Tag: ನಾಸಾ

  • ಹೀಲಿಯೋಸ್ಪಿಯರ್ ಅಧ್ಯಯನಕ್ಕೆ ಮುಂದಾದ ನಾಸಾ – ಏನಿದು IMAP ಮಿಷನ್?

    ಹೀಲಿಯೋಸ್ಪಿಯರ್ ಅಧ್ಯಯನಕ್ಕೆ ಮುಂದಾದ ನಾಸಾ – ಏನಿದು IMAP ಮಿಷನ್?

    ಭೂಮಿಯ ಮೇಲಿರುವ ನಾವು ದಿನನಿತ್ಯ ಸೂರ್ಯನ ಬೆಳಕಿನೊಂದಿಗೆ ನಮ್ಮ ದಿನವನ್ನ ಪ್ರಾರಂಭಿಸುತ್ತೇವೆ. ಆ ಸೂರ್ಯನಿಲ್ಲದೆ ಬದುಕನ್ನ ಊಹಿಸುವುದು ತುಂಬಾ ಕಷ್ಟ. ಹೀಗಿರುವಾಗ ನಾಸಾ ಸೂರ್ಯನ ಮೇಲ್ಮೆ ಪದರದ ಅಧ್ಯಯನಕ್ಕಾಗಿ ಹೊಸ ಮಿಷನ್ ಒಂದನ್ನು ಪ್ರಾರಂಭಿಸಿದೆ.

    ಹೌದು, ನಾಸಾ ಇದೀಗ IMAP ಎಂಬ ಮಿಷನ್ ಒಂದನ್ನು ಪ್ರಾರಂಭಿಸುವ ಮೂಲಕ ಹೊಸ ಯೋಜನೆಗೆ ಕೈ ಹಾಕಿದೆ. ಈ ಯೋಜನೆಯ ಮೂಲಕ ಸೌರಮಂಡಲದ ಸುತ್ತ ಹರಡಿಕೊಂಡಿರುವ ಹೀಲಿಯೋಸ್ಪಿಯರ್ ಅಧ್ಯಯನ ನಡೆಸಲಿದೆ. ಏನಿದು ಹೀಲಿಯೋಸ್ಪಿಯರ್? ಈ ಯೋಜನೆಯ ಮುಖ್ಯ ಗುರಿಯೇನು? ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಎನ್ನುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

    ಹೀಲಿಯೋಸ್ಪಿಯರ್ ಎನ್ನುವುದು ಸೌರಮಂಡಲದ ಸುತ್ತಲೂ ಹರಡಿರುವ ಒಂದು ಪದರ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಇದು ಸೂರ್ಯನಿಂದ ಹೊರಬರುವ ಕಿರಣಗಳ ಅಥವಾ ಕಣಗಳ ಪ್ರವಾಹದಿಂದ ರೂಪುಗೊಳ್ಳುವ ಒಂದು ಪದರವಾಗಿದೆ. ಸೌರಮಂಡಲದ ಸುತ್ತಲೂ ಅಂದರೆ ಸೂರ್ಯನಿಂದ ಸುಮಾರು 15 ರಿಂದ 20 ಬಿಲಿಯನ್ ಕಿಲೋ ಮೀಟರ್ ದೂರದವರೆಗೆ ಹೀಲಿಯೋಸ್ಪಿಯರ್ ಪದರ ಹರಡಿಕೊಂಡಿದೆ. ಬಾಹ್ಯಾಕಾಶದಲ್ಲಿ ಸೂರ್ಯನ ಕಿರಣಗಳ ಹೊರತಾಗಿ ಕಾಸ್ಮಿಕ್ ಕಿರಣಗಳು ಹಾಗೂ ಇನ್ನಿತರ ಪರಿಣಾಮಕಾರಿ ಕಿರಣಗಳಿಂದ ಭೂಮಿ ಸೇರಿದಂತೆ ಇನ್ನಿತರ ಗ್ರಹಗಳನ್ನ ಈ ಪದರವು ರಕ್ಷಣೆ ಮಾಡುತ್ತದೆ. ಇದು ಈ ಪದರದ ಮುಖ್ಯ ಹಾಗೂ ಪ್ರಧಾನ ಕಾರ್ಯವಾಗಿರುತ್ತದೆ.

    ಹೀಲಿಯೋಸ್ಪಿಯರ್ ಎಂದರೇನು?
    ಇದೊಂದು ಅದೃಶ್ಯ ಗೋಡೆಯಂತೆ ಕಾರ್ಯನಿರ್ವಹಿಸುತ್ತದೆ. ಇದು ಬರಿಗಣ್ಣಿಗೆ ಕಾಣುವುದಿಲ್ಲ. ಆದರೆ ಸೂರ್ಯನಿಂದ ಹೊರಬರುವ ಕಿರಣಗಳ ವೇಗದಿಂದ ಈ ಪದರ ಸೃಷ್ಟಿಯಾಗುತ್ತದೆ. ಇಂಟರ್ ಸ್ಟೆಲ್ಲರ್ ಸ್ಪೇಸ್ ನಿಂದ ಬರುವ ಕಾಸ್ಮಿಕ್ ಕಿರಣಗಳು ಸೌರಮಂಡಲದ ಒಳಗೆ ಬರುವುದನ್ನ ಇದು ತಡೆಹಿಡಿಯುತ್ತದೆ. ಇಂಟರ್ ಸ್ಟೆಲರ್ ಪೇಸ್ ಎನ್ನುವುದು ಸೌರಮಂಡಲದ ಆಚೆ ಇರುವ ಒಂದು ಪ್ರದೇಶ. ಈ ಭಾಗದಲ್ಲಿ ಅನಿಲಗಳ ಗಣತೆ (Density) ಕಡಿಮೆಯಾಗಿರುತ್ತದೆ. ಈ ಭಾಗದಲ್ಲಿನ ಸೂಕ್ಷ್ಮವಾದ ಅನಿಲ, ಕಾಸ್ಮಿಕ್ ಕಿರಣಗಳು ಸೌರಮಂಡಲಕ್ಕೆ ಬಾರದಂತೆ ಈ ಪದರ ತಡೆಹಿಡಿಯುತ್ತದೆ.

    ಹೀಲಿಯೋಸ್ಪಿಯರ್ ಕಾರ್ಯವೇನು?
    – ಮೊದಲನೆಯದಾಗಿ ಇದು ಕಾಸ್ಮಿಕ್ ಕಿರಣಗಳ ರಕ್ಷಣೆಗಾಗಿರುವ ಒಂದು ಪದರವಾಗಿದೆ.
    – ಸೌರಮಂಡಲದ ಆಚೆಯಿಂದ ಬರುವ ಹಾನಿಕಾರಕ ಕಿರಣಗಳು ನೇರವಾಗಿ ಭೂಮಿಗೆ ತಲುಪದಂತೆ ತಡೆಹಿಡಿಯುವ ಕೆಲಸವನ್ನು ಈ ಪದರ ಮಾಡುತ್ತದೆ.
    – ಒಂದು ವೇಳೆ ಈ ಹೀಲಿಯೋಸ್ಪಿಯರ್ ಇಲ್ಲದಿದ್ದರೆ ಕೊಸ್ಮಿಕ್ ಕಿರಣಗಳು ಭೂಮಿಗೆ ನೇರವಾಗಿ ತಲುಪಿ ಎಲೆಕ್ಟ್ರಾನಿಕ್ ಸಾಧನಗಳಿಗೆ ಹಾನಿ ಉಂಟು ಮಾಡುತ್ತಿತ್ತು.
    – ಅಲ್ಲದೆ ಉಪಗ್ರಹಗಳಿಗೂ ಇದು ಪರಿಣಾಮಕಾರಿಯಾಗಬಹುದು ಹಾಗೂ ಮಾನವ ಜೀವಕ್ಕೂ ಇದು ಅಪಾಯವನ್ನುಂಟು ಮಾಡುವ ಸಾಧ್ಯತೆ ಇರುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

    ಹೀಲಿಯೋಸ್ಪಿಯರ್ ಜೊತೆಗೆ ಇದರ ಕೆಲವು ಭಾಗಗಳು ಸೌರಮಂಡಲದಲ್ಲಿ ಕಾರ್ಯನಿರ್ವಹಿಸುತ್ತದೆ. ಸೂರ್ಯನ ಮಧ್ಯಭಾಗದಲ್ಲಿ Inner Heliosphere ಎಂಬ ಭಾಗವಿದೆ. ಇಲ್ಲಿ ಸೂರ್ಯನ ಕಿರಣಗಳು ವೇಗವಾಗಿ ಹರಿಯುತ್ತವೆ. ಇದೇ ಭಾಗದಲ್ಲಿ ಭೂಮಿ, ಮಂಗಳ ಹಾಗೂ ಜುಪಿಟರ್ ಗ್ರಹಗಳಿವೆ. ಮುಖ್ಯವಾಗಿ ನಾಸಾ ವಿಜ್ಞಾನಿಗಳು ಈ ಹೀಲಿಯೋಸ್ಪಿಯರ್ ಅಧ್ಯಯನಕ್ಕೆ ಮುಂದಾಗಿದ್ದಾರೆ.

    ಏನಿದು IMAP ಮಿಷನ್?
    ನಾಸಾ ಹೀಲಿಯೋಸ್ಪಿಯರ್ ಅಧ್ಯಯನಕ್ಕಾಗಿ ಪ್ರಾರಂಭಿಸಿರುವ ಹೊಸ ಮಿಷನ್ ಹೆಸರು IMAP. Interstellar Mapping and Acceleration Probe ಎನ್ನಲಾಗುತ್ತದೆ. ಈ ಮಿಷನ್ ಮೂಲಕ ಸೂರ್ಯನ ಮೂಲಕ ಹೇಗೆ ಹೀಲಿಯೋಸ್ಪಿಯರ್ ರಕ್ಷಣೆ ಯಾಗುತ್ತದೆ. ಸೌರಮಂಡಲದ ಹೊರಗಿರುವ ಇಂಟರ್ ಸ್ಟೆಲ್ಲರ್ ಜೊತೆಗೆ ಹೀಲಿಯೋಸ್ಪಿಯರ್ ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಭೂಮಿಯ ಮೇಲೆ ಪರಿಣಾಮ ಬೀರುವ ಕಣಗಳನ್ನ ಇದು ಹೇಗೆ ತಡೆಹಿಡಿಯುತ್ತದೆ ಎಂಬುದರ ಕುರಿತು ಅಧ್ಯಯನ ನಡೆಸಲಿದೆ.

    ಈ ಮಿಷನ್ 2025ರ ಸೆಪ್ಟೆಂಬರ್ 24 ರಂದು ಲಾಂಚ್ ಆಗಿದೆ. ಭೂಮಿಯಿಂದ ಸುಮಾರು 15 ಲಕ್ಷ ಕಿಲೋಮೀಟರ್ ದೂರದಲ್ಲಿ ಇದು ಕಾರ್ಯನಿರ್ವಹಿಸಲಿದ್ದು, ಭೂಮಿ ಹಾಗೂ ಸೂರ್ಯನ ನಡುವೆ ಇರುವ Point L1 ನಲ್ಲಿ ಇದನ್ನು ಸ್ಥಾಪಿಸಲಾಗಿದೆ. ಸೂರ್ಯನ ಕಿರಣಗಳು, ಇನ್ನಿತರ ಕಣಗಳು, ಮ್ಯಾಗ್ನೆಟಿಕ್ ಫೀಲ್ಡ್ ಮೊದಲಾದ ಮಾಹಿತಿಗಳನ್ನು ಇದು ಸಂಗ್ರಹಿಸಲಿದೆ.

    ಈ ಅಧ್ಯಯನದಿಂದಾಗಿ ಭೂಮಿಯಂತೆ ಇನ್ನಿತರ ಗ್ರಹಗಳು ವಾಸಕ್ಕೆ ಯೋಗ್ಯವಾ? ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಿದೆ. ಶತೆಗೆ ಈ ಅಧ್ಯಯನದಿಂದ ಇನ್ನಿತರ ಭವಿಷ್ಯದ ಪ್ರಯೋಗಗಳಿಗೂ ಇದು ಸಹಾಯವಾಗುತ್ತದೆ. ಈ ಅಧ್ಯಯನವನ್ನು ನೇರವಾಗಿ isro ಕೈಗೊಳ್ಳದಿದ್ದರೂ ಕೂಡ ಈ ಮೊದಲು ಇಸ್ರೋ ಆದಿತ್ಯ – L1 ಎಂಬ ಮಿಷನ್ ಮೂಲಕ ಸೂರ್ಯನ ಅಧ್ಯಯನ ನಡೆಸಿತ್ತು. ಭೂಮಿಯಿಂದ ಕಳುಹಿಸಲಾದ ಮೊದಲ ಸೌರ ಮಿಷನ್ ಇದಾಗಿದೆ.

  • ನಾಸಾ ಬಾಹ್ಯಾಕಾಶ ಕೇಂದ್ರ ಕಚೇರಿಗೆ ಭೇಟಿ ನೀಡಿದ ಬಸವರಾಜ ಹೊರಟ್ಟಿ, ಯುಟಿ ಖಾದರ್‌

    ನಾಸಾ ಬಾಹ್ಯಾಕಾಶ ಕೇಂದ್ರ ಕಚೇರಿಗೆ ಭೇಟಿ ನೀಡಿದ ಬಸವರಾಜ ಹೊರಟ್ಟಿ, ಯುಟಿ ಖಾದರ್‌

    ಬೆಂಗಳೂರು: ಅಮೆರಿಕದ ವಾಷಿಂಗ್ಟನ್‌ನಲ್ಲಿರುವ ನಾಸಾ (NASA) ಬಾಹ್ಯಾಕಾಶ ಕೇಂದ್ರಕ್ಕೆ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಹಾಗೂ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ (UT Khader) ಭೇಟಿ ನೀಡಿದ್ದಾರೆ.

    ಬಾರ್ಬಡೋಸ್‌ನಲ್ಲಿ ನಡೆಯುವ 68ನೇ ಅಂತರಾಷ್ಟ್ರೀಯ ಕಾಮನ್ವೆಲ್ತ್ ಸ್ಪೀಕರ್ಸ್ ಕಾನ್ಫರೆನ್ಸ್ ನಲ್ಲಿ ಭಾಗವಹಿಸಲು ತೆರಳಿರುವ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಸಭಾಧ್ಯಕ್ಷ ಯು.ಟಿ.ಖಾದರ್ ರವರು ಅಧ್ಯಯನ ಪ್ರವಾಸದ ಭಾಗವಾಗಿ ಅಮೇರಿಕಾದಲ್ಲಿರುವ NASA ಕಛೇರಿಗೆ ಭೇಟಿ ನೀಡಿದರು. ಇದನ್ನೂ ಓದಿ:  4 ವರ್ಷದಿಂದ ಗೋಕರ್ಣ ಮಹಾಬಲೇಶ್ವರ ದೇವರಿಗಿಲ್ಲ ಭಕ್ತರಿಂದ ವಿಶೇಷ ಪೂಜೆ

  • ಇನ್ನು ಮುಂದೆ ಅರಣ್ಯದಲ್ಲಿ ಮರ ಕಡಿದ್ರೂ ಗೊತ್ತಾಗುತ್ತೆ – ನಿಸಾರ್‌ ಉಡಾವಣೆ ಯಶಸ್ವಿ

    ಇನ್ನು ಮುಂದೆ ಅರಣ್ಯದಲ್ಲಿ ಮರ ಕಡಿದ್ರೂ ಗೊತ್ತಾಗುತ್ತೆ – ನಿಸಾರ್‌ ಉಡಾವಣೆ ಯಶಸ್ವಿ

    – ಇಸ್ರೋ, ನಾಸಾ ಜಂಟಿಯಾಗಿ ಅಭಿವೃದ್ಧಿ ಪಡಿಸಿದ ಉಪಗ್ರಹ
    – ಜಿಎಸ್‌ಎಲ್‌ವಿ- ಎಫ್‌16 ರಾಕೆಟ್‌ ಮೂಲಕ ಉಡಾವಣೆ

    ಶ್ರೀಹರಿಕೋಟ: ಮೊದಲ ಬಾರಿಗೆ ಇಸ್ರೊ (ISRO) ಮತ್ತು ಅಮೆರಿಕದ ನಾಸಾ (NASA) ಜಂಟಿಯಾಗಿ ಅಭಿವೃದ್ಧಿಪಡಿಸಿದ ಭೂಮಿ ಸಮೀಕ್ಷೆಯ ಸಿಂಥೆಟಿಕ್‌ ಅಪರ್ಚರ್ ರೇಡಾರ್ ಉಪಗ್ರಹ ಉಡಾವಣೆ ಯಶಸ್ವಿಯಾಗಿದೆ.

    ಇಂದು ಸಂಜೆ 5:40ಕ್ಕೆ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರಿಂದ ಜಿಎಸ್‌ಎಲ್‌ವಿ- ಎಫ್‌16 ರಾಕೆಟ್‌ ಮೂಲಕ ನಾಸಾ-ಇಸ್ರೋ ಸಿಂಥೆಟಿಕ್‌ ಅಪರ್ಚರ್ ರೇಡಾರ್ (NISAR) ಉಡಾವಣೆ ಮಾಡಲಾಯಿತು. ಉಪಗ್ರಹ ಯಶಸ್ವಿಯಾಗಿ ಕಕ್ಷೆಗೆ ತಲುಪುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮಹತ್ವದ ಮೈಲಿಗಲ್ಲು ನಿರ್ಮಿಸಿದೆ.

    2,392 ಕೆಜಿ ತೂಕದ ಮತ್ತು ಡ್ಯುಯಲ್-ಫ್ರೀಕ್ವೆನ್ಸಿ ರೇಡಾರ್‌ ವ್ಯವಸ್ಥೆಗಳಿಂದ (L-ಬ್ಯಾಂಡ್ ಮತ್ತು S-ಬ್ಯಾಂಡ್) ಚಾಲಿತವಾಗಿರುವ NISAR ಉಪಗ್ರಹ ವಿಪತ್ತುಗಳು, ಹವಾಮಾನ ಬದಲಾವಣೆಗಳು ಮತ್ತು ಪರಿಸರ ಬದಲಾವಣೆಗಳ ಕುರಿತು ನೈಜ-ಸಮಯದ ಡೇಟಾವನ್ನು ನೀಡಲಿದೆ. ಎಲ್ಲಾ ಹವಮಾನದಲ್ಲಿ ಹಗಲು ಮತ್ತು ರಾತ್ರಿಯ ವೇಳೆ ಹೆಚ್ಚಿನ ರೆಸಲ್ಯೂಶನ್ ಇರುವ ಚಿತ್ರವನ್ನು ಸೆರೆ ಹಿಡಿಯಲಿದೆ.

     

    ಎಲ್‌–ಬ್ಯಾಂಡ್ ಅನ್ನು ನಾಸಾ ತಯಾರಿಸಿದ್ದರೆ ಎಸ್‌–ಬ್ಯಾಂಡ್‌ ಅನ್ನು ಇಸ್ರೊ ತಯಾರಿಸಿದೆ. ಎಸ್‌–ಬ್ಯಾಂಡ್‌ ಅನ್ನು ಸಿಂಥೆಟಿಕ್‌ ಅಪರ್ಚರ್ ರೇಡಾರ್‌ನಲ್ಲಿ ಅಳವಡಿಸಲಾಗುತ್ತದೆ. ಇದರಿಂದ ಭೂಮಿಗೆ ಸಂಬಂಧಿಸಿದಂತೆ ದತ್ತಾಂಶ ಸಂಗ್ರಹ ಸಾಧ್ಯವಾಗಲಿದೆ.

    13,000 ಕೋಟಿ ವೆಚ್ಚ:
    ಇನ್ನೂ ನಿಸಾರ್‌ ಭೂಸರ್ವೇಕ್ಷಣಾ ಉಪಗ್ರಹಕ್ಕೆ 13,000 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ವಿಶ್ವದ ಅತ್ಯಂತ ದುಬಾರಿ ಕಣ್ಗಾವಲು ಉಪಗ್ರಹವಾಗಿ ಗುರುತಿಸಿಕೊಂಡಿದೆ. ಅಲ್ಲದೇ ನಿಸಾರ್‌ ಉಪಗ್ರಹವು ಒಂದು ಬಾರಿಗೆ 242 ಕಿಮೀ ಭೂವಿಸ್ತೀರ್ಣವನ್ನು ನೋಡುವ ಸಾಮರ್ಥ್ಯ ಹೊಂದಿದೆ. 97 ನಿಮಿಷಕ್ಕೆ ಭೂಮಿಗೆ ಒಂದು ಸುತ್ತು ಬರಲಿದೆ. ಮುಖ್ಯವಾಗಿ ನಿಸಾರ್‌ ಉಪಗ್ರಹವು ಕಳುಹಿಸುವ ಎಲ್ಲ ಮಾಹಿತಿಗಳು ಹಾಗೂ ದತ್ತಾಂಶಗಳನ್ನು ಉಚಿತವಾಗಿ ಎಲ್ಲಾ ದೇಶಗಳು ಅಧ್ಯಯನಕ್ಕೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದನ್ನೂ ಓದಿ: ಭಾರತದ ಮೇಲೆ ಟ್ರಂಪ್‌ ತೆರಿಗೆ ಸಮರ : ಆ.1 ರಿಂದಲೇ 25% ಸುಂಕ

     

    ಉಪಹ್ರಹದಿಂದ ಏನು ಲಾಭ?
    ಅರಣ್ಯ ಮತ್ತು ಜೀವವೈವಿಧ್ಯ ಸಂರಕ್ಷಣೆ: ದಟ್ಟವಾದ ಸಸ್ಯವರ್ಗವನ್ನು ಭೇದಿಸುವ ಸಾಮರ್ಥ್ಯವನ್ನು NISAR ಹೊಂದಿರುವುದು ವಿಶೇಷ. ಅರಣ್ಯನಾಶ, ಅರಣ್ಯದಲ್ಲಿ ಆಗುವ ಬದಲಾವಣೆಯನ್ನು ನಕ್ಷೆ ಮಾಡುವಲ್ಲಿ ಪ್ರಬಲ ಸಾಧನವಾಗಿ ಬಳಕೆಯಾಗಲಿದೆ. ಅಕ್ರಮ ಮರ ಕಡಿಯುವಿಕೆಯನ್ನು ಪತ್ತೆಹಚ್ಚಲು, ಅಳಿವಿನಂಚಿನಲ್ಲಿರುವ ಪರಿಸರ ವ್ಯವಸ್ಥೆಗಳನ್ನು ರಕ್ಷಿಸಲು ಡೇಟಾವನ್ನು ಬಳಸಬಹುದು.

    ವಿಪತ್ತು ನಿರ್ವಹಣೆ: ಭೂಕಂಪಗಳು, ಭೂಕುಸಿತಗಳು, ಪ್ರವಾಹಗಳು, ಜ್ವಾಲಾಮುಖಿ ಚಟುವಟಿಕೆಗಳು ಮತ್ತು ಇತರ ನೈಸರ್ಗಿಕ ವಿಕೋಪಗಳ ಬಗ್ಗೆ NISAR ರಿಯಲ್‌ ಟೈಂ ಡೇಟಾವನ್ನು ಒದಗಿಸಲಿದೆ.ಅಧಿಕಾರಿಗಳು ಈ ಡೇಟಾವನ್ನು ಬಳಸಿಕೊಂಡು ಹಾನಿಯನ್ನು ನಕ್ಷೆ ಮಾಡಲು, ವಿಪತ್ತಿನ ಪ್ರಗತಿಯನ್ನು ಪತ್ತೆಹಚ್ಚಲು ಸಹಕಾರಿಯಾಗಲಿದೆ. ಇದನ್ನೂ ಓದಿ: ಉಗ್ರರ ಸಂಹಾರಕ್ಕೆ ಭಾರತೀಯ ಸೇನೆಗೆ ನೆರವಾಗಿದ್ದು ಬೆಂಗಳೂರಿನ ʻಇಸ್ರೋʼ

    ಹವಾಮಾನ ಮೇಲ್ವಿಚಾರಣೆ: ಉಪಗ್ರಹವು ಹಿಮನದಿ ಕರಗುವಿಕೆ, ಸಮುದ್ರ ಮಟ್ಟ ಏರಿಕೆ, ಮಣ್ಣಿನ ತೇವಾಂಶ ಟ್ರ್ಯಾಕ್ ಮಾಡುತ್ತದೆ.  ವಿಜ್ಞಾನಿಗಳಿಗೆ ಜಾಗತಿಕ ತಾಪಮಾನ ಏರಿಕೆಯ ವೇಗ ಮತ್ತು ಅದರ ಪ್ರಾದೇಶಿಕ ಪರಿಣಾಮಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

    ಕೃಷಿ ಮುನ್ಸೂಚನೆ: NISAR ಬೆಳೆ ಬೆಳವಣಿಗೆ, ಮಣ್ಣಿನ ಸ್ಥಳಾಂತರ, ನೀರಾವರಿ ಮಟ್ಟಗಳು ಮತ್ತು ಭೂ ಬಳಕೆಯ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಬಹುದು. ಇದು ಸರ್ಕಾರಗಳು ಇಳುವರಿಯನ್ನು ಊಹಿಸಲು, ನೀರಿನ ಬಳಕೆಯನ್ನು ನಿರ್ವಹಿಸಲು ಮತ್ತು ಬರ ಬರಬಹುದಾ? ಇಲ್ಲವೋ ಎಂಬುದನ್ನು ಮೊದಲೇ ಪತ್ತೆಹಚ್ಚಲು ಅನುವು ಮಾಡಿಕೊಡುತ್ತದೆ.

    ನಗರ ಮತ್ತು ಮೂಲಸೌಕರ್ಯ ಯೋಜನೆ: ವಿಶೇಷವಾಗಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಭೂ ಕುಸಿತ ಮತ್ತು ರಚನಾತ್ಮಕ ಬದಲಾವಣೆಗಳ ಮಾಹಿತಿ ಸಿಗಲಿದೆ. ಅಣೆಕಟ್ಟುಗಳು, ರಸ್ತೆಗಳು, ಸೇತುವೆಗಳು ಮತ್ತು ಕಟ್ಟಡಗಳ ಮೇಲ್ವಿಚಾರಣೆಯಲ್ಲಿ ಉಪಗ್ರಹ ಸಹಾಯ ಮಾಡಲಿದೆ.

  • ವಿಶ್ವದ ಅತ್ಯಂತ ದುಬಾರಿ ಕಣ್ಗಾವಲು ಉಪಗ್ರಹ ಇಂದು ನಭಕ್ಕೆ; ಭಾರತ-ಅಮೆರಿಕ ಮಹತ್ವದ ಹೆಜ್ಜೆ

    ವಿಶ್ವದ ಅತ್ಯಂತ ದುಬಾರಿ ಕಣ್ಗಾವಲು ಉಪಗ್ರಹ ಇಂದು ನಭಕ್ಕೆ; ಭಾರತ-ಅಮೆರಿಕ ಮಹತ್ವದ ಹೆಜ್ಜೆ

    – ನಿಸಾರ್‌ ಕಳುಹಿಸುವ ದತ್ತಾಂಶ ಎಲ್ಲಾ ದೇಶಗಳ ಅಧ್ಯಯನಕ್ಕೆ ಫ್ರೀ ಫ್ರೀ ಫ್ರೀ
    – 13,000 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಉಪಗ್ರಹ

    ಬೆಂಗಳೂರು/ವಾಷಿಂಗ್ಟನ್‌: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತು ಅಮೆರಿಕದ ನಾಸಾ (NASA) ಜಂಟಿಯಾಗಿ ಅಭಿವೃದ್ಧಿಪಡಿಸಿರುವ ʻನಾಸಾ – ಇಸ್ರೋ ಸಿಂಥೆಟಿಕ್ ಅಪರ್ಚರ್ ರೇಡಾರ್ (ನಿಸಾರ್ NISAR)ʼ ಉಪಗ್ರಹ ಇಂದು ಶ್ರೀಹರಿಕೋಟಾದಿಂದ ಉಡಾವಣೆಗೆ ಸಜ್ಜಾಗಿದೆ. ʻನಿಸಾರ್ʼ ಭಾರತೀಯ ಕಾಲಮಾನದ ಪ್ರಕಾರ ಇಂದು ಸಂಜೆ 5:40ಕ್ಕೆ ಇಸ್ರೋದ GSLV-F16 ಉಪಗ್ರಹದ ಬೆನ್ನೇರಿ ಬಾಹ್ಯಾಕಾಶಕ್ಕೆ ತೆರಳಲಿದೆ.

    ಈ ಉಪಗ್ರಹವು ಶ್ರೀಹರಿಕೋಟದಿಂದ (Sriharikota) ಉಡಾವಣೆ ಆಗುತ್ತಿರುವ 102ನೇ ಉಪಗ್ರಹವಾಗಿದೆ. ಹವಾಮಾನ ಬದಲಾವಣೆ, ನೈಸರ್ಗಿಕ ವಿಕೋಪ ನಿರ್ವಹಣೆ ಮತ್ತು ಕೃಷಿ ಕ್ಷೇತ್ರಗಳಿಗೆ ಅಮೂಲ್ಯವಾದ ಮಾಹಿತಿ ಒದಗಿಸಲಿದೆ. ಅಲ್ಲದೇ ನಿರ್ಗಲ್ಲು, ಹಿಮಫಲಕಗಳ ಬದಲಾವಣೆ, ಮಣ್ಣಿನಲ್ಲಿರುವ ತೇವಾಂಶ, ಪ್ರವಾಹ, ಅರಣ್ಯ ನಾಶ, ಬೆಳೆಯ ಆರೋಗ್ಯ, ನಗರೀಕರಣ ಮತ್ತು ಸೌಕರ್ಯಗಳ ಬದಲಾವಣೆ ಮುಂತಾದ ವಿಷಯಗಳನ್ನು ಒದಗಿಸಲಿದೆ. ಇದು ಭಾರತ-ಅಮೆರಿಕ ಸಹಭಾಗಿತ್ವದಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.

    ಇದರೊಡನೆ ಭಾರತ – ಅಮೆರಿಕದ ಮುಂದಿನ ಬಹು ವರ್ಷಗಳ ಬಾಹ್ಯಾಕಾಶ ಸಹಕಾರ ಆರಂಭಗೊಳ್ಳಲಿದೆ. ಕಕ್ಷೆಯತ್ತ ರಾಕೆಟ್‌ನ ಪ್ರಯಾಣ ಬಹುತೇಕ 19 ನಿಮಿಷ ತೆಗೆದುಕೊಳ್ಳಲಿದೆ. ಆ ಬಳಿಕ, ನಿಸಾರ್ ಉಪಗ್ರಹವನ್ನು ಅದರ ಉದ್ದೇಶಿತ-747 ಸನ್ ಸಿಂಕ್ರೊನಸ್ ಕಕ್ಷೆಯಲ್ಲಿ ಅಳವಡಿಸಲಾಗುತ್ತದೆ. ಈ ಯೋಜನೆಯನ್ನು ವಿಶೇಷವಾಗಿಸುವುದು ಕೇವಲ ಅದರ ಮಹತ್ವಾಕಾಂಕ್ಷೆ ಮತ್ತು ಸಾಮರ್ಥ್ಯಗಳು ಮಾತ್ರವಲ್ಲ. ಬದಲಿಗೆ, ನಿಸಾರ್ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ತೋರಿದ ತಾಳ್ಮೆ ಮತ್ತು ನಿಖರತೆಗಳೂ ಅಷ್ಟೇ ಮುಖ್ಯವಾಗಿವೆ.

    13,000 ಕೋಟಿ ವೆಚ್ಚ:
    ಇನ್ನೂ ನಿಸಾರ್‌ ಭೂಸರ್ವೇಕ್ಷಣಾ ಉಪಗ್ರಹಕ್ಕೆ 13,000 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ವಿಶ್ವದ ಅತ್ಯಂತ ದುಬಾರಿ ಕಣ್ಗಾವಲು ಉಪಗ್ರಹವಾಗಿ ಗುರುತಿಸಿಕೊಂಡಿದೆ. ಅಲ್ಲದೇ ನಿಸಾರ್‌ ಉಪಗ್ರಹವು ಒಂದು ಬಾರಿಗೆ 242 ಕಿಮೀ ಭೂವಿಸ್ತೀರ್ಣವನ್ನು ನೋಡುವ ಸಾಮರ್ಥ್ಯ ಹೊಂದಿದೆ. 97 ನಿಮಿಷಕ್ಕೆ ಭೂಮಿಗೆ ಒಂದು ಸುತ್ತು ಬರಲಿದ್ದು, 12 ದಿನಗಳಿಗೆ ಒಮ್ಮೆ ಇಡೀ ಭೂಮಿ ಸುತ್ತಲಿದೆ. ಮುಖ್ಯವಾಗಿ ನಿಸಾರ್‌ ಉಪಗ್ರಹವು ಕಳುಹಿಸುವ ಎಲ್ಲ ಮಾಹಿತಿಗಳು ಹಾಗೂ ದತ್ತಾಂಶಗಳನ್ನು ಉಚಿತವಾಗಿ ಎಲ್ಲಾ ದೇಶಗಳು ಅಧ್ಯಯನಕ್ಕೆ ಬಳಕೆ ಮಾಡಿಕೊಳ್ಳಬಹುದಾಗಿದೆ.

    ಕಕ್ಷೆಯತ್ತ ಪಯಣ ಮತ್ತು ಅದರಾಚೆಗಿನ ಕಾರ್ಯ
    ನಿಸಾರ್ ಉಪಗ್ರಹ ಭೂಮಿಯಿಂದ 747 ಕಿಲೋಮೀಟರ್ ಎತ್ತರದಲ್ಲಿರುವ ತನ್ನ ಉದ್ದೇಶಿತ ಕಕ್ಷೆಯನ್ನು ತಲುಪಿದ ಬಳಿಕ ಅದರ ನೈಜ ಕಾರ್ಯ ಆರಂಭಗೊಳ್ಳುತ್ತದೆ. ಕಕ್ಷೆಗೆ ಸೇರಿದ ಬಳಿಕ, ಉಪಗ್ರಹದ 90 ದಿನಗಳ ಅವಧಿಯ, ಮುಖ್ಯವಾದ ‘ಕಮಿಷನಿಂಗ್ ಹಂತ’ ಆರಂಭಗೊಳ್ಳುತ್ತದೆ. ಇದನ್ನು ‘ಇನ್ ಆರ್ಬಿಟ್ ಚೆಕೌಟ್’ ಎಂದೂ ಕರೆಯಲಾಗಿದ್ದು, ಈ ಅವಧಿಯಲ್ಲಿ ಉಪಗ್ರಹವನ್ನು ಅದರ ವೈಜ್ಞಾನಿಕ ಗುರಿಗಳಿಗೆ ಸೂಕ್ತವಾಗಿ ಸಿದ್ಧಪಡಿಸಲಾಗುತ್ತದೆ. ಅಂದರೆ, ಉಪಗ್ರಹ ಇಂದು ಸಂಜೆ ಉಡಾವಣೆಗೊಂಡರೂ, ನಿಸಾರ್ ಅದರ ಸಂಪೂರ್ಣ ವೈಜ್ಞಾನಿಕ ಕಾರ್ಯಾಚರಣೆಗಳಲ್ಲಿ ತೊಡಗಲು ಭಾರತ ಅಕ್ಟೋಬರ್ ತಿಂಗಳ ಕೊನೆಯ ಭಾಗದ ತನಕ ಕಾಯಬೇಕಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

    ಕಮಿಷನಿಂಗ್ ಹಂತದ ವಿಶೇಷತೆ ಏನು?
    ಕಮಿಷನಿಂಗ್ ಹಂತದ ವಿಶೇಷ ಅಂಶವೆಂದರೆ, ನಿಸಾರ್ ಉಪಗ್ರಹದ 12 ಮೀಟರ್ ವ್ಯಾಸ ಹೊಂದಿರುವ ಬೃಹತ್ ಪ್ರತಿಫಲಕವನ್ನು (ರಿಫ್ಲೆಕ್ಟರ್) ಬಾಹ್ಯಾಕಾಶದಲ್ಲಿ ಬಿಡಿಸುವುದಾಗಿದೆ. ಇದು ಭೂ ವೀಕ್ಷಣಾ ಉಪಗ್ರಹದೊಡನೆ ಇಲ್ಲಿಯ ತನಕ ಬಾಹ್ಯಾಕಾಶಕ್ಕೆ ತೆರಳಿರುವ ಅತಿದೊಡ್ಡ ಆ್ಯಂಟೆನಾ ಆಗಿದೆ. ಈ ಬೃಹತ್ ಆ್ಯಂಟೆನಾವನ್ನು ಬಾಹ್ಯಾಕಾಶದಲ್ಲಿ ಪೂರ್ಣ ಪ್ರಮಾಣದಲ್ಲಿ ತೆರೆದಾಗ ಅದು ಬಹುತೇಕ ಒಂದು ಟೆನ್ನಿಸ್ ಆಟದ ಮೈದಾನದಷ್ಟು ದೊಡ್ಡದಾಗಿರಲಿದೆ. ಇದನ್ನು ಬಾಹ್ಯಾಕಾಶದ ತೀವ್ರ ವಾತಾವರಣದಲ್ಲಿ ಅತ್ಯಂತ ಜಾಗರೂಕವಾಗಿ ಬಿಡಿಸಬೇಕಾಗುತ್ತದೆ. ಆ್ಯಂಟೆನಾ ಬಿಡಿಸುವಿಕೆ ಅತ್ಯಂತ ಸೂಕ್ಷ್ಮ ಪ್ರಕ್ರಿಯೆಯಾಗಿದ್ದು, ಅದರ ಪ್ರತಿಯೊಂದು ಹಂತವನ್ನೂ ಇಂಜಿನಿಯರ್‌ಗಳು ವರ್ಷಾನುಗಟ್ಟಲೆ ಭೂಮಿಯಲ್ಲೇ ನಿಖರವಾಗಿ ಅಭ್ಯಾಸ ನಡೆಸಿ, ಕರಾರುವಾಕ್ಕಾಗಿ ರೂಪಿಸಿದ್ದಾರೆ.

  • ಬಾಹ್ಯಾಕಾಶದಿಂದ ಮರಳಿದ ಶುಭಾಂಶು ಶುಕ್ಲಾ – ಮಗನನ್ನು ಕಂಡು ಪೋಷಕರು ಭಾವುಕ

    ಬಾಹ್ಯಾಕಾಶದಿಂದ ಮರಳಿದ ಶುಭಾಂಶು ಶುಕ್ಲಾ – ಮಗನನ್ನು ಕಂಡು ಪೋಷಕರು ಭಾವುಕ

    ನವದೆಹಲಿ: ಐಎಎಫ್‌ ಗ್ರೂಪ್‌ ಕ್ಯಾಪ್ಟನ್ ಶುಭಾಂಶು ಶುಕ್ಲಾ (Shubhanshu Shukla) ಸೇರಿದಂತೆ ಆಕ್ಸಿಯಮ್ -4 (Axiom-4) ಗಗನಯಾತ್ರಿಗಳನ್ನು ಹೊತ್ತ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಮಂಗಳವಾರ ಯಶಸ್ವಿಯಾಗಿ ಭೂಮಿಗೆ ವಾಪಸ್‌ ಆಯಿತು. ತಮ್ಮ ಪುತ್ರ ಸುರಕ್ಷಿತವಾಗಿ ವಾಪಸ್‌ ಆಗಿದ್ದನ್ನು ಕಂಡು ಪೋಷಕರು ಭಾವುಕರಾದರು.

    ನನ್ನ ಮಗ ಸುರಕ್ಷಿತವಾಗಿ ಮರಳಿದ್ದಾನೆ. ನಾನು ಭಾವುಕಳಾಗಿದ್ದೇನೆ. ನನ್ನ ಮಗ ಹಲವು ದಿನಗಳ ನಂತರ ಮರಳಿದ್ದಾನೆ. ಈ ಕಾರ್ಯಕ್ರಮವನ್ನು ವರದಿ ಮಾಡಿದ ನಿಮ್ಮೆಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ ಎಂದು ಶುಕ್ಲಾ ಅವರ ತಾಯಿ ಆಶಾ ಶುಕ್ಲಾ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಭೂಮಿಗೆ ವಾಪಸ್‌ ಆದ ಶುಭಾಂಶು ಶುಕ್ಲಾಗೆ ಪ್ರಧಾನಿ ಮೋದಿ ಸ್ವಾಗತ

    ನಾವು ಹನುಮಂತನ ದರ್ಶನ ಪಡೆದೆವು. ಸುಂದರಕಾಂಡ ಪಠಣವನ್ನೂ ಮಾಡಿದೆವು. ನಾವು ಅವನಿಗೆ ಭವ್ಯ ಸ್ವಾಗತ ಕೋರಿದ್ದೇವೆ ಎಂದು ತಿಳಿಸಿದ್ದಾರೆ.

    ಪುತ್ರ ನಮಗೆ ಕೀರ್ತಿ ತಂದಿದ್ದಾನೆ. ಶುಕ್ಲಾ ಇಡೀ ರಾಷ್ಟ್ರಕ್ಕೆ ಸೇರಿದವನು. ಇತಿಹಾಸ ಪುಟದಲ್ಲಿ ಅವನ ಹೆಸರು ದಾಖಲಾಗಿದೆ ಎಂದು ಶುಕ್ಲಾ ಅವರ ತಂದೆ ಶಂಭು ದಯಾಳ್ ಶುಕ್ಲಾ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಗುಮುಖದಲ್ಲಿ ಕ್ಯಾಪ್ಸುಲ್‌ನಿಂದ ಹೊರಬಂದು ಕೈಬೀಸಿದ ಶುಭಾಂಶು ಶುಕ್ಲಾ

    2025 ರ ಜೂ.26 ರಂದು ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾದ ಆಕ್ಸ್-4 ಕಾರ್ಯಾಚರಣೆಯು, ಆರು ಮಿಲಿಯನ್ ಮೈಲುಗಳಿಗಿಂತ ಹೆಚ್ಚು ಪ್ರಯಾಣಿಸಿದೆ. ಭೂಮಿಯ ಸುತ್ತ 250 ಕ್ಕೂ ಹೆಚ್ಚು ಕಕ್ಷೆಗಳನ್ನು ಪೂರ್ಣಗೊಳಿಸಿದೆ.

    ತಮ್ಮ 17 ದಿನಗಳ ವಾಸ್ತವ್ಯದ ಅವಧಿಯಲ್ಲಿ ಗಗನಯಾತ್ರಿಗಳು 60 ಕ್ಕೂ ಹೆಚ್ಚು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿದ್ದಾರೆ. ಇದು ಅಂತರರಾಷ್ಟ್ರೀಯ ಸಂಶೋಧನಾ ಪ್ರಯತ್ನಗಳಿಗೆ ಅಮೂಲ್ಯವಾದ ಡೇಟಾವನ್ನು ಕೊಡುಗೆ ನೀಡಿದೆ. ಭಾರತದ ಶುಭಾಂಶು ಶುಕ್ಲಾ ಸೇರಿದಂತೆ ಆಕ್ಸ್-4ನ ಸದಸ್ಯರಾದ ಕಮಾಂಡರ್ ಪೆಗ್ಗಿ ವಿಟ್ಸನ್ (ಯುಎಸ್ಎ), ಮಿಷನ್ ಸ್ಪೆಷಲಿಸ್ಟ್ ಸಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ (ಪೋಲೆಂಡ್) ಮತ್ತು ಟಿಬೋರ್ ಕಾಪು (ಹಂಗೇರಿ) ಭೂಮಿಗೆ ವಾಪಸ್‌ ಆಗಿದ್ದಾರೆ.

  • ಮಂಗಳವಾರ ಬಾಹ್ಯಾಕಾಶದಿಂದ ಭೂಮಿಗೆ ಮರಳಲಿದ್ದಾರೆ ಶುಭಾಂಶು ಶುಕ್ಲಾ

    ಮಂಗಳವಾರ ಬಾಹ್ಯಾಕಾಶದಿಂದ ಭೂಮಿಗೆ ಮರಳಲಿದ್ದಾರೆ ಶುಭಾಂಶು ಶುಕ್ಲಾ

    ನವದೆಹಲಿ: ಗಗನಯಾದ ಭಾಗವಾದ ಆಕ್ಸಿಯಮ್ 4 ಬಾಹ್ಯಕಾಶ ಪ್ರಯೋಗದ ಎಲ್ಲಾ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದು, ಮಂಗಳವಾರ ಶುಭಾಂಶು ಶುಕ್ಲಾ (Shubhanshu Shukla) ಬಾಹ್ಯಕಾಶದಿಂದ ಭೂಮಿಗೆ ಮರಳಲಿದ್ದಾರೆ.

    ಸೋಮವಾರ ಸಂಜೆ 4:35ಕ್ಕೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (IIS) ಅನ್‌ಡಾಕಿಂಗ್ ಪ್ರಕ್ರಿಯೆ ಆರಂಭವಾಗಲಿದೆ. ಶುಭಾಂಶು ಶುಕ್ಲಾ ನೇತೃತ್ವದ ಗಗನಯಾತ್ರಿಗಳ ತಂಡವು ನಾಳೆ ಮಧ್ಯಾಹ್ನ 2:25ಕ್ಕೆ ಡ್ರ‍್ಯಾಗನ್‌ಗೆ ಪ್ರವೇಶಿಸಲಿದೆ. ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಗಗನಯಾತ್ರಿಗಳು ಕ್ಯಾಲಿಫೋರ್ನಿಯಾದ ಕಡಲತೀರಕ್ಕೆ ಬಂದಿಳಿಯಲಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ಜಿಲ್ಲೆಗೆ ಮತ್ತೊಂದು ಮುಕುಟ – ಸೋಮವಾರ ಸಿಗಂದೂರು ಸೇತುವೆ ಲೋಕಾರ್ಪಣೆ

    ಜೂನ್ 25ರಂದು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರ ಮತ್ತು ಡ್ರ‍್ಯಾಗನ್ ಬಾಹ್ಯಾಕಾಶ ನೌಕೆ ಅಂತರರಾಷ್ಟ್ರೀಯ ಸ್ಪಾದಲ್ಲಿ ಡಾಕ್ ಮಾಡಲಾಗಿತ್ತು. ಶುಕ್ಲಾ ಜೊತೆ ಇತರ ಮೂವರು ಸಿಬ್ಬಂದಿಯಾದ ಪೆಗ್ಗಿ ವಿಟ್ಸನ್, ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ ಮತ್ತು ಟಿಬೋರ್ಕಾಪು ಭೂಮಿಗೆ ವಾಪಸ್ ಆಗಲಿದ್ದಾರೆ.

  • ಶುಭಾಂಶು ಶುಕ್ಲಾ ಜು.14ಕ್ಕೆ ಭೂಮಿಗೆ ವಾಪಸ್‌?

    ಶುಭಾಂಶು ಶುಕ್ಲಾ ಜು.14ಕ್ಕೆ ಭೂಮಿಗೆ ವಾಪಸ್‌?

    – ಎರಡು ವಾರಗಳಲ್ಲಿ 250 ಸೂರ್ಯೋದಯ ಕಂಡ ‘ಆಕ್ಸಿಯಮ್ -4’ ಗಗನಯಾತ್ರಿಗಳು

    ನವದೆಹಲಿ: ಎರಡು ವಾರಗಳಿಗೂ ಹೆಚ್ಚು ಕಾಲ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸಮಯ ಕಳೆದ ನಂತರ, ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಮುಂದಿನ ವಾರ ಭೂಮಿಗೆ ಮರಳಲಿದ್ದಾರೆ. ಆಕ್ಸಿಯಮ್ -4 (ಆಕ್ಸ್ -4) ಮಿಷನ್ ಗಗನಯಾತ್ರಿಗಳು ಜುಲೈ 14 ರಂದು ಐಎಸ್‌ಎಸ್‌ನಿಂದ ಹಿಂತಿರುಗಲಿದ್ದಾರೆ ಎಂದು ನಾಸಾ ಗುರುವಾರ ಪ್ರಕಟಿಸಿದೆ.

    ನಾವು ಸ್ಟೇಷನ್ ಪ್ರೋಗ್ರಾಂನೊಂದಿಗೆ ಕೆಲಸ ಮಾಡುತ್ತಿದ್ದೇವೆ. ಆಕ್ಸಿಯಮ್ -4 ಪ್ರಗತಿಯನ್ನು ಎಚ್ಚರಿಕೆಯಿಂದ ಗಮನಿಸುತ್ತಿದ್ದೇವೆ. ನಾವು ಆ ಕಾರ್ಯಾಚರಣೆಯನ್ನು ಅನ್‌ಡಾಕ್ ಮಾಡಬೇಕಾಗಿದೆ ಎಂದು ನಾನು ಭಾವಿಸುತ್ತೇನೆ. ಅನ್‌ಡಾಕ್ ಮಾಡುವ ಟಾರ್ಗೆಟ್ ಜುಲೈ 14 ಆಗಿದೆ ಎಂದು ನಾಸಾ ಕಮರ್ಷಿಯಲ್ ಕ್ರೂ ಪ್ರೋಗ್ರಾಂನ ವ್ಯವಸ್ಥಾಪಕ ಸ್ಟೀವ್ ಸ್ಟಿಚ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

    ಜೂನ್ 25 ರಂದು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಆಕ್ಸಿಯಮ್-4 ಮಿಷನ್ ಉಡಾವಣೆಗೊಂಡಿತು. 28 ಗಂಟೆಗಳ ಪ್ರಯಾಣದ ನಂತರ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಮರುದಿನ ಬಾಹ್ಯಾಕಾಶ ನಿಲ್ದಾಣ ತಲುಪಿತು.

    ಶುಭಾಂಶು ಶುಕ್ಲಾ, ಪೆಗ್ಗಿ ವಿಟ್ಸನ್, ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ ಮತ್ತು ಟಿಬೋರ್ ಕಾಪು ಅವರನ್ನೊಳಗೊಂಡ ಗಗನಯಾತ್ರಿಗಳು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) 230 ಸೂರ್ಯೋದಯಗಳನ್ನು ಕಂಡಿದ್ದಾರೆ. ಕಕ್ಷೆಯ ಪ್ರಯೋಗಾಲಯದಲ್ಲಿ ಎರಡು ವಾರಗಳ ಕೊನೆಯಲ್ಲಿ ಬಾಹ್ಯಾಕಾಶದಲ್ಲಿ ಸುಮಾರು 100 ಲಕ್ಷ ಕಿ.ಮೀ. ಪ್ರಯಾಣಿಸಿದ್ದಾರೆ.

    ಭೂಮಿಯಿಂದ ಸುಮಾರು 250 ಮೈಲುಗಳಷ್ಟು ಎತ್ತರದಲ್ಲಿರುವ ಗಗನಯಾತ್ರಿಗಳು ತಮ್ಮ ಬಿಡುವಿನ ವೇಳೆಯಲ್ಲಿ ಚಿತ್ರಗಳು ಮತ್ತು ವೀಡಿಯೊಗಳನ್ನು ಸೆರೆಹಿಡಿಯುವುದು, ಭೂಮಿಯ ನೋಟವನ್ನು ವೀಕ್ಷಿಸುವುದು ಮತ್ತು ಪ್ರೀತಿಪಾತ್ರರನ್ನು ಸಂಪರ್ಕಿಸಿ ಸಮಯ ಕಳೆಯುವ ಕೆಲಸ ಮಾಡಿದ್ದಾರೆಂದು ಆಕ್ಸಿಯಮ್ ಸ್ಪೇಸ್ ಹೇಳಿಕೆ ಗುರುವಾರ ತಿಳಿಸಿದೆ.

  • ಡಾಕಿಂಗ್‌ ನಂತರದ ಪ್ರಕ್ರಿಯೆ ಶುರು – ಸಂಜೆ 6 ಗಂಟೆ ವೇಳೆಗೆ ಬಾಹ್ಯಾಕಾಶ ನಿಲ್ದಾಣದೊಳಕ್ಕೆ ಅಧಿಕೃತ ಎಂಟ್ರಿ

    ಡಾಕಿಂಗ್‌ ನಂತರದ ಪ್ರಕ್ರಿಯೆ ಶುರು – ಸಂಜೆ 6 ಗಂಟೆ ವೇಳೆಗೆ ಬಾಹ್ಯಾಕಾಶ ನಿಲ್ದಾಣದೊಳಕ್ಕೆ ಅಧಿಕೃತ ಎಂಟ್ರಿ

    – ಹ್ಯಾಚ್ ತೆರೆಯುವ ಪ್ರಕ್ರಿಯೆಯ ಹಂತಗಳು ಹೇಗಿರಲಿದೆ?

    ನವದೆಹಲಿ: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ (Shubhanshu Shukla) ಇತಿಹಾಸ ನಿರ್ಮಿಸಿದ್ದಾರೆ. ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ ಐತಿಹಾಸಿಕ ಕ್ಷಣವನ್ನು ಇಡೀ ಭಾರತವೇ ಕೊಂಡಾಡುತ್ತಿದೆ. ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್‌ಎಕ್ಸ್‌ನ ʻಡ್ರ್ಯಾಗನ್‌ʼ ನೌಕೆ (Dragon Capsule Docks) ಯಶಸ್ವಿಯಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಡಾಕ್‌ ಆಗಿದೆ. ಸಂಜೆ 6 ಗಂಟೆ ವೇಳೆಗೆ ಹ್ಯಾಚ್ (ಬಾಹ್ಯಾಕಾಶ ನಿಲ್ದಾಣದೊಳಕ್ಕೆ ಪ್ರವೇಶಿಸಲು ತೆರೆಯುವ ಬಾಗಿಲು) ತೆರೆಯಲಿದೆ.

    ಬುಧವಾರ (ಜೂ.25) ಮಧ್ಯಾಹ್ನ 12:03ರ ವೇಳೆಗೆ ಉಡಾವಣೆ ಆಗಿದ್ದ ಆಕ್ಸಿಯಂ-4 ನೌಕೆ ಗುರುವಾರ (ಜೂ.26) ಸಂಜೆ 4 ಗಂಟೆ ವೇಳೆಗೆ ಯಶಸ್ವಿಯಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಡಾಕ್‌ (ಕೂಡಿಸುವುದು) ಆಗಿದೆ. ಕೆಲವು ನಿಮಿಷಗಳಲ್ಲೇ ಡಾಕಿಂಗ್‌ ಮುಂದಿನ ಪ್ರಕ್ರಿಯೆ ಶುರುವಾಗಿದ್ದು, ಸಂಜೆ 6 ಗಂಟೆ ವೇಳೆಗೆ ಹ್ಯಾಚ್‌ ತೆರೆಯಲಿದ್ದು, ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣದೊಳಕ್ಕೆ (International Space Station) ಪ್ರವೇಶಿಸಲಿದ್ದಾರೆ.

    ಸದ್ಯ ಬಾಹ್ಯಾಕಾಶದಲ್ಲಿ ಸುರಕ್ಷತೆ ಮತ್ತು ಗಾಳಿಯ ವಾತಾವರಣ ನಿರ್ಣಾಯಕವಾಗಿರುವುದರಿಂದ ಡಾಕಿಂಗ್‌ ನಂತರದ ಪ್ರಕ್ರಿಯೆ ಪೂರ್ಣಗೊಳ್ಳಲು 2 ಗಂಟೆಗಳ ಸಮಯ ತೆಗೆದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ.

    ಹ್ಯಾಚ್ ತೆರೆಯುವ ಪ್ರಕ್ರಿಯೆಯ ಹಂತಗಳು:
    * ಸಾಫ್ಟ್ ಕ್ಯಾಪ್ಚರ್ (ಡಾಕಿಂಗ್ ಪೂರ್ಣ) – ಮೊದಲಿಗೆ ಡಾಕಿಂಗ್‌ ಪೂರ್ಣಗೊಂಡ ನಂತರ ಬಾಹ್ಯಾಕಾಶ ನೌಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್‌) ಸಂಪರ್ಕಗೊಳ್ಳುತ್ತದೆ.
    * ಹಾರ್ಡ್ ಮೇಟ್ (ಮೆಕ್ಯಾನಿಕಲ್ ಲಾಚಿಂಗ್) – ಅಂದ್ರೆ ಐಎಸ್‌ಎಸ್‌ ಮತ್ತು ನೌಕೆಯ ನಡುವೆ ಸೀಲ್ ಭದ್ರಪಡಿಸಿಕೊಳ್ಳಲು ಲಾಚ್‌ಗಳು ಮತ್ತು ಹುಕ್ಸ್‌ ಜೋಡಿಸಲಾಗುತ್ತದೆ. ಬಳಿಕ ನೌಕೆಯಲ್ಲಿ ಯಾವುದೇ ರೀತಿಯ ಸೋರಿಕೆಯಾಗುತ್ತಿದೆಯೇ ಅನ್ನೋದನ್ನ ಪರಿಶೀಲಿಸಿಕೊಳ್ಳಲಾಗುತ್ತದೆ.
    * ಸುರಕ್ಷಿತ ವಾತಾವರಣ ಖಚಿತಪಡಿಸಿಕೊಳ್ಳಲು ಬಾಹ್ಯಾಕಾಶ ನೌಕೆ ಮತ್ತು ಬಾಹ್ಯಾಕಾಶ ನಿಲ್ದಾಣದ ನಡುವಿನ ಒತ್ತಡವನ್ನು ಸಮೀಕರಿಸಲಾಗುತ್ತದೆ.
    * ಸೂಟ್ ಡಾಫಿಂಗ್ ಮತ್ತು ಸಿಸ್ಟಮ್: ಇದೆಲ್ಲ ಮುಗಿದ ಬಳಿಕ ಗಗನಯಾತ್ರಿಗಳು ತಮ್ಮ ಹೆಲ್ಮೆಟ್‌, ಸೂಟ್‌ಗಳನ್ನು ತೆಗೆದುಹಾಕಿ ಎಲ್ಲ ವ್ಯವಸ್ಥೆಗಳು ಸ್ಥಿರವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ.
    * ಇದೆಲ್ಲ ಪ್ರಕ್ರಿಯೆ ಮುಗಿದ ಬಳಿಕ ಹ್ಯಾಚ್‌ ತೆರೆಯಲಾಗುತ್ತದೆ, ಬಳಿಕ ಗಗನಯಾತ್ರಿಗಳು ಅಧಿಕೃತವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಅಧಿಕೃತವಾಗಿ ಪ್ರವೇಶಿಸಲಿದ್ದಾರೆ.

    41 ವರ್ಷದ ಬಳಿಕ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಕಾಶ ಕೇಂದ್ರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಈ ಮೂಲಕ ಬಾಹ್ಯಾಕಾಶವನ್ನು ತಲುಪಿದ 2ನೇ ಭಾರತೀಯ ಎಂಬ ಇತಿಹಾಸ ನಿರ್ಮಿಸಿದ್ದಾರೆ. 1984ರಲ್ಲಿ ಸೋವಿಯತ್ ಕಾರ್ಯಾಚರಣೆಯ ಭಾಗವಾಗಿ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಬಾಹ್ಯಾಕಾಶ ಪ್ರಯಾಣ ಬೆಳೆಸಿದ್ದರು. ಇದಾದ 4 ದಶಕಗಳ ನಂತರ, ಗ್ರೂಪ್ ಕ್ಯಾಪ್ಟನ್ ಶುಕ್ಲಾ ಬಾಹ್ಯಾಕಾಶಕ್ಕೆ ಪ್ರಯಾಣಿಸಿರುವ 2ನೇ ಭಾರತೀಯ ಗಗನಯಾತ್ರಿಯಾಗಿದ್ದಾರೆ.

    ಗಮನಿಸಬೇಕಾದ ಮುಖ್ಯಾಂಶಗಳು
    ನಾಲ್ವರು ಗಗನಯಾನಿಗಳು 14 ದಿನ ಬಾಹ್ಯಾಕಾಶ ನಿಲ್ದಾಣದಲ್ಲಿ ವಾಸ್ತವ್ಯ ಇರಲಿದ್ದಾರೆ. ಈ ವೇಳೆ ಗಗನಯಾನಿಗಳು ಪ್ರಧಾನಿ ನರೇಂದ್ರ ಮೋದಿ, ಶಾಲಾ ವಿದ್ಯಾರ್ಥಿಗಳು ಹಾಗೂ ಬಾಹ್ಯಾಕಾಶ ಕ್ಷೇತ್ರದ ಕಂಪನಿಗಳ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸುವ ನಡೆಸಲಿದ್ದಾರೆ. ಶುಕ್ಲಾ ಅವರು ಐಎಸ್‌ಎಸ್‌ನಲ್ಲಿ ಆಹಾರ ಮತ್ತು ಪೌಷ್ಟಿಕತೆಗೆ ಸಂಬಂಧಿಸಿದ ಪ್ರಯೋಗಗಳನ್ನು ನಡೆಸಲಿದ್ದಾರೆ. ಇಸ್ರೋ ಹಾಗೂ ಬಯೊಟೆಕ್ನಾಲಜಿ ಇಲಾಖೆ ಇದಕ್ಕೆ ಸಹಯೋಗ ನೀಡಲಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ಬಾಹ್ಯಾಕಾಶದಿಂದ ಭೂಮಿಗೆ ʻಶುಕ್ಲʼ ಸಂದೇಶ
    ಇದಕ್ಕೂ ಮುನ್ನ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ (Shubhanshu Shukla) ತಮ್ಮ ಚೊಚ್ಚಲ ಸುಂದರ ಅನುಭವಗಳನ್ನು ಬಾಹ್ಯಾಕಾಶದಿಂದಲೇ ಹಂಚಿಕೊಂಡಿದ್ದರು. ಡ್ರ್ಯಾಗನ್‌ ಕ್ಯಾಪ್ಸೂಲ್‌ ನೌಕೆಯಲ್ಲಿ ಕೂತು ಮಾತನಾಡಿದ್ದ ಶುಕ್ಲ ಬಾಹ್ಯಾಕಾಶದಿಂದ ನಮಸ್ಕಾರ! ಈ ಅದ್ಭುತ ಸವಾರಿಯಲ್ಲಿ ನಾನು ಒಬ್ಬ ಅನುಭವಿ ಮತ್ತು ಮೂವರು ಹೊಸಬರು ಇದ್ದುದರಿಂದ ನಾನು ಇಲ್ಲಿಗೆ ಬರಲು ತುಂಬಾ ರೋಮಾಂಚನಗೊಂಡಿದ್ದೇನೆ. ಲಾಂಚ್‌ಪ್ಯಾಡ್‌ನಲ್ಲಿ ಕುಳಿತಾಗ, ನಾನು ಯೋಚಿಸುತ್ತಿದ್ದದ್ದು ಹೋಗೋಣ ಎಂದಷ್ಟೇ. 30 ದಿನಗಳ ಕ್ವಾರಂಟೈನ್ ನಂತರ, ನಾನು ಸಿದ್ಧನಾಗಿದ್ದೆ. ಉಡಾವಣೆ ಬೇರೇನೋ ಆಗಿತ್ತು. ನಂತರ ಇದ್ದಕ್ಕಿದ್ದಂತೆ ಮೌನ.. ನಿರ್ವಾತದಲ್ಲಿ ನಾನು ತೇಲುತ್ತಿದ್ದೆ. ಅದು ವರ್ಣನಾತೀತ. ಅದ್ಭುತ, ವಿನಮ್ರ ಭಾವನೆ ಎಂದು ಅನುಭವ ಹಂಚಿಕೊಂಡಿದ್ದರು.

    ಇದನ್ನು ಸಾಧ್ಯವಾಗಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಇದು ಕೇವಲ ನನ್ನ ಸಾಧನೆಯಲ್ಲ, ಇದು ನಮ್ಮ ದೇಶದಲ್ಲಿ ಹಲವಾರು ಜನರು ಹಂಚಿಕೊಂಡ ಸಾಮೂಹಿಕ ಸಾಧನೆ. ನಾನು ಇಲ್ಲಿ ಬಹಳಷ್ಟು ನಿದ್ದೆ ಮಾಡುತ್ತಿದ್ದೇನೆ. ನಾನು ಇನ್ನೂ ಶೂನ್ಯ ಗುರುತ್ವಾಕರ್ಷಣೆಗೆ ಒಗ್ಗಿಕೊಳ್ಳುತ್ತಿದ್ದೇನೆ. ಬಾಹ್ಯಾಕಾಶದಲ್ಲಿ ಹೇಗೆ ನಡೆಯುವುದು, ತಿನ್ನುವುದು ಎಂಬುದನ್ನೆಲ್ಲ ಮಗುವಿನಂತೆ ಕಲಿಯುತ್ತಿದ್ದೇನೆ. ನಾನು ಪ್ರತಿ ಕ್ಷಣವನ್ನು ನಿಜವಾಗಿಯೂ ಆನಂದಿಸುತ್ತಿದ್ದೇನೆ. ತಪ್ಪುಗಳನ್ನು ಮಾಡುವುದು, ಸರಿ ಮಾಡುವುದು, ವಾಸ್ತವವಾಗಿ ಬೇರೆಯವರು ಸಹ ಅವುಗಳನ್ನು ಮಾಡುವುದನ್ನು ನೋಡುವುದು ಇನ್ನೂ ಹೆಚ್ಚು ಖುಷಿಯಾಗುತ್ತದೆ. ಇಲ್ಲಿಯವರೆಗೆ ಒಂದು ಮೋಜಿನ, ಅವಾಸ್ತವಿಕ ಸಮಯ ಕಳೆದಿದೆ. ಮುಂದೆ ಇನ್ನೂ ಹೆಚ್ಚಿನದು ಇರಲಿದೆ ಎಂದು ನನಗೆ ಖಚಿತವಾಗಿದೆ. ಮುಂದೆ ಏನಾಗುತ್ತದೆ ಎಂದು ಎದುರು ನೋಡುತ್ತಿದ್ದೇನೆ ಎಂದು ಶುಕ್ಲಾ ತಮಗಾದ ಅನುಭವ ಬಿಚ್ಚಿಟ್ಟಿದ್ದರು.

  • ಇಂದು ಮಧ್ಯಾಹ್ನ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ

    ಇಂದು ಮಧ್ಯಾಹ್ನ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ

    – ಮಧ್ಯಾಹ್ನ 12ಕ್ಕೆ ಆಕ್ಸಿಯಮ್ ನೌಕೆ ಉಡಾವಣೆ

    ಫ್ಲೋರಿಡಾ: ಅಡ್ಡಿ ಆತಂಕಗಳಿಂದಾಗಿ 6 ಬಾರಿ ಮುಂದೂಡಿಕೆಯಾಗಿದ್ದ ಭಾರತೀಯ ಶುಭಾಂಶು ಶುಕ್ಲಾ ಅವರ ಅಂತರಿಕ್ಷಯಾನ ಇಂದು ಮಧ್ಯಾಹ್ನ ಕೈಗೂಡುವ ಸಾಧ್ಯತೆಯಿದೆ.

    ಭಾರತೀಯ ಕಾಲಮಾನ ಇಂದು ಮಧ್ಯಾಹ್ನ 12:01ಕ್ಕೆ ಫ್ಲೋರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಆಕ್ಸಿಯಂ ನೌಕೆ ನಭಕ್ಕೆ ಚಿಮ್ಮಲಿದೆ. ಸ್ಪೇಸ್‌ಎಕ್ಸ್ ಫಾಲ್ಕನ್-9 ರಾಕೆಟ್‌ ಮೂಲಕ ಶುಭಾಂಶು ಶುಕ್ಲಾ ಅವರ ಜೊತೆಗೆ ಇತರೆ ಮೂವರು ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

    28 ಗಂಟೆ ಪ್ರಯಾಣದ ಬಳಿಕ ಉದ್ದೇಶಿತ ಡಾಕಿಂಗ್ ಅನ್ನು ಗುರುವಾರ ಸಂಜೆ 4:30ಕ್ಕೆ ಕೈಗೊಳ್ಳಲಾಗುವುದು ಎಂದು ನಾಸಾ ಮಾಹಿತಿ ನೀಡಿದೆ.

    1984 ರಲ್ಲಿ ಸೋವಿಯತ್ ರಷ್ಯಾದ ಸೋಯುಜ್ ಬಾಹ್ಯಾಕಾಶ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸುವ ಮೂಲಕ ರಾಕೇಶ್ ಶರ್ಮಾ ಇತಿಹಾಸ ಬರೆದಿದ್ದರು. 41 ವರ್ಷಗಳ ನಂತರ ಶುಕ್ಲಾ ಅವರು ಇತಿಹಾಸ ಬರೆಯಲು ಸಜ್ಜಾಗಿದ್ದಾರೆ.

    ಲಕ್ನೋದವರಾದ ಶುಕ್ಲಾ, ಆಕ್ಸಿಯಮ್‌ ಸ್ಪೇಸ್‌ನ ಇಸ್ರೋ-ನಾಸಾ ಬೆಂಬಲಿತ ವಾಣಿಜ್ಯ ಬಾಹ್ಯಾಕಾಶ ಹಾರಾಟದ ಭಾಗವಾಗಿದ್ದಾರೆ. ಫ್ಲೋರಿಡಾದ ಕೆಎಸ್‌ಸಿಯ ಲಾಂಚ್ ಕಾಂಪ್ಲೆಕ್ಸ್ 39A ನಿಂದ ಲಿಫ್ಟ್-ಆಫ್ ಮಾಡಲು ಹೊಂದಿಸಲಾದ ಆಕ್ಸಿಯಮ್-4 (ಆಕ್ಸ್-4) ಕಾರ್ಯಾಚರಣೆಯಲ್ಲಿ ಕಮಾಂಡರ್ ಪೆಗ್ಗಿ ವಿಟ್ಸನ್, ಪೈಲಟ್ ಶುಕ್ಲಾ, ತಜ್ಞರಾದ ಹಂಗೇರಿಯ ಟಿಗೋರ್ ಕಾಪು ಮತ್ತು ಪೋಲೆಂಡ್‌ನ ಸ್ಲಾವೋಸ್ಜ್ ಉಜ್ನಾನ್ಸ್ಕಿ ಇದ್ದಾರೆ.

    ಉಡಾವಣೆಗೆ ಮುನ್ನ ಆಕ್ಸ್-4 ಸಿಬ್ಬಂದಿ ಮತ್ತು ಸ್ಪೇಸ್‌ಎಕ್ಸ್ ತಂಡಗಳು ಉಡಾವಣಾ ದಿನದ ಚಟುವಟಿಕೆಗಳ ಸಂಪೂರ್ಣ ಪೂರ್ವಾಭ್ಯಾಸವನ್ನು ಪೂರ್ಣಗೊಳಿಸಿವೆ. 14 ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಪ್ರಯೋಗಗಳನ್ನು ನಡೆಸಲಿದ್ದಾರೆ.

    ಪ್ರಮುಖವಾಗಿ ಬಾಹ್ಯಾಕಾಶದ ಗುರುತ್ವಾಕರ್ಷಣೆ, ಲೈಫ್, ಬಯೋಲಾಜಿಕಲ್, ಭೂಮಿ ವೀಕ್ಷಣೆ, ಮೆಟಿರಿಯಲ್ ಸೈನ್ಸ್ ಬಗ್ಗೆ ಅಧ್ಯಯನ ಸೇರಿದಂತೆ 60 ರೀತಿಯ ವಿವಿಧ ಪ್ರಯೋಗ ನಡೆಸಲಿದ್ದಾರೆ. ಇದರಲ್ಲಿ ಭಾರತದ ಪರವಾಗಿ ಶುಕ್ಲಾ ನಡೆಸುವ 7 ಪ್ರಯೋಗ ಕೂಡಾ ಸೇರಿದೆ. ತಮ್ಮ ಪ್ರಯಾಣದ ವೇಳೆ ಮೈಸೂರು ಹಲ್ವಾ, ಮಾವಿನ ಹಣ್ಣಿನ ರಸವನ್ನು ಐಎಸ್‌ಎಸ್‌ನ ಸಹಯೋಗಿ ಗಳಿಗಾಗಿ ಕೊಂಡೊಯ್ಯಲಿದ್ದಾರೆ

    ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 14 ದಿನಗಳ ಕಾರ್ಯಾಚರಣೆ ನಡೆಸುವ ‘ಆಕ್ಸ್ -4’ ಗಗನಯಾತ್ರಿಗಳು, ಪ್ರಧಾನಿ ನರೇಂದ್ರ ಮೋದಿ, ಶಾಲಾ ವಿದ್ಯಾರ್ಥಿಗಳು ಮತ್ತು ಬಾಹ್ಯಾಕಾಶ ಉದ್ಯಮದ ಪ್ರಮುಖರೊಂದಿಗೆ ಸಂವಹನ ನಡೆಸುವ ನಿರೀಕ್ಷೆಯಿದೆ.

    ಆಕ್ಸಿಯಮ್ ಮಿಷನ್ 4 ನಲ್ಲಿನ ಶುಕ್ಲಾ ಅವರ ಅನುಭವವನ್ನು 2027 ಕ್ಕೆ ಯೋಜಿಸಲಾಗಿರುವ ಗಗನಯಾನ ಕಾರ್ಯಾಚರಣೆಯಲ್ಲಿ ಉತ್ತಮವಾಗಿ ಬಳಸಿಕೊಳ್ಳಲಾಗುವುದು. ಆಕ್ಸಿಯಮ್ -4 ಕಾರ್ಯಾಚರಣೆಗಾಗಿ ಇಸ್ರೋ 550 ಕೋಟಿ ರೂ.ಗಳನ್ನು ಖರ್ಚು ಮಾಡಿದೆ.

    ಈ ಹಿಂದೆ 1984ರಲ್ಲಿ ರಾಕೇಶ್ ಶರ್ಮಾ, ರಷ್ಯಾದ ಸೂಯೆಜ್ ನೌಕೆ ಯಲ್ಲಿ ಅಂತರಿಕ್ಷ ಪ್ರವಾಸ ಕೈಗೊಂಡು ಇತಿಹಾಸ ನಿರ್ಮಿಸಿದ್ದರು. ಇದಾದ ನಂತರ ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ ಹಾಗೂ ಕಲ್ಪನಾ ಚಾವ್ಲಾ ಬಾಹ್ಯಾಕಾಶಕ್ಕೆ ಹೋಗಿದ್ದರು. ಇವರು ಭಾರತೀಯ ಮೂಲದ ಅಮೆರಿಕ ಪ್ರಜೆಗಳೇ ಹೊರತು ಭಾರತೀಯ ಪ್ರಜೆ ಅಲ್ಲ. ಹೀಗಾಗಿ ಶರ್ಮಾ ನಂತರ ನಭಕ್ಕೆ ಜಿಗಿಯಲಿರುವ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಶುಕ್ಲಾ ಪಾತ್ರವಾಗಲಿದ್ದಾರೆ.

  • ನಾಳೆ ಬಾಹ್ಯಾಕಾಶ ಯೋಜನೆಯ ಆಕ್ಸಿಯಮ್ 4 ಉಡಾವಣೆ – ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲ ಪ್ರಯಾಣ

    ನಾಳೆ ಬಾಹ್ಯಾಕಾಶ ಯೋಜನೆಯ ಆಕ್ಸಿಯಮ್ 4 ಉಡಾವಣೆ – ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲ ಪ್ರಯಾಣ

    – ರಾಕೇಶ್ ಶರ್ಮಾ ಬಳಿಕ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳಸಲಿರುವ ಎರಡನೇ ಗಗನಯಾತ್ರಿ ಶುಭಾಂಶು ಶುಕ್ಲಾ
    – ಶುಕ್ಲಾಗಿದೆ ಬೆಂಗಳೂರು ಸಂಬಂಧ

    ನವದೆಹಲಿ: ಬಾಹ್ಯಾಕಾಶ ಯೋಜನೆಯ ಪ್ರಮುಖ ಯೋಜನೆ ಆಕ್ಸಿಯಮ್ 4ಕ್ಕೆ (Axiom-4) ಮತ್ತೆ ಮೂಹೂರ್ತ ಫಿಕ್ಸ್ ಆಗಿದೆ. ನಾಳೆ ಮತ್ತೆ ಯೋಜನೆ ಚಾಲನೆಯಾಗಲಿದ್ದು, ಖುದ್ದು ನಾಸಾ (NASA) ಮತ್ತು ಸ್ಪೇಸ್ ಎಕ್ಸ್ (SpaceX)  ಈ ಕುರಿತು ಮಾಹಿತಿ ನೀಡಿದೆ.

    ಈ ಹಿಂದೆ ತಾಂತ್ರಿಕ ದೋಷದಿಂದ ಎರಡು ಬಾರಿ ಮುಂದೂಡಿಕೆಯಾಗಿತ್ತು. ಈ ಬಾರಿ ಮತ್ತೆ ಯಾವುದೇ ಸಮಸ್ಯೆ ಇಲ್ಲದೇ ಯಶಸ್ವಿ ಉಡಾವಣೆಯ ಬಗ್ಗೆ ನಾಸಾ ಕೂಡ ವಿಶ್ವಾಸ ವ್ಯಕ್ತಪಡಿಸಿದೆ. ಇನ್ನೂ ಈ ಬಾರಿಯ ಬಾಹ್ಯಾಕಾಶ ಯೋಜನೆಯಲ್ಲಿ ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ (Shubhanshu Shukla) ನೇತೃತ್ವ ವಹಿಸಿರೋದು ಮತ್ತೊಂದು ವಿಶೇಷ.

    ತಾಂತ್ರಿಕ ತೊಂದರೆಗಳ ಕಾರಣಕ್ಕೆ ಈಗಾಗಲೇ ಎರಡು ಬಾರಿ ಮುಂದೂಡಲ್ಪಟ್ಟಿದ್ದ ಆಕ್ಸಿಯಮ್-4 ಬಾಹ್ಯಾಕಾಶ ಕಾರ್ಯಾಚರಣೆಯನ್ನು, ಎಲ್ಲಾ ತಾಂತ್ರಿಕ ದೋಷಗಳನ್ನು ನಿವಾರಣೆ ಮಾಡಿದ ಬಳಿಕ ಕಾರ್ಯಾಚರಣೆಗೆ ಸಿದ್ಧಪಡಿಸಲಾಗಿದೆ. ಬುಧವಾರ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ನಾಸಾ ಮತ್ತು ಸ್ಪೇಸ್ ಎಕ್ಸ್ ಮೂಲಗಳು ಖಚಿತಪಡಿಸಿವೆ. ಬುಧವಾರ ಮಧ್ಯಾಹ್ನ ಭಾರತೀಯ ಕಾಲಮಾನ 12:01ಕ್ಕೆ ಆಕ್ಸಿಯಮ್-4 ಬಾಹ್ಯಾಕಾಶ ಯೋಜನೆಯ ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್‌ಎಕ್ಸ್ ಫಾಲ್ಕನ್-9 ನೌಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದತ್ತ ಚಿಮ್ಮಲಿದೆ.

    ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿರುವ ಉಡಾವಣಾ ಸಂಕೀರ್ಣ 39ಎ ನಿಂದ ಉಡಾವಣೆ ಕಾಣಲಿದೆ. ಫಾಲ್ಕನ್ 9 ರಾಕೆಟ್‌ನಲ್ಲಿ ಉಡಾವಣೆ ಬಳಿಕ ಹೊಸ ಸ್ಪೇಸ್‌ಎಕ್ಸ್ ಡ್ರ‍್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ, ಆಕ್ಸಿಯಮ್-4 ಮಿಷನ್‌ನ ಸಿಬ್ಬಂದಿ ಕಕ್ಷೆಯಲ್ಲಿರುವ ಪ್ರಯೋಗಾಲಯವನ್ನು ತಲುಪಲಿದ್ದಾರೆ. ಉದ್ದೇಶಿತ ಡಾಕಿಂಗ್ ಅನ್ನು ಜೂನ್ 26 ಗುರುವಾರ ಸಂಜೆ ಭಾರತೀಯ ಕಾಲಮಾನ 4:30ಕ್ಕೆ ಕೈಗೊಳ್ಳಲಾಗುವ ಬಗ್ಗೆ ನಾಸಾ ಮಾಹಿತಿ ನೀಡಿದೆ.

    ಈ ಹಿಂದೆ ಎರಡು ಬಾರಿ ಪ್ರಯತ್ನ ವಿಫಲ:
    ಈ ಹಿಂದೆ ಮೊದಲ ಉಡಾವಣೆ ದಿನಾಂಕವನ್ನು ಕಳೆದ ತಿಂಗಳ ಮೇ 29ಕ್ಕೆ ನಿಗದಿ ಮಾಡಲಾಗಿತ್ತು. ಆದರೆ ಫ್ಲೋರಿಡಾದಲ್ಲಿ ಹವಾಮಾನ ಸಮಸ್ಯೆ ಎದುರಾಗಿದ್ದ ಹಿನ್ನೆಲೆ ಉಡಾವಣೆಯನ್ನು ಮುಂದೂಡಲಾಗಿತ್ತು. ಅದಾದ ಬಳಿಕ ಅಂದರೆ ಜೂನ್ 8, 10, 11, 19 ಮತ್ತು 22 ಕ್ಕೆ ಸತತವಾಗಿ ಮುಂದೂಡಲಾಯಿತು. ಕಾರಣ ಸ್ಪೇಸ್‌ಎಕ್ಸ್ ಫಾಲ್ಕನ್ -9 ರಾಕೆಟ್‌ನ ಮೊದಲ ಹಂತದಲ್ಲಿ ತಾಂತ್ರಿಕ ದೋಷ ಪತ್ತೆಯಾಗಿತ್ತು. ಫಾಲ್ಕನ್ -9 ರಾಕೆಟ್‌ನಲ್ಲಿ ಥ್ರಸ್ಟರ್ ಮತ್ತು ಆಕ್ಸಿಡೈಸರ್ ಸೋರಿಕೆಯ ಸಮಸ್ಯೆಗಳು ಕಂಡುಬಂದಿದ್ದರಿಂದ, ಉಡಾವಣೆಯನ್ನು ಮುಂದೂಡುವ ನಿರ್ಧಾರ ಕೈಗೊಂಡಿದ್ದಾಗಿ ಸ್ಪೇಸ್‌ಎಕ್ಸ್ ತಿಳಿಸಿತ್ತು. ರಾಕೆಟ್‌ನಲ್ಲಿ ದ್ರವ ಆಮ್ಲಜನಕ ಸೋರಿಕೆ ಪರಿಣಾಮವಾಗಿ ರಾಕೆಟ್‌ನ ದುರಸ್ತಿ ಕಾರ್ಯಕ್ಕೆ ಸ್ಪೇಸ್‌ಎಕ್ಸ್ ಮುಂದಾಗಿತ್ತು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಇಸ್ರೋ ಅಧ್ಯಕ್ಷ ಡಾ.ವಿ. ನಾರಾಯಣನ್ ನೇತೃತ್ವದ ಭಾರತೀಯ ವಿಜ್ಞಾನಿಗಳ ತಂಡ, ರಾಕೆಟ್‌ನ ಪೂರ್ಣ ದುರಸ್ತಿಯ ದೃಢೀಕರಣವನ್ನು ಬಯಸಿತ್ತು. ಇಸ್ರೋದ ಒತ್ತಡಕ್ಕೆ ಮಣಿದ ಸ್ಪೇಸ್‌ಎಕ್ಸ್ ರಾಕೆಟ್‌ನ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಿದ್ದು, ಇದೀಗ ಜೂನ್ 25ರಂದು ಅಂದರೆ ನಾಳೆ ಉಡಾವಣೆಗೆ ಸಿದ್ಧತೆ ಮಾಡಿಕೊಂಡಿದೆ.

    ಕ್ರ‍್ಯೂ ಮೆಂಬರ್ಸ್:
    ಪೆಗ್ಗಿ ವಿಟ್ಸನ್, ಪೈಲಟ್ ಶುಭಾಂಶು ಶುಕ್ಲಾ, ಮತ್ತು ಸ್ಲಾವೋಸ್ಜ್ ಉಜ್ನಾನ್ಸ್ಕಿ ವಿಸ್ನಿವ್ಸ್ಕಿ ಮತ್ತು ಟಿಬೋರ್ ಕಮು, ಸೇರಿದಂತೆ ಮಿಷನ್ ತಜ್ಞರು ಮತ್ತು ಸಿಬ್ಬಂದಿ ಫ್ಲೋರಿಡಾದಲ್ಲಿ ಕ್ವಾರಂಟೈನ್‌ನಲ್ಲಿರಲಿದ್ದಾರೆ. ಬಾಹ್ಯಾಕಾಶಕ್ಕೆ ಹೊರಟ ಸಿಬ್ಬಂದಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 14 ದಿನಗಳವರೆಗೆ ಇರಲಿದ್ದು, ವೈಜ್ಞಾನಿಕ ಪ್ರಯೋಗಗಳನ್ನು ಮಾಡಲಿದ್ದಾರೆ.

    ಶುಭಾಂಶು ಶುಕ್ಲಾ ಹಿನ್ನೆಲೆ:
    ಭಾರತೀಯ ಗಗನಯಾತ್ರಿ ರಾಕೇಶ್ ಶರ್ಮಾರ 1984ರ ಕಾರ್ಯಾಚರಣೆಯ ಬಳಿಕ ಬಾಹ್ಯಾಕಾಶಕ್ಕೆ ಪ್ರಯಾಣಿಸಲಿರುವ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಶುಕ್ಲಾ ಪಾತ್ರರಾಗಲಿದ್ದಾರೆ.

    39 ವರ್ಷದ ಶುಕ್ಲಾ ಮೂಲತಃ ಉತ್ತರಪ್ರದೇಶದ ಲಕ್ನೋದವರು. ಅಲಿಗಂಜ್‌ನ ಮಾಂಟೆಸ್ಸರಿ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. 1999ರ ಕಾರ್ಗಿಲ್ ಯುದ್ಧದಿಂದ ಪ್ರೇರಿತರಾದ ಶುಕ್ಲಾರವರು, ಸ್ವತಂತ್ರವಾಗಿ ಯುಪಿಎಸ್‌ಸಿ ಎನ್‌ಡಿಎ ಪರೀಕ್ಷೆಗೆ ಅರ್ಜಿ ಸಲ್ಲಿಸಿ ಉತ್ತೀರ್ಣರಾಗಿದ್ದರು. ಬಳಿಕ ಮಿಲಿಟರಿ ತರಬೇತಿಯನ್ನು ಪೂರ್ಣಗೊಳಿಸಿ 2005ರಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಿಂದ ಕಂಪ್ಯೂಟರ್ ಸೈನ್ಸ್ನಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಪಡೆದಿದ್ದರು.

    ಬಳಿಕ ಅವರು ಫ್ಲೈಯಿಂಗ್ ಬ್ರಾಂಚ್‌ಗೆ ಆಯ್ಕೆಯಾದರು ಮತ್ತು ಭಾರತೀಯ ವಾಯುಪಡೆ ಅಕಾಡೆಮಿಯಲ್ಲಿ ತರಬೇತಿ ಪಡೆದರು. ಜೂನ್ 2006ರಲ್ಲಿ ಭಾರತೀಯ ವಾಯುಪಡೆಯ ಫೈಟರ್ ಸ್ಟ್ರೀಮ್‌ಗೆ ಫ್ಲೈಯಿಂಗ್ ಆಫೀಸರ್ ಆಗಿ ನಿಯೋಜನೆಯಾದರು.

    ಶುಕ್ಲಾ ಭಾರತೀಯ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮಕ್ಕಾಗಿ, ಭಾರತೀಯ ವಾಯುಪಡೆಯ ಸಂಸ್ಥೆಯಾದ ಇನ್‌ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್‌ಗೆ 2019ರಲ್ಲಿ ಶುಕ್ಲಾ ಅವರನ್ನು ಗಗನಯಾತ್ರಿಯಾಗಿ ಆಯ್ಕೆ ಪ್ರಕ್ರಿಯೆಯಲ್ಲಿ ಸೇರಿಸಿಕೊಂಡಿತು. ನಂತರ, ಅವರನ್ನು ಐಎಎಂ ಮತ್ತು ಇಸ್ರೋ ಅಂತಿಮ ನಾಲ್ಕರಲ್ಲಿ ಸೇರಿಸಿತು. ಬಳಿಕ 2020ರಲ್ಲಿ, ರಷ್ಯಾದ ಯೂರಿ ಗಗಾರಿನ್ ಗಗನಯಾತ್ರಿ ತರಬೇತಿ ಕೇಂದ್ರದಲ್ಲಿ ಇತರ ಮೂವರು ಆಯ್ದಾ ಗಗನಯಾತ್ರಿಗಳೊಂದಿಗೆ ಮೂಲಭೂತ ತರಬೇತಿಗಾಗಿ ತೆರಳಿದ್ದರು. 2021ರಲ್ಲಿ ತರಬೇತಿ ಪೂರ್ಣಗೊಂಡಿತು. ನಂತರ ಭಾರತಕ್ಕೆ ಮರಳಿದ ಶುಕ್ಲಾ ಬೆಂಗಳೂರಿನಲ್ಲಿರುವ ಗಗನಯಾತ್ರಿ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದು, ಇದೇ ಅವಧಿಯಲ್ಲಿ, ಬೆಂಗಳೂರಿನ ಐಐಎಸ್ಸಿಯಿಂದ ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು.

    ಭಾರತದ ಮೊದಲ ಮಾನವ ಬಾಹ್ಯಾಕಾಶ ಯಾನಕ್ಕಾಗಿ ತಿರುವನಂತಪುರಂನಲ್ಲಿರುವ ಇಸ್ರೋದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ಗಗನಯಾತ್ರಿ ತಂಡದ ಸದಸ್ಯರ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ 2024 ಫೆಬ್ರವರಿ 27 ರಂದು ಘೋಷಿಸಿದಾಗ, ಗಗನಯಾತ್ರಿ ತಂಡದ ಸದಸ್ಯರಾಗಿ ಅವರ ಹೆಸರನ್ನು ಮೊದಲು ಅಧಿಕೃತವಾಗಿ ಸಾರ್ವಜನಿಕವಾಗಿ ಘೋಷಿಸಲಾಯಿತು.

    ಭಾರತೀಯ ವಾಯುಪಡೆ ಪೈಲಟ್ ಅಗಿರುವ ತಂಡದ ಕ್ಯಾಪ್ಟನ್ ಶುಭಾಂಶು ಶುಕ್ಲಾ ಈ ಹಿಂದೆ ಭಾರತೀಯ ವಾಯುಪಡೆಯಲ್ಲಿ ಮಿಗ್ -29 ಮತ್ತು ಸು -30, ಎಂಕೆಐನಂತಹ ಜೆಟ್‌ಗಳಲ್ಲಿ 2000ಕ್ಕಿಂತಲೂ ಹೆಚ್ಚು ಗಂಟೆಗಳ ಕಾಲ ಹಾರಟ ನಡೆಸಿದ ಅನುಭವ ಹೊಂದಿದ್ದು, ಈ ಬಾರಿಯ ಬಾಹ್ಯಾಕಾಶದ ಯೋಜನೆಯಲ್ಲಿ ಮಿಷನ್ ಪೈಲಟ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

    ಶುಕ್ಲಾದಂತ ವೈದ್ಯರಾಗಿರುವ ಡಾ.ಕಮ್ನಾ ಮಿಶ್ರಾರನ್ನ ವಿವಾಹವಾಗಿದ್ದು, ಕಮ್ನಾ ಮಿಶ್ರ ಶುಕ್ಲಾರ ಬಾಲ್ಯ ಗೆಳತಿ ಕೂಡ. ದಂಪತಿಗೆ ಒಬ್ಬ ಮಗನಿದ್ದಾನೆ. ಶುಕ್ಲಾ ತಂದೆ ಶಂಭು ದಯಾಳ್ ಶುಕ್ಲಾ ನಿವೃತ್ತ ಸರ್ಕಾರಿ ಅಧಿಕಾರಿ, ತಾಯಿ ಆಶಾ ಶುಕ್ಲಾ ಗೃಹಿಣಿ. ಶುಕ್ಲಾರ ಅಕ್ಕ ನಿಧಿ ಎಂಬಿಎ ಪದವಿ ಪಡೆದಿದ್ದಾರೆ. ಇನ್ನೊಬ್ಬ ಅಕ್ಕ ಸುಚಿ ಮಿಶ್ರಾ ಶಾಲಾ ಶಿಕ್ಷಕಿಯಾಗಿದ್ದು, ಶುಕ್ಲಾ ಕಿರಿಯ ಮಗ.