Tag: ನಾಗೇಶ್

  • ಮೊಟ್ಟೆ ತಿನ್ನಲು ಒತ್ತಡ ಹೇರಲ್ಲ: ನಾಗೇಶ್

    ಮೊಟ್ಟೆ ತಿನ್ನಲು ಒತ್ತಡ ಹೇರಲ್ಲ: ನಾಗೇಶ್

    ಮಂಡ್ಯ: ಶಾಲಾ ಮಕ್ಕಳಿಗೆ ಮೊಟ್ಟೆ ತಿನ್ನಲು ಒತ್ತಡ ಹೇರುವುದಿಲ್ಲ ಎಂದು ಶಿಕ್ಷಣ ಸಚಿವ ನಾಗೇಶ್ ಸ್ಪಷ್ಟನೆ ನೀಡಿದ್ದಾರೆ.

    ಮಂಡ್ಯದಲ್ಲಿ ಮಾತನಾಡಿದ ಅವರು, ಮಕ್ಕಳು ಅಪೌಷ್ಟಿಕತೆಯಿಂದ ಒದ್ದಾಡುತ್ತಿದ್ದಾರೆ. ತಜ್ಞರ ಸಲಹೆಯ ಮೇರೆಗೆ ನಾವು ವಿದ್ಯಾರ್ಥಿಗಳಿಗೆ ಮೊಟ್ಟೆಯನ್ನು ನೀಡಲು ನಿರ್ಧರಿಸಿದ್ದೇವೆ. ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣನ್ನು ನೀಡುತ್ತೇವೆ. ಹೀಗೆ ಪ್ರೋಟಿನ್‍ಯುಕ್ತ ಆಹಾರಗಳನ್ನು ಆಯ್ಕೆ ಮಾಡಿದ್ದು, ತಜ್ಞರ ಒಪ್ಪಿಗೆಯ ಬಳಿಕ ಮುಂದಿನ ದಿನಗಳಲ್ಲಿ ಜಾರಿಗೆ ತರಲಿದ್ದೇವೆ ಎಂದರು.

    ಕೊರೋನಾ ಹೆಚ್ಚಾಗಿಲ್ಲ. ಕೊರೋನಾ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪಾಸಿಟಿವ್ ಬಂದಿರುವ ಮಕ್ಕಳು ಆರೋಗ್ಯವಾಗಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಶಾಲಾ-ಕಾಲೇಜುಗಳನ್ನು ಮುಚ್ಚುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ನಮ್ಮ ಕಣ್ಣಿನಿಂದ ಇನ್ನೊಬ್ಬರಿಗೆ ದೃಷ್ಟಿ ಬರುವುದೇ ಬದುಕಿನ ಸಾಕ್ಷಾತ್ಕಾರ: ಡಾ.ಕೆ.ಸುಧಾಕರ್

    1 ಕೋಟಿ 20 ಲಕ್ಷ ಮಕ್ಕಳಲ್ಲಿ 102 ಮಕ್ಕಳಿಗೆ ಮಾತ್ರವೇ ಸೋಂಕು ಇದೆ. ಅದರಲ್ಲೂ ರೆಸಿಡೆನ್ಸಿ ಶಾಲೆಗಳಲ್ಲಿ ಪಾಸಿಟಿವ್ ಬಂದಿದೆ. ಓಪನ್ ಶಾಲೆಗಳಲ್ಲಿ ಯಾವುದೇ ಮಕ್ಕಳಿಗೂ ಪಾಸಿಟಿವ್ ಬಂದಿಲ್ಲ. ಇದೀಗ ಯಾವುದೇ ರೀತಿಯ ಉದಾಸಿನ ಮಾಡದೇ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ರೋಹಿತ್ ಶರ್ಮಾಗೆ ಕ್ಯಾಪ್ಟನ್ಸಿ ಜೊತೆಗೆ ಮಹತ್ವದ ಜವಾಬ್ದಾರಿ ಹೊರಿಸಿದ ಬಿಸಿಸಿಐ

    ಶಿಕ್ಷಕರ ನೇಮಕ: ಅನೇಕ ವರ್ಷಗಳಿಂದ ರಾಜ್ಯದಲ್ಲಿ ಶಿಕ್ಷಕರ ಕೊರತೆ ಇದೆ. ಇದಕ್ಕಾಗಿ 12 ಸಾವಿರ ಶಿಕ್ಷಕರ ನೇಮಕಕ್ಕೆ ಆದೇಶ ನೀಡಲಾಗಿದೆ. ಹೀಗೆ 12 ಸಾವಿರ ಪೋಸ್ಟ್‍ಗಳನ್ನು ಪೂರ್ಣ ಮಾಡಲಾಗುತ್ತದೆ. ಇದರೊಂದಿಗೆ ಶಾಲಾಕೊಠಡಿಗಳ ಕೊರತೆಯನ್ನೂ ಸರಿಪಡಿಸಲಿದ್ದೇವೆ. ಮುಂದಿನ ವರ್ಷದ ಅಕಾಡೆಮಿಕ್ ಇಯರ್ ಒಳಗಾಗಿ ಎಲ್ಲವನ್ನೂ ಅನುಷ್ಟಾನಕ್ಕೆ ತರಲಿದ್ದೇವೆ ಎಂದು ಹೇಳಿದರು.

  • ರಾಜ್ಯದಲ್ಲಿ 13 ಸಾವಿರ ಶಿಕ್ಷಕರ ಕೊರತೆ ಇದೆ: ಸಚಿವ ನಾಗೇಶ್

    ರಾಜ್ಯದಲ್ಲಿ 13 ಸಾವಿರ ಶಿಕ್ಷಕರ ಕೊರತೆ ಇದೆ: ಸಚಿವ ನಾಗೇಶ್

    – ಶೀಘ್ರ 5,000 ಶಿಕ್ಷಕರ ನೇಮಕಕ್ಕೆ ಕ್ರಮ

    ಚಿಕ್ಕಬಳ್ಳಾಪುರ: ರಾಜ್ಯದಲ್ಲಿ 12 ರಿಂದ 13 ಸಾವಿರ ಶಿಕ್ಷಕರ ಕೊರತೆ ಇದೆ ಎಂದು ಚಿಕ್ಕಬಳ್ಳಾಪುರದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

    ನಗರದ ಅಗಲಗುರ್ಕಿ ಬಳಿಯ ಬಿಜಿಎಸ್ ಶಾಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ 12-13 ಸಾವಿರ ಮಂದಿ ಶಿಕ್ಷಕರ ಕೊರತೆ ಇದೆ. ಶಿಕ್ಷಕರ ಕೊರತೆಗೆ ಎರಡು ಪ್ರಮುಖ ಕಾರಣಗಳಿವೆ. ನ್ಯಾಯಾಲಯದಿಂದ ತಡೆಯಾಜ್ಞೆ ತಂದ ಕಾರಣ ವರ್ಗಾವಣೆಗಳು ಆಗಲಿಲ್ಲ. ಕಳೆದ ವರ್ಷ ಪರೀಕ್ಷೆ ಮಾಡಿ 10,000 ಮಂದಿ ಶಿಕ್ಷಕರ ನೇಮಕಕ್ಕೆ ತಯಾರಿ ಮಾಡಲಾಗಿತ್ತು. ಪರೀಕ್ಷೆಯಲ್ಲಿ 3,000 ಮಂದಿ ಮಾತ್ರ ಅರ್ಹರಾದರು. ಮತ್ತೊಂದೆಡೆ ಕೋವಿಡ್ ಬಂದ ನಂತರ ಅರ್ಥಿಕ ವ್ಯವಸ್ಥೆ ನಿಧಾನ ಆಯಿತು. ಈಗ 5000 ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಶಿಕ್ಷಕರ ಕೊರತೆಯಿಂದ ಅತಿಥಿ ಶಿಕ್ಷಕರ ನೇಮಕಕ್ಕೆ ಅವಕಾಶ ಮಾಡಿಕೊಡಲಾಗಿದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆ ಆಗಿಲ್ಲ ಎಂದರು. ಇದನ್ನೂ ಓದಿ: ಸೆ.17 ರಿಂದ ಕೊಡಗಿನಲ್ಲಿ ಶಾಲಾ-ಕಾಲೇಜು ಆರಂಭ

    ಕೊರೊನಾ ಮೂರನೇ ಅಲೆ ಎಚ್ಚರಿಕೆ ಇರುವುದರಿಂದ ಪೂರ್ಣ ಪ್ರಮಾಣದ ಶಾಲೆಗಳ ಆರಂಭ ಆಗಿಲ್ಲ. ತಜ್ಞರ ಸಲಹಾ ಸಮಿತಿ ಜೊತೆ ಚರ್ಚಿಸಿ ಪೂರ್ಣ ಪ್ರಮಾಣದ ಶಾಲೆಗಳ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ರಾಷ್ಟ್ರೀಯ ಶಿಕ್ಷಣ ನೀತಿ ಓದಿರುವವರು ಯಾರೂ ಹಿಂದಿ ದಿವಸ್ ಅಂತ ವಿರೋಧ ಮಾಡಲ್ಲ. ಮಾತೃ ಭಾಷೆಯಲ್ಲಿ ಶಿಕ್ಷಣ ಕೊಡಬೇಕೆಂದು ಯೋಚನೆ ಮಾಡಿರುವ ಸರ್ಕಾರ ನಮ್ಮದು. ದೇಶದಲ್ಲಿ ಸ್ವದೇಶಿ ಸ್ವಾವಲಂಬಿ ಶಿಕ್ಷಣ ಕೊಡಬೇಕೆಂದು ಮಹಾತ್ಮ ಗಾಂಧೀಜಿ ಸೇರಿ ಆನೇಕ ತಜ್ಞರು ಹೇಳಿದ್ದರು. ಆ ನಿಟ್ಟಿನಲ್ಲಿ ಮಕ್ಕಳ ಕೈಗೆ, ಬುದ್ಧಿಗೆ, ಹೃದಯಕ್ಕೆ ಶಿಕ್ಷಣ ಕೊಡಬೇಕು. ಇದನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪ್ರಯತ್ನ ಮಾಡಿದೆ. ಕಾಂಗ್ರೆಸ್‍ನವರಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಗೊಂದಲಗಳಿರಬಹದು. ಅದು ಪಾರ್ಲಿಮೆಂಟ್ ನಲ್ಲಿ ಹಾಗೂ ದೇಶದ ಅನೇಕ ಕಡೆ ಸಭೆ, ಸೆಮಿನಾರ್ ಗಳಲ್ಲಿ ಚರ್ಚೆಯಾದ ನಂತರವೇ ಜಾರಿಯಾದ ನಿರ್ಣಯ. ಈ ಬಗ್ಗೆ ಅವರು ತಿಳಿದರೆ ಸರಿಹೋಗಬಹುದು. ಅವರ ಜೊತೆ ಚರ್ಚೆ ಮಾಡುತ್ತೇವೆ ಎಂದರು.

  • ಶೀಘ್ರದಲ್ಲೇ ಮುನಿರತ್ನ, ನಾಗೇಶ್‍ಗೆ ಸೂಕ್ತ ಸ್ಥಾನಮಾನ: ನಾರಾಯಣಗೌಡ

    ಶೀಘ್ರದಲ್ಲೇ ಮುನಿರತ್ನ, ನಾಗೇಶ್‍ಗೆ ಸೂಕ್ತ ಸ್ಥಾನಮಾನ: ನಾರಾಯಣಗೌಡ

    ಮೈಸೂರು: ರಾಜ್ಯ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ನಡೆದರೂ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ, ಆರ್.ಆರ್ ನಗರ ಶಾಸಕ ಮುನಿರತ್ನ ಹಾಗೂ ಹೆಚ್.ನಾಗೇಶ್ ಅವರಿಗೆ ಮುಂದಿನ ಕೆಲ ದಿನಗಳಲ್ಲಿ ಉತ್ತಮ ಸ್ಥಾನ ಮಾನ ಸಿಗಲಿದೆ ಎಂದು ಸಚಿವ ನಾರಾಯಣಗೌಡ ತಿಳಿಸಿದ್ದಾರೆ.

    ಮಂಡ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ನಾರಾಯಣಗೌಡ, ಮುನಿರತ್ನ ಹಾಗೂ ನಾಗೇಶ್‍ಗೆ ಸಚಿವ ಸ್ಥಾನ ಕೈ ತಪ್ಪಿದೆ. ಆದರೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನ ಮಾನ ಸಿಗಲಿದೆ. ಮುಂದೆ ಅವರಿಗೆ ಒಳ್ಳೆಯದು ಆಗುತ್ತದೆ ಎಂದರು.

    ಯಡಿಯೂರಪ್ಪ ಮೇಲೆ ಯತ್ನಾಳ್ ಆಕ್ರೋಶ ಪ್ರಶ್ನೆಗೆ ಉತ್ತರಿಸಿದ ನಾರಾಯಣಗೌಡ, ಪಕ್ಷದಲ್ಲಿ ಒಬ್ಬರು ಏನೋ ಮಾತನಾಡುತ್ತಾರೆ. ಎಲ್ಲಾ ಪಕ್ಷದಲ್ಲೂ ಟೀಕೆ ಮಾಡುವವರು ಇರುತ್ತಾರೆ. ಇವತ್ತು ಕೂಗಾಡುತ್ತಾರೆ ನಂತರ ಒಳಗೆ ಬಂದು ಸೇರಿಕೊಳ್ಳುತ್ತಾರೆ. ಎಲ್ಲರೂ ಸರ್ಕಾರದಲ್ಲಿ ಸಮಾಧಾನವಾಗಿ ಹೋಗಬೇಕಾಗುತ್ತದೆ. ನಾವು ಸಹ ಅವರಿಗೆ ಸಮಾಧಾನ ಹೇಳುವ ಕೆಲಸ ಮಾಡುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಪಕ್ಷದಲ್ಲಿ ಹಾಗೂ ಸರ್ಕಾರದಲ್ಲಿ ಒಳ್ಳೆಯ ಕೆಲಸ ಮಾಡಬೇಕು ಎಂದು ಬಂದಿರುವವರು ನಾವು. ಈ ಕೆಲಸವನ್ನು ಸರಿಯಾಗಿ ಮಾಡುತ್ತಿದ್ದೇನೆ. ಇದನ್ನು ಹೊರತು ಪಡಿಸಿ ಯಾವುದೇ ಸಿಡಿ ವಿಚಾರದ ಬಗ್ಗೆ ನನಗೆ ಏನು ಗೊತ್ತಿಲ್ಲ. ವಿಶ್ವನಾಥ್ ನಮ್ಮ ಗುರುಗಳು ನಾವು ಒಂದೇ ಪಕ್ಷದಲ್ಲಿ ದುಡಿದವರು. ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ, ಮುಂದಿನ ದಿನಗಳಲ್ಲಿ ಅವರಿಗೆ ಸಚಿವ ಸ್ಥಾನ ಸಿಗಬೇಕು ಎಂದು ಮನವಿ ಮಾಡುತ್ತೇನೆ. ಪಕ್ಷದಲ್ಲಿ ಯಾವುದೇ ಬಂಡಾಯವಿಲ್ಲ. ಮುನಿರತ್ನ ಹಾಗೂ ವಿಶ್ವನಾಥ್‍ಗೆ ಸಚಿವ ಸ್ಥಾನ ಸಿಗಬೇಕು ಎಂದು ನಮ್ಮ ಒತ್ತಡ ಇದೆ. ಎಲ್ಲರೊಂದಿಗೆ ಸಮಾಧಾನವಾಗಿ ಮಾತನಾಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

  • ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಾಗೇಶ್‍ಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧ್ಯಕ್ಷ ಸ್ಥಾನ

    ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಾಗೇಶ್‍ಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧ್ಯಕ್ಷ ಸ್ಥಾನ

    ಬೆಂಗಳೂರು: ಬೆಳಗ್ಗೆ ಸಂಪುಟದಿಂದ ಕೊಕ್ ನೀಡಿದ್ದ ನಾಗೇಶ್‍ಗೆ ಸಂಜೆ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಈ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ಸಂಪುಟದಿಂದ ಕೈ ಬಿಟ್ಟ ಹಿನ್ನೆಲೆಯಲ್ಲಿ ನಾಗೇಶ್‍ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತೊಂದು ಹುದ್ದೆ ನೀಡಿದ್ದಾರೆ. ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದ್ದಾರೆ. ಈ ಮೂಲಕ ನಾಗೇಶ್ ಸಮಾಧಾನ ಪಡಿಸಲು ಸಿಎಂ ಮುಂದಾಗಿದ್ದಾರೆ. ಬೆಳಗ್ಗೆಯಷ್ಟೇ ನಾಗೇಶ್ ರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆಯಲಾಗಿದ್ದು, ಇದೀಗ ಮತ್ತೊಂದು ಹುದ್ದೆಯನ್ನು ನೀಡಲಾಗಿದೆ.

    ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧ್ಯಕ್ಷರಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಸಂಪುಟ ದರ್ಜೆ ಸ್ಥಾನಮಾನ ನೀಡಿ ಸಮಾಧಾನ ಪಡಿಸಲಾಗಿದೆ. ರಾಜೀನಾಮೆ ಪಡೆದಿದ್ದಕ್ಕೆ ನಾಗೇಶ್ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಯಡಿಯೂರಪ್ಪನವರನ್ನು ಸಹ ಭೇಟಿಯಾಗಿ ಸಚಿವ ಸ್ಥಾನದಿಂದ ತೆಗೆಯದಂತೆ ಮನವಿ ಮಾಡಿದ್ದರು.

  • ಶೀಘ್ರದಲ್ಲಿ ಬಾರ್, ಕ್ಲಬ್, ಪಬ್ ಓಪನ್ ಸಾಧ್ಯತೆ: ಎಚ್.ನಾಗೇಶ್

    ಶೀಘ್ರದಲ್ಲಿ ಬಾರ್, ಕ್ಲಬ್, ಪಬ್ ಓಪನ್ ಸಾಧ್ಯತೆ: ಎಚ್.ನಾಗೇಶ್

    ಬೆಂಗಳೂರು: ಶೀಘ್ರದಲ್ಲಿ ಬಾರ್, ಕ್ಲಬ್ ಮತ್ತು ಪಬ್ ಓಪನ್ ಆಗುವ ಸಾಧ್ಯತೆ ಇದೆ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ತಿಳಿಸಿದರು.

    ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಮಾತನಾಡಿದ ಎಚ್.ನಾಗೇಶ್, ಶೀಘ್ರದಲ್ಲಿ ಬಾರ್, ಕ್ಲಬ್ ಮತ್ತು ಪಬ್ ಓಪನ್ ಆಗುವ ಸಾಧ್ಯತೆ ಇದೆ. ಈ ವಿಚಾರದಲ್ಲಿ ಸಿಎಂ ಜೊತೆಗೆ ನಾನು ಚರ್ಚೆ ನಡೆಸುವೆ. ಬಾರ್ ಮತ್ತು ಪಬ್ ಕಾರ್ಮಿಕರಿಗೆ ತೊಂದರೆಯಾಗಿದೆ. ಕ್ಲಬ್‍ಗಳಲ್ಲಿ ಸ್ಪೋರ್ಟ್ಸ್ ಚಟುವಟಿಕೆಯನ್ನು ಇಂದಿನಿಂದ ಆರಂಭವಾಗಿದೆ. ಅಲ್ಲಿ ಪಾರ್ಸಲ್‍ಗಳಿಗೆ ಮಾತ್ರ ಅನುಮತಿ ನೀಡಲಾಗಿದೆ ಎಂದರು.

    ಅಬಕಾರಿ ಇಲಾಖೆಗೆ ಲಾಕ್‍ಡೌನ್‍ನಿಂದ 3,000 ಕೋಟಿ ನಷ್ಟವಾಗಿತ್ತು. ಈಗ ಅದು 2,000 ಕೋಟಿಗೆ ಬಂದು ನಿಂತಿದೆ. ಮುಂದಿನ 8 ತಿಂಗಳಲ್ಲಿ ನಷ್ಟವನ್ನ ಸರಿದೂಗಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಬಾರ್, ಕ್ಲಬ್ ಓಪನ್ ಆದರೆ ವ್ಯಾಪಾರ ಆಗಬಹುದು. ಆಗ ಲಾಕ್‍ಡೌನ್‍ನಲ್ಲಿ ಉಂಟಾದ ನಷ್ಟವನ್ನು ಭರಿಸಬಹುದು. ಹೀಗಾಗಿ ನಮ್ಮ ಇಲಾಖೆಯ ಅಧಿಕಾರಿಗಳು ಚರ್ಚೆ ಮಾಡುತ್ತಿದ್ದೇವೆ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ತಿಳಿಸಿದರು.

    ಮನೆ ಮನೆಗೆ ಮಧ್ಯ ಸರಬರಾಜು ವಿಚಾರವಾಗಿ ಮಾತನಾಡಿದ ಅವರು, ಬೇರೆ ರಾಜ್ಯದ ಅನಿಸಿಕೆ, ಅಭಿಪ್ರಾಯ ಪಡೆದು ಮುಂದಿನ ಕ್ರಮದ ಚಿಂತನೆ ಮಾಡುತ್ತೀವೆ ಎಂದರು.

    ಅಕ್ರಮವಾಗಿ ಮನೆ, ಅಂಗಡಿಗಳಲ್ಲಿ ಮಧ್ಯ ಮಾರಾಟ ಮಾಡುತ್ತಿರುವವವ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಈ ಕುರಿತು ತನಿಖೆ ನಡೆಯುತ್ತಿದೆ. ಒಂದು ವೇಳೆ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದರೆ ನಿರ್ದಾಕ್ಷಿಣ್ಯವಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು

  • ಅಬಕಾರಿ ಸಚಿವ ನಾಗೇಶ್ ತವರು ಜಿಲ್ಲೆಯಲ್ಲಿ ಮದ್ಯ ಮಾರಾಟ ಹೆಚ್ಚಳ

    ಅಬಕಾರಿ ಸಚಿವ ನಾಗೇಶ್ ತವರು ಜಿಲ್ಲೆಯಲ್ಲಿ ಮದ್ಯ ಮಾರಾಟ ಹೆಚ್ಚಳ

    – ಲಾಕ್‍ಡೌನ್ ವೇಳೆ ರಾಜ್ಯದಲ್ಲೇ ಅತಿ ಹೆಚ್ಚು ಅಕ್ರಮ ಮದ್ಯ ಮಾರಾಟ

    ಕೋಲಾರ: ಜಿಲ್ಲೆಯಲ್ಲಿ ಶಾಶ್ವತ ಕುಡಿಯೋ ನೀರಿಗೂ ಬರ ಇದೆ. ಆದರೆ ಕೊರೊನಾ ಸಂಕಷ್ಟದ ಮಧ್ಯೆ ಮದ್ಯ ಮಾರಾಟಕ್ಕೆ ಬರವಿಲ್ಲ ಅನ್ನೋ ಅಂಶವೊಂದು ಬಯಲಾಗಿದೆ. ಲಾಕ್‍ಡೌನ್ ಬಳಿಕ ಶೇ. 54 ರಷ್ಟು ಮದ್ಯ ಮಾರಾಟ ಹೆಚ್ಚಾಗಿದ್ದು, ರಾಜ್ಯದಲ್ಲೆ ಎಣ್ಣೆ ಸಚಿವರ ತವರು ಜಿಲ್ಲೆ ಅಕ್ರಮ ಮದ್ಯ ಮಾರಾಟದಲ್ಲಿ 1 ನೇ ಸ್ಥಾನ ಪಡೆದಿದೆ.

    ಕೋಲಾರ, ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಿಗೆ ಹೊಂದಿಕೊಂಡಿರುವ ಗಡಿ ಜಿಲ್ಲೆ, ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ನೀರಿಗೆ ಇಲ್ಲಿ ಬರವಿದೆ. ಆದರೆ ಅಬಕಾರಿ ಸಚಿವ ಹೆಚ್.ನಾಗೇಶ್ ತಮ್ಮ ಒಂದು ವರ್ಷದ ಅವಧಿಯಲ್ಲೆ ತನ್ನ ತವರು ಜಿಲ್ಲೆಯಲ್ಲಿ ಮದ್ಯ ಮಾರಾಟ ಹೆಚ್ಚು ಮಾಡುವ ಮೂಲಕ ವಿನೂತನ ರೀತಿಯ ಸಾಧನೆ ಮಾಡಿದ್ದಾರೆ.

    ಹೌದು. ಅಂಕಿ ಅಂಶಗಳ ಪ್ರಕಾರ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಕೋಲಾರ ಜಿಲ್ಲೆಯಲ್ಲಿ ಶೇ. 54 ರಷ್ಟು ಮದ್ಯ ಮಾರಾಟ ಹೆಚ್ಚಾಗಿದೆ. ಕಳೆದ ಜುಲೈ ತಿಂಗಳಿಗೂ 2020 ರ ಜುಲೈ ತಿಂಗಳಲ್ಲಿ 66 ಸಾವಿರ ಮದ್ಯದ ಬಾಕ್ಸ್ ಗಳು ಹೆಚ್ಚಾಗಿ ಮಾರಾಟವಾಗಿದೆ ಅನ್ನೋ ಅಂಶ ಬೆಳಕಿಗೆ ಬಂದಿದೆ. ಇದಕ್ಕೆ ಆಂಧ್ರಪ್ರದೇಶದಲ್ಲಿ ಮದ್ಯದಂಗಡಿಗಳ ಸಂಖ್ಯೆ ಕಡಿಮೆ ಮಾಡುತ್ತಿರುವುದು ಹಾಗೂ ರಾಜ್ಯದ ಮದ್ಯಕ್ಕೆ ಹೆಚ್ಚಿನ ಬೇಡಿಕೆ ಇರುವುದೇ ಮದ್ಯ ಮಾರಾಟ ಹೆಚ್ಚಾಗುವುದಕ್ಕೆ ಕಾರಣ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಆಂಧ್ರ ಹಾಗೂ ತಮಿಳುನಾಡು ಗಡಿಗಳಲ್ಲಿ ಹೆಚ್ಚಾಗಿ ಮದ್ಯದಂಗಡಿಗಳು ತಲೆ ಎತ್ತಿದ್ದು, ನೆರೆಯ ಮದ್ಯ ಪ್ರಿಯರನ್ನ ಆಕರ್ಷಿಸುತ್ತಿರುವುದೇ ಮತ್ತೊಂದು ಕಾರಣ.

    ನೆರೆಯ ಆಂಧ್ರ ಹಾಗೂ ತಮಿಳುನಾಡು ರಾಜ್ಯದ ಬಾರ್‍ಗಳು ಗಡಿಯಿಂದ ದೂರಕ್ಕೆ ಇದ್ದು, ಮದ್ಯ ಪ್ರಿಯರು ಹೋಗಿ ಬರಲು ಕಷ್ಟ. ರಾಜ್ಯದ ಮದ್ಯ ಕ್ವಾಲಿಟಿ ಹಾಗೂ ಕ್ವಾಂಟಿಟಿಗೆ ಮೂರು ರಾಜ್ಯದ ಮದ್ಯಪ್ರಿಯರು ಮನಸೋತಿದ್ದಾರೆ. ಪರಿಣಾಮ ಲಾಕ್‍ಡೌನ್ ವೇಳೆ ಲಕ್ಷಾಂತರ ರೂಪಾಯಿ ಅಕ್ರಮವಾಗಿ ಮಾರಾಟ ಕೂಡ ನಡೆದಿದೆ. ಲಾಕ್‍ಡೌನ್ ವೇಳೆ ಮದ್ಯ ನಿಷೇಧ ಮಾಡಿದ ಹಿನ್ನೆಲೆಯಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆದಿತ್ತು. ಹಾಗಾಗಿ ಲಾಕ್ ಡೌನ್ ಅವಧಿಯಲ್ಲಿ ದಾಳಿ ಮಾಡಿ ಲಕ್ಷಾಂತರ ರೂಪಾಯಿ ಮದ್ಯವನ್ನ ಅಬಕಾರಿ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

    ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 2075 ಲೀ ಮದ್ಯ, 989 ಲೀ ಬಿಯರ್, 120 ಲೀ ವೈನ್, 111 ಲೀ ಸೇಂಧಿ, 75 ಲೀ ಕಳ್ಳ ಭಟ್ಟಿ, 462 ಲೀ ಬೆಲ್ಲದ ಕೊಳೆ ಹಾಗೂ ಅರೋಪಿಗಳಿಂದ 16 ದ್ವಿಚಕ್ರ ವಾಹನಗಳನ್ನ ವಶಕ್ಕೆ ಪಡೆಯಲಾಗಿದೆ. ಅದರಲ್ಲೂ ರಾಜ್ಯದಲ್ಲೆ ಜಿಲ್ಲೆಯಲ್ಲಿ ಅತಿ ಹೆಚ್ಚು ಅಕ್ರಮ ಮದ್ಯ ಮಾರಾಟ ಪ್ರಕರಣಗಳು ದಾಖಲಾಗಿವೆ ಅನ್ನೋದು ಮತ್ತೊಂದು ವಿಶೇಷ.

    ಅಬಕಾರಿ ಸಚಿವ ನಾಗೇಶ್ ಕಳೆದ ಒಂದು ವರ್ಷದಲ್ಲಿ ಜಿಲ್ಲೆಗೆ ಯಾವುದೇ ಉಪಯೋಗವಾಗುವ ಸಾಧನೆ ಮಾಡಿಲ್ಲವಾದ್ರು, ಜಿಲ್ಲೆಯಲ್ಲಿ ಮದ್ಯ ಮಾರಾಟ ಹೆಚ್ಚು ಮಾಡಿದ್ದು ವಿಶೇಷ ಸಾಧನೆ ಅಂದರೆ ತಪ್ಪಲ್ಲ. ಇನ್ನಾದ್ರೂ ಜಿಲ್ಲೆಯ ಸಮಗ್ರ ಅಭಿವೃದ್ದಿ ಕಡೆ ಗಮನ ಹರಸಿ, ಸರ್ಕಾರಕ್ಕೆ ಒಳ್ಳೆಯ ಹೆಸರು ಸಿಗಲಿ ಅನ್ನೋದೆ ಎಲ್ಲರ ಆಶಯ.

  • ಶಂಕರ್, ವಿಶ್ವನಾಥ್, ಎಂಟಿಬಿಗೆ ಎಂಎಲ್‍ಸಿ ಸ್ಥಾನ ನೀಡ್ಬೇಕು: ಸಚಿವ ನಾಗೇಶ್

    ಶಂಕರ್, ವಿಶ್ವನಾಥ್, ಎಂಟಿಬಿಗೆ ಎಂಎಲ್‍ಸಿ ಸ್ಥಾನ ನೀಡ್ಬೇಕು: ಸಚಿವ ನಾಗೇಶ್

    ಕೋಲಾರ: ಮಾಜಿ ಸಚಿವ ಎಂ.ಟಿ.ಬಿ ನಾಗರಾಜ್ ಸೇರಿದಂತೆ ವಿಶ್ವನಾಥ್ ಹಾಗೂ ಶಂಕರ್ ಅವರಿಗೆ ನ್ಯಾಯಬದ್ಧವಾಗಿ ಎಂ.ಎಲ್.ಸಿ ಸ್ಥಾನ ನೀಡಬೇಕೆಂದು ಅಬಕಾರಿ ಸಚಿವ ಎಚ್.ನಾಗೇಶ್ ತಮ್ಮ ಆಪ್ತರ ಪರವಾಗಿ ಬ್ಯಾಟ್ ಬೀಸಿದ್ದಾರೆ.

    ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಮನ್ವಂತರ ಪ್ರಕಾಶನ ಹಾಗೂ ಜನಸೇವಾ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಸಿ ನೆಡುವ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ರಚನೆಯಾಗಲು ಈ ಮೂವರು ಕಾರಣರಾಗಿದ್ದಾರೆ ಎಂದರು.

    ಎಂಟಿಬಿ ನಾಗರಾಜ್ ಸೇರಿದಂತೆ ಈ ಮೂವರು ತ್ಯಾಗ ಮಾಡಿದ್ದಾರೆ. ಹೀಗಾಗಿ ಅವರಿಗೆ ಎಂ.ಎಲ್.ಸಿ ಸ್ಥಾನ ನೀಡುವುದರಲ್ಲಿ ತಪ್ಪಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ರು. ಅಲ್ಲದೆ ನಾನು ಸೇರಿದಂತೆ 18 ಜನರು ಕಷ್ಟಕಾಲದಲ್ಲಿದ್ದಾಗ ಕೈ ಹಿಡಿದಿದ್ದೇವೆ. ಹೀಗಾಗಿ ನಾನು ಸಹ ಅವರ ಪರವಾಗಿ ಎಂ.ಎಲ್.ಸಿ ಸ್ಥಾನ ನೀಡಬೇಕೆಂದು ಒತ್ತಾಯ ಮಾಡುವುದಾಗಿ ತಿಳಿಸಿದರು.

    ಬಿಜೆಪಿ ಸರ್ಕಾರ ರಚನೆಯಾಗುವುದಕ್ಕೆ ಹಾಗೂ ಆಡಳಿತದಲ್ಲಿರುವುದಕ್ಕೆ ಕಾರಣ ಇವರು. ಇಲ್ಲವಾದಲ್ಲಿ ವಿರೋಧ ಪಕ್ಷದಲ್ಲಿರಬೇಕಿತ್ತು. ಯಡಿಯೂರಪ್ಪ ಅವರು ಮಾತು ಕೊಟ್ಟರೆ ಯಾವತ್ತೂ ತಪ್ಪುವುದಿಲ್ಲ, ಅವರದ್ದು ಮಾತು ಕೊಟ್ಟರೆ ನಡೆದುಕೊಳ್ಳುವಂತಹ ಗುಣ. ನನ್ನ ಎರಡು ವರ್ಷದ ಅನುಭವದಲ್ಲಿ ನುಡಿದಂತೆ ನಡೆದ ಧೀಮಂತ ನಾಯಕ ಅವರು ಎಂದರು.

    ಈಗಾಗಲೇ ಬಾರ್ ಅಂಡ್ ರೆಸ್ಟೋರೆಂಟ್ ಗಳಲ್ಲಿ ಪಾರ್ಸಲ್ ಗೆ ಅವಕಾಶ ನೀಡಲಾಗಿದೆ. ಉಳಿದಂತೆ ಪಬ್‍ಗಳು ಓಪನ್ ಮಾಡಲು ಇದೆ 8 ರಂದು ತೀರ್ಮಾನ ಮಾಡಲಾಗುವುದು.

  • ಮದ್ಯಪ್ರಿಯರಿಗೆ ಮತ್ತೊಂದು ಗುಡ್‍ನ್ಯೂಸ್- ನಾಳೆಯಿಂದ ಬಾರ್, ಕ್ಲಬ್‍ಗಳಲ್ಲೂ ಸಿಗುತ್ತೆ ಎಣ್ಣೆ

    ಮದ್ಯಪ್ರಿಯರಿಗೆ ಮತ್ತೊಂದು ಗುಡ್‍ನ್ಯೂಸ್- ನಾಳೆಯಿಂದ ಬಾರ್, ಕ್ಲಬ್‍ಗಳಲ್ಲೂ ಸಿಗುತ್ತೆ ಎಣ್ಣೆ

    – ಬೆಳಗ್ಗೆ 9ರಿಂದ ಸಂಜೆ 7ರವರೆಗೆ ಖರೀದಿಗೆ ಅವಕಾಶ
    – ಎಂಆರ್‌ಪಿ ಬೆಲೆಗಿಂತ ಹೆಚ್ಚಿಗೆ ಮಾರಾಟ ಮಾಡಿದ್ರೆ ಲೈಸನ್ಸ್ ರದ್ದು

    ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದ ಸುಮಾರು ಒಂದೂವರೆ ತಿಂಗಳ ನಂತರ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಮೂಲಕ ಸರ್ಕಾರ ಮದ್ಯಪ್ರಿಯರಿಗೆ ಸಿಹಿ ಸುದ್ದಿ ನೀಡಿತ್ತು. ಇದೀಗ ಬಾರ್, ಕ್ಲಬ್‍ಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಮೂಲಕ ಮತ್ತೆ ಎಣ್ಣೆಪ್ರಿಯರಿಗೆ ಸರ್ಕಾರ ಗುಡ್‍ನ್ಯೂಸ್ ನೀಡಿದೆ.

    ಈ ಕುರಿತು ಅಬಕಾರಿ ಸಚಿವ ನಾಗೇಶ್ ಸುದ್ದಿಗೋಷ್ಠಿ ನಡೆಸಿದ್ದು, ಐದನೇ ದಿನಕ್ಕೆ 122.16 ಕೋಟಿ ತೆರಿಗೆ ಸಂಗ್ರಹ ಆಗಿದೆ. ಯಾಕೆಂದರೆ ಇಂದಿನಿಂದ ತೆರಿಗೆ ಅಧಿಕವಾಗಿದ್ದರಿಂದ ಆದಾಯವೂ ಹೆಚ್ಚಾಗಿದೆ. ಈ ಮೂಲಕ ಸರ್ಕಾರಕ್ಕೆ ಒಟ್ಟು 767 ಕೋಟಿ ಆದಾಯ ಬಂದಿದೆ. ಗಡಿಭಾಗದಲ್ಲಿ ಆಧಾರ್ ಪರೀಕ್ಷಿಸಿ ಮದ್ಯ ನೀಡಲು ಸೂಚನೆ ನೀಡಿದ್ದೆ. ಲಾಕ್‍ಡೌನ್ ಬಳಿಕ ಮದ್ಯದ ಅಂಗಡಿ ಓಪನ್ ಆದ ಬಳಿಕ ಮೊದಲು ನೂಕುನುಗ್ಗಲು ಉಂಟಾಗಿತ್ತು ಎಂದರು.

    ನಾಳೆಯಿಂದ ಲಾಡ್ಜ್, ಬಾರ್, ಕ್ಲಬ್‍ಗಳಲ್ಲಿ ಮದ್ಯ ಮಾರಾಟ ಮಾಡಬಹುದು. ಬಾರ್ ಆ್ಯಂಡ್ ರೆಸ್ಟೋರೆಂಟ್, ಕ್ಲಬ್, ಮಾಲೀಕರು ನಮ್ಮಲ್ಲಿರುವ ಸ್ಟಾಕನ್ನು ಮಾರಾಟ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಂಡಿದ್ದರು. ಈ ಬಗ್ಗೆ ಸಿಎಂ ಜೊತೆ ಮಾತನಾಡಿದ್ದೆ. ಹೀಗಾಗಿ ಇಂದು ಸಂಜೆಯಿಂದ ಅಥವಾ ನಾಳೆಯಿಂದ ಅವುಗಳು ಓಪನ್ ಆಗುತ್ತವೆ. ಬಾರ್, ಕ್ಲಬ್ ಮತ್ತು ಲಾಡ್ಜ್ ಗಳಲ್ಲೂ ಪಾರ್ಸಲ್‍ಗೆ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಸಿಎಂ ಯಡಿಯೂರಪ್ಪ ಅನುಮತಿ ನೀಡಿದ್ದಾರೆ ಎಂದು ಹೇಳಿದರು.

    ಬಾರ್ ಆ್ಯಂಡ್ ರೆಸ್ಟೋರೆಂಟ್, ಕ್ಲಬ್, ಸಿಎಲ್7, ಸಿಎಲ್4, ಸಿಎಲ್‍ವೈನ್ ಈ ಲೈಸನ್ಸ್ ಇರುವವರು ಓಪನ್ ಮಾಡಬಹುದು. ಎಂಆರ್‌ಪಿ ಬೆಲೆಗೆ ಮಾತ್ರ ಮಾರಾಟ ಮಾಡಬೇಕು. ಎಂಆರ್‌ಪಿ ಬೆಲೆಗಿಂತ ಹೆಚ್ಚಿಗೆ ಮಾರಾಟ ಮಾಡಿದರೆ ಲೈಸನ್ಸ್ ರದ್ದು ಮಾಡಲಾಗುತ್ತಿದೆ. ಇದರ ಜವಾಬ್ದಾರಿ ಮಾಲೀಕರ ಮೇಲಿರುತ್ತದೆ. ಖರೀದಿ ಸಮಯ ಬೆಳಗ್ಗೆ 9 ರಿಂದ ಸಂಜೆ 7 ಗಂಟೆಯವರೆಗೆ ಮಾತ್ರ ಇರುತ್ತದೆ.

    ಸುಪ್ರೀಂಕೋರ್ಟ್ ನೀಡಿದ ಆದೇಶ ನೋಡಿಲ್ಲ. ಆನ್‍ಲೈನ್ ಮಾರಾಟಕ್ಕೆ ಅವಕಾಶ ನೀಡಿದರೆ ತಪ್ಪಿಲ್ಲ. ಮೊದಲಿಂದಲೂ ಆ ಬಗ್ಗೆ ಚರ್ಚೆ ಇತ್ತು. ಪ್ರತಿವರ್ಷ ಅಬಕಾರಿ ಆದಾಯ ಸರ್ಕಾರಕ್ಕೆ 25 ಸಾವಿರ ಕೋಟಿ ಬರಲಿದೆ. ಈ ವರ್ಷ 2,500 ಕೋಟಿ ಹೆಚ್ಚಾಗಲಿದೆ ಎಂದರು.

  • ಬಡವರಿಗೆ ಸಬ್ಸಿಡಿ ದರದಲ್ಲಿ ಮದ್ಯ ಕೊಡ್ತೀವಿ – ಅಬಕಾರಿ ಸಚಿವ

    ಬಡವರಿಗೆ ಸಬ್ಸಿಡಿ ದರದಲ್ಲಿ ಮದ್ಯ ಕೊಡ್ತೀವಿ – ಅಬಕಾರಿ ಸಚಿವ

    ಬೆಂಗಳೂರು: ಮನೆ ಬಾಗಿಲಿಗೆ ಮದ್ಯ ಡೆಲಿವರಿ ಮಾಡ್ತೀನಿ ಎಂದು ವಿವಾದಕ್ಕೆ ಗುರಿಯಾಗಿದ್ದ ರಾಜ್ಯದ ಅಬಕಾರಿ ಸಚಿವ ಈಗ ಮತ್ತೊಂದು ವಿವಾದಕ್ಕೆ ಗುರಿಯಾಗ್ತಿದ್ದಾರೆ. ಯಡಿಯೂರಪ್ಪ ಸರ್ಕಾರದಲ್ಲಿರುವ ಅಬಕಾರಿ ಸಚಿವ ನಾಗೇಶ್ ವರ್ಷದ ಕಡೆ ದಿನ ಮತ್ತೊಂದು ವಿವಾದಾತ್ಮಕ ಹೆಜ್ಜೆ ಇಟ್ಟಿದ್ದಾರೆ. ಬಡವರಿಗೆ ಮದ್ಯವನ್ನು ಸಬ್ಸಿಡಿ ದರದಲ್ಲಿ ಸರ್ಕಾರ ಕೊಡಲು ಚಿಂತಿಸಿದೆ ಎಂದು ಹೇಳಿದ್ದಾರೆ.

    ವಿಕಾಸಸೌಧದಲ್ಲಿ ಮಾತನಾಡಿದ ಅವರು, ಬಡ ಜನರು ಹೆಚ್ಚು ಬಳಕೆ ಮಾಡುವ ಕಡಿಮೆ ದರದ ಮದ್ಯವನ್ನು ಸಬ್ಸಿಡಿ ದರದಲ್ಲಿ ಕೊಡಬೇಕಂದು ಸರ್ಕಾರದ ಚಿಂತನೆ ಇದೆ. ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಮದ್ಯ ಸರಬರಾಜು ಮಾಡುವ ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.

    ಅಂದಹಾಗೆ ನಾಗೇಶ್ ಹೇಳಿಕೆ ವೈಯಕ್ತಿಕವಾಗಿ ಕೊಟ್ಟಿರೋದಾ? ಸರ್ಕಾರ ಮಟ್ಟದಲ್ಲಿ ನಡೆದಿರುವ ಬೆಳವಣಿಗೆನಾ ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲ. ಏಕೆಂದರೆ ಈ ಹಿಂದೆ ಮನೆ ಬಾಗಿಲಿಗೆ ಮದ್ಯ ಸರಬರಾಜು ಮಾಡುತ್ತೇವೆ, ಹೋಮ್ ಡೆಲಿವರಿ ಇದೆ ಎಂದಿದ್ದರು.

    ನಾಗೇಶ್ ಹೋಮ್ ಡೆಲಿವರಿ ಹೇಳಿಕೆ ರಾಜ್ಯಾದ್ಯಂತ ವಿವಾದಕ್ಕೆ ಕಾರಣವಾಗಿತ್ತು. ಕೂಡಲೇ ಮುಖ್ಯಮಂತ್ರಿ ಯಡಿಯೂರಪ್ಪ ಮಧ್ಯಪ್ರವೇಶ ಮಾಡಿ ಹೋಮ್ ಡೆಲಿವರಿ ಚಿಂತನೆ ಇಲ್ಲ ಎಂದು ಹೇಳಿ ವಿವಾದ ತಿಳಿಗೊಳಿಸಿದ್ದರು. ಈಗ ಮತ್ತೆ ಸಬ್ಸಿಡಿ ದರದಲ್ಲಿ ಮದ್ಯ ನೀಡುತ್ತೇವೆ ಎನ್ನುವ ಹೇಳಿಕೆ ವಿವಾದಕ್ಕೆ ತಿರುಗಿದ್ದು, ಯಡಿಯೂರಪ್ಪ ಅಬಕಾರಿ ಸಚಿವರ ಚಿಂತನೆಗೆ ಓಕೆ ಅಂತಾರಾ? ತಿರಸ್ಕರಿಸುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.

  • ಸ್ಯಾಂಡಲ್‍ವುಡ್‍ನಲ್ಲಿ ತೆರೆ ಕಾಣಲಿದೆ ಡಿಕೆಶಿ ಜೀವನಾಧಾರಿತ ಚಿತ್ರ?

    ಸ್ಯಾಂಡಲ್‍ವುಡ್‍ನಲ್ಲಿ ತೆರೆ ಕಾಣಲಿದೆ ಡಿಕೆಶಿ ಜೀವನಾಧಾರಿತ ಚಿತ್ರ?

    ಬೆಂಗಳೂರು: ತಿಹಾರ್ ಜೈಲು ಸೇರಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ಜೀವನಾಧಾರಿತ ಸಿನಿಮಾವನ್ನು ತೆರೆ ಮೇಲೆ ತರಲು ಸ್ಯಾಂಡಲ್‍ವುಡ್‍ನಲ್ಲಿ ತಯಾರಿ ನಡೆಯುತ್ತಿದೆ ಎನ್ನಲಾಗಿದೆ.

    ಹೌದು. ನಿರ್ದೇಶಕ ನಾಗೇಶ್ ‘ಕನಕಪುರ ಬಂಡೆ’, ‘ಕನಕಪುರ ಕೆಂಪೇಗೌಡ’, ‘ಕನಕಪುರ ಬೆಳಗಾವಿ ಎಕ್ಸ್‌ಪ್ರೆಸ್‌’ ಎಂಬ ಮೂರು ಟೈಟಲ್ ಇಟ್ಟುಕೊಂಡು ಸಿನಿಮಾ ಮಾಡಲು ಸಿದ್ದತೆ ನಡೆಸುತ್ತಿದ್ದಾರೆ. ಆದರಿಂದ ಅವರು ಈ ಮೂರರಲ್ಲಿ ಯಾವುದಾದರು ಒಂದು ಟೈಟಲ್ ಆಯ್ಕೆ ಮಾಡಿ, ಸಿನಿಮಾ ಟೈಟಲ್ ನೊಂದಣಿ ಮಾಡಿಕೊಳ್ಳಲು ಕನ್ನಡ ಫಿಲಂ ಚೇಂಬರ್‍ಗೆ ಕದ ತಟ್ಟಿದ್ದಾರೆ. ಈ ಮೂರರಲ್ಲಿ ಯಾವ ಟೈಟಲ್ ಅನ್ನು ಚೇಂಬರ್ ನೀಡದಿದ್ದರೆ ಕೋರ್ಟ್ ಮೊರೆ ಹೋಗಲು ಸಿದ್ಧ ಎಂದು ನಾಗೇಶ್ ತಿಳಿಸಿದ್ದಾರೆ.

    ಸಿನಿಮಾಗೆ ನಾಗೇಶ್ ಅವರು ಆಯ್ಕೆ ಮಾಡಿಕೊಂಡಿರುವ ಟೈಟಲ್‍ಗಳನ್ನು ನೋಡಿದರೆ ಇದು ಡಿಕೆಶಿ ಅವರು ಜೀವನಾಧಾರಿಕ ಚಿತ್ರನಾ? ಎಂಬ ಪ್ರಶ್ನೆ ಹುಟ್ಟುಕೊಂಡಿದೆ. ನಾಗೇಶ್ ಅವರು ಡಿಕೆಶಿ ಅವರ ಬಗ್ಗೆಯೇ ಸಿನಿಮಾ ಮಾಡುತ್ತಿದ್ದಾರೆ ಅದರಲ್ಲಿ ಅನುಮಾನ ಬೇಡ ಎಂಬ ಊಹಪೋಹದ ಮಾತುಗಳು ಕೂಡ ಕೇಳಿ ಬರುತ್ತಿದೆ. ಟೈಟಲ್ ನೋಡಿದರೆ ಮೇಲ್ನೋಟಕ್ಕೆ ಈ ಚಿತ್ರ ಕಾಂಗ್ರೆಸ್ ಟ್ರಬಲ್ ಶೂಟರ್ ಕುರಿತಾಗಿಯೇ ಇರುತ್ತದೆ ಎನಿಸುತ್ತಿದ್ದರೂ, ಈ ಬಗ್ಗೆ ನಾಗೇಶ್ ಅವರು ಸ್ಪಷ್ಟನೆ ನೀಡಿದ ಮೇಲೆಯೇ ಸತ್ಯಾಂಶ ತಿಳಿಯಬೇಕಿದೆ.

    ಡಿಕೆಶಿ ಅವರಿಗೆ ಸೇರಿದ ದೆಹಲಿ ಫ್ಲಾಟ್‍ಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದಾಗ, ಅವರ ಹಾಗೂ ಆಪ್ತರ ಮನೆಗಳಲ್ಲಿ ಇದ್ದ 8.59 ಕೋಟಿ ಹಣವನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಇಡಿ ಡಿಕೆಶಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಿ, ಸದ್ಯ ತಿಹಾರ್ ಜೈಲಿಗೆ ಕಳುಹಿಸಿದ್ದಾರೆ. ಈ ಪ್ರಕರಣದಲ್ಲಿ ಡಿಕೆಶಿ ಆಪ್ತೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿ 184 ಜನರಿಗೆ ನೋಟಿಸ್ ನೀಡಲಾಗಿದೆ.

    ಇದೇ ವಿಚಾರ ಇಟ್ಟುಕೊಂಡು ನಾಗೇಶ್ ಅವರು ಸಿನಿಮಾ ಮಾಡಲು ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಸಿನಿಮಾದಲ್ಲಿ ಯಾರೆಲ್ಲ ಇರಲಿದ್ದಾರೆ? ಚಿತ್ರ ನಿಜಕ್ಕೂ ಕಾಂಗ್ರೆಸ್ ಟ್ರಬಲ್ ಶೂಟರ್ ಅವರಿಗೆ ಸಂಬಂಧ ಪಟ್ಟಿದ್ದಾ? ಎನೆಲ್ಲಾ ಅಂಶ ಸಿನಿಮಾನದಲ್ಲಿ ಇರಲಿದೆ ಎಂದು ನಿರ್ದೇಶಕರೇ ಸ್ಪಷ್ಟನೆ ನೀಡಬೇಕಿದೆ.