Tag: ನವಮಂಗಳೂರು

  • 3,800 ಕೋಟಿ ರೂ. ಮೌಲ್ಯದ ಯೋಜನೆ – ಮಂಗಳೂರಿನಲ್ಲಿ ಯಾವ ಕಾಮಗಾರಿಗೆ ಶಂಕುಸ್ಥಾಪನೆ? ಏನು ಉದ್ಘಾಟನೆ?

    3,800 ಕೋಟಿ ರೂ. ಮೌಲ್ಯದ ಯೋಜನೆ – ಮಂಗಳೂರಿನಲ್ಲಿ ಯಾವ ಕಾಮಗಾರಿಗೆ ಶಂಕುಸ್ಥಾಪನೆ? ಏನು ಉದ್ಘಾಟನೆ?

    ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಮಂಗಳೂರಿನಲ್ಲಿ ಸುಮಾರು 3,800 ಕೋಟಿ ರೂ.ಗಳ ಯಾಂತ್ರೀಕರಣ ಮತ್ತು ಕೈಗಾರಿಕೀಕರಣ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

    ಈ ಸಂಬಂಧ ಟ್ವೀಟ್‌ ಮಾಡಿದ ಮೋದಿ, ನಾಳೆ ಸೆಪ್ಟೆಂಬರ್ 2 ರಂದು ನಾನು ಮಂಗಳೂರಿನ ನನ್ನ ಸಹೋದರಿಯರು ಮತ್ತು ಸಹೋದರರ ಮುಂದೆ ಇರಲು ಎದುರು ನೋಡುತ್ತಿದ್ದೇನೆ. 3,800 ಕೋಟಿ ರೂ. ಮೌಲ್ಯದ ಪ್ರಮುಖ ಯೋಜನೆ, ಉದ್ಘಾಟನೆ, ಶಂಕುಸ್ಥಾಪನೆ ನಡೆಯಲಿದೆ. ಈ ಪ್ರಮುಖ ಕೆಲಸಗಳು ಯಾಂತ್ರೀಕರಣ ಮತ್ತು ಕೈಗಾರಿಕೀಕರಣಕ್ಕೆ ಸಂಬಂಧಿಸಿವೆ ಎಂದು ಹೇಳಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ 5 ಬಾರಿ ದಕ್ಷಿಣಕನ್ನಡಕ್ಕೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದರು. ಇಲ್ಲಿಯವರೆಗೆ ಸರ್ಕಾರಿ ಕಾರ್ಯಕ್ರಮದ ಅಂಗವಾಗಿ ಆಗಮಿಸಿರಲಿಲ್ಲ. ಆದರೆ ಮೊದಲ ಬಾರಿಗೆ ಸರ್ಕಾರಿ ಕಾರ್ಯಕ್ರಮದ ಉದ್ದೇಶಕ್ಕಾಗಿ ಮಂಗಳೂರಿಗೆ ಬರುತ್ತಿರುವುದು ವಿಶೇಷ.

    ನವಮಂಗಳೂರು ಬಂದರು ಪ್ರಾಧಿಕಾರವು ಕೈಗೆತ್ತಿಕೊಂಡಿರುವ ಕಂಟೈನರ್‌ಗಳು ಮತ್ತು ಇತರ ಸರಕುಗಳನ್ನು ನಿರ್ವಹಿಸಲು ಲಂಗರು ನಂ. 14 ರ ಯಾಂತ್ರೀಕರಣಕ್ಕಾಗಿ 280 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಯೋಜನೆಯನ್ನು ಪ್ರಧಾನಮಂತ್ರಿ ಉದ್ಘಾಟಿಸಲಿದ್ದಾರೆ.

    ಯಾಂತ್ರೀಕೃತ ಟರ್ಮಿನಲ್ ದಕ್ಷತೆಯನ್ನು ಹೆಚ್ಚಿಸುತ್ತದೆ ಮತ್ತು ಟರ್ನ್ ಆರೌಂಡ್ (ಸುತ್ತುವ) ಸಮಯ, ಪೂರ್ವ-ಲಂಗರು ವಿಳಂಬ ಮತ್ತು ಬಂದರಿನಲ್ಲಿ  ಇರುವ ಸಮಯವನ್ನು ಸುಮಾರು ಶೇ. 35 ರಷ್ಟು ಕಡಿಮೆ ಮಾಡುತ್ತದೆ. ಇದರಿಂದಾಗಿ ವ್ಯಾಪಾರ ವಾತಾವರಣಕ್ಕೆ ಉತ್ತೇಜನ ಲಭಿಸುತ್ತದೆ. ಯೋಜನೆಯ ಮೊದಲ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಆ ಮೂಲಕ ನಿರ್ವಹಣಾ ಸಾಮರ್ಥ್ಯಕ್ಕೆ 4.2 ಎಂಟಿಪಿಎ ಅನ್ನು ಸೇರಿಸಲಾಗಿದೆ. ಇದು 2025 ರ ವೇಳೆಗೆ 6 ಎಂಟಿಪಿಎಗೆ ಮತ್ತಷ್ಟು ಹೆಚ್ಚಾಗಲಿದೆ. ಇದನ್ನೂ ಓದಿ: ಬೆಂಗಳೂರಿಗೆ ಇನ್ಮುಂದೆ ಸಾಂಪ್ರದಾಯಿಕ ವೈದ್ಯ ಪದ್ಧತಿ ಹಬ್ ಆಗೋ ಅವಕಾಶ- ಯೋಗಿ ಆದಿತ್ಯನಾಥ್

    ಪ್ರಧಾನಮಂತ್ರಿ ಅವರು, ಬಂದರು ಕೈಗೆತ್ತಿಕೊಂಡಿರುವ ಸುಮಾರು 1,000 ಕೋಟಿ ರೂ.ಗಳ ಐದು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅತ್ಯಾಧುನಿಕ ಕ್ರಯೋಜೆನಿಕ್ ಎಲ್ ಪಿಜಿ ಶೇಖರಣೆ ಟ್ಯಾಂಕ್ ಟರ್ಮಿನಲ್ ಹೊಂದಿರುವ ಇಂಟಿಗ್ರೇಟೆಡ್ ಎಲ್ ಪಿಜಿ ಮತ್ತು ಬಲ್ಕ್ ಲಿಕ್ವಿಡ್ ಪಿಒಎಲ್ ಸೌಲಭ್ಯವು 45,000 ಟನ್ ಗಳ ಪೂರ್ಣ ತುಂಬಿರುವ ವಿಎಲ್ ಜಿಸಿ (ಬಹಳ ದೊಡ್ಡ ಅನಿಲ ವಾಹಕಗಳು) ಅನ್ನು ಅತ್ಯಂತ ದಕ್ಷ ರೀತಿಯಲ್ಲಿ ಇಳಿಸುವ ಸಾಮರ್ಥ್ಯವನ್ನು ಹೊಂದಿದೆ.

    ಈ ಸೌಲಭ್ಯವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಬಲಪಡಿಸುತ್ತದೆ ಮತ್ತು ದೇಶದ ಉನ್ನತ ಎಲ್‌ಪಿಜಿ ಆಮದು ಬಂದರುಗಳಲ್ಲಿ ಒಂದಾಗಿ ಬಂದರಿನ ಸ್ಥಾನಮಾನವನ್ನು ಬಲಪಡಿಸುತ್ತದೆ. ಶೇಖರಣಾ ಟ್ಯಾಂಕ್ ಗಳು ಮತ್ತು ಖಾದ್ಯ ತೈಲ ಸಂಸ್ಕರಣಾಗಾರಗಳ ನಿರ್ಮಾಣ, ಬಿಟುಮೆನ್ (ಪೆಟ್ರೋಲಿಯಂನ ಒಂದು ಉತ್ಪನ್ನ) ಸಂಗ್ರಹಣಾ ಮತ್ತು ಸಂಬಂಧಿತ ಸೌಲಭ್ಯಗಳ ನಿರ್ಮಾಣ ಮತ್ತು ಬಿಟುಮೆನ್ ಮತ್ತು ಖಾದ್ಯ ತೈಲ ಸಂಗ್ರಹ ಮತ್ತು ಸಂಬಂಧಿತ ಸೌಲಭ್ಯಗಳ ನಿರ್ಮಾಣ ಯೋಜನೆಗಳಿಗೆ ಪ್ರಧಾನಮಂತ್ರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

    ಈ ಯೋಜನೆಗಳು ಬಿಟುಮೆನ್ ಮತ್ತು ಖಾದ್ಯ ತೈಲ ಹಡಗುಗಳ ಸಂಚಾರದ ಸಮಯವನ್ನು ಸುಧಾರಿಸುತ್ತವೆ ಹಾಗೂ ವ್ಯಾಪಾರದ ಒಟ್ಟಾರೆ ಸರಕು ವೆಚ್ಚವನ್ನು ಕಡಿಮೆ ಮಾಡುತ್ತವೆ. ಪ್ರಧಾನಮಂತ್ರಿ ಅವರು ಕುಳಾಯಿಯಲ್ಲಿ ಮೀನುಗಾರಿಕಾ ಬಂದರಿನ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದು, ಇದು ಮೀನು ಹಿಡಿಯುವಿಕೆಯನ್ನು ಸುರಕ್ಷಿತವಾಗಿ ನಿರ್ವಹಿಸಲು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗಳಿಗೆ ಅನುವು ಮಾಡಿಕೊಡುತ್ತದೆ. ಸಾಗರಮಾಲಾ ಕಾರ್ಯಕ್ರಮದ ಆಶ್ರಯದಡಿಯಲ್ಲಿ ಈ ಕೆಲಸವನ್ನು ಕೈಗೊಳ್ಳಲಾಗುವುದು ಮತ್ತು ಇದು ಮೀನುಗಾರ ಸಮುದಾಯಕ್ಕೆ ಗಮನಾರ್ಹವಾದ ಸಾಮಾಜಿಕ-ಆರ್ಥಿಕ ಪ್ರಯೋಜನೆಗಳಿಗೆ ಕಾರಣವಾಗಲಿದೆ.

    ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಕೈಗೆತ್ತಿಕೊಂಡಿರುವ ಎರಡು ಯೋಜನೆಗಳಾದ ಬಿಎಸ್‌ವಿಐ ಉನ್ನತೀಕರಣ ಯೋಜನೆ ಮತ್ತು ಸಮುದ್ರ ನೀರು ಶುದ್ಧೀಕರಣ ಘಟಕ ಉದ್ಘಾಟನೆಯಾಗಲಿದೆ. ಸುಮಾರು 1,830 ಕೋಟಿ ರೂ.ಗಳ ಬಿಎಸ್-6 ಉನ್ನತೀಕರಣ ಯೋಜನೆಯು ಅತ್ಯಂತ ಶುದ್ಧ ಪರಿಸರ ಸ್ನೇಹಿ ಬಿಎಸ್-6 ಗ್ರೇಡ್ ಇಂಧನ (10 ಪಿಪಿಎಂ ಗಿಂತ ಕಡಿಮೆ ಸಲ್ಫರ್ ಅಂಶವಿರುವ) ಉತ್ಪಾದನೆಗೆ ಅನುವು ಮಾಡಿಕೊಡಲಿದೆ. ಸುಮಾರು 680 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲಾದ ಸಮುದ್ರ ನೀರು ಶುದ್ಧೀಕರಣ ಘಟಕವು ಶುದ್ಧ ನೀರಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ವರ್ಷವಿಡೀ ಹೈಡ್ರೋಕಾರ್ಬನ್‌ಗಳು ತ್ತು ಪೆಟ್ರೋಕೆಮಿಕಲ್ ಗಳ ನಿಯಮಿತ ಪೂರೈಕೆಯನ್ನು ಖಚಿತಪಡಿಸುತ್ತದೆ. ದಿನಕ್ಕೆ 30 ಮಿಲಿಯನ್ ಲೀಟರ್ (ಎಂಎಲ್ ಡಿ) ಸಾಮರ್ಥ್ಯವನ್ನು ಹೊಂದಿರುವ ಈ ಸ್ಥಾವರವು ಸಮುದ್ರದ ನೀರನ್ನು ಸಂಸ್ಕರಣಾ ಪ್ರಕ್ರಿಯೆಗಳಿಗೆ ಅಗತ್ಯವಿರುವ ನೀರಾಗಿ ಪರಿವರ್ತಿಸುತ್ತದೆ.