Tag: ನಾರಾ ಭರತ್ ರೆಡ್ಡಿ

  • ಉದ್ಘಾಟನೆಗೊಳ್ಳದ ರಾಯಣ್ಣನ ಫೈಬರ್ ಮೂರ್ತಿ ತೆರವು ಮಾಡಿ ಕಂಚಿನ ಪುತ್ಥಳಿ ನಿರ್ಮಾಣ: ನಾರಾ ಭರತ್ ರೆಡ್ಡಿ

    ಉದ್ಘಾಟನೆಗೊಳ್ಳದ ರಾಯಣ್ಣನ ಫೈಬರ್ ಮೂರ್ತಿ ತೆರವು ಮಾಡಿ ಕಂಚಿನ ಪುತ್ಥಳಿ ನಿರ್ಮಾಣ: ನಾರಾ ಭರತ್ ರೆಡ್ಡಿ

    ಬಳ್ಳಾರಿ: ಈಗಿರುವ ಸಂಗೊಳ್ಳಿ ರಾಯಣ್ಣನ ಪುತ್ಥಳಿಯು (Sangolli Rayanna Statue) ಫೈಬರ್‌ನಿಂದ ತಯಾರಿಸಲಾಗಿದ್ದು, ಇದನ್ನು ತೆರವುಗೊಳಿಸಿ ನೂತನ ಕಂಚಿನ ಪುತ್ಥಳಿಯನ್ನು ನಿರ್ಮಿಸಿ ಸ್ಥಾಪಿಸಲಾಗುವುದು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ (Nara Bharath Reddy) ಹೇಳಿದರು.

    ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಎದುರು ಇರುವ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ ನಂತರ ಸಮುದಾಯದ ಮುಖಂಡರು ಹಾಗೂ ವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ ನಿರ್ಮಾಣ ಹೋರಾಟ ಸಮಿತಿಯ ಮುಖಂಡರೊಂದಿಗೆ ಮಾತುಕತೆ ನಡೆಸಿದರು. ಇದನ್ನೂ ಓದಿ: ಧರ್ಮಸ್ಥಳ ಕೇಸ್ NIAಗೆ ಇಲ್ಲ – ಸಿಎಂ ಪರೋಕ್ಷ ಹೇಳಿಕೆ

     

    ಈ ಹಿಂದೆ ರಾಯಣ್ಣನ ಪ್ರತಿಮೆ ಸ್ಥಾಪನೆ ವೇಳೆ ಸರ್ಕಾರ ಹಾಗೂ ಕಾನೂನಾತ್ಮಕ ಅನುಮತಿಗಳನ್ನು ಪಡೆಯಲಾಗಿರಲಿಲ್ಲ, ಹೀಗಾಗಿ ಪುತ್ಥಳಿಯ ಅನಾವರಣ ಕಾರ್ಯ ನೆನೆಗುದಿಗೆ ಬಿದ್ದಿತ್ತು, ಸಮುದಾಯದ ಮುಖಂಡರ ಬೇಡಿಕೆಯನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಗಮನಕ್ಕೆ ತಂದು, ಸಚಿವ ಸಂಪುಟ ಸಭೆಯಲ್ಲಿ ವಿಷಯ ಮಂಡಿಸಿ ಅನುಮತಿ ದೊರಕಿಸಿ ಕೊಟ್ಟಿದ್ದೇವೆ ಎಂದರು. ಇದನ್ನೂ ಓದಿ:  ಖಾಸಗಿ ಕಾಲೇಜಿನ ವೈದ್ಯ ವಿದ್ಯಾರ್ಥಿನಿಯಿಂದ ಬಿಮ್ಸ್‌ನಲ್ಲಿ ರೋಗಿಗಳಿಗೆ ಚಿಕಿತ್ಸೆ!

    ಪುತ್ಥಳಿಯ ಸ್ಥಾಪನೆ ವಿಚಾರದಲ್ಲಿ ನನ್ನೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್, ಮಾಜಿ ಸಚಿವ ಬಿ.ನಾಗೇಂದ್ರ ಅವರು ಕೂಡ ಸರ್ಕಾರದ ಮೇಲೆ ಒತ್ತಡ ತಂದು ಈ ಕಾರ್ಯವನ್ನು ಸಾಧ್ಯವಾಗಿಸಿದ್ದಾರೆ. ಸಮುದಾಯದ ಪರ ಅವರಿಗೂ ಧನ್ಯವಾದ ಸಲ್ಲಿಸುವೆ. ಈಗಿರುವ ಪುತ್ಥಳಿಯು ಫೈಬರ್ ನಿಂದ ತಯಾರಿಸಲಾಗಿದ್ದು, ಈ ಪುತ್ಥಳಿಯನ್ನು ತೆರವುಗೊಳಿಸಲಾಗುವುದು ಎಂದು ಹೇಳಿದ ಶಾಸಕ ನಾರಾ ಭರತ್ ರೆಡ್ಡಿ, ರಾಯಣ್ಣನ ನೂತನ ಕಂಚಿನ ಪ್ರತಿಮೆಯನ್ನು ನಿರ್ಮಿಸಿ, ಇದೇ ಜಾಗದಲ್ಲಿ ಸ್ಥಾಪಿಸಿ, ಅನಾವರಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

    ಈ ಸಂದರ್ಭ ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ, ಕುರುಬರ ಸಂಘದ ಜಿಲ್ಲಾಧ್ಯಕ್ಷ ಡಾ.ಗಾದಿಲಿಂಗನಗೌಡ, ಮಾಜಿ ಮೇಯರ್ ಎಂ.ರಾಜೇಶ್ವರಿ, ಮಾಜಿ ಉಪ ಮೇಯರ್ ಬೆಣಕಲ್ ಬಸವರಾಜಗೌಡ, ಹೋರಾಟ ಸಮಿತಿಯ ಇಟ್ಟಂಗಿ ಭಟ್ಟಿ ಯರಿಸ್ವಾಮಿ, ಕೆ.ಮೋಹನ್, ಸುಬ್ಬರಾಯುಡು, ಬೆಣಕಲ್ ಮಂಜುನಾಥ, ಕೆ.ಯಶೋಧಾ, ಕೊಳಗಲ್ ಅಂಜಿನಿ, ಸುರೇಂದ್ರಗೌಡ, ಕವಿತಾ ಸೇರಿದಂತೆ ಹಲವರು ಇದ್ದರು.

  • ನನ್ನ ಮನೆಯಲ್ಲಿ ಒಂದು ತುಂಡು ಸೀಜ್‌ ಆಗಿಲ್ಲ: ನಾರಾ ಭರತ್‌ ರೆಡ್ಡಿ

    ನನ್ನ ಮನೆಯಲ್ಲಿ ಒಂದು ತುಂಡು ಸೀಜ್‌ ಆಗಿಲ್ಲ: ನಾರಾ ಭರತ್‌ ರೆಡ್ಡಿ

    ಬಳ್ಳಾರಿ: ನನ್ನ ಮನೆಯಲ್ಲಿ ಒಂದು ತುಂಡನ್ನೂ ಸೀಜ್‌ ಮಾಡಿಲ್ಲ ಎಂದು ಕಾಂಗ್ರೆಸ್‌ (Congress)  ಶಾಸಕ ನಾರಾ ಭರತ್‌ ರೆಡ್ಡಿ (Nara Bharat Reddy) ಹೇಳಿದ್ದಾರೆ.

    ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಸತತ 14 ಗಂಟೆಗಳ ಕಾಲ ವಿಚಾರಣೆ ನಡೆಸಿದ ಇಡಿ (ED) ಅಧಿಕಾರಿಗಳು ಮಹತ್ವದ ದಾಖಲೆಗಳನ್ನ ಎರಡು ಬ್ಯಾಗ್‌ನಲ್ಲಿ ಸಂಗ್ರಹಿಸಿ ತೆಗೆದುಕೊಂಡು ಹೋಗಿದ್ದಾರೆ.

    ಇಡಿ ವಿಚಾರಣೆ ಅಂತ್ಯದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ನಾರಾ ಭರತ್‌ ರೆಡ್ಡಿ, ಇಡಿ ಅಧಿಕಾರಿಗಳು ಹಲವಾರು ಪ್ರಶ್ನೆಗಳನ್ನು ಕೇಳಿದ್ದರು. ನಮ್ಮ ವ್ಯವಹಾರ, ವಾಲ್ಮೀಕಿ ನಿಗಮದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಕೋವಿಡ್ ಕಾರಣದಿಂದಾಗಿ ಯಾವುದೇ ಸಾವುಗಳಾಗಿಲ್ಲ: ದಿನೇಶ್ ಗುಂಡೂರಾವ್

     

    ವಿಚಾರಣೆ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸಹಕಾರ ಕೊಟ್ಟಿದ್ದೇನೆ. ಪಂಚನಾಮೆ ಮಾಡಿದ್ದು ಅದರಲ್ಲಿ ಸ್ಪಷ್ಟವಾಗಿ ಏನನ್ನೂ ವಶಪಡಿಸಿಕೊಂಡಿಲ್ಲ ಎಂದು ತಿಳಿಸಿದ್ದಾರೆ. 40 ಕೋಟಿ ರೂ., 50 ಕೋಟಿ ರೂ. ಜಪ್ತಿಯಾಗಿದೆ ಎಂದು ಹರಿದಾಡುತ್ತಿದೆ. ಇದೆಲ್ಲ ಸುಳ್ಳು ಮಾಹಿತಿ ಎಂದು ಹೇಳಿದರು. ಇದನ್ನೂ ಓದಿ: ಬಳ್ಳಾರಿ ಚುನಾವಣೆಗೆ ವಾಲ್ಮೀಕಿ ಹಣ ಬಳಕೆ; ಮತದಾರರಿಗೆ ತಲಾ 200 ರೂ. ಹಂಚಿಕೆ – ಯಾವ ಕ್ಷೇತ್ರಕ್ಕೆ ಎಷ್ಟು?

    ರಾಜಕೀಯ ಅಂದರೆ ವಿರೋಧ ಪಕ್ಷಗಳು ಷಡ್ಯಂತ್ರ ಮಾಡುತ್ತಿವೆ. ಆದರೆ ಯಾರು ಏನೇ ಮಾಡಿದರೂ ನಮ್ಮನ್ನು ಏನು ಮಾಡಲು ಸಾಧ್ಯವಿಲ್ಲ. ಜನರ ಪ್ರೀತಿಯಿಂದ ಗೆದ್ದಿದ್ದೇನೆ. ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎನ್ನುವುದು ಇಡೀ ದೇಶಕ್ಕೆ ಗೊತ್ತಿದೆ ಎಂದು ತಿಳಿಸಿದರು.

    ಮುಂದೆ ಅಧಿಕಾರಿಗಳು ಏನೇ ದಾಖಲಾತಿ ಕೊಟ್ಟರೆ ಅವರಿಗೆ ಕೊಡುವೆ. ಹೆಚ್ಚಿನ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿಲ್ಲ ಎಂದು ಈ ವೇಳೆ ಹೇಳಿದರು.

  • ರೆಡ್ಡಿ ಕುಟುಂಬಗಳ ನಡುವಿನ ಕಾಳಗಕ್ಕೆ ಸಾಕ್ಷಿಯಾಗಲಿದೆಯಾ ಬಳ್ಳಾರಿ ನಗರ ಕ್ಷೇತ್ರ?

    ರೆಡ್ಡಿ ಕುಟುಂಬಗಳ ನಡುವಿನ ಕಾಳಗಕ್ಕೆ ಸಾಕ್ಷಿಯಾಗಲಿದೆಯಾ ಬಳ್ಳಾರಿ ನಗರ ಕ್ಷೇತ್ರ?

    ಬಳ್ಳಾರಿ: ಗಣಿನಾಡು ಎಂದೇ ಪ್ರಸಿದ್ಧಿಯಾದ ಬಳ್ಳಾರಿ (Ballari) ಜಿಲ್ಲೆ ಅಪಾರ ಗಣಿ ಸಂಪತ್ತನ್ನು ಹೊಂದಿದೆ. ಹೀಗಾಗಿ ಜಿಲ್ಲೆಯ ನಗರದ ಆಡಳಿತದ ಮೇಲೆ ರಾಜಕಾರಣಿಗಳು ಕಣ್ಣಿಟ್ಟಿದ್ದಾರೆ. ಇದೇ ಕಾರಣಕ್ಕಾಗಿ ಈ ಕ್ಷೇತ್ರ ಈಗ ಜಿದ್ದಾಜಿದ್ದಿಗೆ ಕಾರಣವಾಗಿದೆ.

    ಬಳ್ಳಾರಿ ಜಿಲ್ಲೆಯಲ್ಲಿ ಒಂದೇ ಒಂದು ಸಾಮಾನ್ಯ ಕ್ಷೇತ್ರವಿರುವುದರಿಂದ ಪೈಪೋಟಿ ಸಾಮಾನ್ಯವಾಗಿ ಹೆಚ್ಚಿರುತ್ತದೆ. ಇಲ್ಲಿ ಪಕ್ಷದ ಚಿನ್ಹೆಗಿಂತ ವ್ಯಕ್ತಿಯ ವರ್ಚಸ್ಸಿನ ಮೇಲೆ ಚುನಾವಣೆ ನಡೆಯುತ್ತದೆ. ಈ ಬಾರಿ ಎರಡು ರೆಡ್ಡಿ ಕುಟುಂಬಗಳ ಮಧ್ಯೆ ಯುದ್ಧವಾಗುವ ಸಾಧ್ಯತೆಗಳಿವೆ. ಗಾಲಿ ಜನಾರ್ದನ ರೆಡ್ಡಿ (Gali Janardhan Reddy) ಕುಟುಂಬಕ್ಕೆ ಠಕ್ಕರ್ ಕೊಡಬಲ್ಲ ಮತ್ತೊಂದು ರೆಡ್ಡಿ ಕುಟುಂಬ ಎಂದರೆ ಅದು ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಕುಟುಂಬ.

    ಸೂರ್ಯನಾರಾಯಣ ರೆಡ್ಡಿ ಅವರ ಪುತ್ರ ನಾರಾ ಭರತ್ ರೆಡ್ಡಿ (Nara Bharath Reddy) ಅವರು ಈ ಬಾರಿ ಕಾಂಗ್ರೆಸ್‌ನಿಂದ (Congress) ಸ್ಪರ್ಧೆ ಮಾಡಿದ್ದಾರೆ. ಈ ನಡುವೆ ಜನಾರ್ದನ ರೆಡ್ಡಿ ಪತ್ನಿ ಅಖಾಡದಲ್ಲಿ ಇರುವುದರಿಂದ ಕ್ಷೇತ್ರದಲ್ಲಿ ಹೈ ವೋಲ್ಟೇಜ್ ಸ್ಪರ್ಧೆ ನಡೆಯಲಿದೆ. ಹಣ ಬಲ, ತೋಳ್ಬಲ ಈ ಎರಡೂ ಕುಟುಂಬದಲ್ಲಿ ಇರುವ ಕಾರಣ ಬಳ್ಳಾರಿ ನಗರ ಕ್ಷೇತ್ರ ಒಂದು ಪ್ರತಿಷ್ಠೆಯ ಕಣವಾಗಿದೆ.

    ಮತ್ತೊಂದು ಸಾರಿ ಕ್ಷೇತ್ರದಲ್ಲಿ ಗೆದ್ದು ಮಂತ್ರಿ ಪದವಿ ಪಡೆಯಲೇ ಬೇಕು ಎನ್ನುವ ತವಕದಲ್ಲಿ ಸೋಮಶೇಖರ್ ರೆಡ್ಡಿ (G.Somashekar Reddy) ಇದ್ದಾರೆ. ನಗರ ಪ್ರದೇಶಗಳಲ್ಲಿ ನಡೆಯುತ್ತಿರುವ ಆಮೆಗತಿ ಕಾಮಗಾರಿಗಳು, ಕುಡಿಯುವ ನೀರಿನ ಸಮಸ್ಯೆಯಿಂದಾಗಿ ನಗರ ಪ್ರದೇಶದ ಜನರು ರೋಸಿ ಹೋಗಿದ್ದಾರೆ. ಹೀಗಾಗಿ ಶಾಸಕ ಸೋಮಶೇಖರ್ ರೆಡ್ಡಿಯವರಿಗೆ ದೊಡ್ಡ ವಿರೋಧ ವ್ಯಕ್ತವಾಗಿದೆ. ಇನ್ನು ಜನಾರ್ದನ ರೆಡ್ಡಿ ಮತ್ತು ರಾಮುಲು ನಡುವಿನ ಬಿರುಕು ರೆಡ್ಡಿ ರಾಜಕೀಯ ಜೀವನದ ಮೇಲೆ ಪರಿಣಾಮ ಬೀರಲಿದೆ.

    ಕಳೆದ ಒಂದು ತಿಂಗಳಿನಿಂದ ಸುಮಾರು 12 ಸಾವಿರ ಮನೆಗಳಿಗೆ ಪಟ್ಟಾ ವಿತರಣೆ ಮಾಡಿದ ಸೋಮಶೇಖರ್ ರೆಡ್ಡಿ ಮತ ನೀಡಿ ಒಂದು ಬಾರಿ ಅವಕಾಶ ಮಾಡಿಕೊಡಿ ಎಂದು ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ. ಶ್ರೀರಾಮುಲು ಹಾಗೂ ಸೋಮಶೇಖರ್ ರೆಡ್ಡಿ ಕಾಂಬಿನೇಷನ್ ಬಳ್ಳಾರಿ ನಗರ ಕ್ಷೇತ್ರದ ಮೇಲೆ ಪ್ರಭಾವ ಬೀರಲಿದ್ದು, ಬಿಜೆಪಿಗೆ ಒಂದು ಶಕ್ತಿ ಬಂದಿದೆ.

    ಕೈ-ಕಮಲ ಪಕ್ಷಗಳ ನಡುವೆ ಸಾಂಪ್ರದಾಯಿಕ ಹೋರಾಟಕ್ಕೆ ಸಾಕ್ಷಿಯಾಗುತ್ತಾ ಬಂದಿದ್ದ ಬಳ್ಳಾರಿ ನಗರ ಕ್ಷೇತ್ರದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅಸ್ವಿತ್ವಕ್ಕೆ ತಂದ ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ದ ಪ್ರವೇಶ ತೀವ್ರ ಕುತೂಹಲ ಮೂಡಿಸಿದೆ.

    ನಗರದಲ್ಲಿ ಕೆಆರ್‌ಪಿಪಿ (KRPP) ಪಕ್ಷದ ಅರುಣಾ ಲಕ್ಷ್ಮೀ ಸ್ಪರ್ಧೆಯಿಂದ ಕಾಂಗ್ರೆಸ್ ವೋಟ್‌ಬ್ಯಾಂಕ್ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ನಗರ ಪ್ರದೇಶದಲ್ಲಿ ಸಾಲು ಸಾಲು ಸಮಸ್ಯೆಗಳಿವೆ. ಹಾಳಾದ ರಸ್ತೆ ಹಾಗೂ ಕುಡಿಯುವ ನೀರಿನ ಸಮಸ್ಯೆಯಿದ್ದು, ಅಭಿವೃದ್ಧಿಯಲ್ಲಿ ತೀರಾ ಹಿಂದಿರುವ ನಗರವಾಗಿದೆ. ಕೋಟಿ ಕೋಟಿ ಹಣವಿದ್ದರೂ ಅಭಿವೃದ್ಧಿ ಕುಂಠಿತವಾಗಿದ್ದು, ಬಿಜೆಪಿಗೆ ತಲೆನೋವು ತಂದಿದೆ. ಬಿಜೆಪಿ ಕಾರ್ಯಕರ್ತರ ಕಡೆಗಣನೆ, ರೆಡ್ಡಿ ವಿರುದ್ಧದ ಕಾರ್ಯಕರ್ತರ ಅಸಮಾಧಾನ, ಬಿಜೆಪಿ ಆಡಳಿತ ವಿರೋಧಿ ಅಲೆ ಹೆಚ್ಚಾಗಿದ್ದು, ಕಾಂಗ್ರೆಸ್ ಇದರ ಲಾಭ ಪಡೆಯಲು ಮುಂದಾಗಿದೆ.

    1957ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಮುಂಡ್ಲೂರು ಗಂಗಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಕಾಂಗ್ರೆಸ್ ವಿರುದ್ಧ ಜಯಗಳಿಸಿದ್ದರು. 1962ರಲ್ಲಿ ಕಾಂಗ್ರೆಸ್‌ನಿಂದ ಟಿ.ಜಿ.ಸತ್ಯನಾರಾಯಣ ಜಯಗಳಿಸಿದರೆ, 1967ರಲ್ಲಿ ಎಸ್‌ಡಬ್ಲ್ಯುಎಂ ಪಕ್ಷದಿಂದ ಸ್ಪರ್ಧಿಸಿದ ವಿ.ನಾಗಪ್ಪ ಅವರು ಕಾಂಗ್ರೆಸ್ ವಿರುದ್ಧ ಗೆಲ್ಲುತ್ತಾರೆ. 1972ರಲ್ಲಿ ಎನ್‌ಸಿಒ ಪಕ್ಷದಿಂದ ಇವರು ಮರು ಆಯ್ಕೆಯಾಗುತ್ತಾರೆ. 1978ರಲ್ಲಿ ಕೆ.ಭಾಸ್ಕರ್ ನಾಯ್ಡು ಕಾಂಗ್ರೆಸ್ (ಐ) ಪಕ್ಷದಿಂದ ಗೆಲ್ಲುತ್ತಾರೆ. ನಂತರ ಮುಂಡ್ಲೂರು ಕುಟುಂಬದ ರಾಜಕಾರಣ ಆರಂಭವಾಗುತ್ತದೆ.

    1982ರಲ್ಲಿ ಜೆಎನ್‌ಪಿ ಪಕ್ಷದಿಂದ ಸ್ಪರ್ಧಿಸಿದ್ದ ಮುಂಡ್ಲೂರು ರಾಮಪ್ಪ ಕಾಂಗ್ರೆಸ್ ವಿರುದ್ಧ ಭರ್ಜರಿ ಜಯಗಳಿಸುತ್ತಾರೆ. ನಂತರ 1985 ಹಾಗೂ 1989ರಲ್ಲಿ ನಡೆದ ಎರಡು ಚುನಾವಣೆಗಳಲ್ಲೂ ಇವರೇ ಪುನರಾಯ್ಕೆಯಾಗುತ್ತಾರೆ. 1994ರಲ್ಲಿ ಪಕ್ಷೇತರರಾಗಿ ಪ್ರಥಮ ಜಯಗಳಿಸಿದ ಮಾಜಿ ಸಚಿವ ಎಂ.ದಿವಾಕರ ಬಾಬು 1999ರ ಹೈವೋಲ್ಟೇಜ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಮತ್ತೊಮ್ಮೆ ಗೆಲುವು ದಾಖಲಿಸುತ್ತಾರೆ. 2004ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಹಾಲಿ ಸಚಿವ ಬಿ.ಶ್ರೀರಾಮುಲು ಮೊದಲ ಗೆಲುವನ್ನು ಪಡೆಯುತ್ತಾರೆ. 2008ರಲ್ಲಿ ಕ್ಷೇತ್ರ ಮರುವಿಂಗಡಣೆಯಾಗಿ ಬಳ್ಳಾರಿ ನಗರ ಕ್ಷೇತ್ರವಾದ ಬಳಿಕ 2008ರಲ್ಲಿ ಶಾಸಕ ಜಿ.ಸೋಮಶೇಖರ ರೆಡ್ಡಿ ಹಾಗೂ 2013ರಲ್ಲಿ ಅನಿಲ್ ಲಾಡ್ ಆಯ್ಕೆಯಾಗಿದ್ದಾರೆ. ಬಳಿಕ 2018ರಲ್ಲಿ ಗಾಲಿ ಸೋಮಶೇಖರ್ ರೆಡ್ಡಿ ಬಿಜೆಪಿಯಿಂದ ಆಯ್ಕೆಯಾದರು.

    1999ರಲ್ಲಿ ನಡೆದ ಸೋನಿಯಾಗಾಂಧಿ ಹಾಗೂ ಸುಷ್ಮಾಸ್ವರಾಜ್ ಅವರ ನಡುವಿನ ಲೋಕಸಭಾ ಚುನಾವಣಾ ಸ್ಪರ್ಧೆಯು ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಬಳ್ಳಾರಿಯಲ್ಲಿ ಕಮಲ ಅರಳಿಸಲು ಕಾರಣವಾಯಿತು.

    2004ರಲ್ಲಿ ಈಗಿನ ಸಾರಿಗೆ ಸಚಿವ ಬಿ.ಶ್ರೀರಾಮುಲು ಬಿಜೆಪಿಯಿಂದ ಸ್ಪರ್ಧಿಸಿ ಮೊದಲ ಬಾರಿಗೆ ಕಮಲ ಅರಳಿಸಿದರೆ, 2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಜನಾರ್ದನ ರೆಡ್ಡಿ ಸಹೋದರ ಜಿ.ಸೋಮಶೇಖರ ರೆಡ್ಡಿ ಗೆದ್ದಿದ್ದಾರೆ. 2013ರಲ್ಲಿ ಕಾಂಗ್ರೆಸ್‌ನ ಅನಿಲ್ ಲಾಡ್ ಜಯ ಪಡೆದರೆ, 2018ರಲ್ಲಿ ಸೋಮಶೇಖರ ರೆಡ್ಡಿ ಮತ್ತೆ ಜಯ ಗಳಿಸಿದ್ದಾರೆ. ಆದರೆ ಈಗ ಮತ್ತೊಂದು ಸಾರಿ ಕ್ಷೇತ್ರದಲ್ಲಿ ಗೆಲ್ಲಲೇ ಬೇಕು ಎನ್ನುವ ಹಠಕ್ಕೆ ರೆಡ್ಡಿ ಬಿದ್ದಿದ್ದಾರೆ. ಅವರ ಸಹೋದರ ಗಾಲಿ ಜನಾರ್ದನ ರೆಡ್ಡಿ, ಅವರ ಪತ್ನಿ ಅರುಣಾ ಲಕ್ಷ್ಮೀ ಸಹ ಕಣಕ್ಕಿಳಿದಿದ್ದು, ತಮ್ಮ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ.

    ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಗೊಂದಲವಿದ್ದು, ಕಾಂಗ್ರೆಸ್‌ನ ಭದ್ರ ಕೋಟೆ ಎಂದು ಕರೆಸಿಕೊಳ್ಳುವ ಬಳ್ಳಾರಿ ನಗರ ಕ್ಷೇತ್ರವನ್ನು ಕಾಂಗ್ರೆಸ್ ಲೀಲಾಜಾಲವಾಗಿ ಗೆಲ್ಲಬಹುದು. ಯಾಕೆಂದರೆ ಕಳೆದ ಸಾರಿ ನಡೆದ ಬಳ್ಳಾರಿ ಮಹಾ ನಗರ ಪಾಲಿಕೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತು ಸುಣ್ಣವಾಗಿತ್ತು. ಅಲ್ಲದೇ ಬಳ್ಳಾರಿ ನಗರದಲ್ಲಿ ಕಾಂಗ್ರೆಸ್ ಅಲೆಯಿದ್ದು, ಸೋಮಶೇಖರ್ ರೆಡ್ಡಿ ವಿರುದ್ಧ ಆಡಳಿತ ವಿರೋಧಿ ಅಲೆ ದೊಡ್ಡ ಮಟ್ಟದಲ್ಲಿದೆ. ಹೀಗಾಗಿ ಕಾಂಗ್ರೆಸ್ ಹೋರಾಟ ಮಾಡಿದ್ದೇ ಆದಲ್ಲಿ ಈ ಕ್ಷೇತ್ರದಲ್ಲಿ ಗೆಲ್ಲಬಹುದು. ಆದರೆ ಈ ಮಧ್ಯೆ ಕೆಆರ್‌ಪಿಪಿ ನಗರ ಪ್ರದೇಶದ ಮುಸ್ಲಿಂ ಹಾಗೂ ಸ್ಲಂ ಜನರ ಮೇಲೆ ಕಣ್ಣಿಟ್ಟು ಕಾಂಗ್ರೆಸ್ ಮತಗಳನ್ನು ಸೆಳೆದರೆ ಸೋಮಶೇಖರ್ ರೆಡ್ಡಿಗೆ ಸಹಾಯವಾಗಬಹುದು. ಮಹಾನಗರ ಪಾಲಿಕೆ ಕಾಂಗ್ರೆಸ್ ಹಿಡಿತದಲ್ಲಿ ಇರುವ ಕಾರಣ ಕೆಆರ್‌ಪಿಪಿ ಕಾಂಗ್ರೆಸ್‌ಗೆ ಹೆಚ್ಚಿನ ಡ್ಯಾಮೇಜ್ ಮಾಡಲು ಸಾಧ್ಯವಿಲ್ಲ. ಆದರೆ ಚುನಾವಣೆಗೆ ಇನ್ನೂ ಎರಡು ವಾರ ಇರುವ ಕಾರಣ ಕೊನೆಯ ಕ್ಷಣದಲ್ಲಿ ಮತದಾರರನ್ನು ಹೇಗೆ ಮತ್ತು ಯಾರು ಸೆಳೆಯುತ್ತಾರೆ ಎಂಬುದು ಸದ್ಯದ ಕುತೂಹಲ.

    ಬಳ್ಲಾರಿ ನಗರ ಕ್ಷೇತ್ರದ ಮತದಾರರೆಷ್ಟು?
    ಬಳ್ಳಾರಿ ನಗರ ಸಾಮಾನ್ಯ ಕ್ಷೇತ್ರದಲ್ಲಿ ಒಟ್ಟು 2,55,385 ಮತದಾರರಿದ್ದಾರೆ. ಅದರಲ್ಲಿ ಪುರುಷರು 1,24,199 ಪುರುಷ ಮತದಾರರಿದ್ದು, 1,31,557 ಮಹಿಳಾ ಮತದಾರರು ಇದ್ದಾರೆ.

    ಯಾರ ವೋಟು ಎಷ್ಟು?
    ಲಿಂಗಾಯಿತರು: 45,000
    ಕುರುಬರು: 25,000
    ಮುಸ್ಲಿಂ: 35,000
    ಬಲಿಜ, ರೆಡ್ಡಿ, ಕಮ್ಮ: 60,000
    ಎಸ್.ಟಿ: 20,000
    ಎಸ್.ಸಿ (ಎಲ್ಲಾ ವರ್ಗ): 25,000
    ಬ್ರಾಹ್ಮಣ, ಶೆಟ್ಟಿ ಮತ್ತು ಇತರೆ: 25,000

  • ಚುನಾವಣೆಗೆ ತಯಾರಿ – ಮಂಗಳಮುಖಿಯರ ಮೊರೆ ಹೋದ ನಾರಾ ಭರತ್ ರೆಡ್ಡಿ

    ಚುನಾವಣೆಗೆ ತಯಾರಿ – ಮಂಗಳಮುಖಿಯರ ಮೊರೆ ಹೋದ ನಾರಾ ಭರತ್ ರೆಡ್ಡಿ

    ಬಳ್ಳಾರಿ: ಮಾಜಿ ಶಾಸಕ ಸೂರ್ಯ ನಾರಾಯಣ ಅವರ ಮಗ ಮುಂಬರುವ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಹಿನ್ನೆಲೆಯಲ್ಲಿ ಮಂಗಳಮುಖಿಯರ ಮೊರೆ ಹೋಗಿದ್ದಾರೆ.

    ನಾರಾ ಭರತ್ ರೆಡ್ಡಿ ಮಂಗಳಮುಖಿಯರಿಗೆ ಉಡಿತುಂಬುವ ಮೂಲಕ ವಿಶೇಷ ಪೂಜೆ ಪುರಸ್ಕಾರ ಮಾಡಿದ್ದಾರೆ. ಭರತ್ ರೆಡ್ಡಿಯವರು ಕಾಂಗ್ರೆಸ್ ಪಕ್ಷದಿಂದ ಬಳ್ಳಾರಿ ಕ್ಷೇತ್ರಕ್ಕೆ ಸ್ಪರ್ಧೆ ಮಾಡಬೇಕೆಂದು ಯೋಜನೆ ನಡೆಸಿದ್ದಾರೆ. 101 ಮಂಗಳಮುಖಿಯರಿಗೆ ಸೀರೆ, ಬೆಳ್ಳಿ ದೀಪ, ಅರಿಶಿನ ಕುಂಕುಮ ಬಟ್ಟಲು ಸೇರಿದಂತೆ ಇತ್ಯಾದಿ ವಸ್ತುಗಳನ್ನು ನೀಡಿದ್ದಾರೆ. ಇದನ್ನೂ ಓದಿ: ಸಿಎಂ ತವರು ಜಿಲ್ಲೆಗೂ ಕಾಲಿಟ್ಟ ಹಿಜಬ್, ಕೇಸರಿ ಶಾಲು ಫೈಟ್ – ವಿದ್ಯಾರ್ಥಿಗಳನ್ನ ಹೊರಹಾಕಿದ ಕಾಲೇಜು ಸಿಬ್ಬಂದಿ

    ಕೇರಳ ಮೂಲದ ಜ್ಯೋತಿಷಿಗಳ ಸಲಹೆ ಮೇರೆಗೆ ಮಂಗಳ ಮುಖಿಯರಿಗೆ ಪೂಜೆ ಸಲ್ಲಿಸಿದ್ದಾರೆ. ಮಂಗಳ ಮುಖಿಯರಿಗೆ ಪೂಜೆ ಮಾಡಿದರೇ ಟಿಕೆಟ್ ಸಿಗುತ್ತದೆ ಹಾಗೂ ನೀವು ಚುನಾವಣೆಯಲ್ಲಿ ಗೆಲ್ಲಬಹುದು ಎನ್ನುವ ನಂಬಿಕೆಯಿದೆ ಎಂದು ಸಲಹೆ ನೀಡಿದ್ದರು. ಇನ್ನೂ ಚುನಾವಣೆಗೆ ಒಂದುವರೆ ವರ್ಷ ಇರುವಾಗಲೇ ಚುನಾವಣೆ ಸಿದ್ಧತೆ ಮಾಡಿಕೊಂಡಿದ್ದಾರೆ.