Tag: ನಾಯಿ ಮರಿ

  • ಕೋಳಿ ಜಗಳಕ್ಕೆ ನಾಯಿ ಎಂಟ್ರಿ- ಫೈಟ್ ಬಿಡಿಸಲು ಸರ್ಕಸ್ ಮಾಡಿದ ಶ್ವಾನದ ವಿಡಿಯೋ ವೈರಲ್

    ಕೋಳಿ ಜಗಳಕ್ಕೆ ನಾಯಿ ಎಂಟ್ರಿ- ಫೈಟ್ ಬಿಡಿಸಲು ಸರ್ಕಸ್ ಮಾಡಿದ ಶ್ವಾನದ ವಿಡಿಯೋ ವೈರಲ್

    ಚೆನ್ನೈ: ನಾಯಿಗಳೆಂದರೆ ಹೆಚ್ಚಿನವರಿಗೆ ಬಲುಪ್ರೀತಿ. ಆದ್ರೆ ಕೆಲವರು ಇವುಗಳನ್ನು ದ್ವೇಷಿಸುತ್ತಾರೆ. ಯಾಕೆ ಅಂತ ಗೊತ್ತಿಲ್ಲ. ಆದ್ರೆ ನಾಯಿಗಳ ಆ ಮುಗ್ಧ ಮುಖವನ್ನು ಕಂಡಾಗ ಎಲ್ಲರ ಮುಖದಲ್ಲೂ ಒಂದು ಬಾರಿ ನಗು ಮೂಡುತ್ತೆ. ಕೆಲವೊಮ್ಮೆ ನಾಯಿಗಳು ಜನರಿಗೆ ಹಾನಿಯುಂಟು ಮಾಡುತ್ತವೆ. ಆದ್ರೆ ನಾಯಿಮರಿಗಳು ಏನೇ ಮಾಡಿದ್ರೂ ಚಂದವೇ. ನಾಯಿ ಮರಿಗಳ ತುಂಟಾಟದ ಸಾಕಷ್ಟು ವಿಡಿಯೋಗಳನ್ನು ನಾವು ನೋಡಿರುತ್ತೇವೆ. ಹಾಗೆಯೇ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದ ಕೋಳಿಗಳ ಜಗಳಕ್ಕೆ ನಾಯಿಮರಿಯೊಂದು ಎಂಟ್ರಿ ಕೊಟ್ಟಿದೆ.

    ಹೌದು. ಕೊಯಂಬತ್ತೂರು ಉದ್ಯಮಿ ಮುರಳೀಧರನ್ ಎಂಬವರ ಎರಡು ಹುಂಜಗಳು ಸಖತ್ ಫೈಟ್ ಮಾಡಿವೆ. ಈ ವೇಳೆ ಕಪ್ಪು ಬಣ್ಣದ ನಾಯಿ ಮರಿಯೊಂದು ಜಗಳ ಬಿಡಿಸಲು ಹರಸಾಹಸ ಪಟ್ಟಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.

    ವಿಡಿಯೋದಲ್ಲೇನಿದೆ?
    2 ಹುಂಜಗಳ ಪರಸ್ಪರ ಸಖತ್ ಫೈಟ್ ಮಾಡುತ್ತಿರುತ್ತವೆ. ನಾಯಿಮರಿ ಇವುಗಳ ಜಗಳದ ಮಧ್ಯಸ್ಥಿಕೆ ವಹಿಸಲು ಬಂದಿದ್ದು, ಗಲಾಟೆ ಬಿಡಿಸಲು ಹರಸಾಹಸ ಪಡುತ್ತದೆ. ಕೋಳಿಗಳ ಕಾಲು ಹಾಗೂ ರೆಕ್ಕೆಯನ್ನು ಕಚ್ಚಿ ಎಳೆಯುತ್ತದೆ. ಆದ್ರೂ ಅವುಗಳ ಜಗಳ ನಿಲ್ಲಿಸಿಲ್ಲ.

    ಇದರಿಂದ ಕಂಗಾಲಾದ ನಾಯಿ ಮರಿ ಒಂದು ಹುಂಜದ ಪುಕ್ಕವನ್ನು ಮೆಲ್ಲಗೆ ಕಚ್ಚಿ ಅಷ್ಟು ದೂರ ಎಳೆದುಕೊಂಡು ಹೋಗುತ್ತದೆ. ಇದರಿಂದ ಕೋಪಗೊಂಡ ಇನ್ನೊಂದು ಹುಂಜ ಮತ್ತೆ ಜಗಳವಾಡಲು ಮುಂದಾಗುತ್ತಿದೆ. ವಿಶೇಷವೆಂದರೆ ಜಗಳ ಬಿಡಿಸಲು ಮಧ್ಯೆ ಬರುತ್ತಿರುವ ನಾಯಿ ಮರಿಗೆ ಹುಂಜಗಳು ಏನೂ ಮಾಡದೇ ತಮ್ಮ ಜಗಳ ಮುಂದುವರಿಸುತ್ತಿವೆ. ಆದ್ರೂ ಬಿಡದೇ ನಾಯಿ ಮರಿ ಹುಂಜಗಳನ್ನು ಬೇರೆ ಬೇರೆ ಮಾಡಲು ಯತ್ನಿಸಿದೆ. ಆದ್ರೆ ನಾಯಿಮರಿಯ ಪ್ರಯತ್ನ ಮಾತ್ರ ವಿಫಲವಾಗಿದೆ.

    ಒಟ್ಟಿನಲ್ಲಿ ಹುಂಜಗಳ ಜಗಳ ಬಿಡಿಸಲು ಹರಸಾಹಸ ಪಡುತ್ತಿರುವ ಮುದ್ದಾದ ನಾಯಿ ಮರಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೊಯಂಬತ್ತೂರು ಉದ್ಯಮಿ ಮುರಳೀಧರನ್ ಎಂಬವರು ಜಗಳವಾಡುತ್ತಿರೋ ಕೊಳಿಗಳ ಮಾಲಕರಾಗಿದ್ದಾರೆ. ಪ್ರಾಣಿಪ್ರಿಯರಾಗಿರೋ ಇವರು, ಮೊಲ, ಬೆಕ್ಕು, ನಾಯಿ ಮೊದಲಾದವುಗಳನ್ನು ಸಾಕುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=MHHnNu40ml8

     

  • ನಾಯಿ ಮರಿಯಿಂದಾಗಿ 13 ಸಾವಿರ ಎತ್ತರದಲ್ಲಿ ಹಾರಾಡುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ!

    ನಾಯಿ ಮರಿಯಿಂದಾಗಿ 13 ಸಾವಿರ ಎತ್ತರದಲ್ಲಿ ಹಾರಾಡುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ!

    ಮಾಸ್ಕೋ: ನಾಯಿ ಮರಿಯಿಂದಾಗಿ ಪ್ಯಾಸೆಂಜರ್ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡಿರುವ ಘಟನೆ ರಷ್ಯಾದಲ್ಲಿ ನಡೆದಿದೆ.

    ವಿಮಾನವು ಸೈಂಟ್ ಪೀಟರ್ಸ್ ಬರ್ಗ್ ನಿಂದ ಮಾಸ್ಕೋಗೆ ಹೊರಟಿತ್ತು. ಇನ್ನೇನು ರಷ್ಯಾದ ರಾಜಧಾನಿ ಮಾಸ್ಕೋ ಸಮೀಪಿಸುತ್ತೆ ಅನ್ನೋವಷ್ಟರಲ್ಲಿ ನಾಯಿ ಮರಿಯಿಂದ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ.

    ಏನಿದು ಘಟನೆ?: 
    ವಿಮಾನದ ಲಗೇಜ್ ಕಂಪಾರ್ಟ್ ಮೆಂಟ್‍ನಲ್ಲಿ ನಾಯಿ ಮರಿಯನ್ನು ಪಂಜರದಲ್ಲಿ ಕೂಡಿಟ್ಟಿರಲಾಗಿತ್ತು. ಆದರೆ ಪಂಜರವನ್ನು ಸರಿಯಾಗಿ ಮುಚ್ಚದೇ ಇದ್ದ ಕಾರಣ ನಾಯಿ ಮರಿ ಹೊರಗೆ ಬಂದಿದೆ. ಬಳಿಕ ಅಲ್ಲೆಲ್ಲಾ ಓಡಾಡಿ ಲಗೇಜ್ ಕಂಪಾರ್ಟ್ ಮೆಂಟ್ ಬಾಗಿಲನ್ನು ತೆಗೆಯಲು ಪ್ರಯತ್ನ ಮಾಡಿದೆ. ಕೊನೆಗೆ ನಾಯಿ ಮರಿ ತನ್ನ ಹಲ್ಲು ಮತ್ತು ಉಗುರಿನಿಂದ ಪರಚಿ ಕಾಲಿನಿಂದ ವಿಮಾನದ ಕಂಪಾರ್ಟ್ ಮೆಂಟಿನ ಅರ್ಧ ಬಾಗಿಲನ್ನು ತೆರೆದಿದೆ. ನಾಯಿ ಮರಿ ಎಷ್ಟೇ ಪ್ರಯತ್ನಿಸಿದರೂ ಕಂಪಾರ್ಟ್ ಮೆಂಟಿನ ಪೂರ್ಣ ಬಾಗಿಲು ತೆಗೆಯಲು ಸಾಧ್ಯವಾಗಿಲ್ಲ. ಯಾಕಂದ್ರೆ ವಿಮಾನದೊಳಗೆ ತಂತ್ರಜ್ಞಾನಗಳನ್ನು ಅಳವಡಿಸಲಾಗಿರುತ್ತದೆ.

    ವಿಮಾನದಲ್ಲಿ ಏನಾದರೂ ಸಮಸ್ಯೆ ಉಂಟಾದರೆ ಭದ್ರತಾ ಸಿಬ್ಬಂದಿಯ ಅರಿವಿಗೆ ಬರಲು ಎಚ್ಚರಿಕೆಯ ಗಂಟೆಯನ್ನು ಅಳವಡಿಸಿರಲಾಗಿರುತ್ತದೆ. ವಿಮಾನದ ಬಾಗಿಲು ಅರ್ಧ ತೆಗೆದಿದ್ದ ಕಾರಣ ಎಚ್ಚರಿಕೆಯ ಗಂಟೆ ಬಡಿದುಕೊಳ್ಳಲು ಪ್ರಾರಂಭಿಸಿತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಈ ವೇಳೆ ವಿಮಾನ ಭೂಮಿಯಿಂದ ಸುಮಾರು 13,000 ಅಡಿಗಳ ಮೇಲೆ ಹಾರಾಟ ಮಾಡುತ್ತಿತ್ತು. ಮುಂಜಾಗೃತ ಕ್ರಮವಾಗಿ ಪೈಲೆಟ್ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ್ದಾರೆ. ನಂತರ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಆಗ ನಾಯಿ ಮರಿಯಿಂದ ಬಾಗಿಲು ಅರ್ಧ ತೆರೆದುಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ.

    ಸದ್ಯ ಈ ಅವಘಡದಿಂದ ಪ್ರಯಾಣಿಕರಿಗೆ ಯಾವುದೇ ರೀತಿಯ ಸಮಸ್ಯೆಯಾಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ. ನಾಯಿ ಮರಿಯ ಜೀವಕ್ಕೆ ಯಾವುದೇ ಪ್ರಣಾಪಾಯವಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

  • ಎರಡು ವರ್ಷದ ಹಿಂದೆ ತಂದಿದ್ದ ನಾಯಿ ಮರಿ, ಕರಡಿ ಆಯಿತು-ಕುಟುಂಬಸ್ಥರೆಲ್ಲಾ ಶಾಕ್!

    ಎರಡು ವರ್ಷದ ಹಿಂದೆ ತಂದಿದ್ದ ನಾಯಿ ಮರಿ, ಕರಡಿ ಆಯಿತು-ಕುಟುಂಬಸ್ಥರೆಲ್ಲಾ ಶಾಕ್!

    ಬೀಜಿಂಗ್: ಎರಡು ವರ್ಷದಿಂದ ತಾವು ಸಾಕಿದ್ದು ನಾಯಿ ಮರಿಯಲ್ಲ, ಕರಡಿ ಎಂದು ಗೊತ್ತಾಗಿ ಕುಟುಂಬವೊಂದು ತಬ್ಬಿಬ್ಬಾದ ಘಟನೆ ಚೀನಾದಲ್ಲಿ ನಡೆದಿದೆ.

    ಇಲ್ಲಿನ ಯುನ್ನಾನ್ ನಗರ ನಿವಾಸಿ ಸುಯುನ್ ಎಂಬವರು ಎರಡು ವರ್ಷಗಳ ಹಿಂದೆ ನಾಯಿ ಮರಿಯೊಂದನ್ನು ಖರೀದಿಸಿದ್ರು. ಅದು ದಿನವೂ ಒಂದು ಬಾಕ್ಸ್ ಹಣ್ಣು ಮತ್ತು 2 ಬಕೆಟ್ ನೂಡಲ್ಸ್ ಅನ್ನು ತಿನ್ನುತ್ತಿದ್ದನ್ನು ಕಂಡು ಮನೆಯ ಸದಸ್ಯರಿಗೆ ವಿಚಿತ್ರ ಅನ್ನಿಸಿತ್ತು.

    ತಾವು ತಂದಿದ್ದ ಪಪ್ಪಿ(ನಾಯಿ ಮರಿ) ದಿನದಿಂದ ದಿನಕ್ಕೆ ಅದರ ಬೆಳವಣಿಗೆ ಹೆಚ್ಚುತ್ತಲೇ ಹೋಗಿದ್ದು, ಸುಮಾರು 134 ಕೆ.ಜಿ ಯಷ್ಟು ತೂಕ ಪಡೆದುಕೊಂಡಿದೆ. ಅಲ್ಲದೇ ಅದು ಎರಡು ಕಾಲುಗಳ ಮೂಲಕ ನಡೆದಾಡಲು ಪ್ರಾರಂಭಿಸಿದನ್ನು ಕಂಡ ಕುಟುಂಬಸ್ಥರಿಗೆ ಸಂದೇಹ ಬಂದಿದೆ.

    ಪ್ರಾಣಿಯು ಉದ್ದ ಕೂದಲು ಹೊಂದಿದ್ದರಿಂದ ಟಿಬೆಟಿಯನ್ ಮಾಸ್ಟಿಫ್ ನಾಯಿ ಜಾತಿಗೆ ಸೇರಿದ್ದು ಎಂದು ತಿಳಿದಿದ್ದರಂತೆ. ಆದರೆ ಅದರ ಬೆಳವಣಿಗೆ ಹಾಗೂ ವರ್ತನೆಯಿಂದ ಕುಟುಂಬದವರಲ್ಲಿ ಅನುಮಾನ ಮೂಡಿಸಿದ್ದು, ನಂತರ ಅದು ನಾಯಿಯಲ್ಲ ‘ಏಷ್ಯಾಟಿಕ್ ಕಪ್ಪು ಕರಡಿ’ ಎಂದು ಗೊತ್ತಾಗಿದೆ. ಕೊನೆಗೆ ಕುಟುಂಬಸ್ಥರು ಕರಡಿಯನ್ನು ಪಂಜರದಲ್ಲಿ ಹಾಕಿ ವನ್ಯಜೀವಿ ಸಂರಕ್ಷಣಾ ಕೇಂದ್ರಕ್ಕೆ ಒಪ್ಪಿಸಿದ್ದಾರೆ.

    ಸದ್ಯ ಸುಯುನ್ ಅವರ ಸಾಕಿದ್ದ ಕರಡಿಯು ಯುನ್ನಾನ್‍ನ ವನ್ಯಜೀವಿ ಸಂರಕ್ಷಣಾ ಕೇಂದ್ರ ಸೇರಿದೆ.

  • ರಕ್ಷಿತ್ ಶೆಟ್ಟಿಗೂ ಈ ನಾಯಿ ಮರಿಗೂ ಏನು ಸಂಬಂಧ?

    ರಕ್ಷಿತ್ ಶೆಟ್ಟಿಗೂ ಈ ನಾಯಿ ಮರಿಗೂ ಏನು ಸಂಬಂಧ?

    ಬೆಂಗಳೂರು: ಒಂದು ನಾಯಿ ಮತ್ತು ಮನುಷ್ಯರ ನಡುವಿನ ಸಂಬಂಧವನ್ನು ಕಟ್ಟಿಕೊಡುವ ಸಿನಿಮಾ 777 ಚಾರ್ಲಿ. ಈ ಸಿನಿಮಾದ ಕಥೆ ರಕ್ಷಿತ್ ಶೆಟ್ಟಿ ಮತ್ತು ಒಂದು ನಾಯಿಯನ್ನು ಪ್ರಧಾನವಾಗಿರಿಸಿಕೊಂಡು ಕಟ್ಟಿಕೊಡಲಾಗಿದೆ. ಖಿನ್ನತೆಗೆ ಗುರಿಯಾಗಿ ಏಕಾಂಗಿಯಂತೆ ಓಡಾಡಿಕೊಂಡಿರುವ ಯುವಕನ ಬದುಕಿಗೆ ಒಂದು ಲ್ಯಾಬ್ರಡಾರ್ ನಾಯಿಯ ಪ್ರವೇಶವಾಗುತ್ತದೆ! ಆ ನಂತರ ಆತನ ಬದುಕು ಬೇರೆಯದ್ದೇ ದಿಕ್ಕಿಗೆ ಸಾಗುತ್ತದೆ. ಇದು ಚಾರ್ಲಿ ಕತೆಯ ಎಳೆ.

    ಈ ಚಿತ್ರದಲ್ಲಿ ಅರವಿಂದ್ ಅಯ್ಯರ್ ಹೀರೋ ಆಗಿ ಕಾಣಿಸಿಕೊಳ್ಳಬೇಕಿತ್ತು. ಕಾರಣಾಂತರಗಳಿಂದ ಅರವಿಂದ್ ಆ ಪಾತ್ರದಿಂದ ಹೊರಗುಳಿದಿದ್ದಾರೆ ಮತ್ತು ಆ ಪಾತ್ರವನ್ನು ನಿರ್ಮಾಣ ಮಾಡಬೇಕಿದ್ದ ರಕ್ಷಿತ್ ಶೆಟ್ಟಿ ಅವರೇ ನಿಭಾಯಿಸುತ್ತಿದ್ದಾರೆ.

    ಈ ಚಿತ್ರಕ್ಕಾಗಿ ಅರವಿಂದ್ ಮತ್ತು ನಾಯಿಮರಿಗೆ ಊಟಿಯಲ್ಲಿ ವಿಶೇಷ ತರಬೇತಿಯನ್ನೂ ನೀಡಲಾಗಿತ್ತು. ಈ ಚಿತ್ರದಲ್ಲಿ ನಟಿಸುತ್ತಿರುವ ಲ್ಯಾಬ್ರಡಾರ್ ನಾಯಿಮರಿ ಮನುಷ್ಯರನ್ನು ಹೋಲುವ ಹಾವಭಾವವನ್ನು ಪ್ರದರ್ಶಿಸಬೇಕಿದೆ. ಈವರೆಗೂ ಯಾವ ಸಿನಿಮಾದಲ್ಲೂ ನಾಯಿಯೊಂದು ಇಷ್ಟು ಸಹಜವಾಗಿ ನಟಿಸಿಲ್ಲವಂತೆ. ಆ ಮಟ್ಟಕ್ಕೆ ನಾಯಿಯನ್ನು ತರಬೇತಿಗೊಳಿಸಲಾಗುತ್ತಿದೆ. ಇದಕ್ಕೆಂದು ವಿದೇಶದಿಂದ ಟ್ರೈನರ್ ಒಬ್ಬರನ್ನು ಕರೆಸಿಕೊಳ್ಳಲಾಗಿದೆ.

    ಹೀರೋ ಜೊತೆ ಅಪೂರ್ವ ಬಾಂಧವ್ಯವಿರಲೇಬೇಕಿದ್ದರಿಂದ ನಾಯಿ ಮರಿ ಸದ್ಯ ಇಪ್ಪತ್ನಾಲ್ಕು ಗಂಟೆಯೂ ರಕ್ಷಿತ್ ಅವರೊಟ್ಟಿಗೇ ವಾಸಿಸುವ ಯೋಗ ಪಡೆದಿದೆ!

  • ಹಸಿವಿನಿಂದ ನಾಯಿಮರಿ ನುಂಗಲು ಯತ್ನಿಸಿದ ನಾಗರಹಾವು!

    ಹಸಿವಿನಿಂದ ನಾಯಿಮರಿ ನುಂಗಲು ಯತ್ನಿಸಿದ ನಾಗರಹಾವು!

    ಧಾರವಾಡ: ಹೊಟ್ಟೆ ಹಸಿವಿನಿಂದಾಗಿ ನಾಗರಹಾವೊಂದು ನಾಯಿ ಮರಿಯನ್ನು ನುಂಗಲು ಯತ್ನಿಸಿರುವ ಘಟನೆ ಜಿಲ್ಲೆಯ ವೀರಭದ್ರೇಶ್ವರ ನಗರದಲ್ಲಿ ನಡೆದಿದೆ.

    ನಗರದ ಶೇಖರ ಬಿಜಲಿ ಎಂಬುವರ ಮನೆ ಬಳಿ ನಾಗರಹಾವು ನಾಯಿ ಮರಿಯನ್ನ ನುಂಗಲು ಯತ್ನ ನಡೆಸಿದೆ. ಮರದ ಸೌದೆ ಕೆಳಗೆ ನಾಯಿ ಮರಿಗಳ ಗುಂಪು ವಾಸವಿತ್ತು. ಅಲ್ಲೇ ಪಕ್ಕದಲ್ಲಿದ್ದ ನಾಗರಹಾವೊಂದು ಅವುಗಳ ಬಳಿ ಹೋಗಿ ಹಸಿವಿನಿಂದ ನಾಯಿ ಮರಿಯನ್ನು ತಿನ್ನಲು ಯತ್ನಿಸಿದ್ದು, ಒಂದು ನಾಯಿಮರಿಯನ್ನು ಹಿಡಿದುಕೊಂಡಿದೆ. ಇದನ್ನ ನೋಡಿದ ಶೇಖರ ಎಂಬವರು ತಕ್ಷಣ ಉರಗ ತಜ್ಞ ಎಲ್ಲಪ್ಪ ಜೋಡಳ್ಳಿ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

    ಮಾಹಿತಿ ತಿಳಿದು ಎಲ್ಲಪ್ಪ ಬರುವಷ್ಟರಲ್ಲಿ ನಾಗರಹಾವು ನಾಯಿಮರಿಯನ್ನ ಅರ್ಧದಷ್ಟು ನುಂಗಿತ್ತು. ಎರಡು ದಿನಗಳ ಹಿಂದೆಯಷ್ಟೆ ನಾಯಿ 4 ಮರಿಗಳನ್ನ ಹಾಕಿತ್ತು. ಸ್ಥಳಕ್ಕೆ ಬಂದ ಎಲ್ಲಪ್ಪ ನಾಯಿ ಮರಿ ನುಂಗಿದ್ದ ನಾಗರ ಹಾವನ್ನ ಹಿಡಿದು, ಆ ನಾರಿಮರಿಯನ್ನ ನಾಗರ ಹಾವಿನ ಬಾಯಿಯಿಂದ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ನಾಯಿ ಮರಿ ಅಷ್ಟೊತ್ತಿಗೆ ಸಾವನ್ನಪ್ಪಿದೆ.

    ಉರಗತಜ್ಞ ಎಲ್ಲಪ್ಪ ರಕ್ಷಣೆ ಮಾಡಿದ ಹಾವನ್ನ ಕಾಡಿಗೆ ಬಿಟ್ಟು ಬಂದಿದ್ದಾರೆ.

  • 6 ನಾಯಿ ಮರಿಗಳಿಗೆ ಹಾಲುಣಿಸುತ್ತಿದೆ ಬೆಕ್ಕು- ಬೆಳ್ತಂಗಡಿಯಲ್ಲೊಂದು ಅಚ್ಚರಿಯ ಘಟನೆ

    6 ನಾಯಿ ಮರಿಗಳಿಗೆ ಹಾಲುಣಿಸುತ್ತಿದೆ ಬೆಕ್ಕು- ಬೆಳ್ತಂಗಡಿಯಲ್ಲೊಂದು ಅಚ್ಚರಿಯ ಘಟನೆ

    ಮಂಗಳೂರು: ಬೆಕ್ಕು ಮತ್ತು ನಾಯಿ ಪರಮ ಶತ್ರುಗಳು ಅಂತಾ ಹೇಳುತ್ತಾರೆ. ಆದರೆ ಇಲ್ಲೊಂದು ಬೆಕ್ಕು ಸುಮಾರು 6 ನಾಯಿ ಮರಿಗಳಿಗೆ ಹಾಲುಣಿಸಿ ತಾಯಿಯ ಪ್ರೀತಿಯನ್ನು ತೋರಿಸುತ್ತಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಈ ಅಪರೂಪದ ಘಟನೆ ನಡೆದಿದ್ದು, ಬೆಳ್ತಂಗಡಿಯ ಸೋಮಂತಡ್ಕ ನಿವಾಸಿ ಮೋಹನ್ ನಾಯ್ಕ್ ಎಂಬವರ ಮನೆಯ ಬೆಕ್ಕು ಪ್ರತಿದಿನ ಬೆಳಗ್ಗೆ ನಾಯಿಮರಿಗಳಿಗೆ ಹಾಲು ನೀಡುತ್ತಿದೆ.

    ಈ ಬೆಕ್ಕು ಸುಮಾರು 5 ರಿಂದ 6 ನಾಯಿಮರಿಗಳಿಗೆ ಪ್ರತಿದಿನ ಹಾಲನ್ನು ಕುಡಿಸುತ್ತದೆ. ತಾಯಿಯ ಮಮತೆಯನ್ನು ಬಯಸಿ ಬರುವ ನಾಯಿ ಮರಿಗಳಿಗೆ ತಾಯಿಯ ಪ್ರೀತಿ ತೋರಿಸುತ್ತಾ, ನಾಯಿ ಮರಿಗಳು ಹತ್ತಿರ ಬಂದ ತಕ್ಷಣ ಮಲಗಿ ಹಾಲನ್ನು ನೀಡುತ್ತದೆ. ಈ ಬೆಕ್ಕು ಹಾಲಿಗಾಗಿ ಬರುವ ನಾಯಿಮರಿಗಳನ್ನು ಎಂದಿಗೂ ದೂರ ಮಾಡಿಲ್ಲ. ಸದ್ಯ ಈ ಬೆಕ್ಕು ಮತ್ತು ನಾಯಿಮರಿಗಳ ಸಂಬಂಧವನ್ನು ನೋಡಿ ಮನೆಯವರಿಗೂ ಅಚ್ಚರಿಯಾಗಿದೆ.

  • 15 ದಿನದ 8 ನಾಯಿ ಮರಿಗಳನ್ನು ಕಲ್ಲಿಗೆ ಹೊಡೆದು ಸಾಯಿಸಿದ್ದ ಮಹಿಳೆಗೆ ಕೋರ್ಟ್ ನೀಡಿದ್ದು ಈ ಶಿಕ್ಷೆ

    15 ದಿನದ 8 ನಾಯಿ ಮರಿಗಳನ್ನು ಕಲ್ಲಿಗೆ ಹೊಡೆದು ಸಾಯಿಸಿದ್ದ ಮಹಿಳೆಗೆ ಕೋರ್ಟ್ ನೀಡಿದ್ದು ಈ ಶಿಕ್ಷೆ

    ಬೆಂಗಳೂರು: ನಾಯಿಮರಿಗಳನ್ನು ಹತ್ಯೆಗೈದ ಮಹಿಳೆಗೆ ನ್ಯಾಯಾಲಯ 1 ಸಾವಿರ ರೂ. ದಂಡ ವಿಧಿಸಿ ಶಿಕ್ಷೆ ಪ್ರಕಟಿಸಿದೆ.

    ಪೊನ್ನಮ್ಮ ಶಿಕ್ಷೆಗೆ ಗುರಿಯಾಗಿರುವ ಮಹಿಳೆ. 2016ರ ಮಾರ್ಚ್ 16 ರಂದು 15 ದಿನಗಳ ಎಂಟು ನಾಯಿ ಮರಿಗಳನ್ನು ಮಹಿಳೆ ಕ್ರೂರವಾಗಿ ಹತ್ಯೆ ಮಾಡಿದ್ದಳು. ಪೀಣ್ಯಾ ಪೊಲೀಸ್ ಠಾಣಾ ವ್ಯಾಪ್ತಿಯ ಶೆಟ್ಟಿಹಳ್ಳಿಯಲ್ಲಿ ಈ ಪ್ರಕರಣ ನಡೆದಿದ್ದು, ರಾಜ್ಯಾದ್ಯಂತ ಸುದ್ದಿಯಾಗಿತ್ತು. ಮರಿ ಹಾಕಿದ್ದ ನಾಯಿ ರಾತ್ರಿಯಲ್ಲಾ ಬೋಗಳುತ್ತೆ ಅನ್ನೊ ಕಾರಣಕ್ಕೆ ಹದಿನೈದು ದಿನದ 8 ನಾಯಿ ಮರಿಗಳನ್ನು ಕಲ್ಲಿಗೆ ಹೊಡೆದು ಮಹಿಳೆ ಹತ್ಯೆ ಮಾಡಿದ್ದಳು.

    ಈ ಘಟನೆ ನಡೆದ ಹದಿನೈದು ದಿನಗಳ ಬಳಿಕ ತಾಯಿ ನಾಯಿಯೂ ಸಾವನಪ್ಪಿತ್ತು. ಈ ಕುರಿತು ಸ್ಥಳೀಯರು ನೀಡಿದ ದೂರಿನ ಮೇರೆಗೆ ಕ್ಯೂಪಾ ಪ್ರಾಣಿ ದಯಾ ಸಂಘ ದೂರು ದಾಖಲಿಸಿತ್ತು.

    ಪ್ರಕರಣದ ಬಳಿಕ ಪೀಣ್ಯ ಪೊಲೀಸರು ಪೊನ್ನಮ್ಮ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದೀಗ ಆರೋಪಿತ ಮಹಿಳೆಗೆ 45ನೇ ಎಸಿಎಂಎಂ ಕೋರ್ಟ್ 1 ಸಾವಿರ ದಂಡ ಇಲ್ಲವೇ 15 ದಿನ ಜೈಲು ಶಿಕ್ಷೆ ಪ್ರಕಟಿಸಿದೆ. ಸದ್ಯ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಪ್ರಾಣಿ ದಯಾ ಸಂಘದ ಕಾರ್ಯಕರ್ತರು ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.