Tag: ನವಾಡ

  • ಅತ್ಯಾಚಾರ ಅಪರಾಧಿಗೆ ಶಿಕ್ಷೆ ನೀಡಿದ್ದು ತಪ್ಪು: ಬಿಹಾರ ಮಾಜಿ ಸಿಎಂ

    ಅತ್ಯಾಚಾರ ಅಪರಾಧಿಗೆ ಶಿಕ್ಷೆ ನೀಡಿದ್ದು ತಪ್ಪು: ಬಿಹಾರ ಮಾಜಿ ಸಿಎಂ

    ಪಟ್ನಾ: ನವಾಡದಲ್ಲಿ ಅತ್ಯಾಚಾರ ಅಪರಾಧಿಯೊಬ್ಬನ ಪತ್ನಿ ಲೋಕಸಮರಕ್ಕೆ ಕಣಕ್ಕಿಳಿದಿದ್ದು, ಅವರ ಪರ ಪ್ರಚಾರಕ್ಕೆ ನಿಂತಿರುವ ಬಿಹಾರದ ಮಾಜಿ ಸಿಎಂ ಹಾಗೂ ಲಾಲೂ ಪ್ರಸಾದ್ ಯಾದವ್ ಅವರ ಪತ್ನಿ ರಾಬ್ಡಿ ದೇವಿ, ಅತ್ಯಾಚಾರಿಗೆ ಶಿಕ್ಷೆ ನೀಡಿದ್ದು ತಪ್ಪು ಎಂದು ತಮ್ಮ ಜಾತಿಯ ಅಪರಾಧಿಯನ್ನು ಸಮರ್ಥಿಸಿಕೊಂಡಿದ್ದಾರೆ.

    ರಾಷ್ಟ್ರೀಯ ಜನತಾ ದಳದ(ಆರ್ ಜೆಡಿ) ಅಭ್ಯರ್ಥಿಯಾಗಿ ವಿಭಾ ದೇವಿ ಬಿಹಾರದ ನವಾಡ ಲೋಕಸಭೆ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಇವರು ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯಾದ ರಾಬಬಲ್ಲಭ್ ಯಾದವ್ ಪತ್ನಿಯಾಗಿದ್ದು, ವಿಭಾ ಯಾಧವ್‍ನನ್ನು ಜನರು ಗೆಲ್ಲಿಸಬೇಕೆಂದು ರಾಬ್ಡಿ ದೇವಿ ಪ್ರಚಾರ ನಡೆಸಿದ್ದಾರೆ. ಅವರ ಜಾತಿಯನ್ನು ಮುಂದಿಟ್ಟುಕೊಂಡು ಮತ ಕೇಳಿ ನಿತೀಶ್ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ.

    ಇದೇ ಸಂದರ್ಭದಲ್ಲಿ ರಾಜಬಲ್ಲಭ್ ಯಾದವ್ ಮೇಲೆ ಸುಳ್ಳು ಅತ್ಯಾಚಾರದ ಆರೋಪ ಹೊರಿಸಿ ನಿತಿಶ್ ಕುಮಾರ್ ನೇತೃತ್ವದ ಸರ್ಕಾರ ಜೈಲಿಗೆ ಹಾಕಿದೆ. ಈ ರೀತಿ ಮಾಡಿ ಯಾಧವ ಸಮುದಾಯದ ಮಾನವನ್ನು ಹರಾಜು ಹಾಕುತ್ತಿದೆ ಎಂದು ಆರೋಪಿಸಿದರು.

    ರಾಬಬಲ್ಲಭ್ ಯಾದವ್ ಓರ್ವ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿದಕ್ಕೆ ಆತನಿಗೆ 2016ರಲ್ಲಿಯೇ ಪಟ್ನಾದ ಕೋರ್ಟ್ ಶಿಕ್ಷೆ ವಿಧಿಸಿದೆ. ಆಗ ನಿತಿಶ್ ಕುಮಾರ್ ಸರ್ಕಾರ ಮಾಡಿದ ಷಡ್ಯಂತ್ರದಿಂದ ಅವರು ಸುಳ್ಳು ಆರೋಪ ಹೊತ್ತು ಅಪರಾಧಿ ಸ್ಥಾನದಲ್ಲಿ ನಿಂತು ಜೈಲು ಸೇರಿದರು. ಚುನಾವಣೆಯಿಂದ ದೂರ ಉಳಿದರು ಎಂದರು. ಬಳಿಕ ಲಾಲೂ ಪ್ರಸಾದ್ ಯಾಧವ್ ಸಿಲುಕಿಕೊಂಡಿರುವ ಮೇವು ಹಗರಣದ ಬಗ್ಗೆ ಪ್ರತಿಕ್ರಿಯಿಸಿ, ಐಆರ್‍ಸಿಟಿಸಿ ಹಗರಣ ಇಟ್ಟುಕೊಂಡು ತಮ್ಮ ಕುಟುಂಬದ ಮೇಲೆ ಮೋದಿ ಸರ್ಕಾರ ಸುಳ್ಳು ಆರೋಪ ಹೊರಿಸಿ ಸಿಲುಕಿಸಿದೆ ಎಂದು ಕಿಡಿಕಾರಿದರು.

    “ಜನರಿಗೆ ಸತ್ಯ ಏನೆಂಬುದು ಗೊತ್ತು. ಲಾಲೂಜಿ ಮತ್ತು ಅವರ ಕುಟುಂಬ ಎಷ್ಟು ಮುಗ್ಧ ಎಂದು ಎಲ್ಲರಿಗೂ ಗೊತ್ತು. ಲಾಲೂಜಿ ಅವರು ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ಯಾವುದೇ ಭ್ರಷ್ಟಾಚಾರ ಎಸಗಿಲ್ಲ ಎಂದು ಭಾರತೀಯ ರೈಲ್ವೆಯ ಅಧಿಕಾರಿಗಳೇ ಹೇಳಿದ್ದಾರೆ” ಎಂದು ಪತಿ ಪರ ರಾಬ್ಡಿ ದೇವಿ ಬ್ಯಾಟಿಂಗ್ ಮಾಡಿದರು.

    ಸದ್ಯ ಲೋಕಸಭಾ ಚುನಾವಣೆಗೆ ಬಿಹಾರದಲ್ಲಿ ಭರ್ಜರಿ ಮತ ಭೇಟೆ ನಡೆಯುತ್ತಿದ್ದು, ಇಲ್ಲಿ ಏಪ್ರಿಲ್ 11ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಮೇ 23ರಂದು ಮತ ಎಣಿಕೆ ನಡೆಯಲಿದೆ.