Tag: ನಾಯಿಗಳು

  • ವಿಧಾನಸೌಧದಲ್ಲಿ ನಾಯಿಗಳ ರಕ್ಷಣೆಗೆ ಸರ್ಕಾರಕ್ಕೆ ಪ್ರಸ್ತಾವನೆ: ಯು.ಟಿ ಖಾದರ್

    ವಿಧಾನಸೌಧದಲ್ಲಿ ನಾಯಿಗಳ ರಕ್ಷಣೆಗೆ ಸರ್ಕಾರಕ್ಕೆ ಪ್ರಸ್ತಾವನೆ: ಯು.ಟಿ ಖಾದರ್

    ಬೆಂಗಳೂರು: ವಿಧಾನಸೌಧದಲ್ಲಿರೋ ನಾಯಿಗಳ ರಕ್ಷಣೆ ಸಂಬಂಧ ಸರ್ಕಾರಕ್ಕೆ ವಿವರವಾದ ಮಾಹಿತಿ ಜೊತೆಗೆ ಪ್ರಸ್ತಾವನೆ ಕಳಿಸಿದ್ದೇವೆ. ಸರ್ಕಾರ ನಮಗೆ ಅನುಮತಿ ಕೊಟ್ಟರೆ ನಾಯಿಗಳಿಗೆ ಪ್ರತ್ಯೇಕ ನಿರ್ವಹಣೆ ಮಾಡೋ ಬಗ್ಗೆ ತೀರ್ಮಾನ ಮಾಡ್ತೀವಿ ಎಂದು ಸ್ಪೀಕರ್ ಯು.ಟಿ.ಖಾದರ್ (U T Khader) ತಿಳಿಸಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ವಿಧಾನಸೌಧದಲ್ಲಿ 53 ನಾಯಿಗಳು (Dogs) ಇವೆ. ನಾಯಿಗಳು ವಿಧಾನಸೌಧದ ಒಳಗೆ ಬಾರದಂತೆ ತಡೆಯಲು ಗೇಟ್ ವ್ಯವಸ್ಥೆ ಇಲ್ಲ. ಶಾಸಕರು ವಾಕಿಂಗ್ ಮಾಡಬೇಕಾದ್ರೆ, ಜನರು ವಿಸಿಟ್ ಮಾಡಿದಾಗ ತೊಂದರೆ ಆಗ್ತಿದೆ. ಹೀಗಾಗಿ ನಾವು ಅವುಗಳ ರಕ್ಷಣೆಗೆ ಶೆಡ್ ನಿರ್ಮಾಣ ಮಾಡೋ ಪ್ಲ್ಯಾನ್ ಇದೆ ಎಂದಿದ್ದಾರೆ. ಇದನ್ನೂ ಓದಿ: ಅಭಿಮಾನ್ ಸ್ಟುಡಿಯೋ ಮುಟ್ಟುಗೋಲಿಗೆ ಸರ್ಕಾರ ಆದೇಶ – ಅನಿರುದ್ಧ ರಿಯಾಕ್ಷನ್ ಏನು?

    ಖಾಸಗಿ ಎಸ್‌ಜಿಒಗೆ ಕೊಟ್ಟು ಇವುಗಳಲ್ಲಿ ಸಾಕುವ ವ್ಯವಸ್ಥೆ ಮಾಡುವ ತೀರ್ಮಾನವಾಗಿ ಚರ್ಚೆ ಆಗಿವೆ.ನಾಯಿಗಳ ರಕ್ಷಣೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನ ಸರ್ಕಾರಕ್ಕೆ ರವಾನೆ ಮಾಡಿದ್ದೇವೆ. ಸರ್ಕಾರ ಅದಕ್ಕೆ ಒಪ್ಪಿಗೆ ಕೊಟ್ಟರೆ ಅನುಷ್ಟಾನ ಮಾಡ್ತೇವೆ ಎಂದು ತಿಳಿಸಿದ್ದಾರೆ.

  • ಸಾಕು ನಾಯಿ ಬಾಯಿಗೆ ಆಹಾರವಾದ ಮಂಗನಮರಿ- ಕಂದನ ಕಳೆದುಕೊಂಡ ನೋವಿನಲ್ಲಿ ಗ್ರಾಮಸ್ಥರ ಮೇಲೆ ದಾಳಿ

    ಸಾಕು ನಾಯಿ ಬಾಯಿಗೆ ಆಹಾರವಾದ ಮಂಗನಮರಿ- ಕಂದನ ಕಳೆದುಕೊಂಡ ನೋವಿನಲ್ಲಿ ಗ್ರಾಮಸ್ಥರ ಮೇಲೆ ದಾಳಿ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಿನ್ನರ ಗ್ರಾಮದಲ್ಲಿ ಮಂಗಗಳು ಊರಿನ ಜನರ ಮೇಲೆ ದಾಳಿ ಇಡುತ್ತಿದ್ದು, ಮಂಗನ ದಾಳಿಯಿಂದಾಗಿ ಗ್ರಾಮದ ಹತ್ತಕ್ಕೂ ಹೆಚ್ಚು ಜನರು ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

    ಇಡೀ ಕಿನ್ನರ ಗ್ರಾಮದ ರಸ್ತೆಗಳಲ್ಲಿ ಜನರು ಓಡಾಡಿದರೆ ಮಂಗಗಳು ಮರದಿಂದ ಹಾರಿ ಬಂದು ಜನರ ಮೇಲೆ ಎರಗುತಗತ್ತಿವೆ. ಹಲವರಿಗೆ ಕಾಲು, ಕೈಗಳಿಗೆ ಕಚ್ಚಿ ಗಾಸಿ ಮಾಡಿದರೆ, ಇನ್ನೂ ಕೆಲವರಿಗೆ ಗಂಭೀರ ಸ್ವರೂಪದ ಗಾಯ ಮಾಡಿವೆ. ಈ ಮಂಗಗಳ ವಿಚಿತ್ರ ವರ್ತನೆಗೆ ಬೆದರಿದ ಗ್ರಾಮಸ್ಥರು, ಕಾರವಾರದ ಅರಣ್ಯ ಇಲಾಖೆಗೆ ದೂರು ನೀಡಿದ್ದು, ಮಂಗಗಳನ್ನು ಹಿಡಿದು ಬೇರೆಡೆ ಬಿಡುವಂತೆ ಒತ್ತಾಯಿಸಿದ್ದಾರೆ. ಇನ್ನು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಮಂಗನ ಹಿಡಿಯಲು ಬೋನ್ ಇಟ್ಟಿದ್ದು, ಕಾರ್ಯಾಚರಣೆಗೆ ಇಳಿದಿದ್ದಾರೆ.

    ಏಕಾ ಏಕಿ ಮಂಗಗಳ ದಾಳಿಗೆ ಕಾರಣವೇನು?
    ಕಿನ್ನರ ಗ್ರಾಮದ ಭಾಗದಲ್ಲಿ ಒಂದುಕಡೆ ಕಾಳಿ ನದಿ ಹರಿಯುತ್ತದೆ, ಮತ್ತೊಂದು ಕಡೆ ದಟ್ಟ ಅರಣ್ಯವಿದ್ದು, ಕಾಡುಪ್ರಾಣಿಗಳ ವಾಸ ಸ್ಥಳವಾಗಿದೆ. ಇದು ಕಪ್ಪು ಹಾಗೂ ಕೆಂಪು ಮಂಗಗಳ ಆವಾಸ ಸ್ಥಾನ ಕೂಡ. ಹೀಗಾಗಿ ಈ ಭಾಗದ ಅರಣ್ಯ ಭಾಗದಲ್ಲಿ ಮಂಗಗಳು ಸಾಮಾನ್ಯ. ಇನ್ನು ಮಳೆಗಾಲವಾದ್ದರಿಂದ ಕಾಡಿನಿಂದ ಅಲ್ಲಿಯೇ ಇರುವ ಅಕ್ಕ ಪಕ್ಕದ ಗ್ರಾಮಗಳಿಗೆ ಮಂಗಗಳು ಆಹಾರ ಅರಸಿ ಬರುತ್ತವೆ. ಹೀಗಿರುವಾಗ ಮಂಗಗಳ ದಾಳಿ ತಪ್ಪಿಸಲು ಮನೆಯಲ್ಲಿ ನಾಯಿಗಳನ್ನು ಸಾಕುತ್ತಾರೆ. ಮಂಗಗಳು ಬಂದಾಗ ನಾಯಿಗಳನ್ನು ಬಿಟ್ಟು ಓಡಿಸುವುದು ಸಾಮಾನ್ಯ.

    ಕಳೆದ ಕೆಲವು ದಿನಗಳ ಹಿಂದೆ ಹೀಗೆ ಆಹಾರ ಅರಸಿ ಗ್ರಾಮದ ಕಡೆ ಬಂದಿದ್ದ ಮಂಗಗಳ ಗುಂಪೊಂದರಲ್ಲಿ ಮಂಗನ ಮರಿಗಳನ್ನು ನಾಯಿಗಳು ಬೇಟೆಯಾಡಿವೆ. ತಮ್ಮ ಕರುಳು ಬಳ್ಳಿಯನ್ನು ಕಣ್ಣೆದುರೇ ಕಳೆದುಕೊಂಡ ಮಂಗಗಳು ಇದೀಗ ಗ್ರಾಮದಲ್ಲಿ ಯಾರೇ ಓಡಾಡಿದರೂ ದಾಳಿ ಇಡುತ್ತಿದ್ದು, ಹಲವರಿಗೆ ಗಾಯ ಮಾಡಿವೆ. ಇದರಿಂದಾಗಿ ಇದೀಗ ಗ್ರಾಮದ ಜನರು ಮಂಗಗಳು ಎಂದರೆ ಭಯ ಪಡುವಂತಾಗಿದೆ. ಸದ್ಯ ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮಂಗಗಳನ್ನು ಹಿಡಿದು ಬೇರೆಡೆ ಬಿಡಲು ಹರಸಾಹಸ ಪಡುತಿದ್ದಾರೆ.

  • ಹೆಣ್ಣು ಶಿಶುವೆಂದು ರಸ್ತೆಯಲ್ಲೇ ಬಿಟ್ಟೋದ ತಾಯಿ – ಶ್ವಾನಗಳಿಂದ ಶಿಶುವನ್ನು ರಕ್ಷಿಸಿದ ಗ್ರಾಮಸ್ಥರು

    ಹೆಣ್ಣು ಶಿಶುವೆಂದು ರಸ್ತೆಯಲ್ಲೇ ಬಿಟ್ಟೋದ ತಾಯಿ – ಶ್ವಾನಗಳಿಂದ ಶಿಶುವನ್ನು ರಕ್ಷಿಸಿದ ಗ್ರಾಮಸ್ಥರು

    ಬೀದರ್: ಕ್ರೂರಿ ತಾಯಿಯೊಬ್ಬಳು ರಸ್ತೆಯಲ್ಲೇ ಬಿಟ್ಟು ಹೋಗಿದ್ದ ನವಜಾತ ಶಿಶುವನ್ನು ನಾಯಿಗಳ ದಾಳಿಯಿಂದ ಗ್ರಾಮಸ್ಥರು ರಕ್ಷಣೆ ಮಾಡಿದ ಘಟನೆ ಬೀದರ್ ನಲ್ಲಿ ನಡೆದಿದೆ.

    ಬೀದರ್ ಜಿಲ್ಲೆಯ ಕಮಲಾನಗರ ತಾಲೂಕಿನ ಡೋಣಗಾಂವ್ ಗ್ರಾಮದಲ್ಲಿ ಶ್ವಾನಗಳಿಗೆ ಬಲಿಯಾಗುತ್ತಿದ್ದ ನವಜಾತ ಶಿಶುವನ್ನು ರಕ್ಷಿಸಿ ಗ್ರಾಮಸ್ಥರು ಮಾನವೀಯತೆ ಮೆರೆದಿದ್ದಾರೆ. ಹೆಣ್ಣು ಶಿಶು ಎಂಬ ಕಾರಣಕ್ಕೆ ಕ್ರೂರಿ ತಾಯಿ ಮಗುವನ್ನು ರಸ್ತೆಯಲ್ಲೇ ಬಿಟ್ಟು ಪರಾರಿಯಾಗಿದ್ದಾಳೆ. ರಸ್ತೆ ಮೇಲೆ ರಕ್ತಸಿಕ್ತ ಸ್ಥಿತಿಯಲ್ಲಿದ್ದ ಮಗುವನ್ನು ನಾಯಿಗಳು ಕಚ್ಚುತ್ತಿದ್ದವು. ಇದನ್ನು ಗಮನಿಸಿದ ಗ್ರಾಮಸ್ಥರು ನಾಯಿಗಳಿಂದ ಶಿಶುವನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಸದ್ಯ ಶಿಶುವಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಶಿಶು ಆರೋಗ್ಯವಾಗಿದೆ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ತನ್ನನ್ನು ತಾನು ಗುರುತಿಸಿಕೊಳ್ಳುತ್ತಿದ್ದಾಳೆ. ಆದರೆ ಈಗಲೂ ಹೆಣ್ಣು ಶಿಶುಗಳ ಮಾರಣಹೋಮ ನಡೆಯುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.

    ಹೆಣ್ಣು ಮಗು ಹುಟ್ಟಿದರೆ ನಮಗೆ ಹೊರೆ ಎಂದು ಪ್ರತಿಕ್ರಿಯೆ ನೀಡುವ ಕ್ರೂರಿಗಳಿಗೆ ಎಷ್ಟೇ ಅರಿವು ನೀಡಿದರು ಬದಲಾಗುತ್ತಿಲ್ಲ. ಬೀದರ್ ನ ಈ ಕ್ರೂರಿ ತಾಯಿ ನಡೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಇನ್ನು ಮುಂದೆಯಾದರು ಈ ರೀತಿಯ ಘಟನೆಗಳು ಮರುಕಳಿಸದೆ ಇರಲಿ ಎಂಬುವುದೇ ಪ್ರಜ್ಞಾವಂತ ಸಮಾಜದ ಕಳಕಳಿಯಾಗಿದೆ. ಕಮಲಾನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಕೊಟ್ಟಿಗೆಯಿಂದ ಕರುವನ್ನು ಎಳೆದು ತಂದು ಅರ್ಧ ದೇಹವನ್ನೇ ಕಚ್ಚಿ ತಿಂದ ನಾಯಿಗಳು

    ಕೊಟ್ಟಿಗೆಯಿಂದ ಕರುವನ್ನು ಎಳೆದು ತಂದು ಅರ್ಧ ದೇಹವನ್ನೇ ಕಚ್ಚಿ ತಿಂದ ನಾಯಿಗಳು

    ಚಿತ್ರದುರ್ಗ: ಬೀದಿ ನಾಯಿಗಳ ಹಾವಳಿಗೆ ಚಿತ್ರದುರ್ಗದ ಜನರು ತತ್ತರಿಸಿ ಹೋಗಿದ್ದಾರೆ. ಜಿಲ್ಲೆಯ ಹಿರಿಯೂರು ಹಾಗೂ ಹೊಸದುರ್ಗ ಪಟ್ಟಣಗಳಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ಇಂದು ಬೆಳ್ಳಂಬೆಳಗ್ಗೆ ಕರುವೊಂದು ನಾಯಿಗಳ ದಾಳಿಗೆ ಬಲಿಯಾಗಿದೆ.

    ಜಿಲ್ಲೆಯ ಹಿರಿಯೂರು ನಗರದ ತೇರುಮಲ್ಲೇಶ್ವರ ದೇಗುಲದ ಬಳಿ ಇಂದು ಬೆಳ್ಳಂಬೆಳಗ್ಗೆ ಕರುವೊಂದರ ಮೇಲೆ ನಾಲ್ಕೈದು ಬೀದಿ ನಾಯಿಗಳು ದಾಳಿ ನಡೆಸಿವೆ. ನಾಯಿಗಳ ದಾಳಿಯಿಂದಾಗಿ ತನ್ನ ಮಾಲೀಕನ ಬದುಕಿಗೆ ಆಸರೆಯಾಗಬೇಕಿದ್ದ ಹಸುವಿನ ಕರು ಬದುಕಿನ ಬವಣೆ ಅರಿಯುವ ಮುನ್ನವೇ ಸ್ಥಳದಲ್ಲಿ ಸಾವನ್ನಪ್ಪಿದೆ. ಈ ದಾಳಿಯಲ್ಲಿ ಕರುವಿನ ದೇಹ ಎರಡು ತುಂಡಾಗುವಂತೆ ನಾಯಿಗಳು ಕಚ್ಚಿವೆ. ಅಲ್ಲದೆ ಕರುವಿನ ಹಿಂಬದಿಯ ಅರ್ಧ ದೇಹವನ್ನು ತಿಂದು ತೇಗಿವೆ.

    ನಾಯಿಗಳು ಕರುವನ್ನು ಕೊಟ್ಟಿಗೆಯಿಂದ ಎಳೆದು ತಂದು ದಾಳಿ ನಡೆಸಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ನೋಡಿದ ಹಿರಿಯೂರು ನಾಗರೀಕರು ಬೆಚ್ಚಿಬಿದ್ದಿದ್ದಾರೆ. ಅಲ್ಲದೆ ಈ ಬೀದಿ ನಾಯಿಗಳ ಹಾವಳಿ ಬಗ್ಗೆ ಹಲವು ಬಾರಿ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ನಾಯಿಗಳನ್ನು ಸೆರೆ ಹಿಡಿದು, ಬೇರೆಡೆಗೆ ಸ್ಥಳಾಂತರಿಸುವಲ್ಲಿ ನಿರ್ಲಕ್ಷ ತೋರುತ್ತಿದ್ದಾರೆ ಎಂದು ಹಿಡಿಶಾಪ ಹಾಕುತ್ತಿದ್ದಾರೆ.

    ಬೆಳಗಿನ ಜಾವ ಹಾಲು ತರಲು ತೆರಳುವ ಮಕ್ಕಳು, ಮಹಿಳೆಯರನ್ನೇ ಟಾರ್ಗೆಟ್ ಮಾಡುವ ಬೀದಿ ನಾಯಿಗಳು ದಾಳಿ ನಡೆಸಿ ಕಚ್ಚಿ ಪರಚುತ್ತಿವೆ. ಹೀಗಾಗಿ ಆತಂಕಗೊಂಡ ಜನರು ನಗರ ಸಭೆಗಳ ಅಧಿಕಾರಿಗಳಿಗೆ ಬೀದಿ ನಾಯಿಗಳನ್ನು ಸೆರೆ ಹಿಡಿದು ಅವುಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಮನವಿ ಮಾಡಿದ್ದಾರೆ. ನಾಗರೀಕರ ಕಷ್ಟದ ಬಗ್ಗೆ ಕಾಳಜಿ ವಹಿಸಬೇಕಾದ ನಗರಸಭೆ ಅಧಿಕಾರಿಗಳು ಕಳೆದ ಮೂರು ತಿಂಗಳಿಂದಲೂ ನಿರ್ಲಕ್ಷ್ಯ ತೋರಿದ್ದಾರೆಂಬ ಆರೋಪ ಕೇಳಿ ಬಂದಿದೆ.

  • ಜೀವಂತವಾಗಿ 30ಕ್ಕೂ ಹೆಚ್ಚು ನಾಯಿಗಳನ್ನು ಹೂತು ಹಾಕಿದ್ರು

    ಜೀವಂತವಾಗಿ 30ಕ್ಕೂ ಹೆಚ್ಚು ನಾಯಿಗಳನ್ನು ಹೂತು ಹಾಕಿದ್ರು

    ಶಿವಮೊಗ್ಗ: ರೇಬಿಸ್ ಪೀಡಿತ 25 ರಿಂದ 30ಕ್ಕೂ ಹೆಚ್ಚು ನಾಯಿಗಳನ್ನು ಜೀವಂತವಾಗಿ ಹೂತು ಹಾಕಿದ ಘಟನೆ ಶಿಕಾರಿಪುರ ತಾಲೂಕು ಗುಡ್ಡದತುಮ್ಮಿನಕಟ್ಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮದಗದ ಹಾರನಹಳ್ಳಿಯಲ್ಲಿ ನಡೆದಿದೆ.

    ಆರು ತಿಂಗಳ ಹಿಂದೆ ರೇಬಿಸ್ ಪೀಡಿತ ನಾಯಿಯೊಂದು ಒಂದು ದನಕ್ಕೆ ಕಚ್ಚಿತ್ತು. ಇದಾದ ಮೂರು ತಿಂಗಳಲ್ಲಿ ರೇಬಿಸ್ ಪೀಡಿತ ದನ ಮೃತಪಟ್ಟಿತ್ತು. ಈ ದನವನ್ನು ಹೂತು ಹಾಕುವ ಬದಲು, ಕೆರೆ ಅಂಗಳಕ್ಕೆ ಹಾಕಿದ್ದರು. ಹೀಗಾಗಿ ಮದಗದ ಹಾರನಹಳ್ಳಿಯ ಕೆಲ ನಾಯಿಗಳು ಹಸುವಿನ ಮಾಂಸ ತಿಂದಿದ್ದರಿಂದ ಅವುಗಳಿಗೂ ರೇಬೀಸ್ ತಗುಲಿತ್ತು.

    ಪರಿಸ್ಥಿತಿಯನ್ನು ಅರಿತ ಕೆಲವರು ನಾಯಿಗಳಿಗೆ ಚುಚ್ಚುಮದ್ದು ನೀಡುವಂತೆ ಒತ್ತಾಯಿಸಿದ್ದರು. ಆದರೆ ಇದು ದುಬಾರಿ ಆಗಲಿದೆ ಎಂಬ ಕಾರಣಕ್ಕೆ ಗ್ರಾಮ ಪಂಚಾಯತಿಯೂ ನಾಯಿಗಳನ್ನು ಜೀವಂತವಾಗಿ ಹೂತು ಹಾಕಲು ಮುಂದಾಗಿತ್ತು. ಅದರಂತೆ ಮದಗದ ಹಾರನಹಳ್ಳಿಯ ಹೊರಗೆ ಕೆರೆ ಅಂಗಳದಲ್ಲಿ ಜೆಸಿಬಿಯಿಂದ ಗುಂಡಿ ತೆಗೆದು, ಸುಮಾರು 20ರಿಂದ 30 ನಾಯಿಗಳನ್ನು ಹಿಡಿದು, ಜೀವಂತವಾಗಿ ಹೂತು ಹಾಕಿದ್ದಾರೆ.

    ಒಂದು ಗುಂಡಿ ಮುಚ್ಚಿದ ನಂತರ ಇನ್ನೊಂದು ಗುಂಡಿ ತೆಗೆದು ಅಳಿದುಳಿದ ನಾಯಿಗಳನ್ನು ಹೊಡೆದು ಕೊಂದು ಗುಂಡಿಗೆ ಹಾಕಿ ಮುಚ್ಚದೆ ಹಾಗೇ ಬಿಟ್ಟಿದ್ದಾರೆ. ಈ ಅಮಾನವೀಯ, ಹೊಣೆಗೇಡಿತನದ ಕೃತ್ಯ ಮುಚ್ಚಿ ಹಾಕಲು ಗ್ರಾಮ ಪಂಚಾಯತಿಯ ಚುನಾಯಿತ ಪ್ರತಿನಿಧಿಗಳು, ಪಿಡಿಓ ಹಾಗೂ ಕಾರ್ಯದರ್ಶಿಗಳು ಪ್ರಯತ್ನಿಸಿದ್ದಾರೆ. ಗ್ರಾಮಕ್ಕೆ ಭೇಟಿ ಕೊಟ್ಟ ಪಬ್ಲಿಕ್ ಟಿವಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಸ್ಥಳದಲ್ಲಿ ಇಲ್ಲ ಎಂದು ಸಬೂಬು ಹೇಳಿದ್ದಾರೆ.

    ಹುಚ್ಚು ಹಿಡಿದು ಸಾರ್ವಜನಿಕರಿಗೆ ಅಪಾಯವನ್ನುಂಟು ಮಾಡುವ ನಾಯಿಗಳಿಗೆ ದಯಾಮರಣ ನೀಡಲು ಅವಕಾಶವಿದೆ. ಆದರೆ ಹಣ ಖರ್ಚಾಗುತ್ತದೆ ಎಂದು ಹೀಗೆ ಜೀವಂತವಾಗಿ ಹೂತು ಹಾಕಿರುವುದು ಅಕ್ಷಮ್ಯ. ಪ್ರಾಣಿಗಳಿಗೂ ಮನುಷ್ಯರಂತೆ ಬದುಕುವು ಹಕ್ಕು ಇದೆ ಎಂಬುದನ್ನು ಮರೆತಿದ್ದಾರೆ. ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಗ್ರಾಮ ಪಂಚಾಯತಿಯ ಆಡಳಿತದ ವಿರುದ್ಧ ದೂರಿದ್ದಾರೆ.

  • ಬೀದಿ ನಾಯಿಗಳು ಕಚ್ಚಿ 8 ಮಕ್ಕಳು ಗಂಭೀರ..!

    ಬೀದಿ ನಾಯಿಗಳು ಕಚ್ಚಿ 8 ಮಕ್ಕಳು ಗಂಭೀರ..!

     ಸಾಂದರ್ಭಿಕ ಚಿತ್ರ

    ವಿಜಯಪುರ: ಜಿಲ್ಲೆಯಲ್ಲಿ ಬೀದಿನಾಯಿಗಳ ಹಾವಳಿ ಮುಂದುವರಿದಿದ್ದು, 8 ಮಕ್ಕಳ ಮೇಲೆ ನಾಯಿಗಳು ದಾಳಿ ನಡೆಸಿದ ಘಟನೆ ಜಿಲ್ಲೆಯ ತಾಳಿಕೋಟೆ ತಾಲೂಕಿನ ಅಸ್ಕಿ ಗ್ರಾಮದಲ್ಲಿ ನಡೆದಿದೆ.

    ಅಸ್ಕಿ ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳಿಂದ ನಾಯಿಗಳ ಹಾವಳಿ ಹೆಚ್ಚಾಗಿದೆ. ಈ ಕುರಿತು ಗ್ರಾಮ ಪಂಚಾಯ್ತಿ ಸದಸ್ಯರಿಗೆ ವಿಷಯ ತಿಳಿಸಿದ್ರೂ ಪ್ರಯೋಜನವಾಗುತ್ತಿಲ್ಲ. ಇದುವರೆಗೂ ನಾಯಿಗಳ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗದ ಗ್ರಾಮ ಪಂಚಾಯ್ತಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಹುಚ್ಚು ನಾಯಿಗಳು ಹಾಗೂ ಬೀದಿ ನಾಯಿಗಳ ಕಡಿತಕ್ಕೆ ಅಸ್ಕಿ ಗ್ರಾಮದ 8 ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಕ್ಕಳ ದೇಹದ ವಿವಿಧ ಭಾಗಗಳಿಗೆ ಕಚ್ಚಿ ನಾಯಿಗಳು ಗಾಯ ಮಾಡಿವೆ. ಗಾಯಗೊಂಡ ಮಕ್ಕಳಿಗೆ ಚಿಕಿತ್ಸೆ ನೀಡಲು ಸ್ಥಳೀಯ ವೈದ್ಯರು ನಿರಾಕರಿಸಿದ್ದು ತಬ್ಬಿಬ್ಬಾಗಿರುವ ಪಾಲಕರು ಸಿಂಧಗಿ ತಾಲೂಕು ಆಸ್ಪತ್ರೆಗೆ ಹೋಗಲು ಯೋಚಿಸುತ್ತಿದ್ದಾರೆ.

    ಇಷ್ಟೆಲ್ಲಾ ಅವಾಂತರವಾದರೂ ಗ್ರಾಮ ಪಂಚಾಯ್ತಿ ಸದಸ್ಯರು ಮಾತ್ರ ಏನೂ ಕ್ರಮ ತೆಗೆದುಕೊಳ್ಳದೆ ಕಣ್ಣುಮುಚ್ಚಿ ಕುಳಿತಿದ್ದಾರೆ. ಇತ್ತ ಬೀದಿ ನಾಯಿಗಳ ಕಾಟದಿಂದ ಆತಂಕಕ್ಕೆ ಒಳಗಾಗಿರುವ ಪೋಷಕರು, ತಮ್ಮ ಮಕ್ಕಳನ್ನು ಮನೆಯಿಂದ ಹೊರಗಡೆ ಕಳುಹಿಸಲು ಹೆದರುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾಯಿಗಳಿಂದ ನವಜಾತ ಶಿಶುವನ್ನು ರಕ್ಷಿಸಿ ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿಗಳು!

    ನಾಯಿಗಳಿಂದ ನವಜಾತ ಶಿಶುವನ್ನು ರಕ್ಷಿಸಿ ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿಗಳು!

    ನವದೆಹಲಿ: ಸಂಚಾರ ಪೊಲೀಸ್ ಅಧಿಕಾರಿಗಳು ರಸ್ತೆಯ ಬಳಿ ಇದ್ದ ಪೊದೆಯಲ್ಲಿ ಬಿದ್ದಿದ್ದ ನವಜಾತ ಶಿಶುವಿನ ಸುತ್ತ ಸುತ್ತುವರಿದ್ದಿದ್ದ ನಾಯಿಗಳಿಂದ ಮಗುವನ್ನು ರಕ್ಷಿಸಿ ಮಾನವೀಯತೆಯನ್ನು ಮೆರೆದಿದ್ದಾರೆ.

    ಅನಿಲ್, ಅಮರ್ ಸಿಂಗ್ ಮತ್ತು ಪರ್ವೀನ್ ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿಗಳಾಗಿದ್ದು, ಇವರು ಆರ್.ಕೆ ಖನ್ನಾ ಟೆನಿಸ್ ಕ್ರೀಡಾಂಗಣದ ಸಮೀಪ ಸಂಚಾರವನ್ನು ನಿಯಂತ್ರಿಸುತ್ತಿದ್ದರು. ಈ ಮೂವರು ಬುಧವಾರ ಸಂಜೆ 4 ಗಂಟೆ ಸುಮಾರಿಗೆ ಮಗುವನ್ನು ರಕ್ಷಿಸಿದ್ದಾರೆ.

    ಘಟನೆ ವಿವರ:
    ಮೂವರು ಅವಿಭಾಜ್ಯ ಪೊಲೀಸ್ ಅಧಿಕಾರಿಗಳಾಗಿ ಆಫ್ರಿಕಾ ಅವಿನ್ಯೂ ರಸ್ತೆಯ ಬಳಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಅಲ್ಲೇ ರಸ್ತೆಯ ಬಳಿ ಇದ್ದ ಪೊದೆಯಲ್ಲಿ ನವಜಾತ ಶಿಶುವಿನ ಅಳು ಕೇಳಿಸುತ್ತಿದೆ. ಮಗುವಿನ ಅಳು ಆಲಿಸಿದ ಪೊಲೀಸರು ಸ್ಥಳಕ್ಕೆ ಬಂದಾಗ ಕಂದಮ್ಮನ ಸುತ್ತ ನಾಯಿಗಳು ಸುತ್ತುವರಿದಿದ್ದವು. ಅದನ್ನು ಕಂಡು ಗಾಬರಿಗೊಂಡ ಪೊಲೀಸರು ನಾಯಿಗಳಿಂದ ಮಗುವನ್ನು ರಕ್ಷಿಸಿದ್ದಾರೆ.

    ಘಟನೆಯ ಬಳಿಕ ಸಂಚಾರ ಅಧಿಕಾರಿಗಳು ತಕ್ಷಣವೇ ದೆಹಲಿ ಪೊಲೀಸ್ ಕಂಟ್ರೋಲ್ ರೂಂಗೆ ತಿಳಿಸಿದರು. ಬಳಿಕ ಮಗುವನ್ನು ವೈದ್ಯಕೀಯ ಚಿಕಿತ್ಸೆಗಾಗಿ ಸಫ್ದರ್ಜಂಗ್ ಆಸ್ಪತ್ರೆಗೆ ಕರೆತಂದರು. ಸದ್ಯಕ್ಕೆ ಮಗು ಆರೋಗ್ಯವಾಗಿದೆ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

    ಈ ಘಟನೆಗೆ ಸಂಬಂಧಪಟ್ಟಂತೆ ಐಪಿಸಿ ಸೆಕ್ಷನ್ 317 ರ ಅಡಿಯಲ್ಲಿ ಸಫ್ದರ್ಜಂಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv