Tag: ನಿಧಿ

  • ನಿಧಿಗಾಗಿ ಇತಿಹಾಸ ಪ್ರಸಿದ್ಧ ನವಬೃಂದಾವನ ಧ್ವಂಸ

    ನಿಧಿಗಾಗಿ ಇತಿಹಾಸ ಪ್ರಸಿದ್ಧ ನವಬೃಂದಾವನ ಧ್ವಂಸ

    ಕೊಪ್ಪಳ: ಕೆಲ ಕಿಡಿಗೇಡಿಗಳು ನಿಧಿಗಾಗಿ ಐತಿಹಾಸಿಕ ಪ್ರಸಿದ್ಧ ನವಬೃಂದಾವನವನ್ನು ಧ್ವಂಸಗೊಳಿಸಿದ ಘಟನೆ ಗಂಗಾವತಿ ತಾಲೂಕಿನ ಆನೆಗುಂದಿಯಲ್ಲಿ ನಡೆದಿದೆ.

    ಆನೆಗುಂದಿ ಸಮೀಪವಿರುವ ನವಬೃಂದಾವನ ಗಡ್ಡೆ ತುಂಗಭದ್ರಾ ನದಿಯ ಮಧ್ಯದಲ್ಲಿದೆ. ಇಲ್ಲಿ ವ್ಯಾಸರಾಜರು ಸೇರಿದಂತೆ ಒಟ್ಟು ಒಂಬತ್ತು ಯತಿಗಳ ಸಮಾಧಿಗಳು ಇವೆ. ದುಷ್ಕರ್ಮಿಗಳು ನಿಧಿಯ ಆಸೆಗಾಗಿ ಬುಧವಾರ ರಾತ್ರಿ ನವಬೃಂದಾವನವನ್ನು ಅಗೆದು ಹಾಕಿದ್ದಾರೆ. ಸಮಾಧಿಯ ಕೆಳಭಾಗವನ್ನು ಸಹ ಸಂಪೂರ್ಣ ಅಗೆದಿದ್ದರಿಂದ ನಿಧಿಗಾಗಿ ಹೀಗೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಗಂಗಾವತಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಂಗಾವತಿಯ ತಹಶೀಲ್ದಾರ್ ವೀರೇಶ ಅವರು ಕೂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

    ನವಬೃಂದಾವನದಲ್ಲಿ ಪ್ರತಿವರ್ಷ ರಾಘವೇಂದ್ರ ಮಠದವರಿಂದ ಮತ್ತು ಉತ್ತಾರಾಧಿ ಮಠದಿಂದ ಅದ್ಧೂರಿಯಾಗಿ ಆರಾಧನೆ ಕಾರ್ಯಕ್ರಮ ಜರಗುತ್ತದೆ. ನವಬೃಂದಾವನ ಮಾಲೀಕತ್ವಕ್ಕಾಗಿ ಈ ಎರಡು ಮಠದವರು ಸುಪ್ರೀಂಕೊರ್ಟ್ ಮೆಟ್ಟಿಲೇರಿದ್ದು, ಯಾರ ಪರವೂ ತೀರ್ಪು ಬಂದಿಲ್ಲ.

  • ನಿಧಿಗಾಗಿ ಪತ್ನಿಗೆ ಮಿತ ಆಹಾರ ಕೊಟ್ಟು ಹಿಂಸಿಸಿದ ಪತಿರಾಯ

    ನಿಧಿಗಾಗಿ ಪತ್ನಿಗೆ ಮಿತ ಆಹಾರ ಕೊಟ್ಟು ಹಿಂಸಿಸಿದ ಪತಿರಾಯ

    ಮುಂಬೈ: ನಿಧಿಯ ಆಸೆಯಿಂದ ಪತಿಯೊಬ್ಬ ತನ್ನ ಪತ್ನಿಗೆ ಬರೋಬ್ಬರಿ 50 ದಿನಗಳ ಕಾಲ ಸರಿಯಾಗಿ ಊಟ ನೀಡದೆ ಹಿಂಸಿಸುವ ಮೂಲಕ ಅಮಾನುಷವಾಗಿ ನಡೆಸಿಕೊಂಡ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

    ನೆರೆ ರಾಜ್ಯದ ಚಂದ್ರಾಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಿಧಿಯನ್ನು ಹೇಗೆ ವಶಪಡಿಸಿಕೊಳ್ಳಬೇಕು ಎಂದು ಸ್ವಘೋಷಿತ ದೇವಮಾನವನೊಬ್ಬ ತೋರಿಸಿದ ಆಸೆಗೆ ಪತಿರಾಯ, 50 ದಿನಗಳ ಕಾಲ ಪತ್ನಿಗೆ ಮಿತ ಆಹಾರ ನೀಡಿ ದೈಹಿಕ ಹಾಗೂ ಮಾನಸಿಕವಾಗಿ ಹಿಂಸಿಸಿದ್ದಾನೆ.

    2018ರಲ್ಲಿ ಶೆಗಾಂವ್ ಗ್ರಾಮದಲ್ಲಿ ದಂಪತಿ ವಿವಾಹವಾಗಿತ್ತು. ಪತಿ ಹಾಗೂ ಕುಟುಂಬಸ್ಥರಿಗೆ ಸ್ವ-ಘೋಷಿತ ದೇವಮಾನವನೊಬ್ಬ ಗೌಪ್ಯ ನಿಧಿಯೊಂದಿದೆ, ಅದನ್ನ ನೀವು ಪಡೆಯಬಹುದು ಎಂದು ಆಸೆ ತೋರಿಸಿದ್ದನು. ನಿಧಿ ದೊರೆಯಬೇಕೆಂದರೆ ಕೆಲವು ಪೂಜೆಗಳನ್ನು ಮಾಡಬೇಕಾಗುತ್ತದೆ. ಅದಕ್ಕೆ ಮನೆಯಲ್ಲಿದ್ದ ನೂತನ ಸೊಸೆ ಮಿತ ಆಹಾರ ಸೇವನೆ ಮಾಡಿ ಪೂಜೆ ಮಾಡಬೇಕಾಗುತ್ತದೆ ಎಂದು ಷರತ್ತು ವಿಧಿಸಿದ್ದನು. ಈ ಮಾತಿಗೆ ಮರುಳಾದ ಪತಿ ಹಾಗೂ ಆತನ ಕುಟುಂಬಸ್ಥರು ನಿಧಿಯ ಆಸೆಯಿಂದ ಆಮೆಯೊಂದನ್ನು ಸೊಸೆಗೆ ನೀಡಿ, ಪೂಜೆ ಸಲ್ಲಿಸುವಂತೆ ಸದಾ ಹಿಂಸಿಸುತ್ತಿದ್ದರು.

    ಪತಿ ಕೂಡ ಆ ವ್ಯಕ್ತಿಯ ಮಾತು ಕೇಳಿ ಪತ್ನಿಗೆ 50 ದಿನಗಳಿಂದ ಸರಿಯಾದ ಆಹಾರ ನೀಡದೆ ಮಾನಸಿಕ ಹಾಗೂ ದೈಹಿಕವಾಗಿ ಚಿತ್ರಹಿಂಸೆ ನೀಡುತ್ತಿದ್ದನು. ಅಷ್ಟೇ ಅಲ್ಲದೆ ಪತ್ನಿಯ ಮೊಬೈಲನ್ನು ಕೂಡ ಪತಿ ಕಸಿದು ತನ್ನ ಬಳಿಯೇ ಇಟ್ಟುಕೊಂಡಿದ್ದನು. ಈ ಹಿನ್ನೆಲೆ ಹಲವು ದಿನಗಳು ಕಳೆದರೂ ಮಗಳು ಫೋನ್ ಮಾಡಲಿಲ್ಲ ಎಂದು ಮಹಿಳೆಯ ಪೋಷಕರು ಆತಂಕಕ್ಕೆ ಒಳಗಾಗಿದ್ದರು. ಹೀಗಾಗಿ ಮಗಳ ಮನೆಗೆ ಹೋಗಿ ವಿಚಾರಿಸಿಕೊಂಡು ಬರೋಣ ಎಂದು ಪೋಷಕರು ಹೋದಾಗ ಮಗಳ ಸ್ಥಿತಿ ಏನಾಗಿದೆ ಎನ್ನುವ ಬಗ್ಗೆ ತಿಳಿದಿದೆ. ನಂತರ ಕೂಡಲೇ ಪೋಷಕರು ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ.

    ನಸುಕಿನ 2.45ರಿಂದ ರಾತ್ರಿವರೆಗೂ ಪತ್ನಿಗೆ ಸದಾ ಪೂಜೆ ಮಾಡುತ್ತಿರುವಂತೆ ಪತಿ ಹಿಂಸೆ ನೀಡುತ್ತಿದ್ದ. ಈ ನಡುವೆ ಏನಾದರೂ ತಪ್ಪಾದರೆ ಕುಟುಂಬಸ್ಥರೆಲ್ಲರೂ ಸೇರಿ ಆಕೆಗೆ ಹೊಡೆದು ಚಿತ್ರಹಿಂಸೆ ನೀಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲದೆ ಮಾನವ ಬಲಿ ಹಾಗೂ ಅಮಾನವೀಯ ಅಂಧಶ್ರದ್ಧೆಗಳ ನಿರ್ಮೂಲನೆ ಹಾಗೂ ತಡೆ ಕಾಯ್ದೆ ಅನ್ವಯ ಕೂಡ ಕುಟುಂಬಸ್ಥರ ವಿರುದ್ಧ ಪ್ರಕರಣ ದಾಖಲಾಗಿದೆ.

    ಹಾಗೆಯೇ ಮೂಢನಂಬಿಕೆಗಳನ್ನು ಬಂಡವಾಳವಾಗಿ ಮಾಡಿಕೊಂಡು ಜನರಿಗೆ ಮೋಸ ಮಾಡಿದ ಸ್ವ-ಘೋಷಿತ ದೇವಮಾನವನನ್ನು ಕೂಡ ಪೊಲೀಸರು ಬಂಧಿಸಿದ್ದು, ಗುರುವಾರಂದು ಸ್ಥಳೀಯ ಕೋರ್ಟ್ ಗೆ ಹಾಜರುಪಡಿಸಿದ್ದರು. ಸದ್ಯ ಈ ಬಗ್ಗೆ ವಿಚಾರಣೆ ಮುಂದುವರಿದಿದೆ.

  • ನಿಧಿ ಆಸೆಗೆ ವಾಮಾಚಾರ ಮಾಡ್ತಿದ್ದ ತಂಡ ಅಂದರ್

    ನಿಧಿ ಆಸೆಗೆ ವಾಮಾಚಾರ ಮಾಡ್ತಿದ್ದ ತಂಡ ಅಂದರ್

    ಬೆಂಗಳೂರು: ಚಿನ್ನ ಹಾಗೂ ನಿಧಿಯ ಅಸೆಗೆ ವಾಮಾಚಾರ ಮಾಡುತ್ತಿದ್ದ ಆರು ಜನರ ತಂಡವೊಂದನ್ನು ನೆಲಮಂಗಲ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳನ್ನು ಸಲ್ಮಾನ್ ಪಾಷಾ, ಫರೀದ್ ಖಾನ್, ಸಮೀ ಉಲ್ಲಾ, ಮಹಮ್ಮದ್ ಆಸೀಫ್, ಗುಲ್ಜರ್ ಖಾನ್ ಮತ್ತು ಗುರುರಾಜ್ ಎಂದು ಗುರುತಿಸಲಾಗಿದೆ. ತಂಡದ ಅಯೂಬ್ ಮತ್ತು ಯಾಸೀನ್ ಎಂಬ ಇಬ್ಬರು ಆರೋಪಿಗಳು ನಾಪತ್ತೆಯಾಗಿದ್ದಾರೆ.

    ಈ ಆರು ಜನರ ತಂಡ ನೆಲಮಂಗಲ ತಾಲೂಕಿನ ರಾಯರಪಾಳ್ಯ ಬಳಿಯ ಸಿದ್ಧರಬೆಟ್ಟದಲ್ಲಿ ವಾಮಾಚಾರ ಮಾಡಿತ್ತು. ಘಟನಾ ಸ್ಥಳದಲ್ಲಿ ನಿಂಬೆಹಣ್ಣು, ಅರಿಶಿನ ಕುಂಕುಮ, ಇನ್ನಿತರ ಸಾಮಾಗ್ರಿ ಪತ್ತೆಯಾಗಿದೆ. ಬಂಧಿತರಿಂದ ಒಂದು ಕಾರು, ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಿಧಿ ಶೋಧ ಮಾಡ್ತಿದ್ದವರಿಗೆ ಗ್ರಾಮಸ್ಥರಿಂದ ಧರ್ಮದೇಟು

    ನಿಧಿ ಶೋಧ ಮಾಡ್ತಿದ್ದವರಿಗೆ ಗ್ರಾಮಸ್ಥರಿಂದ ಧರ್ಮದೇಟು

    ಕೋಲಾರ: ಪುರಾತನ ಬೆಟ್ಟವೊಂದರಲ್ಲಿ ನಿಧಿ ಶೋಧ ಮಾಡುತ್ತಿದ್ದ ಐವರನ್ನ ಗ್ರಾಮಸ್ಥರೇ ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಕೋಲಾರ ತಾಲೂಕಿನ ಅರಾಭಿಕೊತ್ತನೂರು ಬೆಟ್ಟದಲ್ಲಿ ನಿಧಿ ಶೋಧ ಕಾರ್ಯ ನಡೆಸುತ್ತಿದ್ದ ವೇಳೆ ಐದು ಮಂದಿ ನಿಧಿ ಕಳ್ಳರು ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ರಘು, ನರಸಿಂಹ, ಪ್ರಸಾದ್, ಆನಂದ್ ಹಾಗೂ ಗುರು ಮೂರ್ತಿ ಎಂದು ಗುರುತಿಸಲಾಗಿದೆ. ಕಳ್ಳರು ಚಿಂತಾಮಣಿ ಮೂಲದವರು ಎನ್ನಲಾಗಿದೆ.

    ಐವರನ್ನ ಹಿಡಿದು ಥಳಿಸಿರುವ ಗ್ರಾಮಸ್ಥರು ಬಟ್ಟೆ ಹರಿದು ನಿಧಿ ಕಳ್ಳರ ಬಳಿ ಇದ್ದ ನಿಂಬೆಹಣ್ಣು ಹಾಗೂ ನಿಧಿ ಶೋಧಕ್ಕೆ ತಂದಿದ್ದ ಸಲಕರಣಗಳನ್ನ ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಗ್ರಾಮದಲ್ಲಿಯೇ ಕಟ್ಟಿ ಹಾಕಿ ಕೋಲಾರ ಗ್ರಾಮಾಂತರ ಪೊಲೀಸರಿಗೆ ಐವರನ್ನ ಒಪ್ಪಿಸಿದ್ದಾರೆ.

    ಕಳೆದ ರಾತ್ರಿ ಗ್ರಾಮದ ಪಕ್ಕದಲ್ಲಿರುವ ಪುರಾತನ ಬೆಟ್ಟದಲ್ಲಿ ನಿಧಿ ಶೋಧಿಸುತ್ತಿದ್ದ ವೇಳೆ ಗ್ರಾಮಸ್ಥರು ಆರೋಪಿಗಳನ್ನ ನೋಡಿದ್ದಾರೆ. ನಂತರ ವಿಚಾರಣೆ ನಡೆಸಿದ ವೇಳೆ ನಾವು ಬೆಟ್ಟದಲ್ಲಿ ಕಲ್ಲು ಹುಡುಕಾಟ ಮಾಡುತ್ತಿದ್ದೇವೆ ಎಂದು ನಿಧಿ ಚೋರರು ಹೇಳಿದ್ದರು. ಸದ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಐವರು ನಿಧಿ ಕಳ್ಳರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

  • ಕನಸಿನಲ್ಲಿ ದೇವಿ ಪ್ರತ್ಯಕ್ಷ – ಅಜ್ಜಿಯನ್ನೇ ಕೊಂದ ಮೊಮ್ಮಗ..!

    ಕನಸಿನಲ್ಲಿ ದೇವಿ ಪ್ರತ್ಯಕ್ಷ – ಅಜ್ಜಿಯನ್ನೇ ಕೊಂದ ಮೊಮ್ಮಗ..!

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ಮೊಮ್ಮಗನೋರ್ವ ನಿಧಿಗಾಗಿ ತನ್ನ ಸ್ವಂತ ಅಜ್ಜಿಯನ್ನೇ ಕೊಲೆ ಮಾಡಿ ಜನರ ಬಳಿ ಗೂಸ ತಿಂದು ಈಗ ಪೊಲೀಸರ ಅಥಿತಿಯಾಗಿದ್ದಾನೆ.

    ಯಲ್ಲವ್ವ ಗೊಲ್ಲರ್ (75) ಮೃತ ದುರ್ದೈವಿ. ಆರೋಪಿ ಮೊಮ್ಮಗ ರಮೇಶ್ ಗೊಲ್ಲರ್ ಕೊಲೆ ಮಾಡಿದ್ದಾನೆ. ಈತ ಮೂಲತಃ ಶಿರಸಿ ತಾಲೂಕಿನ ಬನವಾಸಿ ಬಳಿಯ ಬದನಗೋಡು ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದನು. ರಮೇಶ್ ಕನಸಿನಲ್ಲಿ ಈತನು ಪೂಜಿಸುವ ಇದೇ ಊರಿನ ಹುಲಿಯಮ್ಮ ದೇವಿ ಪ್ರತ್ಯಕ್ಷಳಾಗಿದ್ದು, ನಿನಗೆ ನಿಧಿ ತೋರಿಸುತ್ತೇನೆ ಅದಕ್ಕಾಗಿ ಐದು ನರ ಬಲಿ ಕೊಡಬೇಕು ಎಂದಿದ್ದಳಂತೆ.

    ಹೀಗಾಗಿ ಕನಸಲ್ಲಿ ಕಂಡದ್ದನ್ನು ನಿಜ ಮಾಡಲು 2016 ರಲ್ಲಿ ಮುಂಡಗೋಡಿನ ಮಳಗಿ ಅಣೆಕಟ್ಟು ಬಳಿ ಆಟವಾಡುತ್ತಿದ್ದ ಚಿಕ್ಕ ಬಾಲಕನ ಕುತ್ತಿಗೆ ಕಡಿದು ಕೊಲೆ ಮಾಡಿದ್ದನು. ಬಳಿಕ ಮುಂಡಗೋಡು ಪೊಲೀಸರಿಂದ ಬಂಧನವಾಗಿದ್ದನು. ನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡು ಮತ್ತಷ್ಟು ಬಲಿ ಪಡೆಯಲು ಗ್ರಾಮದಲ್ಲಿ ಕತ್ತಿ ಹಿಡಿದುಕೊಂಡು ಓಡಾಡುತ್ತಿದ್ದನು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಆತನಿಗೆ ಎಚ್ಚರಿಸಲಾಗಿತ್ತು. ಆದರೆ ಇದೀಗ ನಿಧಿಯ ಆಸೆಗೆ ತನ್ನ ಅಜ್ಜಿ ಯಲ್ಲವ್ವರನ್ನು ಬಲಿ ತೆಗೆದುಕೊಂಡಿದ್ದಾನೆ ಎಂದು ಗ್ರಾಮಸ್ಥ ಸರ್ಫರಾಜ್ ತಿಳಿಸಿದ್ದಾರೆ.

    ಕೃತ್ಯ ನಡೆಸಿ ಊರಿನಿಂದ ಪರಾರಿಯಾಗಿದ್ದ ಈತನನ್ನು ಗ್ರಾಮದವರೇ ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈತನ ಮತ್ತೊಂದು ನರಬಲಿಯಿಂದ ಇಡೀ ಗ್ರಾಮವೇ ಬೆಚ್ಚಿ ಬಿದ್ದಿದ್ದು, ತಾನು ಇನ್ನು ಮೂರು ಬಲಿ ಪಡೆದರೆ ನಿಧಿ ಪಡೆಯುವ ಹಂಬಲವನ್ನು ಪೊಲೀಸರ ಬಳಿ ಹೇಳಿದ್ದಾನೆ. ಇದರಿಂದ ಮತ್ತಷ್ಟು ಬಲಿಯಾಗುವ ಆತಂಕದಲ್ಲಿ ಗ್ರಾಮದವರು ಊರಿನಲ್ಲಿ ಓಡಾಡಲೂ ಭಯ ಪಡುತ್ತಿದ್ದಾರೆ ಎಂದು ಸ್ಥಳೀಯ ಅಕ್ಷಯ್ ಹೇಳಿದ್ದಾರೆ.

    ಈ ಹಿಂದೆಯೇ ಪೊಲೀಸರು ಕಠಿಣ ಕ್ರಮ ಜರುಗಿಸಿದ್ದರೆ ಅಜ್ಜಿ ಸಾಯುತ್ತಿರಲಿಲ್ಲ. ಆದರೆ ಈಗ ನಿಧಿ ಹೆಸರಿನಲ್ಲಿ ಎರಡು ಬಲಿಯಾಗಿದ್ದು, ಈತನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳದಿದ್ದರೆ ಮತ್ತಷ್ಟು ಬಲಿಯಾಗಲಿದೆ ಎಂದು ಜನರು ಪೊಲೀಸರಿಗೆ ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಿಧಿಗಾಗಿ ಬೆಂಗ್ಳೂರಿನಿಂದ ಬಂದು ಮೋಸ ಹೋಗಿ, ಮಕ್ಕಳ ಕಳ್ಳರೆಂದು ಥಳಿಸಿಕೊಂಡ್ರು!

    ನಿಧಿಗಾಗಿ ಬೆಂಗ್ಳೂರಿನಿಂದ ಬಂದು ಮೋಸ ಹೋಗಿ, ಮಕ್ಕಳ ಕಳ್ಳರೆಂದು ಥಳಿಸಿಕೊಂಡ್ರು!

    ಶಿವಮೊಗ್ಗ: ನಿಧಿಯಾಸೆಗೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದಿದ್ದ ಐವರು 5 ಲಕ್ಷ ರೂ. ನಗದು ನೀಡಿ ಮೋಸ ಹೋಗಿದ್ದು, ಬಳಿಕ ಮಕ್ಕಳ ಕಳ್ಳರು ಅಂತಾ ಗ್ರಾಮಸ್ಥರಿಂದ ಥಳಿಸಿಕೊಂಡಿದ್ದಾರೆ.

    ಬೆಂಗಳೂರಿನ ಯಲಹಂಕದ ಅಶೋಕ್, ಮೂರ್ತಿ, ಸತೀಶ್, ಅಜಿತ್ ಹಾಗೂ ಅವಿನಾಶ್ ಮೋಸ ಹೋಗಿ, ಥಳಿಸಿಕೊಂಡವರು. ಶಿವಮೊಗ್ಗ ತಾಲೂಕು ಕಲ್ಲಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಐವರನ್ನು ಗ್ರಾಮಸ್ಥರು ದೇವಾಲಯದಲ್ಲಿ ಕೂಡಿ ಹಾಕಿ, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

    ನಡೆದದ್ದು ಏನು?
    ಬೆಂಗಳೂರಿನ ಅಶೋಕ್‍ಗೆ ಮಂಜುನಾಥ್ ಎಂಬವನು ಧರ್ಮಸ್ಥಳದಲ್ಲಿ ಒಂದು ವರ್ಷದ ಹಿಂದೆ ಪರಿಚಯವಾಗಿದ್ದ. ಕಳೆದ ತಿಂಗಳು ಅಶೋಕ್‍ಗೆ ಕರೆ ಮಾಡಿ, ನಿಧಿ ಸಿಕ್ಕಿದೆ ಗುಪ್ತವಾಗಿ ಮಾರಾಟ ಮಾಡಬೇಕು ಅಂತ ಹೇಳಿದ್ದ. ಇದನ್ನು ಪರೀಕ್ಷಿಸಲು ಕೆಲವು ದಿನಗಳ ಹಿಂದೆ ಬಂದಿದ್ದ ಅಶೋಕ್‍ಗೆ ಒಂಬತ್ತು ಗ್ರಾಂನ ಚಿನ್ನದ ನಾಣ್ಯವನ್ನು ಸ್ಯಾಂಪಲ್‍ಗಾಗಿ ಕೊಟ್ಟಿದ್ದಾನೆ.

    ಚಿನ್ನದ ನಾಣ್ಯವೆಂದು ಖಚಿತಪಡೆಸಿಕೊಂಡ ಅಶೋಕ್ ನಿಧಿಯನ್ನು ಖರೀದಿಸಲು ಮುಂದಾಗಿದ್ದ. ನಾಣ್ಯಗಳನ್ನು ನೀಡಲು ಮಂಜುನಾಥ್ 5 ಲಕ್ಷ ರೂ. ಬೇಡಿಕೆ ಮಾಡಿದ್ದ. ಹೀಗಾಗಿ ಅವನು ತಿಳಿಸಿದ್ದ ಕಲ್ಲಾಪುರ ಗ್ರಾಮದ ಬಳಿ ಜಾಗಕ್ಕೆ ಭಾನುವಾರ ಬೆಳಗ್ಗೆ ಅಶೋಕ್ ಹಣ ತೆಗೆದುಕೊಂಡು ಸ್ನೇಹಿತರೊಂದಿಗೆ ಬಂದಿದ್ದ.

    ಪೂಜೆ ಮಾಡಿದ್ದ ನಿಧಿಯ ಗಂಟು ಹಿಡಿದುಕೊಂಡು ಬಂದಿದ್ದ ಮಂಜುನಾಥ್ ಅದನ್ನು ನೀಡಿ, ಹಣ ಪಡೆದಿದ್ದಾನೆ. ಗಂಟನ್ನು ದೇವರ ಮುಂದೆ ಇಟ್ಟು ತೆರೆಯಬೇಕು ಎಂದು ಹೇಳಿ ಅಲ್ಲಿಂದ ಪರಾರಿಯಾಗಿದ್ದಾನೆ. ಮಂಜುನಾಥ್ ಅಲ್ಲಿಂದ ಹೋಗುತ್ತಿದ್ದಂತೆ, ಅಶೋಕ್ ಹಾಗೂ ಆತನ ಸ್ನೇಹಿರು ಗಂಟು ಬಿಚ್ಚಿ ನೋಡಿದ್ದು, ನಾಣ್ಯಗಳು ನಕಲಿ ಎಂದು ಖಚಿತಪಡಿಸಿಕೊಂಡಿದ್ದಾರೆ.

    ಮಂಜುನಾಥ್‍ನನ್ನು ಹುಡುಕುತ್ತ ಎಲ್ಲರೂ ಕಲ್ಲಾಪುರ ಗ್ರಾಮಕ್ಕೆ ಬಂದಿದ್ದಾರೆ. ಅವರನ್ನು ಕಂಡ ಗ್ರಾಮಸ್ಥನೊಬ್ಬ ಓಡತೊಡಗಿದ್ದಾನೆ. ಅವನ ಮೇಲೆ ಶಂಕೆ ವ್ಯಕ್ತಪಡಿಸಿದ ಅಶೋಕ್ ಆತನ್ನು ಓಡಿಸಿಕೊಂಡು ಹೋಗಿದ್ದಾರೆ. ಅಷ್ಟರಲ್ಲಿಯೇ ಗ್ರಾಮಸ್ಥರು ಸೇರಿ, ಐವರನ್ನೂ ಹಿಡಿದು ಮಕ್ಕಳ ಕಳ್ಳರೆಂದು ಥಳಿಸಿದ್ದಾರೆ. ಬಳಿಕ ಅವರನ್ನು ದೇವಾಲಯದಲ್ಲಿ ಕೂಡಿ ಹಾಕಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಗ್ರಾಮಕ್ಕೆ ಬಂದ ಪೊಲೀಸರು, ಐವರನ್ನು ವಶಕ್ಕೆ ಪಡೆದು, ವಿಚಾರಿಸಿದ್ದಾರೆ. ಆಗ ತಾವು ನಿಧಿಗಾಗಿ ಬಂದಿದ್ದಾಗಿ ತಿಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಕುರಿತು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬ್ಲೇಡ್‍ನಿಂದ ಬಾಲಕನ ಮಾರ್ಮಾಂಗ, ಕತ್ತು ಕೊಯ್ದು ಬರ್ಬರ ಕೊಲೆ!

    ಬ್ಲೇಡ್‍ನಿಂದ ಬಾಲಕನ ಮಾರ್ಮಾಂಗ, ಕತ್ತು ಕೊಯ್ದು ಬರ್ಬರ ಕೊಲೆ!

    ಬಾಗಲಕೋಟೆ: ಬಾಲಕನ ಮಾರ್ಮಾಂಗ, ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಬಳಿ ನಡೆದಿದೆ.

    4 ವರ್ಷದ ಮುತ್ತಪ್ಪ ಅಮಜಗೋಳ ಕೊಲೆಯಾದ ಬಾಲಕ. ಬ್ಲೇಡ್‍ನಿಂದ ಬಾಲಕನ ಮಾರ್ಮಾಂಗ ಹಾಗೂ ಕತ್ತು ಕೊಯ್ದು ಕೊಲೆ ಮಾಡಲಾಗಿದ್ದು, ಕಿವಿಯಲ್ಲಿನ ಕಿವಿಯೋಲೆ, ಉಡದಾರ, ಕೊರಳಲ್ಲಿನ ತಾಯತ, ಕಿತ್ತುಕೊಂಡು ಕೊಲೆ ಮಾಡಲಾಗಿದೆ ಎಂದು ಪೋಷಕರು ಆರೋಪಿಸುತ್ತಿದ್ದು, ನಿಧಿಗಾಗಿ ಬಾಲಕನನ್ನು ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

    ಈ ಸಂಬಂಧ ಬನಹಟ್ಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ನಿಧಿಗಾಗಿ ಮೂಕ ಪ್ರಾಣಿಯನ್ನೇ ಬಲಿ ಕೊಟ್ಟ ದುಷ್ಕರ್ಮಿಗಳು

    ನಿಧಿಗಾಗಿ ಮೂಕ ಪ್ರಾಣಿಯನ್ನೇ ಬಲಿ ಕೊಟ್ಟ ದುಷ್ಕರ್ಮಿಗಳು

    ರಾಮನಗರ: ನಿಧಿಯಾಸೆಗೆ ಪಾಳು ಮಂಟಪದಲ್ಲಿ ದಿಗ್ಬಂಧನ ಹಾಕಿ, ಪ್ರಾಣಿಬಲಿ ನೀಡಿರುವ ಘಟನೆ ಜಿಲ್ಲೆಯ ಕನಕಪುರ ತಾಲೂಕಿನ ಪಿಚ್ಚನಕೆರೆ ಗ್ರಾಮದಲ್ಲಿ ನಡೆದಿದೆ.

    ಯಾರೋ ದುಷ್ಕರ್ಮಿಗಳು ನಿಧಿಯಾಸೆಗೆ ಪಾಳುಬಿದ್ದ ಗುಡಿಯಲ್ಲಿ ನಾಲ್ಕು ಅಡಿಯಷ್ಟು ಗುಂಡಿ ತೋಡಿ, ವಾಮಾಚಾರ ನಡೆಸಿದ್ದಾರೆ. ಗ್ರಾಮಸ್ಥರಲ್ಲಿ ಭಯದ ವಾತಾವರಣ ಮೂಡಿದ್ದು, ಗುಡಿಯ ಸುತ್ತಲಿನ ದಿಗ್ಬಂಧನದ ಗೆರೆಗಳನ್ನು ದಾಟಲು ಹೆದರುತ್ತಿದ್ದಾರೆ.

    ಗುಡಿಯ ಸುತ್ತಲಿನ ದಿಗ್ಬಂಧನದ ಗೆರೆಗಳನ್ನು ದಾಟಲು ಕೂಡ ಹೆದರುತ್ತಿರುವ ಗ್ರಾಮಸ್ಥರು ಗುಂಡಿಯಲ್ಲಿ ನಿಧಿ ಸಿಕ್ಕಿರಬಹುದೇ ಎಂಬ ಪ್ರಶ್ನೆ ಮೂಡಿದೆ. ಇನ್ನೊಂದೆಡೆ ಅಲ್ಲೊಂದು ಹಾವು ನಿಧಿ ಕಾವಲು ಕಾಯುತ್ತಿದೆ. ಈ ಗುಡಿಯಲ್ಲಿ ನಿಧಿ ಇದೆ ಎಂಬ ವಿಷಯ ಗ್ರಾಮಸ್ಥರಲ್ಲಿ ತಲೆಮಾರುಗಳಿಂದಲೂ ಚರ್ಚೆಯಾಗುತ್ತಿತ್ತು.

  • ನಿಧಿ ಆಸೆಗೆ ದೇವಸ್ಥಾನವನ್ನೇ ವಿಘ್ನಗೊಳಿಸಿದ ಖದೀಮರು!

    ನಿಧಿ ಆಸೆಗೆ ದೇವಸ್ಥಾನವನ್ನೇ ವಿಘ್ನಗೊಳಿಸಿದ ಖದೀಮರು!

    ದಾವಣಗೆರೆ: ನಿಧಿ ಆಸೆಗಾಗಿ ಖದೀಮರು ದೇವಸ್ಥಾನವನ್ನೇ ವಿಘ್ನಗೊಳಿಸಿದ ಘಟನೆ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ತೆಲಿಗಿ ಗ್ರಾಮದಲ್ಲಿ ನಡೆದಿದೆ.

    ತೆಲಿಗಿ ಗ್ರಾಮದ ಕೆರೆಯ ಮೇಲಿರುವ ಕೋಡಿ ಬಸವೇಶ್ವರ ದೇವಸ್ಥಾನದಲ್ಲಿ ನಿಧಿಗಾಗಿ ಬಸವೇಶ್ವರ ವಿಗ್ರಹದ ಕೆಳಗೆ ನಾಲ್ಕೈದು ಅಡಿಯಷ್ಟು ಗುಂಡಿ ತೆಗೆದಿದ್ದಾರೆ. ಗುಂಡಿ ತೆಗೆದ ಜಾಗದಲ್ಲಿ ಪೂಜೆ ಮಾಡಿದ್ದಾರೆ. ಬೆಳಗ್ಗೆ ಗ್ರಾಮಸ್ಥರು ದೇವಸ್ಥಾನಕ್ಕೆ ಪೂಜೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.

    ಕೋಡಿ ಬಸವೇಶ್ವರ ದೇವಸ್ಥಾನದ ವಿಗ್ರಹದ ಕೆಳಗೆ ನಿಧಿ ಇದೆ ಎನ್ನುವ ಗಾಳಿಸುದ್ದಿ ಬಹಳ ದಿನಗಳಿಂದ ಹರಿದಾಡುತ್ತಿತ್ತು. ಆದ್ದರಿಂದ ಈ ನಿಧಿ ಆಸೆಗೆ ಕಳ್ಳರು ದೇವಸ್ಥಾನದ ವಿಗ್ರಹದ ಕೆಳಗೆ ಗುಂಡಿ ತೆಗೆದಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

    ಈ ಘಟನೆ ಹಲವಾಗಿಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.