Tag: ನಾಟಕೋತ್ಸವ

  • ಡಿ. 26ರಿಂದ ‘ರಂಗಪಯಣ’ ತಂಡದಿಂದ ನಟ ಶಂಕರ್ ನಾಗ್ ಹೆಸರಿನಲ್ಲಿ ನಾಟಕೋತ್ಸವ

    ಡಿ. 26ರಿಂದ ‘ರಂಗಪಯಣ’ ತಂಡದಿಂದ ನಟ ಶಂಕರ್ ನಾಗ್ ಹೆಸರಿನಲ್ಲಿ ನಾಟಕೋತ್ಸವ

    ರಂಗಕರ್ಮಿ, ನಾಡಿನ ಹೆಸರಾಂತ ಸಿನಿಮಾ ನಟ ಹಾಗೂ ನಿರ್ದೇಶಕ ಶಂಕರ್ ನಾಗ್ ಹೆಸರಿನಲ್ಲಿ ರಂಗಪಯಣ ತಂಡವು ‘ಶಂಕರ್ ನಾಗ್ ನಾಟಕೋತ್ಸವ’ವನ್ನು ಆಯೋಜನೆ ಮಾಡಿದೆ. ಡಿಸೆಂಬರ್ 26 ರಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ನಾಟಕೋತ್ಸವದಲ್ಲಿ ಹಲವು ತಂಡಗಳು ಭಾಗಿಯಾಗಲಿವೆ.

    ನಾಟಕೋತ್ಸವಕ್ಕೆ ಡಿ.26ರಂದು ಚಾಲನೆ ಸಿಗಲಿದ್ದು, ಅಂದು ಸಂಜೆ 6 ಗಂಟೆಗೆ ಸಾತ್ವಿಕ ರಂಗತಂಡದವರಿಂದ ರಂಗಗೀತೆ ಹೇಳುವ ಮೂಲಕ ಚಾಲನೆ ನೀಡಲಾಗುತ್ತಿದೆ. ಅವತ್ತು ಸಂಜೆ 6:30ಕ್ಕೆ ‘ನೀನಾರಿಗಲ್ಲಾದವಳು ಬಿದಿರು’ ಕಾರ್ಯಕ್ರಮವನ್ನು ಪ್ರಸ್ತುತಿ ಪಡಿಸಲಾಗುತ್ತಿದೆ. ನಂತರ ನರಸಿಂಹ ಮೂರ್ತಿ, ಉಮಾ ವೈ.ಜಿ ಹಾಗೂ ತಾಯಿ ಲೋಕೇಶ್ ಅವರಿಗೆ ಶಂಕರ್ ನಾಗ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಬನಶಂಕರಿ ಅಂಗಡಿ, ಬಲವಂತ್ ರಾವ್ ಪಾಟೀಲ್, ಸಂದೇಶ ಜವಳಿ, ಕೆ.ಎಸ್.ಡಿ.ಎಲ್ ಚಂದ್ರು, ಗಂಗಾಧರ್, ರಮೇಶ್ ಭಟ್ ಮತ್ತು ಮಂಡ್ಯ ರಮೇಶ್ ಅವರು ಅಂದು ವೇದಿಕೆಯ ಮೇಲೆ ಇರಲಿದ್ದಾರೆ. ಸಂಜೆ 7:30ಕ್ಕೆ ಭೂಮಿಕ ತಂಡದ, ಮಾಲತೇಶ್ ಬಡಿಗೇರ್ ನಿರ್ದೇಶನ ಮಾಡಿರುವ ನಿರಂಜನರ ‘ಚಿರಸ್ಮರಣೆ’ ನಾಟಕದ ಪ್ರದರ್ಶನ ಕೂಡ ಇರಲಿದೆ.

    ಡಿಸೆಂಬರ್ 27ರಂದು ಸಂಜೆ 5 ಗಂಟೆಗೆ ಮಕ್ಕಳ ರಂಗಭೂಮಿ ಕುರಿತಾದ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಸುಷ್ಮಾ ಎಸ್.ವಿ ಮತ್ತು ಚಂದ್ರಕೀರ್ತಿ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮನಸ್ವಿನಿ ಮತ್ತು ದಕ್ಷ ಮಂಜುನಾಥ್ ಗೌಡ ಮಕ್ಕಳಿಂದ ‘ಕಥೆ ಹೇಳುವ ಮಕ್ಕಳು’ ಕಾರ್ಯಕ್ರಮ ಕೂಡ ಇದೆ. ಸಂಜೆ 6:05ಕ್ಕೆ ಕಥನವಾದ ಸಂಕಥನ ಕಾರ್ಯಕ್ರಮ ಕೂಡ ಆಯೋಜನೆಗೊಂಡಿದ್ದು ಡಾ.ಲಕ್ಷ್ಮಿ ಬಿ ಪ್ರಸಾದ್ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ. ಅಂದು ಸಂಜೆ 7:15ಕ್ಕೆ ದೃಶ್ಯಕಾವ್ಯ ತಂಡದಿಂದ, ನಂಜುಂಡೇ ಗೌಡ ಸಿ ನಿರ್ದೇಶನ ಮಾಡಿರುವ, ಡಿ.ಕೆ.ಚೌಟ ರಚನೆಯ ‘ಹುಲಿ ಹಿಡಿದ ಕಡಸು’ ನಾಟಕವನ್ನು ಪ್ರದರ್ಶಿಸಲಾಗುತ್ತದೆ. ಇದನ್ನೂ ಓದಿ: ಪುನೀತ್ ಬಯೋಗ್ರಫಿ ‘ನೀನೇ ರಾಜಕುಮಾರ’ 4ನೇ ಆವೃತ್ತಿ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ ಕುಮಾರ

    ಡಿಸೆಂಬರ್ 28 ರಂದು ಸಂಜೆ 5ಕ್ಕೆ ಮನಜನ ಅರ್ಪಿಸುವ ಪದ್ಯ ಕಾರ್ಯಕ್ರಮವಿದ್ದು, ಎಂ.ಆರ್. ಕಮಲ, ಮೌಲ್ಯ ಸ್ವಾಮಿ, ಚೇತನ ಪ್ರಸಾದ್, ವಸಂತ ಕೃಷ್ಣಮೂರ್ತಿ, ಅಮೃತಾ ಹೆಗಡೆ, ಮುರಳಿ ಮೋಹನ ಕಾಟಿ, ಅರಕಲಗೂಡು ಜಯರಾಮ್, ಗಿರೀಶ್ ಹಂದಲಗೆರೆ, ಅಶ್ವಿನಿ ಕೋಟ್ಯಾನ್, ಸಂಯುಕ್ತ ಪುಲಿಗಲ್ ಇವರುಗಳು ಕವಿತೆಯನ್ನು ವಾಚಿಸಲಿದ್ದಾರೆ. ಸಂಜೆ 6ಕ್ಕೆ ಜ್ಯೋತಿ ಹಿಟ್ನಾಳ್ ಅವರ ಮುಟ್ಟು ಮತ್ತು ಆರೋಗ್ಯ ಪುಸ್ತಕ ಬಿಡುಗಡೆಗೊಳ್ಳಲಿದೆ. ವಸುಂಧರಾ ಭೂಪತಿ ಅವರು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಅತಿಥಿಗಳಾಗಿ ಆಗಮಿಸಲಿದ್ದಾರೆ. ನಂತರ ಮೂಗ್ ಸುರೇಶ್ ಅವರಿಂದ ನಾಗರಕಟ್ಟೆ ಹೆಸರಿನ ಕಾರ್ಯಕ್ರಮ ಕೂಡ ನಡೆಯಲಿದೆ. ಸಂಜೆ 7 ಗಂಟೆಗೆ ರೂಪಾಂತರ ತಂಡದ, ಆರ್.ನಾಗೇಶ್ ರಂಗರೂಪ ಮಾಡಿರುವ, ಕೆ.ಎಸ್.ಡಿ.ಎಲ್ ಚಂದ್ರು ನಿರ್ದೇಶನದ, ಕೆ.ಶಿವರಾಮ್ ಕಾರಂತರ ‘ಚೋಮನ ದುಡಿ’ ನಾಟಕ ಪ್ರದರ್ಶನವಾಗಲಿದೆ.

    ಡಿಸೆಂಬರ್ 29 ರಂದು ಸಂಜೆ 5ಕ್ಕೆ ಕಾರ್ಮಿಕ ರಂಗಭೂಮಿ ಕುರಿತಾದ ಕಾರ್ಯಕ್ರಮವಿದ್ದು, ರಾಮಸ್ವಾಮಿ ಆರ್ ಅತಿಥಿಯಾಗಿ ಆಗಮಿಸುತ್ತಿದ್ದಾರೆ. ಮೈಕೋ ಸೋಮಶೇಖರ್, ಮೈಕೋ ಶಿವಶಂಕರ್, ಮೈಕೋ ಮುರುಡಯ್ಯ ಅವರಿಂದ ರಾಷ್ಟಕವಿ ಕುವೆಂಪು ಅವರ ರಚನೆಯ ಜಲಗಾರ ನಾಟಕದ ತುಣುಕು ಪ್ರದರ್ಶನ ಕೂಡ ಇದೆ. ಸಂಜೆ 6:05ಕ್ಕೆ ಜಗದ ಕವಿ ಕುವೆಂಪು ಅವರ ಜನ್ಮದಿನಾಚರಣೆ ಪ್ರಯುಕ್ತ ಕುವೆಂಪು ಅವರ ಮೋಡಣ್ಣನ ತಮ್ಮ, ನನ್ನ ಗೋಪಾ ನಾಟಕಗಳನ್ನು ಓದಲಾಗುತ್ತದೆ. ಓಹಿಲೇಶ್ ಮತ್ತು ನಯನ ಸೂಡ್ ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಶಿವ ಪ್ರಸಾದ್ ಪಟ್ಟಣಗೆರೆ ಮತ್ತು ಪುನೀತ್ ತಥಾಗತ ಅವರಿಂದ ಕುವೆಂಪು ಅವರ ಆಯ್ದ ಪದ್ಯಗಳನ್ನು ಓದಲಾಗುತ್ತದೆ. ನಂತರ ಮುತ್ತಮ್ಮ  ಅವರು ಕುವೆಂಪು ಅವರ ಆಯ್ದ ಹಾಡುಗಳಿಗೆ ನೃತ್ಯ ಮಾಡಲಿದ್ದಾರೆ. ಸಂಜೆ 7ಕ್ಕೆ ರಂಗಪಯಣ ತಂಡದ, ರಾಜ್ ಗುರು ನಿರ್ದೇಶನ ಮಾಡಿರುವ ‘ಪೂಲನ್ ದೇವಿ’ ನಾಟಕದ ಪ್ರದರ್ಶನವಿದೆ.

    ಡಿಸೆಂಬರ್ 30ರಂದು ನಾಟಕೋತ್ಸವದ ಸಮಾರೋಪ ಸಮಾರಂಭ ನಡೆಯಲಿದ್ದು, ಸಂಜೆ 6ಕ್ಕೆ ರಂಗ ಗೀತೆಯೊಂದಿಗೆ ಕಾರ್ಯಕ್ರಮ ಶುರುವಾಗಲಿದೆ. ಬಿ.ಸುರೇಶ್, ಮೈಮ್ ರಮೇಶ್, ಪಾಪಣ್ಣ,  ಅರೆಹೊಳೆ ಸದಾಶಿವ, ಮಂಜುನಾಥ್, ಸುಧಾಕರ್, ನರೇಂದ್ರ ಬಾಬು, ಬಿ.ಟಿ.ಮಂಜುನಾಥ್ ಕೋಮಣ್ಣ, ವೀರಕಪುತ್ರ ಶ್ರೀನಿವಾಸ್ ಸೇರಿದಂತೆ ಹಲವರು ಗಣ್ಯರು ಅತಿಥಿಗಳಾಗಿ ಆಗಮಿಸುತ್ತಿದ್ದಾರೆ. ಅಂದು ಸಂಜೆ 7ಕ್ಕೆ ಅರೆಹೊಳೆ ಪ್ರತಿಷ್ಠಾನ ಮತ್ತು ಕಲಾಬಿ ಥಿಯೇಟರ್ ಪ್ರಸ್ತುತಿ ಪಡಿಸುವ, ಪ್ರಶಾಂತ್ ಉದ್ಯಾವರ ನಿರ್ದೇಶನದ ‘ದ್ವಯ’ ನಾಟಕವನ್ನು ಪ್ರದರ್ಶಿಸಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಮುಂಬೈನಲ್ಲಿ ನಾಟಕದ ಮೂಲಕ ಪ್ರೇಕ್ಷಕರ ಮನ ಗೆದ್ದ ಕರ್ನಾಟಕದ ಕೈದಿಗಳು

    ಮುಂಬೈನಲ್ಲಿ ನಾಟಕದ ಮೂಲಕ ಪ್ರೇಕ್ಷಕರ ಮನ ಗೆದ್ದ ಕರ್ನಾಟಕದ ಕೈದಿಗಳು

    ಬೆಂಗಳೂರು: ಕೈದಿಗಳ ಮನ ಪರಿವರ್ತನೆಗೆ ಜೈಲಿನಲ್ಲಿ ವಿವಿಧ ಕಲೆ, ಶಿಕ್ಷಣ, ಶ್ರಮ ಹಾಗೂ ಅಧ್ಯಯನಕ್ಕೆ ಪ್ರೋತ್ಸಾಹ ನೀಡಲಾಗುತ್ತದೆ. ಈ ರೀತೀಯ ಪ್ರೋತ್ಸಾಹ ಪಡೆದುಕೊಂಡ ಕರ್ನಾಟಕದ ಕೈದಿಗಳು ಮುಂಬೈನಲ್ಲಿ ನಾಟಕದ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಿಟ್ಟಿಸಿಕೊಂಡಿದ್ದಾರೆ.

    ಮುಂಬೈನ ಮೈಸೂರು ಅಸೋಸಿಯೇಷನ್ ಎರಡು ದಿನಗಳ ನಾಟಕೋತ್ಸವ ಆಯೋಜಿಸಿತ್ತು. ಇದರ ಅಧ್ಯಕ್ಷತೆಯನ್ನು ನಿವೃತ್ತ ಐಪಿಎಸ್ ಅಧಿಕಾರಿ ಗೋಪಾಲ್ ವಿ ಹೊಸೂರ್ ಅವರು ವಹಿಸಿಕೊಂಡಿದ್ದರು. ಈ ನಾಟಕೋತ್ಸವದಲ್ಲಿ ಕರ್ನಾಟಕದ ಕೈದಿಗಳು ಭಾಗವಹಿಸಿ ಸಾಹಿತಿಗಳಾದ ಜಯಂತ್ ಕಾಯ್ಕಿಣಿ ಹಾಗೂ ಚಂದ್ರಶೇಖರ್ ಕಂಬಾರ ಅವರು ರಚಿಸಿದ ನಾಟಕ ಪ್ರದರ್ಶನ ಮಾಡಿದ್ದಾರೆ.

    ನಾಟಕ ಪ್ರದರ್ಶನದ ಮೊದಲ ದಿನ (ಶನಿವಾರ) ಸಾಹಿತಿ ಜಯಂತ್ ಕಾಯ್ಕಿಣಿ ರಚಿಸಿರುವ ಹಾಗೂ ಹುಲಿಗೆಪ್ಪ ಕಟ್ಟಿಮನಿ ನಿರ್ದೇಶಿಸಿದ ‘ಜೊತೆಗಿರುವನು ಚಂದಿರ’ ನಾಟಕ ಪ್ರದರ್ಶನವನ್ನು ಕೈದಿಗಳು ನೀಡಿದರು. ಇದಕ್ಕೆ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಯಿತು. ಅಷ್ಟೇ ಪ್ರಮಾಣದಲ್ಲಿ ಭಾನುವಾರ ಪ್ರದರ್ಶನ ಕಂಡ ಚಂದ್ರಶೇಖರ್ ಕಂಬಾರ ಅವರು ರಚಿಸಿದ ‘ಸಂಗ್ಯಾ ಬಾಳ್ಯ’ ನಾಟಕ ಅದ್ಭುತವಾಗಿ ಹೊರ ಹೊಮ್ಮಿತು.

    ಈ ನಾಟಕ ಪ್ರದರ್ಶನದಲ್ಲಿ ಕರ್ನಾಟಕದ ಒಟ್ಟು ಐವತ್ತು ಮಂದಿ ಪಾಲ್ಗೊಂಡಿದ್ದರು. ಅವರಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 30 ಮಂದಿ ಕೈದಿಗಳು ಹಾಗೂ ಜೈಲಿಂದ ಬಿಡುಗಡೆ ಆಗಿರುವವರು ಕೂಡ ನಾಟಕದಲ್ಲಿ ಇದ್ದರು. ಕರ್ನಾಟಕ ಕಾರಾಗೃಹ ಇಲಾಖೆ ಹಾಗೂ ಮುಂಬೈನ ಕಾರಾಗೃಹ ಅಧಿಕಾರಿಗಳ ಸಹಕಾರದಿಂದ ಎರಡು ನಾಟಕೋತ್ಸವ ಯಶಸ್ವಿಯಾಗಿ ಪ್ರದರ್ಶನ ಕಂಡವು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv