Tag: ನವೀರಕಣ

  • ಕೊಪ್ಪಳ ಅಬಕಾರಿ ಇಲಾಖೆಯಲ್ಲಿ ರಾತ್ರಿಯೂ ಕೆಲಸ – ಅನುಮಾನ ಮೂಡಿಸಿದ ನಡೆ

    ಕೊಪ್ಪಳ ಅಬಕಾರಿ ಇಲಾಖೆಯಲ್ಲಿ ರಾತ್ರಿಯೂ ಕೆಲಸ – ಅನುಮಾನ ಮೂಡಿಸಿದ ನಡೆ

    – ಪ್ರಶ್ನೆ ಕೇಳುತ್ತಿದ್ದಂತೆ ಗರಂ ಆದ ಅಬಕಾರಿ ಡಿಸಿ
    – ಸುದ್ದಿ ಮಾಡಿದರೆ ಕೇಸ್ ಹಾಕ್ತಿನಿ ಎಂದು ಬೆದರಿಕೆ

    ಕೊಪ್ಪಳ: ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಅಬಕಾರಿ ಇಲಾಖೆಯ ಅಧಿಕಾರಿಗಳು ಹಗಲು ರಾತ್ರಿ ಎನ್ನದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದು ಹಲವು ಅನುಮಾನಗಳು ಎದ್ದಿದೆ.

    ಹೌದು. ಜಿಲ್ಲೆಯ ಅಬಕಾರಿ ಡಿ.ಸಿ ವೀಣಾ.ಆರ್ ರಾತ್ರಿ ಆದರೂ ಕೆಲಸ ಮಾಡುತ್ತಿದ್ದಾರೆ. ಈ ವಿಚಾರ ತಿಳಿದ ಪಬ್ಲಿಕ್ ಟಿವಿ ಯಾಕೆ ಇಷ್ಟೊಂದು ಕೆಲಸ ನಡೆಯುತ್ತಿದೆ ಎಂದು ಕೇಳಲು ಹೋಗಿದ್ದಕ್ಕೆ ಡಿ.ಸಿ ಮೇಡಂ ಕಸಿವಿಸಿಯಾಗಿದ್ದಾರೆ.

    ಈ ಹಿಂದೆ ನಾವು ಕೇಳಿದ ಮಾಹಿತಿಯನ್ನು ನೀವು ಈವರೆಗೂ ಕೊಟ್ಟಿಲ್ಲ. ಈಗ ನೀಡಿ ಎಂದು ಕೇಳಿದ್ದಕ್ಕೆ ಗರಂ ಆದ ಮೇಡಂ, ನಾನು ಯಾಕೆ ನಿಮಗೆ ಮಾಹಿತಿ ಕೊಡಬೇಕು. ನಾನು ಪತ್ರಿಕೋದ್ಯಮ ವಿದ್ಯಾರ್ಥಿನಿ ನನಗೂ ಗೊತ್ತು. ನೀವು ಪ್ರೆಸ್ ಆದರೆ ನನಗೇನು? ನಿಮಗೆ ಮಾಹಿತಿ ತಾನೆ ಬೇಕು ಕೊಡುತ್ತೇನೆ. ಆದರೆ ಯಾವಾಗ ಕೊಡುತ್ತೇನೆ ಎನ್ನುವುದು ಗೊತ್ತಿಲ್ಲ ಎಂದು ವೀಣಾ ಉತ್ತರಿಸಿದ್ದಾರೆ.

    ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ, ಎಂಆರ್‌ಪಿ ದರಕ್ಕಿಂತ ಹೆಚ್ಚಿಗೆ ಮದ್ಯ ಮಾರಾಟ, ಹಳ್ಳಿಗಳಲ್ಲಿ, ಗಲ್ಲಿಗಳಲ್ಲಿ ಅಕ್ರಮ ಮದ್ಯ ಮಾರಾಟ, ನೀತಿ ನಿಯಮವನ್ನು ಪಾಲಿಸದೆ ಮನಸೋ ಇಚ್ಛೆ ಬಂದಂತೆ ಬಾರ್‌ಗಳಲ್ಲಿ ಮದ್ಯ ಮಾರಾಟ ಇಂತಹ ಅನೇಕ ಸುದ್ದಿಗಳನ್ನು ಪಬ್ಲಿಕ್ ಟಿವಿ ಪ್ರಸಾರ ಮಾಡಿತ್ತು. ಇದರ ಬಗ್ಗೆ ಏನಾದರೂ ಕೇಳಿದರೆ ಮೇಡಂ, ನಾನು ಈಗ ಬಂದಿದ್ದೇನೆ ಎಂದು ನೆಪ ಹೇಳುತ್ತಿದ್ದರು. ಕೊನೆಗೆ ಪಬ್ಲಿಕ್ ಟಿವಿ ಕಾರ್ಯಾಚರಣೆ ಮಾಡಿದಾಗ ಅಸಲಿ ವಿಷಯ ಬೆಳಕಿಗೆ ಬಂದಿದೆ.

    ಪ್ರತಿ ವರ್ಷ ಜೂನ್ ತಿಂಗಳಲ್ಲಿ ರಾಜ್ಯಾದ್ಯಂತ ಎಲ್ಲ ರೀತಿಯ ಬಾರ್ ಅಂಡ್ ರೆಸ್ಟೋರೆಂಟ್‍ಗಳು ನವೀಕರಣವಾಗಬೇಕು. ಆದರೆ ಕೊಪ್ಪಳ ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯ ವಿರುದ್ಧ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಜಿಲ್ಲೆಯಲ್ಲಿ ಒಟ್ಟು 144 ಬಾರ್‌ಗಳಿದ್ದು, ಒಂದೊಂದು ಬಾರ್ ನವೀಕರಣಕ್ಕೆ ಕನಿಷ್ಠ 50,000 ರೂ. ಹಣವನ್ನು ನೀಡಬೇಕಂತೆ. ಈಗಾಗಲೇ ಬಾರ್ ಮಾಲೀಕರ ಒಂದು ಸುತ್ತಿನ ಮಾತುಕತೆ ಮುಗಿದಿದ್ದು, ಇದೇ ತಿಂಗಳು 30ರ ಒಳಗಾಗಿ ಎಲ್ಲಾ ಹಣವನ್ನು ಕೊಡಬೇಕಾಗಿ ಅಬಕಾರಿ ಇಲಾಖೆ ತಾಕಿತು ಮಾಡಿದೆ ಎನ್ನುವ ಆರೋಪ ಕೇಳಿ ಬಂದಿದೆ.

    ಈ ವಿಚಾರ ತಿಳಿಯುತ್ತಿದಂತೆ ಪಬ್ಲಿಕ್ ಟಿವಿ ರಾತ್ರಿ 8 ಗಂಟೆಯ ವೇಳೆ ಅಬಕಾರಿ ಇಲಾಖೆಗೆ ತೆರಳಿದೆ. ಆಗ ಡಿಸಿ ಮೇಡಂ ಒಂದು ಕ್ಷಣ ಆ ಕಡೆಯಿಂದ ಈ ಕಡೆಗೆ ಓಡಾಡಲು ಪ್ರಾರಂಭಿಸಿದ್ದಾರೆ. ಕೊನೆಗೆ ಡಿಸಿ ಮೇಡಂ, ನಾನು ನಿಮ್ಮ ಮೇಲೆ ಕೇಸ್ ದಾಖಲಿಸುತ್ತೇನೆ ಎಂದು ಗದರಿಸಿದ್ದಾರೆ. ಅಬಕಾರಿ ಡಿಸಿ ಅವರ ವರ್ತನೆ ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್ ಅವರಿಗೂ ಗೊತ್ತಾಗಿ ಈಗ ಆದೇಶ ಹೊರಡಿಸಿದ್ದಾರೆ.

    ಆದೇಶ ಪ್ರತಿಯಲ್ಲಿ ಏನಿದೆ?
    2019-20ನೇ ಸಾಲಿಗೆ ಸನ್ನದುಗಳ ನವೀಕರಣಕ್ಕೆ ಸಂಬಂಧಿಸಿದಂತೆ ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಆರೋಪಗಳು ಕೇಳಿಬರುತ್ತಿವೆ. ಈ ಬಗ್ಗೆ ಸನ್ನದು ನವೀಕರಣ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಯಾವುದೇ ಆರೋಪಿಗಳಿಗೆ ಅವಕಾಶ ನೀಡದಂತೆ ಜಿಲ್ಲೆಯ ಎಲ್ಲಾ ವಲಯಗಳ ಅಬಕಾರಿ ನಿರೀಕ್ಷಕರು, ಉಪ ವಿಭಾಗದ ಉಪ ಅಧೀಕ್ಷಕರು ಹಾಗೂ ಜಿಲ್ಲೆಯ ಅಬಕಾರಿ ಉಪ ಆಯುಕ್ತರಿಗೆ ಕಾರ್ಯನಿರ್ವಹಿಸಲು ಸೂಚಿದೆ. ಆರೋಪಗಳು ಬಂದಲ್ಲಿ ನಿಮ್ಮ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು.

    ಸಾರ್ವಜನಿಕರ ಪ್ರಶ್ನೆ:
    ಕೊಪ್ಪಳ ಒಂದು ಜಿಲ್ಲೆಯಲ್ಲೇ ಸುಮಾರು 70 ಲಕ್ಷ ರೂ. ಸಂಗ್ರಹ ಆಗುತ್ತದೆ. ಇನ್ನೂ ರಾಜ್ಯಾದ್ಯಂತ ಅಬಕಾರಿ ಇಲಾಖೆ ಅಪಾರ ಹಣವನ್ನು ಲೂಟಿ ಮಾಡಿದೆ ಎಂದು ಅಬಕಾರಿ ಇಲಾಖೆ ಮೇಲೆ ಗಂಭೀರ ಆರೋಪಗಳು ಕೇಳಿಬರುತ್ತಿದೆ. ಅಬಕಾರಿ ಇಲಾಖೆ ವಿರುದ್ಧ ಸಂಘಟನೆಗಳು ಸಾಕಷ್ಟು ಹೋರಾಟಗಳನ್ನು ಇಂದಿಗೂ ಮಾಡುತ್ತಿವೆ. ಅಬಕಾರಿ ಇಲಾಖೆ ಸಿಎಂ ಅವರ ಬಳಿ ಇರುವ ಕಾರಣ ಮುಖ್ಯಮಂತ್ರಿಗಳಿಗೆ ಅಧಿಕಾರಿಗಳ ವಿಚಾರ ತಿಳಿದಿಲ್ಲವೇ ಎನ್ನುವ ಪ್ರಶ್ನೆ ಎದ್ದಿದೆ. ರಾಜ್ಯದ ಬೊಕ್ಕಸಕ್ಕೆ ಅತಿ ಹೆಚ್ಚು ಆದಾಯ ಅಬಕಾರಿ ಇಲಾಖೆಯಿಂದಲೇ ಬರುತ್ತದೆ. ಹೀಗಿರುವಾಗ ಸರ್ಕಾರಿ ಕಚೇರಿ ಅವಧಿ ಬಿಟ್ಟು ರಾತ್ರಿಯೂ ಕೆಲಸ ಮಾಡುವಂತದ್ದು ಏನಿದೆ? ಅಕ್ರಮ ವ್ಯವಹಾರ ನಡೆಸಲು ರಾತ್ರಿ ಕೆಲಸ ನಡೆಯುತ್ತಿದ್ಯಾ ಎನ್ನು ಪ್ರಶ್ನೆ ಎದ್ದಿದೆ.

    ಸಿಎಲ್2 ಬಾರ್ ನಿಯಮ ಏನು?
    ಸಿಎಲ್2 ಬಾರ್‌ಗಳಲ್ಲಿ ಎಂಆರ್‌ಪಿ ಬೆಲೆಗೆ ಮದ್ಯ ಮಾರಾಟ ಮಾಡಬೇಕು. ಯಾವುದೇ ರೀತಿ ಬಾರ್‌ಗಳಲ್ಲೂ ಕುಳಿತು ಕುಡಿಯುವ ವ್ಯವಸ್ಥೆ ಇರಕೂಡದು. ಕಡ್ಡಾಯವಾಗಿ ಮದ್ಯದ ದರಪಟ್ಟಿಯನ್ನು ದೊಡ್ಡ ಅಕ್ಷರಗಳಲ್ಲಿ ಜನರಿಗೆ ಕಾಣುವಂತೆ ಹಾಕಬೇಕು. ಬಾರ್ ಅಲ್ಲಿ ಲೈಸೆನ್ಸ್ ಹೊಂದಿದ ಅಧಿಕೃತ ಮಾರಾಟಗಾರ ಬಿಟ್ಟು ಬೇರೆ ಯಾರು ಇರಬಾರದು. ಅಂಗಡಿಯಲ್ಲಿ ಮದ್ಯ ಬಾಟಲಿ ಬಿಟ್ಟು ಬೇರೇನೂ ಮಾರಲು ಅವಕಾಶ ಇಲ್ಲ. ಶಾಲಾ, ಕಾಲೇಜ್, ದೇವಸ್ಥಾನ, ಆಸ್ಪತ್ರೆಯಿಂದ ಸುಮಾರು 500 ಮೀಟರ್ ದೂರದಲ್ಲಿ ಬಾರ್ ಇರಬೇಕು.

    ಸಿಎಲ್7 ಬಾರ್ ನಿಯಮ ಏನು?
    ಸಿಎಲ್ 7 ಅಂದರೆ ಇದು ಬಾರ್ ಅಂಡ್ ರೆಸ್ಟೋರೆಂಟ್. ಇಲ್ಲಿ ಬರುವ ಗ್ರಾಹಕರಿಗೆ ಮದ್ಯದ ಜೊತೆಗೆ ಊಟದ ವ್ಯವಸ್ಥೆ ಇರಬೇಕು. ಬೆಳಗ್ಗೆ 10 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಮಾತ್ರ ಬಾರ್ ತಗೆದಿರಬೇಕು. ಮದ್ಯವನ್ನು ಯಾವುದೇ ರೀತಿ ಹೊರಗಡೆ ಕೊಡುವಂತಿಲ್ಲ. ಉಳಿದಂತೆ ದರಪಟ್ಟಿ, ಸ್ವಚ್ಛತೆ, ಸನ್ನದುದಾರರ ಹೆಸರು, ಇತ್ಯಾದಿ ನಿಯಮಗಳು ಅನ್ವಯಿಸುತ್ತವೆ.

    ಸಿಎಲ್9 ಬಾರ್ ನಿಯಮ ಏನು?
    ಸಿಎಲ್ 9 ಇದು ಪ್ರವಾಸಿಗರಿಗೆ ಮಾತ್ರ ಅನ್ವಯವಾಗುತ್ತದೆ. ಇಲ್ಲಿ 14 ಸುಸಜ್ಜಿತ ಕೊಠಡಿಗಳು ಇರಲೇಬೇಕು. ಯಾವುದೇ ರೀತಿ ಮದ್ಯವನ್ನು ಹೊರಗಡೆ ನೀಡುವಂತಿಲ್ಲ. ಕೊಠಡಿಯಲ್ಲಿ ತಂಗಲು ಬಂದವರಿಗೆ ಮಾತ್ರ ಮದ್ಯವನ್ನು ನೀಡತಕ್ಕದ್ದು. ಲೂಸ್ ಲಿಕ್ಕರ್ ಅನ್ನು ಇಲ್ಲಿ ಮಾರುವಂತಿಲ್ಲ. ಎಂ.ಎಲ್. ತಕ್ಕಂತೆ ಫುಲ್ ಬಾಟಲ್ ಹೊಂದಿರಬೇಕು.

    ನಮ್ಮ ರಾಜ್ಯದಲ್ಲಿ 3,901 ಸಿಎಲ್.2 ಬಾರ್ ಇದ್ದರೆ, 3,517 ಬಾರ್ ಅಂಡ್ ರೆಸ್ಟೋರೆಂಟ್, 225 ಕ್ಲಬ್, 1915 ಸ್ಟಾರ್ ಹೋಟೆಲ್ ಕ್ಯಾಂಟೀನ್ ಗಳಿವೆ.