Tag: ನಾರಾಯಣಪುರ ನದಿ

  • ನಾರಾಯಣಪುರ ಜಲಾಶಯದ ಒಳಹರಿವು ಹೆಚ್ಚಳ- ಪ್ರವಾಹದ ಭೀತಿ

    ನಾರಾಯಣಪುರ ಜಲಾಶಯದ ಒಳಹರಿವು ಹೆಚ್ಚಳ- ಪ್ರವಾಹದ ಭೀತಿ

    ರಾಯಚೂರು: ಮಹಾರಾಷ್ಟ್ರ, ಬೆಳಗಾವಿ, ಧಾರವಾಡ ಭಾಗದಲ್ಲಿ ಅಧಿಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಯಚೂರು, ಯಾದಗಿರಿ ಜಿಲ್ಲೆಯ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಹೆಚ್ಚಾಗುತ್ತಿದೆ.

    ನಾರಾಯಣಪುರ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಅಷ್ಟೇ ಪ್ರಮಾಣದ ನೀರನ್ನ ಕೃಷ್ಣಾ ನದಿಗೆ ಬಿಡಲಾಗುತ್ತಿದೆ. ಈಗ ಜಲಾಶಯಕ್ಕೆ 50 ಸಾವಿರ ಕ್ಯೂಸೆಕ್ ಒಳಹರಿವು ಇದ್ದು, ಜಲಾಶಯದಿಂದ ಇಂದು 49,050 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.

    ಜಲಾಶಯಕ್ಕೆ ಇನ್ನಷ್ಟು ಒಳಹರಿವು ಹೆಚ್ಚಳವಾಗುವ ಸಾಧ್ಯತೆಯಿದ್ದು, ಕೃಷ್ಣಾ ನದಿಯಲ್ಲಿ ಪ್ರವಾಹ ಭೀತಿ ಎದುರಾಗಿದೆ. ಹೀಗಾಗಿ ನದಿ ಪಾತ್ರದ ಗ್ರಾಮಗಳ ಜನ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಮುನ್ಸೂಚನೆ ನೀಡಿದೆ.

    33.313 ಟಿಎಂಸಿ ಸಾಮರ್ಥ್ಯದ ನಾರಾಯಣಪುರ ಜಲಾಶಯದಲ್ಲಿ 29.740 ಟಿಎಂಸಿ ನೀರು ಸಂಗ್ರಹವಿದೆ. ಇದರಿಂದ ಒಳ ಹರಿವು ಹೆಚ್ಚಾದಂತೆ ನದಿಗೆ ನೀರನ್ನ ಹರಿಸಲಾಗುತ್ತಿದೆ. ರಾತ್ರಿ ವೇಳೆಗೆ ಸುಮಾರು ಒಂದು ಲಕ್ಷ ಕ್ಯೂಸೆಕ್ ವರೆಗೆ ನೀರನ್ನ ಹರಿಸುವ ಸಾಧ್ಯತೆಯಿದೆ. ಇದರಿಂದ ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಶೀಲಹಳ್ಳಿ ಸೇತುವೆ, ದೇವದುರ್ಗದ ಹೂವಿನಹಡಗಲಿ ಸೇತುವೆ ಮೇಲೆ ನೀರು ಬರುವ ಸಾಧ್ಯತೆಯಿದೆ.

    ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುವುದರಿಂದ ರಸ್ತೆ ಸಂಪರ್ಕಗಳು ಕಡಿತಗೊಳ್ಳಲಿವೆ. ಲಿಂಗಸುಗೂರಿನ ಹಾಗೂ ರಾಯಚೂರು ತಾಲೂಕಿನ ನಡುಗಡ್ಡೆ ಗ್ರಾಮಗಳು ಈಗಾಗಲೇ ದ್ವೀಪಗಳಾಗಿದ್ದು, ಹೊರಬರದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.