Tag: ನಿಧಿ

  • ಸಿದ್ದರಾಮಯ್ಯ ದೇಶನಿಷ್ಠೆಯ ಬಗ್ಗೆ ನಮಗೆ ಸಂದೇಹವಿದೆ: ಪೇಜಾವರ ಶ್ರೀ

    ಸಿದ್ದರಾಮಯ್ಯ ದೇಶನಿಷ್ಠೆಯ ಬಗ್ಗೆ ನಮಗೆ ಸಂದೇಹವಿದೆ: ಪೇಜಾವರ ಶ್ರೀ

    – ಹೆಚ್‍ಡಿಕೆ ವಿರುದ್ಧವೂ ಸ್ವಾಮೀಜಿ ಕಿಡಿ

    ಉಡುಪಿ: ರಾಮಮಂದಿರಕ್ಕೆ ನಾನು ದೇಣಿಗೆ ನೀಡುವುದಿಲ್ಲ. ಮಂದಿರ ನಿರ್ಮಾಣವಾಗುವ ಜಮೀನು ವಿವಾದಿತ ಸ್ಥಳ ಎಂದು ಹೇಳುವ ಮೂಲಕ ರಾಜ್ಯವ್ಯಾಪಿ ಚರ್ಚೆಗೆ ಕಾರಣವಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಿಮ್ಮ ದೇಶನಿಷ್ಠೆಯ ಬಗ್ಗ ಸಂದೇಹವಿದೆ ಎನ್ನುವ ಮೂಲಕ ಪೇಜಾವರ ಸ್ವಾಮೀಜಿ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ.

    ಉಡುಪಿಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಅವರು, ನಾವು ಯಾರಿಗೂ ಯಾವತ್ತೂ ದೇಣಿಗೆಗೆ ಒತ್ತಾಯ ಮಾಡಿಲ್ಲ. ವಿಶ್ವದಾದ್ಯಂತ ದೇಣಿಗೆ ಕೊಡುವವರು ಸಂತೋಷದಿಂದ ಕೊಡುತ್ತಿದ್ದಾರೆ. ವಿವಾದಿತ ಎಂದು ಹೇಳುತ್ತೀರಿ, ನೀವು ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಮಾನ್ಯ ಮಾಡುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

    ಇದೇ ವೇಳೆ ಮಾಜಿ ಮುಖ್ಯಮಂತ್ರಿ ಕುಮಾಸ್ವಾಮಿ ಆರೋಪದ ಕುರಿತು ಮಾತನಾಡಿದ ಪೇಜಾವರ ಶ್ರೀ, ನಿಧಿ ಸಂಗ್ರಹ ಕುರಿತು ಮಾಡಿರುವ ಆರೋಪಕ್ಕೆ ಕುಮಾರಸ್ವಾಮಿ ಅವರು ಒಂದು ಸಣ್ಣ ದಾಖಲೆಯನ್ನು ಕೊಟ್ರು ಆರೋಪಕ್ಕೆ ಬೆಲೆ ಬರುತ್ತದೆ. ನೀವು ಯಾರೋ ದಾರಿಯಲ್ಲಿ ಅಡ್ಡಾಡುವ ಸಾಮಾನ್ಯ ವ್ಯಕ್ತಿಯಲ್ಲ. ನೀವು ಈ ರಾಜ್ಯದ ಪ್ರತಿಷ್ಠಿತ ವ್ಯಕ್ತಿ. ಒಂದು ರಾಜಕೀಯ ಪಕ್ಷದ ಮುಖಂಡ. ನೀವು ಮಾತನಾಡುವ ಮೊದಲು ಅದಕ್ಕೆ ಸೂಕ್ತ ಸಾಕ್ಷಾಧಾರಗಳನ್ನು ಕೊಡಬೇಕು. ಒಂದು ಕಾಲದಲ್ಲಿ ಇಡೀ ರಾಜ್ಯವನ್ನು ಸರ್ಕಾರವನ್ನು ಮುನ್ನಡೆಸಿದವರು, ನೀವು ಆರೋಪ ಮಾಡುವ ಸಂದರ್ಭದಲ್ಲಿ ಯೋಚನೆಯನ್ನು ಮಾಡಬೇಕಾಗುತ್ತದೆ ಎಂದರು.

    ತೀರ್ಥಕ್ಷೇತ್ರ ಟ್ರಸ್ಟ್ ಈ ತರದ ಗುರುತು ಮಾಡುವ ಯಾವುದೇ ಸೂಚನೆಗಳನ್ನು ನಮ್ಮ ಕಾರ್ಯಕರ್ತರಿಗೆ ನೀಡಿಲ್ಲ. ನಿರೀಕ್ಷೆ ಮೀರಿ ಭಕ್ತರು ರಾಮಮಂದಿರಕ್ಕೆ ದೇಣಿಗೆಯನ್ನು ಕೊಡುತ್ತಿದ್ದಾರೆ. ಇಷ್ಟೆಲ್ಲ ಜನ ಮುಂದೆ ಬಂದು ದೇಣಿಗೆ ನೀಡುತ್ತಿರುವಾಗ, ಒತ್ತಾಯಪೂರ್ವಕವಾಗಿ ದೇಣಿಗೆ ಸಂಗ್ರಹಿಸುವ ಪ್ರಶ್ನೆಯ ಬರುವುದಿಲ್ಲ. ಈ ಹೇಳಿಕೆಯಿಂದ ದೇಶದ ಜನಕ್ಕೆ ಕುಮಾರಸ್ವಾಮಿ ಅವರ ವ್ಯಕ್ತಿತ್ವದ ಮೇಲೆ ಸಂಶಯ ಬರುತ್ತದೆ. ಹೊರತು ನಮ್ಮ ಸಂಸ್ಥೆಯ ಮೇಲೆ ಸಂಶಯ ಬರಲಿಕ್ಕಿಲ್ಲ. ಕುಮಾರಸ್ವಾಮಿಯವರ ಒಳಗೆ ಏನಿದೆ ಅದು ಹೊರಗೆ ಬಂದಿದೆ. ಒಳ್ಳೆಯ ಕೆಲಸ ಆಗುವಾಗ ಸಾವಿರಾರು ವಿಘ್ನಗಳು ಎದುರಾಗುತ್ತದೆ. ರಾಮ ಮಂದಿರಕ್ಕೆ ಶಿಲಾನ್ಯಾಸ ಮಾಡಿದ ನಂತರ ಈವರೆಗೆ ಯಾವುದೇ ವಿಘ್ನಗಳು ಬಂದಿಲ್ಲ, ಇದು ಮೊದಲ ಅಡ್ಡಿ. ಆರೋಪಗಳು ಬರುವುದು ಸಹಜ, ಅದಕ್ಕೆ ಸೂಕ್ತವಾದ ಸಾಕ್ಷ್ಯಾಧಾರಗಳನ್ನು ಕೊಡಬೇಕು. ನಾವು ಇದನ್ನೆಲ್ಲ ಧೈರ್ಯವಾಗಿ ಎದುರಿಸಿಕೊಂಡು ಮುಂದೆ ಹೋಗುತ್ತೇವೆ ಎಂದು ಅಭಿಪ್ರಾಯಪಟ್ಟರು.

    ಅಯೋಧ್ಯ ಶ್ರೀ ರಾಮ ಜನ್ಮಭೂಮಿ ಹಿಂದೂಗಳಿಗೆ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ರಾಮ ಮಂದಿರಕ್ಕೆ ಶಿಲಾನ್ಯಾಸ ನಡೆದು ಉತ್ಕನನದ ಕೆಲಸ ನಡೆಯುತ್ತಿದೆ. ಈ ನಡುವೆ ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಚರ್ಚಾಸ್ಪದ ಹೇಳಿಕೆ ನೀಡಿದ್ದಾರೆ.

     

  • ರಾಮಮಂದಿರ ನಿಧಿ ಸಂಗ್ರಹ ವಿಚಾರ ಕುಮಾರಸ್ವಾಮಿ ಕ್ಷಮೆಯಾಚನೆಗೆ ಭಜರಂಗದಳ ಒತ್ತಾಯ

    ರಾಮಮಂದಿರ ನಿಧಿ ಸಂಗ್ರಹ ವಿಚಾರ ಕುಮಾರಸ್ವಾಮಿ ಕ್ಷಮೆಯಾಚನೆಗೆ ಭಜರಂಗದಳ ಒತ್ತಾಯ

    ಬೆಂಗಳೂರು: ರಾಮಂದಿರಕ್ಕೆ ನಿಧಿ ಸಂಗ್ರದ ಕುರಿತಾಗಿ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬೇಜವಬ್ದಾರಿ ಹೇಳಿಕೆ ನೀಡಿರುವ ಬೆನ್ನಲ್ಲೇ ಬಜರಂಗದಳದ ರಾಷ್ಟ್ರೀಯ ಸಹಸಂಯೋಜಕ ಸೂರ್ಯನಾರಾಯಣ ಬಜರಂಗದಳ ಆಕ್ರೋಶ ಹೊರಹಾಕಿ ಕ್ಷಮೆ ಯಾಚಿಸುವಂತೆ ಒತ್ತಾಯಿಸಿದ್ದಾರೆ.

    ವಿಶ್ವ ಹಿಂದೂ ಪರಿಷದ್ ನ ಸ್ವಯಂ ಸೇವಕರು ಎಲ್ಲಾ ವರ್ಗದ ಜನರನ್ನು ಭೇಟಿಯಾಗಿ ರಾಮಮಂದಿರಕ್ಕೆ ನಿಧಿ ಸಂಗ್ರಹ ಮಾಡುತ್ತಿದ್ದಾರೆ. ಸಮಾಜವು ಅತ್ಯಂತ ಶ್ರದ್ಧೆಯಿಂದ, ಭಕ್ತಿಯಿಂದ, ಉತ್ಸಾಹದಿಂದ ಶ್ರೀರಾಮ ಮಂದಿರಕ್ಕೆ ನಿಧಿ ಸಮರ್ಪಣೆ ಮಾಡುತ್ತಿದ್ದಾರೆ. ನಮ್ಮ ಸ್ವಯಂ ಸೇವಕರು ಯಾರಿಂದಲೂ ಬಲವಂತವಾಗಿ ನಿಧಿ ಪಡೆದಿಲ್ಲ. ದೇಶಾದ್ಯಂತ ಎಲ್ಲರೂ ತಾವಾಗಿಯೇ ಮುಂದೆ ಬಂದು ನಿಧಿ ಸಮರ್ಪಣೆ ಮಾಡುತ್ತಿದ್ದಾರೆ. ಆದರೆ ಕುಮಾರಸ್ವಾಮಿ ಈ ಅಭಿಯಾನದ ಕುರಿತು ಈ ರೀತಿ ಹೇಳಿಕೆ ನೀಡಿರುವುದು ಖಂಡನೀಯ ಎಂದರು.

    ಶ್ರೀರಾಮ ಭಾರತದ ಅಸ್ಮಿತೆ, ಶ್ರೀರಾಮ ಭಾರತದ ಆದರ್ಶ ರಾಷ್ಟ್ರ ಪುರುಷ, ಎಲ್ಲರೂ ಶ್ರೀರಾಮನ ಆದರ್ಶಗಳನ್ನು ಪಾಲಿಸಬೇಕು. ಮಾಜಿ ಮುಖ್ಯಮಂತ್ರಿಗಳು ಹೇಳಿಕೆ ಕೊಡುವ ಮುನ್ನ ಅಭಿಯಾನದ ಬಗ್ಗೆ ತಿಳಿದುಕೊಳ್ಳಬೇಕಿತ್ತು. ಅವರ ಬಳಿ ಯಾವ ಪುರಾವೆಗಳು ಇಲ್ಲದೆ ರಾಷ್ಟ್ರೀಯ ಸ್ವಯಂ ಸೇವಕ(ಆರ್‍ಎಸ್‍ಎಸ್) ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ವಿಶ್ವ ಹಿಂದೂ ಪರಿಷದ್ ಗಂಭೀರವಾಗಿ ಪರಿಗಣಿಸಿದ್ದು, ಒಬ್ಬ ಮಾಜಿ ಮುಖ್ಯಮಂತ್ರಿಗಳಿಂದ ಈ ರೀತಿಯ ಬೇಜವಾಬ್ದಾರಿ ಹೇಳಿಕೆಗಳನ್ನು ನಿರೀಕ್ಷಿಸಿರಲಿಲ್ಲ. ಮುಂದೆ ಎಚ್ಚರಿಕೆಯಿಂದ ಹೇಳಿಕೆ ನೀಡಲಿ ಎಂದು ಎಚ್ಚರಿಕೆ ನೀಡಿದರು.

    ಕರ್ನಾಟಕ ದಕ್ಷಿಣ ಪ್ರಾಂತದ ಸಂಘಟನಾ ಕಾರ್ಯದರ್ಶಿ ಬಸವರಾಜ್ ಮಾತನಾಡಿ, ಮಾಜಿ ಮುಖ್ಯಮಂತ್ರಿಗಳು ಆರ್‍ಎಸ್‍ಎಸ್ ಸಂಘಟನೆಯನ್ನು ನಾಝಿ ಸಂಘಟನೆಗೆ ಹೋಳಿಕೆ ಮಾಡಿರುವುದು ಖಂಡನೀಯ. ನಾಝಿ ಸಂಘ ಕೊಲೆ ಹಿಂಸೆಗಳಿಂದ ಏಕಚಕ್ರಾಧಿಪತ್ಯ ಸ್ಥಾಪಿಸಿರುವ ಇತಿಹಾಸವಿದೆ. ಆದರೆ ದೇಶ ಭಕ್ತ ಸಂಘಟನೆಯಾದ ಆರ್‍ಎಸ್‍ಎಸ್ ಸಂಘಟನಾ ಇತಿಹಾಸದಲ್ಲಿ ಲಕ್ಷಾಂತರ ದೇಶ ಭಕ್ತರನ್ನು ದೇಶಕ್ಕಾಗಿ ಕೊಟ್ಟಿದೆ. ಅದನ್ನು ಸರಿಯಾಗಿ ತಿಳಿದುಕೊಂಡು ಕುಮಾರಸ್ವಾಮಿ ಹೇಳಿಕೆ ಕೊಡಬೇಕು ಬೇಕಾಬಿಟ್ಟಿ ಸಂಘಟನೆಯ ಕುರಿತು ಮಾತನಾಡಿರುವುದು ಖಂಡನೀಯ ಎಂದರು.

  • ಅಪ್ಪ ಅಮ್ಮ ನೀಡಿದ್ದ ಚಿಲ್ಲರೆ ಹಣವನ್ನು ರಾಮಮಂದಿರಕ್ಕೆ ದೇಣಿಗೆ ನೀಡಿದ ಚಿಣ್ಣರು

    ಅಪ್ಪ ಅಮ್ಮ ನೀಡಿದ್ದ ಚಿಲ್ಲರೆ ಹಣವನ್ನು ರಾಮಮಂದಿರಕ್ಕೆ ದೇಣಿಗೆ ನೀಡಿದ ಚಿಣ್ಣರು

    – ಐದು ಸಾವಿರಕ್ಕೂ ಅಧಿಕ ಹಣ ನೀಡಿದ ಸಹೋದರಿಯರು
    – ಚಿಣ್ಣರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವ ಈಶ್ವರಪ್ಪ

    ಶಿವಮೊಗ್ಗ: ದೇಶಾದ್ಯಂತ ಜನ ರಾಮ ಮಂದಿರಕ್ಕೆ ನಿಧಿ ಸಮರ್ಪಣೆ ಮಾಡುತ್ತಿದ್ದಾರೆ. ಇದೆ ಹಾದಿಯಲ್ಲಿ ಸಾಗಿರುವ ಸಹೋದರಿಯರಿಬ್ಬರು ಅಪ್ಪ, ಅಮ್ಮ ಕೊಟ್ಟ ಹಣವನ್ನೆಲ್ಲ ಕೂಡಿಟ್ಟು ಇದೀಗ ರಾಮಮಂದಿರ ನಿರ್ಮಾಣಕ್ಕಾಗಿ ದೇಣಿಗೆ ನೀಡಿದ್ದಾರೆ.

    ಶಿವಮೊಗ್ಗದ ಗಾಡಿಕೊಪ್ಪ ಬಡಾವಣೆಯ ಶಂಕರ್ ಮತ್ತು ನೇತ್ರಾವತಿಯ ದಂಪತಿಯ ಪುತ್ರಿಯರಾದ ಛಾಯಾಶ್ರೀ ಹಾಗೂ ಅನುಶ್ರೀ ದೇಣಿಗೆ ನೀಡಿರುವ ಸಹೋದರಿಯರು. ತಮ್ಮ ಹುಟ್ಟುಹಬ್ಬಕ್ಕೆ ಖರ್ಚಿಗೆಂದು ಅಪ್ಪ ಅಮ್ಮ ನೀಡಿದ ಹಣ ಮತ್ತು ಆಗಾಗ ಇತರೆ ವಸ್ತುಗಳ ಖರೀದಿ ಮತ್ತು ಖರ್ಚಿಗಾಗಿ ಹೆತ್ತವರು ನೀಡುತ್ತಿದ್ದ ಚಿಲ್ಲರೆ ಹಣವನ್ನು ಕೂಡಿಟ್ಟಿದ್ದರು. ಚಿಲ್ಲರೆ ಹಣವನ್ನು ಸಣ್ಣದೊಂದು ಅಕ್ವೇರಿಯಂನಲ್ಲಿ ಸಂಗ್ರಹಿಸಿ, ನೋಟುಗಳನ್ನು ಹುಂಡಿಯಲ್ಲಿ ಹಾಕಿ ಭದ್ರ ಮಾಡಿದ್ದರು. ಇದೀಗ ರಾಮ ಮಂದಿರಕ್ಕೆ ನಿಧಿ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

    ತಂದೆ ಶಂಕರ್ ಜೀವನ ನಿರ್ವಹಣೆಗಾಗಿ ಪೈಂಟರ್ ಕೆಲಸ ಮಾಡುತ್ತಿದ್ದರೆ ತಾಯಿ ನೇತ್ರಾವತಿ ಗೃಹಿಣಿಯಾಗಿದ್ದು, ಛಾಯಾಶ್ರೀ ಹಾಗೂ ಅನುಶ್ರೀ ಅಪ್ಪ ಅಮ್ಮ ಕೊಡುತ್ತಿದ್ದ ಚಿಲ್ಲರೆ ಹಣವನ್ನು ಕೂಡಿಡುವ ಹವ್ಯಾಸ ಬೆಳೆಸಿಕೊಂಡಿದ್ದರು. ಜೊತೆಗೆ ತಮಗೆ ಬೇಕಾದಾಗ ಖರ್ಚು ಸಹ ಮಾಡುತ್ತಿದ್ದರು. ಆದರೆ ಯಾವಾಗ ರಾಮ ಮಂದಿರ ನಿರ್ಮಾಣ ಮಾಡುತ್ತಾರೆ ಎಂಬ ವಿಷಯ ತಿಳಿದ ಮೇಲೆ ಅಂದಿನಿಂದ ಈ ಚಿಣ್ಣರು ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಬೇಕು ಎಂದು ನಿರ್ಧರಿಸಿ ಅಪ್ಪ ಅಮ್ಮ ಕೊಡುತ್ತಿದ್ದ ಚಿಲ್ಲರೆ ಹಣವನ್ನು ಖರ್ಚು ಮಾಡುವುದನ್ನು ನಿಲ್ಲಿಸಿದ್ದರು.

    ಇದುವರೆಗೆ ಐದು ಸಾವಿರಕ್ಕೂ ಅಧಿಕ ಹಣ ಸಂಗ್ರಹಿಸಿದ್ದು ಈ ಹಣವನ್ನು ಸಚಿವ ಕೆ.ಎಸ್.ಈಶ್ವರಪ್ಪ ಮೂಲಕ ರಾಮ ಮಂದಿರ ನಿರ್ಮಾಣಕ್ಕೆ ಅರ್ಪಣೆ ಮಾಡಿದ್ದಾರೆ. ಚಿಣ್ಣರ ಈ ಕಾರ್ಯಕ್ಕೆ ಸಚಿವ ಈಶ್ವರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಇತಿಹಾಸ ಪ್ರಸಿದ್ಧ ದೊಡ್ಡಗದ್ದವನಳ್ಳಿ ಲಕ್ಷ್ಮಿ ದೇವಾಲಯದ ವಿಗ್ರಹ ಭಗ್ನ

    ಇತಿಹಾಸ ಪ್ರಸಿದ್ಧ ದೊಡ್ಡಗದ್ದವನಳ್ಳಿ ಲಕ್ಷ್ಮಿ ದೇವಾಲಯದ ವಿಗ್ರಹ ಭಗ್ನ

    – ನಿಧಿ ಆಸೆಗೆ ವಿಗ್ರಹ ಧ್ವಂಸಗೊಳಿಸಿರುವ ಶಂಕೆ

    ಹಾಸನ: ನಿಧಿ ಆಸೆಗಾಗಿ ಕಳ್ಳರು ವಿಶ್ವವಿಖ್ಯಾತ ದೊಡ್ಡಗದವನಹಳ್ಳಿ ಶ್ರೀಲಕ್ಷ್ಮಿ ದೇವಾಲಯದ ವಿಗ್ರಹವನ್ನೇ ಒಡೆದು ಹಾಕಿರುವ ಶಂಕೆ ವ್ಯಕ್ತವಾಗಿದೆ.

    ಹಾಸನ ತಾಲೂಕಿನಲ್ಲಿರುವ ಸುಮಾರು 906 ವರ್ಷಗಳ ಇತಿಹಾಸ ಹೊಂದಿರುವ ದೊಡ್ಡಗದ್ದವನಳ್ಳಿ ಲಕ್ಷ್ಮಿ ದೇವಾಲಯದ ವಿಗ್ರಹವನ್ನು ಕಳ್ಳರು ಒಡೆದು ಹಾಕಿದ್ದಾರೆ. ಬೆಳಿಗ್ಗೆ ಅರ್ಚಕರು ದೇವಸ್ಥಾನದ ಬಾಗಿಲು ತೆಗೆದು ನೋಡಿದಾಗ ಒಡೆದುಹೋದ ಸ್ಥಿತಿಯಲ್ಲಿರುವ ಮಹಾಕಾಳಿ ವಿಗ್ರಹ ಪತ್ತೆಯಾಗಿದೆ.

    ಕಳ್ಳರು ನಿಧಿಗಾಗಿ ವಿಗ್ರಹ ಒಡೆದು ಹಾಕಿರುವ ಶಂಕೆ ವ್ಯಕ್ತವಾಗಿದೆ. ಇದು ಹೊಯ್ಸಳ ವಾಸ್ತುಶೈಲಿಯ ಅಪೂರ್ವ ಚತುಷ್ಕೂಟಾಚಲ ಶೈಲಿಯಲ್ಲಿರುವ ದೇವಾಲಯವಾಗಿದೆ. ದೇವಾಲಯಕ್ಕೆ ನುಗ್ಗಿ ವಿಗ್ರಹವನ್ನು ಧ್ವಂಸಗೊಳಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಶಾಸಕ ಸಿಟಿ ರವಿಯವರು, ಟ್ವಿಟ್ಟರಿನಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರನ್ನು ಟ್ಯಾಗ್ ಮಾಡಿ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

    ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ, ದೇವಸ್ಥಾನದ ಬಾಗಿಲು ತೆಗೆದಾಗ ಮೂರ್ತಿ ಬಿದ್ದಿರುವುದು ಬೆಳಕಿಗೆ ಬಂದಿದೆ. ಈ ದೇವಾಲಯವು ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಬರುವುದರಿಂದ ಅವರೊಂದಿಗೆ ಚರ್ಚೆ ಮಾಡಲಾಗಿದೆ. ವಿಗ್ರಹ ಒಡೆದು ಹೋಗಿರುವ ಬಗ್ಗೆ ದೃಢೀಕರಿಸಿದ್ದಾರೆ. ಕೂಡಲೇ ಎಫ್.ಐ.ಆರ್. ದಾಖಲಿಸಲು ಹೇಳಿದ್ದು, ತಹಶೀಲ್ದಾರ್ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಗತ್ಯ ಕ್ರಮ ಜರುಗಿಸಲು ಸೂಚಿಸಿದ್ದೇವೆ. ಈ ದೇವಸ್ಥಾನದ ವಿಗ್ರಹ ಪುನರ್ ಸ್ಥಾಪನೆ ಮಾಡುವುದಕ್ಕೆ ಪುರಾತತ್ವ ಇಲಾಖೆ ಬೆಂಗಳೂರು ಕಚೇರಿಗೂ ಕೂಡ ತಿಳಿಸಲಾಗಿದೆ. ಅಗತ್ಯಕ್ರಮ ಏನೇನು ತೆಗೆದುಕೊಳ್ಳಬಹುದು ಎಲ್ಲ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

  • ನಿಧಿ ವದಂತಿ ನಂಬಿ ಗುಂಡಿ ತೋಡಿ ಬರಿಗೈಯಲ್ಲಿ ತೆರಳಿದ ಅಧಿಕಾರಿಗಳು

    ನಿಧಿ ವದಂತಿ ನಂಬಿ ಗುಂಡಿ ತೋಡಿ ಬರಿಗೈಯಲ್ಲಿ ತೆರಳಿದ ಅಧಿಕಾರಿಗಳು

    ಮಂಗಳೂರು: ಹೊಲದಲ್ಲಿ ನಿಧಿ ಇದೆ ಎಂಬ ವದಂತಿ ಹಬ್ಬಿದ ಹಿನ್ನಲೆಯಲ್ಲಿ ಅಧಿಕಾರಿಗಳು ಬಂದು ಹುಡುಕಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಬಳಿ ನಡೆದಿದೆ.

    ಬೆಳ್ತಂಗಡಿಯ ನಡ ಗ್ರಾಮದ ಪುಣಿತ್ತಡಿ ಎಂಬಲ್ಲಿನ ನಿವಾಸಿ ಆನಂದ ಶೆಟ್ಟಿಗೆ ಸೇರಿದ ಗದ್ದೆಯಲ್ಲಿ ಇತ್ತೀಚೆಗೆ ಕೊಳವೆ ಬಾವಿ ಕೊರೆಯಿಸಿದ್ದ ವೇಳೆ ಭೂಮಿ ಕುಸಿದಿದ್ದು ಸುಮಾರು 10 ಅಡಿಯಷ್ಟು ಆಳದ ಗುಂಡಿಯಾಗಿತ್ತು. ಹೀಗಾಗಿ ಭೂಮಿಯೊಳಗೆ ನಿಧಿ ಇರುವ ಶಂಕೆ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವದಂತಿ ಹಬ್ಬಿದ್ದು, ಜನ ಸೇರಲಾರಂಭಿಸಿದರು.

    ಬಳಿಕ ಬೆಳ್ತಂಗಡಿ ತಹಶೀಲ್ದಾರ್ ಮಹೇಶ್, ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಹಿಟಾಚಿ ಮೂಲಕ ಶೋಧ ಕಾರ್ಯ ನಡೆಸಿದರು. ಸುಮಾರು ಒಂದು ಗಂಟೆಗಳ ಕಾಲ ಗುಂಡಿ ತೆಗೆದು ಪರಿಶೀಲಿಸಿದ ಬಳಿಕ ಏನೂ ಸಿಗದೆ ಗುಂಡಿಗೆ ಮಣ್ಣು ಮುಚ್ಚಿ ಬರಿಗೈಯಲ್ಲೇ ವಾಪಸ್ ಹೋಗಿದ್ದಾರೆ. ಜನರ ವದಂತಿಯಿಂದ ಕೆಲಕಾಲ ಅಧಿಕಾರಿಗಳು ತಲೆ ಕೆಡಿಸಿಕೊಂಡಿದ್ದರು.

  • ಉಳುಮೆ ಮಾಡುತ್ತಿದ್ದ ರೈತನಿಗೆ ಸಿಕ್ತು 2 ಮಡಿಕೆ ಚಿನ್ನ, ಬೆಳ್ಳಿ

    ಉಳುಮೆ ಮಾಡುತ್ತಿದ್ದ ರೈತನಿಗೆ ಸಿಕ್ತು 2 ಮಡಿಕೆ ಚಿನ್ನ, ಬೆಳ್ಳಿ

    ಹೈದರಾಬಾದ್: ಹೊಲದಲ್ಲಿ ಉಳುಮೆ ಮಾಡುತ್ತಿದ್ದ ರೈತನಿಗೆ ಎರಡು ಮಡಿಕೆ ಚಿನ್ನದ ಮತ್ತು ಬೆಳ್ಳಿ ಸರ ತುಂಬಿರುವ ನಿಧಿ ಸಿಕ್ಕಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

    ಈ ಘಟನೆ ತೆಲಂಗಾಣದ ವಿಕಾರಬಾದ್ ಜಿಲ್ಲೆಯ ಸುಲ್ತಾನ್ ಪುರದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಸುಲ್ತಾನ್ ಪುರದ ರೈತ ಮೊಹಮ್ಮದ್ ಸಿದ್ದಿಕ್ಕಿಗೆ ಈ ಚಿನ್ನ ಬೆಳ್ಳಿ ತುಂಬಿದ ಪಾತ್ರೆ ಸಿಕ್ಕಿದೆ. ಸಿದ್ದಿಕ್ಕಿ ಎರಡು ವರ್ಷದ ಹಿಂದೆ ಈ ಜಮೀನನ್ನು ಖರೀದಿ ಮಾಡಿದ್ದರು. ಆದರೆ ಇಂದು ಉಳುಮೆ ಮಾಡುವಾಗ ಮಡಿಕೆ ಸಿಕ್ಕಿದ್ದು, ಅದರಲ್ಲಿ 25 ಬಗೆಯ ಚಿನ್ನದ ಸರಗಳು ಸಿಕ್ಕಿವೆ.

    ಮಾನ್ಸೂನ್ ಆರಂಭವಾದ ಕಾರಣ ರೈತರು ಉಳುಮೆ ಮಾಡಲು ಶುರು ಮಾಡಿದ್ದಾರೆ. ಈ ವೇಳೆ ಸಿದ್ದಿಕ್ಕಿಗೆ ಮಡಿಕೆಗಳು ಸಿಕ್ಕಿವೆ ನಂತರ ಅವುಗಳನ್ನು ತೆಗೆದು ನೋಡಿದಾಗ ಅದರಲ್ಲಿ ಚಿನ್ನದ ಮತ್ತು ಬೆಳ್ಳಿಯ ಸರ ಇರುವುದು ಪತ್ತೆಯಾಗಿದೆ. ತಕ್ಷಣ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದು, ವಿಷಯ ತಿಳಿದು ಸ್ಥಳಕ್ಕೆ ಬಂದ ಕಂದಾಯ ಇಲಾಖೆ ಅಧಿಕಾರಿಗಳು ಸಿಕ್ಕ ಒಡೆವೆಗಳನ್ನು ಪರಿಶೀಲನೆ ಮಾಡಿ ಲ್ಯಾಬ್‍ಗೆ ಕಳುಹಿಸಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಕಂದಾಯ ಇಲಾಖೆ ಅಧಿಕಾರಿ ವಿದ್ಯಾಸಾಗರ್ ರೆಡ್ಡಿ, ಚಿನ್ನ ಬೆಳ್ಳಿ ಸಿಕ್ಕ ಈ ಜಾಗದ ಬಗ್ಗೆ ಪರಿಶೀಲನೆ ಮಾಡಿ ನೋಡಿದ್ದೇವೆ. ಆದರೆ ಈ ಜಾಗಕ್ಕೆ ಯಾವುದೇ ರೀತಿಯ ರಾಜಮನೆತನದ ಇತಿಹಾಸವಿಲ್ಲ. ಹೀಗಾಗಿ ನಾವು ಈ ವಿಚಾರವನ್ನು ಪುರಾತತ್ವ ಇಲಾಖೆಗೆ ತಿಳಿಸಿದ್ದೇವೆ. ಜೊತೆಗೆ ಸಿಕ್ಕ ಒಡವೆ ನಕಲಿಯೋ ಅಸಲಿಯೋ ಎಂದು ತಿಳಿಯಲು ಲ್ಯಾಬ್‍ಗೆ ಕಳುಹಿಸಿದ್ದೇವೆ ಎಂದು ಹೇಳಿದ್ದಾರೆ.

  • ನಿಧಿ ಶೋಧನೆ ನಡೆಸಲು ಹೋದ ಅರ್ಚಕನ ಜೊತೆ ಐವರು ಅರೆಸ್ಟ್

    ನಿಧಿ ಶೋಧನೆ ನಡೆಸಲು ಹೋದ ಅರ್ಚಕನ ಜೊತೆ ಐವರು ಅರೆಸ್ಟ್

    ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಆವಿನಹಳ್ಳಿ ಗ್ರಾಮದ ಬಡಗೋಡಿನ ವೀರಭದ್ರೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ನಿಧಿ ಶೋಧನೆ ನಡೆಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರ ಗ್ರಾಮಾಂತರ ಪೊಲೀಸರು ಐವರನ್ನು ವಶಕ್ಕೆ ಪಡೆದಿದ್ದಾರೆ.

    ಬಡಗೋಡಿಯ ವೀರಭದ್ರೇಶ್ವರ ದೇವಸ್ಥಾನದ ಅರ್ಚಕ ಮಲ್ಲಿಕಾರ್ಜುನಯ್ಯ, ಬರದವಳ್ಳಿಯ ಹಾಲಸ್ವಾಮಿ, ಶಿರಸಿಯ ಸೂರಜ್, ರಘುನಾಥ್ ಮತ್ತು ಸಾಗರದ ಭಾಸ್ಕರ್ ಬಂಧಿತ ಆರೋಪಿಗಳು. ಇದರ ಜೊತೆಗೆ ಆರೋಪಿಗಳು ನಿಧಿ ಶೋಧಕ್ಕೆ ಬಳಸಿದ್ದ ದ್ವಿಚಕ್ರ ವಾಹನ, ಕಾರು, ನೆಲ ಅಗಿಯಲು ತಂದಿದ್ದ ಸಾಮಾಗ್ರಿ, ಲೋಹ ಪತ್ತೆಯ ಯಂತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಗ್ರಾಮದ ದೇವಸ್ಥಾನದ ಹಿಂಭಾಗ ನಿಧಿ ಶೋಧ ಕಾರ್ಯದಲ್ಲಿ ಕೆಲವರು ತೊಡಗಿರುವುದನ್ನು ಗ್ರಾಮಸ್ಥರು ಗಮನಿಸಿದ್ದಾರೆ. ಈ ವೇಳೆ ಆರೋಪಿಗಳು ವಾಹನದಲ್ಲಿ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾರೆ. ಆದರೆ ಗ್ರಾಮಸ್ಥರು ಆರೋಪಿಗಳನ್ನು ಸ್ಥಳದಲ್ಲಿಯೇ ಹಿಡಿದಿಟ್ಟು ಪೊಲೀಸರಿಗೆ ಒಪ್ಪಿಸಲು ಯಶಸ್ವಿಯಾಗಿದ್ದಾರೆ. ನಿಧಿ ಶೋಧನೆಯಲ್ಲಿ ತೊಡಗಿದ್ದ ಐವರು ಆರೋಪಿಗಳ ವಿರುದ್ದ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

  • ನಿಧಿಯಾಸೆಗೆ ಲಿಂಗವನ್ನೇ ಕೆಡವಿದ ದುಷ್ಕರ್ಮಿಗಳು

    ನಿಧಿಯಾಸೆಗೆ ಲಿಂಗವನ್ನೇ ಕೆಡವಿದ ದುಷ್ಕರ್ಮಿಗಳು

    ಕೋಲಾರ: ನಿಧಿಯಾಸೆಗೆ ದುಷ್ಕರ್ಮಿಗಳು ಪುರಾತನ ಕಾಲದ ಲಿಂಗವನ್ನು ಧ್ವಂಸ ಮಾಡಿರುವ ಘಟನೆ ಕೋಲಾರದ ಶ್ರೀನಿವಾಸಪುರ ತಾಲೂಕಿನ ನಂಬಿಹಳ್ಳಿಯಲ್ಲಿ ನಡೆದಿದೆ.

    ಪಂಚಲಿಂಗ ಕ್ಷೇತ್ರ ಎಂದೇ ಪ್ರಖ್ಯಾತಿ ಪಡೆದಿರುವ ನಂಬಿಹಳ್ಳಿಯ ಚೌಡಪ್ಪ ಎಂಬವರ ಜಮೀನನಲ್ಲಿರುವ ಪಂಚಲಿಂಗಗಳನ್ನು ಧ್ವಂಸ ಮಾಡಿದ್ದು, ನಿಧಿ ಆಸೆಗಾಗಿ ಶಿವಲಿಂಗದ ಬಳಿ ದುಷ್ಕರ್ಮಿಗಳು ವಾಮಾಚಾರ ಮಾಡಿಸಿದ್ದಾರೆ.

    ಲಿಂಗವನ್ನು ಹಾರೆಯಿಂದ ಕಿತ್ತು ಹಾಕಿ ಮಾಟ ಮಂತ್ರಕ್ಕೆ ತಂದಿದ್ದ ವಸ್ತುಗಳು ಹಾಗೂ ಅಗೆಯಲು ತಂದಿದ್ದ ಕಬ್ಬಿಣದ ಸಲಕರಣೆಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಈ ಹಿಂದೆಯೂ ನಿಧಿಯಾಸೆಗೆ ಲಿಂಗವನ್ನು ಕೆಡವಿದ್ದ ದುಷ್ಕರ್ಮಿಗಳು ದೇವಾಲಯವನ್ನು ವಿರೂಪಗೊಳಿಸಿದ್ದರು. ಪುರಾತನ ದೇವಾಲಯ ಇದಾಗಿದ್ದು, ಶಿವಲಿಂಗಕ್ಕೆ ಸುಮಾರು ವರ್ಷಗಳಿಂದ ಸರ್ಪ ಕಾವಲಿತ್ತು ಎಂದು ಸ್ಥಳೀಯರು ಹೇಳುತ್ತಾರೆ. ಆದರೆ ಸ್ಥಳದಲ್ಲಿ ಅರಿಶಿಣ, ಕುಂಕುಮ, ತೆಂಗಿನ ಕಾಯಿ, ನಿಂಬೆಹಣ್ಣು ಪತ್ತೆಯಾಗಿದ್ದು, ವಾಮಾಚಾರದ ಮೂಲಕ ಹಾವಿಗೆ ತೊಂದರೆ ನೀಡಿ ದೇವಾಲಯವನ್ನು ಧ್ವಂಸ ಮಾಡಿದ್ದಾರೆ. ಅಲ್ಲದೆ ದೇವರ ಕೃಪೆಯೋ ಅಥವಾ ಧೈವ ಶಕ್ತಿಯ ಪ್ರಭಾವವೋ ನಿಧಿ ಸಿಗದೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.

  • ನಿಧಿ ಆಸೆಗೆ ಮನೆ ಕಳೆದುಕೊಂಡು ಬೀದಿಪಾಲಾದ ವ್ಯಕ್ತಿ

    ನಿಧಿ ಆಸೆಗೆ ಮನೆ ಕಳೆದುಕೊಂಡು ಬೀದಿಪಾಲಾದ ವ್ಯಕ್ತಿ

    ಮಡಿಕೇರಿ: ಹೊಸ ಮನೆ ಕಟ್ಟಬೇಕು ಎಂದು ಹಳೆ ಮನೆಯನ್ನು ಬೀಳಿಸುವವರನ್ನ ನೋಡಿದ್ದೇವೆ. ಕಟ್ಟಿದ ಮನೆ ಸರಿಯಿಲ್ಲ ಅಂತ ಸರಿಪಡಿಸೋದನ್ನ ನೋಡಿದ್ದೇವೆ. ಆದರೆ ವಿರಾಜಪೇಟೆ ತಾಲೂಕಿನ ಚೇಲಾವರ ಗ್ರಾಮದಲ್ಲಿ ನಿಧಿ ಆಸೆಗೆ ಬಿದ್ದು ವ್ಯಕ್ತಿಯೊಬ್ಬರು ಮನೆ ಕಳೆದುಕೊಂಡಿದ್ದಾರೆ.

    ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಚೇಲಾವರ ಗ್ರಾಮದಲ್ಲಿ 2 ವರ್ಷದ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಭೂಮಿಯೊಳಗೆ ನಿಧಿ ಇದೆ ಅಂತ ಇಲ್ಲದ ಸಂಪತ್ತಿನ ಆಸೆಗೆ ಬಿದ್ದು, ಯಾರದ್ದೋ ಮಾತು ನಂಬಿ ಚೇಲಾವರ ಗ್ರಾಮದ ನಿವಾಸಿ ಗಣಪತಿ ಅವರು ತಮ್ಮ ಮನೆಯೊಳಗೆ ಹಾಗೂ ಮನೆಯ ಸುತ್ತ ಅಗೆದು ಇದ್ದ ಮನೆಯನ್ನು ಕೂಡ ಬೀಳಿಸಿಕೊಂಡು ಬೀದಿಪಾಲಾಗಿದ್ದಾರೆ.

    ಚೇಲಾವರ ಗ್ರಾಮಕ್ಕೆ ಹೊಂದಿಕೊಂಡಂತೆ ಅತೀ ದೊಡ್ಡದಾದ ಕಬ್ಬೆ ಬೆಟ್ಟವಿದೆ. ಈ ಬೆಟ್ಟವನ್ನು ದಾಟಿದರೆ ಸಾಕು ಕೇರಳ ರಾಜ್ಯ ಸಿಗುತ್ತದೆ. ಆದರೆ ಈ ಬೆಟ್ಟದಲ್ಲಿ ಅಪಾರ ನಿಧಿ ಇದೆ ಎನ್ನುವ ನಂಬಿಕೆ ಇಲ್ಲಿಯ ಜನರಲ್ಲಿ ಇದೆ. ಈ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡ ದುಷ್ಕರ್ಮಿಗಳು ಗಣಪತಿಯವರ ತಲೆಕೆಡಿಸಿ ಅವರ ಮನೆಯೊಳಗೆ ಮತ್ತು ಮನೆ ಸುತ್ತ ಅಗೆಸಿದ್ದಾರೆ. ಹೀಗೆ ಅಗೆಸಿದ ಗುಂಡಿಯಲ್ಲೆಲ್ಲಾ ಮಳೆಗಾಲದಲ್ಲಿ ನೀರು ನಿಂತು ಇಡೀ ಮನೆ ಬಿದ್ದು ನೆಲಸಮವಾಗಿದೆ.

    ನಿಧಿಯನ್ನು ತೆಗೆಯಲು ಕೇರಳದಿಂದ ಜೊತೆಗೆ ಅರಬ್ ದೇಶದಿಂದಲೂ ಇಬ್ಬರು ಮಂತ್ರವಾದಿಗಳು ಗಣಪತಿ ಅವರ ಮನೆಗೆ ಬಂದಿದ್ದರು. ಅದಕ್ಕೆಲ್ಲಾ ಮುಖ್ಯವಾಗಿ ಕುಮ್ಮಕ್ಕು ನೀಡಿದವನು ಇದೇ ಊರಿನ ವ್ಯಕ್ತಿ. ಕಳೆದುಕೊಂಡಿರುವ ಗಣಪತಿ ಇವರ ಮಾತನ್ನು ನಂಬಿ ನಾನು ಹಾಳಾಗಿ ಹೋಗಿದ್ದೇನೆ ಎಂದು ಅಳಲನ್ನು ತೋಡಿಕೊಂಡಿದ್ದಾರೆ. ಆಸರೆಗಿದ್ದ ಮನೆಯನ್ನು ಕಳೆದುಕೊಂಡು ಬೀದಿಗೆ ಬಿದ್ದಿರುವ ಗಣಪತಿ, ಚೇಲಾವರದಿಂದ ಮೂರು ಕಿಲೋಮೀಟರ್ ದೂರದ ಕಬ್ಬೆಬೆಟ್ಟದ ತಪ್ಪಲಿರುವ ಐಟಿಡಿಪಿ ಇಲಾಖೆ ನಿರ್ಮಿಸಿರುವ ಸಮುದಾಯ ಭವನದಲ್ಲಿ ಆಶ್ರಯ ಪಡೆದಿದ್ದಾರೆ.

    ಆದರೆ ನರಿಯಂದಡ ಗ್ರಾಮ ಪಂಚಾಯ್ತಿಯವರು ಈ ಸಮುದಾಯ ಭವನವನ್ನು ಖಾಲಿ ಮಾಡುವಂತೆ ಗಣಪತಿ ಅವರಿಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಗ್ಯಾಂಗ್ರಿನ್ ಆಗಿ ಜೀವನ್ಮರಣದಲ್ಲಿ ಒದ್ದಾಡುತ್ತಿರುವ ಗಣಪತಿ ಅವರು ಇರಲು ಮನೆಯೂ ಇಲ್ಲದೆ, ದುಡಿಮೆಯೂ ಇಲ್ಲದೆ ಕನಿಷ್ಟ ಒಂದೊತ್ತಿನ ಊಟಕ್ಕೂ ಪರದಾಡುವ ಹೀನಾಯ ಸ್ಥಿತಿಯಲ್ಲಿ ಕಾಲ ಕಳೆಯುತ್ತಿದ್ದಾರೆ.

    ನಿಧಿ ಆಸೆಗೆ ಗುಂಡಿ ತೆಗೆಯದಂತೆ ಎಷ್ಟೇ ಹೇಳಿದರು ಮಂತ್ರವಾದಿಗಳು ನನ್ನ ಮಾತನ್ನು ಕೇಳಲಿಲ್ಲ. ಮನೆಯಲ್ಲಿ ಎಂಟು ಅಡಿಯಷ್ಟು ಆಳದ ಗುಂಡಿ ತೆಗೆದಿದ್ದರು. ಹೀಗೆ ತೆಗೆದ ಗುಂಡಿಯಲ್ಲಿ ನೀರು ಸಿಕ್ಕಿತೇ ವಿನಃ ಯಾವುದೇ ನಿಧಿ ಸಿಕ್ಕಿಲ್ಲ. ಕೊನೆಗೆ ವಿಷಯ ಪೊಲೀಸರ ಕಿವಿಗೆ ಬಿದ್ದು ಸ್ಥಳಕ್ಕೆ ಪೊಲೀಸರು ಬರುತ್ತಿದ್ದಂತೆ ಮಂತ್ರವಾದಿಗಳು ಕಾಲ್ಕಿತ್ತರು ಎಂದು ಗಣಪತಿ ತಿಳಿಸಿದ್ದಾರೆ. ಈ ಘಟನೆಗೂ ಒಂದು ವರ್ಷ ಮೊದಲು ಇದೇ ಗ್ರಾಮದಲ್ಲಿ ನಿಧಿ ಆಸೆಗಾಗಿ ವ್ಯಕ್ತಿಯೊಬ್ಬರನ್ನು ಕಬ್ಬೆಬೆಟ್ಟದಲ್ಲಿ ಬಲಿಕೊಟ್ಟಿದ್ದನ್ನು ಜನ ಈಗಲೂ ನೆನಪಿಸಿಕೊಳ್ಳುತ್ತಾರೆ.

  • ನಿಧಿಗಾಗಿ ಇತಿಹಾಸದ ಪ್ರಸಿದ್ಧ ನವಬೃಂದಾವನ ಧ್ವಂಸ – ಸಿಡಿದೆದ್ದ ನಟ ಜಗ್ಗೇಶ್

    ನಿಧಿಗಾಗಿ ಇತಿಹಾಸದ ಪ್ರಸಿದ್ಧ ನವಬೃಂದಾವನ ಧ್ವಂಸ – ಸಿಡಿದೆದ್ದ ನಟ ಜಗ್ಗೇಶ್

    ಬೆಂಗಳೂರು: ನಿಧಿಗಾಗಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ ಬಳಿ ಇರುವ ನವವೃಂದಾವನನ್ನು ದುಷ್ಕರ್ಮಿಗಳು ಅಗೆದು ಧ್ವಂಸ ಮಾಡಿದ್ದಾರೆ. ಇದಕ್ಕೆ ನಟ ಜಗ್ಗೇಶ್ ಪ್ರತಿಕ್ರಿಯಿಸಿ, ಈ ಕೃತ್ಯ ಮಾಡಿದವರ ವಂಶ ಸರ್ವನಾಶವಾಗುತ್ತದೆ ಎಂದು ಶಾಪ ಹಾಕಿದ್ದಾರೆ.

    ನಟ ಜಗ್ಗೇಶ್ ಟ್ವೀಟ್ ಮಾಡುವ ಮೂಲಕ ನವವೃಂದಾವನನ್ನು ಧ್ವಂಸ ಮಾಡಿದವರ ವಿರುದ್ಧ ಸಿಡಿದೆದ್ದಿದ್ದಾರೆ. “ಅಯ್ಯೋ ದೇವರೇ ಎಂಥ ಹೀನ ಕೃತ್ಯ ಮಾಡಿದ್ದಾರೆ. ಈ ಕೃತ್ಯ ಮಾಡಿದವರ ವಂಶ ಸರ್ವನಾಶವಾಗುತ್ತದೆ. ಸನಾತನ ನಮ್ಮ ಶ್ರೇಷ್ಟತೆಯ ಗುರುಪರಂಪರೆಗೆ ಕೈ ಹಾಕಿದ್ದಾರೆ. ಹೀಗಾಗಿ ಪಾಪಿಗಳಿಗೆ ಕ್ಷಮೆಯಿರದಿರಲಿ. ಸಂಬಂಧಪಟ್ಟ ಅಧಿಕಾರಿವರ್ಗ ಸೂಕ್ತಕ್ರಮ ತೆಗೆದುಕೊಳ್ಳಬೇಕು. ಗುರುಭಕ್ತರೇ ಪುನರ್ ನಿರ್ಮಾಣಕ್ಕೆ ಹಾಗೂ ಕಾನೂನು ಕ್ರಮಕ್ಕೆ ಹ್ಯಾಶ್‍ಟ್ಯಾಗ್ ಮಾಡಿ ಒತ್ತಾಯಿಸಿ” ಎಂದು ಆಕ್ರೋಶಗೊಂಡು ಹೇಳಿದ್ದಾರೆ.

    ಗಂಗಾವತಿ ತಾಲೂಕಿನ ಆನೆಗುಂದಿ ಬಳಿ ಇರುವ ನವವೃಂದಾವನ ಗಡ್ಡೆ ತುಂಗಭದ್ರಾ ನದಿಯ ಮಧ್ಯದಲ್ಲಿದೆ. ಇಲ್ಲಿ ವ್ಯಾಸರಾಜರು ಸೇರಿದಂತೆ ಒಟ್ಟು ಒಂಬತ್ತು ಯತಿಗಳ ಸಮಾಧಿಗಳು ಇವೆ. ಇಲ್ಲಿ ಪ್ರತಿವರ್ಷ ರಾಘವೇಂದ್ರ ಮಠದವರಿಂದ ಮತ್ತು ಉತ್ತಾರಾಧಿ ಮಠದಿಂದ ಅದ್ಧೂರಿಯಾಗಿ ಆರಾಧನೆ ಕಾರ್ಯಕ್ರಮ ಜರಗುತ್ತದೆ.

    ನವ ವೃಂದಾವನ ಮಾಲಿಕತ್ವಕ್ಕಾಗಿ ಈ ಎರಡು ಮಠದವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಯಾರ ಪರವೂ ತೀರ್ಪು ಬಂದಿಲ್ಲ. ಸಾಕಷ್ಟು ವಿವಾದಿತ ಪ್ರದೇಶ ಇದಾಗಿದ್ದು, ಬುಧವಾರ ರಾತ್ರಿ ದುಷ್ಕರ್ಮಿಗಳು ನಿಧಿಯ ಆಸೆಗಾಗಿ ನವ ವೃಂದಾವನವನ್ನು ಅಗೆದು ಹಾಕಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.

    ಸಮಾಧಿಯ ಕೆಳಭಾಗವನ್ನು ಸಹ ಸಂಪೂರ್ಣ ಅಗೆದಿದ್ದು, ಇದು ಪಕ್ಕಾ ನಿಧಿಗಾಗಿ ಅಗೆದಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಗಂಗಾವತಿ ತಹಶಿಲ್ದಾರ ವೀರೇಶ್ ಮತ್ತು ಗಂಗಾವತಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.