Tag: ನಾಡದೋಣಿ

  • ಬೈಂದೂರು ದೋಣಿ ದುರಂತ- ನಾಲ್ವರು ಮೀನುಗಾರರ ಮೃತದೇಹ ಪತ್ತೆ

    ಬೈಂದೂರು ದೋಣಿ ದುರಂತ- ನಾಲ್ವರು ಮೀನುಗಾರರ ಮೃತದೇಹ ಪತ್ತೆ

    ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ನಾಡದೋಣಿ ದುರಂತದ ನಾಲ್ವರು ಮೀನುಗಾರರ ಮೃತದೇಹ ಪತ್ತೆಯಾಗಿದೆ. ಕೊಡೇರಿ ದೋಣಿ ದುರಂತ ಸ್ಥಳದ ಒಂದೆರಡು ಕಿಲೋಮೀಟರ್ ಆಸುಪಾಸಿನಲ್ಲಿ ಮೃತದೇಹ ಪತ್ತೆಯಾಗಿದೆ.

    ನಾಲ್ವರು ಮೀನುಗಾರರಾದ ಬಿ.ನಾಗರಾಜ ಖಾರ್ವಿ, ಲಕ್ಷ್ಮಣ ಖಾರ್ವಿ, ಶೇಖರ ಖಾರ್ವಿ ಮತ್ತು ಮಂಜುನಾಥ ಖಾರ್ವಿ ಅವರ ಮೃತದೇಹಗಳು ಸಮುದ್ರ ಕಿನಾರೆಯಲ್ಲಿ ಸಿಕ್ಕಿದೆ. ಭಾನುವಾರ ಮಧ್ಯಾಹ್ನ ಕಸುಬು ನಡೆಸಿ ವಾಪಸ್ಸಾಗುವಾಗ ನಾಡದೋಣಿ ಬಂಡೆಗೆ ಡಿಕ್ಕಿಯಾಗಿ ಕಣ್ಮರೆಯಾಗಿದ್ದರು. ಸೋಮವಾರ ಬೆಳಗ್ಗೆ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಬಳಿಯ ನಾಗೂರಿನಲ್ಲಿ ನಾಗ ಖಾರ್ವಿ ಮೃತದೇಹ ಪತ್ತೆಯಾಗಿತ್ತು.

    ರಾತ್ರಿ ಆದ್ರಗೋಳಿಯಲ್ಲಿ ಲಕ್ಷ್ಮಣ ಖಾರ್ವಿ ಮತ್ತು ಶೇಖರ ಖಾರ್ವಿ ಅವರ ಮೃತದೇಹಗಳು ಕಂಡುಬಂದಿವೆ. ನಂತರ ಮಂಜುನಾಥ ಖಾರ್ವಿ ಮೃತದೇಹ ಕೂಡ ಗಂಗೆಬೈಲು ಎಂಬಲ್ಲಿ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಕೋಸ್ಟ್ ಗಾರ್ಡ್, ನುರಿತ ಮುಳುಗು ತಜ್ಞರ ನೆರವು ಪಡೆದರೂ ನಾಪತ್ತೆಯಾದ ಮೀನುಗಾರರಲ್ಲಿ ಮೂವರ ಸುಳಿವು ಸಿಕ್ಕಿರಲಿಲ್ಲ. ಸಮುದ್ರದ ಅಲೆಗಳು ತೀವ್ರಗೊಂಡಿರುವುದು ಕಾರ್ಯಾಚರಣೆಯೂ ಹಿನ್ನಡೆಯಾಗಿತ್ತು. ಆಗ ಡ್ರೋನ್ ಮೊರೆ ಹೋಗಲಾಗಿತ್ತು.

    ಈ ವೇಳೆ ಡ್ರೋನ್ ಕ್ಯಾಮೆರಾವು ಕೊಡೇರಿ ಅಳಿವೆ ಬಾಗಿಲಿನಿಂದ ಸುಮಾರು ಅರ್ಧ ಕಿ.ಮೀ. ಒಳಗೆ ಶವವೊಂದು ತೇಲುತ್ತಿರುವ ಛಾಯಾಚಿತ್ರವನ್ನು ಸೆರೆ ಹಿಡಿದಿತ್ತು. ಅದು ಶೇಖರ ಖಾರ್ವಿ ಅವರದ್ದಾಗಿದ್ದು, ದುರ್ಘಟನೆ ನಡೆದ ಸ್ಥಳದಿಂದ 1 ಕಿ.ಮೀ. ದೂರದಲ್ಲಿ ಸಮುದ್ರ ತೀರಕ್ಕೆ ಮೃತದೇಹ ತೇಲಿ ಬಂದಿದೆ. ಸರ್ಕಾರ ಶೀಘ್ರ ಪರಿಹಾರ ಕೊಡಬೇಕು, ಮೀನುಗಾರರ ಸುರಕ್ಷತಾ ಕ್ರಮ ಕಡ್ಡಾಯ ಮಾಡಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

  • ಏಪ್ರಿಲ್ 15ರಿಂದ 14,000 ನಾಡದೋಣಿಗಳಿಂದ ಮೀನುಗಾರಿಕೆ ಆರಂಭ

    ಏಪ್ರಿಲ್ 15ರಿಂದ 14,000 ನಾಡದೋಣಿಗಳಿಂದ ಮೀನುಗಾರಿಕೆ ಆರಂಭ

    -ನಿಯಮ ಕಾಪಾಡಿ, ಸರ್ಕಾರಕ್ಕೆ ಸಹಕಾರ ನೀಡಿ: ಸಚಿವ ಕೋಟ ಮನವಿ

    ಉಡುಪಿ: ಕೊರೊನಾ ಲಾಕ್‍ಡೌನ್ ನಡುವೆಯೂ ಮೀನುಗಾರಿಕೆಗೆ ವಿನಾಯಿತಿ ಕೊಡಲಾಗಿದೆ. ರಾಜ್ಯಾದ್ಯಂತ ಹದಿನಾಲ್ಕು ಸಾವಿರ ನಾಡ ದೋಣಿಗಳು ಏಪ್ರಿಲ್ 15ರಿಂದ ಕಸುಬು ಆರಂಭಿಸಲಿದೆ. ಆದ್ರೆ ಸಮುದ್ರದ ಮೀನು ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಗೆ ಪೂರೈಕೆ ಆಗಲ್ಲ.

    ಮೀನು ಅಗತ್ಯ ಆಹಾರ. ಸರ್ಕಾರ ಮೀನುಗಾರಿಕೆಗೆ ಕೊಟ್ಟ ವಿನಾಯಿತಿಯನ್ನು ಯಾರೂ ಕೂಡ ದುರುಪಯೋಗಪಡಿಸಿಕೊಳ್ಳಬಾರದು. ಸರ್ಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಿನಲ್ಲಿ ಅನುಸರಿಸಬೇಕು ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಎಚ್ಚರಿಕೆ ನೀಡಿದರು.

    ರಾಜ್ಯಾದ್ಯಂತ ಸುಮಾರು ಹದಿನಾಲ್ಕು ಸಾವಿರ ನಾಡದೋಣಿಗಳು ಸಮುದ್ರಕ್ಕೆ ನದಿಗೆ ಮತ್ತು ಕೆರೆಗಳಿಗೆ ಇಳಿಯಲಿವೆ. ನಾಡದೋಣಿ ಮೀನುಗಾರರು ಮತ್ತು ದಡದಲ್ಲಿ ಬಲೆ ಬೀಸಿ ಹಿಡಿದ ಮೀನುಗಳು ಯಾವುದೇ ಕಾರಣಕ್ಕೂ ಬಂದರಿಗೆ ತರಕೂಡದು. ಬಂದರಿಗೆ ಮೀನು ಬಾರದೆ ಅದು ಮಾರುಕಟ್ಟೆಯಲ್ಲಿ ಮತ್ತು ಗ್ರಾಹಕರ ಮನೆ ಮನೆಗೆ ವಿಲೇವಾರಿ ಆಗಬೇಕು. ಈ ಬಗ್ಗೆ ಜಿಲ್ಲಾಡಳಿತ  ಮೀನುಗಾರಿಕಾ ಇಲಾಖೆ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ.

    ಮೀನನ್ನು ಗ್ರಾಹಕರಿಗೆ ಮಾರಾಟ ಮಾಡುವಾಗಲೂ ಸಾಮಾಜಿಕ ಅಂತರ ಮತ್ತು ಶುಚಿತ್ವವನ್ನು ಕಾಪಾಡಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದರು. ಮೀನು ಮೂರು ಜಿಲ್ಲೆಯಲ್ಲಿ ಯಾವುದೇ ಬಂದರಿಗೆ ಬರಲ್ಲ, ಮನೆ ಮನೆಗೆ ಸಪ್ಲೈ ಆಗುತ್ತೆ ಎಂದಿದ್ದಾರೆ. ಒಳನಾಡಿನ ಮೀನುಗಾರರಿಗೂ ಮುಕ್ತ ಅವಕಾಶವಿದೆ.

    ಆದ್ರೆ ಸದ್ಯ ಕರಾವಳಿ ಮೀನು ಬೆಂಗಳೂರಿಗೆ ರವಾನೆಯಾಗಲ್ಲ. ಜಿಲ್ಲೆಯ ಒಳಗಿನ ಗ್ರಾಹಕರ ಬೇಡಿಕೆಯನ್ನು ನಾವು ಮೊದಲು ಪೂರೈಕೆ ಮಾಡುತ್ತೇವೆ. ತರಕಾರಿ ದಿನಸಿ ವಸ್ತುಗಳು ಮಾತ್ರ ಜಿಲ್ಲೆಯ ಗಡಿಯನ್ನು ದಾಟಿ ಹೊರ ಜಿಲ್ಲೆಗೆ ಮತ್ತು ಬೆಂಗಳೂರಿಗೆ ಹೋಗಲಿದೆ. ಈ ವಸ್ತುಗಳ ಜೊತೆ ಅರಬ್ಬಿ ಸಮುದ್ರದಲ್ಲಿ ಹಿಡಿದ ಮೀನು ಜಿಲ್ಲಾ ಗಡಿ ದಾಟಿ ಹೊರಗೆ ಹೋಗುವುದಿಲ್ಲ. ಸಾಧಾರಣ ಒಂದು ವಾರದಲ್ಲಿ ನಮಗೆ ಪೂರ್ಣ ಚಿತ್ರಣ ದೊರೆಯಲಿದೆ. ಆ ನಂತರ ಜಿಲ್ಲಾಡಳಿತದ ಜೊತೆ ಮಾತನಾಡಿ ಮಾರ್ಗಸೂಚಿ ಸಿದ್ಧ ಮಾಡುತ್ತೇವೆ ಎಂದು ಹೇಳಿದರು.

    ನಾಡದೋಣಿ ಮೀನುಗಾರರು ಮೀನುಗಾರಿಕೆ ಮಾಡುವಾಗ ಬಹಳ ಎಚ್ಚರಿಕೆಯನ್ನು ವಹಿಸಬೇಕು. ಐದು ಜನಕ್ಕಿಂತ ಹೆಚ್ಚು ಜನ ಸಮುದ್ರಕ್ಕೆ ಹೋಗಬಾರದು. ತಮ್ಮ ಜೀವಕ್ಕೆ ಯಾವುದೇ ಅಪಾಯವನ್ನ ತಂದುಕೊಳ್ಳಬಾರದು ಎಂದು ಮೀನುಗಾರಿಕಾ ಸಚಿವರು ಸಲಹೆ ನೀಡಿದರು.