿಂಸೆ ನೀಡಿ ಅವರ ಮೇಲೂ ಹಲ್ಲೆ ನಡೆಸುತ್ತಿದ್ದ, ಹಲವು ಬಾರಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಮಕ್ಕಳಿಗೂ ಸಹ ನನ್ನ ಬಗ್ಗೆ ಕೆಟ್ಟ ಭಾವನೆ ಮೂಡುವ ರೀತಿ ಮಾಡಿ ದೂರ ಮಾಡಿದ್ದ ಎಂದು ತಿಳಿಸಿದ್ದಾರೆ.

    ದೇವಾಲಯದಲ್ಲೇ ಗುಂಡಿ: ಪತ್ನಿ ಕುಂಭ ರಾಶಿ ಆಗಿದ್ದ ಕಾರಣ ಆಕೆಯನ್ನು ಬಲಿ ಕೊಡಲು ಗುಂಡಿಯನ್ನು ನಿರ್ಮಾಣ ಮಾಡಿದ್ದ. ಪ್ರತಿದಿನ ಆ ಸ್ಥಳದಲ್ಲಿ ಪೂಜೆ ನಡೆಸುತ್ತಿದ್ದ. ಅಮವಾಸೆ ವೇಳೆ ಪತ್ನಿಯನ್ನು ಬಲಿ ನೀಡಿ ಗುಂಡಿಯಲ್ಲಿ ಮುಚ್ಚಿದರೆ ನಿಧಿ ದೊರೆಯುತ್ತದೆ ಎಂಬ ವದಂತಿಯ ಮೇಲೆ ಈ ಕೃತ್ಯ ನಡೆಸಲು ಮುಂದಾಗಿದ್ದ. ಈ ಕುರಿತು ಸವಿತಾ ಬಳಿ ಪತಿಯೇ ಮಾಹಿತಿ ನೀಡಿದ್ದು, ನಿನ್ನನ್ನು ಬಲಿ ನೀಡಿ ಆಪಾರ ಆಸ್ತಿ ಪಡೆಯುತ್ತೇನೆ. ಈ ವೇಳೆ ತಾನು ಜೈಲಿಗೆ ಹೋದರು ಸರಿ ಹಣದ ಬಲದಿಂದ ಹೊರಬರುತ್ತೇನೆ ಎಂದು ಹೇಳಿದ್ದ ಎಂದು ಸವಿತಾ ತಿಳಿಸಿದ್ದಾರೆ.

    https://www.youtube.com/watch?v=WFiU2igakfA

  • ಶಿವಮೊಗ್ಗದಲ್ಲಿ ನಿಧಿ ಆಸೆಗೆ ನರಬಲಿ- ಆರೋಪಿಗಳ ಬಂಧನ

    ಶಿವಮೊಗ್ಗದಲ್ಲಿ ನಿಧಿ ಆಸೆಗೆ ನರಬಲಿ- ಆರೋಪಿಗಳ ಬಂಧನ

    ಶಿವಮೊಗ್ಗ: ನಿಧಿಯಾಸೆಗಾಗಿ ನರಬಲಿ ಕೊಟ್ಟಿರುವ ಆಘಾತಕಾರಿ ಘಟನೆ ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಂಜನಾಪುರದಲ್ಲಿ ನಡೆದಿದೆ.

    ಕೇಶ್ಯನಾಯ್ಕ್(65) ನಿಧಿಯಾಸೆಗೆ ಬಲಿಯಾದ ವ್ಯಕ್ತಿ. ಸ್ಥಳಿಯರಾದ ರಂಗಪ್ಪ, ಶೇಖರಪ್ಪ, ಮಂಜುನಾಥ ಹಾಗೂ ಗೌಸ್ ಪೀರ್ ಎಂಬವರಿಂದ ಈ ಕೃತ್ಯ ನಡೆದಿದೆ. ಶಿಕಾರಿಪುರ ಗ್ರಾಮಾಂತರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

    ಕಾಡಿನ ಹೊಳೆ ದಂಡೆಯಲ್ಲಿ ಇರುವ ಹೊನ್ನೇಮರ ಚೌಡಮ್ಮ ದೇವಾಲಯದ ಬಳಿ ನಿಧಿ ಇದೆ ಎಂದು ಆರೋಪಿಗಳು ನಂಬಿದ್ದರು. ನರಬಲಿ ಕೊಟ್ಟರೆ ಈ ನಿಧಿ ಪಡೆಯಬಹುದು ಎಂಬ ಮೂಢನಂಬಿಕೆಯಿಂದ ಈ ಕೃತ್ಯ ನಡೆದಿದೆ.

    ಇದೇ ತಿಂಗಳ 7ರಂದು ರುಂಡವಿಲ್ಲದ ಶವ ಪತ್ತೆಯಾಗಿದ್ದು, ಶಿಕಾರಿಪುರ ಗ್ರಾಮಾಂತರ ಪೊಲೀಸರು ಈ ಬಗ್ಗೆ ತನಿಖೆ ನಡೆಸಿದಾಗ ನರಬಲಿ ಪ್ರಕರಣ ಬೆಳಕಿಗೆ ಬಂದಿದೆ.

  • ನಿಧಿಗಾಗಿ ಬಸವ ಮೂರ್ತಿ ಭಗ್ನಗೊಳಿಸಿದ ಇಬ್ಬರ ಬಂಧನ

    ನಿಧಿಗಾಗಿ ಬಸವ ಮೂರ್ತಿ ಭಗ್ನಗೊಳಿಸಿದ ಇಬ್ಬರ ಬಂಧನ

    ರಾಯಚೂರು: ನಿಧಿಯ ಆಸೆಗಾಗಿ ಬಸವ ಮೂರ್ತಿಯನ್ನ ಭಗ್ನಗೊಳಿಸಿದ ಇಬ್ಬರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಕಲುಬುರಗಿಯ ಸೋಮು ಹಾಗೂ ಜಮಖಂಡಿ ತಾಂಡದ ಭೀಮು ಬಂಧಿತ ಆರೋಪಿಗಳು. ರಾಯಚೂರಿನ ದೇವದುರ್ಗದ ಬೆಣಕಲ್ ಗ್ರಾಮದ ಬಳಿಯಿರುವ ಅಣೇಲಿಂಗೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ. ದೇವಸ್ಥಾನದಲ್ಲಿದ್ದ ಬಸವನ ಮೂರ್ತಿಯನ್ನು ದುಷ್ಕರ್ಮಿಗಳು ಭಗ್ನಗೊಳಿಸಿದ್ದಾರೆ.

    ಜನವರಿಯಲ್ಲಿ ಬಳ್ಳಾರಿ ತಾಲೂಕಿನ ಕುರಗೋಡ ಪಟ್ಟಣದ ವಜ್ರಬಂಡೆಯಲ್ಲಿ ನಿಧಿಯ ಆಸೆಗಾಗಿ ಕೆಲ ದುಷ್ಕರ್ಮಿಗಳು ಪುರಾತನ ಕಾಲದ ಬಸವ ಮೂರ್ತಿಯ ತಲೆ ಕತ್ತರಿಸಿ ಬಳಿಕ ಪರಾರಿಯಾಗಿದ್ದರು.

    ರಾಯಚೂರಿನಲ್ಲಿ ನಡೆದ ಘಟನೆ ಸಂಬಂಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಿಧಿಗಾಗಿ ಬಸವ ಮೂರ್ತಿಯ ತಲೆ ಕತ್ತರಿಸಿದ ದುಷ್ಕರ್ಮಿಗಳು!

    ನಿಧಿಗಾಗಿ ಬಸವ ಮೂರ್ತಿಯ ತಲೆ ಕತ್ತರಿಸಿದ ದುಷ್ಕರ್ಮಿಗಳು!

    ಬಳ್ಳಾರಿ: ನಿಧಿ ಆಸೆಗಾಗಿ ಪುರಾತನ ಕಾಲದ ಬಸವನ ಮೂರ್ತಿಯ ತಲೆ ಕತ್ತರಿಸಿದ ಘಟನೆಯೊಂದು ನಡೆದಿದೆ.

    ಬಳ್ಳಾರಿ ತಾಲೂಕಿನ ಕುರಗೋಡ ಪಟ್ಟಣದ ಹೊರವಲಯದಲ್ಲಿ ವಜ್ರಬಂಡೆ ಬಸವನ ಮೂರ್ತಿಯನ್ನು ದುಷ್ಕರ್ಮಿಗಳು ಭಗ್ನಗೊಳಿಸಿ ಪರಾರಿಯಾಗಿದ್ದಾರೆ. ಈ ವಜ್ರಬಂಡೆ ಬಸವ ಮೂರ್ತಿಯ ಒಳಗಡೆ ವಜ್ರದ ನಿಕ್ಷೇಪಗಳಿವೆ ಅಂತ ದುಷ್ಕರ್ಮಿಗಳು ಈ ಮೂರ್ತಿಯನ್ನು ಭಗ್ನಗೊಳಿಸಿದ್ದಾರೆ ಎನ್ನಲಾಗಿದೆ.

    ಈ ಹಿಂದೆಯೂ ಎರಡು ಭಾರಿ ಇದೇ ದೇವಸ್ಥಾನದಲ್ಲಿ ನಿಧಿಗಾಗಿ ಶೋಧ ನಡೆದಿತ್ತು. ಆದ್ರೆ ರವಿವಾರ ರಾತ್ರಿ ದುಷ್ಕರ್ಮಿಗಳು ಬಸವ ಮೂರ್ತಿಯ ತಲೆ ಕತ್ತರಿಸಿದ್ದಾರೆ. ಹೀಗಾಗಿ ಪುರಾತನ ಕಾಲದ ಅತ್ಯಂತ ಹಳೆಯದಾದ ಬಸವ ಮೂರ್ತಿ ಇದೀಗ ಧ್ವಂಸಗೊಂಡಿದೆ.

    ಘಟನೆಯ ನಂತರ ದೇವಸ್ಥಾನದ ಅರ್ಚಕರು ಕುರಗೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಗಳನ್ನು ಬಂಧಿಸಿ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ.

     

     

  • ನಿಧಿಗಾಗಿ ದೇವಸ್ಥಾನದ ಬಳಿಯೇ ವಾಮಾಚಾರ ಮಾಡಿ 8 ಅಡಿ ಸುರಂಗ ತೆಗೆದ ಕಳ್ಳರು

    ನಿಧಿಗಾಗಿ ದೇವಸ್ಥಾನದ ಬಳಿಯೇ ವಾಮಾಚಾರ ಮಾಡಿ 8 ಅಡಿ ಸುರಂಗ ತೆಗೆದ ಕಳ್ಳರು

    ಮಂಡ್ಯ: ಕಳ್ಳರ ತಂಡವೊಂದು ನಿಧಿಗಾಗಿ ಪುರಾತನ ದೇವಸ್ಥಾನದ ಬಳಿ ವಾಮಾಚಾರ ಮಾಡಿಸಿದ್ದು, ದೇವರ ವಿಗ್ರಹವಿದ್ದ ಜಾಗದಲ್ಲಿ ಎಂಟು ಅಡಿ ಸುರಂಗ ತೆಗೆದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಮಳವಳ್ಳಿ ತಾಲೂಕಿನ ಚೊಟ್ಟನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಕಳ್ಳರು ನಿಧಿಗಾಗಿ ಸುರಂಗ ತೆಗೆದಿದ್ದಾರೆ. ಮೊದಲು ಶಿವನ ವಿಗ್ರಹದ ಸುತ್ತ ವಾಮಾಚಾರ ಮಾಡಿ ನಂತರ ವಿಗ್ರಹವನ್ನ ಪಕ್ಕಕ್ಕೆ ಸರಿಸಿದ್ದಾರೆ. ಬಳಿಕ ವಿಗ್ರಹವಿದ್ದ ಜಾಗದಲ್ಲಿ ಸುಮಾರು ಎಂಟು ಅಡಿಯಷ್ಟು ಸುರಂಗ ತೆಗೆದಿದ್ದಾರೆ.

    ಕಳ್ಳರು ಸುರಂಗ ತೆಗೆದರೂ ಏನು ಪತ್ತೆಯಾಗದ ಹಿನ್ನೆಲೆಯಲ್ಲಿ ಸ್ಥಳದಿಂದ ಹೊರಟು ಹೋಗಿದ್ದಾರೆ. ಈ ಜಾಗದಲ್ಲಿ ನಿಧಿ ಇರುವುದಾಗಿ ಗ್ರಾಮದಲ್ಲಿ ಮಾತುಗಳು ಕೇಳಿಬರುತ್ತಿದ್ದವು. ಈ ಹಿಂದೆಯೂ ನಿಧಿಗಾಗಿ ಶೋಧ ಕಾರ್ಯ ಮಾಡಲಾಗಿತ್ತು.

    ಈ ಹಿನ್ನೆಲೆಯಲ್ಲಿ ಯಾರೋ ಮಾಹಿತಿ ತಿಳಿದಿರುವ ವ್ಯಕ್ತಿಗಳೇ ಈ ಕೃತ್ಯ ಮಾಡಿರಬಹುದು ಅಂತಾ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದು, ಸ್ಥಳಕ್ಕೆ ಮಳವಳ್ಳಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

     

  • ಜನರಿಗೆ ನಿಧಿ ಆಸೆ ತೋರಿಸಿ ಕೈಗೆ ಇದ್ದಿಲು ಕೊಟ್ಟು ವಂಚಿಸುತ್ತಿದ್ದವರ ಬಂಧನ

    ಜನರಿಗೆ ನಿಧಿ ಆಸೆ ತೋರಿಸಿ ಕೈಗೆ ಇದ್ದಿಲು ಕೊಟ್ಟು ವಂಚಿಸುತ್ತಿದ್ದವರ ಬಂಧನ

    ತುಮಕೂರು: ಜನರಿಗೆ ನಿಧಿ ಆಸೆ ತೋರಿಸಿ ಕೈಗೆ ಇದ್ದಿಲು ಕೊಟ್ಟು ವಂಚಿಸುತ್ತಿದ್ದ ವಂಚಕರ ತಂಡವೊಂದನ್ನು ತುಮಕೂರು ಡಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ರಾತ್ರೋ ರಾತ್ರಿ ಕಾರ್ಯಾಚರಣೆ ನಡೆಸಿದ ಡಿಸಿಬಿ ಇನ್ಸ್ ಪೆಕ್ಟರ್ ರಾಘವೇಂದ್ರ ನೇತೃತ್ವದ ತಂಡ ರಮೇಶ್ ಮತ್ತು ಹರೀಶ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಚಂದನ್ ಪರಾರಿಯಾಗಿದ್ದಾನೆ. ತುಮಕೂರು ಹೊರವಲಯದ ಯಲ್ಲಾಪುರದ ನಿವಾಸಿಗಳಾದ ಈ ವಂಚಕರ ತಂಡ ಕಳೆದ ಒಂದು ತಿಂಗಳಿನಿಂದ ನಗರದ ಹಲವರಿಗೆ ಫೋನ್ ಮಾಡಿ ನಿಧಿ ಸಿಕ್ಕಿದೆ, ಬೇಕಾದರೆ 2 ಲಕ್ಷ ರೂ. ತಗೊಂಡು ಬನ್ನಿ ಎಂದು ಹೇಳಿ ವಂಚಿಸುತ್ತಿದ್ದರು.

    ಸಾರ್ವಜನಿಕರ ದೂರಿನ ಮೇರೆಗೆ ಗ್ರಾಹಕರ ಸೋಗಿನಲ್ಲಿ ಹೋದ ಡಿಸಿಬಿ ಪೊಲೀಸರು ಯಲ್ಲಾಪುರದ ನಿರ್ಜನ ಪ್ರದೇಶದಲ್ಲಿ ನಿಧಿ ಮಾರಲು ಕಾಯುತಿದ್ದ ತಂಡದ ಮೇಲೆ ದಾಳಿ ನಡೆಸಿದೆ. ಅಲ್ಲದೆ ಈ ವಂಚಕರು ಚಿನ್ನದ ನಾಣ್ಯದ ಬದಲು ಪಾತ್ರೆಯ ಇದ್ದಿಲು ತುಂಬಿಕೊಂಡು ಬಂದಿದ್ದು ಪತ್ತೆಯಾಗಿದೆ. ಇದ್ದಿಲು ತುಂಬಿದ ಪಾತ್ರೆಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • ನಿಧಿ ಆಸೆಗೆ ಮಗು ಬಲಿ ಕೊಡೋಕೆ ಮುಂದಾಗಿದ್ದವರ ಬಂಧನ

    ನಿಧಿ ಆಸೆಗೆ ಮಗು ಬಲಿ ಕೊಡೋಕೆ ಮುಂದಾಗಿದ್ದವರ ಬಂಧನ

    ಮೈಸೂರು: ನಿಧಿಗಾಗಿ ಕೇರಳದ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಗು ಬಲಿ ಕೊಡಲು ಮುಂದಾಗಿ ತಮ್ಮದಲ್ಲದ ಜಮೀನಿನಲ್ಲಿ ಗುಂಡಿ ತೆಗೆದ ಏಳು ಜನರನ್ನು ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ನೆರಳೆ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಸುಧೀರ್ ಎಂಬಾತ ನಿಧಿಗಾಗಿ ಇಂತಹ ಪ್ಲಾನ್ ಮಾಡಿದ್ದ. ಅದೇ ಗ್ರಾಮದ ಮಹೇಶ್ ಎಂಬುವರ ಜಮೀನಿನಲ್ಲಿ ನಿಧಿ ಇದೆ ಎಂದು ಸುಧೀರ್ ತನ್ನ ಸುಳ್ಯದ ಗೆಳೆಯ ರವೀಂದ್ರ ಹಾಗೂ ಇನ್ನಿತರ ಐದು ಜನರೊಂದಿಗೆ ಹಳ್ಳ ತೆಗೆಯಲು ಜಮೀನಿಗೆ ಹೋಗಿದ್ದಾನೆ.

    ಈ ಸಂದರ್ಭದಲ್ಲಿ ರವೀಂದ್ರ ಜೊತೆ 11 ವರ್ಷದ ಮಗು ಕೂಡ ಇತ್ತು. ಅಲ್ಲದೆ ಪೂಜೆಯ ಸಾಮಾಗ್ರಿಗಳು, ಕೇರಳದ ಜ್ಯೋತಿಷ್ಯ ಶಾಸ್ತ್ರದ ಪುಸ್ತಕಗಳು ಹಾಗೂ ಮಾಂತ್ರಿಕ ವಿದ್ಯೆಯ ಸಾಮಾಗ್ರಿಗಳು ಕೂಡ ಇದ್ದವು. ಇವರೆಲ್ಲಾ ಸೇರಿ ಹಳ್ಳ ತೆಗೆಯುವುದನ್ನು ಸ್ಥಳೀಯರು ಗಮನಿಸಿ ನಿಧಿಗಾಗಿ ಮಗು ಬಲಿ ಕೊಡಲಾಗುತ್ತಿದೆ ಎಂದು ಶಂಕಿಸಿ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಕೌವಲಂದೆ ಪೊಲೀಸರು ಸ್ಥಳದಲ್ಲಿದ್ದ 7 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

    ಜಮೀನಿನ ಮಾಲೀಕ ಮಹೇಶ್ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಕೌವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಬಾಲಕನನ್ನು ಹೊರತು ಪಡಿಸಿ 7 ಮಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ಬಳ್ಳಾರಿಯಲ್ಲಿ ನಿಧಿಗಾಗಿ ದೇವರ ವಿಗ್ರಹವನ್ನೇ ಧ್ವಂಸಗೊಳಿಸಿದ್ರು..!

    ಬಳ್ಳಾರಿಯಲ್ಲಿ ನಿಧಿಗಾಗಿ ದೇವರ ವಿಗ್ರಹವನ್ನೇ ಧ್ವಂಸಗೊಳಿಸಿದ್ರು..!

    ಬಳ್ಳಾರಿ: ನಿಧಿ ಆಸೆಗಾಗಿ ದೇವಾಲಯದಲ್ಲಿನ ದೇವರ ಗದ್ದುಗೆಯನ್ನು ಒಡೆದು ದೇವರ ವಿಗ್ರಹಗಳನ್ನು ದ್ವಂಸಗೊಳಿಸಿದ ಘಟನೆ ಜಿಲ್ಲೆಯ ಹಡಗಲಿ ತಾಲೂಕು ಕಳಸಾಪುರ ಗ್ರಾಮದದಲ್ಲಿ ನಡೆದಿದೆ.

    ತಾಲೂಕಿನ ಪುರಾತನ ದೇವಾಲಯ ಎಂದು ಪ್ರಸಿದ್ಧಿ ಪಡೆದಿರುವ ಕಳಸಾಪುರ ಗ್ರಾಮದ ಬೆಟ್ಟದ ಮೇಲಿರುವ ಮಲ್ಲೇಶ್ವರ ದೇವಾಲಯದಲ್ಲಿ ದುಷ್ಕರ್ಮಿಗಳು ನಿಧಿ ಶೋಧ ನಡೆಸಿದ್ದಾರೆ. ದೇವಾಲಯವು ಪುರಾತನ ಕಾಲದಲ್ಲಿ ನಿರ್ಮಾಣವಾಗಿದ್ದು, ದೇವರ ಮೂರ್ತಿ ಕೆಳಗೆ ಚಿನ್ನಾಭರಣ ಸಿಗುವ ಆಸೆಯಿಂದ ದುಷ್ಕರ್ಮಿಗಳು ವಿಗ್ರಹಗಳನ್ನು ಕಿತ್ತು ಗರ್ಭಗುಡಿಯಲ್ಲಿ ಬೃಹದಾಕಾರದ ಹಳ್ಳವನ್ನು ನಿರ್ಮಿಸಿದ್ದಾರೆ.

    ಇಂದು ಮುಂಜಾನೆ ದೇವಾಲಯದಲ್ಲಿ ನಿಧಿಗಾಗಿ ಶೋಧ ನಡೆಸಿರುವ ಘಟನೆ ಬೆಳಕಿಗೆ ಬಂದಿದ್ದು, ಗ್ರಾಮಸ್ಥರು ಸ್ಥಳಕ್ಕೆ ತೆರಳಿ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಅಲ್ಲದೇ ನಿಧಿಯ ಆಸೆಯಿಂದ ದೇವರ ಮೂರ್ತಿಗಳನ್ನು ನಾಶಗೊಳಿಸಿರುವ ವ್ಯಕ್ತಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

    ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ತನಿಖೆಯನ್ನು ಆರಂಭಿಸಿದ್ದಾರೆ.

     

     

  • ನಿಧಿ ಆಸೆಗಾಗಿ ಕರಗುತ್ತಿದೆ ಐತಿಹಾಸಿಕ ಗುಳೇದಗುಡ್ಡ ಬೆಟ್ಟ

    ನಿಧಿ ಆಸೆಗಾಗಿ ಕರಗುತ್ತಿದೆ ಐತಿಹಾಸಿಕ ಗುಳೇದಗುಡ್ಡ ಬೆಟ್ಟ

    ಬಾಗಲಕೋಟೆ: ಐತಿಹಾಸಿಕ ಹಿನ್ನೆಲೆಯುಳ್ಳ ದೊಡ್ಡ ಬೆಟ್ಟದಲ್ಲಿ ಇಂದು ನಿಧಿಯಿದೆ ಅಂತಾ ಹೇಳಿ ಬೆಟ್ಟವನ್ನು ಅಗಿಯಲಾಗುತ್ತಿದೆ. ಅಚ್ಚರಿ ಅಂದ್ರೆ ಯಾರೂ ಅಡ್ಡಿ ಮಾಡಬಾರದು ಅಂತಾ ವಾಮಾಚಾರ ಮಾಡಿ ಬೆಟ್ಟ ಅಗೆದು ನಿಧಿ ಹುಡುಕಾಡುತ್ತಿದ್ದಾರೆ.

    ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಐತಿಹಾಸಿಕ ಪರಂಪರೆಯ ಗುಳೇದಗುಡ್ಡಕ್ಕೆ ವಾಮಾಚಾರದ ಕಾಟ ಶುರುವಾಗಿದೆ. ಗುಳೇದಗುಡ್ಡ ಪಟ್ಟಣಕ್ಕೆ ಹೊಂದಿಕೊಂಡಿರುವ ಬೆಟ್ಟ 500 ಅಡಿ ಎತ್ತರವನ್ನು ಹೊಂದಿದೆ. ಚಾಲುಕ್ಯರ ಕುರುಹುಗಳಿರುವ ಈ ಬೆಟ್ಟದಲ್ಲಿ ಅಪಾರ ಐಶ್ವರ್ಯ ಸಂಪತ್ತಿದೆ ಎಂದು ಬೆಟ್ಟವನ್ನು ದುಷ್ಕರ್ಮಿಗಳು ಅಗೆಯಲಾರಂಭಿಸಿದ್ದಾರೆ. ಹೀಗಾಗಿ ಇತಿಹಾಸದ ಕುರುಹುಗಳು ನಾಶವಾಗ್ತಿರೋದ್ರ ಜೊತೆ ಸನಾತನ ಧರ್ಮದ ದೇವರ ಮೂರ್ತಿಗಳೂ ಹಾಳಾಗುತ್ತಿವೆ.

    ಕಳ್ಳರು ನಿಧಿ ಆಸೆಗೆ ಬೆಟ್ಟ ಅಗೆಯುತ್ತಿದ್ರೂ ಸಂಬಂಧ ಪಟ್ಟ ಪುರಾತತ್ವ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಮಾತ್ರ ಕ್ರಮವನ್ನು ಕೈಗೊಂಡಿಲ್ಲ. ಒಟ್ಟಿನಲ್ಲಿ ನಿಧಿಗಳ್ಳರ ದುರಾಸೆಗೆ ಐತಿಹಾಸಿಕ ಬೆಟ್ಟ ಕರಗುತ್ತಿದೆ.