Tag: ನಿಜಗುಣಾನಂದ ಸ್ವಾಮೀಜಿ

  • ಮಠಾಧೀಶರು, ಪಾದ್ರಿ, ಮೌಲ್ವಿಗಳು ರಾಜಕಾರಣ ಮಾಡಬಾರದು: ನಿಜಗುಣಾನಂದ ಶ್ರೀ ‌

    ಮಠಾಧೀಶರು, ಪಾದ್ರಿ, ಮೌಲ್ವಿಗಳು ರಾಜಕಾರಣ ಮಾಡಬಾರದು: ನಿಜಗುಣಾನಂದ ಶ್ರೀ ‌

    ಧಾರವಾಡ: ಮಠಾಧೀಶರು, ಪಾದ್ರಿಗಳು ಮತ್ತು ಮೌಲ್ವಿಗಳು ರಾಜಕಾರಣ ಮಾಡಬಾರದು ಎಂದು ನಿಜಗುಣಾನಂದ ಸ್ವಾಮೀಜಿ (Nijagunananda Swamiji) ಅಭಿಪ್ರಾಯಪಟ್ಟರು.

    ಡಿ.ಕೆ.ಶಿವಕುಮಾರ್‌ ಸಿಎಂ ಆಗಲಿ ಎಂದು ನೊಣವಿನಕೆರೆ ಸ್ವಾಮೀಜಿ ಹೇಳಿಕೆ ಕೊಟ್ಟ ವಿಚಾರವಾಗಿ ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಸ್ವಾಮೀಜಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಧಾರವಾಡದಲ್ಲಿ ಮಾತನಾಡಿರುವ ಅವರು, ಸ್ವಾಮೀಜಿಗಳು ರಾಜಕೀಯದಿಂದ ಹೊರತಾಗಿರಬೇಕು. ನಮ್ಮದೇನಿದ್ದರೂ ಧರ್ಮ, ಸಂಸ್ಕತಿ, ಸಂಸ್ಕಾರದ ವಿಚಾರಧಾರೆಗಳಿರಬೇಕು. ಈಗ ಎಲ್ಲ ಸಮುದಾಯಗಳು ಸಂಕೀರ್ಣದಿಂದ ಹೊರಗೆ ಬಂದಿವೆ ಎಂದರು‌. ಇದನ್ನೂ ಓದಿ: ಯತ್ನಾಳ್‍ರಿಂದ ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ: ಎಂ.ಬಿ ಪಾಟೀಲ್

    ಮಠಾಧೀಶರು ರಾಜಕಾರಣದಲ್ಲಿದ್ದಾರೆ ಎಂಬ ವಿಚಾರ ಒಂದು ಕಡೆ ಆದರೆ, ಮಾಧ್ಯಮಗಳೂ ಸಹ ರಾಜಕಾರಣದ ವರ್ಗದಲ್ಲಿವೆ. ಅವುಗಳು ಕೂಡ ರಾಜಕಾರಣ ಹೊರತುಪಡಿಸಿ ನಿಂತಿಲ್ಲ. ಒಂದೊಂದು ಚಾನೆಲ್‌ಗಳು ಒಬ್ಬೊಬ್ಬ ರಾಜಕಾರಣಿಯನ್ನು ವೈಭವೀಕರಿಸಿದರೆ, ಕೆಲ ಚಾನೆಲ್‌ಗಳು ಮತ್ತು ರಾಜಕಾರಣಿಗಳನ್ನು ನಿರಾಕರಿಸುತ್ತವೆ. ಈಗ ಮಾಧ್ಯಮ ಮತ್ತು ಸ್ವಾಮೀಜಿಗಳ ಇಬ್ಬರ ಪಾತ್ರವೂ ಸೋಲುತ್ತಿದೆ. ಸಮಾಜದಲ್ಲಿ ಎಲ್ಲವೂ ಸಮತೋಲನ ತಪ್ಪಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಮಠಾಧೀಶರು ರಾಜಕಾರಣದಲ್ಲಿ ಬರಬಾರದು ಎನ್ನುವುದು ಸತ್ಯ, ಧರ್ಮ, ರಾಜಕಾರಣದಲ್ಲಿ ಪ್ರವೇಶ ಮಾಡಬಾರದು. ಕೇವಲ ಲಿಂಗಾಯತ ಸ್ವಾಮೀಜಿಗಳು ಮಾತ್ರವಲ್ಲ ಮೌಲ್ವಿ, ಪಾದ್ರಿಗಳೂ ಕೂಡ ರಾಜಕಾರಣದಲ್ಲಿ ಪ್ರವೇಶ ಆಗಬಾರದು. ಯಾವ ಧರ್ಮದ ನೇತಾರರೂ ರಾಜಕಾರಣ ಪ್ರವೇಶ ಮಾಡಬಾರದು. ರಾಜಕಾರಣಿಗಳಿಗೆ ಸ್ವಾಮೀಜಿಗಳು ಬುದ್ಧಿ ಹೇಳಬಹುದು, ಮಾರ್ಗದರ್ಶನ ಮಾಡಬಹುದು, ಒಬ್ಬ ಸ್ವಾಮೀಜಿಯನ್ನು ಬಳಸಿಕೊಳ್ಳುವಾಗ ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು. ಅವರನ್ನು ಧಾರ್ಮಿಕ ಕಾರ್ಯಕ್ಕೆ ಮಾತ್ರವೇ ಬಳಸಿಕೊಳ್ಳಬೇಕು. ರಾಜಕಾರಣಿಗಳು ಸ್ವಾಮೀಜಿಗಳನ್ನು ಬೇರೆ ಕೆಲಸಕ್ಕೆ ಬಳಸುವಾಗ ಸ್ವಾಮೀಜಿಗಳೂ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಡಿಕೆ ಶಿವಕುಮಾರ್‌ ಸಿಎಂ ಆಗ್ತಾರೆ – ಶಿವ ಯೋಗೇಶ್ವರ ಸ್ವಾಮೀಜಿ ಭವಿಷ್ಯ

    ಮಠಗಳಿಗೆ ಅನುದಾನ ಬಿಡುಗಡೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಪೂರ್ವದಲ್ಲಿ ಪ್ರಭು ಪರಂಪರೆ ಇತ್ತು. ಆಗ ಮಹಾರಾಜರು ಎಲ್ಲರನ್ನೂ ಸಲಹುತ್ತಿದ್ದರು. ಮಠಗಳಲ್ಲಿ ಶೈಕ್ಷಣಿಕ ಸಂಸ್ಥೆ, ಉಚಿತ ಪ್ರಸಾದ ನಿಲಯ, ಅನಾಥ ಮಕ್ಕಳು ಇರುತ್ತಾರೆ. ಸಾವಿರಾರೂ ಪುಸ್ತಕ ಪ್ರಕಟಿಸಬೇಕಿರುತ್ತದೆ. ರಾಜಾಶ್ರಯ ಕಳೆದುಕೊಂಡ ಸಂಗೀತಗಾರರಿಗೆ ಮಠಗಳೇ ಆಶ್ರಯ ಆಗಿರುತ್ತವೆ. ಅನೇಕ ಜನರಿಗೆ ಮಠಗಳು ಅವಕಾಶ ಕಲ್ಪಿಸಿಕೊಡಬೇಕಿರುತ್ತದೆ. ಮಠಗಳಿಗೆ ಬರುವ ಅನುದಾನ ಪ್ರಜಾಪ್ರಭುತ್ವದ ತೆರಿಗೆ ಹಣವೇ ಆಗಿರುತ್ತದೆ. ಆದರೂ ಸಹ ಮಠದ ಸೇವೆ ಸಂಪೂರ್ಣ ಪ್ರಜೆಗಳಿಗೆ ಸಲ್ಲುತ್ತದೆ. ಹೀಗಾಗಿ ಸರ್ಕಾರ ಅನುದಾನ ಕೊಡಬೇಕಾಗುತ್ತದೆ ಎಂದು ಹೇಳಿದರು.

  • ನಿಜಗುಣಾನಂದ ಸ್ವಾಮೀಜಿಯ ನಾಲಿಗೆ ಶುದ್ಧವಿಲ್ಲ: ಬಸವರಾಜದೇವರು ಸ್ವಾಮೀಜಿ ತಿರುಗೇಟು

    ನಿಜಗುಣಾನಂದ ಸ್ವಾಮೀಜಿಯ ನಾಲಿಗೆ ಶುದ್ಧವಿಲ್ಲ: ಬಸವರಾಜದೇವರು ಸ್ವಾಮೀಜಿ ತಿರುಗೇಟು

    ಬಾಗಲಕೋಟೆ: ಮುಂಡರಗಿ ಮಠದ ನಿಜಗುಣಾನಂದ ಸ್ವಾಮೀಜಿಯವರ ನಾಲಿಗೆ ಶುದ್ಧವಿಲ್ಲ. ತಾವು ಉಣ್ಣುವ ಅನ್ನಕ್ಕೆ ಮಹಾದ್ರೋಹ ಮಾಡಿದ್ದಾರೆ ಎಂದು ರೇವಣಸಿದ್ಧೇಶ್ವರ ಮಠದ ಬಸವರಾಜು ಸ್ವಾಮೀಜಿ ವಾಟ್ಸಪ್ ಮೂಲಕ ತಿರುಗೇಟು ನೀಡಿದ್ದಾರೆ.

    ರಾಜ್ಯದಲ್ಲಿ ರೈತರು ಸಾಲದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರು ಮೋಜು ಮಸ್ತಿಗಾಗಿ ಸಾಲ ಮಾಡಿಕೊಂಡಿದ್ದಾರೆ ಎಂದು ಹೇಳುವ ಮೂಲಕ ಇಡೀ ರೈತ ಸಮಾಜಕ್ಕೆ ನಿಜಗುಣಾನಂದ ಸ್ವಾಮೀಜಿಯವರಯ ಅವಮಾನ ಮಾಡಿದ್ದಾರೆ. ಆಚಾರಶೀಲರಾಗಿ, ಧಾರ್ಮಿಕ ಮುಖಂಡರಾಗಿ ಈ ರೀತಿ ಮಾತಾಡೋದು ಮಹಾಪರಾಧ ಆಗುತ್ತದೆ ಅಂದ್ರು.

    ಸಾಲಮನ್ನಾ ವಿಚಾರ ರಾಜ್ಯದಲ್ಲಿ ಗಂಭೀರವಾಗಿ ಚರ್ಚೆಯಾಗುತ್ತಿದೆ. ರೈತರು, ಮಹಿಳೆಯರ, ಬಡವರ ಕಷ್ಟಗಳ ಬಗ್ಗೆ ಸ್ವಾಮೀಜಿಗಳಿಗೆ ಅರಿವು ಇರಬೇಕಾಗುತ್ತದೆ. ನಿಜಗುಣಾನಂದ ಶ್ರೀಗಳು ಬಸವಧರ್ಮೀಯರು ಆಗಿದ್ದು, ಅವರ ಹೇಳಿಕೆ ಬಸವಧರ್ಮಕ್ಕೆ ವಿರೋಧವಾದದ್ದು ಅಂತಾ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

    ನಿಜಗುಣಾನಂದ ಸ್ವಾಮೀಜಿ ಹೇಳಿದ್ದೇನು?:
    `ದೇವರು ಬಹಳ ಡೇಂಜರ್ ಅದಾನ. ನಾಲ್ಕು ಪ್ಯಾಂಟ್-ಶರ್ಟ್, 1 ರೊಟ್ಟಿ, ಒಂದಿಷ್ಟು ಲೋಟಾ ಹಾಲು, ಮಲಗೋಕೆ ಅರ್ಧ ಮಂಚ ಈ ಕಡೆ ತಿರುಗಿದ್ರೆ ಆ ಕಡೆಯಿಲ್ಲ ಎಲ್ಲಾ ದೇವರು ಕೊಟ್ಟಿದ್ದಾನೆ. 60 ವರ್ಷ ಆದ್ಮೇಲೆ ಶುಗರ್, ಬಿಪಿ ಬರುತ್ತೆ. ರೈತ ನಿನಗೆ ಸಾಲ ಯಾಕೆ ಬಂತು? ಇಸ್ಪೀಟ್ ಆಡೋದ್ರಿಂದ ಸಾಲ ಬಂತು, ವ್ಯಸನದಿಂದ ಸಾಲ ಬಂತು, ದೊಡ್ಡಸ್ಥನದಿಂದ ಸಾಲು ಬಂತು. ನಿನ್ನ ಸುಖಕ್ಕಾಗಿ ನೀನು ಸಾಲ ಮಾಡಿ ಈಗ ನೀನು ಉರುಳು ಹಾಕೊಂಡ್ರೆ ನಾನೇನು ಮಾಡಲಿ. ಅಷ್ಟೆ ಅಲ್ಲದೆ, ದೇವರು ಎಲ್ಲಾ ಕಷ್ಟಕ್ಕೂ ಪರಿಹಾರ ಕೊಡುವುದಾದರೆ ರೈತರ ಸಾಲಮನ್ನಾಕ್ಕೂ ಪರಿಹಾರ ಕೊಡ್ಲಿ ನೋಡೋಣ. ಒಟ್ಟಿನಲ್ಲಿ ಹಿತಮಿತ ಜೀವನವಿರಲಿ ಎಂಬ ಸಲಹೆ ನೀಡಿ ಪರೋಕ್ಷವಾಗಿ ಸಾಲಮನ್ನಾವನ್ನು ವಿರೋಧಿಸಿದ್ದರು.

  • ಬಿಎಸ್‍ವೈ, ಶೆಟ್ಟರ್ ಚುನಾವಣೆಯಲ್ಲಿ ಲಿಂಗಾಯತರಲ್ಲ ಎಂದು ಹೇಳಿಕೊಳ್ಳಲಿ: ನಿಜಗುಣಾನಂದ ಸ್ವಾಮೀಜಿ

    ಬಿಎಸ್‍ವೈ, ಶೆಟ್ಟರ್ ಚುನಾವಣೆಯಲ್ಲಿ ಲಿಂಗಾಯತರಲ್ಲ ಎಂದು ಹೇಳಿಕೊಳ್ಳಲಿ: ನಿಜಗುಣಾನಂದ ಸ್ವಾಮೀಜಿ

    – ಪೇಜಾವರ ಶ್ರೀ ಲಿಂಗಾಯತ ಧರ್ಮಕ್ಕೆ ಮಾರ್ಗದರ್ಶನ ಮಾಡೋದು ಬೇಡ ಎಂದ ಸ್ವಾಮೀಜಿ

    ಧಾರವಾಡ: ಅಧಿಕಾರಕ್ಕೊಸ್ಕರ ನಾನು ಲಿಂಗಾಯತ ಎಂದು ಹೇಳಿಕೊಳ್ಳುತ್ತಿರುವ ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್ ಮುಂದಿನ ಚುನಾವಣೆಯಲ್ಲಿ ನಾವು ಲಿಂಗಾಯತರಲ್ಲ ಎಂದು ಚುನಾವಣೆಗೆ ಹೋಗಲಿ ನೋಡೋಣ ಎಂದು ಧಾರವಾಡದ ಮುಂಡರಗಿ ಬೈಲೂರು ಮಠದ ನಿಜಗುಣಾನಂದ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

    ಲಿಂಗಾಯತರಾಗಿ ಅಧಿಕಾರವನ್ನು ಪಡೆದುಕೊಂಡಿರುವ ಯಡಿಯೂರಪ್ಪ ಅವರಾಗಲೀ, ಜಗದೀಶ್ ಶೆಟ್ಟರ್ ಅವರಾಗಲೀ ಲಿಂಗಾಯತ ಎಂಬ ಹೆಸರಿನ ಮೇಲೆ ನೀವು ಅಧಿಕಾರವನ್ನು ಅನುಭವಿಸಿರುವಂತವರು. ನೀವು ಲಿಂಗಾಯತ ಧರ್ಮಕ್ಕೆ ನ್ಯಾಯ ಕೊಡಿ. ಇಲ್ಲವಾದರೆ ನೀವು ಮುಂದಿನ ಸಲ ಚುನಾವಣೆಗೆ ನಿಲ್ಲುವಾಗ ಲಿಂಗಾಯತರಲ್ಲ ಎಂದು ಚುನಾವಣೆಗೆ ಹೋಗಿ ಎಂದು ಸ್ವಾಮೀಜಿ ಹೇಳಿದ್ದಾರೆ.

    ಇದೇ ವೇಳೆ ಪೇಜಾವರ ಶ್ರೀ ಹೇಳಿಕೆಗೆ ಪ್ರತಿಕ್ರಿಯಿಸಿದ ಸ್ವಾಮೀಜಿ, ಈ ದೇಶದಲ್ಲಿ ಹಿಂದೂ ಧರ್ಮವೇ ಇಲ್ಲ ಎಂದು ಪೂಜ್ಯರು ತಿಳಿದುಕೊಳ್ಳಲಿ. ಪೇಜಾವರ ಶ್ರೀಗಳು ಒಂದು ಮತಕ್ಕೆ ಸೇರಿದವರು. ಅವರ ಸಮಾಜವನ್ನು ಬೆಳೆಸುವುದು ಅವರ ಕರ್ತವ್ಯ. ಆದರೆ ಎಲ್ಲದಕ್ಕೂ ನಾವೇ ಎಂದು ಹೇಳಿಕೊಳ್ಳೋದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದ್ರು.

    ಮಾರ್ಗದರ್ಶನ ಬೇಡ: ಪೇಜಾವರ ಶ್ರೀಗಳು ನಮ್ಮ ಲಿಂಗಾಯತ ಧರ್ಮಕ್ಕೆ ಮಾರ್ಗದರ್ಶನ ಮಾಡೊದು ಬೇಡ. ಶ್ರೀಗಳು ತಮ್ಮ ಧರ್ಮವನ್ನ ಬೆಳೆಸೋದು ಅವರ ಕರ್ತವ್ಯ. ಆದರೆ ಎಲ್ಲ ಸಮಾಜಗಳ ನೇತಾರ ಎಂದು ಪ್ರತಿಬಿಂಬಿಸುವುದು ಮಹಾಪರಾಧ. ನಮಗೆ ಇಲ್ಲಿ ಚಾತುವರ್ಣದ ಮನಸ್ಸು ಎದ್ದು ಕಾಣುತ್ತಿದೆ. ಅವರ ಮಾರ್ಗದರ್ಶನ ನಮಗೆ ಬೇಡ. ನಮ್ಮ ಸಮಾಜದಲ್ಲಿ 3000 ವಿರಕ್ತ ಸ್ವಾಮೀಜಿಗಳಿದ್ದಾರೆ. ನಮಗೆ ಸಹಾಯ ಮಾಡಬೇಕಾದರೆ ಸರ್ಕಾರಕ್ಕೆ ಸ್ವತಂತ್ರ ಧರ್ಮದ ಬಗ್ಗೆ ಒತ್ತಾಯ ಮಾಡಲಿ ಎಂದು ತಿರುಗೇಟು ನೀಡಿದರು.

    ಹೋರಾಟಕ್ಕೆ ಬೆಂಬಲ ನೀಡಲಿ: ಲಿಂಗಾಯತ ಧರ್ಮಕ್ಕೆ ತನ್ನದೇ ಆದ ಸಿದ್ಧಾಂತ ಇದೆ. ಪೇಜಾವರ ಶ್ರೀಗಳು ಲಿಂಗಾಯತ ಹೋರಾಟಕ್ಕೆ ಅವಶ್ಯಕತೆ ಇಲ್ಲ. ಪೇಜಾವರ ಶ್ರೀಗಳು ಗೊಂದಲದಲ್ಲಿ ಇದ್ದಾರೆ. ಅವರು ನಡುವೆ ಮೂಗು ತೂರಿಸೋದು ಬಿಟ್ಟು ಹೋರಾಟಕ್ಕೆ ಬೆಂಬಲ ನೀಡಲಿ. ಸಾಮಾಜಿಕ ವ್ಯವಸ್ಥೆಯಲ್ಲಿ ಮಾರ್ಗದರ್ಶನ ನೀಡಲಿ. ಇಲ್ಲ ಅಂದ್ರೆ ಅವರು ಈ ರೀತಿಯ ಹೇಳಿಕೆಯನ್ನು ನೀಡೋದು ಬಿಡಲಿ. ನಮಗೆ ಅವರ ಮಾರ್ಗದರ್ಶನದ ಅವಶ್ಯಕತೆ ಇಲ್ಲ. ಗೊತ್ತಿದ್ರೂ ಗೊತ್ತಿಲ್ಲದಂತೆ ಇರೋದು ಬೇಡ ಅಂತ ನಿಜಗುಣಾನಂದ ಸ್ವಾಮೀಜಿ ಹೇಳಿದ್ರು.

    ಮಂಗಳವಾರದಂದು ಪೇಜಾವರ ಶ್ರೀ ಲಿಂಗಾಯತ ಮತ್ತು ವೀರಶೈವ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದರು. ವಿವಾದ ತಾರಕಕ್ಕೇರಿದೆ, ಆದರೆ ಲಿಂಗಾಯತರೇಕೆ ಹಿಂದೂಗಳಲ್ಲ? ನಾವು ಒಂದಾಗಿ ಇರುವುದು ಉತ್ತಮ. ಹಿಂದೂ ಧರ್ಮದೊಳಗೆ ನೀವು ಜೊತೆಗಿದ್ದರೆ ಲಿಂಗಾಯತ ಸಮಾಜಕ್ಕೆ ಹೆಚ್ಚಿನ ಬಲ ಬರುತ್ತದೆ. ಶಿವನೇ ಸರ್ವೋತ್ತಮ ಎನ್ನುವ ನೀವು ಪಂಚಾಕ್ಷರಿ ಜಪ, ಲಿಂಗಪೂಜೆ ಮಾಡುವುದರಿಂದ, ಇದನ್ನು ಒಪ್ಪಿರುವುದರಿಂದ ನೀವು ಬೇರೆಯಾಗುವುದು ಹೇಗೆ ಎಂದು ಪ್ರಶ್ನಿಸಿದ್ದರು.

    ಹಿಂದೂಗಳಲ್ಲ ಅನ್ನೋದು ಹೇಗೆ? ಏಕ ದೇವತಾವಾದ ಎಲ್ಲರೂ ಒಪ್ಪಿದ್ದಾರೆ. ಎಲ್ಲಾ ಹಿಂದೂಗಳು ಶಿವನನ್ನು ಆರಾಧಿಸುತ್ತಾರೆ. ಹಾಗಾದ್ರೆ ಹಿಂದೂಗಳು ಯಾರು? ನನಗೆ ಉತ್ತರ ಕೊಡಿ. ನಮ್ಮನ್ನು ಬಿಟ್ಟು ನೀವು ದೂರ ಹೋಗದಿರಿ. ನೀವು ನನ್ನ ಸಹೋದರರಿದ್ದಂತೆ. ನಾನು ಸಲಹೆ ಕೊಡುತ್ತೇನೆ ಎಂದು ಪೇಜಾವರ ಶ್ರೀ ಹೇಳಿದ್ದರು. ಬಸವಣ್ಣನವರ ದುರಂತಕ್ಕೆ ಬ್ರಾಹ್ಮಣರು ಕಾರಣರಲ್ಲ. ಈ ವಾದವೂ ಸರಿಯಲ್ಲ. ಹಳೇ ಕಾಲದ ತಪ್ಪಿಗೆ ಈಗಿನವರ ಮೇಲೆ ಆರೋಪ ಎಷ್ಟು ಸರಿ? ಮಾಧ್ವರಿಂದ ಬಸವಣ್ಣರಿಗೆ ಏನೂ ಅನ್ಯಾಯವಾಗಿಲ್ಲ. ನನ್ನದಿದು ಪ್ರೇಮದ ಸಲಹೆ. ಹಿಂದೂ ಧರ್ಮ ಬಿಟ್ಟು ಹೋಗಬೇಡಿ ಎಂದು ಹೇಳಿದ್ದರು.