Tag: ನಿಧಿ ಸಂಗ್ರಹ

  • ಅಯೋಧ್ಯೆ ರಾಮ ಮಂದಿರಕ್ಕೆ ಕರ್ನಾಟಕದಿಂದ  200 ಕೋಟಿ ನಿಧಿ ಸಂಗ್ರಹ

    ಅಯೋಧ್ಯೆ ರಾಮ ಮಂದಿರಕ್ಕೆ ಕರ್ನಾಟಕದಿಂದ 200 ಕೋಟಿ ನಿಧಿ ಸಂಗ್ರಹ

    – ಕರ್ನಾಟಕದಲ್ಲಿ 95 ಲಕ್ಷ, ದೇಶದಲ್ಲಿ 12 ಕೋಟಿ ಮನೆ ತಲುಪಿದ ರಾಮ ಅಭಿಯಾನ
    – ಶೇ.80 ರಷ್ಟು ಮನೆಗಳನ್ನು ತಲುಪಿದ ಅಭಿಯಾನ

    ಬೆಂಗಳೂರು: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮಂದಿರ ನಿರ್ಮಾಣಕ್ಕೆ ನಡೆದ ಅಭಿಯಾನದಲ್ಲಿ ಕರ್ನಾಟಕದ 95 ಲಕ್ಷ ಮನೆಗಳನ್ನು ತಲುಪಲಾಗಿದ್ದು, ಕರ್ನಾಟಕದಲ್ಲಿ ಸುಮಾರು 200 ಕೋಟಿ ರೂ. ಸಂಗ್ರಹವಾಗಿದೆ.

    ಜನವರಿ-ಫೆಬ್ರವರಿಯಲ್ಲಿ 45 ದಿನ ನಡೆದ ಅಭಿಯಾನದಲ್ಲಿ ಗುರಿ ಇರಿಸಿಕೊಂಡಿದ್ದ ಶೇಕಡಾ 80 ಮನೆಗಳನ್ನು ತಲುಪಲಾಗಿದೆ. ಕರ್ನಾಟಕದಲ್ಲಿ ಮನೆಗಳಿಗೆ ತೆರಳಿ ನಿಧಿ ಸಂಗ್ರಹಿಸಲು 1,250 ಸ್ವಾಮೀಜಿಗಳು ಭಾಗವಹಿಸಿದ್ದರು ಎಂದು ಅಭಿಯಾನದ ಕಾರ್ಯದರ್ಶಿ ನಾ. ತಿಪ್ಪೇಸ್ವಾಮಿ ತಿಳಿಸಿದ್ದಾರೆ.

    ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಕರ್ನಾಟಕ ರಾಜ್ಯ ಸಮಿತಿ ಆಯೋಜಿಸಿದ್ದ ಸಮಾರೋಪ ಸಮಾರಂಭ ಸದಾಶಿವ ನಗರದ ರಾಷ್ಟ್ರೋತ್ಥಾನ ಯೋಗ ಕೇಂದ್ರದಲ್ಲಿ  ಇಂದು ನಡೆಯಿತು. ಈ ಕಾರ್ಯಕ್ರಮಕ್ಕೆ ಪೇಜಾವರ ಶ್ರೀಗಳು, ಶ್ರೀರಾಮ ಮಂದಿರ ನಿರ್ಮಾಣ ರಾಜ್ಯ ಸಮಿತಿಯ ಸದಸ್ಯರು ಒಳಗೊಂಡಂತೆ ನಾಡಿನ ವಿವಿಧ ಮಠಾಧೀಶರು ಹಾಗೂ ಗಣ್ಯ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    ದೇಶದಲ್ಲಿ 5.5 ಲಕ್ಷ ಗ್ರಾಮ, ನಗರ ಪ್ರದೇಶಗಳಲ್ಲಿ 12 ಕೋಟಿ ಮನೆಗಳನ್ನು ತಲುಪಲಾಗಿದೆ. ಶೇಕಡಾ ನೂರು ಕ್ರೈಸ್ತರಿರುವ ಕೇಂದ್ರಾಡಳಿತ ಪ್ರದೇಶಗಳೂ ಸೇರಿ ಎಲ್ಲರೂ ಶ್ರೀರಾಮನ ಕಾರ್ಯಕ್ಕೆ ಸ್ಪಂದನೆ ನೀಡಿದ್ದಾರೆ‌ ಎಂದು ನಾ. ತಿಪ್ಪೇಸ್ವಾಮಿ ಹೇಳಿದರು.

    ಪೇಜಾವರ ಶ್ರೀಗಳು ಮಾತನಾಡಿ, ರಾಮ ಮಂದಿರ ನಿರ್ಮಾಣ ದೊಡ್ಡ ಕೆಲಸವಲ್ಲ ಅದನ್ನು ಉಳಿಸಿಕೊಂಡು ಹೋಗುವುದು ದೊಡ್ಡ ಕೆಲಸ ಎಂದರು. ಮತ್ತು ಮಕ್ಕಳಿಗೆ ಸಂಸ್ಕೃತಿ,ಸಂಸ್ಕಾರ ಕೊಟ್ಟರೆ ಮಾತ್ರ ದೇಶ ಸುಭಿಕ್ಷವಾಗಿರುತ್ತದೆ ಮತ್ತು ಯಾವುದೇ ಮತೀಯ ಶಕ್ತಿಗಳು ತೊಂದರೆ ಕೊಡಲು ಸಾಧ್ಯವಿಲ್ಲ. ರಾಮ ಮಂದಿರ ನಿರ್ಮಾಣಕ್ಕೆ ದೇಶಾದ್ಯಂತ ಬಂದ ಪ್ರತಿಕ್ರಿಯೆಯಿಂದ ರಾಮ ಮಂದಿರದ ಮತ್ತು ರಾಮರಾಜ್ಯದ ಬಗ್ಗೆ ಜನಗಳಿಗಿರುವ ಮನೋಭಿಲಾಷೆ ತಿಳಿಸುತ್ತದೆ ಎಂದರು.

    ದೇಶದ ಜನರಲ್ಲಿ ಗೊಂದಲ ಉಂಟು ಮಾಡುತ್ತಿರುವ ಕಮ್ಯೂನಿಸ್ಟರ ಮಾತು ಕಸ ಎಂದು ಜನರೇ ನಿರೂಪಿಸಿದ್ದಾರೆ ಎಂದು ಕನ್ಹೇರಿಯ ಅದೃಷ ಕಾಡಸಿದ್ದೇಶ್ಚರ ಸ್ವಾಮೀಜಿ ಹೇಳಿದರು.  ತಮಿಳುನಾಡಿನಲ್ಲಿ ರಾಮನ ವಿರೋಧಿಗಳಿದ್ದಾರೆ ಎಂಬ ಭಾವನೆ ಮೂಡಿಸಿದ್ದರು. ಆದರೆ ಅಲ್ಲಿ ನಿರೀಕ್ಷೆಗೂ ಮೀರಿ ಸ್ಪಂದನೆ ನೀಡಿದರು. ಒಂದು ಮನೆಯ ಸಂಗ್ರಹ ಮುಗಿಸುವ ವೇಳೆಗೆ ಇನ್ನೊಂದು ಮನೆಯಲ್ಲಿ ದೇಣಿಗೆ ನೀಡಲು ಸಿದ್ಧರಾಗಿರುತ್ತಿದ್ದರು. ಚಿಲ್ಲರೆ ಭಾಷಣ ಮಾಡಿಕೊಂಡು ಸಮಾಜ ಒಡೆಯುವವರಿಗೆ ಜನರು ಉತ್ತರ ನೀಡಿದ್ದಾರೆ. ಮುಂದೆ ಕಾಶಿ ಹಾಗೂ ಮಥುರಾದಲ್ಲಿ ಮಂದಿರ ಕಟ್ಟುವ ಕಾರ್ಯ ಸದ್ಯದಲ್ಲೇ ಲಭಿಸಲಿದೆ ಎಂದು ಈ ವೇಳೆ ಹೇಳಿದರು.

    ಕಾರ್ಯಕ್ರಮದಲ್ಲಿ ಇಸ್ಕಾನ್ ಅಧ್ಯಕ್ಷರಾದ ಮಧುಪಂಡಿತ್ ದಾಸ್ ಜಿ, ಬೇಲಿಮಠದ ಶ್ರೀ ಶಿವರುದ್ರ ಮಹಾಸ್ವಾಮಿಗಳು, ಆದಿಚುಂಚನಗಿರಿ ವಿಜಯನಗರ ಮಠದ ಸೋಮನಾಥ ಸ್ವಾಮೀಜಿ ,ಕನ್ಹೆರಿಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಜಿ, ಕವಲಗುಡ್ಡ ಅಮಾರೇಶ್ವರ ಮಹಾರಾಜರು, ಸೇವಾಲಾಲ್ ಗುರುಪೀಠದ ಶ್ರೀಬಳಿರಾಮ್ ಮಹರಾಜ್ ಪಾಲ್ಗೊಂಡು ಆಶೀರ್ವಚನ ನೀಡಿದರು.

    ಕಾರ್ಯಕ್ರಮದಲ್ಲಿ ರಾಮಮಂದಿರ ಮಾದರಿಯನ್ನು ಪ್ರದರ್ಶಿಸಲಾಯಿತು. ಅಭಿಯಾನಕ್ಕೆ ಸಹಕಾರ ನೀಡಿದ ಎಲ್ಲಾ ಮಾಧ್ಯಮ ಮಿತ್ರರಿಗೆ ತಿಪ್ಪೇಸ್ವಾಮಿ ಅವರು ಅಭಿನಂದನೆಗಳನ್ನು ತಿಳಿಸಿದರು.

  • ದೇಶ, ಸಮಾಜವನ್ನು ಒಡೆಯುವ ಕೆಲಸ ಮಾಡಬೇಡಿ – ಎಚ್‌ಡಿಕೆಗೆ ರಾಮದಾಸ್‌ ತಿರುಗೇಟು

    ದೇಶ, ಸಮಾಜವನ್ನು ಒಡೆಯುವ ಕೆಲಸ ಮಾಡಬೇಡಿ – ಎಚ್‌ಡಿಕೆಗೆ ರಾಮದಾಸ್‌ ತಿರುಗೇಟು

    ಬೆಂಗಳೂರು: ದೇಶವನ್ನು, ಸಮಾಜವನ್ನು ಒಡೆಯುವ ಕೆಲಸ ಮಾಡಬೇಡಿ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ರಾಮದಾಸ್‌ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.

    ರಾಮ ಮಂದಿರ ನಿಧಿ ಸಂಗ್ರಹಣಾ ಅಭಿಯಾನದಲ್ಲಿ ಹಿಂದೂಗಳು ಮಾತ್ರವಲ್ಲದೇ, ಮುಸಲ್ಮಾನ, ಕ್ರೈಸ್ತರೂ ಸಹ ದೇಣಿಗೆಯನ್ನು ರಾಮನ ಚರಣಕ್ಕೆ ಅರ್ಪಿಸಿದ್ದಾರೆ. ಇದನ್ನೊಂದು ಬಾರಿ ತಿಳಿಯುವ ಪ್ರಯತ್ನ ಮಾಡಿ. ಯಾರ ಮನಸ್ಸಲ್ಲೂ ಇಲ್ಲದ ವಿಷ ಬೀಜ ಬಿತ್ತುವ ಕೆಲಸ ಮಾಡಬೇಡಿ ಎಂದು ಟ್ವೀಟ್‌ ಮಾಡಿದ್ದಾರೆ.

    ಟ್ವೀಟ್‌ನಲ್ಲಿ ಏನಿದೆ?
    ಕುಮಾರಸ್ವಾಮಿ ಅವರೇ ನೀವು ಅಂತಃಕರಣದಿಂದ ಮಾತನಾಡಿ, ನೀವು, ನಿಮ್ಮ ಸಹೋದರ ಹಾಗೂ ನಿಮ್ಮ ಪಿತಾಶ್ರೀ ಅವರು ತಿಂಗಳಲ್ಲಿ ಹೆಚ್ಚಿನ ದಿನ ಪೂಜೆ, ಹೋಮಗಳಲ್ಲೇ ತೊಡಗುತ್ತೀರಿ ಎಂಬುದು ಜನತೆಗೆ ಗೊತ್ತಿರುವ ವಿಷಯ.

    ಮಹಾತ್ಮಾ ಗಾಂಧೀಜಿ, ನೆಹರೂ, ಅಂಬೇಡ್ಕರ್ ಸಹ ಆರ್‌ಎಸ್‌ಎಸ್‌ ಕಾರ್ಯದ ಬಗ್ಗೆ ಶ್ಲಾಘಿಸಿದ್ದಾರೆ. ಆರ್‌ಎಸ್‌ಎಸ್‌ ಬಗ್ಗೆ ಜನತೆಗೆ ಧೈರ್ಯದ ಭಾವನೆ ಇದೆಯೇ ಹೊರತು ಹೆದರಿಕೆಯ ಭಾವನೆ ಇಲ್ಲ. ಇವನ್ನೆಲ್ಲಾ ತಿಳಿದು ಇನ್ನಾದರೂ ದೇಶವನ್ನು, ಸಮಾಜವನ್ನು ಒಡೆಯುವ ಕೆಲಸ ಮಾಡಬೇಡಿ.

  • ರಾಮ ಮಂದಿರಕ್ಕೆ ನಿಧಿ – 27 ದಿನಗಳಲ್ಲಿ 1,511 ಕೋಟಿ ಸಂಗ್ರಹ

    ರಾಮ ಮಂದಿರಕ್ಕೆ ನಿಧಿ – 27 ದಿನಗಳಲ್ಲಿ 1,511 ಕೋಟಿ ಸಂಗ್ರಹ

    ಲಕ್ನೋ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಒಟ್ಟು 27 ದಿನಗಳಲ್ಲಿ 1,511 ಕೋಟಿ ರೂ. ನಿಧಿ ಸಂಗ್ರಹವಾಗಿದೆ.

    ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಖಜಾಂಚಿ ಸ್ವಾಮಿ ಗೋವಿಂದ ದೇವ ಗಿರಿ ಅವರು ಮಾಹಿತಿ ನೀಡಿದ್ದು, ‘ಜನವರಿ 15ರಂದು ಆರಂಭವಾಗಿರುವ ನಿಧಿ ಸಮರ್ಪಣಾ ಅಭಿಯಾನವು ಫೆ.27ರವರೆಗೆ ನಡೆಯಲಿದೆ. ಫೆ.11ರ ಸಂಜೆವರೆಗಿನ ದಾಖಲೆಗಳ ಪ್ರಕಾರ ಒಟ್ಟು 1,511 ಕೋಟಿ ರೂ. ಸಂಗ್ರಹವಾಗಿದೆ. ಎಲ್ಲಾ ಧರ್ಮ, ಸಮುದಾಯಗಳ ಜನರು ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುತ್ತಿದ್ದಾರೆ ಎಂದು ಹೇಳಿದರು.

     

    ಪುಟ್ಟ ಮಕ್ಕಳು ಸಹ ತಮ್ಮ ಪಿಗ್ಗಿ ಬ್ಯಾಂಕ್‌ನಲ್ಲಿ ಸಂಗ್ರಹಿಸಿದ್ದ ಹಣವನ್ನು ಮಂದಿರಕ್ಕಾಗಿ ನೀಡುತ್ತಿದ್ದಾರೆ. ಫೆ.27ರ ಒಳಗಡೆ ಲಕ್ಷ ಹಳ್ಳಿಗಳ 11 ಕೋಟಿ ಕುಟುಂಬವನ್ನು ಭೇಟಿ ಮಾಡಿ ನಿಧಿ ಸಂಗ್ರಹಿಸಲಿದ್ದಾರೆ ಎಂದು ಅವರು ತಿಳಿಸಿದರು.

    ಟ್ರಸ್ಟ್‌ ಕಾರ್ಯದರ್ಶಿ ಚಂಪತ್‌ ರಾಯ್‌ ಮಾತನಾಡಿ, ರಾಮ ಮಂದಿರ ನಿರ್ಮಾಣದ ಪಾಯ ಅಗೆಯುವ ಕಾರ್ಯ ಆರಂಭವಾಗಿದ್ದು, ಈವರೆಗೆ ಐದು ಮೀಟರ್‌ ಆಳದವರೆಗೆ ಅಗೆಯಲಾಗಿದೆ ಎಂದು ಮಾಹಿತಿ ನೀಡಿದರು.

    ಕಳೆದ ಆಗಸ್ಟ್‌ 20 ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದು, ಒಟ್ಟು 70 ಎಕರೆ ವಿಸ್ತೀರ್ಣದಲ್ಲಿ ರಾಮಮಂದಿರ ಸಂಕೀರ್ಣ ನಿರ್ಮಾಣವಾಗಲಿದೆ.

    ಕಾಮಗಾರಿಯನ್ನು ಮೂರು ವರ್ಷದಲ್ಲಿ ಪೂರ್ಣಗೊಳಿಸುವ ಗುರಿಯನ್ನು ಹಾಕಲಾಗಿದ್ದು, ಒಟ್ಟು 1,100 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ರಾಮ ಮಂದಿರ ನಿರ್ಮಾಣಕ್ಕೆ 400 ಕೋಟಿ ರೂ. ವೆಚ್ಚವಾಗಬಹುದು ಎಂದು ಟ್ರಸ್ಟ್‌ ಅಂದಾಜಿಸಿದೆ.

  • ಪೇಜಾವರ ಶ್ರೀಗಳಿಂದ ಹರಿಜನ ಕಾಲೋನಿಯಲ್ಲಿ ರಾಮಮಂದಿರಕ್ಕೆ ನಿಧಿ ಸಂಗ್ರಹ

    ಪೇಜಾವರ ಶ್ರೀಗಳಿಂದ ಹರಿಜನ ಕಾಲೋನಿಯಲ್ಲಿ ರಾಮಮಂದಿರಕ್ಕೆ ನಿಧಿ ಸಂಗ್ರಹ

    – ಸಾಮರಸ್ಯಕ್ಕೆ ಮುನ್ನುಡಿ ಬರೆದ ಶ್ರೀಗಳು

    ತುಮಕೂರು: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‍ನ ವಿಶ್ವಸ್ಥ ಸದಸ್ಯರಾದ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು, ತುಮಕೂರು ನಗರದ ನರಸಿಂಹರಾಜ ಕಾಲೋನಿ ಮತ್ತು ಅಂಬೇಡ್ಕರ್ ನಗರದಲ್ಲಿ ಮನೆ ಮನೆ ಸಂಪರ್ಕ ಮಾಡಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಭಕ್ತರಿಂದ ನಿಧಿ ಸಂಗ್ರಹ ಮಾಡಿದ್ದಾರೆ.

    ಪೇಜಾವರ ಶ್ರೀಗಳ ಭೇಟಿಯ ಹಿನ್ನೆಲೆಯಲ್ಲಿ ರಸ್ತೆಗಳನ್ನು ಸ್ವಚ್ಛಗೊಳಿಸಿ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಶ್ರೀಗಳಿಗೆ ಅಲ್ಲಿನ ನಿವಾಸಿಗಳು ಪುಷ್ಪಾರ್ಚನೆಯ ಮೂಲಕ ಸ್ವಾಗತಿಸಿದರು. ಪ್ರತಿಯೊಂದು ಮನೆಯಲ್ಲಿಯೂ ಶ್ರೀಗಳಿಗೆ ಫಲಪುಷ್ಪ ನೀಡಿ ರಾಮಮಂದಿರ ನಿರ್ಮಾಣಕ್ಕೆ ನಿಧಿ ನೀಡಿದ್ದಾರೆ.

    ಪೇಜಾವರ ಶ್ರೀಗಳಿಗೆ 10ಕ್ಕೂ ಹೆಚ್ಚು ಮನೆಗಳಲ್ಲಿ ಪಾದಪೂಜೆ ನೆರವೇರಿಸಿ ಶ್ರೀರಾಮ ನಿಧಿ ಸಮರ್ಪಿಸಲಾಯಿತು. ನಂತರ ಶ್ರೀಗಳು ಕೃಷ್ಣರಾಜ ಬಡಾವಣೆಯಲ್ಲಿರುವ ಶ್ರೀ ಕೃಷ್ಣ ಮಠಕ್ಕೆ ತೆರಳಿ ಆಶೀರ್ವಚನ ನೀಡಿ ರಾಮಮಂದಿರ ನಿಧಿ ಸಂಗ್ರಹ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಶ್ರೀರಾಮನ ಸೇವೆಗಾಗಿ ಶಬರಿ ಮತ್ತು ಗುಹನಂತೆ ಇಲ್ಲಿನ ಭಕ್ತಸಮೂಹ ತಮ್ಮ ಸೇವೆಯನ್ನು ಸಮರ್ಪಿಸಿದ್ದಾರೆ ಎಂದು ಹೇಳಿದ್ದಾರೆ.

    ತದನಂತರ ನಗರದ ಶ್ರೀ ಸಿದ್ದಗಂಗಾ ಮಠದ ಸಂಜೆಯ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿ, ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಗದ್ದುಗೆಗೆ ಭೇಟಿ ನೀಡಿದರು. ಮಠಾಧ್ಯಕ್ಷರಾದ ಶ್ರೀ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳನ್ನು ಭೇಟಿ ಮಾಡಿದರು. ಎರಡು ಮಠಗಳ ಹಿರಿಯ ಸ್ವಾಮೀಜಿಗಳು ನಡೆದುಕೊಂಡು ಬಂದ ದಾರಿಯನ್ನು ನೆನಪಿಸಿಕೊಂಡರು.

  • ರಾಮ ಮಂದಿರ ನಿರ್ಮಾಣ- ಆದಿಚುಂಚನಗಿರಿಯಲ್ಲಿ ನಿಧಿ ಸಮರ್ಪಣ ಸಂತ ಸಮಾವೇಶ

    ರಾಮ ಮಂದಿರ ನಿರ್ಮಾಣ- ಆದಿಚುಂಚನಗಿರಿಯಲ್ಲಿ ನಿಧಿ ಸಮರ್ಪಣ ಸಂತ ಸಮಾವೇಶ

    ಮಂಡ್ಯ: ಆದಿಚುಂಚನಗಿರಿಯಲ್ಲಿ ಮಹಾಸಂಸ್ಥಾನ ಮಠದಿಂದ ಆಯೋಜಿಸಲಾಗಿದ್ದ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣ ಸಂತ ಸಮಾವೇಶ ನಡೆಸಲಾಯಿತು. ವಿವಿಧ ಮಠಾಧೀಶರು ನಿಧಿ ಸಂಗ್ರಹಿಸುವ ಬಗ್ಗೆ ಚರ್ಚೆ ನಡೆಸಿದರು.

    ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಪೇಜಾವರ ಮಠದ ಶ್ರೀ ಪೇಜಾವರ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಬೇಲಿ ಮಠದ ಶ್ರೀ ಶಿವರುದ್ರ ಸ್ವಾಮೀಜಿ ಭಾಗವಹಿಸಿ ನಿಧಿ ಸಂಗ್ರಹದ ಬಗ್ಗೆ ಪರಸ್ಪರ ಚರ್ಚೆ ನಡೆಸಿದರು.

    ಈ ವೇಳೆ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ನಮ್ಮ ಮಠ ಮತ್ತು ಎಲ್ಲ ಶಾಖಾ ಮಠಗಳು ರಾಮಮಂದಿರ ನಿರ್ಮಾಣಕ್ಕೆ ಸಂಪೂರ್ಣವಾಗಿ ಸಹಕರಿಸುತ್ತವೆ ಎಂದರು. ಪೇಜಾವರ ಶ್ರೀಗಳು ಮಾತನಾಡಿ, ಶ್ರೀರಾಮನ ಗುಣಗಳನ್ನು ನಾವೆಲ್ಲ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

    ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಪ್ರಚಾರಕ ಸುಧೀರ್ ಮಾತನಾಡಿ, ರಾಮಜನ್ಮಭೂಮಿ 492 ವರ್ಷಗಳ ಹೋರಾಟ. ಈ ಅಭಿಯಾನ ಹೇಗೆ ನಡೆಯುತ್ತದೆ ಎಂಬುದರ ಬಗ್ಗೆ ತಿಳಿಸಿಕೊಟ್ಟರು.

    ಸಮಾರಂಭದಲ್ಲಿ ವಿವಿಧ ಮಠಗಳ ಮಠಾಧೀಶರು ಹಾಗೂ ಗಣ್ಯರು ಉಪಸ್ಥಿತರಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಕಾರ್ಯವಾಹ ನಾ.ತಿಪ್ಪೇಸ್ವಾಮಿ ಹಾಗೂ ವಿಶ್ವ ಹಿಂದೂ ಪರಿಷದ್ ನ ದಕ್ಷಿಣ ಕರ್ನಾಟಕ ಪ್ರಾಂತ ಪ್ರಚಾರಕ ಬಸವರಾಜು ಇದ್ದರು.

  • ಕೊಡಗು ಸಂತ್ರಸ್ತರ ನೆರವಿಗೆ ನಿಂತ ಬಿಗ್ ಬಾಸ್ ಖ್ಯಾತಿಯ ದಿವಾಕರ್

    ಕೊಡಗು ಸಂತ್ರಸ್ತರ ನೆರವಿಗೆ ನಿಂತ ಬಿಗ್ ಬಾಸ್ ಖ್ಯಾತಿಯ ದಿವಾಕರ್

    – ಪ್ರತಿ ಅಂಗಡಿಗಳಿಗೆ ತೆರಳಿ ನಿಧಿ ಸಂಗ್ರಹ

    ಬೆಂಗಳೂರು: ಪ್ರವಾಹದಿಂದ ತತ್ತರಿಸಿ ಹೋಗಿರುವ ಕೊಡಗು ಮಂದಿಗೆ ರಾಜ್ಯದ ಮೂಲೆ ಮೂಲೆಗಳಿಂದ ನೆರವು ಹರಿದು ಬರುತ್ತಿದೆ. ಬಿಗ್ ಬಾಸ್ ಖ್ಯಾತಿಯ ದಿವಾಕರ್ ಕೂಡ ಸಂತ್ರಸ್ತರ ಬೆನ್ನಿಗೆ ನಿಂತಿದ್ದಾರೆ.

    ದಿವಾಕರ್ ಅವರು, ಯಶವಂತಪುರದ ಎಪಿಎಂಸಿ ಯಾರ್ಡ್ ನಲ್ಲಿ ಪ್ರತಿ ಅಂಗಡಿಗಳಿಗೆ ತೆರಳಿ ನಿಧಿ ಸಂಗ್ರಹ ಮಾಡಿದ್ದಾರೆ. ಸದ್ಯ ದಿವಾಕರ್ ಅವರ ಈ ಕಾರ್ಯಕ್ಕೆ ಸಾರ್ವಜನಿಕರು ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ. ಸದ್ಯ ದಿವಾಕರ್ ಈ ಎಲ್ಲಾ ಸಾಮಾಗ್ರಿಗಳನ್ನು ಸ್ವತಃ ತಾವೇ ಕೊಡಗಿನ ಜನತೆಗೆ ತಲುಪಿಸಲಿದ್ದಾರೆ.

    ಪ್ರವಾಹದಿಂದ ತತ್ತರಿಸಿ ಹೋಗಿರುವ ಕೊಡಗು ಮಂದಿಗೆ ರಾಜ್ಯದ ಮೂಲೆ ಮೂಲೆಗಳಿಂದ ನೆರವು ಹರಿದು ಬರುತ್ತಿದೆ. ಇತ್ತೀಚಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10 ಲಕ್ಷ ರೂ. ನೆರವು ನೀಡಿದರು. ನಟ ಶಿವರಾಜ್‍ಕುಮಾರ್ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು. ಶಿವಣ್ಣ ಸಿಎಂ ಪರಿಹಾರ ನಿಧಿಗೆ 10 ಲಕ್ಷ ಚೆಕ್ ಕೂಡ ನೀಡಿದರು. ಅಲ್ಲದೇ ಅಭಿಮಾನಿಗಳಲ್ಲಿ ಮನವಿ ಕೂಡ ಮಾಡಿಕೊಂಡರು.

    ಬಿಗ್ ಬಾಸ್ 5ನೇ ಆವೃತ್ತಿಯ ವಿನ್ನರ್ ಚಂದನ್ ಶೆಟ್ಟಿ ಅವರು ಕೂಡ ಕೊಡಗಿನ ಜನತೆಗೆ ಸಹಾಯ ಹಸ್ತ ನೀಡಿದ್ದಾರೆ. ಈಗಾಗಲೇ ಚಂದನ್ ಅವರು ಕೈಲಾದಷ್ಟು ಆಹಾರ ಸಾಮಾಗ್ರಿಗಳನ್ನು ಜನತೆಗೆ ತಲುಪಿಸಿದ್ದಾರೆ. ಅಷ್ಟೇ ಅಲ್ಲದೇ ಸ್ವತಃ ಅವರೇ ನಿರಾಶ್ರಿತರ ಬಳಿ ಹೋಗಿ ಅವರ ಕಷ್ಟಗಳನ್ನು ಆಲಿಸಿದ್ದಾರೆ. ಅಲ್ಲದೇ ನಟ ಸುದೀಪ್, ದರ್ಶನ್, ಪುನೀತ್ ರಾಜ್ ಕುಮಾರ್, ಯಶ್ ಮತ್ತು ನಟಿ ಹರ್ಷಿಕಾ ಪೂಣಚ್ಚ ಅನೇಕರು ಕೊಡಗು ಜನರಿಗೆ ಸಹಾಯ ಮಾಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಅದೇ ರೀತಿ ಅಭಿಮಾನಿಗಳು ಕೂಡ ಅವರ ಕೈಲಾದಷ್ಟು ಅಗತ್ಯ ವಸ್ತುಗಳನ್ನು ಸಂತ್ರಸ್ತರಿಗೆ ತಲುಪಿಸಿದ್ದಾರೆ.

    ಇಂದು ಟಗರು ಡಾಲಿಯ ಹುಟ್ಟುಹಬ್ಬವಾಗಿದ್ದು, ಧನಂಜಯ್ ಕೂಡ ಅರ್ಥಪೂರ್ಣವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ನಿನ್ನೆ ರಾತ್ರಿಯೇ ನೂರಾರು ಅಭಿಮಾನಿಗಳು ಸೇರಿ ಡಾಲಿ ಹುಟ್ಟುಹಬ್ಬವನ್ನು ಆಚರಿಸೋ ಪ್ಲಾನ್ ಕೂಡ ಮಾಡಿದರು. ಆದರೆ ಧನಂಜಯ್ ಮಾತ್ರ ಹುಟ್ಟುಹಬ್ಬದ ಅಡಂಭರಕ್ಕೆ ಬ್ರೇಕ್ ಹಾಕಿ ಹುಟ್ಟುಹಬ್ಬವನ್ನು ನೆರೆಪೀಡಿತ ಕೊಡಗು ಜನರ ನೆರವಿಗೆ ದೇಣಿಗೆ ಸಂಗ್ರಹಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿದ್ದೇಶ್ವರ ಮಠದಿಂದ ಕೊಡಗಿಗಾಗಿ ನಿಧಿ ಸಂಗ್ರಹ ಪಾದಯಾತ್ರೆ

    ಸಿದ್ದೇಶ್ವರ ಮಠದಿಂದ ಕೊಡಗಿಗಾಗಿ ನಿಧಿ ಸಂಗ್ರಹ ಪಾದಯಾತ್ರೆ

    ಚಿಕ್ಕೋಡಿ: ಕೊಡಗು ನೆರೆ ಸಂತ್ರಸ್ತರಿಗಾಗಿ ಸ್ವಾಮೀಜಿಗಳು ಸ್ವತಃ ಬೀದಿಗೆ ಇಳಿದು ಹೆಗಲಿಗೆ ಜೋಳಿಗೆ ಹಾಕಿ ನಿಧಿ ಸಂಗ್ರಹ ಮಾಡಲು ಮುಂದಾಗಿದ್ದಾರೆ.

    ನಿಡಸೋಸಿ ಸಿದ್ಧಸಂಸ್ಥಾನ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಹಾಗೂ ಹುಕ್ಕೇರಿ ಶ್ರೀ ಮಠದ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಈ ಕಾರ್ಯ ನಡೆಯುತ್ತಿದ್ದು, ಕೇವಲ ಒಂದು ಗಂಟೆಯಲ್ಲಿ 2 ಲಕ್ಷಕ್ಕೂ ಅಧಿಕ ಹಣವನ್ನು ಸಂಗ್ರಹ ಮಾಡಿದ್ದಾರೆ.

    ಅಡವಿ ಸಿದ್ದೇಶ್ವರ ಮಠದಿಂದ ಇಂದು ನಿಧಿ ಸಂಗ್ರಹ ಪಾದಯಾತ್ರೆ ಹುಕ್ಕೇರಿಯಲ್ಲಿ ಪ್ರಾರಂಭವಾಗಿದ್ದು, ಬುಧವಾರ ಸಹ ಮುಂದುವರಿಯಲಿದೆ. ನಾಳೆ ಸಾಯಂಕಾಲ ಸಂಕೇಶ್ವರ ಪಟ್ಟಣದಲ್ಲಿ ಸ್ವಾಮೀಜಿಗಳು ಜೋಳಿಗೆ ಹಾಕಿ ನಿಧಿ ಸಂಗ್ರಹಕ್ಕೆ ಮುಂದಾಗಲಿದ್ದು ಸ್ವಾಮೀಜಿಗಳು ಸೇರಿಸುವ ಹಣವನ್ನು ಜಿಲ್ಲಾಧಿಕಾರಿಗಳ ಮುಖಾಂತರ ಕೊಡಗಿನ ಜನತೆಗೆ ನೀಡಲಿದ್ದಾರೆ.

    ಈ ವೇಳೆ ಮಾತನಾಡಿದ ಶಿವಲಿಂಗೇಶ್ವರ ಸ್ವಾಮೀಜಿಗಳು ಮತ್ತು ಹುಕ್ಕೇರಿ ಮಠದ ಶಿವಾಚಾರ್ಯ ಸ್ವಾಮೀಜಿಗಳು ದೇವರಿಗೆ ದುಡ್ಡು ಖರ್ಚು ಮಾಡಿ ಅಭಿಷೇಕ ಮಾಡಿಸುವುದು ಕೇವಲ ನಮ್ಮ ಶಾಂತಿಗಾಗಿ, ಆದರೆ ಇಂತಹ ಕಾರ್ಯ ಮಾಡುವುದು ಸಮಾಜದ ಒಳಿತಿಗಾಗಿ ಅಂತ ಹೇಳಿದರು. ಅಲ್ಲದೆ ಈ ವಿಚಾರದಲ್ಲಿ ರಾಜಕೀಯವನ್ನು ಬಿಟ್ಟು ಎಲ್ಲ ರಾಜಕಾರಣಿಗಳು ಕೊಡಗಿನ ಜನತೆಯ ಪುನರುಜ್ಜೀವನಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv