Tag: ನಾಟಕ ಪ್ರದರ್ಶನ

  • ಕಲಾವಿದರಿಗೆ ಬಣ್ಣ ಹಚ್ಚಲು ಅವಕಾಶ ಮಾಡಿಕೊಟ್ಟ ಉಡುಪಿ ಡಿಸಿ

    ಕಲಾವಿದರಿಗೆ ಬಣ್ಣ ಹಚ್ಚಲು ಅವಕಾಶ ಮಾಡಿಕೊಟ್ಟ ಉಡುಪಿ ಡಿಸಿ

    ಉಡುಪಿ: ಕೊರೋನ ಮಹಾಮಾರಿ ಆರ್ಥಿಕತೆಗೆ, ಎಲ್ಲಾ ಸ್ತರದ ಜನಜೀವನಕ್ಕೆ ಕಾಟ ಕೊಟ್ಟಿದೆ. ಉಡುಪಿ ಜಿಲ್ಲೆಯಲ್ಲಿ 15-20 ನಾಟಕ ತಂಡಗಳು ವೃತ್ತಿಪರವಾಗಿ ನಾಟಕ ಪ್ರದರ್ಶನ ಮಾಡುತ್ತಿದ್ದು, ಕೋವಿಡ್ ಸಂದಿಗ್ಧದಿಂದ ಕಳೆದ 10 ತಿಂಗಳಿನಿಂದ ನಾಟಕ ಪ್ರದರ್ಶನವಾಗದೆ ಸಾವಿರಾರು ಕಲಾವಿದರ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ.

    ಸಾಂಸ್ಕೃತಿಕ ನಗರಿ ಉಡುಪಿಯಲ್ಲಿ ನಾಟಕ ಪ್ರದರ್ಶನಕ್ಕೆ ಅನುಮತಿ ಕೋರಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು. ಉಡುಪಿ ಜಿಲ್ಲೆಯ ವೃತ್ತಿಪರ ನಾಟಕ ತಂಡಗಳ ಪರವಾಗಿ ಸಮಾಜರತ್ನ ಲೀಲಾಧರ ಶೆಟ್ಟಿ ಕರಂದಾಡಿ ಅವರ ಮುಂದಾಳತ್ವದಲ್ಲಿ ತೆರಳಿದ ನಿಯೋಗವು, ನಾಟಕ ಪ್ರದರ್ಶನಕ್ಕೆ ಅವಕಾಶ ಕೊಡಬೇಕು ಎಂದು ಬೇಡಿಕೆಯಿಟ್ಟಿದೆ.

    ಸಹಸ್ರಾರು ನಾಟಕ ಕಲಾವಿದರು ಹಾಗೂ ತಂತ್ರಜ್ಞರು ಆರ್ಥಿಕವಾಗಿ ನಾಟಕವನ್ನೇ ಅವಲಂಬಿಸಿದ್ದಾರೆ. ಪ್ರತೀ ಕಲಾವಿದರನ್ನು ಅವಲಂಬಿಸಿ ಅವರ ಕುಟುಂಬವಿದ್ದು, ದಿಕ್ಕು ತೋಚದಂತಾಗಿದೆ. ಆದ್ದರಿಂದ ನಾಟಕ ಪ್ರದರ್ಶನಕ್ಕೆ ಅನುಮತಿಸುವಂತೆ ಒತ್ತಾಯಿಸಿತು.

    ಮನವಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ ಜಿ. ಜಗದೀಶ್ ತಕ್ಷಣ ಸ್ಪಂದಿಸಿ, ಸರ್ಕಾರದ ಕೋವಿಡ್-19 ನಿಯಮಗಳನ್ನು ಪಾಲಿಸಿಕೊಂಡು ನಾಟಕ ಪ್ರದರ್ಶನ ನಡೆಸಲು ಅನುಮತಿ ನೀಡಿದರು. ಜಿಲ್ಲಾಧಿಕಾರಿ ಯವರ ತ್ವರಿತ ಆದೇಶಕ್ಕೆ ಕಲಾವಿದರು ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ.

    ನಿಯೋಗದಲ್ಲಿ ಚೈತನ್ಯ ಕಲಾವಿದರು ಬೈಲೂರು ತಂಡದ ಪ್ರಸನ್ನ ಶೆಟ್ಟಿ, ಕಾಪು ರಂಗತರಂಗ ತಂಡದ ಶರತ್ ಉಚ್ಚಿಲ ಹಾಗೂ ಮರ್ವಿನ್ ಶಿರ್ವ, ತೆಲಿಕೆದ ತೆನಾಲಿ ಕಾರ್ಕಳ ತಂಡದ ಸುನೀಲ್ ನೆಲ್ಲಿಗುಡ್ಡೆ, ಅಭಿನಯ ಕಲಾವಿದರು ಉಡುಪಿ ತಂಡದ ಉಮೇಶ್ ಅಲೆವೂರು, ಕಾರ್ತಿಕ್ ಕಡೆಕಾರ್, ವಿಕ್ರಮ್ ಮಂಚಿ, ನವಸುಮ ಕೊಡವೂರು ತಂಡದ ಬಾಲಕೃಷ್ಣ ಕೊಡವೂರು, ಕಲಾಚಾವಡಿ ಉಡುಪಿ ತಂಡದ ಪ್ರಭಾಕರ್ ಆಚಾರ್ಯ ಮೂಡುಬೆಳ್ಳೆ, ಸಿಂಧೂರ ಕಲಾವಿದರು ಕಾರ್ಕಳ ತಂಡದ ಹಮೀದ್ ಮಿಯಾರು ಹಾಗೂ ಸಂದೀಪ್ ಬಾರಾಡಿ, ನಮ್ಮ ಕಲಾವಿದರು ಪಿತ್ರೋಡಿ ತಂಡದ ನವೀನ್ ಸಾಲ್ಯಾನ್ ಪಿತ್ರೋಡಿ, ಸಾಕ್ಷಿ ಕಲಾವಿದರು ಬೆಳಪು ತಂಡದ ಶುಭಕರ್ ಬೆಳಪು ಮೊದಲಾದವರು ಉಪಸ್ಥಿತರಿದ್ದರು.

  • ಸಿಎಎ ವಿರೋಧಿ ನಾಟಕ ಪ್ರದರ್ಶನ- ಎಫ್‍ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾ

    ಸಿಎಎ ವಿರೋಧಿ ನಾಟಕ ಪ್ರದರ್ಶನ- ಎಫ್‍ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾ

    – ಶಾಹೀನ್ ಶಾಲೆಯಲ್ಲಿ ನಾಟಕ ಪ್ರದರ್ಶನ

    ನವದೆಹಲಿ: ರಾಜಕೀಯ ಪಕ್ಷಗಳು ದೇಶದ್ರೋಹ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಆದ್ದರಿಂದ ಸೂಕ್ತ ಮಾರ್ಗಸೂಚಿಗಳನ್ನು ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಈ ಮೂಲಕ ಬೀದರ್‍ನ ಶಾಹೀನ್ ಶಾಲೆಯಲ್ಲಿ ಸಿಎಎ ವಿರೋಧಿ ನಾಟಕ ಪ್ರದರ್ಶನ ಪ್ರಕರಣಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕುರಿತು ವಿಚಾರಣೆ ನಡೆಸಲು ನಿರಾಕರಿಸಿದೆ.

    ಬೀದರ್ ನ ಶಾಲೆಯಲ್ಲಿ ಸಿಎಎ ವಿರೋಧಿ ನಾಟಕ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಶಾಲೆಯ ಆಡಳಿತ ಮಂಡಳಿ ಮತ್ತು ಪೋಷಕ ವಿರುದ್ಧ ದಾಖಲಿಸಿರುವ ದೇಶದ್ರೋಹದ ಎಫ್‍ಐಆರ್ ರದ್ದುಪಡಿಸಬೇಕು. ದೇಶ ದ್ರೋಹ ಕಾಯ್ದೆಯ ದುರ್ಬಳಕೆ ಆಗುತ್ತಿರುವುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ಯೋಗಿತಾ ಭಯಾನಾ ಅವರು ಅರ್ಜಿ ಸಲ್ಲಿಸಿದ್ದರು.

    ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎ.ಎಂ ಖಾನ್ವಿಲ್ಕರ್ ನೇತೃತ್ವದ ದ್ವಿ ಸದಸ್ಯ ಪೀಠ, ಎಫ್‍ಐಆರ್ ರದ್ದು ಕೋರಿ ಆರೋಪಿಗಳು ಅರ್ಜಿ ಸಲ್ಲಿಸಬೇಕು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಡಿ ಇದನ್ನು ವಿಚಾರಣೆ ನಡೆಸಲು ಸಾಧ್ಯವಿಲ್ಲ. ದೇಶದ್ರೋಹದ ಕೇಸ್ ದಾಖಲು ಮಾಡಲು ಈಗಾಗಲೇ ನಿರ್ದೇಶನಗಳಿವೆ ಮತ್ತೆ ಅವುಗಳನ್ನು ಉಲ್ಲೇಖಿಸುವ ಅಗತ್ಯ ಇಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿತು.

    ಸಿಎಎ ವಿರೋಧಿಸಿವ ನಾಟಕವನ್ನು ವೇದಿಕೆ ಮೇಲೆ ಪ್ರದರ್ಶನ ಮಾಡಿದ ಹಿನ್ನೆಲೆ ಶಾಹೀನ್ ಶಾಲೆಯ ಆಡಳಿತ ಮಂಡಳಿ ಮುಖ್ಯಸ್ಥ, ಮುಖ್ಯ ಶಿಕ್ಷಕಿ ಫರೀದಾ ಬೇಗಂ ಹಾಗೂ ವಿದ್ಯಾರ್ಥಿಯೊಬ್ಬರ ಪಾಲಕರಾದ ಅನುಜಾ ಮಿನ್ಸಾ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ, ಬಂಧಿಸಲಾಗಿತ್ತು. ಬೀದರ್ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ಶಾಲಾ ಆಡಳಿತ ಮಂಡಳಿಯ 5 ಜನರಿಗೆ ನಿರೀಕ್ಷಣಾ ಜಾಮೀನು ನೀಡಿದೆ.