Tag: ನಾರಾಯಣಮ್ಮ

  • ಮನೆಗೆ ಹೋದಾಗ ಮಗನೇ ಅಂತ ಕರೀತಿದ್ರು – ವಿಜಿ ತಾಯಿ ನಿಧನಕ್ಕೆ ನವೀನ್ ಸಜ್ಜು ಕಣ್ಣೀರು

    ಮನೆಗೆ ಹೋದಾಗ ಮಗನೇ ಅಂತ ಕರೀತಿದ್ರು – ವಿಜಿ ತಾಯಿ ನಿಧನಕ್ಕೆ ನವೀನ್ ಸಜ್ಜು ಕಣ್ಣೀರು

    – ಅಮ್ಮನ ಮುಂದೆ ಕೊನೆ ಬಾರಿ ಹಾಡಿದ ವೀಡಿಯೋ ಶೇರ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ದುನಿಯಾ ವಿಜಯ್‍ರವರ ತಾಯಿ ನಾರಾಯಣಮ್ಮರವರು ವಿಧಿವಶರಾಗಿದ್ದಾರೆ. ಈ ಹಿನ್ನೆಲೆ ಬಿಗ್‍ಬಾಸ್ ಸೀಸನ್-8 ಸ್ಪರ್ಧಿ ಗಾಯಕ ನವೀನ್ ಸಜ್ಜು, ನಾರಾಯಣಮ್ಮ ಅವರೊಂದಿಗೆ ಕಳೆದ ಕೆಲವು ನೆನಪುಗಳನ್ನು ಮೆಲುಕು ಹಾಕಿದ್ದಾರೆ.

    ಈ ಕುರಿತಂತೆ ನವೀನ್ ಸಜ್ಜುರವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದು, ವೀಡಿಯೋದಲ್ಲಿ ನಾರಾಯಣಮ್ಮನವರು ಅನಾರೋಗ್ಯದಿಂದ ಬೆಡ್ ಮೇಲೆ ಮಲಗಿಕೊಂಡಿದ್ದು, ವೀಡಿಯೋ ಕಾಲ್ ಮೂಲಕ ನವೀನ್ ಸಜ್ಜುರವರು ‘ಒಳಿತು ಮಾಡು ಮನುಜ’ ಹಾಡನ್ನು ಹೇಳುತ್ತಿರುವುದನ್ನು ಕಾಣ ಬಹುದಾಗಿದೆ.

    ವೀಡಿಯೋ ಜೊತೆಗೆ, ವಿಜಿಯಣ್ಣನ ಅಮ್ಮ ನಿನ್ನೆ ನಮ್ಮನ್ನೆಲ್ಲಾ ಬಿಟ್ಟು ಹೋಗಿದ್ದಾರೆ. ಮನೆಗೆ ಹೋದಾಗಲೆಲ್ಲಾ ಮಗನೆ ಎಂದು ಬಾಯಿ ತುಂಬಾ ಕರೆಯುತ್ತಿದ್ದ ಅಮ್ಮ, ನಮ್ಮನ್ನು ನೋಡಿಕೊಳ್ಳುತ್ತಿದ್ದ ಪ್ರೀತಿಗೆ ಸರಿಸಾಟಿಯೇ ಇಲ್ಲ. ಅವರಿಗೆ ನಾನು ಹಾಡುವ ‘ಒಳಿತು ಮಾಡು ಮನುಸ, ನೀ ಇರೋದು ಮೂರು ದಿವಸ..’ ಹಾಡೆಂದರೆ ಬಹಳ ಇಷ್ಟ. ಅವರಿಗೆ ಇಷ್ಟವಾದಾಗಲೆಲ್ಲ ಈ ಹಾಡು ಹೇಳಪ್ಪ ಎಂದು ಹೇಳಿ ಕೇಳುತ್ತಿದ್ದರು. ಇದನ್ನೂ ಓದಿ: ಒಂದು ರೀತಿ ನನ್ನ ಮಗುವನ್ನು ನಾನು ಕಳ್ಕೊಂಡಂತೆ ಭಾಸವಾಗ್ತಿದೆ: ಕಣ್ಣೀರಿಟ್ಟ ವಿಜಿ

    ಹಾಡು ಕೇಳಿ ಮೌನವಾಗಿ ಕಣ್ಣಂಚಲ್ಲಿ ನೀರು ತಂದುಕೊಳ್ಳುತ್ತಿದ್ದರು. ನಂತರ ಸಮಾಧಾನ ಪಟ್ಟುಕೊಳ್ಳುತ್ತಿದ್ದರು. ಕಳೆದ ಕೆಲವು ದಿನಗಳ ಹಿಂದೆ ಕೋಮಾ ಸ್ಥಿತಿಗೆ ತೆರಳಿದ ಅಮ್ಮ ಯಾರನ್ನು ಗುರುತು ಹಿಡಿಯುವ, ಮಾತಾಡುವ ಶಕ್ತಿ ಕಳೆದುಕೊಂಡಿದ್ದರು. ಒಮ್ಮೆ ವಿಜಿಯಣ್ಣ ವೀಡಿಯೋ ಕಾಲ್ ಮಾಡಿ ಈ ಹಾಡನ್ನು ಹಾಡುವಂತೆ ಹೇಳಿದ್ದರು. ಬಹುಶಃ ಹಾಡನ್ನು, ನನ್ನನ್ನು ಗುರುತಿಸುತ್ತಾರಾ? ಎಂಬ ಆಸೆಯಿಂದ ಹೀಗೆ ಮಾಡಿದ್ದರು. ಅದರಂತೆ ಹಾಸಿಗೆ ಮೇಲೆ ಕೋಮಾ ಸ್ಥಿತಿಯಲ್ಲಿ ಮಲಗಿದ್ದ ಅಮ್ಮನ ಎದುರು ಫೋನ್ ನಲ್ಲಿ ಹಾಡನ್ನು ಹಾಡಿದೆ. ಹಾಡು ಮುಗಿದ ಕೊನೆಗೆ ಅವರ ಕಣ್ಣಂಚಲ್ಲಿ ನೀರು ತುಂಬಿತ್ತು. ಆದರೆ ಮಾತನಾಡುವ ಶಕ್ತಿ ಇರಲಿಲ್ಲ. ಇನ್ನು ಅಮ್ಮ ಬರೀ ನೆನಪಾಗಿ ಮಾತ್ರ ಉಳಿಯಲಿದ್ದಾರೆ. ಅವರೊಂದಿಗೆ ಕಳೆದ ಕ್ಷಣ, ಅವರು ತೋರುತ್ತಿದ್ದ ಪ್ರೀತಿ, ಹಾಡು ಕೇಳುತ್ತಿದ್ದ ಪರಿ. ನೆನಪುಗಳಾಗಿ ಉಳಿದು ಹೋಗಲಿವೆ. ಮಿಸ್ ಯು ಅಮ್ಮ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ಅನಾರೋಗ್ಯದ ಹಿನ್ನೆಲೆ ನಟ ದುನಿಯ ವಿಜಯ್‍ರವರ ತಾಯಿ ನಾರಾಯಣಮ್ಮನವರು ಗುರುವಾರ ಕೊನೆಯುಸಿರೆಳೆದಿದ್ದು, ಸ್ಯಾಂಡಲ್‍ವುಡ್‍ನ ಹಲವಾರು ನಟ-ನಟಿಯರು ಸಂತಾಪ ಸೂಚಿಸಿದ್ದಾರೆ.

     

    View this post on Instagram

     

    A post shared by Naveen Sajju Official (@naveensajju)

  • ನಟ ದುನಿಯಾ ವಿಜಯ್‍ಗೆ ಮಾತೃ ವಿಯೋಗ

    ನಟ ದುನಿಯಾ ವಿಜಯ್‍ಗೆ ಮಾತೃ ವಿಯೋಗ

    ಬೆಂಗಳೂರು: ನಟ ದುನಿಯಾ ವಿಜಯ್ ಅವರ ತಾಯಿ ಇಂದು ನಿಧನರಾಗಿದ್ದಾರೆ.

    ಕಳೆದ ಕೆಲವು ದಿನಗಳಿಂದ ವಿಜಯ್ ತಾಯಿ ನಾರಾಯಣಮ್ಮ ಅವರು ಅನಾರೋಗ್ಯಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ದಿನ ಕಳೆಯುತ್ತಿದ್ದಂತೆಯೇ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಇಂದು ಚಿಕಿತ್ಸೆ ಫಲಿಸದೇ ಅವರು ವಿಧಿವಶರಾಗಿದ್ದಾರೆ.

    ಈ ಕುರಿತು ಸ್ವತಃ ನಟನೇ ತನ್ನ ತಾಯಿ ಜೊತೆಗಿನ ಫೋಟೋ ಹಾಕಿ ‘ಮತ್ತೆ ಹುಟ್ಟಿ ಬಾ ಅಮ್ಮ’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಆನೇಕಲ್ ನ ಕುಂಬಾರ ಹಳ್ಳಿಯಲ್ಲಿ ನಾರಾಯಣಮ್ಮ ಅವರ  ಅಂತಿಮ ವಿಧಿವಿಧಾನ ಮಾಡಲು ಕುಟುಂಬಸ್ಥರು ನಿರ್ಧಾರ ಮಾಡಿದ್ದು,  ನಾಳೆ ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ.

    ಕೆಲ ದಿನಗಳ ಹಿಂದಷ್ಟೇ ಕೋವಿಡ್ ನಿಂದ ದುನಿಯಾ ವಿಜಯ್ ಪೋಷಕರು ಚೇತರಿಸಿಕೊಂಡಿದ್ದರು. ಇನ್ನೇನು ಸಮಸ್ಯೆ ಬಗೆಹರಿಯಿತು ಎನ್ನುತ್ತಿರುವಾಗಲೇ ಮತ್ತೆ ತಾಯಿಯ ಆರೋಗ್ಯ ಹದಗೆಟ್ಟಿತ್ತು. ಬ್ರೇನ್ ಸ್ಟ್ರೋಕ್ ಆದ ಕಾರಣ ಅವರ ಆರೋಗ್ಯ ತೀವ್ರ ಗಂಭೀರವಾಗಿದ್ದು, ಪ್ರತಿದಿನ ಮನೆಗೆ ಬಂದು ವೈದ್ಯರು ಚಿಕಿತ್ಸೆ ನೀಡುತ್ತಿದ್ದರು.

    ಅಮ್ಮನಿಗೆ ಆಸ್ಪತ್ರೆಗೆ ಹೋಗಲು ಇಷ್ಟವಿರಲಿಲ್ಲ. ಹೀಗಾಗಿ ಮನೆಯಲ್ಲಿಯೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ತಾಯಿ ಮತ್ತೆ ಸಿಗಲ್ಲ, ಅವರು ಇರುವವರೆಗೂ ಚೆನ್ನಾಗಿ ನೋಡಿಕೊಳ್ಳಬೇಕು ಅನ್ನೋದಷ್ಟೇ ನನ್ನ ಆಸೆ. ದಿನಂಪ್ರತಿ ಅವರ ಆರೋಗ್ಯ ಕ್ಷೀಣಿಸುತ್ತಿದೆ. ಆದರೆ ಮತ್ತೆ ಆರೋಗ್ಯ ಸರಿಯಾಗುತ್ತೆ ಎಂಬ ವಿಶ್ವಾಸವಿದೆ ಎಂದು ದುನಿಯಾ ವಿಜಯ್ ಈ ಹಿಂದೆ ಹೇಳಿದ್ದರು.