Tag: ನಾಣ್ಯ

  • ಸಾರಿಗೆ ಸಿಬ್ಬಂದಿಗೆ ನಾಣ್ಯರೂಪದಲ್ಲಿ ಸಂಬಳ

    ಸಾರಿಗೆ ಸಿಬ್ಬಂದಿಗೆ ನಾಣ್ಯರೂಪದಲ್ಲಿ ಸಂಬಳ

    ಮುಂಬೈ: ಎಲೆಕ್ಟ್ರಿಕ್ ಸಪ್ಲೈ ಆ್ಯಂಡ್ ಟ್ರಾನ್ಸ್‍ಪೋರ್ಟ್ ಅಂಡರ್ ಟೇಕಿಂಗ್ ಸಿಬ್ಬಂದಿಗೆ ಕಳೆದ ಕೆಲವು ತಿಂಗಳಿಂದ ನಾಣ್ಯಗಳಲ್ಲಿ ವೇತನವನ್ನು ಮುಂಬೈನಲ್ಲಿ ನೀಡಲಾಗ್ತಿದೆ.

    ಬಸ್ ಪ್ರಯಾಣಿಕರಿಂದ ಪ್ರತಿನಿತ್ಯ ನಾಣ್ಯದ ರೂಪದಲ್ಲಿ ಬೃಹತ್ ಪ್ರಮಾಣದಲ್ಲಿ ಟಿಕೆಟ್ ಹಣ ಸಂಗ್ರಹವಾಗುತ್ತಿದೆ. ನಗರದ ಪ್ರಮುಖ ಖಾಸಗಿ ಬ್ಯಾಂಕ್‍ವೊಂದು ಸಾರಿಗೆ ಸಂಸ್ಥೆಯಿಂದ ಈ ನಾಣ್ಯಗಳನ್ನು ಸಂಗ್ರಹಿಸುತ್ತಿತ್ತು. ಆದರೆ ಇತ್ತೀಚೆಗೆ ಬ್ಯಾಂಕ್‍ನೊಂದಿಗಿನ ಒಪ್ಪಂದದ ಅವಧಿ ಮುಕ್ತಾಯವಾಗಿದೆಯಂತೆ. ಹೀಗಾಗಿ ನಾಣ್ಯಗಳನ್ನು ಪಡೆಯಲು ಖಾಸಗಿ ಬ್ಯಾಂಕ್ ಒಪ್ಪುತ್ತಿಲ್ಲ.

    ಈ ಹಿನ್ನೆಲೆಯಲ್ಲಿ ಸುಮಾರು 40 ಸಾವಿರ ಸಿಬ್ಬಂದಿಯ ವೇತನದ ಬಹುಭಾಗವನ್ನು ನಾಣ್ಯಗಳ ರೂಪದಲ್ಲಿ ನೀಡಲಾಗುತ್ತಿದೆ. ಇದರಿಂದ ಉದ್ಯೋಗಿಗಳು ಅಸಮಾಧಾನಗೊಂಡಿದ್ದಾರೆ. ಹಲವಾರು ಉದ್ಯೋಗಿಗಳು ಅಂಬರ್ನಾಥ್, ಬದ್ಲಾಪುರ, ಪನ್ವೆಲ್ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಸಂಬಳದ ಹಣದ ನಾಣ್ಯಗಳನ್ನು ಕೊಂಡೊಯ್ಯುವುದು ತುಂಬಾ ಕಷ್ಟವಾಗುತ್ತಿದೆ ಎಂದು ಉದ್ಯೋಗಿಯೊಬ್ಬರು ಹೇಳಿದ್ದಾರೆ.

    11 ಸಾವಿರ ನಗದು ನಾಣ್ಯಗಳ ರೂಪದಲ್ಲಿ ದೊರೆಯುತ್ತದೆ. ಸಾಮಾನ್ಯವಾಗಿ ಬಹುತೇಕ ಸಂಬಳವನ್ನು 2, 5, 10 ರೂಪಾಯಿ ಮುಖಬೆಲೆಯ ನಾಣ್ಯಗಳೊಂದಿಗೆ ಕೊಡಲಾಗುತ್ತಿದೆ. ಕೆಲವೊಮ್ಮೆ 10, 50. 100, 500 ರೂಪಾಯಿಗಳ ನೋಟ್ ಪಡೆಯುತ್ತೇವೆ. ಉಳಿದ ಸಂಬಳವನ್ನು ನೇರವಾಗಿ ನಮ್ಮ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ ಎಂದು ಉದ್ಯೋಗಿಯೊಬ್ಬರು ಹೇಳಿದ್ದಾರೆ. ಸಿಬ್ಬಂದಿಗೆ ನಾಣ್ಯಗಳಲ್ಲಿ ಸಂಬಳ ಕೊಡಲಾಗುತ್ತಿದೆ. ಈ ವಿಚಾರವಾಗಿ ಮುಂಬೈ ಬಸ್ ಆಪರೇಟರ್, ನೌಕರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

  • ನಾಣ್ಯ ನುಂಗಿ 3 ವರ್ಷದ ಬಾಲಕ ಸಾವು – ಕಂಟೈನ್ಮೆಂಟ್ ವಲಯದಲ್ಲಿ ಮನೆ ಇದ್ದುದ್ದೇ ತಪ್ಪಾಯ್ತು

    ನಾಣ್ಯ ನುಂಗಿ 3 ವರ್ಷದ ಬಾಲಕ ಸಾವು – ಕಂಟೈನ್ಮೆಂಟ್ ವಲಯದಲ್ಲಿ ಮನೆ ಇದ್ದುದ್ದೇ ತಪ್ಪಾಯ್ತು

    ತಿರುವನಂತಪುರಂ: ಆಕಸ್ಮಿಕವಾಗಿ ನಾಣ್ಯವನ್ನು ನುಂಗಿ ಮೂರು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ. ಆದರೆ ಸರ್ಕಾರಿ ಆಸ್ಪತ್ರೆಗಳ ನಿರ್ಲಕ್ಷ್ಯದಿಂದ ಬಾಲಕ ಮೃತಪಟ್ಟಿದ್ದಾನೆ ಎಂದು ಸಂಬಂಧಿಕರು ಆರೋಪಿಸುತ್ತಿದ್ದಾರೆ.

    ಅಲುವಾ ಬಳಿಯ ಕೊಡುಂಗಲ್ಲೂರ್‌ನಲ್ಲಿ ಬಾಲಕ ವಾಸಿಸುತ್ತಿದ್ದನು. ಆದರೆ ಕೋವಿಡ್ 19 ನಿಂದಾಗಿ ಬಾಲಕ ವಾಸಿಸುತ್ತಿದ್ದ ಮನೆ ಕಂಟೈನ್ಮೆಂಟ್ ವಲಯದಲ್ಲಿತ್ತು. ಹೀಗಾಗಿ ಕಂಟೈನ್ಮೆಂಟ್ ವಲಯದಿಂದ ಬಂದಿದ್ದರಿಂದ ಆಸ್ಪತ್ರೆಯಲ್ಲಿ ಬಾಲಕನನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದರು. ಆದ್ದರಿಂದ ಚಿಕಿತ್ಸೆ ಸಿಗದೆ ಬಾಲಕ ಮೃತಪಟ್ಟಿದ್ದಾನೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

    ಶನಿವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಮನೆಯಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಬಾಲಕ ನಾಣ್ಯವನ್ನು ನುಂಗಿದ್ದಾನೆ. ಸ್ವಲ್ಪ ಸಮಯದ ನಂತರ ಬಾಲಕ ಅಸ್ವಸ್ಥನಾಗಿದ್ದಾನೆ. ತಕ್ಷಣ ಪೋಷಕರು ಮಗುವನ್ನು ಅಲುವಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಎಕ್ಸ ರೇ ಮಾಡಿದ್ದು, ನಾಣ್ಯವಿರುವ ಬಗ್ಗೆ ವೈದ್ಯರು ಪೋಷಕರಿಗೆ ತಿಳಿಸಿದ್ದಾರೆ.

    ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ಮಕ್ಕಳ ಶಸ್ತ್ರಚಿಕಿತ್ಸಕರಿಲ್ಲದ ಕಾರಣ ಬಾಲಕನನ್ನು ದಾಖಲಿಸಿಕೊಂಡಿಲ್ಲ. ಆದ್ದರಿಂದ ಬಾಲಕನನ್ನು ಎರ್ನಾಕುಲಂ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿನ ವೈದ್ಯರು ಮಗುವನ್ನು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗಾಗಿ ಅಲೆಪ್ಪಿಯದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ದಾರೆ. ಅಲ್ಲಿಯೂ ಬಾಲಕನ್ನು ಅಡ್ಮಿಟ್ ಮಾಡಿಕೊಳ್ಳಲು ನಿರಾಕರಿಸಿದ್ದರು ಎಂದು ಸಂಬಂಧಿಕರು ಆರೋಪಿಸಿದ್ದಾರೆ.

    ವೈದ್ಯರು ಮಗುವಿಗೆ ಹಣ್ಣುಗಳನ್ನು ನೀಡುವಂತೆ ಪೋಷಕರಿಗೆ ಸಲಹೆ ನೀಡಿದ್ದಾರೆ. ಕೊನೆಗೆ ಪೋಷಕರು ಮಗುವನ್ನು ಮತ್ತೆ ತಮ್ಮ ಮನೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಸಂಜೆಯ ವೇಳೆಗೆ ಬಾಲಕನ ಸ್ಥಿತಿ ಗಂಭೀರವಾಗಿದೆ. ಇದರಿಂದ ಗಾಬರಿಯಾದ ಪೋಷಕರು ಮತ್ತೆ ಅಲುವಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಮಾರ್ಗದಲ್ಲಿಯೇ ಬಾಲಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗುವುದು. ಕೋವಿಡ್ ಟೆಸ್ಟ್‌ಗೆ ಬಾಲಕನಿಂದ ಸ್ವ್ಯಾಬ್ ಸಂಗ್ರಹಿಸಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

    ಈ ಬಗ್ಗೆ ತಿಳಿದು ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಕೆ.ಕೆ. ಶೈಲಜಾ. “ನಾಣ್ಯ ನುಂಗಿ ಬಾಲಕ ಮೃತಪಟ್ಟ ಘಟನೆ ಅತ್ಯಂತ ದುರದೃಷ್ಟಕರ ಎಂದು ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಈ ಪ್ರಕರಣ ಕುರಿತು ಸಮಗ್ರ ವಿಚಾರಣೆಯ ನಂತರ ವರದಿಯನ್ನು ಸಲ್ಲಿಸುವಂತೆ ಪ್ರಧಾನ ಕಾರ್ಯದರ್ಶಿಗೆ ಆದೇಶ ನೀಡಿದ್ದಾರೆ. ಜೊತೆಗೆ ಸಂಬಂಧಿಕರು ಮಾಡುತ್ತಿರುವ ಆರೋಪ ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

  • ಭೂಮಿ ಅಗೆಯುತ್ತಿದ್ದಾಗ ಚಿನ್ನದ ನಾಣ್ಯ ತುಂಬಿರೋ ನಿಧಿ ಪತ್ತೆ

    ಭೂಮಿ ಅಗೆಯುತ್ತಿದ್ದಾಗ ಚಿನ್ನದ ನಾಣ್ಯ ತುಂಬಿರೋ ನಿಧಿ ಪತ್ತೆ

    – 1.716 ಕೆ.ಜಿ ತೂಕವಿರುವ 505 ನ್ಯಾಣಗಳು ಪತ್ತೆ

    ಚೆನ್ನೈ: ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿನ ಪುರಾತನ ಪ್ರಸಿದ್ಧ ದೇವಾಸ್ಥಾನದಲ್ಲಿ ಚಿನ್ನದ ನಾಣ್ಯಗಳು ತುಂಬಿರುವ ಪಾತ್ರೆಯೊಂದು ಪತ್ತೆಯಾಗಿದೆ.

    ತಿರುವನೈಕಾವಲ್ ನ ಜಂಬುಕೇಶ್ವರ ದೇವಸ್ಥಾನದಲ್ಲಿ ಈ ನಿಧಿ ಪತ್ತೆಯಾಗಿದೆ. ಅಕಿಲಾಂಡೇಶ್ವರಿ ದೇಗುಲದ ಬಳಿ ಖಾಲಿ ಜಾಗವನ್ನು ಕಾರ್ಮಿಕರು ಅಗೆಯುತ್ತಿದ್ದಾಗ ಪಾತ್ರೆಯೊಂದು ಸಿಕ್ಕಿದೆ. ಅದರಲ್ಲಿ 505 ನ್ಯಾಣಗಳು ಸಿಕ್ಕಿದೆ. ಮೂಲಗಳ ಪ್ರಕಾರ ಹಿತ್ತಾಳೆ ಪಾತ್ರೆಯೊಂದರಲ್ಲಿ ಚಿನ್ನದ ನಾಣ್ಯಗಳು ಸಿಕ್ಕಿದ್ದು, ಆ ಪಾತ್ರೆಯಲ್ಲಿ ಒಟ್ಟು 505 ನ್ಯಾಣಗಳು ದೊರೆತಿವೆ. ಇವುಗಳ ಒಟ್ಟಾರೆ ತೂಕ 1.716 ಕೆ.ಜಿ ಎಂದು ತಿಳಿದುಬಂದಿದೆ.

    ಅಕಿಲಾಂಡೇಶ್ವರಿ ದೇಗುಲ:
    ಅಕಿಲಾಂಡೇಶ್ವರಿ ಸಮೇಧಾ ಜಂಬುಕೇಶ್ವರ ದೇವಸ್ಥಾನವನ್ನು 1800 ವರ್ಷಗಳ ಹಿಂದೆ ಚೋಳರ ರಾಜ ಕೊಚ್ಚೆಂಗನ್ನನ್ ನಿರ್ಮಾಣ ಮಾಡಿದ್ದ ಎಂದು ಪುರಾತತ್ವ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ ದೇಗುಲದ ಆಡಳಿತ ಬಂಡಳಿ ದೇವಸ್ಥಾನದ ಆವರಣದಲ್ಲಿ ಹೂವಿನ ತೋಟ ನಿರ್ಮಾಣ ಮಾಡಲು ಜೀರ್ಣೋದ್ಧಾರ ಕೆಲಸವನ್ನು ಶುರುಮಾಡಿತ್ತು.

    ಅಂಬಲ್ ಸನ್ನಿಧಿ ಎದುರಿಗಿರುವ ವಲೈ ಕೊಟ್ಟಂನಲ್ಲಿ ಕಾರ್ಮಿಕರು ಪೊದೆ ಮತ್ತು ಗಿಡಗಳ ಮಧ್ಯೆ ಸ್ವಚ್ಛತೆ ಮಾಡುತ್ತಿದ್ದರು. ಆಗ ಭೂಮಿಯನ್ನು ಅಗೆಯುತ್ತಿದ್ದಾಗ ಹಿತ್ತಾಳೆಯ ಪಾತ್ರೆಯೊಂದು ಸಿಕ್ಕಿದೆ. ನಂತರ ಕಾರ್ಮಿಕರು ಕುತೂಹಲದಿಂದ ಅದರ ಮುಚ್ಚಳವನ್ನು ತೆರೆದು ನೋಡಿದಾಗ ಚಿನ್ನದ ನಾಣ್ಯಗಳು ಪತ್ತೆಯಾಗಿವೆ. ತಕ್ಷಣ ಅವರು ಜಿಲ್ಲಾಡಳಿತಕ್ಕೆ ಮಾಹಿತಿಯನ್ನು ತಿಳಿಸಿದ್ದಾರೆ.

    ಮಾಹಿತಿ ತಿಳಿದು ಶ್ರೀರಂಗಂ ತಹಶೀಲ್ದಾರ್ ಮತ್ತು ಪೊಲೀಸರು ದೇವಸ್ಥಾನಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ. ಆ ಪಾತ್ರೆಯಲ್ಲಿ 505 ಚಿನ್ನದ ನಾಣ್ಯಗಳಿದ್ದು, ಅದರ ತೂಕ ಸುಮಾರು 1.716 ಕೆ.ಜಿ ಎಂದು ಲೆಕ್ಕ ಹಾಕಿದ್ದಾರೆ. ನಾಣ್ಯಗಳ ಮೇಲೆ ಐತಿಹಾಸಿಕ ಶಾಸನ ಮತ್ತು ಚಿಹ್ನೆ ಇದೆ. ಹೀಗಾಗಿ ಪುರಾತತ್ವ ಇಲಾಖೆಯ ಅಧಿಕಾರಿಗಳು ನಾಣ್ಯಗಳನ್ನು ವಶಪಡಿಸಿಕೊಂಡಿದ್ದಾರೆ.

    ಸದ್ಯಕ್ಕೆ ಸುರಕ್ಷಿತವಾಗಿ ನಾಣ್ಯಗಳನ್ನು ಖಜಾನೆಯಲ್ಲಿಡಲಾಗಿದೆ. ನಾಣ್ಯಗಳ ಮೇಲೆ ಅರೇಬಿಕ್ ಲಿಪಿಯ ಅಕ್ಷರವಿದ್ದು, ಇದು ಕ್ರಿ.ಶ 1000-1200ರ ಕಾಲದ ನಾಣ್ಯ ಇರಬಹುದು ಎಂದು ಅಂದಾಜಿಸಲಾಗಿದೆ.

  • ಇನ್ಮುಂದೆ ಮಲೆ ಮಹದೇಶ್ವರ ಚಿನ್ನದ ರಥಕ್ಕೆ ದವಸ, ನಾಣ್ಯ ಎಸೆಯುವಂತಿಲ್ಲ

    ಇನ್ಮುಂದೆ ಮಲೆ ಮಹದೇಶ್ವರ ಚಿನ್ನದ ರಥಕ್ಕೆ ದವಸ, ನಾಣ್ಯ ಎಸೆಯುವಂತಿಲ್ಲ

    ಚಾಮರಾಜನಗರ: ಪ್ರಸಿದ್ಧ ಯಾತ್ರಾ ಸ್ಥಳವಾದ ಮಹದೇಶ್ವರ ಬೆಟ್ಟದಲ್ಲಿ ಪ್ರತಿ ದಿನ ರಾತ್ರಿ 7 ಗಂಟೆಗೆ ನಡೆಯುವ ಚಿನ್ನದ ರಥೋತ್ಸವದ ಸಂದರ್ಭದಲ್ಲಿ, ಇನ್ನು ಮುಂದೆ ಭಕ್ತರು ತೇರಿಗೆ ನಾಣ್ಯ, ದವಸ ಧಾನ್ಯಗಳನ್ನು ಎಸೆಯುವಂತಿಲ್ಲ.

    ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಹೊಸ ನಿಯಮಗಳನ್ನು ರೂಪಿಸಿದೆ. ಹರಕೆ ರೂಪದಲ್ಲಿ ರಥಕ್ಕೆ ಎಸೆಯಲು ತರುವ ಧಾನ್ಯ ಹಾಗೂ ನಾಣ್ಯಗಳನ್ನು ಭಕ್ತರು ಇನ್ನು ಮುಂದೆ ನಿಗದಿತ ಸ್ಥಳದಲ್ಲಿಯೇ ಹಾಕಬೇಕು ಎಂದು ಆಡಳಿತಾಧಿಕಾರಿ ಆದೇಶ ಹೊರಡಿಸಿದ್ದಾರೆ.

    ಮೊದಲ ದಿನವೇ ಒಂದು ಕ್ವಿಂಟಾಲ್‍ನಷ್ಟು ದವಸ ಧಾನ್ಯ ಸಂಗ್ರಹವಾಗಿದೆ. 10 ಸಾವಿರದಷ್ಟು ಮೌಲ್ಯದ ನಾಣ್ಯ ಹಾಗೂ ನೋಟುಗಳು ಸಂಗ್ರಹವಾಗಿವೆ. ಧಾನ್ಯಗಳನ್ನು ದಾಸೋಹದ ಉದ್ದೇಶಕ್ಕೆ ಬಳಸಿದರೆ, ನಾಣ್ಯಗಳನ್ನು ಹುಂಡಿಗೆ ಹಾಕಲಾಗಿದೆ.

    ಪ್ರತಿದಿನ ಚಿನ್ನದ ತೇರು ನೋಡುವುದಕ್ಕಾಗಿಯೇ ಬೆಟ್ಟಕ್ಕೆ ನೂರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ದೇವಸ್ಥಾನದ ಸುತ್ತ ತೇರು ಸಾಗುತ್ತಿರುವಾಗ ಭಕ್ತರು ತಮ್ಮ ಹೊಲಗದ್ದೆಯಲ್ಲಿ ಬೆಳೆದ ಬೆಳೆಯನ್ನು (ಅಕ್ಕಿ, ಹುರುಳಿ, ರಾಗಿ, ಬೇಳೆ, ಕಡಲೆಕಾಯಿ) ರಥದತ್ತ ಎಸೆದು ಹರಕೆ ತೀರಿಸುತ್ತಾರೆ. ಅದೇ ರೀತಿ ನಾಣ್ಯಗಳನ್ನು ಭಕ್ತಿಯಿಂದ ಎಸೆಯುವವರೂ ಇದ್ದಾರೆ. ಇನ್ನೂ ಕೆಲವರು ತಮ್ಮ ಮೊದಲ ಸಂಬಳವನ್ನು ಕಾಣಿಕೆ ರೂಪದಲ್ಲಿ ರಥಕ್ಕೆ ಅರ್ಪಿಸುತ್ತಾರೆ.

    ಏನು ಕಾರಣ?:
    ಎಸೆದ ನಾಣ್ಯಗಳನ್ನು ದೇವರ ಪ್ರಸಾದ ಎಂದು ನಂಬಿ ಅದನ್ನು ಹೆಕ್ಕುವುದಕ್ಕಾಗಿ ಮಹಿಳೆಯರು, ಮಕ್ಕಳೆನ್ನದೆ ಭಕ್ತರು ಮುಗಿಬೀಳುತ್ತಾರೆ. ಇದರಿಂದ ಅನಾಹುತ ಸಂಭವಿಸುವ ಅಪಾಯ ಇದೆ. ಜೊತೆಗೆ ನೂಕುನುಗ್ಗಲು ಉಂಟಾಗುತ್ತದೆ. ರಥದ ಸಂಚಾರಕ್ಕೂ ತಡೆಯಾಗುತ್ತದೆ. ಅಕ್ಕಿ, ಬೇಳೆಕಾಳು ಹಾಗೂ ಇನ್ನಿತರ ಧಾನ್ಯಗಳನ್ನು ಎಸೆಯುವುದರಿಂದ ನೂರಾರು ಕೆಜಿಗಳಷ್ಟು ಆಹಾರ ಪದಾರ್ಥ ಹಾಳಾಗುತ್ತಿತ್ತು. ಇದನ್ನು ಮನಗಂಡು ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ ಮಾಹಿತಿ ನೀಡಿದ್ದಾರೆ.

    ನಾಣ್ಯವನ್ನು ಎಸೆಯುವುದರಿಂದ ಚಿನ್ನದ ರಥಕ್ಕೆ ಅದರಲ್ಲೂ ವಿಶೇಷವಾಗಿ ಮಹದೇಶ್ವರ ಸ್ವಾಮಿಯ ಚಿನ್ನದ ಮೂರ್ತಿಗೆ ಹಾನಿಯಾಗುತ್ತಿತ್ತು ಎಂದಿದ್ದಾರೆ.

  • 67,490 ರೂ. ನಾಣ್ಯ ನೀಡಿ ದ್ವಿಚಕ್ರ ವಾಹನ ಖರೀದಿಸಿದ- ಎಣಿಸಲು ಬೇಕಾಯ್ತು 3 ಗಂಟೆ

    67,490 ರೂ. ನಾಣ್ಯ ನೀಡಿ ದ್ವಿಚಕ್ರ ವಾಹನ ಖರೀದಿಸಿದ- ಎಣಿಸಲು ಬೇಕಾಯ್ತು 3 ಗಂಟೆ

    ಭೋಪಾಲ್: ಮಧ್ಯ ಪ್ರದೇಶದ ವ್ಯಕ್ತಿಯೊಬ್ಬರು 67,490 ನಾಣ್ಯಗಳನ್ನು ನೀಡಿ ಹೊಂಡಾ ಆಕ್ಟೀವಾ ಖರೀದಿಸಿದ್ದಾರೆ.

    ಸತ್ನಾ ನಿವಾಸಿಯಾಗಿರುವ ರಾಕೇಶ್‍ರಿಗೆ ದ್ವಿಚಕ್ರ ವಾಹನ ಬೇಕಾಗಿತ್ತು. ಈ ವೇಳೆ ಅವರು ಹೊಂಡಾ ಆಕ್ಟೀವಾ ಖರೀದಿಸಲು ನಿರ್ಧರಿಸುತ್ತಾರೆ. ಬಳಿಕ  ನಾಣ್ಯಗಳು ತುಂಬಿರುವ ಬ್ಯಾಗ್ ತೆಗೆದುಕೊಂಡು ‘ಕೃಷ್ಣ ಹೊಂಡಾ ಡೀಲರ್ ಶಿಪ್’ಗೆ ಹೋಗುತ್ತಾರೆ.

    ರಾಕೇಶ್ ಆಕ್ಟೀವಾ 125BSVI ಖರೀದಿಸಲು ನಿರ್ಧರಿಸಿದ್ದರು. ಆಕ್ಟೀವಾ ಖರೀದಿಸಿ 67,490 ರೂ. ಅನ್ನು ನಾಣ್ಯದ ರೂಪದಲ್ಲಿ ಪೇಮೆಂಟ್ ಮಾಡಿದ್ದಾರೆ. ರಾಕೇಶ್ ನೀಡಿದ ನಾಣ್ಯದ ಹಣವನ್ನು ಎಣಿಸಲು ಸಿಬ್ಬಂದಿಗೆ ಬರೋಬ್ಬರಿ ಮೂರು ಗಂಟೆ ಬೇಕಾಯಿತು. ಇದನ್ನೂ ಓದಿ: ತಾಯಿಯ ಹುಟ್ಟುಹಬ್ಬಕ್ಕೆ ಗಿಫ್ಟ್ ನೀಡಲು 12 ವರ್ಷದಿಂದ ನಾಣ್ಯ ಸಂಗ್ರಹಿಸ್ದ

    ಈ ಬಗ್ಗೆ ಪ್ರತಿಕ್ರಿಯಿಸಿದ ರಾಕೇಶ್, ಬೇರೆ ಕುಟುಂಬಗಳಂತೆ ನನಗೂ ಹಾಗೂ ನನ್ನ ಕುಟುಂಬದವರಿಗೂ ದೀಪಾವಳಿ ಹಬ್ಬ ತುಂಬಾನೇ ಮುಖ್ಯ. ದನ್ತೇರಸ್(ಚಿನ್ನ ಅಥವಾ ಹೊಸ ವಸ್ತು ಖರೀದಿಸುವ ದಿನ) ದಿನದಂದು ನನಗೆ ನಾನೇ ನೀಡಿದ ಉಡುಗೊರೆ ಇದು ಎಂದು ಹೇಳಿದ್ದಾರೆ.

    ಈ ಹಿಂದೆ ರಾಜಸ್ಥಾನದ ಜೋಧ್‍ಪುರ್ ನಲ್ಲಿ 17 ವರ್ಷದ ಮಗನೊಬ್ಬ 12 ವರ್ಷದಿಂದ ನಾಣ್ಯಗಳನ್ನು ಸಂಗ್ರಹ ಮಾಡಿ 13,500ರೂ ಜೋಡಿಸಿ ತನ್ನ ತಾಯಿಯ ಹುಟ್ಟುಹಬ್ಬಕ್ಕೆ ಫ್ರಿಡ್ಜ್ ಅನ್ನು ಉಡುಗೊರೆಯಾಗಿ ನೀಡಿದ್ದನು. 13,500 ನಾಣ್ಯಗಳನ್ನು ಎಣಿಸಲು ಸಿಬ್ಬಂದಿಗೆ ಬರೋಬ್ಬರಿ ನಾಲ್ಕು ಗಂಟೆ ಬೇಕಾಯಿತು.

  • ಮಹಿಳೆಯ ಹೊಟ್ಟೆಯಲ್ಲಿ 1.5 ಕೆ.ಜಿ.ಆಭರಣ, 90 ನಾಣ್ಯಗಳು ಪತ್ತೆ

    ಮಹಿಳೆಯ ಹೊಟ್ಟೆಯಲ್ಲಿ 1.5 ಕೆ.ಜಿ.ಆಭರಣ, 90 ನಾಣ್ಯಗಳು ಪತ್ತೆ

    ಕೊಲ್ಕತ್ತಾ: ಮಹಿಳೆಯ ಹೊಟ್ಟೆಯಿಂದ ಸುಮಾರು 1.5 ಕೆ.ಜಿ. ತೂಕದ ಆಭರಣ ಹಾಗೂ 90 ನಾಣ್ಯಗಳನ್ನು ಹೊರ ತೆಗೆದಿರುವ ಅಪರೂಪದ ಘಟನೆ ಪಶ್ಚಿಮ ಬಂಗಾಳದ ಬಿರ್ಭಮ್ ಜಿಲ್ಲೆಯಲ್ಲಿ ನಡೆದಿದೆ.

    ಮಾನಸಿಕ ಅಸ್ವಸ್ಥ ಮಹಿಳೆಯ ಹೊಟ್ಟೆಯಿಂದ 1.5 ಕೆ.ಜಿ. ತೂಕದ ಆಭರಣ ಹಾಗೂ 90 ನಾಣ್ಯಗಳನ್ನು ಸರ್ಕಾರಿ ಆಸ್ಪತ್ರೆ ವೈದ್ಯರು ಹೊರ ತೆಗೆದಿದ್ದಾರೆ. 5 ಹಾಗೂ 10 ರೂ.ಗಳ ನಾಣ್ಯಗಳು, ಸರ, ಕಿವಿಯ ಓಲೆಗಳು, ಬಳೆ, ಕಡಗ, ಬ್ರಾಸ್ಲೆಟ್ಸ್ ಹಾಗೂ ವಾಚ್ ಸೇರಿದಂತೆ ವಿವಿಧ ಆಭರಣಗಳನ್ನು 26 ವರ್ಷದ ಮಹಿಳೆಯ ಹೊಟ್ಟೆಯಿಂದ ಹೊರ ತೆಗೆಯಲಾಗಿದೆ ಎಂದು ರಾಂಪುರಾತ್‍ನ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ಸರ್ಜರಿ ವಿಭಾಗದ ಮುಖ್ಯಸ್ಥ ಸಿದ್ಧಾರ್ಥ್ ಬಿಸ್ವಾಸ್ ತಿಳಿಸಿದ್ದಾರೆ.

    ಕೆಲವು ಬಂಗಾರದ ಆಭರಣಗಳೂ ಸೇರಿದಂತೆ ತಾಮ್ರ ಹಾಗೂ ಹಿತ್ತಾಳೆಯ ಆಭರಣಗಳು ಮಹಿಳೆಯ ಹೊಟ್ಟೆಯಲ್ಲಿದ್ದವು ಎಂದು ವೈದ್ಯರು ತಿಳಿಸಿದ್ದಾರೆ.

    ಮನೆಯಲ್ಲಿನ ಆಭರಣಗಳು ಕಾಣೆಯಾಗುತ್ತಿದ್ದನ್ನು ಗಮನಿಸಿದ್ದೆ. ಇವಳೇ ತೆಗೆದುಕೊಂಡು ಹೋಗಿರಬಹುದು ಎಂದು ಪ್ರಶ್ನಿಸಿದಾಗ ಅಳಲು ಪ್ರಾರಂಭಿಸುತ್ತಿದ್ದಳು. ಹೀಗಾಗಿ ನಾವು ಹೆಚ್ಚು ಪ್ರಶ್ನೆ ಮಾಡುತ್ತಿರಲಿಲ್ಲ. ಮಗಳು ಮಾನಸಿಕವಾಗಿ ಅಸ್ವಸ್ಥೆಯಾಗಿದ್ದು, ಕೆಲವು ದಿನಗಳಿಂದ ಊಟವಾದ ನಂತರ ತಟ್ಟೆಯನ್ನು ಜೋರಾಗಿ ಎಸೆಯುತ್ತಿದ್ದಾಳೆ ಎಂದು ಮಾನಸಿಕ ಅಸ್ವಸ್ಥ ಯುವತಿಯ ತಾಯಿ ಅಳಲು ತೋಡಿಕೊಂಡಿದ್ದಾರೆ.

    ನಾಣ್ಯಗಳನ್ನು ತನ್ನ ಸಹೋದರ ಅಂಗಡಿಯಿಂದ ತೆಗೆದುಕೊಳ್ಳುತ್ತಿದ್ದಳು. ನಾವು ಅವಳ ಮೇಲೆ ನಿಗಾ ವಹಿಸುತ್ತಿದ್ದರೂ, ಕಣ್ಣು ತಪ್ಪಿಸಿ ಇಷ್ಟೊಂದು ನಾಣ್ಯ ಹಾಗೂ ಆಭರಣಗಳನ್ನು ನುಂಗಿದ್ದಾಳೆ. ಖಾಯಿಲೆ ಕುರಿತು ವಿವಿಧ ಖಾಸಗಿ ವೈದ್ಯರ ಬಳಿ ಚಿಕಿತ್ಸೆ ಕೊಡಿಸಿದ್ದೇವೆ. ವೈದ್ಯರು ನೀಡಿದ ಔಷಧಗಳನ್ನು ಕೊಡುತ್ತಿದ್ದೇವೆ. ಆದರೂ ಸಹ ಈ ವೆರೆಗೆ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಹೀಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  • ದೃಷ್ಟಿಹೀನರಿಗೆ ಸುಲಭವಾಗಿ ಗುರುತಿಸಲು ಬರಲಿದೆ 1,2,5,10 ಮತ್ತು 20 ರೂ. ನಾಣ್ಯ

    ದೃಷ್ಟಿಹೀನರಿಗೆ ಸುಲಭವಾಗಿ ಗುರುತಿಸಲು ಬರಲಿದೆ 1,2,5,10 ಮತ್ತು 20 ರೂ. ನಾಣ್ಯ

    ನವದೆಹಲಿ: 1, 2, 5, 10 ಮತ್ತು 20 ರೂ. ಮುಖಬೆಲೆಯ ಹೊಸ ನಾಣ್ಯ ಶೀಘ್ರವೇ ಸಾರ್ವಜನಿಕರಿಗೆ ಲಭ್ಯವಾಗಲಿವೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

    ಲೋಕಸಭೆಯಲ್ಲಿ ಬಜೆಟ್ ಮಂಡಿಸುವ ವೇಳೆ ಮಾತನಾಡಿದ ಅವರು, ಈ ಹಿಂದೆ ದೃಷ್ಟಿಹೀನರಿಗೆ ಗುರುತಿಸಲು ಸಾಧ್ಯವಾಗುವ ಹೊಸ ನಾಣ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 7, 2019ರಂದು ಬಿಡುಗಡೆ ಮಾಡಿದ್ದರು. ಬಿಡುಗಡೆಯಾಗಲಿರುವ ಹೊಸ ನಾಣ್ಯಗಳು ಶೀಘ್ರದಲ್ಲಿಯೇ ಸಾರ್ವಜನಿಕರಿಗೆ ಲಭ್ಯವಾಗಲಿವೆ ಎಂದು ಮಾಹಿತಿ ನೀಡಿದರು.

    20 ರೂಪಾಯಿಯ 12 ಭುಜಾಕೃತಿಯ ಹೊಸ ನಾಣ್ಯವನ್ನು ಬಿಡುಗಡೆ ಮಾಡುವುದಾಗಿ 2019ರ ಮಾರ್ಚ್ ನಲ್ಲಿ ಕೇಂದ್ರ ಹಣಕಾಸು ಸಚಿವಾಲಯ ಘೋಷಣೆ ಮಾಡಿತ್ತು. 20 ರೂಪಾಯಿ ಹೊಸ ನಾಣ್ಯದ 27 ಮಿ.ಮೀ ಇರಲಿದೆ. 20ರೂ. ನಾಣ್ಯದ ಹೊರ ಉಂಗುರವನ್ನು ಶೇ.65 ತಾಮ್ರ, ಶೇ.15 ಸತು ಮತ್ತು ಶೇ.20 ನಿಕ್ಕಲ್ ಬಳಸಿ ತಯಾರಿಸಲಾಗುತ್ತದೆ. ಇನ್ನೂ ಒಳ ಉಂಗುರ ಅಥವಾ ನಾಣ್ಯದ ಕೇಂದ್ರಭಾಗದಲ್ಲಿ ತಾಮ್ರ ಶೇ.75, ಸತು ಶೇ.20 ಹಾಗೂ ನಿಕ್ಕಲ್ ಶೇ.5 ರಷ್ಟು ಬಳಕೆ ಮಾಡಲಾಗುತ್ತದೆ.

    20 ರೂಪಾಯಿಯ ಒಂದು ನಾಣ್ಯ 8.54 ಗ್ರಾಂ ತೂಕ ಹೊಂದಿರುತ್ತದೆ. ಹೊಸ 20 ರೂ. ನಾಣ್ಯವು 10ರೂ. ನಾಣ್ಯಕ್ಕಿಂತ ವಿಭಿನ್ನವಾಗಿದ್ದು, ಈ ನಾಣ್ಯವೂ ಯಾವುದೇ ಸರಣಿಯನ್ನು ಹೊಂದಿರುವುದಿಲ್ಲ.

    ನಾಣ್ಯದ ವಿಶೇಷತೆಗಳು?
    ನಾಣ್ಯದ ಮುಂಭಾಗದಲ್ಲಿ ನಾಲ್ಕು ಸಿಂಹಗಳ ಲಾಂಛನ ಮತ್ತು ಅಶೋಕನ “ಸತ್ಯಮೇವ ಜಯತೆ” ವಾಕ್ಯವನ್ನು ಇರಲಿದೆ. ಇನ್ನೂ ನಾಣ್ಯದ ಎಡಭಾಗದಲ್ಲಿ `ಭಾರತ್’ ಎಂದು ಹಿಂದಿ ಭಾಷೆಯಲ್ಲಿದ್ದು, `ಇಂಡಿಯಾ’ ಎಂದು ಇಂಗ್ಲೀಷ್ ನಲ್ಲಿ ಬಲಭಾಗದಲ್ಲಿ ಬರೆಯಲಾಗುತ್ತದೆ. ಇನ್ನೂ ನಾಣ್ಯದ ಹಿಂಭಾಗದಲ್ಲಿ ರೂಪಾಯ ಚಿಹ್ನೆಯ ಕೆಳಗೆ ನಾಣ್ಯದ ಮೌಲ್ಯವನ್ನು ಬರೆಯಲಾಗುತ್ತದೆ. ಅಷ್ಟೇ ಅಲ್ಲದೆ ದೇಶದ ಕೃಷಿ ಪ್ರಾಮುಖ್ಯತೆಯನ್ನು ಸಾರಲು ನಾಣ್ಯದ ಎಡಭಾಗದಲ್ಲಿ ವಿನ್ಯಾಸಗೊಳಿಸಿದ ಧಾನ್ಯಗಳ ಚಿತ್ರ ಸಹ ಇರಲಿದೆ.

    ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ 20 ರೂಪಾಯಿ ಎಂದು ಬರೆಯಲಾಗಿದ್ದು, ನಾಣ್ಯ ಬಿಡುಗಡೆಯಾಗಿರುವ ವರ್ಷವನ್ನು ಸಹ ಟಂಕಿಸಲಾಗುತ್ತದೆ. ಮೊದಲ ಬಾರಿಗೆ 2009 ರ ಮಾರ್ಚ್ ನಲ್ಲಿ 10ರೂ. ನಾಣ್ಯವನ್ನು ಬಿಡುಗಡೆ ಮಾಡಲಾಗಿತ್ತು. ನಂತರ 10 ವರ್ಷಗಳ ಬಳಿಕ ನೂತನ 20ರೂ. ನಾಣ್ಯ ಬಿಡುಗಡೆಯಾಗುತ್ತಿದೆ.

    20 ರೂ. ನಾಣ್ಯ ಘೋಷಣೆಯಾದರೂ ಸದ್ಯ ಚಲಾವಣೆಯಲ್ಲಿರುವ ಎಲ್ಲ ನಾಣ್ಯಗಳು ಚಲಾವಣೆಯಲ್ಲಿರುತ್ತದೆ ಎಂದು ಆರ್‍ಬಿಐ ಈ ಹಿಂದೆ ತಿಳಿಸಿತ್ತು.

  • ಚಲಾವಣೆಗೆ ಬರಲಿದೆ 20ರೂ. ನಾಣ್ಯ

    ಚಲಾವಣೆಗೆ ಬರಲಿದೆ 20ರೂ. ನಾಣ್ಯ

    ಸಾಂದರ್ಭಿಕ ಚಿತ್ರ

    ನವದೆಹಲಿ: 20 ರೂಪಾಯಿಯ 12 ಭುಜಾಕೃತಿಯ ಹೊಸ ನಾಣ್ಯವನ್ನು ಬಿಡುಗಡೆ ಮಾಡುವುದಾಗಿ ಬುಧವಾರ ಕೇಂದ್ರ ಹಣಕಾಸು ಸಚಿವಾಲಯ ಘೋಷಣೆ ಮಾಡಿದೆ.

    20 ರೂಪಾಯಿ ಹೊಸ ನಾಣ್ಯದ 27 ಮಿ.ಮೀ ಇರಲಿದೆ. 20ರೂ. ನಾಣ್ಯದ ಹೊರ ಉಂಗುರವನ್ನು ಶೇ.65 ತಾಮ್ರ, ಶೇ.15 ಸತು ಮತ್ತು ಶೇ.20 ನಿಕ್ಕಲ್ ಬಳಸಿ ತಯಾರಿಸಲಾಗುತ್ತದೆ. ಇನ್ನೂ ಒಳ ಉಂಗುರ ಅಥವಾ ನಾಣ್ಯದ ಕೇಂದ್ರಭಾಗದಲ್ಲಿ ತಾಮ್ರ ಶೇ.75, ಸತು ಶೇ.20 ಹಾಗೂ ನಿಕ್ಕಲ್ ಶೇ.5 ರಷ್ಟು ಬಳಕೆ ಮಾಡಲಾಗುತ್ತದೆ.

    20 ರೂಪಾಯಿಯ ಒಂದು ನಾಣ್ಯ 8.54 ಗ್ರಾಂ ತೂಕ ಹೊಂದಿರುತ್ತದೆ. ಹೊಸ 20 ರೂ. ನಾಣ್ಯವು 10ರೂ. ನಾಣ್ಯಕ್ಕಿಂತ ವಿಭಿನ್ನವಾಗಿದ್ದು, ಈ ನಾಣ್ಯವೂ ಯಾವುದೇ ಸರಣಿಯನ್ನು ಹೊಂದಿರುವುದಿಲ್ಲ.

    ನಾಣ್ಯದ ವಿಶೇಷತೆಗಳು?
    ನಾಣ್ಯದ ಮುಂಭಾಗದಲ್ಲಿ ನಾಲ್ಕು ಸಿಂಹಗಳ ಲಾಂಛನ ಮತ್ತು ಅಶೋಕನ “ಸತ್ಯಮೇವ ಜಯತೆ” ವಾಕ್ಯವನ್ನು ಇರಲಿದೆ. ಇನ್ನೂ ನಾಣ್ಯದ ಎಡಭಾಗದಲ್ಲಿ ‘ಭಾರತ್’ ಎಂದು ಹಿಂದಿ ಭಾಷೆಯಲ್ಲಿದ್ದು, ‘ಇಂಡಿಯಾ’ ಎಂದು ಇಂಗ್ಲೀಷ್ ನಲ್ಲಿ ಬಲಭಾಗದಲ್ಲಿ ಬರೆಯಲಾಗುತ್ತದೆ. ಇನ್ನೂ ನಾಣ್ಯದ ಹಿಂಭಾಗದಲ್ಲಿ ರೂಪಾಯ ಚಿಹ್ನೆಯ ಕೆಳಗೆ ನಾಣ್ಯದ ಮೌಲ್ಯವನ್ನು ಬರೆಯಲಾಗುತ್ತದೆ. ಅಷ್ಟೇ ಅಲ್ಲದೆ ದೇಶದ ಕೃಷಿ ಪ್ರಾಮುಖ್ಯತೆಯನ್ನು ಸಾರಲು ನಾಣ್ಯದ ಎಡಭಾಗದಲ್ಲಿ ವಿನ್ಯಾಸಗೊಳಿಸಿದ ಧಾನ್ಯಗಳ ಚಿತ್ರ ಸಹ ಇರಲಿದೆ.

    ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ 20 ರೂಪಾಯಿ ಎಂದು ಬರೆಯಲಾಗಿದ್ದು, ನಾಣ್ಯ ಬಿಡುಗಡೆಯಾಗಿರುವ ವರ್ಷವನ್ನು ಸಹ ಟಂಕಿಸಲಾಗುತ್ತದೆ. ಮೊದಲ ಬಾರಿಗೆ 2009 ರ ಮಾರ್ಚ್ ನಲ್ಲಿ 10ರೂ. ನಾಣ್ಯವನ್ನು ಬಿಡುಗಡೆ ಮಾಡಲಾಗಿತ್ತು. ನಂತರ 10 ವರ್ಷಗಳ ಬಳಿಕ ನೂತನ 20ರೂ. ನಾಣ್ಯ ಬಿಡುಗಡೆಯಾಗುತ್ತಿದೆ.

    20 ರೂ. ನಾಣ್ಯ ಘೋಷಣೆಯಾದರೂ ಸದ್ಯ ಚಲಾವಣೆಯಲ್ಲಿರುವ ಎಲ್ಲ ನಾಣ್ಯಗಳು ಚಲಾವಣೆಯಲ್ಲಿರುತ್ತದೆ ಎಂದು ಆರ್‌ಬಿಐ ತಿಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಟಲ್ ಜೀ ಸ್ಮರಣಾರ್ಥ ಪ್ರಧಾನಿಯಿಂದ 100 ರೂ. ನಾಣ್ಯ ಬಿಡುಗಡೆ! – ನಾಣ್ಯದ ವಿಶೇಷತೆ ಏನು?

    ಅಟಲ್ ಜೀ ಸ್ಮರಣಾರ್ಥ ಪ್ರಧಾನಿಯಿಂದ 100 ರೂ. ನಾಣ್ಯ ಬಿಡುಗಡೆ! – ನಾಣ್ಯದ ವಿಶೇಷತೆ ಏನು?

    ನವದೆಹಲಿ: ಅಜಾತ ಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ 94ನೇ ಜನ್ಮ ದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ 100 ರೂಪಾಯಿ ನಾಣ್ಯವನ್ನು ಬಿಡುಗಡೆ ಮಾಡಿದ್ದಾರೆ.

    ನಾಣ್ಯ ಬಿಡುಗಡೆ ಮಾಡಿ ಮಾತನಾಡಿದ ಅವರು, ಅಟಲ್ ಬಿಹಾರಿ ವಾಜಪೇಯಿ ಪ್ರಜಾಪ್ರಭುತ್ವದಲ್ಲಿ ನಂಬಿಕೆಯನ್ನು ಹೊಂದಿದ್ದರು. ಜನ ಸಂಘವನ್ನು ಸ್ಥಾಪಿಸಿದ್ದರು. ಆದರೆ ಪ್ರಜಾಪ್ರಭುತ್ವದ ರಕ್ಷಣೆಯ ಸಂದರ್ಭ ನಿರ್ಮಾಣವಾದಾಗ ವಾಜಪೇಯಿ ಸೇರಿದಂತೆ ಪ್ರಮುಖ ನಾಯಕರು ಜನತಾ ಪಾರ್ಟಿಯನ್ನು ಸೇರಿಕೊಂಡರು. ನಂತರ ಅದನ್ನು ತೊರೆದು ಬಿಜೆಪಿಯನ್ನು ಸ್ಥಾಪಿಸಿಕೊಂಡರು ಎಂದು ಜ್ಞಾಪಿಸಿಕೊಂಡರು.

    ವಾಜಪೇಯಿಯವರು ತಮ್ಮ ಪಕ್ಷದ ಸಿದ್ಧಾಂತದ ಮೇಲೆ ಎಂದಿಗೂ ರಾಜಿ ಮಾಡಿಕೊಳ್ಳುತ್ತಿರಲಿಲ್ಲ. ಅವರು ಕಟ್ಟಿದ ಬಿಜೆಪಿ ಇಂದು ದೊಡ್ಡ ರಾಜಕೀಯ ಪಕ್ಷವಾಗಿ ಬೆಳೆದಿದೆ. ಉತ್ತಮ ಭಾಷಣಕಾರರಾಗಿದ್ದ ಅವರು ಮಾತನಾಡುತ್ತಿದ್ದರೆ, ಇಡೀ ದೇಶವೇ ಕೇಳುತಿತ್ತು ಎಂದು ಹೇಳಿದ್ದಾರೆ.

    ಅಟಲ್ ಜೀಯವರ ಆದರ್ಶ ತತ್ವಗಳನ್ನು ಪಾಲಿಸುತ್ತೇನೆ. ಇದೇ ಮಂಗಳವಾರ ವಾಜಪೇಯಿಯವರ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸುತ್ತೇನೆಂದು ತಿಳಿಸಿದ್ದಾರೆ.

    ದೀರ್ಘ ಅನಾರೋಗ್ಯಕ್ಕೆ ತುತ್ತಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರು ಆಗಸ್ಟ್ 16 ರಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದರು. ಅಜಾತಶತ್ರು ಎಂದೇ ಕರೆಯಿಸಿಕೊಂಡಿದ್ದ ಅವರ ನಿಧನಕ್ಕೆ ದೇಶವೇ ಕಂಬನಿ ಮಿಡಿದಿತ್ತು. 1924ರ ಡಿಸೆಂಬರ್ 25 ರಂದು ಜನಿಸಿದ್ದ ಅವರಿಗೆ ಇದೇ ಮಂಗಳವಾರ 94ನೇ ಹುಟ್ಟುಹಬ್ಬದ ನಿಮಿತ್ತ ಕೇಂದ್ರ ಸರ್ಕಾರ ಅವರ ಸ್ಮರಣಾರ್ಥವಾಗಿ ನಾಣ್ಯ ಬಿಡುಗಡೆಗೊಳಿಸಿದೆ.

    ಸಮಾರಂಭಕ್ಕೆ ಅಟಲ್ ಜೀಯವರೊಂದಿಗೆ ದೀರ್ಘ ಕಾಲ ಒಡನಾಟ ಹೊಂದಿದ್ದ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಸೇರಿದಂತೆ ಸ್ಪೀಕರ್ ಸುಮಿತ್ರಾ ಮಹಾಜನ್, ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೇರಿದಂತೆ ಪ್ರಮುಖ ಗಣ್ಯರು ಆಗಮಿಸಿದ್ದರು.

    ನಾಣ್ಯದ ವಿಶೇಷತೆಗಳೇನು?
    * ನಾಣ್ಯದ ಒಂದು ಬದಿಯಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ ಭಾವಚಿತ್ರ ಹಾಗೂ ಹೆಸರನ್ನು ಇಂಗ್ಲೀಷ್ ಹಾಗೂ ದೇವನಗರಿ ಭಾಷೆಯಲ್ಲಿ ಮುದ್ರಿಸಲಾಗಿದೆ.
    * ಅಟಲ್ ಜೀಯವರ ಹುಟ್ಟು ಹಾಗೂ ನಿಧನದ ವರ್ಷವನ್ನು ಭಾವಚಿತ್ರದ ಕೆಳಗೆ ಮುದ್ರಿಸಲಾಗಿದೆ.
    * ಸಂಪೂರ್ಣ ನಾಣ್ಯವನ್ನು ಶೇ.50 ರಷ್ಟು ಬೆಳ್ಳಿ, ಶೇ.40 ರಷ್ಟು ತಾಮ್ರ, ಶೇ.5ರಷ್ಟು ನಿಕ್ಕಲ್ ಹಾಗೂ ಶೇ.5ರಷ್ಟು ಜಿಂಕ್ ಬಳಸಿ ನಿರ್ಮಿಸಲಾಗಿದೆ.

    * ಒಂದು ನಾಣ್ಯದ ಸಂಪೂರ್ಣ ತೂಕ 135 ಗ್ರಾಂಗಳಷ್ಟು ಹೊಂದಿದೆ.
    * ನಾಣ್ಯದ ಮತ್ತೊಂದು ಭಾಗದಲ್ಲಿ ಮೂರು ಸಿಂಹಗಳುಳ್ಳ ಅಶೋಕ ಸ್ತಂಭದ ಚಿಹ್ನೆಯ ಜೊತೆಗೆ ಸತ್ಯಮೇವ ಜಯತೆಯನ್ನು ಮುದ್ರಿಸಲಾಗಿದೆ.
    * ನಾಣ್ಯದ ಎಡಬಲದಲ್ಲಿ ದೇವನಗರಿ ಲಿಪಿಯಲ್ಲಿ ಭಾರತ ಎಂದು ಮುದ್ರಿಸಿದ್ದರೆ, ಬಲ ಬದಿಯಲ್ಲಿ ಇಂಡಿಯಾ ಎಂದು ಇಂಗ್ಲೀಷ್ ಭಾಷೆಯಲ್ಲಿ ಮುದ್ರಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಒಂದು ರೂ. ನಾಣ್ಯ ಟಂಕಿಸಲು 1.11 ರೂ. ವೆಚ್ಚ!- ಯಾವ ನಾಣ್ಯಕ್ಕೆ ಎಷ್ಟು?

    ಒಂದು ರೂ. ನಾಣ್ಯ ಟಂಕಿಸಲು 1.11 ರೂ. ವೆಚ್ಚ!- ಯಾವ ನಾಣ್ಯಕ್ಕೆ ಎಷ್ಟು?

    ನವದೆಹಲಿ: ಇತ್ತೀಚಿನ ಮಕ್ಕಳಿಗೆ ಒಂದು ರೂಪಾಯಿ ಕೊಟ್ಟರೆ ನಮಗೆ ಬೇಡ. ಇದರಲ್ಲಿ ಏನು ಸಿಗುತ್ತೆ ಅಂತಾ ಪ್ರಶ್ನೆ ಮಾಡುತ್ತಾರೆ. ಅಷ್ಟೇ ಅಲ್ಲ ಒಂದು ರೂ. ಮುಖಬೆಲೆಯ ನಾಣ್ಯ ಮುದ್ರಣ ಮಾಡೋದಕ್ಕೆ ಸರ್ಕಾರ ಕೂಡ ಅದಕ್ಕಿಂತ ಹೆಚ್ಚು ಹಣ ವೆಚ್ಚ ಮಾಡಬೇಕಾಗುತ್ತದೆ.

    ಹೌದು, 1.ರೂ ಟಂಕಿಸಲು ಸರ್ಕಾರ 1.11 ರೂ. ವೆಚ್ಚ ಮಾಡಬೇಕಾಗಿದೆ. ನಾಣ್ಯಗಳನ್ನು ಟಂಕಿಸಲು ಎಷ್ಟು ವೆಚ್ಚ ಮಾಡಲಾಗುತ್ತಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಪ್ರಶ್ನೆ ಮಾಡಲಾಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸರ್ಕಾರ ಎಲ್ಲ ರೀತಿಯ ಮುಖ ಬೆಲೆಯ ನಾಣ್ಯಕ್ಕೆ ಎಷ್ಟು ವೆಚ್ಚ ಮಾಡಲಾಗುತ್ತದೆ ಎನ್ನುವ ಮಾಹಿತಿ ನೀಡಿದೆ ಎಂದು ವರದಿಯಾಗಿದೆ.

    ಯಾವ ನಾಣ್ಯಕ್ಕೆ ಎಷ್ಟು ವೆಚ್ಚ?:
    1, 2, 5 ಹಾಗೂ 10 ರೂ. ಮುಖಬೆಲೆಯ ನಾಣ್ಯಗಳನ್ನು ಟಂಕಿಸಿ ಮಾರುಕಟ್ಟೆಗೆ ಬಿಡುಗಡೆಮಾಡುವ ಕೆಲಸವನ್ನು ಆರ್‌ಬಿಐ ಮಾಡುತ್ತಿದೆ. 2ರೂ. ನಾಣ್ಯಕ್ಕೆ 1.20 ರೂ., 5 ರೂ. ನಾಣ್ಯಕ್ಕೆ 3.69 ರೂ., ಮತ್ತು 10 ರೂ. ನಾಣ್ಯಕ್ಕೆ 5.54 ರೂ. ವೆಚ್ಚ ಮಾಡಬೇಕಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv