Tag: ನಾಯಕರು

  • ಲಂಗು ಲಗಾಮು ಇಲ್ಲದೆ ಮಾತನಾಡಿ ಚುನಾವಣೆ ಗೆಲ್ಲುತ್ತೇವೆ ಎಂಬುದು ಭ್ರಮೆ: ರಂಭಾಪುರಿ ಶ್ರೀ

    ಲಂಗು ಲಗಾಮು ಇಲ್ಲದೆ ಮಾತನಾಡಿ ಚುನಾವಣೆ ಗೆಲ್ಲುತ್ತೇವೆ ಎಂಬುದು ಭ್ರಮೆ: ರಂಭಾಪುರಿ ಶ್ರೀ

    -ಉಪಚುನಾವಣೆಯಲ್ಲಿ ರಾಜಕೀಯ ನಾಯಕರ ಬೈದಾಟಕ್ಕೆ ಅಸಮಾಧಾನ

    ಯಾದಗಿರಿ: ಎಲ್ಲಾ ರಾಜಕೀಯ ನಾಯಕರು ಪ್ರಚಾರದ ಬರದಲ್ಲಿ ಮಾಡುತ್ತಿರುವ ಪದ ಬಳಕೆ ಯಾವುದಕ್ಕೂ ಪ್ರಯೋಜನ ಇಲ್ಲ. ಎಲ್ಲಾ ರಾಜಕೀಯ ಮುಖಂಡರು ವಿಷಯವನ್ನು ಆಧರಿಸಿ ಟೀಕೆ ಟಿಪ್ಪಣಿ ಮಾಡಿದ್ರೆ ಜನರು ಬೆಲೆ ಕೊಡುತ್ತಾರೆ ಎಂದು ಉಪಚುನಾವಣೆ ವೇಳೆ ರಾಜಕೀಯ ನಾಯಕರ ಕೆಸರೆರಚಾಟ ನಡೆಸುತ್ತಿದ್ದಾರೆ ಈ ಮೂಲಕ ಜಯಗಳಿಸುತ್ತೇವೆ ಎಂಬುದು ಭ್ರಮೆ ಎಂದು ರಂಭಾಪುರಿ ಶ್ರೀ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಯಾದಗಿರಿಯಲ್ಲಿ ಮಾತನಾಡಿದ ಅವರು, ಯಾವ ಪ್ರಣಾಳಿಕೆಯು ಇಲ್ಲದೆ, ವಿಷಯವೂ ಇಲ್ಲದೆ ಧರ್ಮದ ಲಾಂಚಣ ಹಿಡಿಯಲಾಗುತ್ತಿದೆ, ಧರ್ಮದ ಆಚರಣೆ ಇಟ್ಟುಕೊಂಡು ಲಂಗು ಲಗಾಮು ಇಲ್ಲದೆ ಮಾತನಾಡುವದು ನೋಡುಗರಿಗೆ ಮುಜುಗರ ಉಂಟು ಮಾಡಿದೆ, ಇಂತಹ ಮಾತುಗಳಿಂದ ಗೆಲ್ಲುತ್ತೇವೆ ಎಂಬುದು ಭ್ರಮೆ ಇದು ಸಂಪೂರ್ಣ ಸುಳ್ಳು ಇದನ್ನು ಮೊದಲು ಅರ್ಥ ಮಾಡಿಕೊಳ್ಳಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಬಹಿರಂಗ ಪ್ರಚಾರ ಅಂತ್ಯ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳಿಂದ ಮನೆ-ಮನೆ ಕ್ಯಾಂಪೇನ್

    ಯಾವುದೆ ರಾಜಕಾರಣಿ ಇರಲಿ, ಧರ್ಮದ ವ್ಯಕ್ತಿ ಇರಲಿ ಭಾರತೀಯ ಸಂಸ್ಕೃತಿಯನ್ನು ಸಮಾನವಾಗಿ ಕಾಣುವ ಭಾವನೆ ಇರಬೇಕು, ವ್ಯಕ್ತಿಯನ್ನು ಕುರಿತು ಟೀಕೆ ಟಿಪ್ಪಣಿ ಮಾಡಬಾರದು, ಅವರು ಆಡುವಂತಹ ಮಾತಿನಲ್ಲಿ ಸುಧಾರಣೆ ಆದರೆ ಒಳ್ಳೆಯದು. ಇಲ್ಲದಿದ್ದಲ್ಲಿ ಅದಕ್ಕೆ ತಕ್ಕ ಪ್ರಾಯಶ್ಚಿತ್ತ ಆಗುತ್ತದೆ ಎಂದರು. ಇದನ್ನೂ ಓದಿ: ಹಾನಗಲ್‍ನಲ್ಲಿ ಹರೀತಿದ್ಯಾ ಹಣದ ಹೊಳೆ..? – ಸಿದ್ದರಾಮಯ್ಯ, ಡಿಕೆಶಿ ಬಳಿಕ ಹೆಚ್‍ಡಿಕೆ ಆರೋಪ

  • ಬಿಎಸ್‍ವೈ ಸಿಎಂ ಅಷ್ಟೇ, ಮೋದಿ, ಅಮಿತ್ ಶಾ, ನಡ್ಡಾ ನಮ್ಮ ನಾಯಕರು: ಯತ್ನಾಳ್

    ಬಿಎಸ್‍ವೈ ಸಿಎಂ ಅಷ್ಟೇ, ಮೋದಿ, ಅಮಿತ್ ಶಾ, ನಡ್ಡಾ ನಮ್ಮ ನಾಯಕರು: ಯತ್ನಾಳ್

    – ಯಾರ ಮಾತು ಕೇಳೋ ಅವಶ್ಯಕತೆ ನನಗಿಲ್ಲ

    ಬೆಂಗಳೂರು: ಬಿಎಸ್ ಯಡಿಯೂರಪ್ಪ ನಮ್ಮ ಸಿಎಂ ಅಷ್ಟೇ. ಆದರೆ ಮೋದಿ, ಅಮಿತ್ ಶಾ ಮತ್ತು ಜೆಪಿ ನಡ್ಡಾ ನಮ್ಮ ನಾಯಕರು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

    ಇಂದು ಬಂಡಾಯದ ವಿಚಾರವಾಗಿ ಮಾಧ್ಯಮಗಳ ಜೊತೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ನನ್ನನ್ನು ಕರೆದಿದ್ದು ನಿಜ. ನಮ್ಮ ಕ್ಷೇತ್ರದ ಅಭಿವೃದ್ಧಿ ಕೆಲಸ ಆಗಿಲ್ಲ ಎಂದು ಹೇಳಿದ್ದೇನೆ. ಜೊತೆಗೆ ಹಣ ಬಿಡುಗಡೆ ಆಗಿಲ್ಲ ಎಂದು ಬೇಜಾರ್ ಆಗಿದೆ ಎಂದು ಸಿಎಂ ಅವರಲ್ಲಿ ಹೇಳಿದ್ದೇನೆ. ಅದಕ್ಕೆ ಅವರು ಕರೆದಿದ್ದರು. ಆದರೆ ನಾನು ಪದೇ ಪದೇ ಅವರ ಬಳಿ ಹೋಗುವುದಿಲ್ಲ. ಅವರು ಕೊರೊನಾ ಸಂಬಂಧ ಕೆಲಸ ಮಾಡುತ್ತಿರುತ್ತಾರೆ ಎಂದರು.

    ಹೈಕಮಾಂಡ್ ಸಿಎಂ ಆಗಿರಬೇಕು ಅಂದರೆ ಅವರೇ ಇರಲಿ. ಬೇರೆ ಅವರು ಸಿಎಂ ಆಗಬೇಕು ಎಂದರೂ ನಮಗೆ ಓಕೆ. ಹೈಕಮಾಂಡ್ ಆದೇಶವೇ ನಮಗೆ ಅಂತಿಮ. ನನ್ನ ಕೇಳಿದರೆ ನನ್ನ ಅಭಿಪ್ರಾಯವನ್ನು ಹೈಕಮಾಂಡ್‍ಗೆ ಹೇಳುತ್ತೇನೆ. ನಮ್ಮ ನಾಯಕರು ಮೋದಿ, ಅಮಿತ್ ಶಾ ಮತ್ತು ಜೆಪಿ ನಡ್ಡಾ. ಯಡಿಯೂರಪ್ಪ ನಮ್ಮ ಮುಖ್ಯಮಂತ್ರಿಗಳು ಅಷ್ಟೆ. ಹೀಗಾಗಿ ಮತ್ತೆ ನಾನು ಸಿಎಂ ಬಿಎಸ್‍ವೈ ಬಳಿ ಹೋಗಲ್ಲ ಎಂದು ಯತ್ನಾಳ್ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದರು.

    ಕ್ಷೇತ್ರದ ವಿಚಾರದಲ್ಲಿ ನನಗೆ ಅಸಮಾಧಾನವಿದೆ. ಹೀಗಾಗಿ ಯಡಿಯೂರಪ್ಪ ಕರೆದಿದ್ದರೂ ನಾನು ಹೋಗಿಲ್ಲ. ನಾನು ಯಾರ ಪರವೂ ಶಿಫಾರಸು, ಲಾಭಿ ಮಾಡುವುದಿಲ್ಲ. ನಮಗೆ ಊಟ ಮಾಡಲು ಅಧಿಕಾರವಿದೆ. ಕತ್ತಿ ಮನೆಗೆ ಹೋಗಿ ಊಟ ಮಾಡಿಕೊಂಡು ಬಂದಿದ್ದೇವೆ. ಯಡಿಯೂರಪ್ಪ ಅವರ ಬಗ್ಗೆ ಚರ್ಚೆಯೂ ಆಗಿಲ್ಲ, ನನ್ನ ಹಿಂದೆ ಯಾರೂ ಇಲ್ಲ. ಸಿಎಂ ಪುತ್ರ ವಿಜಯೇಂದ್ರ ಹಸ್ತಕ್ಷೇಪ ಬಗ್ಗೆ ಎಲ್ಲಿ ಹೇಳಬೇಕು ಅಲ್ಲಿ ಹೇಳುತ್ತೇನೆ ಎಂದು ಯತ್ನಾಳ್ ತಿಳಿಸಿದ್ದಾರೆ.

    ಸಿದ್ದರಾಮಯ್ಯ, ಕುಮಾರಸ್ವಾಮಿ ಅವರನ್ನು ರಾಜಕೀಯ ವಿಚಾರವಾಗಿ ನಾನು ಯಾವತ್ತೂ ಭೇಟಿಯಾಗಿಲ್ಲ. ಮುಂದೆಯೂ ಆಗುವುದಿಲ್ಲ. ವೈಯಕ್ತಿಕವಾಗಿ ಬೇಕಿದ್ದರೆ ಭೇಟಿ ಆಗುತ್ತೇನೆ. ಆದರೆ ರಾಜಕೀಯಕ್ಕೆ ಯಾವತ್ತೂ ಭೇಟಿ ಆಗಲ್ಲ. ನಾನು ಯಾರ ಬತ್ತಳಿಕೆಯ ಬಾಣ ಅಲ್ಲ. ನನಗೆ ಸ್ವಂತ ಅನುಭವ ಇದೆ. ನನಗೆ ನನ್ನದೇ ಆದ ಬುದ್ಧಿ ಇದೆ. ಯಾರ ಮಾತು ಕೇಳುವ ಅವಶ್ಯಕತೆ ನನಗೆ ಇಲ್ಲ ಎಂದು ಯತ್ನಾಳ್ ಗುಡುಗಿದ್ದಾರೆ.

    ಇದೇ ವೇಳೆ ಬಿ ಎಲ್ ಸಂತೋಷ್ ಬಗ್ಗೆ ನಾನು ಮಾತನಾಡುವುದಿಲ್ಲ ಎಂದ ಯತ್ನಾಳ್, ಯಾರನ್ನು ಬೇಕಾದರೂ ಮಂತ್ರಿ ಮಾಡಬಹುದು. ಏನು ಸ್ಥಾನ ಬೇಕಾದರೂ ಕೊಡಬಹುದು ಅದು ಸಿಎಂಗೆ ಬಿಟ್ಟ ವಿಚಾರ. ರಾಜ್ಯಸಭೆ ಸಲುವಾಗಿ ನಾವು ಅಲ್ಲಿಗೆ ಹೋಗಿಲ್ಲ. ಉಮೇಶ್ ಕತ್ತಿಯನ್ನು ಮಂತ್ರಿ ಮಾಡುತ್ತೇನೆ ಎಂದು ಸಿಎಂ ದೇವರ ಮುಂದೆ ಪ್ರಮಾಣ ಮಾಡಿದ್ದಾರೆ. ನಾನು ಮಂತ್ರಿ ಮಾಡಿ ಎಂದು ಕೇಳಿಲ್ಲ. ಬಿಎಸ್‍ವೈ ಜೊತೆ ಪಕ್ಷ ಕಟ್ಟಿದ್ದೇನೆ, ಅವರ ವಿರುದ್ಧ ಬಂಡಾಯ ಮಾಡಲ್ಲ ಎಂದು ತಿಳಿಸಿದರು.

  • ಲಾಕ್‍ಡೌನ್ ವಿಸ್ತರಣೆ – ವಿಪಕ್ಷಗಳ ಜೊತೆ ಮೋದಿ ಸಭೆ

    ಲಾಕ್‍ಡೌನ್ ವಿಸ್ತರಣೆ – ವಿಪಕ್ಷಗಳ ಜೊತೆ ಮೋದಿ ಸಭೆ

    – ಏಪ್ರಿಲ್ 11ಕ್ಕೆ ನಿರ್ಣಾಯಕ ಸಭೆ

    ನವದೆಹಲಿ: ಕೊರೊನಾ ವೈರಸ್ ಭೀತಿ ಹಿನ್ನಲೆ ಭಾರತ ಲಾಕ್‍ಡೌನ್ ಮಾಡಲಾಗಿದ್ದು, ಇದನ್ನು ಮುಂದುವರಿಸುವ ಬಗ್ಗೆ ಇಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳ ಜೊತೆ ಸಭೆ ನಡೆಸಿದ್ದಾರೆ.

    ದೆಹಲಿಯ ಲೋಕ ಕಲ್ಯಾಣ್ ಮಾರ್ಗ್‍ನಲ್ಲಿರುವ ತಮ್ಮ ನಿವಾಸದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಪ್ರಧಾನಿ ಮೋದಿ, ಲೋಕಸಭಾ ಮತ್ತು ರಾಜ್ಯಸಭೆಯ ವಿಪಕ್ಷ ನಾಯಕರು ಹಾಗೂ ಸಂಸದೀಯ ನಾಯಕರ ಜೊತೆ ಚರ್ಚೆ ನಡೆಸಿದರು.

    ಸಭೆಯಲ್ಲಿ ಲಾಕ್‍ಡೌನ್ ಮುಂದುವರಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಲಾಕ್‍ಡೌನ್ ಮುಂದುವರಿಸುವ ಮತ್ತು ನಿಯಮಗಳನ್ನು ಸಡಿಲಿಕೆ ಮಾಡುವ ಬಗ್ಗೆ ಚರ್ಚೆ ನಡೆದಿದ್ದು, ಹಲವು ನಾಯಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

    ಇದಲ್ಲದೇ ಲಾಕ್‍ಡೌನ್ ಹಿನ್ನೆಲೆ ದೇಶದ ಆರ್ಥಿಕತೆ ಮೇಲಾಗಿರುವ ಪರಿಣಾಮದ ಬಗ್ಗೆ ಮೋದಿ ಅವರು ವಿವರಿಸಿದ್ದು, ಈ ವೇಳೆ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಕೂಡ ಎಲ್ಲಾ ನಾಯಕರಿಗೆ ತಿಳಿಸಿದ್ದಾರೆ. ಲಾಕ್‍ಡೌನ್ ಸಂದರ್ಭದಲ್ಲಿ ಜನರ ನೆರವಿಗೆ ಸರ್ಕಾರ ಘೋಷಿಸಿರುವ ಪ್ಯಾಕೇಜ್, ಸಹಾಯದ ಬಗ್ಗೆ ಪ್ರಧಾನಿ ಮೋದಿ ಗಮನ ಸೆಳೆದಿದ್ದಾರೆ. ಇದಲ್ಲದೇ ಲಾಕ್‍ಡೌನ್ ಮುಂದುವರಿದರೆ ಸರ್ಕಾರಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.

    ಮೋದಿ ಅವರು ಮನವಿಗೆ ಹಲವು ಸಂಸದೀಯ ನಾಯಕರು ಬೆಂಬಲ ವ್ಯಕ್ತಪಡಿಸಿದ್ದು, ರಾಜ್ಯವಾರು ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಪಿಪಿಇ ಕಿಟ್‍ಗಳು, ಮಾಸ್ಕ್, ಹ್ಯಾಂಡ್ ಗ್ಲೋಸ್ ಹಾಗೂ ವೆಂಟಿಲೇಟರ್ ಗಳನ್ನು ಪೂರೈಕೆ ಮಾಡುವಂತೆ ನಾಯಕರು ಮನವಿ ಮಾಡಿದ್ದು, ಇದಕ್ಕೆ ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆಯನ್ನು ಮೋದಿ ಅವರು ನೀಡಿದ್ದಾರೆ.

    https://twitter.com/ANI/status/1247776117710147584

    ಏಪ್ರಿಲ್ 11ಕ್ಕೆ ಸಿಎಂಗಳ ಸಭೆ:
    ಲಾಕ್‍ಡೌನ್ ಮುಂದುವರಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಜೊತೆ ಸಭೆ ನಡೆಸಲಿದ್ದಾರೆ. ಏಪ್ರಿಲ್ 11ಕ್ಕೆ ಈ ಸಭೆ ನಡೆಯಲಿದ್ದು, ಈ ವೇಳೆ ಎಲ್ಲಾ ಮುಖ್ಯಮಂತ್ರಿಗಳ ಅಭಿಪ್ರಾಯ ಪಡೆಯಲಿದ್ದಾರೆ. ಈಗಾಗಲೇ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಜಾರ್ಖಂಡ್, ಪುದುಚೇರಿ ಸೇರಿ 8 ರಾಜ್ಯಗಳು ಲಾಕ್‍ಡೌನ್ ವಿಸ್ತರಣೆಗೆ ಆಸಕ್ತಿ ತೋರಿದ್ದು ಉಳಿದ ರಾಜ್ಯಗಳ ಅಭಿಪ್ರಾಯವನ್ನು ಮೋದಿ ಅವರು ಸಂಗ್ರಹಿಸಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

  • ಶನಿಪಥ ಬದಲಾವಣೆ – ರಾಜಕೀಯ ನಾಯಕರ ಮೇಲೆ ಶನಿಕಾಟ ಶುರು

    ಶನಿಪಥ ಬದಲಾವಣೆ – ರಾಜಕೀಯ ನಾಯಕರ ಮೇಲೆ ಶನಿಕಾಟ ಶುರು

    ಬೆಂಗಳೂರು: ಮೂವತ್ತು ವರ್ಷದ ಬಳಿಕ ಶನಿ ತನ್ನ ಪಥವನ್ನ ಬದಲಾವಣೆ ಮಾಡುತ್ತಿದ್ದಾನೆ. ಧನಸ್ಸು ರಾಶಿಯಿಂದ ಮಕರ ರಾಶಿಗೆ ಬದಲಾವಣೆ ಮಾಡುತ್ತಿದ್ದು, ಧನಸ್ಸು, ಮಕರ ಮತ್ತು ಕುಂಭ ರಾಶಿಗಳ ಮೇಲೆ ಗಾಢ ಪರಿಣಾಮ ಬೀರಲಿದೆ.

    ಜೊತೆಗೆ ರಾಜಕೀಯ ನಾಯಕರಾದ ನರೇಂದ್ರ ಮೋದಿ, ಯಡಿಯೂರಪ್ಪ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಡಿ.ಕೆ ಶಿವಕುಮಾರ್ ಮತ್ತು ಕುಮಾರಸ್ವಾಮಿ ಸೇರಿದಂತೆ ಈ ನಾಯಕರ ಶನಿಪಥ ಬದಲಾವಣೆ ಸಂದರ್ಭದಲ್ಲಿ ಇವರ ರಾಶಿಗಳಿಗೆ ಯಾವ ರೀತಿ ಪರಿಣಾಮ ಬೀರಲಿದೆ ಎಂದು ರೇಣುಕಾರಾಧ್ಯ ಅವರು ರಾಶಿ ಫಲಾಫಲವನ್ನ ತಿಳಿಸಿದ್ದಾರೆ. ಇದನ್ನೂ ಓದಿ: ಮಕರ, ಕುಂಭ, ಧನಸ್ಸು ರಾಶಿ ಮೇಲೆ ಶನಿಯ ಗಾಢ ಪ್ರಭಾವ- ರೇಣುಕಾರಾಧ್ಯ ಗುರೂಜಿ ಭವಿಷ್ಯ

    ನರೇಂದ್ರ ಮೋದಿ, ಯಡಿಯೂರಪ್ಪ, ಸಿದ್ದರಾಮಯ್ಯ, ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡ, ಡಿ.ಕೆ ಶಿವಕುಮಾರ್ ಮತ್ತು ಕುಮಾರಸ್ವಾಮಿಯವರ ರಾಶಿಗಳ ಮೇಲೆ ಶನಿಕಾಟ ಯಾವ ರೀತಿ ಇದೆ ಅನ್ನೋದನ್ನ ಇಲ್ಲಿ ತಿಳಿಸಲಾಗಿದೆ.

    * ದೇವೇಗೌಡ: ಮಾಜಿ ಪ್ರಧಾನಿ ದೇವೇಗೌಡರಿಗೆ ಏಳೂವರೆ ವರ್ಷಗಳ ಕಾಲ ಶನಿ ಕಾಟ ಇರಲಿದೆ. ದೇವೇಗೌಡರದ್ದು ಕುಂಭ ರಾಶಿ. ಈ ಹಿನ್ನೆಲೆಯಲ್ಲಿ ಕುಂಭ ರಾಶಿಯ ಮೇಲೆ ಶನಿ ಕಾಟ ಗಾಢವಾಗಿ ಬೀರಲಿದೆ. ಶನಿಕಾಟದಿಂದ ಪ್ರಮುಖ, ಮುಖ್ಯವಾದದನ್ನ ದೇವೇಗೌಡರು ಕಳೆದುಕೊಳ್ಳಲಿದ್ದಾರೆ. ಆರೋಗ್ಯ ಸಮಸ್ಯೆ ಮತ್ತು ಜನವಿರೋಧಿ ಆಗಲಿದೆ. ಪಕ್ಷದಲ್ಲಿ ಸಮಸ್ಯೆ, ಹೊಂದಾಣಿಕೆ ಇರಲ್ಲ. ವೈಯಕ್ತಿಕ ಜಾತಕ ಚೆನ್ನಾಗಿದ್ದರೆ ಶನಿಕಾಟದಿಂದ ಪಾರಾಗಬಹುದು. ಪರಿಹಾರಕ್ಕಾಗಿ ಕಾಲ ಭೈರವೇಶ್ವರ, ಶನೇಶ್ವರ ಆರಾಧನೆ ಮತ್ತು ಹನುಮನ ಆರಾಧನೆ ಮಾಡಬೇಕು. ವೃದ್ಧರಿಗೆ ಮತ್ತು ಅನಾಥರಿಗೆ ಸಹಾಯ ಮಾಡಬೇಕು.

    * ಪ್ರಧಾನಿ ನರೇಂದ್ರ ಮೋದಿ ಭವಿಷ್ಯ: ಮೋದಿ ಅವರದ್ದು ವೃಶ್ಚಿಕ ರಾಶಿ. ಶನಿಬಲ ಚೆನ್ನಾಗಿದ್ದು, ಗ್ರಹಗತಿಗಳು ಚೆನ್ನಾಗಿವೆ. ಕಠಿಣ ಕ್ರಮ ತೆಗೆದುಕೊಳ್ಳಲು ಸಾಧ್ಯ. ಯಾವುದೇ ಹಿನ್ನಡೆ ಇಲ್ಲ.

    * ಸಿಎಂ ಯಡಿಯೂರಪ್ಪ: ಯಡಿಯೂರಪ್ಪನವರದ್ದು ವೃಶ್ಚಿಕ ರಾಶಿ. ಶನಿ ಬಲ ಇದೆ, ಸುಭದ್ರವಾದ ಸರ್ಕಾರ ಕೊಡುತ್ತಾರೆ. ಅಭಿವೃದ್ಧಿ ಕಾರ್ಯ ಮಾಡುವುದಕ್ಕೆ ಆಗಲ್ಲ.

    * ಕುಮಾರಸ್ವಾಮಿ: ಮಿಥುನ ರಾಶಿ ಇರುವುದರಿಂದ ಕುಮಾರಸ್ವಾಮಿಗೆ ಅಷ್ಟಮ ಶನಿ ಕಾಟ ಇದೆ. ಅಷ್ಟಮ ಶನಿಕಾಟದಿಂದ ಆರೋಗ್ಯದ ಸಮಸ್ಯೆ, ಸೋಲು, ನಷ್ಟ, ನಿರಾಸೆ, ಅನಗತ್ಯ ಮಾತುಗಳಿಂದ ಹಿನ್ನಡೆ. ಶನಿಕಾಟದಿಂದ ಜನವಿರೋಧಿ ಇದೆ. ಪರಿಹಾರಕ್ಕಾಗಿ ಮಾತನ್ನ ಹಿಡಿತದಲ್ಲಿ ಇಟ್ಟುಕೊಂಡು ಮಾತಾಡಬೇಕು ಹಾಗೂ ಗಣಪತಿ ಹೋಮ ಮಾಡಬೇಕು.

    * ಡಿ.ಕೆ ಶಿವಕುಮಾರ್: ಡಿಕೆ ಶಿವಕುಮಾರ್ ಅವರದ್ದು ಮೇಷ ರಾಶಿ, ಅವರಿಗೆ ದಶಮ ಶನಿ ಇದೆ. ಅನುಕೂಲಕರ ವಾತಾವರಣ ಇರಲಿದೆ. ಮೂಲಜಾತಕದ ಸಮಸ್ಯೆ, ಮೂಲನಜಾತಕದಲ್ಲಿ ವಿಘ್ನ, ಕಾನೂನು ಸಮಸ್ಯೆಗಳು ತೊಡಕುಗಳು ಎದುರಾಗಲಿದೆ. ಹಿತ ಶತ್ರುಕಾಟವಾಗಲಿದೆ. ಪರಿಹಾರಕ್ಕಾಗಿ ಮೂಲ ಜಾತಕದ ಪರಿಣಾಮ ಸರಿ ಮಾಡಿಕೋಬೇಕು.

    * ಸಿದ್ದರಾಮಯ್ಯನ ಭವಿಷ್ಯ: ತುಲಾ ರಾಶಿ ಮೂಲ ಜಾತಕದ ಬಲ ಇದೆ. ನಂಬಿದವರು ಕೈ ಬಿಟ್ಟು ಹೋಗುತ್ತಾರೆ. ಪಕ್ಷ ವಿರೋಧಿ ಚಟುವಟಿಕೆಗಳು ಎದುರಾಗಲಿವೆ. ಪರಿಹಾರಕ್ಕಾಗಿ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಮಾಡಿದರೆ ಉತ್ತಮ.

  • ನನ್ನ ಕೆಣಕಿದ್ರೆ ಹುತ್ತದಲ್ಲಿರೋ ನಾಗರಹಾವನ್ನು ಕೆಣಕಿದಂತೆ – ಎಂಟಿಬಿ ಗುಡುಗು

    ನನ್ನ ಕೆಣಕಿದ್ರೆ ಹುತ್ತದಲ್ಲಿರೋ ನಾಗರಹಾವನ್ನು ಕೆಣಕಿದಂತೆ – ಎಂಟಿಬಿ ಗುಡುಗು

    ಬೆಂಗಳೂರು: ನನ್ನ ಕೆಣಕಿದರೆ ಹುತ್ತದಲ್ಲಿರೋ ನಾಗರಹಾವನ್ನು ಕೆಣಕಿದಂತೆ. ಮಲಗಿರೋ ಹಾವನ್ನು ಕೆಣಕಿದರೆ ಕಚ್ಚೋದು ಗ್ಯಾರಂಟಿ ಎಂದು ಹೊಸಕೋಟೆಯಲ್ಲಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಗುಡುಗಿದ್ದಾರೆ.

    ತನ್ನ ಜನ್ಮದಿನ ಪ್ರಯುಕ್ತ ಮಹಿಳೆಯರಿಗೆ ಸೀರೆ ಹಂಚುತ್ತಿರುವ ಎಂಟಿಬಿ ನಾಗರಾಜ್ ಕಾರ್ಯಕ್ರಮದಲ್ಲಿ ಮಾತನಾಡಿ, ನಾನು ಯಾರಿಗೂ ಭಯ ಬೀಳಲ್ಲ, ದೇವರಿಗೆ ಮತ್ತು ಮತದಾರರಿಗೆ ಮಾತ್ರ ಭಯ ಬೀಳುತ್ತೇನೆ ಎಂದು ಹೇಳಿದರು.

    5 ರಿಂದ 10 ಬಾರಿ ಮಂತ್ರಿ ಆಗಿ ಲೂಟಿ ಹೊಡೆದಿರುವ ದಾಖಲೆ ನನ್ನ ಹತ್ತಿರ ಇದೆ. ಅಧಿಕಾರವಿದ್ದಾಗ ಎಷ್ಟು ಆಸ್ತಿ ಮಾಡಿದ್ದೀರಿ ಎಂಬ ದಾಖಲೆ ಕೂಡ ಇದೆ. ನನ್ನ ಬಗ್ಗೆ ದಾಖಲೆ ಇದ್ದರೆ ಮಾಧ್ಯಮಗಳ ಮುಂದೆ ತಗೊಂಡು ಬನ್ನಿ. ಐಟಿ ಅಧಿಕಾರಿಗಳಿಗೆ ಮತ್ತು ಮೀಡಿಯಾಗೆ ಭಯ ಬಿದ್ದು ಎಂಟಿಬಿ ರಾಜೀನಾಮೆ ಕೊಟ್ಟ ಎನ್ನುತ್ತಾರೆ. ಆದರೆ ನಾನು ಯಾರಿಗೂ ಭಯ ಬೀಳಲ್ಲ, ದೇವರು ಮತ್ತು ಮತದಾರರಿಗೆ ಮಾತ್ರ ಭಯ ಬೀಳುತ್ತೇನೆ ಎಂದು ತಿಳಿಸಿದರು.

    30 ಕೋಟಿ ತಗೊಂಡು ಬಿಜೆಪಿಗೆ ಹೋದ, ಮಗನ ಉದ್ಧಾರ ಮಾಡೋಕೆ ಹೋದ ಎಂದು ದೊಡ್ಡ ದೊಡ್ಡ ನಾಯಕರು ಹೇಳುತ್ತಾರೆ. ಆದರೆ ನಾನು ಆ ದೊಡ್ಡ ನಾಯಕರ ಕಥೆ ತೆಗೆದರೆ ಅವರ ಕಥೆ ಮುಗಿಯುತ್ತೆ. ನಾನು ಯಾವ ಪುರುಷಾರ್ಥಕ್ಕೆ ಸುಳ್ಳು ಹೇಳಬೇಕು. ನನಗೆ ರಾಜಕೀಯದಿಂದ ಬೇಸರ ಆಗಿದೆ. ಕಳಪೆ, ಕಲ್ಮಶ ಮತ್ತು ಸುಳ್ಳು ರಾಜಕೀಯದಿಂದ ಬೇಸತ್ತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.

  • ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‍ಗೆ ಬಿಜೆಪಿಯಿಂದ ಅದ್ಧೂರಿ ಸ್ವಾಗತ

    ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‍ಗೆ ಬಿಜೆಪಿಯಿಂದ ಅದ್ಧೂರಿ ಸ್ವಾಗತ

    ಬೆಂಗಳೂರು: ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಬಿಜೆಪಿ ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ನಾಯಕರು ಅದ್ಧೂರಿ ಸ್ವಾಗತ ಕೋರಿದ್ದಾರೆ.

    ಸಂಸದರಾದ ಬಿ.ಎನ್ ಬಚ್ಚೇಗೌಡ, ಮುನಿಸ್ವಾಮಿ, ಪ್ರತಾಪ ಸಿಂಹ, ಶಾಸಕರಾದ ಅಂಗಾರ, ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು ವಿಮಾನ ನಿಲ್ದಾಣಕ್ಕೆ ರಾಜ್ಯಾಧ್ಯಕ್ಷರನ್ನು ಬರಮಾಡಿಕೊಳ್ಳಲು ಆಗಮಿಸಿದ್ದರು. ವೀರಗಾಸೆ, ಡೊಳ್ಳು ಕುಣಿತದೊಂದಿಗೆ ನಳಿನ್ ಕುಮಾರ್ ಅವರನ್ನು ಸ್ವಾಗತಿಸಲಾಯಿತು.

    ಈ ವೇಳೆ ಸಾವಿರಾರು ಮಂದಿ ಬಿಜೆಪಿ ಕಾರ್ಯಕರ್ತರು ತಮ್ಮ ನೂತನ ರಾಜ್ಯಾಧ್ಯಕ್ಷರಿಗೆ ಸ್ವಾಗತ ಕೋರಿದರು. ಈ ವೇಳೆ ಇಡೀ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವೇ ಬಿಜೆಪಿ ಮಯವಾಗಿತ್ತು. ಅಲ್ಲದೆ ಬಿಜೆಪಿ ಮಹಿಳಾ ಕಾರ್ಯಕರ್ತರು ಅವರಿಗೆ ಆರತಿ ಬೆಳಗಿ ಪ್ರೀತಿಯಿಂದ ಸ್ವಾಗತಿಸಿದರು. ತೆರೆದ ವಾಹನದಲ್ಲಿ ನಳಿನ್ ಕುಮಾರ್ ಅವರು ಮೆರವಣಿಗೆ ನಡೆಸಲಿದ್ದು, ಅವರಿಗೆ ಬಿಜೆಪಿ ಶಾಸಕರು ಹಾಗೂ ಸಂಸದರು ಸಾಥ್ ನೀಡಲಿದ್ದಾರೆ.

    ನೂತನ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪದಗ್ರಹಣ ಸಮಾರಂಭ ಇಂದು ಬೆಳಗ್ಗೆ ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪ ನೂತನ ರಾಜ್ಯಾಧಕ್ಷರಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ 3ನೇ ಬಾರಿಗೆ ಆಯ್ಕೆಯಾಗಿರುವ ಕಟೀಲ್ 12 ವರ್ಷಗಳ ಕಾಲ ಆರ್‍ಎಸ್‍ಎಸ್‍ನ ಪೂರ್ಣಾವಧಿ ಪ್ರಚಾರಕರಾಗಿ ಕೆಲಸ ಮಾಡಿದ್ದಾರೆ. ಭಾನುವಾರವೇ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಬೇಕಿತ್ತು. ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ನಿಧನದಿಂದ ಕಾರ್ಯಕ್ರಮ ಮುಂದೂಡಲಾಗಿತ್ತು.

  • ಮಕ್ಕಳ ಕಳ್ಳರೆಂದು ಕಾಂಗ್ರೆಸ್ ನಾಯಕರನ್ನು ಥಳಿಸಿದ ಗ್ರಾಮಸ್ಥರು

    ಮಕ್ಕಳ ಕಳ್ಳರೆಂದು ಕಾಂಗ್ರೆಸ್ ನಾಯಕರನ್ನು ಥಳಿಸಿದ ಗ್ರಾಮಸ್ಥರು

    ಭೋಪಾಲ್: ಮೂವರು ಕಾಂಗ್ರೆಸ್ ನಾಯಕರನ್ನು ಮಕ್ಕಳ ಅಪಹರಣಕಾರರು ಎಂದು ತಪ್ಪಾಗಿ ತಿಳಿದು ಗ್ರಾಮಸ್ಥರು ಅವರನ್ನು ಥಳಿಸಿರುವ ಘಟನೆ ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಘಟನೆ ಗುರುವಾರ ರಾತ್ರಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ ನವಲ್ಸಿಂಹ್ ಗ್ರಾಮದಲ್ಲಿ ಮಕ್ಕಳನ್ನು ಅಪಹರಿಸುವ ಕಳ್ಳರ ಗ್ಯಾಂಗ್ ಓಡಾಡುತ್ತಿದೆ ಎಂಬ ವದಂತಿಗಳ ಮೇರೆಗೆ ಊರಿನ ಗ್ರಾಮಸ್ಥರು ರಸ್ತೆ ಮಧ್ಯ ಮರಗಳನ್ನು ಹಾಕಿ ಮಾರ್ಗ ಬಂದ್ ಮಾಡಿ ಕಾಯುತ್ತಾ ಕುಳಿತಿದ್ದಾರೆ.

    ಈ ಸಮಯದಲ್ಲಿ ಅದೇ ಮಾರ್ಗದಲ್ಲಿ ಮೂವರು ಸ್ಥಳೀಯ ಕಾಂಗ್ರೆಸ್ ನಾಯಕರಾದ ಧರ್ಮೇಂದ್ರ ಶುಕ್ಲಾ, ಧರ್ಮ ಸಿಂಗ್ ಲಂಜಿವಾರ್ ಮತ್ತು ಲಲಿತ್ ಬರಾಸ್ಕರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ರಾತ್ರಿಯಲ್ಲಿ ಮರಗಳು ಬಿದ್ದಿರುವುದನ್ನು ನೋಡಿದ್ದಾರೆ. ಈ ಕೆಲಸವನ್ನು ಯಾರೋ ಹೆದ್ದಾರಿ ದರೋಡೆಕೋರರು ಮಾಡಿ ದರೋಡೆ ಮಾಡಲು ಕಾಯುತ್ತಿದ್ದಾರೆಂದು ಭಾವಿಸಿದ ನಾಯಕರು ಕಾರನ್ನು ವೇಗವಾಗಿ ಹಿಂದಿರುಗಿಸಲು ನೋಡಿದ್ದಾರೆ.

    ಈ ವೇಳೆ ಅನುಮಾನಗೊಂಡ ಗ್ರಾಮಸ್ಥರು ಅವರನ್ನು ಬೆನ್ನಟ್ಟಿ ಹಿಡಿದು ಅವರನ್ನು ಸುತ್ತುವರೆದು ವಾಹನವನ್ನು ಜಖಂ ಮಾಡಿ. ಅವರನ್ನು ಹೊರಗೆ ಎಳೆದುಕೊಂಡು ಮೂವರನ್ನು ಥಳಿಸಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿ ರಾಮ್ ಸ್ನೇಹಿ ಮಿಶ್ರಾ, ಗ್ರಾಮಸ್ಥರು ಮಕ್ಕಳ ಅಪಹರಣಕಾರರೆಂದು ಶಂಕಿಸಿ, ನಾಯಕರ ವಾಹನವನ್ನು ಬೆನ್ನಟ್ಟಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ವಾಹನಕ್ಕೆ ಹಾನಿಯಾಗಿದೆ ಮತ್ತು ಮೂವರು ಕಾಂಗ್ರೆಸ್ ಮುಖಂಡರ ಮೇಲೂ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಬೆತುಲ್ ಪೊಲೀಸ್ ಠಾಣೆಯಲ್ಲಿ ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

    ಕಳೆದ ಕೆಲ ವಾರಗಳಿಂದ ಮಕ್ಕಳ ಕಳ್ಳರೆಂದ ಭಾವಿಸಿ ಶಂಕಿತ ವ್ಯಕ್ತಿಗಳನ್ನು ಗ್ರಾಮಸ್ಥರು ಥಳಿಸಿರುವ ಸುಮಾರು 12 ಪ್ರಕರಣಗಳು ಮಧ್ಯಪ್ರದೇಶದಲ್ಲಿ ವರದಿಯಾಗಿವೆ. ಕಾಂಗ್ರೆಸ್ ಮುಖಂಡರನ್ನು ಥಳಿಸಿದ ಇದೇ ಜಿಲ್ಲೆಯ ಬೆತುಲ್‍ನಿಂದ ಮೂರು ಪ್ರಕರಣಗಳು ವರದಿಯಾಗಿವೆ. ಇದನ್ನು ಬಿಟ್ಟರೆ ಇಂದೋರ್, ಭೋಪಾಲ್, ಹೋಶಂಗಾಬಾದ್, ಸೆಹೋರ್, ನೀಮುಚ್, ರೈಸನ್ ಮತ್ತು ದೇವಾಸ್‍ನಿಂದ ಇದೇ ರೀತಿಯ ಪ್ರಕರಣಗಳು ವರದಿಯಾಗಿವೆ.

  • ಹಲ್ಲೆ ನಡೆಸಿದ ಟಿಆರ್​ಎಸ್ ನಾಯಕರಿಗೆ ಸಸಿ ನೆಟ್ಟು ಪ್ರತ್ಯತ್ತುರ ನೀಡಿದ ಅರಣ್ಯಾಧಿಕಾರಿಗಳು

    ಹಲ್ಲೆ ನಡೆಸಿದ ಟಿಆರ್​ಎಸ್ ನಾಯಕರಿಗೆ ಸಸಿ ನೆಟ್ಟು ಪ್ರತ್ಯತ್ತುರ ನೀಡಿದ ಅರಣ್ಯಾಧಿಕಾರಿಗಳು

    ಹೈದರಾಬಾದ್: ಮಹಿಳಾ ಅರಣ್ಯಾಧಿಕಾರಿ ಮೇಲೆ ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರೆಸ್) ಕಾರ್ಯಕರ್ತರು ಹಲ್ಲೆ ನಡೆಸಿದ್ದಕ್ಕೆ ಪ್ರತಿಯಾಗಿ, ಸಸಿ ನೆಡುವ ಮೂಲಕ ಅರಣ್ಯಾಧಿಕಾರಿಗಳು ತಕ್ಕ ಉತ್ತರ ನೀಡಿದ್ದಾರೆ.

    ಸುಮಾರು 400ಕ್ಕೂ ಹೆಚ್ಚು ಅಧಿಕಾರಿಗಳು ಘಟನೆ ನಡೆದ ಸ್ಥಳದಲ್ಲಿ ಸಸಿಗಳನ್ನು ನೆಡುವ ಮೂಲಕ ಮಹಿಳಾ ಅಧಿಕಾರಿಗೆ ಬೆಂಬಲ ಸೂಚಿಸಿ, ಟಿಆರ್‍ಎಸ್ ನಾಯಕರಿಗೆ ತಕ್ಕ ಉತ್ತರ ನೀಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಜೂನ್ 30 ರಂದು ಮಹಿಳಾ ಅರಣ್ಯಾಧಿಕಾರಿ ಚೋಲೆ ಅನಿತಾ ಅವರನ್ನು ಟಿಆರ್‍ಎಸ್ ಕಾರ್ಯಕರ್ತರು ಕೋಲುಗಳಿಂದ ಮನಬಂದಂತೆ ಹಲ್ಲೆ ಮಾಡಿದ್ದರು. ತೀವ್ರ ಗಾಯಗೊಂಡಿದ್ದ ಅನಿತಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿ, ಜು.1ರಂದು ಸುಮಾರು 400ಕ್ಕೂ ಹೆಚ್ಚು ಅರಣ್ಯಾಧಿಕಾರಿಗಳು ಘಟನೆ ನಡೆದ ಸ್ಥಳದಲ್ಲಿ ಸಾಲು ಸಾಲು ಸಸಿ ನೆಡುವ ಮೂಲಕ ಅನಿತಾ ಅವರಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. 400ಕ್ಕೂ ಹೆಚ್ಚು ಅಧಿಕಾರಿಗಳು ಸಸಿ ನೆಡುವ ವಿಡಿಯೋವನ್ನು ಐಎಫ್‍ಎಸ್ ಅಧಿಕಾರಿ ಪರ್ವೀಣ್ ಕಸ್ವಾನ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವಿಟ್ಟರ್‍ ನಲ್ಲಿ ಅಭಿಯಾನವನ್ನೇ ಪ್ರಾರಂಭಿಸಲಾಗಿದೆ.

    ವಿಡಿಯೋ ಹಾಕುವಾಗ ಕೆಲವು ಸಾಲುಗಳನ್ನು ಬರೆದಿರುವ ಪರ್ವೀಣ್ ಕಸ್ವಾನ್, ‘ಮಹಿಳಾ ರೇಂಜ್ ಆಫೀಸರ್ ಮೇಲೆ ಹಲ್ಲೆ ಮಾಡಿದ ಸ್ಥಳದಲ್ಲೇ ಸುಮಾರು 400ಕ್ಕೂ ಹೆಚ್ಚು ಅರಣ್ಯ ಅಧಿಕಾರಿಗಳು, ಪೊಲೀಸರು ಹಾಗೂ ಇತರರಿಂದ ಸಸಿ ನೆಡಲಾಗಿದೆ. ಈ ವೇಳೆ ಎಲ್ಲ ಹಿರಿಯ ಅಧಿಕಾರಿಗಳೂ ಸಹ ಉಪಸ್ಥಿತರಿದ್ದರು. ಅಕ್ರಮವಾಗಿ ಒತ್ತುವರಿ ಮಾಡುವುದನ್ನು ತಡೆಯಲು ಸುಮಾರು 20 ಹೆಕ್ಟೇರ್ ಪ್ರದೇಶದಲ್ಲಿ ಸಸಿಗಳನ್ನು ನೆಡಲಾಗಿದೆ. ಹಲ್ಲೆ ಖಂಡಿಸಿ ಪ್ರತಿಕ್ರಿಯಿಸಲು ಇದೊಂದು ಉತ್ತಮ ಹೆಜ್ಜೆಯಾಗಿದೆ’ ಎಂದು ತಮ್ಮ ಟ್ವಿಟ್ಟರ್‍ ನಲ್ಲಿ ಬರೆದುಕೊಂಡಿದ್ದಾರೆ.

    ಇನ್ನೊಂದು ಟ್ವೀಟ್‍ನಲ್ಲಿ ಸಾಲಾಗಿ ನಿಂತಿರುವ ಅಧಿಕಾರಿಗಳ ಚಿತ್ರವನ್ನು ಹಾಕಿ ‘ಇದು ನಮ್ಮ ಪ್ರತಿಕ್ರಿಯೆ, ಚಿತ್ರವನ್ನು ಜೂಮ್ ಮಾಡಿ ನೋಡಿ, ಅದೇ ಜಾಗ. ಇಲಾಖೆಯ ಸಿಬ್ಬಂದಿಯ ಮನೋಸ್ಥೈರ್ಯ ಹೆಚ್ಚಿಸುವುದು ಮಾತ್ರವಲ್ಲ, ಹಲ್ಲೆಗೆ ಪ್ರತಿಕ್ರಿಯೆ ನೀಡುವುದು ಆಗಿದೆ’ ಎಂದು ಬರೆದಿದ್ದು, ಇದೀಗ ಟ್ವಿಟ್ಟರ್‍ ನಲ್ಲಿ ಚಿತ್ರ ವೈರಲ್ ಆಗಿದೆ.

  • ವೇದಿಕೆ ಕುಸಿದು ಬಿಜೆಪಿ ನಾಯಕರಿಗೆ ಗಾಯ: ವಿಡಿಯೋ ವೈರಲ್

    ವೇದಿಕೆ ಕುಸಿದು ಬಿಜೆಪಿ ನಾಯಕರಿಗೆ ಗಾಯ: ವಿಡಿಯೋ ವೈರಲ್

    ಲಕ್ನೋ: ಬಿಜೆಪಿ ಆಯೋಜಿಸಿದ್ದ ‘ಹೋಳಿ ಮಿಲನ್” ಕಾರ್ಯಕ್ರಮದ ವೇಳೆ ವೇದಿಕೆ ಕುಸಿದು ಬಿದ್ದ ಘಟನೆ ಶುಕ್ರವಾರ ಉತ್ತರ ಪ್ರದೇಶದ ಸಂಭಾಲ್‍ನಲ್ಲಿ ನಡೆದಿದೆ.

    ಈ ಘಟನೆಯಲ್ಲಿ ಬಿಜೆಪಿಯ ಕಿಸಾನ್ ಮೋರ್ಚಾದ ನಾಯಕ ಅವಿದೇಶ್ ಯಾದವ್ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ವೇದಿಕೆ ಕುಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಈ ಕಾರ್ಯಕ್ರಮ ನಡೆಯುವಾಗ ಹಲವು ಜನ ವೇದಿಕೆ ಮೇಲೆ ಹತ್ತಿದ್ದಾರೆ. ಪರಿಣಾಮ ಭಾರ ಹೆಚ್ಚಾಗಿ ವೇದಿಕೆ ಕುಸಿದು ಬಿದ್ದಿದೆ. ಈ ಘಟನೆಯಿಂದ ಹಲವರಿಗೆ ಗಾಯಗಳಾಗಿದ್ದು, ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ಘಟನೆಯನ್ನು ಅಲ್ಲೇ ಇದ್ದವರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

  • ಆಪರೇಷನ್ ಕಮಲ ಫೇಲ್ ಆಗಿ ಅಮಿತ್ ಶಾಗೆ ಎಚ್1ಎನ್1 ಬಂದಿದೆ: ಬಿ.ಕೆ ಹರಿಪ್ರಸಾದ್ ಟೀಕೆ

    ಆಪರೇಷನ್ ಕಮಲ ಫೇಲ್ ಆಗಿ ಅಮಿತ್ ಶಾಗೆ ಎಚ್1ಎನ್1 ಬಂದಿದೆ: ಬಿ.ಕೆ ಹರಿಪ್ರಸಾದ್ ಟೀಕೆ

    ಬೆಂಗಳೂರು: ಆಪರೇಷನ್ ಕಮಲ ಸಂಪೂರ್ಣವಾಗಿ ವಿಫಲವಾಗಿದಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಎಚ್1ಎನ್1 ಬಂದಿದೆ ಎಂದು ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.

    ಬಿಜೆಪಿಯ ಆಪರೇಷನ್ ಕಮಲ ಖಂಡಿಸಿ ಇಂದು ಮೌರ್ಯ ಸರ್ಕಲ್‍ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದರು. ಈ ವೇಳೆ ವೇದಿಕೆ ಮೇಲೆ ಭಾಷಣ ಮಾಡುವಾಗ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ವಿರುದ್ಧ ಬಿ.ಕೆ ಹರಿಪ್ರಸಾದ್ ಕಿಡಿಕಾರಿದರು.

    ಬಿಜೆಪಿ ಪಕ್ಷ ಮೊದಲಿನಿಂದಲೂ ಕಾಂಗ್ರೆಸ್ ವಿರುದ್ಧ ಕೆಲಸ ಮಾಡುತ್ತಲೇ ಬಂದಿದೆ. ರಫೆಲ್ ಡೀಲ್‍ನಲ್ಲಿ ಬಿಜೆಪಿಗೆ 30 ಸಾವಿರ ಕೋಟಿ ಹಣ ಸಿಕ್ಕಿದೆ. ಇದೇ ಹಣದ ಅಹಂಕಾರದಲ್ಲಿ ಬಿಜೆಪಿ ಮೈತ್ರಿ ಸರ್ಕಾರ ಬೀಳಿಸಲು ಹೊರಟಿತ್ತು ಎಂದು ವಾಗ್ದಾಳಿ ನಡೆಸಿದರು.

    ಈ ರೀತಿ ಹಗರಣ ಮಾಡಿ 1 ಲಕ್ಷ ಕೋಟಿ ಹಣ ಬಂದರೂ ನಮ್ಮ ಸರ್ಕಾರವನ್ನು ಬೀಳಿಸಲು ಸಾಧ್ಯವಿಲ್ಲ. ನಮ್ಮ ಶಾಸಕರನ್ನು ಅಮಿತ್ ಶಾ ಕಿಡ್ನಾಪ್ ಮಾಡಿದ್ದಾರೆ. ಕಾಣೆಯಾದ ಶಾಸಕರ ಕುಟುಂಬಸ್ಥರು ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಬೇಕು. ಕರ್ನಾಟಕ ಸರ್ಕಾರವನ್ನ ಬೀಳಿಸಲು ಹೋಗಿ ಅಮಿತ್ ಶಾಗೆ ಈಗ ಜ್ವರ ಬಂದಿದೆ. ಈಗ ಬಂದಿರುವ ಜ್ವರ ಸಾಮಾನ್ಯ ಜ್ವರ ಅಲ್ಲ ಹಂದಿ ಜ್ವರ. ಮೃತ್ರಿ ಸರ್ಕಾರದ ವಿಚಾರಕ್ಕೆ ಬಂದು ಎಚ್1ಎನ್1 ಜೊತೆಗೆ ವಾಂತಿ ಬೇಧಿ ಕೂಡ ಶುರುವಾಗುತ್ತದೆ ಎಂದು ಟಾಂಗ್ ನೀಡಿದರು.

    ಈ ಪ್ರತಿಭಟನೆಯಲ್ಲಿ ಆಪರೇಷನ್ ಕಮಲದ ಅಣಕು ಪ್ರದರ್ಶನ ಮಾಡಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪಕ್ಷದ ನಾಯಕರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv