Tag: ನಾಟಕ ಕಂಪನಿ

  • ನಾಟಕ ಕಂಪನಿಗಳಿಗೂ ತಟ್ಟಿತು ಲೋಕಸಭಾ ಚುನಾವಣೆಯ ಬಿಸಿ- ಹೀಗೆ ಆದ್ರೆ ಅನ್ನ ತಿನ್ನೋದು ಹೇಗೆ?

    ನಾಟಕ ಕಂಪನಿಗಳಿಗೂ ತಟ್ಟಿತು ಲೋಕಸಭಾ ಚುನಾವಣೆಯ ಬಿಸಿ- ಹೀಗೆ ಆದ್ರೆ ಅನ್ನ ತಿನ್ನೋದು ಹೇಗೆ?

    – ರಾತ್ರಿ ನಾಟಕ ಆಯೋಜಿಸದಂತೆ ಆಯೋಗದಿಂದ ಸೂಚನೆ
    – ನಾಟಕ ಮಾಡದೇ ಇದ್ದರೆ ನಾವು ಬದುಕೋದು ಹೇಗೆ – ಕಲಾವಿದರ ಪ್ರಶ್ನೆ

    ಬಳ್ಳಾರಿ: ಲೋಕಸಭಾ ಚುನಾವಣೆಯ ಬಿಸಿ ನಾಟಕ ಕಂಪನಿಗಳಿಗೂ ತಟ್ಟಿದೆ. ಕೂಟ್ಟೂರಿನ ಶ್ರೀ ಗುರು ಕೊಟ್ಟೂರೇಶ್ವರ ರಥೋತ್ಸವ ನಿಮಿತ್ತ ಹಲವು ನಾಟಕ ಕಂಪನಿಗಳು ಪ್ರದರ್ಶನ ನೀಡುತ್ತಿವೆ. ಆದರೆ ಇದೀಗ ರಾತ್ರಿ 10 ಗಂಟೆಯ ನಂತರ ಶೋ ನಡೆಸದಂತೆ ಚುನಾವಣಾಧಿಕಾರಿಗಳು ತಾಕೀತು ಮಾಡಿರುವುದು ಬಡ ಕಲಾವಿದರ ಹೊಟ್ಟೆ ಮೇಲೆ ಹೊಡೆದಂತಾಗಿದೆ.

    ರಾತ್ರಿ ಶೋ ನಡೆದರೆ ಮಾತ್ರ ಬಡ ಕಲಾವಿದರಿಗೆ ದುಡಿಮೆ ಹೊಟ್ಟೆಗೆ ಅನ್ನವಾಗಿದೆ. ಹೀಗಾಗಿ ರಾಜ್ಯದ ಯಾವ ನಾಟಕ ಕಂಪನಿಗಳಿಗೆ ಇರದ ನಿಯಮ ಬಳ್ಳಾರಿಯ ಕೊಟ್ಟೂರು ಪಟ್ಟಣದಲ್ಲಿ ಇರುವ ಗುಬ್ಬಿ ನಾಟಕ ಕಂಪನಿಗಳಿಗೆ ಮಾತ್ರ ನೀತಿ ಸಂಹಿತೆ ಬಿಸಿನಾ ಎಂದು ಕಲಾವಿದರು ಪ್ರಶ್ನೆ ಮಾಡುತ್ತಿದ್ದಾರೆ.

    ಎಲ್ಲ ಜಿಲ್ಲೆಯಲ್ಲೂ ನಡೆಯುವಂತಹ ಜಾತ್ರೆಯಲ್ಲಿ ಕಲಾವಿದರು ನಾಟಕ ಪ್ರದರ್ಶನ ಮಾಡುತ್ತಾರೆ. ಹೀಗಾಗಿ ನಾಟಕ ಕಂಪನಿಗಳಿಗೆ ಜಾತ್ರೆಗಳೇ ಆದಾಯವಾಗಿವೆ. ಬಳ್ಳಾರಿಯ ಕೊಟ್ಟೂರು ಪಟ್ಟಣದಲ್ಲಿ ಎರಡು ನಾಟಕ ಕಂಪನಿಗಳು ಬೀಡುಬಿಟ್ಟಿವೆ. ಆದರೆ ಅಧಿಕಾರಿಗಳು ರಾತ್ರಿ ವೇಳೆ ಪ್ರದರ್ಶನ ಮಾಡಬಾರದು ಎಂದು ನೋಟಿಸ್ ಕೊಟ್ಟಿದ್ದಾರೆ. ಸಿನಿಮಾಗಳಿಗೆ ಇಲ್ಲದ ನೀತಿ ಸಂಹಿತೆ, ನಾಟಕ ಕಂಪನಿಗಳಿಗೆ ಏಕೆ ಎಂದು ಕಲಾವಿದರು ಪ್ರಶ್ನೆ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಷ್ಟದಲ್ಲಿದ್ದ ನಾಟಕ ಕಂಪನಿಯ ಕೈ ಹಿಡಿದ ನಟಿ ಉಮಾಶ್ರೀ – ದೊಡ್ಡಬಳ್ಳಾಪುರದಲ್ಲಿ ಹೌಸ್‍ಫುಲ್ ಪ್ರದರ್ಶನ

    ನಷ್ಟದಲ್ಲಿದ್ದ ನಾಟಕ ಕಂಪನಿಯ ಕೈ ಹಿಡಿದ ನಟಿ ಉಮಾಶ್ರೀ – ದೊಡ್ಡಬಳ್ಳಾಪುರದಲ್ಲಿ ಹೌಸ್‍ಫುಲ್ ಪ್ರದರ್ಶನ

    ಚಿಕ್ಕಬಳ್ಳಾಪುರ: ಬಣ್ಣದ ಬದುಕಿನಿಂದ ದೂರ ಉಳಿದಿದ್ದ ಮಾಜಿ ಸಚಿವೆ ಉಮಾಶ್ರೀ ಅವರು ನಷ್ಟದಲ್ಲಿದ್ದ ನಾಟಕ ಕಂಪನಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಮತ್ತೆ ಚಾಮುಂಡೇಶ್ವರಿ ಪಾತ್ರಕ್ಕೆ ಬಣ್ಣ ಹಚ್ಚಿ ಅಭಿಮಾನಿಗಳನ್ನು ರಂಜಿಸಿದ್ದಾರೆ.

    ಮೂಲತಃ ರಂಗಭೂಮಿ ಕಲಾವಿದೆಯಾಗಿರುವ ಉಮಾಶ್ರೀ ಅವರು, ಕುಮಾರೇಶ್ವರ ನಾಟಕ ಮಂಡಳಿಯ ಕಲಾವಿದೆಯಾಗಿದ್ದರು. ಆದರೆ ಈಗ ಈ ನಾಟಕಮಂಡಳಿ ನಷ್ಟದಲ್ಲಿದೆ ಎನ್ನುವ ವಿಚಾರ ತಿಳಿದ ಉಮಾಶ್ರೀ ಚಾಮುಂಡಿ ಪಾತ್ರಕ್ಕೆ ಬಣ್ಣ ಹಚ್ಚುವ ಮೂಲಕ ತಮ್ಮ ನಾಟಕ ಕಂಪನಿಯ ಕಷ್ಟದಲ್ಲಿ ಜೊತೆಯಾಗಿದ್ದಾರೆ.

    ಮಹಿಷಾಸುರ ಮರ್ಧಿನಿ ಪೌರಾಣಿಕ ನಾಟಕದಲ್ಲಿ ಚಾಮುಂಡಿಯ ಪಾತ್ರದಲ್ಲಿ ನಟಿಸಿದ ಉಮಾಶ್ರೀ ಅವರ ರೌದ್ರನಟನೆಯನ್ನು ನೋಡಿ ಪೇಕ್ಷಕರು ಮನಸೊರೆಗೊಂಡರು. ಚಾಮುಂಡಿ ಅವತಾರದಲ್ಲಿ ಉಮಾಶ್ರೀಯನ್ನ ಕಣ್ತುಂಬಿಕೊಂಡ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಖುಷಿಪಟ್ಟರು.

    ಚಿತ್ರದುರ್ಗ ಮೂಲದ ಕುಮಾರಸ್ವಾಮಿ ಮಾಲೀಕತ್ವದ ಕುಮಾರೇಶ್ವರ ನಾಟಕ ಕಂಪನಿ ದೊಡ್ಡಬಳ್ಳಾಪುರ ನಗರದ ಕೋರ್ಟ್ ಬಳಿ ಟೆಂಟ್ ಹಾಕಿ ನಾಟಕ ಪ್ರದರ್ಶನ ನಡೆಸುತ್ತದೆ. ಮೂರು ತಿಂಗಳಿಂದ ಪ್ರತಿದಿನ ಎರಡು ಪ್ರದರ್ಶನ ನಡೆಯುತ್ತಿದ್ದರೂ ನಾಟಕ ನೋಡಲು ಜನ ಮಾತ್ರ ಬರುತ್ತಿರಲಿಲ್ಲ. ಪ್ರತಿ ಪ್ರದರ್ಶನದಲ್ಲಿ ಬೆರಳೆಣಿಕೆಯ ಜನ ಮಾತ್ರ ನಾಟಕ ನೋಡಲು ಬರುತ್ತಿದ್ದರು. ಪ್ರತಿ ಪ್ರದರ್ಶನಕ್ಕೆ 10 ಸಾವಿರ ರೂ. ಖರ್ಚಾಗುತ್ತಿತ್ತು. ಆದರೆ ಪ್ರತಿ ಪ್ರದರ್ಶನದಲ್ಲಿ 2 ಸಾವಿರ ರೂ. ಮಾತ್ರ ಕಲೆಕ್ಷನ್ ಆಗುತ್ತಿತ್ತು. ಇದರಿಂದ 4 ಲಕ್ಷ ರೂ. ನಷ್ಟ ಉಂಟಾಗಿತ್ತು. ಒಂದೆಡೆ ಕಲಾವಿದರಿಗೆ ಸಂಬಳ ನೀಡಲು ಹಣ ಇಲ್ಲದೇ ಇದ್ದರೆ ಮತ್ತೊಂದೆಡೆ ಬೇರೆ ಊರಿಗೆ ನಾಟಕ ಸಾಮಗ್ರಿ ಸಾಗಿಸಲು ಸಹ ಹಣವಿರಲಿಲ್ಲ. ಈ ವಿಚಾರ ತಿಳಿದ ಉಮಾಶ್ರೀ ಅವರು ನಾಟಕ ಕಂಪನಿಗೆ ನೆರವು ನೀಡಲು ಬಣ್ಣ ಹಚ್ಚಿದ್ದಾರೆ.

    ಉಮಾಶ್ರೀ ಅವರು ಚಾಮುಂಡಿ ಪಾತ್ರದಲ್ಲಿ ಅಭಿನಯಿಸುತ್ತಿರುವ ವಿಷಯ ಕೇಳಿ ನಾಟಕ ಪ್ರದರ್ಶನಕ್ಕೆ ಜನಸಾಗರವೇ ಹರಿದು ಬಂದಿತ್ತು. ನಾಟಕ ಹೌಸ್ ಫುಲ್ ಪ್ರದರ್ಶನ ಕಂಡಿದ್ದು, ನಷ್ಟದಲ್ಲಿ ನಡೆಯುತ್ತಿದ್ದ ನಾಟಕ ಕಂಪನಿಯ ಕಲೆಕ್ಷನ್ ಜೋರಾಗಿತ್ತು. ಇದರ ಜೊತೆಗೆ ದೊಡ್ಡಬಳ್ಳಾಪುರ ನಗರದ ಕನ್ನಡಪರ ಸಂಘಟನೆಗಳು ಮತ್ತು ಕಲಾಭಿಮಾನಿಗಳ ನೆರವಿನ ಮಹಾಪೂರವೇ ಹರಿದು ಬಂದು ಉಮಾಶ್ರೀ ಅವರ ಅಭಿನಯವನ್ನು ಕಣ್ತುಬಿಕೊಂಡಿದ್ದಾರೆ. ಜನರ ಸಹಾಯದಿಂದ ತಮ್ಮ ನಾಟಕ ಕಂಪನಿಯನ್ನು ಉಮಾಶ್ರೀ ಅವರು ಬಹಳ ಸಂತೋಷದಿಂದ ದಾವಣಗೆರೆಗೆ ಕರೆದುಕೊಂಡು ಹೋಗಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv