Tag: ನಾಡಬಂದೂಕು

  • ಅಣ್ಣ-ತಮ್ಮರ ನಡುವೆ ನಡೆದ ಜಗಳದಿಂದ ಬಯಲಾಯಿತು ನಾಡಬಂದೂಕು ತಯಾರಿಸುವ ಕೃತ್ಯ!

    ಅಣ್ಣ-ತಮ್ಮರ ನಡುವೆ ನಡೆದ ಜಗಳದಿಂದ ಬಯಲಾಯಿತು ನಾಡಬಂದೂಕು ತಯಾರಿಸುವ ಕೃತ್ಯ!

    ಯಾದಗಿರಿ: ನಾಡ ಬಂದೂಕು ತಯಾರು ಮಾಡಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಯಾದಗಿರಿಯ ರಾಮಸಮುದ್ರ ಗ್ರಾಮದ 26 ವರ್ಷದ ಭೀಮಣ್ಣನನ್ನ ವಾರದ ಹಿಂದೆ ಯಾದಗಿರಿ ಗ್ರಾಮಾಂತರ ಠಾಣೆಯ (Yadagiri Rural Police Station) ಪೊಲೀಸರು ಬಂಧಿಸಿದ್ದಾರೆ.

    ಈ ಭೀಮಣ್ಣ ಹಾಗೂ ಕುಟುಂಬಸ್ಥರು ಕಳೆದ ಕೆಲ ವರ್ಷಗಳಿಂದ ಹೊಟ್ಟೆಪಾಡಿಗೆಂದು ಬೆಂಗಳೂರಿಗೆ ಹೋಗಿ ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದರು. ಆದರೆ ಕಳೆದ ಮೂರು ತಿಂಗಳ ಹಿಂದೆ ಕುಟುಂಬಸ್ಥರು ಭೀಮಣ್ಣನ ಮದುವೆ ಮಾಡಲು ಊರಿಗೆ ಬಂದಿದ್ರು. ಮದುವೆ ಮಾಡಿದ ಬಳಿಕ ಮದುಗೆ ಹಣ ಖರ್ಚಾಗಿದ್ದರಿಂದ ಸಾಲ ಆಗಿತ್ತು. ಇದೇ ಕಾರಣಕ್ಕೆ ಕುಟುಂಬಸ್ಥರು ಭೀಮಣ್ಣನಿಗೆ ಬೆಂಗಳೂರಿಗೆ ಹೋಗಿ ದುಡಿದು ಸಾಲ ಕಟ್ಟುವಂತೆ ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಭೀಮಣ್ಣ ನಾನು ಬೆಂಗಳೂರಿಗೆ ಹೋಗಿ ದುಡಿದು ಸಾಲ ಕಟ್ಟಲ್ಲ ಅಂತ ಜಗಳ ಮಾಡಿಕೊಂಡಿದ್ದಾನೆ. ಮತ್ತೆ ಮನೆಯವರು ಒತ್ತಾಯ ಮಾಡಿದ್ದಕ್ಕೆ ಕೈಯಲ್ಲಿ ನಾಡಬಂದೂಕು ಹಿಡಿದುಕೊಂಡು ಬಂದ ಭೀಮಣ್ಣ ಕುಟುಂಬಸ್ಥರಿಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ಭೀಮಣ್ಣನ ಸಹೋದರ ಮೌನೇಶ್ ಯಾದಗಿರಿ ಗ್ರಾಮಾಂತರ ಠಾಣೆಯಲ್ಲಿ ತನ್ನ ಸಹೋದರನ ವಿರುದ್ಧ ಕೇಸ್ ದಾಖಲಿಸಿದ್ದಾನೆ. ಕೂಡಲೇ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಭೀಮಣ್ಣನನ್ನ ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದಾಗ ಈ ಭೀಮಣ್ಣ ಎಂತಹ ಖತರ್ನಾಕ್ ಅಂತ ಬಯಲಾಗಿದ್ದು, ಪೊಲೀಸರೇ ಶಾಕ್ ಆಗಿದ್ದಾರೆ.

    ಭೀಮಣ್ಣ ನಾಡ ಬಂದೂಕಿನಿಂದ ಶೂಟ್ ಮಾಡಿ ಕೊಲೆ ಮಾಡುವುದಾಗಿ ಕುಟುಂಬಸ್ಥರಿಗೆ ಬೆದರಿಕೆ ಹಾಕಿದ್ದಾನೆ. ಕೂಡಲೇ ಸ್ಥಳೀಯರು ಬಂದು ಜಗಳ ಬಿಡಿಸುತ್ತಿದ್ದ ಹಾಗೆ ಭೀಮಣ್ಣ ಬಂದೂಕು ಬೇರೆ ಕಡೆ ಬಿಸಾಡಿ ಸ್ಥಳದಿಂದ ಓಡಿ ಹೋಗಿದ್ದ. ಇತ್ತ ಪೊಲೀಸರು ಭೀಮಣ್ಣನನ್ನ ವಿಚಾರಣೆ ಮಾಡುವ ವೇಳೆ ಹೊಸ ಸತ್ಯ ಬಯಲಾಗಿದೆ. ಈ ಭೀಮಣ್ಣ ನೋಡಲು ಅಮಾಯಕನ ತರ ಕಂಡ್ರು ಸಹ ಸ್ವತಃ ತಾನೇ ನಾಡಬಂದೂಕುಗಳನ್ನ ತಯಾರು ಮಾಡುತ್ತಿದ್ದ ಎನ್ನೋದು ಪೊಲೀಸರಿಗೆ ಗೊತ್ತಾಗಿದೆ. ಸ್ಥಳೀಯವಾಗಿ ಸಿಗುವ ಕಚ್ಚಾ ವಸ್ತುಗಳಿಂದ ಮದ್ದು ತಯಾರಿಸುತ್ತಿದ್ದ. ಜೊತೆಗೆ ಬಾಗಲಕೋಟೆ ಜಿಲ್ಲೆಯ ಮುಧೋಳ್ ಪಟ್ಟಣದ ದೇವಲಾ ಎಂಬಾತನಿಂದ ಬಂದೂಕು ತಯಾರಿಸಲು ಬೇಕಾದ ವಸ್ತುಗಳನ್ನ ಖರೀದಿ ಮಾಡಿಕೊಂಡು ಬರುತ್ತಿದ್ದ. ಗ್ರಾಮದ ಹೊರ ಭಾಗದ ಬೆಟ್ಟದಲ್ಲಿ ಕುಳಿತುಕೊಂಡು ಸಿಂಗಲ್ ಬ್ಯಾರಲ್ ನ ನಾಡಾ ಬಂದೂಕು ತಯಾರು ಮಾಡುವ ಕೆಲಸ ಮಾಡ್ತಾಯಿದ್ದ ಅಂತ ಪೊಲೀಸರ ವಿಚಾರಣೆ ವೇಳೆ ಗೊತ್ತಾಗಿದೆ.

    ಬೆಟ್ಟದಲ್ಲಿ ಕುಳಿತುಕೊಂಡು ಬಂದೂಕು ತಯಾರು ಮಾಡಿ 25 ರಿಂದ 30 ಸಾವಿರಕ್ಕೆ ಒಂದು ಬಂದೂಕು ಮಾರಾಟ ಮಾಡಲು ಪ್ಲಾನ್ ಕೂಡ ಮಾಡಿಕೊಂಡಿದ್ದ ಅಂತ ಹೇಳಲಾಗುತ್ತಿದೆ. ಇದೇ ಗ್ರಾಮದ ಮಲ್ಲಿಕಾರ್ಜುನ್ ಎಂಬ ಕುರಿಗಾಯಿಗೆ ಈ ಭೀಮಣ್ಣ ತಾನು ತಯಾರು ಮಾಡಿದ ಬಂದೂಕು ಮಾರಾಟ ಮಾಡಿದ್ದ. ಹೀಗಾಗಿ ವಿಚಾರಣೆ ವೇಳೆ ಮಲ್ಲಿಕಾರ್ಜುನ್ ಗೆ ಮಾರಾಟ ಮಾಡಿರುವ ಬಗ್ಗೆ ಹೇಳಿದ್ದರಿಂದ ಪೊಲೀಸರು ಬಂದೂಕಿನ ಸಮೇತವಾಗಿ ಮಲ್ಲಿಕಾರ್ಜುನ್ ನನ್ನು ಸಹ ಅರೆಸ್ಟ್ ಮಾಡಿದ್ದಾರೆ. ಕೇಸ್ ದಾಖಲಾದ ಬಳಿಕ ಓಡಿ ಹೋಗಿ ಇದೇ ಬೆಟ್ಟದಲ್ಲಿ ಭೀಮಣ್ಣ ಅಡಗಿಕೊಂಡು ಕುಳಿತುಕೊಂಡಿದ್ದ. ಪೊಲೀಸರು ಭೀಮಣ್ಣನನ್ನ ಬಂಧಿಸಿ ಎರಡು ಸಿಂಗಲ್ ಬ್ಯಾರಲ್ ನ ನಾಡ ಬಂದೂಕುಗಳನ್ನ ವಶಕ್ಕೆ ಪಡೆದಿದ್ದಾರೆ.

    ಬಡ ಕುಟುಂಬ, ನಿತ್ಯ ದುಡಿದ್ರೆ ಮಾತ್ರ ಮನೆಯಲ್ಲಿ ಒಲೆ ಉರಿಯುತ್ತೆ. ಹೀಗಾಗಿ ಸಾಲ ಆಗಿದೆ ಅಂತ ಸಾಲ ತೀರಿಸಲು ಹೇಳಿದ್ರೆ ಈ ಭೀಮಣ್ಣ ಬಂದೂಕು ತೋರಿಸಿ ಕುಟುಂಬಸ್ಥರಿಗೆ ಬೆದರಿಗೆ ಹಾಕಿ ಹೊಸ ಕೇಸ್ ನಲ್ಲಿ ಅಂದರ್ ಆಗಿದ್ದಾನೆ. ಆದ್ರೆ ಪೊಲೀಸರು ಈ ಕೇಸ್ ಇಷ್ಟಕ್ಕೆ ಬಿಡದೆ ಬಂದೂಕು ತಯಾರಿ ಮಾಡುವುದರ ಹಿಂದೆ ಯಾರಿದ್ದಾರೆ ಅಂತ ಸತ್ಯ ಬಯಲಿಗೆಳೆಯಬೇಕಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಂದೂಕಿನಿಂದ ಗುಂಡು ಹಾರಿಸಿದ ಪ್ರಕರಣ – ನಾಲ್ವರ ಬಂಧನ

    ಬಂದೂಕಿನಿಂದ ಗುಂಡು ಹಾರಿಸಿದ ಪ್ರಕರಣ – ನಾಲ್ವರ ಬಂಧನ

    ಯಾದಗಿರಿ: ಜನಾರ್ಶೀವಾದ ಯಾತ್ರೆಯಲ್ಲಿ ಬಂದೂಕಿನಿಂದ ಗುಂಡು ಹಾರಿಸಿದ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ನೊಂದಿಗೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ಯರಗೋಳ ಗ್ರಾಮದ ಮೊನಪ್ಪ, ಶರಣಪ್ಪ, ನಿಂಗಪ್ಪ ಹಾಗೂ ದೇವಿಂದ್ರಪ್ಪ ಎಂಬುದಾಗಿ ಗುರುತಿಸಲಾಗಿದೆ. ಇವರನ್ನು ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

    ಬಂಧನಕ್ಕೊಳಗಾದ ಎಲ್ಲರೂ ಸಹ ಅಮಾಯಕ ರೈತರು, ಬೆಳೆನಾಶ ಮಾಡುವ ಪ್ರಾಣಿಗಳನ್ನು ಓಡಿಸಲು ನಾಡಬಂದೂಕು ಲೈಸೆನ್ಸ್ ಪಡೆದ್ದು, ಇಂದು ಕೇಂದ್ರ ಸಚಿವ ಖೂಬಾ ಬರುವ ಹಿನ್ನೆಲೆ, ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಮತ್ತು ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ, ಬಂದೂಕಿನಿಂದ ಸ್ವಾಗತಕೋರಲು ತಿಳಿಸಿದ್ದರಂತೆ. ಇದನ್ನೂ ಓದಿ: ಅದು ನಾಡಬಂದೂಕು ಅಲ್ಲ – ಬೆಂಬಲಿಗರ ನಡೆ ಸಮರ್ಥಿಸಿಕೊಂಡ ಸಚಿವ ಭಗವಂತ ಖೂಬಾ

    ಅವರ ಮಾತು ಕೇಳಿಕೊಂಡು ಈ ನಾಲ್ವರು ಗಾಳಿಯಲ್ಲಿ ಗಂಡು ಹಾರಿಸಿದ್ದಾರೆ. ಸದ್ಯ ಈ ನಾಲ್ವರು ಬಲಿ ಬಾ ಬಕ್ರ ಆಗಿದ್ದು, ಈ ಅಮಾಯಕರನ್ನು ಬಳಸಿಕೊಂಡು ಸ್ಕೆಚ್ ಹಾಕಿದ ಜನಪ್ರತಿನಿಧಿಗಳು ಮಾತ್ರ, ಆರಾಮವಾಗಿ ಓಡಾಡುತ್ತಿದ್ದಾರೆ. ಇವರ ಮಾತು ನಂಬಿ ಕೆಟ್ಟೆವು ಅಂತ ಆರೋಪಿಗಳು ಪಶ್ಚಾತ್ತಾಪ ಪಡುತ್ತಿದ್ದಾರೆ. ಇತ್ತ ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಕೈಯಲ್ಲಿ ಬಂದೂಕು ಹಿಡಿದ ಸಾಕ್ಷಿಯಿದ್ದರೂ ಪೊಲೀಸರು ಮಾತ್ರ ಜಾಣ ನಡೆ ತೋರುತ್ತಿದ್ದಾರೆ.

  • ಅದು ನಾಡಬಂದೂಕು ಅಲ್ಲ – ಬೆಂಬಲಿಗರ ನಡೆ ಸಮರ್ಥಿಸಿಕೊಂಡ ಸಚಿವ ಭಗವಂತ ಖೂಬಾ

    ಅದು ನಾಡಬಂದೂಕು ಅಲ್ಲ – ಬೆಂಬಲಿಗರ ನಡೆ ಸಮರ್ಥಿಸಿಕೊಂಡ ಸಚಿವ ಭಗವಂತ ಖೂಬಾ

    ಯಾದಗಿರಿ: ನಾಡಬಂದೂಕು ಸಿಡಿಸಿ ಸ್ವಾಗತ ಕೋರಿಲ್ಲ ಎಂದು ಹೇಳುವ ಮೂಲಕ ಕೇಂದ್ರ ಸಚಿವ ಭಗವಂತ ಖೂಬಾ ಅವರು ತಮ್ಮ ಬೆಂಬಲಿಗರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಅದನ್ನು ನೋಡಿಲ್ಲ. ಅಲ್ಲಿ ನಾಡ ಬಂದೂಕು ಇರಲಿಲ್ಲ. ಈ ಭಾಗದಲ್ಲಿ ಹಳೆಯ ವ್ಯವಸ್ಥೆ ಇದೆ. ಇತಿಹಾಸ ತೆಗೆದು ಒಂದು ಸಲ ನೋಡಿ. ಪಟಾಕಿ ಪುಡಿ ಹಾಕಿ ಶಬ್ದ ಮಾಡಿದ್ದಾರೆ ಅಷ್ಟೇ ಎಂದು ಹೇಳಿದ್ದಾರೆ.

    ಗುಂಡು ಹಾರಿಸಿಲ್ಲ ಅದನ್ನು ತಿರುಚಬೇಡಿ. ಗುಂಡು ಹಾರಿಸಿದ್ದರೆ ಖುದ್ದು ನಾವೇ ಕರೆಸಿ ಮಾತನಾಡ್ತೀದ್ದೀವಿ. ತಪ್ಪು ಮಾಡಿದ್ರೆ ಸರ್ಕಾರ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೆ. ಅದೊಂದು ವಾಡಿಕೆ ಇದೆ. ದೇವರ ದಯೆಯಿಂದ ಯಾವುದೇ ಅವಘಡ ಆಗಿಲ್ಲ. ಇದು ಸತ್ಯಕ್ಕೆ ದೂರವಾದದ್ದು, ಅದು ನಾಡಬಂದೂಕು ಅಲ್ಲ ಎಂದು ಮತ್ತೆ ಮತ್ತೆ ಹೇಳಿದರು. ಇದನ್ನೂ ಓದಿ: ತಾಲಿಬಾನಿಗಳಿಗಿಂತ ಭಾರತದಲ್ಲಿರೋ ಅವರ ಬೆಂಬಲಿಗರು ಬಹಳ ಡೇಂಜರ್: ಸೂಲಿಬೆಲೆ

    ಏನಿದು ಘಟನೆ..?
    ಯಾದಗಿರಿ ತಾಲೂಕಿನ ಯರಗೋಳ ಗ್ರಾಮದಲ್ಲಿ ನಡೆಯುತ್ತಿದ್ದ ಜನಾರ್ಶೀವಾದ ಕಾರ್ಯಕ್ರಮಕ್ಕೆ ಖೂಬಾ ಆಗಮಿಸಿದ್ದರು. ಈ ವೇಳೆ ಅವರ ಸ್ವಾಗತಕ್ಕೆ ಜನ ನಾಡಬಂದೂಕು ಸಿಡಿಸಿ ಭರ್ಜರಿಯಾಗಿ ಸ್ವಾಗತ ಮಾಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಯರಗೋಳ ಗ್ರಾಮದಲ್ಲಿ ಜನ ಕೇಂದ್ರ ಸಚಿವ ಭಗವಂತ ಖೂಬಾ ಆಗಮನ ಮಾಡುತ್ತಿದ್ದಂತೆ ನಾಡಬಂದೂಕು ಕೈಯಲ್ಲಿ ಹಿಡಿದುಕೊಂಡು ಪುಷ್ಪವನ್ನು ಅರ್ಪಿಸಿ ಭರ್ಜರಿ ಸ್ವಾಗತ ಮಾಡಿದ್ದಾರೆ.

  • ತೋಟದ ಮನೆಯಲ್ಲಿ ನಾಡಬಂದೂಕು ತಯಾರಿಸಿ ಮಾರಾಟ – ಓರ್ವ ಅರೆಸ್ಟ್

    ತೋಟದ ಮನೆಯಲ್ಲಿ ನಾಡಬಂದೂಕು ತಯಾರಿಸಿ ಮಾರಾಟ – ಓರ್ವ ಅರೆಸ್ಟ್

    ಚಿಕ್ಕಬಳ್ಳಾಪುರ: ತೋಟದ ಮನೆಯಲ್ಲಿ ನಾಡಬಂದೂಕು ತಯಾರಿಸಿ ಮಾರಾಟ ಮಾಡುತ್ತಿದ್ದ ಅಸಾಮಿಯನ್ನ ಚಿಕ್ಕಬಳ್ಳಾಪುರ ತಾಲೂಕು ನಂದಿಗಿರಿಧಾಮ ಪೊಲೀಸರು ಬಂಧಿಸಿದ್ದಾರೆ.

    ತಾಲೂಕಿನ ಗುಂಗೀರ್ಲಹಳ್ಳಿ ಗ್ರಾಮದ ಗಂಗಾಧರ್ ಬಂಧಿತ ವ್ಯಕ್ತಿ. ಬಂಧಿತ ಗಂಗಾಧರ್ ಬಳಿ ಎರಡು ನಾಡಬಂದೂಕುಗಳು ಹಾಗೂ ನಾಡಬಂದೂಕು ಮಾಡೋಕೆ ಬೇಕಾಗಿರೋ ಸಲಕರಣೆಗಳು ಹಾಗೂ ಬಂದೂಕಿಗೆ ತುಂಬಲಾಗುವ ಗನ್ ಪೌಡರ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗುಂಗ್ಲೀರ್ಲಹಳ್ಳಿ ಗ್ರಾಮ ಹೊರವಲಯದಲ್ಲಿ ತೋಟದಲ್ಲಿ ಮನೆ ಕಟ್ಟಿಕೊಂಡು ವ್ಯವಸಾಯ ಮಾಡಿಕೊಂಡು ವಾಸವಾಗಿರುವ ಗಂಗಾಧರ್ ನಾಡಬಂದೂಕು ಮಾಡೋದರಲ್ಲಿ ಎಕ್ಸ್ ಫರ್ಟ್ ಆಗಿದ್ದಾನೆ. ತಾನೇ ನಾಡಬಂದೂಕು ತಯಾರಿ ಮಾಡೋಕೆ ಬೇಕಾದ ಕಚ್ಛಾ ಸಾಮಾಗ್ರಿಗಳನ್ನ ಸಂಗ್ರಹಿಸಿ, ತನ್ನ ಮನೆಯ ಮುಂದಿನ ಕುಲುಮೆಯಲ್ಲೇ ನಾಡಬಂದೂಕು ರೆಡಿ ಮಾಡುತ್ತಿದ್ದನು.

    ಹಲವು ದಿನಗಳಿಂದ ಕದ್ದು ಮುಚ್ಚಿ ನಾಡಬಂದೂಕುಗಳನ್ನ ತಯಾರಿಸಿ ಮಾರಾಟ ಮಾಡಿ 5 ರಿಂದ 10 ಸಾವಿರ ರೂಪಾಯಿ ಹಣ ಪಡೆಯುತ್ತಿದ್ದನು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ನಂದಿಗಿರಿಧಾಮ ಪೊಲೀಸರು ನಾಡಬಂದೂಕು ಆರೋಪಿ ಗಂಗಾಧರ್ ಮನೆ ಮೇಲೆ ದಾಳಿ ಮಾಡಿದ್ದಾರೆ. ಈಗಾಗಲೇ ತಯಾರಿಸಿದ್ದ 2 ನಾಡಬಂದೂಕು ಹಾಗೂ ತಯಾರಿ ಮಾಡಲು ಇಟ್ಟುಕೊಂಡಿದ್ದ ಸಲಕರಣೆಗಳನ್ನ ವಶಕ್ಕೆ ಪಡೆದಿದ್ದಾರೆ.

    ಗಂಗಾಧರ್ ಬಳಿ ನಾಡಬಂದೂಕು ಖರೀದಿಸಿದ್ದ ರಾಜಾ ಹನುಮಂತಯ್ಯ ಹಾಗೂ ಅನಿಲ್ ಪೊಲೀಸರ ದಾಳಿ ವೇಳೆ ನಾಡಬಂದೂಕು ರಿಪೇರಿಗೆ ಬಂದು ತಗಲಾಕ್ಕೊಂಡಿದ್ದಾರೆ. ಇಬ್ಬರನ್ನ ವಶಕ್ಕೆ ಪಡೆದಿರುವ ಪೊಲೀಸರು ಅವರ ಬಳಿ ಇದ್ದ ನಾಡಬಂದೂಕು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಸಂಬಂಧ ಗಂಗಾಧರ್ ಹಾಗೂ ಮತ್ರಿಬ್ಬರನ್ನ ವಶಕ್ಕೆ ಪಡೆದಿರುವ ನಂದಿಗಿರಿಧಾಮ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

    ಕಾಡು ಪ್ರಾಣಿಗಳ ಬೇಟೆಯಾಡೋಕೆ ಈ ಅಕ್ರಮ ನಾಡಬಂದೂಕುಗಳ ತಯಾರಿ ಮಾಡಿಕೊಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದ್ದು. ಇದುವರೆಗೂ ಎಷ್ಟು ಜನಕ್ಕೆ ಈ ನಾಡಬಂದೂಕುಗಳನ್ನ ಅಕ್ರಮವಾಗಿ ಮಾಡಿಕೊಟ್ಟಿದ್ರು ಎಂಬ ಮಾಹಿತಿಯನ್ನ ಗಂಗಾಧರ್ ಬಳಿ ಪೊಲೀಸರು ಬಾಯಿಬಿಡಿಸುತ್ತಿದ್ದಾರೆ.