Tag: ನಾರಾಯಣಸ್ವಾಮಿ

  • ಕಾಂಗ್ರೆಸ್ ಕಚೇರಿಯಲ್ಲಿ ಬಡಿದಾಟ- ನಾರಾಯಣಸ್ವಾಮಿ ಮೇಲೆ ಮನೋಹರ್ ಬೆಂಬಲಿಗರಿಂದ ಹಲ್ಲೆ

    ಕಾಂಗ್ರೆಸ್ ಕಚೇರಿಯಲ್ಲಿ ಬಡಿದಾಟ- ನಾರಾಯಣಸ್ವಾಮಿ ಮೇಲೆ ಮನೋಹರ್ ಬೆಂಬಲಿಗರಿಂದ ಹಲ್ಲೆ

    ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಹೈ ಡ್ರಾಮಾ ನಡೆದಿದ್ದು, ರಾಮಲಿಂಗಾರೆಡ್ಡಿ ಜೊತೆ ಮಾತನಾಡುವ ವಿಚಾರವಾಗಿ ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ಮೇಲೆ ಕಾಂಗ್ರೆಸ್ ಮುಖಂಡ ಮನೋಹರ್ ಹಲ್ಲೆ ನಡೆಸಿದ್ದಾರೆ.

    ಕಾಂಗ್ರೆಸ್ ನೂತನ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರು ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ್ದರು. ರಾಮಲಿಂಗಾರೆಡ್ಡಿ ಜೊತೆ ಮಾತನಾಡುವ ವಿಷಯದಲ್ಲಿ ಎಂಎಲ್‌ಸಿ ನಾರಾಯಣ ಸ್ವಾಮಿ ಹಾಗೂ ಮನೋಹರ್ ನಡುವೆ ವಾಗ್ವಾದ ನಡೆದಿದೆ. ಹೀಗಾಗಿ ರಾಮಲಿಂಗಾರೆಡ್ಡಿ ಕೆಪಿಸಿಸಿ ಕಚೇರಿಯಿಂದ ಹೊರ ಹೋದ ನಂತರ ನಾರಾಯಣ ಸ್ವಾಮಿ ಹಾಗೂ ಮನೋಹರ್ ನಡುವೆ ಗಲಾಟೆ ನಡೆದಿದೆ.

    ಗಲಾಟೆ ವೇಳೆ ಎಂಎಲ್‌ಸಿ ನಾರಾಯಣ ಸ್ವಾಮಿಗೆ ಮನೋಹರ್ ಹಾಗೂ ಬೆಂಬಲಿಗರು ಹೊಡೆದು ಹಲ್ಲೆ ನಡೆಸಿದ್ದಾರೆ. ಬಳಿಕ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಎರಡೂ ಕಡೆಯವರನ್ನು ಕೂರಿಸಿ ಮಾತನಾಡಿ, ರಾಜೀ ಮಾಡಿಸಿ ಸಮಾಧಾನ ಪಡಿಸಿದ್ದಾರೆ. ಬಳಿಕ ನಾರಾಯಣ ಸ್ವಾಮಿಯವರು ತಮ್ಮ ಸರ್ಕಾರಿ ಕಾರಿನಲ್ಲಿ ಕೆಪಿಸಿಸಿ ಕಚೇರಿಯಿಂದ ತೆರಳಿದ್ದಾರೆ. ಈ ಬಗ್ಗೆ ಯಾವುದೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

  • ಸಿಎಂ, ಗವರ್ನರ್ ನಡುವೆ ಹೆಲ್ಮೆಟ್ ವಾರ್- ಟ್ವಿಟ್ಟರ್‌ನಲ್ಲಿ ಒಬ್ಬರಿಗೊಬ್ಬರು ಟಾಂಗ್

    ಸಿಎಂ, ಗವರ್ನರ್ ನಡುವೆ ಹೆಲ್ಮೆಟ್ ವಾರ್- ಟ್ವಿಟ್ಟರ್‌ನಲ್ಲಿ ಒಬ್ಬರಿಗೊಬ್ಬರು ಟಾಂಗ್

    ಪುದುಚೇರಿ: ಹೆಲ್ಮೆಟ್ ಧರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪುದುಚೇರಿ ಮುಖ್ಯಮಂತ್ರಿ ನಾರಾಯಣಸ್ವಾಮಿ ಹಾಗೂ ಉಪರಾಜ್ಯಪಾಲೆ ಕಿರಣ್ ಬೇಡಿ ನಡುವಿನ ಟ್ವೀಟ್ ವಾರ್ ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಕಿರಣ್ ಬೇಡಿ ಹಾಗೂ ನಾರಾಯಣಸ್ವಾಮಿ ಇಬ್ಬರೂ ಸಹ ವಿವಿಧ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಇದೀಗ ಹೆಲ್ಮೆಟ್ ಕುರಿತು ಒಬ್ಬರಿಗೊಬ್ಬರು ಟ್ವೀಟ್ ಮಾಡುವ ಮೂಲಕ ಚರ್ಚೆಗೆ ಕಾರಣವಾಗಿದ್ದಾರೆ.

    ನಾರಾಯಣಸ್ವಾಮಿಯವರು ಹೆಲ್ಮೆಟ್ ಧರಿಸದೆ ಚುನಾವಣಾ ಪ್ರಚಾರದ ರ್ಯಾಲಿಯಲ್ಲಿ ಭಾಗವಹಿಸಿದ್ದನ್ನು ಕಂಡು ಕಿರಣ್ ಬೇಡಿ ಕಿಡಿಕಾರಿದ್ದರು. ಈ ಕುರಿತು ಟ್ವೀಟ್ ಮಾಡಿ ಮೋಟಾರು ವಾಹನಗಳ ಕಾಯ್ದೆ ಉಲ್ಲಂಘನೆಯಾಗಿದೆ ಎಂದು ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ನಾರಾಯಣಸ್ವಾಮಿಯವರ ಫೋಟೋವನ್ನು ಟ್ವೀಟ್ ಮಾಡಿದ್ದರು.

    ಸುಪ್ರೀಂ ಕೋರ್ಟ್, ಮದ್ರಾಸ್ ಹೈ ಕೋರ್ಟ್ ನಿರ್ದೇಶನ ಹಾಗೂ ಮೋಟಾರು ವಾಹನ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿರುವ ಸಿಎಂ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಈ ಕುರಿತು ಪುದುಚೇರಿ ಪೊಲೀಸ್ ಮಹಾನಿರ್ದೇಶಕ ಬಾಲಾಜಿ ಶ್ರೀವಾಸ್ತವ್ ಅವರಿಗೆ ನಿವೃತ್ತ ಐಪಿಎಸ್ ಅಧಿಕಾರಿಯೂ ಆಗಿರುವ ಕಿರಣ್ ಬೇಡಿ ನಿರ್ದೇಶನ ನೀಡಿದ್ದಾರೆ.

    ಕಿರಣ್ ಬೇಡಿ ಅವರು ಪುದುಚೇರಿ ಡಿಜಿಪಿ ಹಾಗೂ ನಿತಿನ್ ಗಡ್ಕರಿ ಅವರಿಗೆ ಟ್ವೀಟ್ ಮಾಡಿದ್ದಾರೆ. ಪುದುಚೇರಿ ಮುಖ್ಯಮಂತ್ರಿ ಕಾಮರಾಜ್ ನಗರದಲ್ಲಿ ಹೆಲ್ಮೆಟ್ ಇಲ್ಲದೆ ಪ್ರಚಾರ ಮಾಡುತ್ತಿರುವ ಫೋಟೋವನ್ನು ಹಾಕಿದ್ದಾರೆ.

    ಇದಕ್ಕೆ ಪ್ರತಿಯಾಗಿ ಸಿಎಂ ನಾರಾಯಣಸ್ವಾಮಿ ಸಹ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಉಪ ರಾಜ್ಯಪಾಲೆ ಕಿರಣ್ ಬೇಡಿ ಅವರು 2017ರಲ್ಲಿ ಹೆಲ್ಮೆಟ್ ಇಲ್ಲದೆ ಸ್ಕೂಟರ್‍ನಲ್ಲಿ ಸಂಚರಿಸುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಅಧಿಕೃತ ಸಂವಹನಕ್ಕಾಗಿ ಟ್ವಿಟ್ಟರ್ ಬಳಸುವ ಮೂಲಕ ಮದ್ರಾಸ್ ಹೈ ಕೋರ್ಟ್‍ನ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಉಪರಾಜ್ಯಪಾಲೆ ಕಿರಣ್ ಬೇಡಿ ಅವರು ಮತ್ತೊಬ್ಬರಿಗೆ ಬೋಧಿಸುವ ಮುನ್ನ ತಾವು ತಿಳಿದುಕೊಳ್ಳಲಿ ಎಂದು ಟ್ವೀಟ್‍ನಲ್ಲಿ ಸಾಲುಗಳನ್ನು ಬರೆದಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿಎಂ ನಾರಾಯಣಸ್ವಾಮಿ, ಉಪರಾಜ್ಯಪಾಲರು ವಸ್ತು ಸ್ಥಿತಿಯನ್ನು ಅರಿಯಬೇಕು. ಚುನಾವಣೆ ನಡೆಯುತ್ತಿದೆ. ಚುನಾವಣೆಗಳನ್ನು ಶಾಂತಿಯುತವಾಗಿ ನಡೆಸುವುದು ಚುನಾವಣಾ ಆಯೋಗದ ಕರ್ತವ್ಯ ಎಂದರು.

    ನಿನ್ನೆ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ್ದರಿಂದ ಬೈಕ್ ರ್ಯಾಲಿ ಆಯೋಜಿಸಲಾಗಿತ್ತು. ಈ ವೇಳೆ ನಾನೂ ಕಾರ್ಯಕರ್ತರೊಂದಿಗೆ ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದೆ. ನಾನು ಹೆಲ್ಮೆಟ್ ಧರಿಸಿದರೆ ಮುಖ್ಯಮಂತ್ರಿ ಬರುತ್ತಿದ್ದಾರೆ ಎಂದು ಯಾರಿಗೆ ತಿಳಿಯುತ್ತದೆ. ಅಲ್ಲದೆ ಹೆಲ್ಮೆಟ್ ಧರಿಸದ್ದನ್ನು ಟ್ವೀಟ್ ಮೂಲಕ ಡಿಜಿಪಿಗೆ ತಿಳಿಸಿದ್ದಾರೆ. ಆದರೆ ಅಧಿಕೃತ ಸಂವಹನಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಬಾರದು ಎಂದು ಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ. ಕಿರಣ್ ಬೇಡಿಯವರು ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ.

  • ದಲಿತ ಸಂಸದರನ್ನು ನಿರ್ಬಂಧ ಮಾಡಿದ ಕ್ರಮ ಸರಿಯಲ್ಲ: ಸಿದ್ದಲಿಂಗ ಸ್ವಾಮೀಜಿ

    ದಲಿತ ಸಂಸದರನ್ನು ನಿರ್ಬಂಧ ಮಾಡಿದ ಕ್ರಮ ಸರಿಯಲ್ಲ: ಸಿದ್ದಲಿಂಗ ಸ್ವಾಮೀಜಿ

    ತುಮಕೂರು: ಸಂಸದ ನಾರಾಯಣಸ್ವಾಮಿ ಅವರನ್ನು ಗೊಲ್ಲರಹಟ್ಟಿಗೆ ನಿರ್ಬಂಧ ಮಾಡಿದ ಕ್ರಮ ಸರಿಯಲ್ಲ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದ್ದಾರೆ.

    ತುಮಕೂರಿನ ಸಿದ್ದಗಂಗಾ ಮಠದಲ್ಲಿ ಪ್ರತಿಕ್ರಿಯೆ ನೀಡಿದ ಸ್ವಾಮೀಜಿ, ದಲಿತ ಸಂಸದರನ್ನು ಗೊಲ್ಲರಹಟ್ಟಿಗೆ ನಿಷೇಧ ಮಾಡಿದ್ದು, ಶೋಚನೀಯ ಹಾಗೂ ದುಃಖನೀಯ ಸಂಗತಿ ಎಂದು ಹೇಳಿದ್ದಾರೆ. ಇಂತಹ ಆಧುನಿಕ ಕಾಲದಲ್ಲೂ ಇಂತಹ ಅನಿಷ್ಟ ಪದ್ಧತಿ ಜೀವಂತವಾಗಿ ಇರುವುದು ಖಂಡನೀಯ. ಇದನ್ನು ಹೋಗಲಾಡಿಸುವ ಚಿಂತನೆ ಮಾಡಬೇಕಿದೆ ಎಂದರು.

    ಗಾಂಧಿಜೀಯ ಕನಸಿನ ಭಾರತ ಹಾಗೂ ಬಸವಣ್ಣ ಅವರ ಸಮಾಜದ ಆದರ್ಶ ನಮ್ಮಲ್ಲಿರಬೇಕು. ಒಬ್ಬ ಸಂಸದರಿಗೆ ಈ ಸ್ಥಿತಿ ಬಂದರೆ ಜನ ಸಾಮಾನ್ಯರ ಸ್ಥಿತಿ ಹೇಗಿರಬೇಡ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಘಟನೆ ವೇಳೆ ಸಂಸದರು ನಡೆದುಕೊಂಡ ರೀತಿ ಉತ್ತಮ. ನಾರಾಯಸ್ವಾಮಿ ಅವರ ಹೃದಯ ಶ್ರೀಮಂತಿಕೆ ಮೆಚ್ಚುವಂತದ್ದು, ಮುಂದಿನ ದಿನಗಳಲ್ಲಿ ಗೊಲ್ಲರಹಟ್ಟಿಯ ಜನರ ಮನಪರಿವರ್ತನೆಗೆ, ಅಭಿವೃದ್ಧಿಗೆ ಪಣತೊಡುತ್ತೇನೆ ಅಂದ ನಾರಾಯಣಸ್ವಾಮಿ ಅವರ ಕಾಳಜಿ ಮೆಚ್ಚುವಂತಹದ್ದು ಎಂದು ಶ್ಲಾಘಿಸಿದ್ದಾರೆ. ಇದನ್ನು ಓದಿ: ದಲಿತ ಸಂಸದರಿಗೆ ಗ್ರಾಮಕ್ಕೆ ಬರದಂತೆ ತಡೆದ ಗ್ರಾಮಸ್ಥರು

    ಮಠ-ಮಾನ್ಯಗಳು ಹಾಗೂ ಸಂಘ ಸಂಸ್ಥೆಗಳು ಕೂಡ ಮುಂದೆ ಬಂದು ಈ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಕರೆ ನೀಡಿದ್ದಾರೆ. ಇದೇ ವೇಳೆ ಯಾವುದೇ ನಾಯಕರು ಆರೋಪದ ಮೇಲೆ ಬಂಧನವಾದಾಗ ಆಯಾ ಸಮುದಾಯಗಳ ಪರ ನಿಂತು ಪ್ರತಿಭಟನೆ ನಡೆಸುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸ್ವಾಮೀಜಿ, ದೇಶದ ಪ್ರತಿಯೊಬ್ಬ ಪ್ರಜೆನೂ ರಾಷ್ಟ್ರ ಧ್ವಜ, ರಾಷ್ಟ್ರಗೀತೆ ಹಾಗೂ ಸಂವಿಧಾನವನ್ನು ಗೌರವಿಸಬೇಕು. ಕಾನೂನು ಒಬ್ಬರಿಗೆ ಒಂದು ಇನ್ನೊಬ್ಬರಿಗೆ ಒಂದು ಕಾನೂನು ಇಲ್ಲ. ಎಲ್ಲರೂ ಕಾನೂನಿಗೆ ತಲೆ ಬಾಗಬೇಕು ಎಂದು ಪ್ರತಿಕ್ರಿಯಿಸಿದರು.

  • ಯೂಟ್ಯೂಬ್ ನೋಡಿ ಡ್ರ್ಯಾಗನ್ ಫ್ರೂಟ್ ಬೆಳೆದ ರಾಜ್ಯದ ರೈತ..!

    ಯೂಟ್ಯೂಬ್ ನೋಡಿ ಡ್ರ್ಯಾಗನ್ ಫ್ರೂಟ್ ಬೆಳೆದ ರಾಜ್ಯದ ರೈತ..!

    ಚಿಕ್ಕಬಳ್ಳಾಪುರದ ರೈತ ನಾರಾಯಣಸ್ವಾಮಿಯ ಸಾಧನೆ

    ಪಬ್ಲಿಕ್ ಟಿವಿ ವಿಶೇಷ ವರದಿ
    ಚಿಕ್ಕಬಳ್ಳಾಪುರ: ತರಕಾರಿಗಳ ತವರೂರು, ಹೈನೋದ್ಯಮವನ್ನೇ ನೆಚ್ಚಿಕೊಂಡಿರುವ ಕ್ಷೀರಸಾಗರದ ಮೂಲ, ದ್ರಾಕ್ಷಿಯ ಕಣಜ, ಹೂವಿನ ಲೋಕ… ಹೀಗೆ ತರಹೇವಾರಿ ತರಕಾರಿ, ಹಣ್ಣು, ಹೂ ಬೆಳೆಯೋದ್ರಲ್ಲಿ ಚಿಕ್ಕಬಳ್ಳಾಪುರದ ರೈತರದ್ದು ಎತ್ತಿದ ಕೈ. ಕುಡಿಯೋಕೆ ಶುದ್ಧ ನೀರಿಲ್ಲ, ಬೆಳೆ ಬೆಳೆಯೋಕೆ ಅಂತೂ ನೀರಿಗೆ ಬರ, ಆದ್ರೆ ಬರದ ನಾಡು ಬಯಲುಸೀಮೆಯ ರೈತರ ಶ್ರಮಕ್ಕೆ ಮಾತ್ರ ಕೊನೆ ಇಲ್ಲ. ಕಷ್ಟಕಾಲದಲ್ಲೂ ಭಿನ್ನ ವಿಭಿನ್ನ ಪ್ರಯತ್ನಗಳಿಂದಲೇ ಸಾಧನೆ ಮಾಡೋದು ಚಿಕ್ಕಬಳ್ಳಾಪುರದ ರೈತರ ಸ್ಪೆಷಾಲಿಟಿ, ಹೌದು, ಸದಾ ಭಿನ್ನ-ವಿಭಿನ್ನ ಆಲೋಚನೆಗಳಿಂದಲೇ ಮನಸ್ಸಿದ್ದರೆ ಮಾರ್ಗ ಎಂಬಂತೆ ಸಾಧನೆಯ ಹಾದಿಯಲ್ಲಿ ಸಾಗೋ ಪ್ರಗತಿಪರ ರೈತರಿಗೆ ಮಾತ್ರ ಜಿಲ್ಲೆಯಲ್ಲಿ ಬರ ಇಲ್ಲ. ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಸೋಲಾರ್ ರೂಫ್ ಟಾಪ್ ಯೋಜನೆಯ ಮೂಲಕ ಸೌರ ವಿದ್ಯುತ್ ಉತ್ಪಾದನೆ ಮಾಡಿ ಮಾದರಿಯಾಗಿದ್ದ ಮರಳಕುಂಟೆಯ ರೈತ ನಾರಾಯಣಸ್ವಾಮಿಯವರ ಯಶೋಗಾಥೆಯ ಕಥೆ ಇದು. ಸರ್ಕಾರವನ್ನು ನಂಬಿ ಸೋಲಾರ್ ರೂಫ್ ಟಾಫ್ ಯೋಜನೆಗೆ ಕೋಟಿ ಕೋಟಿ ಬಂಡವಾಳ ಹೂಡಿ ಕೈ ಸುಟ್ಟುಕೊಂಡರೂ ಎದೆಗುಂದದ ಸ್ವಾಭಿಮಾನದ ಬದುಕು ನಾರಾಯಣಸ್ವಾಮಿಯವರದ್ದು. ಸೋಲಾರ್ ಲಾಸ್ ಆಯ್ತು ಅಂತ ಸುಮ್ಮನೆ ಕೂರದ ರೈತ, ಯೂಟ್ಯೂಬ್ ವೀಡಿಯೋ ನೋಡಿ ವಿದೇಶದಲ್ಲಿ ಬೆಳೆಯಲಾಗುತ್ತಿದ್ದ ಡ್ರ್ಯಾಗನ್ ಅನ್ನೋ ಫಾರಿನ್ ಫ್ರೂಟ್ ಬಯಲುಸೀಮೆಯಲ್ಲಿ ಬೆಳೆದು ಸೈ ಎನಿಸಿಕೊಂಡಿದ್ದಾರೆ ನಾರಾಯಣಸ್ವಾಮಿ.

    ಏನಿದು ಡ್ರ್ಯಾಗನ್ ಫ್ರೂಟ್..?
    ರಾಜ್ಯದಲ್ಲೇ ಮೊದಲ ಬಾರಿಗೆ ಬಯಲು ಸೀಮೆಯಲ್ಲಿ ಫಾರಿನ್ ತಳಿಯ ಹಣ್ಣು ಬಿಟ್ಟಿದ್ದು, ಅತಿ ಹೆಚ್ಚು ಬೇಡಿಕೆ ಇರುವ ಡ್ರ್ಯಾಗನ್ ಹಣ್ಣು ಚಿಕ್ಕಬಳ್ಳಾಪುರ ತಾಲೂಕಿನ ಮರಳುಕುಂಟೆಯಲ್ಲಿ ಮಾರಾಟಕ್ಕೆ ಸಿದ್ಧಗೊಂಡಿದೆ. ಹೌದು, ನೀರಿನ ಸೆಲೆಯೇ ಇಲ್ಲದ ಚಿಕ್ಕಬಳ್ಳಾಪುರ ಈಗಾಗಲೇ ದ್ರಾಕ್ಷಿ, ತರಕಾರಿ, ಹೂಗಳನ್ನು ಬೆಳೆದು ಸೈ ಎನ್ನಿಸಿಕೊಂಡಿದೆ. ಇದೀಗ ಡ್ರ್ಯಾಗನ್ ಫ್ರೂಟ್ ರಾಷ್ಟ್ರೀಯ ಮಾರುಕಟ್ಟೆಗೆ ಪೈಪೋಟಿ ನೀಡಲು ಮೈದುಂಬಿ ನಿಂತಿದೆ. ರಾಜ್ಯದಲ್ಲೇ ಮೊದಲ ಪ್ರಯೋಗ ಎನ್ನಲಾಗುತ್ತಿರುವ ಡ್ರ್ಯಾಗನ್ ಫ್ರೂಟ್ ಬೆಳೆ ಬೆಳೆಯುವಲ್ಲಿ ಪ್ರಗತಿಪರ ರೈತ ನಾರಾಯಣಸ್ವಾಮಿ ಯಶಸ್ವಿಯಾಗಿದ್ದಾರೆ. ಅಮೆರಿಕಾ ಮೂಲದ ಈ ಡ್ರ್ಯಾಗನ್ ಫ್ರೂಟ್ ಸದ್ಯಕ್ಕೆ ರಷ್ಯಾ, ಜಪಾನ್‍ಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಕಿವಿ ಹಣ್ಣಿನ ಮಾದರಿಯಲ್ಲೇ ಬಹುಪಯೋಗಿಯಾಗಿರುವ ಈ ಹಣ್ಣಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭರ್ಜರಿ ಡಿಮ್ಯಾಂಡ್. ಆನ್‍ಲೈನ್ ಮಾರುಕಟ್ಟೆಗಳಲ್ಲಿ ಒಂದು ಕೆಜಿ ಡ್ರ್ಯಾಗನ್ ಫ್ರೂಟ್ ಬೆಲೆ ಬರೋಬ್ಬರಿ 100ರಿಂದ 120 ರೂ.ಗಳವರೆಗೂ ಮಾರಾಟಗೊಳ್ಳುತ್ತಿದೆ. ಬೆಂಗಳೂರಿನ ಮಾಲ್‍ಗಳಲ್ಲಿ ದೊರೆಯುವ ಈ ಹಣ್ಣುಗಳನ್ನು ವಿದೇಶಗಳಿಂದಲೇ ಆಮದು ಮಾಡಿಕೊಳ್ಳಲಾಗುತ್ತದೆ. ದೇಶದ ಪಂಜಾಬ್, ಮಹಾರಾಷ್ಟ್ರಗಳಲ್ಲಿ ಮಾತ್ರವೇ ಈ ತಳಿಯನ್ನು ಬೆಳೆಯಲಾಗುತ್ತಿದ್ದರೂ, ಬೇಡಿಕೆಗೆ ಅನುಗುಣವಾಗಿ ಪೂರೈಸಲಾಗುತ್ತಿಲ್ಲ. ರಾಜ್ಯದ ಉತ್ತರ ಕರ್ನಾಟಕದ ಸಿರಗುಪ್ಪ ಬಳಿ ರೈತರೊಬ್ಬರು ಅತ್ಯಲ್ಪ ಪ್ರಮಾಣದಲ್ಲಿ ಬೆಳೆದಿದ್ದಾರೆ ಎನ್ನಲಾಗುತ್ತಿದೆ. ಅವರನ್ನು ಹೊರತು ಪಡಿಸಿದರೆ, ದೊಡ್ಡ ಪ್ರಮಾಣದಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದ ಕೀರ್ತಿ ಬಯಲು ಸೀಮೆಗೆ ಸೇರಿದೆ.


    ಡ್ರ್ಯಾಗನ್ ಫ್ರೂಟ್ ವಿಶೇಷತೆ ಏನು?
    ಕಡಿಮೆ ಕ್ಯಾಲೋರಿ ಹೊಂದಿರುವ ಈ ಹಣ್ಣು ಅನೇಕ ರೋಗಗಳಿಗೆ ರಾಮಬಾಣವಂತೆ. ಇದರಲ್ಲಿ ಹೆಚ್ಚಿನ ನಾರಿನಾಂಶ, ಪ್ರೋಟೀನ್ಸ್, ಲಿಯೋ ಕ್ಯಾಪಸ್, ವಿಟಮಿನ್-ಸಿ, ಕಾರ್ಟಿನ್ ಸೇರಿದಂತೆ ಅನೇಕ ಖನಿಜಾಂಶಗಳಾದ ಕ್ಯಾಲ್ಸಿಯಂ, ಫಾಸ್ಪರಸ್, ಕಬ್ಬಿಣಾಂಶ, ಪೋಟೋ ನ್ಯೂಟ್ರಿಯೆಂಟ್ಸ್, ಓಮೇಗಾ-3 ಮತ್ತು ಒಮೇಗಾ-6 ಫೇತ್ ಆಸಿಡ್ಸ್ ಅಂಶ ಇದೆ. ಹೀಗಾಗಿ ಇದರ ಒಂದು ಹಣ್ಣು ಸಾವಿರ ಮಾತ್ರೆಗಳಿಗೆ ಸಮ ಎನ್ನಲಾಗುತ್ತಿದೆ.

    ಪ್ರಗತಿ ಪರ ರೈತ ನಾರಾಯಣಸ್ವಾಮಿ ಸಾಧನೆ..!
    ಮರಳುಕುಂಟೆ ಗ್ರಾಮದ ನಾರಾಯಣಸ್ವಾಮಿ ಎಂಬುವವರು 9 ಎಕರೆ ಕೃಷಿ ಭೂಮಿಯನ್ನ ಬಾಡಿಗೆಗೆ ಪಡೆದು ಡ್ರ್ಯಾಗನ್ ಫ್ರೂಟ್ ಬೆಳೆದಿದ್ದಾರೆ. ಕಳೆದ 2 ವರ್ಷಗಳ ಸತತ ಪರಿಶ್ರಮದಿಂದ ನಾಟಿ ಮಾಡಿದ್ದ 18 ಸಾವಿರ ಗಿಡಗಳಲ್ಲಿ ಈಗ ಮೊದಲ ಫಸಲು ಕಂಡಿದೆ. ಗೂಗಲ್, ಯೂಟ್ಯೂಬ್‍ಗಳಲ್ಲಿ ಈ ಹಣ್ಣಿನ ವಿಶೇಷತೆ ಹಾಗೂ ಬೇಡಿಕೆ ಬಗ್ಗೆ ತಿಳಿದುಕೊಂಡ ಇವರು, ಮಹಾರಾಷ್ಟ್ರದ ಪಿಲ್ವೈಘಿ, ಪಂಜಾಬ್ ಭಾಗಗಳಲ್ಲಿ ಪ್ರವಾಸ ಮಾಡಿ, ಈ ತಳಿ ತಂದಿದ್ದಾರೆ. ಭೂಮಿ ಹದಗೊಳಿಸಿ, ಹನಿ ನೀರಾವರಿ ಮೂಲಕ ಸತತ 2 ವರ್ಷಗಳ ನಿರಂತರ ಶ್ರಮದಿಂದಾಗಿ ಡ್ರ್ಯಾಗನ್ ಫ್ರೂಟ್ ಬೆಳೆದಿದ್ದಾರೆ. ಒಂದು ಕಂಬದಲ್ಲಿ 4 ಗಿಡಗಳ ಬಳ್ಳಿ ಹರಡಿಸಿದ್ದಾರೆ. ಸುಮಾರು 30 ಲಕ್ಷಕ್ಕೂ ಹೆಚ್ಚಿನ ಹಣ ಖರ್ಚು ಮಾಡಿ, ಉತ್ತಮ ಫಸಲು ಪಡೆದಿದ್ದಾರೆ. ಇದೀಗ ಮೆಟ್ರೋ, ರಿಲಯನ್ಸ್‍ನಂತಹ ಕಂಪನಿಗಳಿಗೆ ಹಣ್ಣಿನ ಮಾದರಿ ನೀಡಿದ್ದು, ಚಿಕ್ಕಬಳ್ಳಾಪುರದಲ್ಲಿಯೂ ಮಾರುಕಟ್ಟೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಒಂದು ಕೆಜಿಗೆ (3 ಹಣ್ಣುಗಳು) 150 ರೂ.ಗಳಂತೆ ಮಾರಾಟ ಮಾಡಲು ಸನ್ನದ್ಧಗೊಂಡಿದ್ದಾರೆ.

    ಡ್ರ್ಯಾಗನ್ ಫ್ರೂಟ್‍ನಿಂದ ಆರೋಗ್ಯ
    ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ರಕ್ತ ಹೀನತೆ ದೂರ ಮಾಡುತ್ತದೆ. ಜೀರ್ಣ ಶಕ್ತಿ ಹೆಚ್ಚಿಸುತ್ತದೆ. ಕ್ಯಾನ್ಸರ್‍ಗೆ ರಾಮಬಾಣ, ಮಧುಮೇಹ ನಿಯಂತ್ರಣ, ಗರ್ಭಿಣಿಯರಿಗೆ ಹೆಚ್ಚಿನ ಪೌಷ್ಟಿಕಾಂಶ, ವಿಟಮಿನ್ ಸಿ ಹಾಗೂ ಎ ಅಂಶಗಳು ಹೆಚ್ಚಿದ್ದು, ಮೆದುಳು ಚುರುಕುಗೊಳಿಸುತ್ತದೆ. ಉಸಿರಾಟದ ತೊಂದರೆ ನಿವಾರಣೆ, ಮೂಳೆ, ಹಲ್ಲುಗಳನ್ನು ಬಲಿಷ್ಠಗೊಳಿಸುತ್ತದೆ. ಕಣ್ಣಿನ ದೃಷ್ಟಿ ಹೆಚ್ಚಿಸುತ್ತದೆ, ಹೃದಯ ಮತ್ತು ರಕ್ತನಾಳಗಳ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಹೃದಯಾಘಾತ ಪ್ರಮಾಣ ಕುಗ್ಗಿಸುತ್ತದೆ. ಚರ್ಮದ ಕಾಂತಿಯನ್ನು ಹೆಚ್ಚಿಸುವುದಲ್ಲದೇ, ಬಿಳಿಯ ರಕ್ತಕಣಗಳನ್ನು ಹೆಚ್ಚಿಸುವ ಈ ಹಣ್ಣು, ಡೆಂಘೀ ಜ್ವರಕ್ಕೆ ಸಿದ್ಧ ಔಷಧವಂತೆ.

    ಡ್ರ್ಯಾಗನ್ ಫ್ರೂಟ್ ಇತಿಹಾಸ
    ಈ ಹಣ್ಣನ್ನು ಕನ್ನಡದಲ್ಲಿ ಪಿಟಾಹಾಯ ಹಣ್ಣು ಎಂದು ಕರೆಲಾಗುತ್ತದೆ. ಇದು ಮಧ್ಯ ಅಮೆರಿಕಾ, ದಕ್ಷಿಣ ಅಮೆರಿಕಾ ಮತ್ತು ಏಷ್ಯಾದ ಹಣ್ಣು. ವಿಶೇಷವಾಗಿ ಏಷ್ಯನ್ ಮೂಲದ ಜನರಿಗೆ ಈ ಹಣ್ಣು ಪ್ರಾಣ. ಸಿಹಿ ರುಚಿ ಹೊಂದಿದೆ. ತೀಕ್ಷ್ಣವಾದ ಆಕಾರ ಮತ್ತು ಬಣ್ಣವನ್ನು ಹೊಂದಿರುತ್ತದೆ. ಕೀವಿ ಮತ್ತು ಸೇಬಿನ ನಡುವಿನ ವಿನ್ಯಾಸವನ್ನು ಹೊಂದಿದೆ. ಟೇಸ್ಟಿ ಮತ್ತು ರಿಫ್ರೆಶ್ ಆಗಿರುವುದರ ಜತೆಗೆ ಇದು ಹಲವಾರು ಪೌಷ್ಟಿಕಾಂಶದ ಪದಾರ್ಥಗಳೊಂದಿಗೆ ಬಹಳಷ್ಟು ನೀರು ಮತ್ತು ಇತರ ಪ್ರಮುಖ ಖನಿಜಗಳನ್ನು ಒಳಗೊಂಡಿದೆ. ಡ್ರಾಗನ್ ರುಚಿಕರವಾದ ಹಣ್ಣಾಗಿದೆ. ಇದು ಸಾಮಾನ್ಯವಾಗಿ ಉಷ್ಣ ವಲಯದ ಸೂಪರ್ ಫುಡ್ ಎಂದು ಪರಿಗಣಿಸಲ್ಪಡುತ್ತದೆ. ಆದರೆ ನಿಜವಾದ ಡ್ರ್ಯಾಗನ್ ಹಣ್ಣು ಕ್ಯಾಕ್ಟಸ್ ಜಾತಿ ಹೈಲೋಕೇರಿಯಸ್ ಹಣ್ಣು. ಇದು ಮೆಕ್ಸಿಕೋ, ದಕ್ಷಿಣ ಅಮೆರಿಕಾ ಮತ್ತು ಮಧ್ಯ ಅಮೆರಿಕಾದಲ್ಲಿ ತನ್ನ ಮೂಲವನ್ನು ಹೊಂದಿದೆ. ಆದರೆ ನ್ಯೂ ವರ್ಲ್ಡ್ ವಸಾಹತುಗಾರರು ಬಹುಶಃ ಆಗ್ನೇಯ ಏಷ್ಯಾದ ರಾಷ್ಟ್ರಗಳಾದ ಕಾಂಬೋಡಿಯಾ, ಥೈಲ್ಯಾಂಡ್, ಥೈವಾನ್, ವಿಯೆಟ್ನಾಮ್ ಮತ್ತು ಫಿಲಿಪೈನ್ಸ್‍ಗೆ ತಂದರು. ಅಲ್ಲಿ ಇದು ಪಥ್ಯದ ಆಹಾರ ಸೇವನೆಯ ಪ್ರಮುಖ ಭಾಗವಾಗಿ ಉಳಿದಿದೆ. ಡ್ರ್ಯಾಗನ್ ಹಣ್ಣುಗಳು ಮೂಲತಃ ದಕ್ಷಿಣ ಅಮೆರಿಕದಿಂದ ಬಂದಿವೆ.

  • ಪರಿಷತ್ ಚುನಾವಣೆ: ಕೊನೆಯ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿ ಬದಲಾವಣೆ

    ಪರಿಷತ್ ಚುನಾವಣೆ: ಕೊನೆಯ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿ ಬದಲಾವಣೆ

    ಬೆಂಗಳೂರು: ವಿಧಾನ ಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಕೊನೆಯ ಕ್ಷಣದಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಬದಲಾವಣೆ ಮಾಡಿದೆ.

    ಈ ಮೊದಲು ಹಾಲನೂರು ಲೇಪಾಕ್ಷಿ ಅವರಿಗೆ ಬಿಜೆಪಿ ಟೆಕೆಟ್ ಘೋಷಿಸಿತ್ತು. ಆದರೆ ಈಗ ಮಾಜಿ ಶಾಸಕ ವೈ.ಎ ನಾರಾಯಣಸ್ವಾಮಿ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಹೆಬ್ಬಾಳ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ನಾರಾಯಣಸ್ವಾಮಿ ಸೋತಿದ್ದರು. ಇಂದು ನಾರಾಯಣಸ್ವಾಮಿ ನಾಮಪತ್ರವನ್ನು ಸಲ್ಲಿಕೆ ಮಾಡಲಿದ್ದಾರೆ.

    ಹೆಬ್ಬಾಳ ಕ್ಷೇತ್ರದಲ್ಲಿ 21,140 ಮತಗಳ ಅಂತರದಿಂದ ನಾರಾಯಣಸ್ವಾಮಿ ವಿರುದ್ಧ ಕಾಂಗ್ರೆಸ್ ಸುರೇಶ್ ಬಿಎಸ್ ಜಯಗಳಿಸಿದ್ದರು. ನಾರಾಯಣಸ್ವಾಮಿಯವರಿಗೆ 53,313 ಮತಗಳು ಬಿದ್ದಿದ್ದರೆ, ಬಿಎಸ್ ಸುರೇಶ್ ಅವರಿಗೆ 53,313  ಮತಗಳು ಬಿದ್ದಿತ್ತು.

    ಜೂನ್ 21ಕ್ಕೆ ತೆರವಾಗಲಿರುವ ಮೂರು ಶಿಕ್ಷಕರ ಕ್ಷೇತ್ರ ಮತ್ತು ಮೂರು ಪದವೀಧರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಆಗ್ನೇಯ ಶಿಕ್ಷಕರ ಕ್ಷೇತ್ರ, ದಕ್ಷಿಣ ಶಿಕ್ಷಕರ ಕ್ಷೇತ್ರ, ನೈಋತ್ಯ ಶಿಕ್ಷಕರ ಕ್ಷೇತ್ರ, ನೈಋತ್ಯ ಪದವೀಧರ ಕ್ಷೇತ್ರ, ಬೆಂಗಳೂರು ಪದವೀಧರ ಕ್ಷೇತ್ರ ಮತ್ತು ಈಶಾನ್ಯ ಪದವೀಧರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

    ಮೇ 22 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು, ಜೂನ್ 8 ಮತದಾನ ನಡೆಯಲಿದ್ದು, ಜೂನ್ 12ರಂದು ಮತ ಎಣಿಕೆ ನಡೆಯಲಿದೆ.

  • ಬಿಬಿಎಂಪಿ ಕಚೇರಿಗೆ ನುಗ್ಗಿ ಬೆಂಕಿ ಹಾಕ್ತೀನಿ ಎಂದಿದ್ದ ಪೆಟ್ರೋಲ್ ನಾರಾಯಣ ಅರೆಸ್ಟ್

    ಬಿಬಿಎಂಪಿ ಕಚೇರಿಗೆ ನುಗ್ಗಿ ಬೆಂಕಿ ಹಾಕ್ತೀನಿ ಎಂದಿದ್ದ ಪೆಟ್ರೋಲ್ ನಾರಾಯಣ ಅರೆಸ್ಟ್

    ಬೆಂಗಳೂರು: ಬಿಬಿಎಂಪಿ ಕಚೇರಿಗೆ ನುಗ್ಗಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚೋದಾಗಿ ಬೆದರಿಕೆ ಹಾಕಿ ತಲೆಮರೆಸಿಕೊಂಡಿದ್ದ ಕೆಆರ್ ಪುರಂನ ಕಾಂಗ್ರೆಸ್ ಶಾಸಕ ಭೈರತಿ ಭಸವರಾಜ್ ಅವರ ಗೂಂಡಾ ಬಂಟ ನಾರಾಯಣ ಸ್ವಾಮಿಯನ್ನು ಕೊನೆಗೂ ಬಂಧಿಸಲಾಗಿದೆ.

    ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಇದೀಗ ಭೈರತಿ ಬಸವರಾಜ್ ಚೇಲಾನನ್ನು ಬಂಧಿಸಿದ್ದಾರೆ. ಘಟನೆಯ ಬಳಿಕ ಪರಾರಿಯಾಗಿದ್ದ ನಾರಾಯಣಸ್ವಾಮಿ ತನ್ನ ಪ್ರೇಯಸಿಯ ಮನೆಯಲ್ಲಿ ಅವಿತಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಕಾಂಗ್ರೆಸ್ಸಿನಿಂದ ಶಾಸಕ ಭೈರತಿ ಬಸವರಾಜ್ ಬಂಟ ನಾರಾಯಣ ಸ್ವಾಮಿ ಅಮಾನತು

    ಏನಿದು ಪ್ರಕರಣ?: ಕೆಆರ್ ಪುರಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನೂ ಆಗಿರುವ ನಾರಾಯಣಸ್ವಾಮಿ ಎನ್‍ಆರೈ ಬಡಾವಣೆಯ ಜಮೀನು ವಿಚಾರದಲ್ಲಿ ಅಕ್ರಮವಾಗಿ ಖಾತೆ ಮಾಡಿಕೊಡುವಂತೆ ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿ ಚೆಂಗಲ್ ರಾಯಪ್ಪಗೆ ಒತ್ತಡ ಹಾಕಿದ್ದ. ಜಮೀನು ವ್ಯಾಜ್ಯ ಕೋರ್ಟ್‍ನಲ್ಲಿದೆ, ಅಕ್ರಮವಾಗಿ ಖಾತೆ ಮಾಡಿಕೊಡಲ್ಲ ಎಂದು ಚೆಂಗಲ್ ರಾಯಪ್ಪ ಹೇಳಿದ್ದರು. ಹೀಗಾಗಿ ಕಳೆದ ಫೆಬ್ರವರಿ 16ರಂದು ಬೆಳಗ್ಗೆ 11 ಗಂಟೆ ವೇಳೆಯಲ್ಲಿ ಹೊರಮಾವು ನಲ್ಲಿರುವ ಬಿಬಿಎಂಪಿ ಕಚೇರಿಗೆ ನುಗ್ಗಿದ ನಾರಾಯಣಸ್ವಾಮಿ ಚೆಂಗಲ್ ರಾಯಪ್ಪ ಅವರ ಮುಂದೆಯೇ ಕಚೇರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾಗಿದ್ದಾನೆ. ಖಾತೆ ಮಾಡಿಕೊಡದಿದ್ರೆ ಕಚೇರಿಯಲ್ಲಿರುವ ದಾಖಲೆಗಳನ್ನು ಸುಟ್ಟು ಹಾಕುವುದಾಗಿ ಬೆದರಿಕೆ ಹಾಕಿದ್ದ. ಅಲ್ಲದೇ ಘಟನೆಯ ಬಳಿಕ ತನ್ನ ಕೃತ್ಯಕ್ಕೆ ಸ್ಪಷ್ಟನೆ ಕೂಡ ನೀಡಿದ್ದ. ಇದನ್ನೂ ಓದಿ: ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳಲ್ಲ – ಸುದ್ದಿ ಪ್ರಸಾರ ಮಾಡಿ: ತನ್ನ ಕೃತ್ಯವನ್ನು ಸಮರ್ಥಿಸಿಕೊಂಡ ನಾರಾಯಣ ಸ್ವಾಮಿ

    ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಭೈರತಿ ಬಸವರಾಜ್ ಬಂಟ ಬೆಂಗಳೂರು ಜಲಮಂಡಳಿ ಸದಸ್ಯನಾಗಿರುವ ನಾರಾಯಣಸ್ವಾಮಿಯನ್ನು ಪಕ್ಷದಿಂದ ಅಮಾನತು ಮಾಡಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಟ್ವೀಟ್ ಮಾಡಿದ್ದರು. ಇದನ್ನೂ ಓದಿ: ಶಾಸಕ ಭೈರತಿ ಬಸವರಾಜ್ ಬಂಟನ ಗೂಂಡಾಗಿರಿ- ಸರ್ಕಾರಿ ಕಚೇರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ತೀನೆಂದು ಬೆದರಿಕೆ

    https://www.youtube.com/watch?v=1hoUCWe-r14

    https://www.youtube.com/watch?v=NiJf6PUT3Yo