Tag: ನವವಿವಾಹಿತ ಸಾವು

  • ಮದುವೆಯಾಗಿ 10 ದಿನ ಆಗಿಲ್ಲ ಪತಿ ಸಾವು, ವಧು ಸೇರಿ 9 ಮಂದಿಗೆ ಕೊರೊನಾ ಸೋಂಕು!

    ಮದುವೆಯಾಗಿ 10 ದಿನ ಆಗಿಲ್ಲ ಪತಿ ಸಾವು, ವಧು ಸೇರಿ 9 ಮಂದಿಗೆ ಕೊರೊನಾ ಸೋಂಕು!

    ಫಿರೋಜಾಬಾದ್‌ (ಉತ್ತರ ಪ್ರದೇಶ): ಇದು ಮದುವೆಯಾಗಿ ಪತಿಯ ಜೊತೆ ಸುಂದರ ಜೀವನ ಕಟ್ಟಿಕೊಳ್ಳಬೇಕು ಎಂದು ಕನಸು ಕಂಡವಳ ಕಣ್ಣೀರ ಕಥೆ. ಮದುವೆಯಾಗಿ ಆಕೆಯ ಕೈಯಿಂದ ಮದರಂಗಿಯ ಕೆಂಪು ಇನ್ನೂ ಮಾಸಿರಲಿಲ್ಲ. ಅಷ್ಟರಲ್ಲಿಯೇ ಆಕೆಯ ಪತಿ ಸಾವನ್ನಪ್ಪಿದ್ದಾನೆ. ಈಗ ಆಕೆಯೂ ಸೇರಿ ಅದೇ ಕುಟುಂಬದ 9 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

    ಫೀರೋಜಾಬಾದ್‌ನ ಮುಖ್ಯ ಆರೋಗ್ಯಾಧಿಕಾರಿ ಡಾ.ನೀತಾ ಕುಲಶ್ರೇಷ್ಠ ಖಚಿತಪಡಿಸಿದ್ದಾರೆ. 10 ದಿನಗಳ ಹಿಂದಷ್ಟೇ ಮೃತಪಟ್ಟ ವ್ಯಕ್ತಿಯ ಮದುವೆ ಸಮಾರಂಭ ನಡೆದಿತ್ತು. ಮದುವೆ ಮುಗಿಯುತ್ತಿದ್ದಂತೆಯೇ ಆತನ ಆರೋಗ್ಯ ಹದಗೆಟ್ಟು, ಡಿಸೆಂಬರ್‌ 4ರಂದು ಸಾವನ್ನಪ್ಪಿದ್ದಾನೆ. ಆದರೆ ಆತ ಮೃತಪಟ್ಟಾಗ ಕೋವಿಡ್‌ ಟೆಸ್ಟ್‌ ಮಾಡಿಸಿರಲಿಲ್ಲ. ಹೀಗಾಗಿ ಆತ ಕೋವಿಡ್‌ನಿಂದಾಗಿಯೇ ಸಾವನ್ನಪ್ಪಿದ್ದಾನೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಆತನ ಕುಟುಂಬಸ್ಥರನ್ನು ಟೆಸ್ಟ್‌ ಮಾಡಿದಾಗ ವಧು ಸೇರಿ 9 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ಹೇಳಿದ್ದಾರೆ.

    ವಧು, ಆಕೆಯ ಅತ್ತೆ, ಮಾವ ಸೇರಿ 9 ಮಂದಿಗೆ ಸೋಂಕು ತಗುಲಿದ್ದು, ಎಲ್ಲರಿಗೂ ಚಿಕಿತ್ಸೆ ಮುಂದುವರಿದಿದೆ ಎಂದು ನೀತಾ ಹೇಳಿದ್ದಾರೆ.

    ಸದ್ಯ ಈ ಗ್ರಾಮದಲ್ಲಿ ಮೆಡಿಕಲ್‌ ಕ್ಯಾಂಪ್‌ ಆರಂಭಿಸಿದ್ದು, ಗ್ರಾಮಸ್ಥರಿಗೆ ಟೆಸ್ಟ್‌ ಮಾಡುವ ಕೆಲಸ ನಡೆಯುತ್ತಿದೆ. ಫಿರೋಜಾಬಾದ್‌ ಜಿಲ್ಲೆಯಲ್ಲಿ ಇದುವರೆಗೆ 3673 ಮಂದಿಯಲ್ಲಿ ಕೋವಿಡ್‌ ಸೋಂಕು ಕಾಣಿಸಿಕೊಂಡಿದೆ. ಇವರಲ್ಲಿ 67 ಮಂದಿ ಸಾವನ್ನಪ್ಪಿದ್ದರೆ, 171 ಜನರಲ್ಲಿ ಸೋಂಕು ಸಕ್ರಿಯವಾಗಿದೆ. ಉಳಿದವರು ಗುಣಮುಖರಾಗಿದ್ದಾರೆ ಎಂದು ಹೇಳಿದ್ದಾರೆ.