Tag: ನಾಗ್ ವೆಂಕಟ್

  • ಕಾಮಿಡಿ ಕಿಲಾಡಿ ಸೂರಜ್ ‘ಕೈಲಾಸ ಕಾಸಿದ್ರೆ’ ನಾಯಕನನ್ನೇ ಹಾದಿ ತಪ್ಪಿಸಿದ ಸ್ಟೋರಿ

    ಕಾಮಿಡಿ ಕಿಲಾಡಿ ಸೂರಜ್ ‘ಕೈಲಾಸ ಕಾಸಿದ್ರೆ’ ನಾಯಕನನ್ನೇ ಹಾದಿ ತಪ್ಪಿಸಿದ ಸ್ಟೋರಿ

    ವೆಂಕಟ್ ನಾಗ್ ನಿರ್ದೇಶನದ ಕೈಲಾಸ ಕಾಸಿದ್ರೆ (Kailasa Kasidre) ಚಿತ್ರ ಇದೇ ತಿಂಗಳ 8ರಂದು ಬಿಡುಗಡೆಗೊಳ್ಳುತ್ತಿದೆ. ಯೂಥ್ ಫುಲ್ ಕಥೆಯ ಸುಳಿವಿನೊಂದಿಗೆ, ಚೆಂದದ ಹಾಡುಗಳ ಹಿಮ್ಮೇಳದೊಂದಿಗೆ ಪ್ರೇಕ್ಷಕರನ್ನು ಮುಟ್ಟಿರುವ ಈ ಸಿನಿಮಾ ಪ್ರೀತಿ, ನಶೆ ಮತ್ತು ಭರಪೂರ ನಗುವಿನ ಕಾಂಬಿನೇಷನ್ನಿನಲ್ಲಿ ಮೂಡಿ ಬಂದಿದೆ ಎಂಬ ವಿಚಾರವನ್ನು ಈಗಾಗಲೇ ಚಿತ್ರತಂಡ ಹೇಳಿಕೊಂಡಿದೆ. ಟ್ರೈಲರ್ ನಲ್ಲಿಯೂ ಅದಕ್ಕೆ ನಿಖರ ಪುರಾವೆ ಸಿಕ್ಕಂತಿದೆ. ಇದೊಂದು ಕ್ರೈಂ ಕಂ ಕಾಮಿಡಿ ಜಾನರಿನ ಚಿತ್ರ. ಸದಾ ಒಂದು ಕುತೂಹಲವನ್ನು ಜಾರಿಯಲ್ಲಿಟ್ಟುಕೊಂಡು, ಅದಕ್ಕೆ ಹೆಜ್ಜೆ ಹೆಜ್ಜೆಗೂ ನಗುವಿನ ಸಾಥ್ ಸಿಗುತ್ತದೆಂದರೆ ಸಹಜವಾಗಿಯೇ ಪ್ರೇಕ್ಷಕರ ಚಿತ್ತ ಅದರತ್ತ ಹೊರಳಿಕೊಳ್ಳುತ್ತೆ. ಈ ಚಿತ್ರದ ಬಗ್ಗೆ ಪ್ರೇಕ್ಷಕರು ಆಕರ್ಷಿತರಾಗಿರೋದಕ್ಕೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ (Suraj) ನಿಭಾಯಿಸಿರುವ ಪಾತ್ರವೂ ಪ್ರಧಾನ ಕಾರಣವಾಗಿ ದಾಖಲಾಗುತ್ತೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಾ ಬಂದಿರುವ ಪ್ರಸಿದ್ಧ ಶೋ ಕಾಮಿಡಿ ಕಿಲಾಡಿಗಳು. ಈ ಕಾರ್ಯಕ್ರಮದಿಂದ ಕರ್ನಾಟಕದ ಮೂಲೆ ಮೂಲೆಯಲ್ಲಿದ್ದ ಪ್ರತಿಭಾನ್ವಿತರು ಬೆಳಕಿಗೆ ಬಂದಿದ್ದಾರೆ. ಅದರಲ್ಲೊಂದಷ್ಟು ಮಂದಿ ಇದೀಗ ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆ ಕಂಡುಕೊಳ್ಳುತ್ತಿದ್ದಾರೆ. ಈ ಸಾಲಿನಲ್ಲಿ ಮುಖ್ಯವಾಗಿ ಗುರುತಿಸಿಕೊಳ್ಳುವವರು ಸೂರಜ್. ಈತ ಸದರಿ ಶೋನ ಸಂದರ್ಭದಲ್ಲಿಯೇ ಭರವಸೆ ಮೂಡಿಸಿದ್ದರು. ಆ ನಂತರ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದ ಸೂರಜ್ ಗೆ ಕೈಲಾಸ ಕಾಸಿದ್ರೆ ಚಿತ್ರದಲ್ಲಿ ಪ್ರಧಾನ ಪಾತ್ರವೇ ಸಿಕ್ಕಿದೆ.

    ಸೂರಜ್ ಇಲ್ಲಿ ನಾಯಕನ ಗೆಳೆಯನ ಪಾತ್ರದಲ್ಲಿ ನಟಿಸಿದ್ದಾರೆ. ಸಾಮಾನ್ಯವಾಗಿ ಹಾಸ್ಯ ಪಾತ್ರಗಳು ಕೆಲ ಸೀನುಗಳಿಗೆ ಮಾತ್ರವೇ ಸೀಮಿತವಾಗೋದಿದೆ. ಆದರೆ ಈ ಚಿತ್ರದಲ್ಲಿ ಅಂಥಾ ಟ್ರ್ಯಾಕ್ ಕಾಮಿಡಿ ಇಲ್ಲ. ನಾಯಕನ ಗೆಳೆಯನ ಪಾತ್ರವನ್ನು ನಿರ್ದೇಶಕ ನಾಗ್ ವೆಂಕಟ್ ಸೃಷ್ಟಿಸಿದಾಗ ಅದನ್ನು ನಿಭಾಯಿಸೋರು ಯಾರೆಂಬ ಪ್ರಶ್ನೆ ಹುಟ್ಟಿಕೊಂಡಿತ್ತಂತೆ. ಯಾಕೆಂದರೆ, ಅದಕ್ಕೆ ಪಳಗಿಕೊಂಡಿರೋ ಪ್ರತಿಭಾವಂತ ನಟನೇ ಬೇಕಿತ್ತು. ಚಿತ್ರದುದ್ದಕ್ಕೂ, ನಾಯಕನಿಗೆ ಸರಿಸಮನಾಗಿ ಮುಂದುವರೆಯೋ ಆ ಪಾತ್ರಕ್ಕೆ ಸೂರಜ್ ಸೂಟ್ ಆಗುತ್ತಾರೆನ್ನಿಸಿದ್ದೇ ಅವರನ್ನು ನಾಗ್ ವೆಂಕಟ್ (Nag Venkat) ಒಪ್ಪಿಸಿದ್ದರಂತೆ.

    ಈ ಪಾತ್ರ ಮತ್ತು ಒಟ್ಟಾರೆ ಕಥೆ ಖುದ್ದು ಸೂರಜ್ ಗೆ ಬಹುವಾಗಿ ಹಿಡಿಸಿದೆ. ಆರಂಭದಿಂದ ಕಡೆಯವರೆಗೂ ವಿಶಿಷ್ಟ ಅನುಭವ ನೀಡಿದ ಚಿತ್ರೀಕರಣದ ಬಗ್ಗೆಯೂ ಅವರಲ್ಲೊಂದು ಬೆರಗಿದೆ. ಈ ಪಾತ್ರವನ್ನು ನಿರ್ದೇಶಕರ ಇಂಗಿತದಂತೆಯೇ ಜೀವ ತುಂಬಿ ನಟಿಸಿದ ತೃಪ್ತಿಯೂ ಅವರಲ್ಲಿದೆ. ಈ ಸಿನಿಮಾ ಕ್ರೈಂ ಹಾಗೂ ನಗುವಿನ ಒಡ್ಡೋಲಗದಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತದೆಂಬ ತುಂಬು ಭರವಸೆಯೂ ಸೂರಜ್ ಗಿದೆ. ಈಗ ಹಲವಾರು ಶೋಗಳಲ್ಲಿ, ದೊಡ್ಡ ಸಿನಿಮಾಗಳಲ್ಲಿ ಸೂರಜ್ ಬ್ಯುಸಿಯಾಗಿದ್ದಾರೆ. ಕೈಲಾಸ ಕಾಸಿದ್ರೆ ಚಿತ್ರ ತನ್ನ ವೃತ್ತಿ ಬದುಕಿಗೆ ಮತ್ತಷ್ಟು ವೇಗ ನೀಡಬಹುದೆಂಬ ನಿರೀಕ್ಷೆ ಸೂರಜ್ ರದ್ದು.

     

    ಸುಕನ್ಯಾ ನಟಿಸಿದ್ದಾರೆ ಈ ಚಿತ್ರದ ನಾಯಕಿಯಾಗಿ, ಕಾಲೇಜು ಹುಡುಗಿಯಾಗಿ ಕಂಗೊಳಿಸಿದ್ದಾರೆ. ವಾಸಿಕ್ ಅಲ್ಸಾದ್ ನಿರ್ಮಾಣ ಮಾಡಿರುವ ಕೈಲಾಸ ಚಿತ್ರಕ್ಕೆ ಆಶಿಕ್ ಅರುಣ್ ಸಂಗೀತ, ತ್ಯಾಗರಾಜನ್ ಸಂಕಲನ, ಲೇಖಕ್ ಎಂ ಸಾಹಿತ್ಯ, ವಿನೋದ್ ರಾಜೇಂದ್ರನ್ ಛಾಯಾಗ್ರಹಣ, ಧನಂಜಯ ಬಿ ನೃತ್ಯ ನಿರ್ದೇಶನವಿದೆ. ವಾಸಿಕ್ ಅಲ್ಸಾದ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸಾಫ್ಟ್‍ವೇರ್ ಜಗತ್ತಿನಿಂದ ಆಗಮಿಸಿರುವ ನಾಗ್ ವೆಂಕಟ್ ಚೊಚ್ಚಲ ನಿರ್ದೇಶನದ ಚಿತ್ರವಿದು. ಟ್ರೈಲರ್, ಹಾಡುಗಳ ಮೂಲಕ ಮೋಡಿ ಮಾಡಿರುವ ಈ ಚಿತ್ರ ತೆರೆಗಾಣಲು ಇದೀಗ ದಿನಗಣನೆ ಶುರುವಾಗಿದೆ.

  • ನಶೆಯ ಲೋಕದ ಕೌತುಕ ತೆರೆದಿಟ್ಟ ನಿರ್ದೇಶಕ ನಾಗ್ ವೆಂಕಟ್?

    ನಶೆಯ ಲೋಕದ ಕೌತುಕ ತೆರೆದಿಟ್ಟ ನಿರ್ದೇಶಕ ನಾಗ್ ವೆಂಕಟ್?

    ಹಿಂದೆ ಟ್ರಾನ್ಸ್ ಸಾಂಗ್ ಒಂದರ ಮೂಲಕ ಯುವ ಪ್ರೇಕ್ಷಕರನ್ನೆಲ್ಲ ಸೆಳೆದುಕೊಂಡಿದ್ದ ಚಿತ್ರ `ಕೈಲಾಸ ಕಾಸಿದ್ರೆ’ (Kailasa Kasidre). ಕನ್ನಡದ ಮಟ್ಟಿಗೆ ಕೊಂಚ ಪರಿಚಿತವಾಗಿದ್ದ ಈ ಟ್ರಾನ್ಸ್ ಮಾದರಿಯನ್ನು ಪೂರ್ಣ ಪ್ರಮಾಣದಲ್ಲಿ ಅಳವಡಿಸಿಕೊಳ್ಳುವ ಮೂಲಕ ಚಿತ್ರತಂಡ ಪ್ರೇಕ್ಷಕರಲ್ಲೊಂದು ಅಚ್ಚರಿ ಮೂಡಿಸಿತ್ತು. ನಶೆ ನೆತ್ತಿಗೇರಿಕೊಳ್ಳುವ ಉತ್ತುಂಗದ ಸ್ಥಿತಿಯನ್ನು ಕಟ್ಟಿ ಕೊಡುವ ಈ ಟ್ರಾನ್ಸ್ ಮಾದರಿ ಎಂಬುದು ಸದರಿ ಸಿನಿಮಾದ ನಿಜವಾದ ಆತ್ಮವಿದ್ದಂತೆ. ಈ ಮಾತನ್ನು ಖುದ್ದು ನಿರ್ದೇಶಕ ನಾಗ್ ವೆಂಕಟ್ (NagVenkat) ಖಚಿತಪಡಿಸುತ್ತಾರೆ. ಸಲೀಸಾಗಿ ಕಾಸು ಮಾಡಿಕೊಳ್ಳಬೇಕೆಂಬ ಆಕಾಂಕ್ಷೆಯೊಂದು ಈವತ್ತಿನ ಯುವ ಸಮುದಾಯಕ್ಕಂಟಿಕೊಂಡಿದೆ. ಅಂಥಾ ಮನಃಸ್ಥಿತಿ ನಶೆಯ ತೆಕ್ಕೆಗೆ ಸಿಕ್ಕರೆ ಏನೇನೆಲ್ಲ ಘಟಿದಬಹುದೆಂಬ ರೋಚಕ ವಿಚಾರಗಳು ಕೈಲಾಸದಲ್ಲಿವೆಯಂತೆ.

    ಐಟಿ ಕ್ರೇತ್ರದಿಂದ ಚಿತ್ರರಂಗಕ್ಕೆ ಬಂದವರದ್ದೊಂದು ದಂಡೇ ಇದೆ. ಆ ಸಾಲಿಗೆ ನಾಗ್ ವೆಂಕಟ್ ಕೂಡಾ ಸೇರಿಕೊಳ್ಳುತ್ತಾರೆ. ಐಟಿ ವಲಯದಲ್ಲಿದ್ದುಕೊಂಡು, ಸಿನಿಮಾ ವ್ಯಾಮೋಹದಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವವರು ನಾಗ್. ಒಂದಷ್ಟು ವರ್ಷಗಳ ಕಾಲ ಇಲ್ಲಿ ಸಕ್ರಿಯರಾಗಿದ್ದ ಅವರು ಕೈಲಾಸ ಕಾಸಿದ್ರೆ ಚಿತ್ರದ ಮೂಲಕ, ಯೂಥ್ ಫುಲ್ ಕಥೆಯೊಂದಿಗೆ ಆಗಮಿಸಿದ್ದಾರೆ. ಈ ಹಿಂದೆ ತಾರಕಾಸುರ ಚಿತ್ರದ ಮೂಲಕ ಮಿಂಚಿದ್ದ ರವಿ ಕೈಲಾಸದಲ್ಲಿ ಮತ್ತೊಂದು ಭಿನ್ನ ಲುಕ್ಕಿನೊಂಡಿಗೆ ಪ್ರೇಕ್ಷಕರನ್ನು ಮುಖಾಮುಖಿಯಾಗಲಿದ್ದಾರೆ. ಒಟ್ಟಾರೆ ಕಥೆ, ವಿಶೇಷತೆಗಳ ಬಗ್ಗೆ ನಿರ್ದೇಶಕ ನಾಗ್ ವೆಂಕಟ್ ಒಂದಷ್ಟು ವಿಚಾರಗಳನ್ನಿಲ್ಲಿ ಹಂಚಿಕೊಂಡಿದ್ದಾರೆ.

    ಈವತ್ತಿಗೆ ಒಂದಿಡೀ ಯುವ ಸಮುದಾಯವನ್ನು ಡ್ರಗ್ಸ್ ನಂಥಾ ವ್ಯಸನಗಳು ಅಪಾಯದಂಚಿಗೆ ಕೊಂಡೊಯ್ದು ನಿಂತಿವೆ. ಇದೀಗ ಬಹುತೇಕ ಎಲ್ಲ ರಾಜ್ಯಗಳಲ್ಲಿಯೂ ಆಗಾಗ ಇಂಥಾ ಡ್ರಗ್ಸ್ ಕೇಸುಗಳು ಸದ್ದು ಮಾಡುತ್ತಿವೆ. ಈ ಹೊತ್ತಿನಲ್ಲಿ ಡ್ರಗ್ಸ್ ಲೋಕದ ಅಚ್ಚರಿದಾಯಕ ಸಂಗತಿಗಳನ್ನು ಹೊತ್ತು ಬರುತ್ತಿರುವ ಚಿತ್ರ ಕೈಲಾಸ. ಹಾಗಂತ ಇಲ್ಲಿ ಯಾವ ಬೋಧನೆಯನ್ನೂ ಮಾಡಿಲ್ಲ. ಕಥೆಯ ಮೂಲಕವೇ ಸಂದೇಶಗಳು ರವಾನೆಯಾಗುತ್ತಷ್ಟೆ. ಸಿನಿಮಾ ಎಂದರೆ ಮನೋರಂಜನೆ. ಅದು ಬೋಧನೆಯ ಮಾಧ್ಯಮವಲ್ಲ. ಆದರೆ, ಕಥೆಯ ಓಘದಲ್ಲಿಯೇ ಎಚ್ಚರ ರವಾನಿಸುವ ಕೆಲಸ ಮಾಡಬಹುದಷ್ಟೇ ಎಂಬ ನಿಖರ ಮಾತುಗಳನ್ನಾಡುವ ನಾಗ್ ವೆಂಕಟ್ ಅತ್ಯಂತ ವೇಗವಾಗಿ ಚಲಿಸುವಂತೆ ಈ ಸಿನಿಮಾವನ್ನು ರೂಪಿಸಿದ್ದಾರಂತೆ. ಇದೆಲ್ಲದರ ಜೊತೆಗೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಪಾತ್ರ ಚಿತ್ರದ ತುಂಬೆಲ್ಲ ಕ್ಯಾರಿ ಆಗುತ್ತದೆ. ಆ ಮೂಲಕ ಆರಂಭದಿಂದ ಕೊನೆಯವರೆಗೂ ನಗುವಿಗೆ ತತ್ವಾರವಿಲ್ಲದಂತೆ ಈ ಸಿನಿಮಾ ಮೂಡಿ ಬಂದಿದೆಯಂತೆ.

    ಈಗ ಏಕಾಏಕಿ ಕಾಸು ಮಾಡಿ ಬಿಡಬೇಕೆಂಬ ಮನಃಸ್ಥಿತಿ ಯುವ ಸಮುದಾಯವನ್ನು ಆವರಿಸಿಕೊಂಡಿದೆ. ಇಂಥಾದ್ದೊಂದು ಸನ್ನಿ ಕಾಲೇಜು ದಿನಮಾನವನ್ನೂ ಆವರಿಸಿಕೊಂಡಿದೆ. ಇಂಥಾ ಕಾಲೇಜು ವಾತಾವರಣದಲ್ಲಿ ಘಟಿಸುವ ಯೂಥ್ ಫುಲ್ ಕಥಾನಕ ಈ ಚಿತ್ರದಲ್ಲಿದೆ. ಹಠಾತ್ತನೆ ಕಾಸು ಮಾಡುವ ಹಾದಿ, ನಶೆಯ ಲೋಕ ಮತ್ತು ಅದರ ಹಿಮ್ಮೇಳದಲ್ಲಿರುವ ಪ್ರೀತಿ… ಇವಿಷ್ಟನ್ನೂ ಪಕ್ಕಾ ಮನೋರಂಜನಾತ್ಮಕವಾಗಿ ಕಟ್ಟಿ ಕೊಟ್ಟಿರುವ ತೃಪ್ತಿ ನಾಗ್ ವೆಂಕಟ್ ಅವರಲ್ಲಿದೆ. ಎರಡು ಗಂಟೆಗಳು ಸರಿದದ್ದೇ ಗೊತ್ತಾಗದಂತೆ ಇಲ್ಲಿನ ದೃಷ್ಯಗಳು ಕದಲುತ್ತವೆಂಬ ಭರವಸೆಯೂ ಅವರ ಕಡೆಯಿಂದ ರವಾನೆಯಾಗುತ್ತದೆ.

     

    ಶಿವಾಜಿ ಸುರತ್ಕಲ್ ಚಿತ್ರದ ಸಣ್ಣ ಪಾತ್ರದಲ್ಲಿ ನಟಿಸಿದ್ದ ಸುಕನ್ಯಾ ಈ ಮೂಲಕ ನಾಯಕಿಯಾಗಿದ್ದಾರೆ. ವಾಸಿಕ್ ಅಲ್ಸಾದ್ ನಿರ್ಮಾಣ ಮಾಡಿರುವ ಕೈಲಾಸ ಚಿತ್ರಕ್ಕೆ ಆಶಿಕ್ ಅರುಣ್ ಸಂಗೀತ, ತ್ಯಾಗರಾಜನ್ ಸಂಕಲನ, ಲೇಖಕ್ ಎಂ ಸಾಹಿತ್ಯ, ವಿನೋದ್ ರಾಜೇಂದ್ರನ್ ಛಾಯಾಗ್ರಹಣ, ಧನಂಜಯ ಬಿ ನೃತ್ಯ ನಿರ್ದೇಶನವಿದೆ. ವಾಸಿಕ್ ಅಲ್ಸಾದ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಒಟ್ಟಾರೆಯಾಗಿ, ಕೈಲಾಸ ಕಾಸಿದ್ರೆ ಚಿತ್ರ ನಾನಾ ಬಗೆಯಲ್ಲಿ ಪ್ರೇಕ್ಷಕರನ್ನು ತಲುಪಿಕೊಂಡಿದೆ. ಇದೇ ಮಾರ್ಚ್ 8ನೇ ತಾರೀಕಿನಂದು ಈ ಸಿನಿಮಾ ತೆರೆಗಾಣಲಿದೆ.

  • `ಕೈಲಾಸ’ದಲ್ಲಿ ಕಿಕ್ಕೇರಿಸೋ ಟ್ರಾನ್ಸ್ ಸಾಂಗ್

    `ಕೈಲಾಸ’ದಲ್ಲಿ ಕಿಕ್ಕೇರಿಸೋ ಟ್ರಾನ್ಸ್ ಸಾಂಗ್

    ತಾರಕಾಸುರ ಚಿತ್ರದ ಮೂಲಕ ಅಬ್ಬರದ ಎಂಟ್ರಿ ಕೊಟ್ಟಿದ್ದವರು ರವಿ (Ravi). ಇದೀಗ ಅವರು ಕೈಲಾಸ (Kailas) ಎಂಬ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ. ನಾಗ್ ವೆಂಕಟ್ (Nag Venkat) ನಿರ್ದೇಶನದ ಕೈಲಾಸ ಚಿತ್ರಕ್ಕೆ ಕಾಸಿದ್ರೆ ಎಂಬ ಅಡಿ ಬರಹವಿದೆ. ಈಗಾಗಲೇ ಟೀಸರ್ ಮೂಲಕ ಝಲಕ್ ಅನಾವರಣಗೊಳಿಸಿದ್ದ ಚಿತ್ರತಂಡವೀಗ ಕನ್ನಡದ ಮಟ್ಟಿಗೆ ಹೊಸತೆನ್ನಿಸುವಂತಹ ಟ್ರಾನ್ಸ್ ಸಾಂಗ್ ವೊಂದನ್ನು ಬಿಡುಗಡೆಗೊಳಿಸಿದೆ. ದೃಶ್ಯಗಳ ಮೂಲಕವೇ ಕಿಕ್ಕೇರಿಸೋ ಶೈಲಿಯ ಈ ಟ್ರಾನ್ಸ್ (Trance Song) ವೀಡಿಯೋ ಸಾಂಗ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ನೋಡುಗರ ಕಡೆಯಿಂದ ಮೆಚ್ಚುಗೆಯನ್ನೂ ಪಡೆದುಕೊಳ್ಳುತ್ತಿದೆ.

    ಈ ಸಿನಿಮಾದ ಆಂತರ್ಯಕ್ಕನುಗುಣವಾಗಿ ಈ ಟ್ರಾನ್ಸ್ ವೀಡಿಯೋ ಸಾಂಗ್ ಅನ್ನು ನಿರ್ದೇಶಕರು ರೂಪಿಸಿದ್ದಾರಂತೆ. ಮಾದಕ ಜಗತ್ತಿನ ಉನ್ಮತ್ತ ಕ್ಷಣಗಳನ್ನು ಹಿಡಿದಿಟ್ಟಂತೆ ಭಾಸವಾಗುವ ಈ ಹಾಡಿನ ಮಧ್ಯೆ ಪೂರಕವಾದ ಒಂದಷ್ಟು ಸಾಲುಗಳು, ಪಾತ್ರದ ಕಡೆಯಿಂದ ತಗೇಲಿ ಬರುತ್ತದೆ. ಅದಕ್ಕೆ ಲೇಖಕ್ ಎಂ ಸಿದ್ದಾರ್ಥ ಸಾಹಿತ್ಯ ಒದಗಿಸಿದ್ದಾರೆ. ಆಶಿಕ್ ಅರುಣ್ ಸಂಗೀತ ಸಂಯೋಜನೆಯೊಂದಿಗೆ ಈ ಟ್ರಾನ್ಸ್ ವೀಡಿಯೋ ಸಾಂಗ್ ಮೂಡಿ ಬಂದಿದೆ. ಇದರ ಮೂಲಕವೇ ನಾಯಕ ರವಿಯ ಪಾತ್ರ ಕೂಡಾ ಪ್ರೇಕ್ಷಕರ ಮುಂದೆ ಸುಳಿದಂತಾಗಿದೆ. ಇದುವರೆಗೂ ಕನ್ನಡ ಸಿನಿಮಾಗಳಲ್ಲಿ ಇಂಥಾ ಟ್ರಾನ್ಸ್ ವೀಡಿಯೋ ಸಾಂಗ್ ಅಲ್ಲಲ್ಲಿ ಕಾಣಿಸಿಕೊಂಡಿವೆ. ಆದರೆ ಈ ಚಿತ್ರದಲ್ಲಿ ಅದನ್ನು ಪೂರ್ಣಪ್ರಮಾಣದಲ್ಲಿ ಪ್ರಯೋಗ ಮಾಡಲಾಗಿದೆಯಂತೆ.

    ಇದು ಕ್ರೈಂ ಕಂ ಕಾಮಿಡಿ ಜಾನರಿಗೊಳಪಡುವ ಚಿತ್ರ. ಪಕ್ಕಾ ಕಮರ್ಶಿಯಲ್ ಬಗೆಯಲ್ಲಿ ತಯಾರುಗೊಂಡಿರುವ ಇದು ನಾಗ್ ವೆಂಕಟ್ ನಿರ್ದೇಶನದ ಮೊದಲ ಸಿನಿಮಾ. ಮೂಲತಃ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ನಾಗ್ ವೆಂಕಟ್ ಈಗೊಂದಷ್ಟು ವರ್ಷಗಳ ಹಿಂದೆಯೇ ಪೂರ್ಣಪ್ರಮಾಣದಲ್ಲಿ ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಈವರೆಗೂ ಸಾಕಷ್ಟು ಕಿರು ಚಿತ್ರಗಳ ಮೂಲಕ ಪರೀಕ್ಷೆಗೊಡ್ಡಿಕೊಂಡಿದ್ದ ನಾಗ್ ವೆಂಕಟ್, ಕೈಲಾಸ ಕಾಸಿದ್ರೆ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.

     

    ತಿಂಗಳೊಪ್ಪತ್ತಿನಲ್ಲಿ ಈ ಸಿನಿಮಾವನ್ನು ತೆರೆಗಾಣಿಸಲು ತಯಾರಿ ನಡೆಯುತ್ತಿದೆ. ಇದೇ ತಿಂಗಳ 24ರಂದು ಟ್ರೈಲರ್ ಬಿಡುಗಡೆಗೊಳ್ಳಲಿದೆ. ತಾರಕಾಸುರ ನಂತರ ರವಿ ಮತ್ತೊಂದು ವಿಶೇಷವಾದ ಪಾತ್ರದ ಮೂಲಕ ಪ್ರೇಕ್ಷಕರನ್ನು ಅಚ್ಚರಿಗೀಡು ಮಾಡಲಿದ್ದಾರಂತೆ. ಈಗ ಬಿಡುಗಡೆಯಾಗಿರೋ ನಶೆ ಹಾಡಿನ ಪ್ರಭೆಯಲ್ಲಿಯೇ, ಪ್ರೇಮಿಗಳ ದಿನದಂದು ಚೆಂದದ್ದೊಂದು ಹಾಡು ಬಿಡುಗಡೆಗೊಳಿಸಲು ಚಿತ್ರತಂಡ ತೀರ್ಮಾನಿಸಿದೆ. ವಿಶೇಷವೆಂದರೆ, ಈ ಚಿತ್ರದಲ್ಲಿ ಕ್ರೈಂ ಹಾಗೂ ಕಾಮಿಡಿ ಮಿಳಿತವಾಗಿರೋದರಿಂದಾಗಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಕೂಡಾ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ರವಿ ಗೆ ಜೋಡಿಯಾಗಿ ಸುಕನ್ಯಾ ನಟಿಸಿದ್ದಾರೆ. ಶಿವಾಜಿ ಸುರತ್ಕಲ್ ಚಿತ್ರದ ಸಣ್ಣ ಪಾತ್ರದಲ್ಲಿ ನಟಿಸಿದ್ದ ಸುಕನ್ಯಾ ಈ ಮೂಲಕ ನಾಯಕಿಯಾಗಿದ್ದಾರೆ. ವಾಸಿಕ್ ಅಲ್ಸಾದ್ ನಿರ್ಮಾಣ ಮಾಡಿರುವ ಕೈಲಾಸ ಚಿತ್ರಕ್ಕೆ ಆಶಿಕ್ ಅರುಣ್ ಸಂಗೀತ, ತ್ಯಾಗರಾಜನ್ ಸಂಕಲನ, ಲೇಖಕ್ ಎಂ ಸಾಹಿತ್ಯ, ವಿನೋದ್ ರಾಜೇಂದ್ರನ್ ಛಾಯಾಗ್ರಹಣ, ಧನಂಜಯ ಬಿ ನೃತ್ಯ ನಿರ್ದೇಶನವಿದೆ.