Tag: ನಿದ್ದೆ

  • ಆ ಭೀಕರ ಕನಸು ಬಿದ್ದರೆ ಬದುಕೋದೇ ಡೌಟು!

    ಆ ಭೀಕರ ಕನಸು ಬಿದ್ದರೆ ಬದುಕೋದೇ ಡೌಟು!

    ಧ್ಯರಾತ್ರಿ ನೀವು ಅಂಗಾತ ಮಲಗಿಕೊಂಡಿರುತ್ತೀರಿ. ಜಗತ್ತಿನ ಯಾವ ಚಿಂತೆಯೂ ಸುಳಿಯದಂತಹ ನಿದಿರೆಯ ಸುಖ ನಿಮ್ಮನ್ನಾವರಿಸಿಕೊಂಡಿರುತ್ತೆ. ಅಂತಹ ಗಾಢ ನಿದ್ದೆಯಲ್ಲಿ ಯಾರೋ ಸೈತಾನ ಎದೆ ಮೇಲೆ ಕೂತು ಬಲವಾಗಿ ಕತ್ತು ಹಿಸುಕಿದಂತಾಗುತ್ತೆ. ಕುತ್ತಿಗೆಯ ನರಗಳು ಮಿಸುಕಲೂ ಬಿಡದಂತೆ ಹಿಡಿದ ಕೈಗಳ ಸ್ಪಷ್ಟ ಅನುಭವವಾಗುತ್ತೆ. ಎದೆ ಮೇಲೆ ಕೂತಂತಹ ಭಾವವನ್ನು ಆ ಭಾರದ ಅನುಭವ ಸ್ಪಷ್ಟೀಕರಿಸುತ್ತೆ. ಮಿಸುಕಲು ಪ್ರಯತ್ನಿಸಿದರೆ ದೇಹ ಸ್ಪಂದಿಸೋದಿಲ್ಲ. ಕಿರುಚಲು ನೋಡಿದರೆ ಧ್ವನಿ ಹೊರಡೋದಿಲ್ಲ.

    ಅಂಥಾದ್ದೊಂದು ಕನಸು ಬಿದ್ದರೆ ಎಂಥಾ ಧೈರ್ಯಶಾಲಿಯೇ ಆದರೂ ಕಿಟಾರನೆ ಕಿರುಚಿ ಎದ್ದು ಕೂತು ಬಿಡುತ್ತಾರೆ. ಇರೋಬರೋ ಹೊದಿಕೆಯನ್ನೆಲ್ಲ ಗಟ್ಟಿಯಾಗಿ ಹೊದ್ದುಕೊಂಡು ಎಲ್ಲ ಒದ್ದೆಯಾಗುವಂತೆ ಬೆವರಾಡಿ ಬಿಡುತ್ತಾರೆ. ಇಂಥಾ ಕನಸು ಬಹುಪಾಲು ಜನರಿಗೆ ಒಂದಲ್ಲ ಒಂದು ಸಲ ಬೀಳುತ್ತೆ. ಅದರ ಅನುಭವ ಅದೆಷ್ಟು ಭೀಕರವಾಗಿರುತ್ತದೆಯೆಂದರೆ, ಕನಸಿನ ಅನುಭವ ಎದೆಯೇ ನಾಟಿದಂತಾಗಿ ಹಾಸಿಗೆಯಲ್ಲಿಯೇ ಅದೆಷ್ಟೋ ಮಂದಿ ಜೀವ ಬಿಟ್ಟಿದ್ದಿದೆ.

    ಕನಸು ಯಾಕೆ ಬೀಳುತ್ತೆ? ನಿದಿರೆಯಲ್ಲಿ ಕದಲೋ ಕನಸಿನ ಸಿನಿಮಾಗಳ ಹಿಂದೆ ಯಾವ ಶಕ್ತಿ ಇದೆ ಅನ್ನೋದಕ್ಕೆ ವಿಜ್ಞಾನ ಲೋಕದಲ್ಲಿ ಒಂದಷ್ಟು ಉತ್ತರಗಳಿವೆ. ಆದರೆ ಈ ಕನಸುಗಳೊಂದಿಗೆ ನಮ್ಮಲ್ಲಿ ಗಾಢವಾದ ಮೌಢ್ಯವೇ ಹೊಸೆದುಕೊಂಡಿದೆ. ಅದಕ್ಕೆ ಪೂರಕವಾದ ಒಂದಷ್ಟು ಸಂಗತಿಗಳು ಇಲ್ಲಿನ ಆಚಾರ ವಿಚಾರಗಳಲ್ಲಿಯೇ ಸೇರಿಕೊಂಡಿದೆ. ಅದರ ಫಲವಾಗಿಯೇ ಕನಸುಗಳ ಬಣ್ಣಕ್ಕೆ ಶಕುನಗಳ ಚಿತ್ತಾರ ಮೂಡಿಕೊಂಡಿದೆ.

    ಹಾಗಿದ್ದ ಮೇಲೆ ಆರಂಭದಲ್ಲಿ ಹೇಳಿದಂತಹ ಭೀಕರ ಕನಸುಗಳಿಗೆ ಕಾರಣ ಇದ್ದೇ ಇರಬೇಕಲ್ಲಾ? ಈ ಬಗ್ಗೆ ಹುಡುಕಿದರೆ ಬಂಗಾಳಿಗಳ ನಡುವೆ ಇಂತಹ ಭಯಾನಕ ಕನಸಿಗೆ ಒಂದಷ್ಟು ವಿವರಣೆಗಳಿವೆ. ಅಲ್ಲಿ ಇಂತಹ ಕನಸಿಗೆ ಬೂಬಾ ಅಂತಾರೆ. ಬೂಬಾ ಅಂದ್ರೆ ಮಾತಾಡಲಾರದ, ಮೂಕ ಎಂಬೆಲ್ಲ ಅರ್ಥಗಳಿವೆ. ಅಲ್ಲಿ ಇಂಥಾ ಕೆಟ್ಟ ಕನಸು ಬೂಬಾ ಅವತಾರದಲ್ಲಿ ಎಲ್ಲರ ಬೆನ್ನ ಹಿಂದೆ ಹೊಂಚಿ ಕುಳಿತಿರುತ್ತದೆ ಎಂಬ ನಂಬಿಕೆಯಿದೆ. ಅದೇನಾದರೂ ಅಮರಿಕೊಂಡರೆ ಸಾವು ಖಚಿತ ಎಂಬಂಥಾ ಭಯವೂ ಅಲ್ಲಿದೆ. ಅದಕ್ಕೆ ಒಂದಷ್ಟು ಮಂದಿ ಬಲಿಯಾಗಿದ್ದಾರೆ.

    ಹಾಗಾದರೆ ನಿಜಕ್ಕೂ ಇಂತಹ ಬೆಚ್ಚಿ ಬೀಳಿಸೋ ಕನಸು ಯಾಕೆ ಬೀಳುತ್ತೆ ಅನ್ನೋದಕ್ಕೂ ಒಂದಷ್ಟು ವಿವರಗಳೂ ಇವೆ. ಕೆಲವೊಮ್ಮೆ ಉಸಿರಾಟದ ಏರುಪೇರೂ ಕೂಡ ಅದಕ್ಕೆ ಕಾರಣವಾಗೋದಿದೆ. ಇನ್ನುಳಿದಂತೆ ಯಾವುದೋ ನೆನಪು, ಬಯಕೆ ಮತ್ತು ಭಯಗಳೇ ಕನಸಾಗಿ ರೀಲು ಬಿಚ್ಚಿಕೊಳ್ಳುತ್ತವೆ. ನಮ್ಮಲ್ಲಿರುವ ಅಂತರ್ಗತ ಭಯವೇ ಬೂಬಾ ಅವತಾರವಾಗಿ ಆಗಾಗ ಕಾಡಿ ಬಲಿ ತೆಗೆದುಕೊಳ್ಳುವ ಸಾಧ್ಯತೆಗಳೇ ಹೆಚ್ಚಾಗಿವೆ. ಆದ್ದರಿಂದಲೇ ಮೌಢ್ಯ ತುಂಬಿದ ಭಯಗಳಿಂದ ದೂರವಿರೋದೊಳಿತು. ಭಯ ತುಂಬಿಕೊಂಡರೆ ಅದು ಸೈತಾನನ ಅವತಾರವೆತ್ತಿ ಕನಸಲ್ಲಿ ಬಂದು ಎದೆ ಹತ್ತಿ ಕೂರುತ್ತೆ. ಕತ್ತು ಹಿಸುಕುತ್ತೆ. ಯಾಮಾರಿದರೆ ಜೀವವನ್ನೂ ತೆಗೆಯುತ್ತೆ.

    https://www.youtube.com/watch?v=2Ms5XvqEOKE

  • ‘ನಿದ್ರೆಗೆ ಜಾರಿದ್ದೇ ತಪ್ಪಾಯ್ತು’- ಕೊನೆಯ ಫ್ಲೈಟ್ ಮಿಸ್ ಮಾಡ್ಕೊಂಡ ಟೆಕ್ಕಿ

    ‘ನಿದ್ರೆಗೆ ಜಾರಿದ್ದೇ ತಪ್ಪಾಯ್ತು’- ಕೊನೆಯ ಫ್ಲೈಟ್ ಮಿಸ್ ಮಾಡ್ಕೊಂಡ ಟೆಕ್ಕಿ

    ಅಬುಧಾಬಿ: ಕೊರೊನಾ ಭೀತಿ ರಾಷ್ಟ್ರಾದ್ಯಂತ ಹಬ್ಬುತ್ತಿದ್ದು, ಈ ಹಿನ್ನೆಲೆಯಲ್ಲಿ ದೂರದ ಊರಿನಲ್ಲಿದ್ದವರು ತಾಯ್ನಾಡಿಗೆ ವಾಪಸ್ಸಾಗುತ್ತಿದ್ದಾರೆ. ಅಂತೆಯೇ ದುಬೈನಲ್ಲಿದ್ದ ಭಾರತೀಯ ಮೂಲದ ಟೆಕ್ಕಿಯೊಬ್ಬರು ತಾಯ್ನಾಡಿಗೆ ಹೊರಟಿದ್ದು, ಆದ್ರೆ ಫ್ಲೈಟ್ ಗೆ ಕಾದು ನಿದ್ರೆಗೆ ಜಾರಿದ್ದರಿಂದ ವಿಮಾನ ಮಿಸ್ ಆದ ಪ್ರಸಂಗ ನಡೆದಿದೆ.

    ಪುಣೆ ಮೂಲದ ಅರುಣ್ ಸಿಂಗ್(37) ದುಬೈನಲ್ಲೇ ಉಳಿದ ಭಾರತೀಯ. ಟೆಕ್ಕಿಯಾಗಿರುವ ಇವರು ದುಬೈನಲ್ಲಿ ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

    ಕೊರೊನಾ ವೈರಸ್ ಭೀತಿಯಿಂದ ಅರುಣ್ ಭಾನುವಾರ ರಾತ್ರಿ ತಾಯ್ನಾಡಿಗೆ ಹೊರಟಿದ್ದರು. ಹೀಗಾಗಿ ದುಬೈ ವಿಮಾನ ನಿಲ್ದಾಣದ ಟರ್ಮಿನಲ್ 3ರಲ್ಲಿ ಅಹಮದಾಬಾದ್ ಕಡೆ ಹೊರಟಿದ್ದ ಕೊನೆಯ ವಿಮಾನವನ್ನು ಏರಬೇಕಿತ್ತು. ಆದರೆ ಅರುಣ್ ವಿಸಿಟಿಂಗ್ ಏರಿಯಾದಲ್ಲಿ ನಿದ್ದೆಗೆ ಜಾರಿ ಎಡವಟ್ಟು ಮಾಡಿಕೊಂಡಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಅರುಣ್, ಇದೊಂದು ನನ್ನಿಂದಾದ ದೊಡ್ಡ ತಪ್ಪು. ಬಹಳ ದಣಿದಿದ್ದ ಪರಿಣಾಮ ನಿದ್ದೆ ಬಂತು. ಹಾಗಾಗಿ ನಿದ್ದೆ ಮಾಡಿದೆ. ವಿಚ್ಚೇದನ ಪಡೆಯೋದಕ್ಕಾಗಿ ನಾನು ಅರ್ಜಿ ಸಲ್ಲಿಸಲು ಭಾರತಕ್ಕೆ ಮರಳುತ್ತಿದ್ದೆ. ಬುಧವಾರದ ನಂತರ ವಿಮಾನ ನಿಲ್ದಾಣ ಮುಚ್ಚಲಿದ್ದು ಏನು ಮಾಡಬೇಕೆಂದು ತೋಚುತ್ತಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ಗಲ್ಫ್ ನ್ಯೂಸ್ ಬಳಿ ತೋಡಿಕೊಂಡಿದ್ದಾರೆ.

    ಅಲ್ಲದೆ ಈ ಬಗ್ಗೆ ದುಬೈನಲ್ಲಿರುವ ಭಾರತೀಯ ದೂತವಾಸವನ್ನು ಸಂಪರ್ಕಿಸಿದೆ. ಆದರೆ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ ಎಮದು ಬೇಸರ ವ್ಯಕ್ತಪಡಿಸಿದರು.

  • ಮನೆಗೆ ನುಗ್ಗಿದ ಕಳ್ಳನನ್ನು ನಿದ್ದೆ ಮಾಡುವಂತೆ ಮಾಡಿದ ತುಳುನಾಡ ದೈವ!

    ಮನೆಗೆ ನುಗ್ಗಿದ ಕಳ್ಳನನ್ನು ನಿದ್ದೆ ಮಾಡುವಂತೆ ಮಾಡಿದ ತುಳುನಾಡ ದೈವ!

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಕಳ್ಳನೊಬ್ಬ ಮನೆಗೆ ನುಗ್ಗಿ ಅಲ್ಲಿಯೇ ಮಲಗಿ ನಿದ್ರಿಸಿದ್ದು ಚರ್ಚೆಗೆ ಗ್ರಾಸವಾಗಿದೆ. ಬಿಹಾರ ಮೂಲದ ಕಳ್ಳ ಅನಿಲ್ ಸಹಾನಿ, ಕಪಾಟಿನ ಬೀಗದ ಕೈಯನ್ನು ತೆಗೆದುಕೊಂಡಿದ್ದರೂ ಕಳ್ಳತನ ಮಾಡದೇ, ಅದೇ ಮನೆಯ ಸೋಫಾದಲ್ಲಿ ಮಲಗಿದ್ದನು. ಇದಕ್ಕೆ ಕಾರಣ ಆ ಮನೆಯಲ್ಲಿದ್ದ ದೈವದ ಶಕ್ತಿ ಎಂಬ ಮಾತುಗಳು ಕೇಳಿಬಂದಿದೆ.

    ಕಳ್ಳ ಕಪಾಟಿನಲ್ಲಿದ್ದ ಚಿನ್ನದ ಒಡವೆಗಳನ್ನು ಕದ್ದು ನಿರಾಯಾಸವಾಗಿ ಪರಾರಿ ಆಗಬಹುದಿತ್ತು. ಆದರೆ ಬೀಗದ ಕೈಯನ್ನು ಜೊತೆಗಿರಿಸಿಕೊಂಡೇ ಮಲಗಿದ್ದಲ್ಲದೆ, ಬೆಳಗ್ಗೆವರೆಗೂ ನಿದ್ರಿಸಿ ಮನೆ ಮಾಲೀಕನ ಕೈಗೆ ಸಿಕ್ಕಿಬಿದ್ದಿದ್ದ. ಹೀಗೆ ಕಳ್ಳತನಕ್ಕೆಂದು ಬಂದು ಕಳ್ಳ ಮನೆಯಲ್ಲೇ ಮಲಗಿ ನಿದ್ದೆಗೆ ಜಾರಲು ಮನೆಯಲ್ಲಿದ್ದ ದೈವ ಶಕ್ತಿಯೇ ಕಾರಣ ಎನ್ನಲಾಗುತ್ತಿದೆ.

    ಮನೆಯ ಮಾಲೀಕ ಸುದರ್ಶನ್ ಪೂರ್ವಜರ ಕಾಲದಿಂದಲೂ ಮನೆಯಲ್ಲಿ ಕಲ್ಲುರ್ಟಿ ಮತ್ತು ಗುಳಿಗ ದೈವದ ಆರಾಧನೆ ಮಾಡುತ್ತಾ ಬಂದಿದ್ದರು. ಇದೇ ದೈವದ ಶಕ್ತಿ ಕಳ್ಳನನ್ನು ತಡೆದಿದ್ದು, ಆತ ಮನೆಯಲ್ಲೇ ಮಲಗಿ ಸಿಕ್ಕಿಬೀಳುವಂತೆ ಮಾಡಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

    ಈ ಬಿಹಾರದ ಕಳ್ಳ ಸಿಕ್ಕಿಬೀಳುವ ಹತ್ತು ದಿನಗಳ ಹಿಂದೆ ಇದೇ ರೀತಿಯ ಘಟನೆ ನಡೆದಿತ್ತು. ಮನೆಯ ಹೊರಗಿನ ದೈವದ ಗುಡಿಗೆ ನುಗ್ಗಿದ ಕಳ್ಳನೊಬ್ಬ ಕಾಣಿಗೆ ಡಬ್ಬಿ ಎಗರಿಸಲು ಯತ್ನಿಸಿದ್ದ. ಆದರೆ ಗುಡಿಗೆ ನುಗ್ಗಿದ್ದ ಕಳ್ಳ ಹೊರಗೆ ಬರಲಾಗದೇ ಸಿಕ್ಕಿಬಿದ್ದಿದ್ದ. ಇದು ಕೂಡ ದೈವದ ಪವಾಡ ಎನ್ನುವ ಮಾತು ಕೇಳಿಬಂದಿತ್ತು. ಅಂದು ಕೂಡ ಕಳ್ಳನನ್ನು ಮನೆಯವರೇ ಹಿಡಿದು ಉಪ್ಪಿನಂಗಡಿ ಪೊಲೀಸರಿಗೆ ಒಪ್ಪಿಸಿದ್ದರು.

    ಈಗ ಮತ್ತೊಬ್ಬ ಕಳ್ಳ ಮನೆಗೆ ನುಗ್ಗಿ ಮನೆಯಲ್ಲೇ ನಿದ್ರಿಸಿ ಸಿಕ್ಕಿಬಿದ್ದಿದ್ದಾನೆ. ಮನೆಯ ಹಂಚು ತೆಗೆದು ಒಳನುಗ್ಗಿ, ಬೀಗದ ಕೈಯನ್ನು ಎಗರಿಸಿದ್ದರೂ ಕಳವು ಮಾಡದೇ ಸುಮ್ಮನೆ ಮಲಗಿದ್ದು ದೈವಿ ಶಕ್ತಿಯ ಪವಾಡ ಎನ್ನುವ ಮಾತು ಕೇಳಿಬಂದಿದೆ. ಮನೆಯ ಯಜಮಾನ ಸುದರ್ಶನ್ ಕೂಡ ಇದೇ ಮಾತನ್ನು ಹೇಳುತ್ತಿದ್ದಾರೆ.

  • ಕಳ್ಳತನಕ್ಕೆಂದು ಮನೆ ಹೊಕ್ಕು ನಿದ್ದೆಗೆ ಜಾರಿ ಸಿಕ್ಕಿಬಿದ್ದ ಯುವಕ

    ಕಳ್ಳತನಕ್ಕೆಂದು ಮನೆ ಹೊಕ್ಕು ನಿದ್ದೆಗೆ ಜಾರಿ ಸಿಕ್ಕಿಬಿದ್ದ ಯುವಕ

    ಮಂಗಳೂರು: ಹೊಟ್ಟೆ ತುಂಬಾ ತಿಂದು ಕುಳಿತಲ್ಲೇ ನಿದ್ದೆಗೆ ಜಾರಿದವರನ್ನು ನೋಡಿರಬಹುದು. ಆದರೆ ಇನ್ನೊಬ್ಬರ ಮನೆಯಲ್ಲಿ ಕಳ್ಳತನ ಮಾಡುಲು ಹೋಗಿ ನಿದ್ದೆಗೆ ಜಾರಿದ್ದನ್ನು ಕೇಳಿದ್ದೀರಾ? ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಇಂಥದ್ದೊಂದು ಅಪರೂಪದ ಘಟನೆ ನಡೆದಿದ್ದು, ಆರೋಪಿ ಮನೆ ಮಾಲೀಕರ ಕೈಗೆ ಸಿಕ್ಕಿಬಿದ್ದಿದ್ದಾನೆ.

    ಬಿಹಾರದ ಮಜೀಪುರ್ ಜಿಲ್ಲೆಯ ಅನಿಲ್ ಸಹಾನಿ (34) ಕಳ್ಳತನಕ್ಕೆ ಯತ್ನಿಸಿ, ಸಿಕ್ಕಿಬಿದ್ದ ಆರೋಪಿ. ಉಪ್ಪಿನಂಗಡಿಯ ಸುದರ್ಶನ್ ಎಂಬವರ ಮನೆಗೆ ಅನಿಲ್ ಸಹಾನಿ ಮಂಗಳವಾರ ಮಧ್ಯರಾತ್ರಿ ನುಗ್ಗಿದ್ದ. ಮನೆಯ ಹಂಚು ತೆಗೆದು ಒಳನುಗ್ಗಿದ್ದ ಅನಿಲ್ ಮನೆ ಛಾವಣಿಯ ದಿವಾನದಲ್ಲಿ ಮಲಗಿ ನಿದ್ದೆಗೆ ಜಾರಿದ್ದ.

    ಬುಧವಾರ ಬೆಳಗ್ಗೆ ಎದ್ದ ಸುದರ್ಶನ್ ಅವರು ದಿವಾನದಲ್ಲಿ ಮಲಗಿದ್ದ ಅನಿಲ್‍ನನ್ನು ಕಂಡು ಗಾಬರಿಗೊಂಡಿದ್ದರು. ಬಳಿಕ ಎರಡೇಟು ಬಿಗಿದಾಗ ನಿಜ ಬಾಯಿಬಿಟ್ಟ ಆರೋಪಿಯನ್ನು ಸುದರ್ಶನ್ ಅವರು ಉಪ್ಪಿನಂಗಡಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

    ಅನಿಲ್ ಸಹಾನಿ ಬೀಗದ ಕೀಲಿಕೈ ಹಿಡಿದುಕೊಂಡೇ ಮಲಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯನ್ನು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ.

  • ಹಾಸಿಗೆಯಲ್ಲಿ ನಿದ್ದೆ ಮಾಡಲಿರುವ 23 ಮಂದಿಗೆ ಸಿಗಲಿದೆ 1 ಲಕ್ಷ

    ಹಾಸಿಗೆಯಲ್ಲಿ ನಿದ್ದೆ ಮಾಡಲಿರುವ 23 ಮಂದಿಗೆ ಸಿಗಲಿದೆ 1 ಲಕ್ಷ

    ಬೆಂಗಳೂರು: ಹಾಸಿಗೆಯಲ್ಲಿ ನಿದ್ದೆ ಮಾಡಲಿರುವ 23 ಮಂದಿಗೆ ಭಾರತೀಯ ಕಂಪನಿಯೊಂದು 1 ಲಕ್ಷ ರೂ. ನೀಡಲಿದೆ.

    ಕಳೆದ ನವೆಂಬರ್ ತಿಂಗಳಿನಲ್ಲಿ ವೇಕ್ ಫಿಟ್ ಕಂಪನಿ ನಿದ್ದೆ ಮಾಡಲು ಇಷ್ಟ ಇರುವ ಮಂದಿಗೆ 1 ಲಕ್ಷ ರೂ. ನೀಡುವುದಾಗಿ ತಿಳಿಸಿತ್ತು. ಈ ಸಂಬಂಧ ಅರ್ಜಿ ಆಹ್ವಾನಿಸಿತ್ತು. ಒಟ್ಟು 1.7 ಲಕ್ಷ ಮಂದಿ ನಿದ್ದೆ ಮಾಡಲು ಅರ್ಜಿ ಸಲ್ಲಿಸಿದ್ದು, ಈ ಪೈಕಿ ಅಂತಿಮವಾಗಿ ಮೊದಲ ಬ್ಯಾಚಿಗೆ 23 ಮಂದಿಯನ್ನು ಆಯ್ಕೆ ಮಾಡಲಾಗಿದೆ.

    ಈ ಪೈಕಿ ಭಾರತದ 8 ನಗರಗಳಿಂದ 19 ಮಂದಿ, ಅಮೆರಿಕ ಮತ್ತು ಸ್ಲೋವಾಕಿಯಾದಿಂದ ಇಬ್ಬರು ಆಯ್ಕೆ ಆಗಿದ್ದಾರೆ. ಅಂತಿಮ ಪಟ್ಟಿಯಲ್ಲಿ ಬೆಂಗಳೂರಿನ 7 ಮಂದಿ ಆಯ್ಕೆ ಆಗಿರುವುದು ವಿಶೇಷ. 100 ದಿನಗಳ ಕಾಲ ಈ ವ್ಯಕ್ತಿಗಳು ಪ್ರತಿ ರಾತ್ರಿ 9 ಗಂಟೆಗಳ ಕಾಲ ನಿರಂತರ 100 ದಿನ ನಿದ್ದೆ ಮಾಡಿದರೆ ಕಂಪನಿ 1 ಲಕ್ಷ ರೂ. ನೀಡಲಿದೆ.

    ಜಾಹೀರಾತು ನೀಡುವಾಗ ಕಂಪನಿ ನಿದ್ದೆ ಮಾಡುವವರು ಪೈಜಾಮಾ ಹಾಕಿಕೊಂಡೆ ಮಲಗಬೇಕು ಎಂದು ಷರತ್ತು ವಿಧಿಸಿತ್ತು.

    ಜೀವನದಲ್ಲಿ ನಿದ್ದೆಯನ್ನು ಆದ್ಯತೆಯನ್ನಾಗಿ ಮಾಡಲು ಯಾವುದೇ ಹಂತಕ್ಕೆ ಹೋಗುವ ಅಭ್ಯರ್ಥಿಗಾಗಿ ನಾವು ಹುಡುಕುತ್ತಿದ್ದೇವೆ. ಮನುಷ್ಯನ ಮಲಗುವ ಹವ್ಯಾಸ ಹಾಗೂ ಅದರಿಂದ ಅವರ ಆರೋಗ್ಯದ ಮೇಲೆ ಆಗುವ ಪರಿಣಾಮಗಳನ್ನು ಅಧ್ಯಯನ ಮಾಡುವುದು ನಮ್ಮ ಕಂಪನಿಯ ಉದ್ದೇಶ ಎಂದು ವೇಕ್‍ಫಿಟ್ ಕಂಪನಿಯ ನಿರ್ದೇಶಕ ಹಾಗೂ ಸಹ-ಸಂಸ್ಥಾಪಕ ಚೈತನ್ಯ ರಾಮಲಿಂಗೇಗೌಡ ಅಂದು ತಿಳಿಸಿದ್ದರು.

    ಕಂಪನಿ ಇಂಟರ್ನಿಗಳು ಮಲಗುವ ಮಾದರಿಗಳನ್ನು ಗಮನಿಸುತ್ತದೆ. ಅಲ್ಲದೆ ಕೌನ್ಸಿಲಿಂಗ್ ಸೆಷನ್ಸ್ ಹಾಗೂ ಸ್ಲೀಪ್ ಟ್ರ್ಯಾಕರ್ಸ್‍ಗಳನ್ನು ನೋಡಲಾಗುತ್ತದೆ. ಇದರಿಂದ ಅಭ್ಯರ್ಥಿಗಳು ತಮ್ಮ ಹಾಸಿಗೆಗಳನ್ನು ಬಳಸುವ ಮೊದಲು ಹಾಗೂ ನಂತರ ಅವರು ನಿದ್ರೆಯ ಅನುಭವಗಳನ್ನು ತಿಳಿಯಲು ಇದು ಕಂಪನಿಗೆ ಸಹಾಯ ಮಾಡುತ್ತದೆ. ಕೆಲಸದ ಜೀವನ ಹಾಗೂ ವೈಯಕ್ತಿಕ ಜೀವನವನ್ನು ಬ್ಯಾಲೆನ್ಸ್ ಮಾಡಲು ಈ ರೀತಿಯ ಪ್ರಯೋಗ ಮಾಡಲಾಗಿದೆ ಎಂದು ಅವರು ವಿವರಿಸಿದ್ದರು.

  • ನಿದ್ದೆ ಗುಂಗಲ್ಲಿ ಮಗುವನ್ನೇ ನೀರಿನ ಟ್ಯಾಂಕ್‍ನಲ್ಲಿ ಮುಳುಗಿಸಿ ಕೊಂದ ತಾಯಿ!

    ನಿದ್ದೆ ಗುಂಗಲ್ಲಿ ಮಗುವನ್ನೇ ನೀರಿನ ಟ್ಯಾಂಕ್‍ನಲ್ಲಿ ಮುಳುಗಿಸಿ ಕೊಂದ ತಾಯಿ!

    ಜೈಪುರ: ರಾತ್ರಿ ವೇಳೆ ನಿದ್ದೆ ಗುಂಗಿನಲ್ಲಿ ತಾಯಿಯೊಬ್ಬರು 6 ತಿಂಗಳ ಮಗುವನ್ನು ನೀರಿನ ಟ್ಯಾಂಕಿನಲ್ಲಿ ಮುಳುಗಿಸಿ ಹತ್ಯೆಗೈದ ಭಯಾನಕ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.

    35 ವರ್ಷದ ಆರೋಪಿ ದೀಪಿಕಾ ಗುಜ್ಜಾರ್ ಈ ಕೃತ್ಯವೆಸೆಗಿದ್ದಾರೆ. ಈ ಘಟನೆಯೂ ಭಾನುವಾರ ನಡೆದಿದ್ದು, ತಾಯಿಯೇ ಆರೋಪಿ ಎನ್ನುವುದು ಮಂಗಳವಾರ ತಿಳಿದಿದೆ. ಭಾನುವಾರ ರಾತ್ರಿ ಪತಿ ಹಾಗೂ ಮಗುವಿನ ಜೊತೆ ಮನೆಯ ಎರಡನೇ ಮಹಡಿಯಲ್ಲಿ ಆರೋಪಿ ಮಲಗಿದ್ದಳು. ಆದೇನಾಯ್ತೋ ಗೊತ್ತಿಲ್ಲ. ರಾತ್ರಿ ನಿದ್ದೆಯಿಂದ ಎದ್ದ ಮಹಿಳೆ ಮಗುವನ್ನು ಎತ್ತುಕೊಂಡು ಹೋಗಿ ಎರಡನೇ ಮಹಡಿಯಯಲ್ಲಿರುವ ನೀರಿನ ಟ್ಯಾಂಕ್‍ನಲ್ಲಿ ಮುಳುಗಿಸಿ, ತನ್ನ ಪಾಡಿಗೆ ವಾಪಸ್ ಬಂದು ಮಲಗಿದ್ದಾಳೆ.

    ರಾತ್ರಿ 1.30 ಗಂಟೆ ಸುಮಾರಿಗೆ ಪತಿಗೆ ಎಚ್ಚರವಾದಾಗ ಮಗುವನ್ನು ಕಾಣದೆ ಗಾಬರಿಯಾಗಿದ್ದಾರೆ. ಈ ಬಗೆ ಪತ್ನಿ ಬಳಿ ಕೇಳಿದ್ದಾನೆ. ಆಕೆ ಕೂಡ ನನಗೆ ಗೊತ್ತಿಲ್ಲ ಎಂದಿದ್ದಾಳೆ. ನಂತರ ಮನೆಮಂದಿ ಎಲ್ಲರೂ ಸೇರಿ ರಾತ್ರಿ ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಅಜ್ಜಿಗೆ ನೀರಿನ ಟ್ಯಾಂಕ್‍ನಲ್ಲಿ ಮುಳುಗಿರುವ ಮಗು ಕಾಣಿಸಿದ್ದು, ಮಗುವನ್ನು ರಕ್ಷಿಸುವ ಮುನ್ನವೇ ಕಂದಮ್ಮ ಸಾವನ್ನಪ್ಪಿತ್ತು.

    ಸೀತಾರಾಮ್ ಗುಜ್ಜಾರ್ ಸರ್ಕಾರಿ ಶಾಲಾ ಶಿಕ್ಷಕರಾಗಿದ್ದು, ಆರೋಪಿ ತಾಯಿ ಗೃಹಿಣಿಯಾಗಿದ್ದರು. ಸೀತಾರಾಮ್ ದಂಪತಿ ಮನೆಯಲ್ಲಿ ಪೋಷಕರು ಹಾಗೂ ಅಜ್ಜಿ ಜತೆ ವಾಸವಾಗಿದ್ದರು. ಈ ಕೃತ್ಯದ ಬಗ್ಗೆ ಬೋರೆಖೇಡಾ ಪೊಲೀಸ್ ಠಾಣೆಯಲ್ಲಿ ಪತಿ ದೂರು ದಾಖಲಿಸಿದ್ದರು. ಆಗ ಪೊಲೀಸರು ವಿಚಾರಣೆ ನಡೆಸಿದಾಗ ತಾಯಿಯೇ ಕೊಲೆ ಮಾಡಿರುವುದು ತಿಳಿದು ಬಂದಿದ್ದು, 302ರ ಕಾಯ್ದೆಯ ಅನ್ವಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ತಾಯಿಯೇ ಕೊಲೆ ಮಾಡಿರುವ ಬಗ್ಗೆ ತಿಳಿದ ಬಳಿಕ ಆಕೆಯನ್ನು ಪ್ರಶ್ನಿಸಿದಾಗ ನಿದ್ದೆಯಿಂದ ಎದ್ದಿದ್ದಾಗಲಿ, ಮಗುವನ್ನು ತೆಗೆದುಕೊಂಡು ಹೋಗಿ ನೀರಿನ ಟ್ಯಾಂಕ್‍ನಲ್ಲಿ ಹಾಕಿ ಬಂದ ವಿಚಾರ ನನಗೆ ಗೊತ್ತಾಗಲಿಲ್ಲ ಎಂದು ಹೇಳುತ್ತಿದ್ದಾಳೆ. ಆದರೆ ಈ ಕೃತ್ಯ ಎಸಗಲು ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ.

    ಸದ್ಯ ಈ ಬಗ್ಗೆ ಪೊಲೀಸರು  ತನಿಖೆ ನಡೆಸುತ್ತಿದ್ದು, ಆರೋಪಿಗೆ ಯಾವುದೇ ಮಾನಸಿಕ ಕಾಯಿಲೆ ಇಲ್ಲ ಎಂಬುದು ತಿಳಿದಿದೆ. ಅಲ್ಲದೆ ಈ ಹಿಂದೆ ಮಹಿಳೆಯ ಎರಡು ಮಕ್ಕಳು ಕೂಡ ತೀರಿಹೋಗಿದ್ದರು ಎಂದು ವರದಿಯಾಗಿದೆ.

  • ವೇದಿಕೆಯಲ್ಲಿ ನಿದ್ದೆಗೆ ಜಾರಿದ ಸಚಿವ ರೇವಣ್ಣ

    ವೇದಿಕೆಯಲ್ಲಿ ನಿದ್ದೆಗೆ ಜಾರಿದ ಸಚಿವ ರೇವಣ್ಣ

    ಹಾಸನ: ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಮಾವೇಶದಲ್ಲಿ ತಮ್ಮ ಮಾತನ್ನು ಮುಗಿಸಿ ವೇದಿಕೆಯಲ್ಲಿ ಲೋಕೋಪಯೋಗಿ ಸಚಿವ ರೇವಣ್ಣ ನಿದ್ದೆಗೆ ಜಾರಿದ್ದಾರೆ.

    ಹಾಸನದಲ್ಲಿ ಜೆಡಿಎಸ್ ಸಮಾವೇಶ ನಡೆಯುತ್ತಿದೆ. ಈ ವೇಳೆ ಸಚಿವ ರೇವಣ್ಣ ಅವರು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಬಳಿಕ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತಮ್ಮ ಭಾಷಣವನ್ನು ಶುರುಮಾಡಿದ್ದಾರೆ. ಆದರೆ ತಂದೆಯ ಭಾಷಣದ ವೇಳೆಯು ಸಚಿವ ರೇವಣ್ಣ ನಿದ್ದೆಗೆ ಜಾರಿದ್ದಾರೆ.

    ಕಾಂಗ್ರೆಸ್ ಪಕ್ಷದ ಮಧ್ಯೆ ಸಿಕ್ಕಾಕಿಕೊಂಡ ಕರ್ನಾಟಕ ಸಿಎಂ ಕ್ಲರ್ಕ್ ನಂತಾಗಿದ್ದಾರೆಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಎಚ್‍ಡಿಡಿ, ಮೋದಿ ಬಗ್ಗೆ ಬೆಳಗ್ಗೆಯಿಂದ ಸಂಜೆಯವರೆಗೂ ತಮಾಷೆ ಮಾಡಬೇಡಿ. ಅದೇನು ದೊಡ್ಡ ವಿಷಯವಲ್ಲ ಬಿಟ್ಟಾಕಿ ಎಂದು ಹೇಳಿ ವ್ಯಂಗ್ಯ ಮಾಡಿದ್ದಾರೆ.

    56 ವರ್ಷ ಈ ಜಿಲ್ಲೆಯಲ್ಲಿ ನನ್ನನ್ನ ರಾಜಕೀಯವಾಗಿ ಬೆಳೆಸಿದ್ದೀರಿ. ನನಗೆ ಯಾರೂ ಶತ್ರುಗಳಿಲ್ಲ, ನಾನು ಯಾವುದೇ ಸಮುದಾಯಕ್ಕೆ ಅನ್ಯಾಯ ಮಾಡಿಲ್ಲ. ನಾನು ಯಾರ ಮನಸನ್ನೂ ನೋಯಿಸಿಲ್ಲ. ಅದೇ ರೀತಿ ಪಕ್ಷ ನನ್ನ ಮನೆಯ ಆಸ್ತಿಯಲ್ಲ. ಇದು ಎಲ್ಲರಿಗೂ ಸೇರಿದ ಪಕ್ಷವಾಗಿದೆ. ಕುಮಾರಸ್ವಾಮಿ 38 ಜನರನ್ನ ಕಟ್ಟಿಕೊಂಡು ಸಿಎಂ ಆಗಿದ್ದು, ಅವರ ನೋವೇನು ಎಂದು ನನಗೆ ಗೊತ್ತಿದೆ. ಕಾಂಗ್ರೆಸ್ಸಿನ 78 ಜನರನ್ನ ಕಟ್ಟಿಕೊಂಡು ಸರ್ಕಾರ ನಡೆಸಬೇಕು. ಮೈತ್ರಿ ಸರ್ಕಾರದಲ್ಲಿ ಪಕ್ಷವೂ ಉಳಿಯಬೇಕು ಎಂದು ದೇವೇಗೌಡರು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೊಲೆರೋ ಡಿಕ್ಕಿ- ಕೆಟ್ಟು ನಿಂತ ವಾಹನದಲ್ಲಿ ಮಲಗಿದ್ದವರು ಚಿರನಿದ್ರೆಗೆ ಜಾರಿದ್ರು

    ಬೊಲೆರೋ ಡಿಕ್ಕಿ- ಕೆಟ್ಟು ನಿಂತ ವಾಹನದಲ್ಲಿ ಮಲಗಿದ್ದವರು ಚಿರನಿದ್ರೆಗೆ ಜಾರಿದ್ರು

    ರಾಯಚೂರು: ಎರಡು ಬೊಲೆರೋ ಪಿಕ್ ಅಪ್ ವಾಹನಗಳ ಮಧ್ಯೆ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ಎಲೆಕೂಡ್ಲಿಗಿ ಗ್ರಾಮದ ಬಳಿ ನಡೆದಿದೆ.

    ಲಿಂಗಸುಗೂರಿನ ಎರೆಜಂತಿ ಗ್ರಾಮದ ಮಲ್ಲಪ್ಪ(47) ಮತ್ತು ಲಿಂಗಪ್ಪ(47) ಮೃತ ದುರ್ದೈವಿಗಳು. ಯಾದಗಿರಿಯ ಶಹಪುರದಿಂದ ಹೊರಟಿದ್ದ ವಾಹನ ಸಿಂಧನೂರಿನ ಎಲೆಕೂಡ್ಲಿಗಿ ಗ್ರಾಮದ ಬಳಿ ಕೆಟ್ಟು ನಿಂತಿತ್ತು. ವಾಹನ ರಿಪೇರಿಯಾಗದ ಹಿನ್ನೆಲೆಯಲ್ಲಿ ಈ ಇಬ್ಬರು ವಾಹನದಲ್ಲೇ ಮಲಗಿದ್ದರು. ಲಿಂಗಸೂಗುರು ಕಡೆಯಿಂದ ಬಂದ ಇನ್ನೊಂದು ಬೊಲೆರೋ ವಾಹನ ನಿಂತ ವಾಹನಕ್ಕೆ ಡಿಕ್ಕಿ ಹೊಡೆದಿದೆ.

    ಕೆಟ್ಟು ನಿಂತಿದ್ದ ವಾಹನದಲ್ಲಿ ಮಲಗಿದ್ದವರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ. ಮತ್ತೊಂದು ವಾಹನದಲ್ಲಿದ್ದ ಇಬ್ಬರಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ. ಈ ಸಂಬಂಧ ತುರವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ಮಾತ್ರ ರೈಲ್ವೇ ಪ್ರಯಾಣಿಕರು ನಿದ್ದೆ ಮಾಡ್ಬೇಕು!

    ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ಮಾತ್ರ ರೈಲ್ವೇ ಪ್ರಯಾಣಿಕರು ನಿದ್ದೆ ಮಾಡ್ಬೇಕು!

    ನವದೆಹಲಿ: ಭಾರತೀಯ ರೈಲ್ವೇ ಪ್ರಯಾಣಿಕರ ನಿದ್ದೆಯ ಅವಧಿಯಲ್ಲಿ 1 ಗಂಟೆ ಕಡಿತಗೊಳಿಸಿದ್ದು, ಇನ್ನು ಮುಂದೆ ರಾತ್ರಿ 10 ರಿಂದ  ಬೆಳಗ್ಗೆ 6 ಗಂಟೆಯವರೆಗೆ ಮಾತ್ರ ಮಾಡಬೇಕು.

    ಹೌದು. ಕೆಲ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರಯಾಣಿಕರು 8 ಗಂಟೆ ಮಾತ್ರ ನಿದ್ರಿಸಬೇಕು ಎಂದು ಭಾರತೀಯ ರೈಲ್ವೇ ಅಧಿಕೃತವಾಗಿ ಸುತ್ತೋಲೆ ಹೊರಡಿಸಿದೆ.

    ಈ ಹಿಂದೆ ರಾತ್ರಿ 9 ರಿಂದ 6 ಗಂಟೆಯವರೆಗೆ ರೈಲಿನಲ್ಲಿ ನಿದ್ರೆ ಮಾಡಬಹುದಾಗಿತ್ತು. ಆದರೆ ಮಧ್ಯದ ಸೀಟ್ ನವರು ನಿದ್ದೆ ಮಾಡಿದ್ದರೆ ಕೆಳಗಿನ ಸೀಟ್ ನವರಿಗೆ ಕುಳಿತುಕೊಳ್ಳಲು ಆಗುತ್ತಿರಲಿಲ್ಲ. ಈ ವಿಚಾರದ ಬಗ್ಗೆ ಸಾಕಷ್ಟು ದೂರುಗಳ ಬಂದ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.

    ಈ ಸುತ್ತೋಲೆಯಲ್ಲಿ ಕೆಲವು ಪ್ರಯಾಣಿಕರಿಗೆ ವಿನಾಯಿತಿಯನ್ನು ನೀಡಲಾಗಿದೆ. ಅಂಗವಿಕಲರಿಗೆ, ಅನಾರೋಗ್ಯ ಪೀಡಿತರಿಗೆ ಹಾಗೂ ಗರ್ಭಿಣಿ ಪ್ರಯಾಣಿಕರಿಗೆ ಹೆಚ್ಚಿನ ಸಮಯ ನಿದ್ರಿಸುವ ಅವಕಾಶ ನೀಡಲಾಗಿದೆ.

    ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುವಾಗ ಹೆಚ್ಚಿನ ಸಮಯ ನಿದ್ದೆ ಮಾಡುತ್ತಿದ್ದರು. ಟಿಕೆಟ್ ಇಲ್ಲದೇ ಇದ್ದಲ್ಲಿ ಟಿಟಿಇ ಬಂದಾಗ ಪ್ರುಯಾಣಿಕರು ಕಳ್ಳ ನಿದ್ದೆಗೆ ಜಾರುತ್ತಿದ್ದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

    ಕೆಲವೊಮ್ಮೆ ಪ್ರಯಾಣಿಕರು ಕೆಳಗಿನ ಬರ್ತ್ ಮೇಲೆ ಕುಳಿತು ಪ್ರಯಾಣಿಸುತ್ತಿರುತ್ತಾರೆ. ಅವರ ಜೊತೆ ಬಂದಂತಹ ಸಹ ಪ್ರಯಾಣಿಕರು ಮೇಲಿನ ಮತ್ತು ಮಧ್ಯದ ಬರ್ತ್‍ಗಳ ಮೇಲೆ ಮಲಗಿರುತ್ತಾರೆ. ತಮ್ಮ ನಿಲ್ದಾಣ ಬಂದಾಗ ಹಲವು ಬಾರಿ ಕೆಳಗೆ ಕುಳಿತಿದ್ದ ಪ್ರಯಾಣಿಕರು ತಮ್ಮ ಸಹ ಪ್ರಯಾಣಿಕರನ್ನು ಬಿಟ್ಟು ಹೋಗಿರುವ ಘಟನೆ ನಡೆಯುತ್ತಿರುತ್ತದೆ. ಈ ಎಲ್ಲ ವಿಚಾರಗಳ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ಇವುಗಳನ್ನು ನಿವಾರಿಸಲು ರೈಲಿನ ನಿದ್ದೆಯ ಅವಧಿಯನ್ನು 1 ಗಂಟೆ ಕಡಿತಗೊಳಿಸಲಾಗಿದೆ ಎಂದು ಸಚಿವಾಯಲದ ವಕ್ತಾರ ಅನಿಲ್ ಸಕ್ಸೇನಾ ತಿಳಿಸಿದರು.

  • ಕ್ಲಾಸ್‍ನಲ್ಲಿ ನಿದ್ದೆ ಮಾಡ್ತಿದ್ದ ಟೀಚರ್ ಫೋಟೋ ತೆಗೆದು ಶಿಕ್ಷಣ ಇಲಾಖೆಗೆ ಕಳಿಸ್ದ- ಮುಂದೇನಾಯ್ತು ಅನ್ನೋದು ಶಾಕಿಂಗ್

    ಕ್ಲಾಸ್‍ನಲ್ಲಿ ನಿದ್ದೆ ಮಾಡ್ತಿದ್ದ ಟೀಚರ್ ಫೋಟೋ ತೆಗೆದು ಶಿಕ್ಷಣ ಇಲಾಖೆಗೆ ಕಳಿಸ್ದ- ಮುಂದೇನಾಯ್ತು ಅನ್ನೋದು ಶಾಕಿಂಗ್

    ಹೈದರಾಬಾದ್: 10ನೇ ತರಗತಿ ವಿದ್ಯಾರ್ಥಿಯೊಬ್ಬ ತರಗತಿಯಲ್ಲಿ ನಿದ್ದೆ ಮಾಡ್ತಿದ್ದ ಶಿಕ್ಷಕರ ಫೋಟೋ ತೆಗೆದು ಶಿಕ್ಷಣ ಇಲಾಖೆಗೆ ಕಳಿಸಿದ್ದ. ಆದ್ರೆ ಆತ ಮಾಡಿದ ಈ ಕೆಲಸಕ್ಕೆ ಕಂಬಕ್ಕೆ ಕಟ್ಟಿ ಪೊಲೀಸರು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

    ಇಲ್ಲಿನ ಮಹಬೂಬ್‍ನಗರದಲ್ಲಿ ಶನಿವಾರದಂದು ಈ ಘಟನೆ ನಡೆದಿದೆ. ಬಾಲಕ ತನ್ನ ತರಗತಿಯಲ್ಲಿ ನಿದ್ರಿಸುತ್ತಿದ್ದ ಗಣಿತ ಶಿಕ್ಷಕರ ಫೋಟೋ ಕ್ಲಿಕ್ಕಿಸಿ ಅದನ್ನ ವಾಟ್ಸಪ್‍ನಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಕಳಿಸಿದ್ದ ಎನ್ನಲಾಗಿದೆ. ಬಳಿಕ ಆ ಶಿಕ್ಷಕರನ್ನು ಅಮಾನತು ಮಾಡಲಾಗಿತ್ತು. ಇದರಿಂದ ಕೆರಳಿದ ಶಾಲೆಯ ಇತರೆ ಶಿಕ್ಷಕರು ಶನಿವಾರದಂದು ಪೊಲೀಸರನ್ನ ಸಂಪರ್ಕಿಸಿದ್ದರು.

    ನಾನು ಸ್ನೇಹಿತರ ಜೊತೆ ಕುಳಿತು ತಂಪು ಪಾನೀಯ ಕುಡಿಯುತ್ತಿದ್ದೆ. ಆಗ ನನ್ನನ್ನು ಹಿಡಿದು ಶಾಲೆಯ ಗ್ರೌಂಡ್‍ನಲ್ಲಿರುವ ಕಂಬಕ್ಕೆ ಕಟ್ಟಿ ಥಳಿಸಿದ್ರು. ಇಬ್ಬರು ಪೊಲೀಸರು ಕೋಲಿನಿಂದ ಹೊಡೆಯುತ್ತಿದ್ರೆ ಶಿಕ್ಷಕರು ನಿಂತು ನೋಡ್ತಿದ್ರು ಎಂದು ಬಾಲಕ ಆರೋಪಿಸಿದ್ದಾನೆ. ಬಾಲಕನ ಮೈಮೇಲೆ ಗಾಯಗಳಾಗಿದ್ದು, ತನ್ನ ಸ್ನೇಹಹಿತರು ಹೇಗೋ ಅಲ್ಲಿಂದ ಓಡಿ ಹೋದ್ರು ಎಂದು ಹೇಳಿದ್ದಾನೆ.

    ಆದ್ರೆ ಈ ಆರೋಪವನ್ನ ತಳ್ಳಿಹಾಕಿರೋ ಪೊಲೀಸರು ಆತ ಶಾಲೆಯ ಆವರಣದಲ್ಲಿ ಮದ್ಯಪಾನ ಮಾಡುತ್ತಾ ಸಿಕ್ಕಿಬಿದ್ದಿದ್ದ ಎಂದಿದ್ದಾರೆ.