Tag: ನಿಖಿಲ್ ಎಲ್ಲಿದಿಯಪ್ಪ

  • ಚಿದಂಬರಂ ಎಲ್ಲಿದ್ದೀರಪ್ಪಾ – ಮಾಳವಿಕಾ ಅವಿನಾಶ್ ಪ್ರಶ್ನೆ

    ಚಿದಂಬರಂ ಎಲ್ಲಿದ್ದೀರಪ್ಪಾ – ಮಾಳವಿಕಾ ಅವಿನಾಶ್ ಪ್ರಶ್ನೆ

    ಬೆಂಗಳೂರು: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ‘ನಿಖಿಲ್ ಎಲ್ಲಿದಿಯಪ್ಪ’ ಘೋಷಣೆ ಭಾರೀ ಸುದ್ದಿ ಮಾಡಿತ್ತು. ಈಗ ಕೇಂದ್ರದ ಮಾಜಿ ಸಚಿವ ಚಿದಂಬರಂ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿಯವರು ಚಿದಂಬರಂ ಎಲ್ಲಿದ್ದೀರಪ್ಪ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

    ಬಿಜೆಪಿ ವಕ್ತಾರೆ ಮಾಳವಿಕಾ ಅವಿನಾಶ್ ಸಹ ಈ ಕುರಿತು ಟ್ವೀಟ್ ಮಾಡಿದ್ದು,’ಚಿದಂಬರ ರಹಸ್ಯ’ವನ್ನು ಬೇಧಿಸುವವರಾರು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ನಿಖಿಲ್ ಎಲ್ಲಿದ್ದೀಯಪ್ಪಾ ಎಂದು ಕೇಳಿದಂತೆ ಹ್ಯಾಶ್ ಟ್ಯಾಗ್ ಹಾಕಿ ‘ಚಿದಂಬರಂ ಎಲ್ಲಿದ್ದೀರಪ್ಪ’ ಎಂದು ಪ್ರಶ್ನಿಸಿದ್ದಾರೆ.

    ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಿಖಿಲ್ ಎಲ್ಲಿದಿಯಪ್ಪಾ ಎಂಬ ಘೋಷಣೆ ಸಾಕಷ್ಟು ಟ್ರೋಲ್ ಆಗಿತ್ತು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಅಂಬರೀಷ್ ವಿರುದ್ಧ ಸ್ಪರ್ಧಿಸಿದ್ದರು. ಆಗ ಕುಮಾರಸ್ವಾಮಿ ಅಥವಾ ನಿಖಿಲ್ ಅವರ ಪ್ರತಿ ವಿಷಯಕ್ಕೂ ನಿಖಿಲ್ ಎಲ್ಲಿದ್ದೀಯಪ್ಪಾ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿದ್ದರು. ಇದನ್ನು ಓದಿ: ಚಿದಂಬರಂಗಿಲ್ಲ ರಿಲೀಫ್ – ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಕಾರ

    ಇದೀಗ ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು ಬಂಧನ ಭೀತಿಯಿಂದ ಕಾಣೆಯಾಗಿದ್ದಾರೆ. ಮಂಗಳವಾರದಿಂದಲೂ ಸಹ ಚಿದಂಬರಂ ಅವರು ತಮ್ಮ ಮನೆಗೆ ಆಗಮಿಸಿಲ್ಲ. ಹೀಗಾಗಿ ಇಡಿ ಹಾಗೂ ಸಿಬಿಐ ಅದಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಚಿದಂಬರಂ ಕಾಣೆಯಾಗಿದ್ದನ್ನು ಸಹ ಇದೀಗ ಅದೇ ಧಾಟಿಯಲ್ಲಿ ಟ್ರೋಲ್ ಮಾಡಲಾಗುತ್ತಿದೆ.

    ದೆಹಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಸಹ ಬಂಧನದಿಂದ ರಕ್ಷಣೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಈ ಮೂಲಕ ಚಿದಂಬರಂ ಅವರಿಗೆ ಭಾರೀ ಹಿನ್ನಡೆಯಾದಂತಾಗಿದೆ.

    ಬಂಧನದಿಂದ ರಕ್ಷಣೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರಿಗೆ ಕಳುಹಿಸುತ್ತೇವೆ ಅವರೇ ಆದೇಶ ಪ್ರಕಟಿಸುತ್ತಾರೆ ಎಂದು ನ್ಯಾಯಮೂರ್ತಿ ಎನ್.ವಿ.ರಮಣ್, ಎಂ.ಶಾಂತನಗೌಡರ್ ಹಾಗೂ ಅಜಯ್ ರಸ್ಟೋಗಿ ಅವರಿದ್ದ ಪೀಠ ಇಂದು ತಿಳಿಸಿದೆ.

    ಸಿಬಿಐ ಅಧಿಕಾರಿಗಳು ಮಂಗಳವಾರ ಮಧ್ಯ ರಾತ್ರಿಯೇ ನೋಟಿಸ್ ನೀಡಿದ್ದು, ಇದೀಗ ಜಾರಿ ನಿರ್ದೇಶನಾಲಯ ಲುಕೌಟ್ ನೋಟಿಸ್ ಜಾರಿ ಮಾಡಿದೆ. ಮಾತ್ರವಲ್ಲದೆ ಸಿಬಿಐ ಅಧಿಕಾರಿಗಳು ಸಹ ಚಿದಂಬರಂ ಅವರ ಮನೆಗೆ ಮೂರು ಬಾರಿ ಭೇಟಿ ನೀಡಿದ್ದಾರೆ. ಆದರೆ ಚಿದಂಬರಂ ಅವರು ಮನೆಯಲ್ಲಿರಲಿಲ್ಲ, ಎಲ್ಲಿ ಹೋಗಿದ್ದಾರೆ ಎಂಬುದು ತಿಳಿದಿಲ್ಲ. ಮಂಗಳವಾರ ಹೈ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ ನಂತರ ಚಿಂದಂಬರಂ ಅವರು ಕಾಣೆಯಾಗಿದ್ದಾರೆ. ಹೀಗಾಗಿ ಇಡಿ ಹಾಗೂ ಸಿಬಿಐ ಅಧಿಕಾರಿಗಳು ಚಿದಂಬರಂ ಅವರ ಮನೆಗೆ ಮೇಲಿಂದ ಮೇಲೆ ಭೇಟಿ ನೀಡುತ್ತಿದ್ದಾರೆ.

    ನೋಟಿಸಿನಲ್ಲಿ 2 ಗಂಟೆಯ ಒಳಗಡೆ ವಿಚಾರಣೆಗೆ ಹಾಜರಾಗಬೇಕೆಂದು ತಿಳಿಸಿದ್ದನ್ನು ಪ್ರಶ್ನೆ ಮಾಡಿರುವ ಚಿದಂಬರಂ ಪರ ವಕೀಲ ಅರ್ಶದೀಪ್ ಸಿಂಗ್ ಖುರಾನ, ನನ್ನ ಕಕ್ಷಿದಾರರು 2 ಗಂಟೆಯ ಒಳಗಡೆ ವಿಚಾರಣೆ ಹಾಜರಾಗಬೇಕೆಂದು ನೋಟಿಸಿನಲ್ಲಿ ಉಲ್ಲೇಖಿಸಿದ್ದೀರಿ. 2 ಗಂಟೆಯ ಒಳಗಡೆ ವಿಚಾರಣೆಗೆ ಹಾಜರಾಗಬೇಕೆಂದು ಕಾನೂನಿನ ಯಾವ ನಿಬಂಧನೆ ಅಡಿ ಇದೆ ಎಂದು ಪ್ರಶ್ನೆ ಮಾಡಿದ್ದರು.

  • ನಿಖಿಲ್ ಎಲ್ಲಿದ್ದೀಯಪ್ಪ ಎಂಬ ಪ್ರಶ್ನೆಗೆ ಕೊನೆಗೂ ಉತ್ತರಿಸಿದ ಸಿಎಂ ಕುಮಾರಸ್ವಾಮಿ

    ನಿಖಿಲ್ ಎಲ್ಲಿದ್ದೀಯಪ್ಪ ಎಂಬ ಪ್ರಶ್ನೆಗೆ ಕೊನೆಗೂ ಉತ್ತರಿಸಿದ ಸಿಎಂ ಕುಮಾರಸ್ವಾಮಿ

    ಮಂಡ್ಯ: ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಟ್ರೋಲ್ ಆಗುತ್ತಿರುವ ನಿಖಿಲ್ ಎಲ್ಲಿದ್ದೀಯಪ್ಪ ಪ್ರಶ್ನೆಗೆ ಸಿಎಂ ಎಚ್.ಡಿ ಕುಮಾರಸ್ವಾಮಿ ಕೊನೆಗೂ ಉತ್ತರ ನೀಡಿದ್ದಾರೆ.

    ಕೆಆರ್ ನಗರದ ನಾರಾಯಣಪುರ ಗ್ರಾಮದಲ್ಲಿರುವ ಯುವಕರ ಬಳಿ ಸಿಎಂ ಕುಮಾರಸ್ವಾಮಿ ಈ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಒಂದು ತಂಡ ಇದೆ. ಕೆಟ್ಟ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ. ಈ ರೀತಿಯ ಕೆಟ್ಟ ಅಭಿರುಚಿ ಇಟ್ಟುಕೊಂಡು ಸಮಾಜವನ್ನು ಹಾಳು ಮಾಡುತ್ತಿದ್ದಾರೆ. ಇಂತಹವರ ಬಗ್ಗೆ ನಾವು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಸಿಎಂ ಹೇಳಿದರು.

    ಈ ವೇಳೆ ನಿಖಿಲ್ ಎಲ್ಲಿದ್ದೀಯಪ್ಪ, ನಿಖಿಲ್ ಎಲ್ಲಿದ್ದೀಯಪ್ಪ ಎಂದು ಬಹಳ ಚರ್ಚೆ ಆಗುತ್ತಿದೆ ಈ ಬಗ್ಗೆ ಸ್ವಲ್ಪ ಮಾತನಾಡಿ ಎಂದು ಯುವಕರು ಸಿಎಂ ಬಳಿ ಕೇಳಿಕೊಂಡರು. ಈ ವೇಳೆ ಸಿಎಂ, ಯುವಕರು ಈ ಟ್ರೋಲ್‍ಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಆ ಟ್ರೋಲ್ ಮಾಡುವರು ಯಾರೋ? ನಿಖಿಲ್ ಎಲ್ಲಿದ್ದೀಯಪ್ಪ ಎಂದರೆ ಅವನು ನಮ್ಮ ಹೃದಯದಲ್ಲಿ ಇದ್ದಾನೆ ಎನ್ನಬೇಕು ಎಂದು ಹೇಳಿದರು.

    ‘ಜಾಗ್ವಾರ್’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕುಮಾರಸ್ವಾಮಿ ಅವರು ನಿಖಿಲ್ ಅವರನ್ನು ಉಲ್ಲೇಖಿಸಿ `ನಿಖಿಲ್ ಎಲ್ಲಿದ್ದೀಯಪ್ಪ’ ಎಂದು ಕೇಳಿದ್ದರು. ಆ ಬಳಿಕ ಈ ಡೈಲಾಗ್ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೂಪಗಳಲ್ಲಿ ಹರಿದಾಡುತ್ತಿದೆ.